Friday, 13th December 2024

ಮನುಕುಲಕ್ಕೇ ಹೊಗೆ ಹಾಕಬಲ್ಲ ಹೊಗೆಸೊಪ್ಪಿನ ಹವ್ಯಾಸ

ವೈದ್ಯ ವೈವಿಧ್ಯ

Yoganna55@gmail.com

ನಿಕೋಟಿನ್ ಪರಿಣಾಮಗಳ ಬಗೆಗೆ ನೋಡುವುದಾದರೆ, ಹೊಗೆಸೊಪ್ಪಿನಲ್ಲಿರುವ ಈ ಪ್ರಮುಖ ರಾಸಾಯನಿಕ ಮೆದುಳಿನ ಮೇಲೆ ಪರಿಣಾಮ ಬೀರಿ ಡೋಪೊಮಿನ್ ಮತ್ತಿತರ ರಾಸಾಯನಿಕ ವಸ್ತುಗಳನ್ನು ಬಿಡುಗಡೆ ಮಾಡಿ ಮೆದುಳನ್ನು ಪ್ರಚೋದಿಸಿ ಆಹ್ಲಾದವನ್ನುಂಟುಮಾಡುತ್ತದೆ.

ವಿಶ್ವ ಆರೋಗ್ಯ ಸಂಸ್ಥೆ ಮೇ೩೧ನ್ನು ತಂಬಾಕು ರಹಿತ ದಿನವನ್ನಾಗಿ ಪ್ರತಿ ವರ್ಷ ಪ್ರಪಂಚಾದ್ಯಂತ ಆಚರಿಸುವಂತೆ ಕರೆ ನೀಡಿದೆ. ತಂಬಾಕಿನ ದುಷ್ಪರಿಣಾಮಗಳ ಬಗ್ಗೆ ಸಮುದಾಯದಲ್ಲಿ ಅರಿವು ಮೂಡಿಸುವುದು ಇದರ ಉದ್ದೇಶ. ೧೯೮೭ರಿಂದ ಕೈಗೊಳ್ಳಲಾಗುತ್ತಿರುವ ಈ ಕಾರ್ಯಕ್ರಮದಲ್ಲಿ ತಂಬಾಕಿಗೆ ಸಂಬಂಧಿಸಿದಂತೆ ಪ್ರತಿ ವರ್ಷ ಘೋಷಣಾ ವಾಕ್ಯವೊಂದನ್ನು ಹೊರಡಿಸಿ ಆ ಮೂಲಕ ತಂಬಾಕಿನ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸ ಲಾಗುತ್ತಿದೆ. ಈ ವರ್ಷದ ಘೋಷಣಾ ವಾಕ್ಯ ‘ನಮಗೆ ಆಹಾರ ಬೇಕು, ತಂಬಾಕಲ್ಲ’ ಎಂಬುದು.

ಕಳೆದ ವರ್ಷದ (೨೦೨೨) ಘೋಷಣಾ ವಾಕ್ಯ ‘ತಂಬಾಕಿನಿಂದ ಪರಿಸರ ವನ್ನು ರಕ್ಷಿಸಿ’ ಎಂಬುದಾಗಿತ್ತು. ಹೊಗೆಸೊಪ್ಪು ದೇಹಕ್ಕೆ ಪೌಷ್ಟಿಕಾಂಶ ಗಳನ್ನು ಒದಗಿಸುವುದಿಲ್ಲವಾದರೂ ಅದರ ಸೇವನೆಯಿಂದ ಆಹ್ಲಾದವುಂಟಾ ಗುವುದರಿಂದ ಮತ್ತು ಇದು ರೈತರ ಆರ್ಥಿಕ ಬದುಕಿಗೆ ಸಂಬಂಧಿಸಿ ದ್ದಾದುದರಿಂದ ಇದರ ಪೂರ್ಣ ನಿಷೇಧ ಸರಕಾರ ಮತ್ತು ಸಮಾಜಕ್ಕೆ ಸವಾಲಾಗಿ ಪರಿಣಮಿಸಿದೆ. ಎಲ್ಲರಲ್ಲೂ ಇದರ ದುಷ್ಪರಿಣಾಮಗಳ ಬಗ್ಗೆ ಮನದಟ್ಟು ಮಾಡಿಕೊಡುವುದರಿಂದ ಮಾತ್ರ ಇದರ ಉಪಯೋಗ ದಿಂದ ದೂರ ಸರಿಯಲು ಸಾಧ್ಯ. ಹಾಗಾದರೆ ಹೊಗೆ ಸೊಪ್ಪಿನ ಉಪಯೋಗಗಳೇನು? ಯಾವ ಯಾವ ವಿಧ ಗಳಲ್ಲಿ ಹೊಗೆಸೊಪ್ಪನ್ನು ಉಪಯೋಗಿಸಲಾಗುತ್ತಿದೆ? ಇದರಿಂದುಂಟಾಗುವ ಪರಿಸರ ಮಾಲಿನ್ಯ, ಇದರಲ್ಲಿರುವ ರಾಸಾಯನಿಕ ಗಳಾವುವು? ಅವುಗಳ ದುಷ್ಪರಿಣಾಮಗಳೇನು? ಸಂಭವಿಸಬಹುದಾದ ಕಾಯಿಲೆಗಳಾವುವು? ಪರಿಹಾರಗಳೇನು ಮತ್ತು ತಂಬಾಕು ಬೆಳೆಯನ್ನೇ ನಿಷೇಧಿಸಲು ಸಾಧ್ಯವೇ ಎಂಬಿತ್ಯಾದಿ ವಿಚಾರಗಳ ಬಗ್ಗೆ ಇಲ್ಲಿ ಚರ್ಚಿಸಲಾಗಿದೆ.

ಹೊಗೆಸೊಪ್ಪನ್ನು ಕ್ರಿ.ಪೂ.೫೦೦೦-೩೦೦೦ ವರ್ಷಗಳಿಂದಲೂ ಬೆಳೆಯುತ್ತ ಇರಬಹುದೆಂದು ಅಂದಾಜಿಸಲಾಗಿದೆ. ಮೊಟ್ಟ ಮೊದಲ ಬಾರಿಗೆ ದಕ್ಷಿಣ ಮತ್ತು ಉತ್ತರ ಅಮೆರಿಕದಲ್ಲಿ ಕ್ರಿ.ಪೂ. ೧ನೇ ಶತಮಾನದಲ್ಲಿ ತಂಬಾಕಿನ ಎಲೆಗಳನ್ನು ಧೂಮ ಪಾನಕ್ಕೆ ಉಪಯೋಗಿಸಲಾರಂಭಿಸಲಾಯಿತು. ೧೬ನೇ ಶತಮಾನದಲ್ಲಿ ಪೋರ್ಚುಗೀಸರು ಭಾರತಕ್ಕೆ ಇದನ್ನು ತಂದರೆಂದು ಇತಿಹಾಸ ಹೇಳುತ್ತದೆ.

ಕೋಲ್ಕತಾದಿಂದ ಪ್ರಾರಂಭವಾದ ಈ ಬೆಳೆ ಭಾರತದೆಲ್ಲೆಡೆ ಹಂತ ಹಂತವಾಗಿ ವ್ಯಾಪಿಸಿ ಇಂದು ಭಾರತ ಜಗತ್ತಿನಲ್ಲಿಯೇ ತಂಬಾಕನ್ನು ಉತ್ಪತ್ತಿ ಮಾಡುವ ೩ನೇ ರಾಷ್ಟ್ರವಾಗಿದೆ. ರಾಜ್ಯಗಳ ಪೈಕಿ ಆಂಧ್ರಪ್ರದೇಶ ಅಗ್ರಸ್ಥಾನದಲ್ಲಿದೆ. ಚೀನಾ ಮೊದಲ ಸ್ಥಾನದಲ್ಲಿದೆ. ಭಾರತದಲ್ಲಿ ೧೫ ವರ್ಷಕ್ಕೆ ಮೇಲ್ಪಟ್ಟ ವಯಸ್ಸಿನ ವರಲ್ಲಿ ಶೇ.೩೦ರಷ್ಟು ಜನ ಧೂಮಪಾನಿಗಳಾಗಿರುವುದು ಸಮಸ್ಯೆಯ ತೀವ್ರತೆಗೆ ಹಿಡಿದ ಕೈಗನ್ನಡಿ. ಇತ್ತೀಚಿನ ದಿನಗಳಲ್ಲಿ ಸ್ತ್ರೀಯರು ಸಹ ಈ ದುಶ್ಚಟಕ್ಕೆ ಬಲಿಯಾಗುತ್ತಿರುವುದು (ಶೇ.೩ ಸ್ತ್ರೀಯರು) ಆತಂಕಕಾರಿ. ಧೂಮಪಾನದಿಂದ ಭಾರತ ಒಂದರಲ್ಲೇ ಪ್ರತಿವರ್ಷ ೪ಲಕ್ಷದ ೮೦ ಸಾವಿರ ಜನ ಸಾವಿ ಗೀಡಾಗುತ್ತಿದ್ದಾರೆಂದರೆ ಸಮಸ್ಯೆಯ ತೀವ್ರತೆ ಅರ್ಥ ಮಾಡಿಕೊಳ್ಳಬಹುದು.

ಯುವಕರಲ್ಲಿ ತಂಬಾಕು ಸೇವನೆ ಅತಿಯಾಗುತ್ತಿದ್ದು, ಅವರಲ್ಲಿ ಉಂಟಾಗುತ್ತಿರುವ ವ್ಯಕ್ತಿತ್ವದ ಸಮಸ್ಯೆಗಳು, ಹೃದಯಾಘಾತ, ಏರು ರಕ್ತ ದೊತ್ತಡ, ಕ್ಯಾನ್ಸರ್ ಇವುಗಳಿಗೆ ಇದೇ ಕಾರಣವಾಗಿದೆ. ತಂಬಾಕನ್ನು ಧೂಮಪಾನ (ಬೀಡಿ, ಸಿಗರೇಟ್, ಸಿಗಾರ್, ಎಲೆಕ್ಟ್ರಾನಿಕ್ ಧೂಮಪಾನ) ಗುಟ್ಕಾ, ಜರ್ದಾ, ಹೊಗೆಸೊಪ್ಪು ಪುಡಿ, ನಶ್ಯಾ ಇತ್ಯಾದಿ ವಿಧಗಳಲ್ಲಿ ಸೇವಿಸಲಾಗುತ್ತಿದೆ. ಇವೆ
ಲ್ಲವೂ ದೇಹದ ಮೇಲೆ ಹಾನಿಕಾರಕ ಪರಿಣಾಮವನ್ನುಂಟುಮಾಡುತ್ತವೆ.

ಇವೆಲ್ಲದರ ಪೈಕಿ ಧೂಮಪಾನ ಇನ್ನುಳಿದವುಗಳಿಗಿಂತ ಅತ್ಯಂತ ಹಾನಿಕಾರಕ. ಹೊಗೆಸೊಪ್ಪಿನಲ್ಲಿರುವ ನಿಕೋಟಿನ್ ಎಂಬ ಅಂಶ ಮತ್ತಿನ ಅನುಭವ ಕೊಡುತ್ತದೆ. ಇದೇ ಆಹ್ಲಾದದ ಜತೆ ಇನ್ನಿತರ ದುಷ್ಪರಿಣಾಮಗಳಿಗೂ ಕಾರಣ. ಇನ್ನು ಧೂಮಪಾನಕ್ಕೆ ಬಳಸುವ ಹೊಗೆಸೊಪ್ಪು ಬೀಡಿ, ಸಿಗರೇಟ್ ಮತ್ತು ಸಿಗಾರ್, ಎಲೆಕ್ಟ್ರಾನಿಕ್ ಸಿಗರೇಟ್‌ಗಳಲ್ಲಿ ಸಾಮಾನ್ಯ ಅಂಶ. ರಾಸಾ ಯನಿಕ ದೃಷ್ಟಿಯಿಂದ ಇವೆಲ್ಲವೂ ಒಂದೇ ಆದರೂ, ಗುಣಮಟ್ಟ ಮತ್ತು ಹೊಗೆಸೊಪ್ಪನ್ನು ಸುತ್ತುವರಿದಿರುವ ಹೊದಿಕೆ ವಿಭಿನ್ನ ವಾಗಿರುತ್ತವೆ.

ಇದು ಕೂಡ ದುಷ್ಪರಿಣಾಮಗಳ ತೀವ್ರತೆಯನ್ನು ನಿರ್ಧರಿಸುತ್ತದೆ. ಸಿಗರೇಟಿನಲ್ಲಿ ಉಪಯೋಗಿಸಲಾಗುವ ಶೋಧಕ ಕಾಗದ (ಫಿಲ್ಟರ್ ಪೇಪರ್) ಕೆಲವು ಘನವಸ್ತುಗಳು ದೇಹಕ್ಕೆ ಪ್ರವೇಶಿಸದ ಹಾಗೆ ತಡೆಗಟ್ಟುತ್ತದೆಯಾದರೂ ಎಲ್ಲವುಗಳನ್ನೂ ತಡೆ ಗಟ್ಟುವುದಿಲ್ಲ. ಬೀಡಿ, ಸಿಗರೇಟ್‌ಗಳಲ್ಲಿ ಹೊಗೆಸೊಪ್ಪು ಉರಿಯುವಿಕೆಯಿಂಂದ ೭ಸಾವಿರ ರೀತಿಯ ರಾಸಾಯನಿಕ ವಸ್ತುಗಳು
ಉತ್ಪತ್ತಿಯಾಗುತ್ತವೆ. ಇವುಗಳಲ್ಲಿ ಸುಮಾರು ೭೦ಕ್ಕೂ ಹೆಚ್ಚು ರಾಸಾಯನಿಕ ವಸ್ತುಗಳು ಕ್ಯಾನ್ಸರ್‌ಕಾರಕಗಳೆಂದು ದೃಢೀಕರಿಸ ಲಾಗಿದೆ.

ನಿಕೋಟಿನ್, ಕಾರ್ಬನ್ ಮಾನಾಕ್ಸೈಡ್, ಬೆಂಜೋಫಾರಿನ್, ಹೈಡ್ರೋಕಾರ್ಬನ್ ಇವುಗಳು ಪ್ರಮುಖವಾದವುಗಳು. ಪ್ರತಿ
ಯೊಂದು ರಾಸಾಯನಿಕ ವಸ್ತುವೂ ದೇಹದ ಮೇಲೆ ತನ್ನದೇ ಆದ ದುಷ್ಪರಿಣಾಮಗಳನ್ನು ಬೀರುತ್ತದೆ.

ಇನ್ನು ನಿಕೋಟಿನ್ ಪರಿಣಾಮಗಳ ಬಗೆಗೆ ನೋಡುವುದಾದರೆ, ಹೊಗೆಸೊಪ್ಪಿನಲ್ಲಿರುವ ಈ ಪ್ರಮುಖ ರಾಸಾಯನಿಕ ಮೆದುಳಿನ ಮೇಲೆ ಪರಿಣಾಮ ಬೀರಿ ಡೋಪೊಮಿನ್ ಮತ್ತಿತರ ರಾಸಾಯನಿಕ ವಸ್ತುಗಳನ್ನು ಬಿಡುಗಡೆ ಮಾಡಿ ಮೆದುಳನ್ನು ಪ್ರಚೋದಿಸಿ ಆಹ್ಲಾದವನ್ನುಂಟು ಮಾಡುತ್ತದೆ. ಯೋಚನೆಗಳನ್ನು ಮರೆಸುತ್ತದೆ. ಮಾನಸಿಕ ಒತ್ತಡಗಳನ್ನು ಕಡಿಮೆ ಮಾಡುತ್ತದೆ. ಈ ಒಳ್ಳೆಯ ಗುಣಗಳಿಂದಾಗಿ ನಿಕೋಟಿನ್ ಅನ್ನು ಪದೇ ಪದೇ ಸೇವಿಸಬೇಕೆನಿಸುತ್ತದೆ. ನಿಕೋಟಿನ್ ಗೆ ಅವಲಂಬನಾ ಗುಣವಿದ್ದು, ದೀರ್ಘಕಾಲೀಕ ಸೇವನೆಯಿಂದ ಮತ್ತೆ ಮತ್ತೆ ಸೇವಿಸಬೇಕೆಂಬ ತವಕ ಉಂಟಾಗಿ ನಿಕೋಟಿನ್ ಅವಲಂಬನೆ ಉಂಟಾಗುತ್ತದೆ. ಈ ಕಾರಣಕ್ಕಾಗಿ ಅವಲಂಬನೆ ಉಂಟಾದಲ್ಲಿ ತ್ಯಜಿಸುವುದು ಕಷ್ಟವಾದರೂ ದೃಢ ಮನಸ್ಸು ಮಾಡಿದಲ್ಲಿ ದುಃಸ್ಸಾಧ್ಯವೇನಲ್ಲ.

ದೀರ್ಘಾವಧಿಯಲ್ಲಿ ನಿಕೋಟಿನ್ ಮಾನಸಿಕ ತಳವಳ, ಕೇಂದ್ರೀಕರಿಸಲಾಗದಿರುವಿಕೆ, ಮರೆವು, ಹಸಿವಿಲ್ಲದಿರುವಿಕೆ, ನಿದ್ರಾ ಹೀನತೆ, ಕೈ ನಡುಕ, ದೃಷ್ಟಿ ದೋಷಗಳು ಇತ್ಯಾದಿ ತೊಂದರೆ ಗಳುಂಟಾಗುತ್ತವೆ. ನಿಕೋಟಿನ್ ಅನುಕಂಪ ನರವ್ಯವಸ್ಥೆಯನ್ನು ಪ್ರಚೋದಿಸುವುದರಿಂದ ಶುದ್ಧ ರಕ್ತನಾಳಗಳು ಕುಗ್ಗಿ ದೇಹದ ಎಲ್ಲ ಅಂಗಾಂಗ ಗಳಿಗೆ ರಕ್ತ ಪರಿಚಲನೆ ಕುಂದಿಕಾಯಿಲೆ ಗೀಡಾಗುತ್ತವೆ. ಇದಲ್ಲದೇ ತಂಬಾಕು ಸೇವನೆಯಿಂದಿಂದುಂಟಾಗುವ ಇತರ ಕಾಯಿಲೆಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ.

ಜೀನ್ ನ್ಯೂನತೆ: ತಂಬಾಕಿನಲ್ಲಿರುವ ರಾಸಾ ಯನಿಕಗಳು ಮನುಷ್ಯನ ವಂಶವಾಹಿಗಳ ರಚನೆಯನ್ನೇ ಬದಲಾಯಿಸಿ ಅಸಹಜತೆಗಳುಂಟು ಮಾಡುತ್ತವೆ. ಈ ಪರಿಣಾಮಗಳು ಮನುಷ್ಯ ದೇಹದ ಪೂರ್ವ ನಿಗದಿತ ಕಾರ್ಯಗಳನ್ನೇ ಅವ್ಯವಸ್ಥೆ ಗೊಳಿಸುತ್ತವೆ.

ಕ್ಯಾನ್ಸರ್: ಧೂಮಪಾನ ಕ್ಯಾನ್ಸರ್‌ಗೆ ಪ್ರಮುಖ ಕಾರಣಗಳಲ್ಲೊಂದು. ಉಂಟಾಗುವ ಕ್ಯಾನ್ಸರ್ ಗಳಲ್ಲಿ ಶೇ೨೭ಕ್ಕೆ ಧೂಮ ಪಾನವೇ ಕಾರಣ. ತಂಬಾಕಿನಲ್ಲಿರುವ ಅದರಲ್ಲೂ ಧೂಮಪಾನದಲ್ಲಿರುವ ರಾಸಾಯನಿಕ ವಸ್ತುಗಳು ಕ್ಯಾನ್ಸರನ್ನು
ಉತ್ಪತ್ತಿಮಾಡುತ್ತವೆ. ಶ್ವಾಸಕೋಶದ ಕ್ಯಾನ್ಸರ್, ಶ್ವಾಸಕೋಶ, ಧ್ವನಿಪೆಟ್ಟಿಗೆ, ಪ್ಯಾಂಕ್ರಿಯಾಸ್, ಜಠರ, ದೊಡ್ಡಕರುಳು, ರೆಕ್ಟಂ, ಈಲಿ, ಗರ್ಭಕೋಶ, ಮೂತ್ರಜನಕಾಂಗಗಳು, ರಕ್ತದ ಕ್ಯಾನ್ಸರ್, ಜೀರ್ಣಾಂಗದ ಕ್ಯಾನ್ಸರ್ ಮತ್ತು ಮೂತ್ರಕೋಶದ ಕ್ಯಾನ್ಸರ್ ಇವು ಉಂಟಾಗುವ ಪ್ರಮುಖ ಕ್ಯಾನ್ಸರ್‌ಗಳು. ಧೂಮಪಾನ ತ್ಯಜಿಸಿದ ೧೮ ವರ್ಷಗಳ ನಂತರವೂ ಶ್ವಾಸಕೋಶದ ಕ್ಯಾನ್ಸರ್ ಉಂಟಾಗಬಹುದು.

ಕ್ಯಾನ್ಸರ್ ಬರಲು ೧ ಸಿಗರೇಟ್ ಸೇದಿದರೂ ಸಾಕು, ವಂಶವಾಹಿ ಗಳಲ್ಲಿ ಧೂಮಪಾನದ ಕ್ಯಾನ್ಸರ್ ಕಾರಕ ಪರಿಣಾಮಗಳನ್ನು ಹಿಮ್ಮೆಟ್ಟಿಸುವ ಸಾಮರ್ಥ್ಯ ಇದ್ದವರಲ್ಲಿ ಕ್ಯಾನ್ಸರ್ ತಗಲದಿರಬಹುದು. ಇದು ಬಹುಅಪರೂಪ. ಗುಟ್ಕಾ ಮತ್ತು ಹೊಗೆಸೊಪ್ಪು
ಅಗಿಯುವವರಲ್ಲಿ ಬಾಯಿ ಮತ್ತು ಗಂಟಲ ಕ್ಯಾನ್ಸರ್ ಅತ್ಯಧಿಕ.

ಹೃದಯಾಘಾತ: ಧೂಮಪಾನ ರಕ್ತ ಒತ್ತಡವನ್ನು ಹೆಚ್ಚಿಸುತ್ತದೆ, ಹೃದಯದ ಶುದ್ಧರಕ್ತನಾಳಗಳಲ್ಲಿ ಜಿಡ್ಡು ಶೇಖರಣೆಯನ್ನು ಪ್ರೇರೇಪಿಸುತ್ತದೆ. ಹೃದಯದ ಶುದ್ಧರಕ್ತನಾಳವನ್ನು ಸೆಳೆತಕ್ಕೀಡುಮಾಡುವುದರಿಂದ ಹೃದಯಾಘಾತ ಇವರುಗಳಲ್ಲಿ ಹೆಚ್ಚು. ನೋವಿಲ್ಲಿದ ಹೃದಯಾಘಾತ ಮತ್ತು ಹೃದಯಾಘಾತದಿಂದುಂಟಾದ ದಿಢೀರ್ ಸಾವು ಇವರುಗಳಲ್ಲಿ ಹೆಚ್ಚು. ಧೂಮಪಾನ ಮಾಡುವ ಶೇ ೫೦ರಷ್ಟು ವಯಸ್ಕರು ಹೃದ್ರೋಗ ಮತ್ತು ರಕ್ತನಾಳಗಳ ಕಾಯಿಲೆಗೀಡಾಗುತ್ತಾರೆ. ಒಂದೇ ಸಿಗರೇಟಿನಿಂದ ಅಥವಾ ಒಂದೇ ಸೊಪ್ಪಿನಿಂದ ಹೃದಯಾಘಾತ ಸಂಭವಿಸಬಹುದು.

ಧೂಮಪಾನಿಗಳಲ್ಲಿ ಪೂರ್ವಭಾವಿಯಾಗಿ ಎದೆನೋವು, ದಮ್ಮು ಇತ್ಯಾದಿ ಯಾವ ಲಕ್ಷಣಗಳೂ ಕಾಣಿಸಿಕೊಳ್ಳದೆ ದಿಢೀರನೆ ಹೃದಯಾಘಾತ ಸಂಭವಿಸಬಹದು. ಧೂಮಪಾನಿಗಳಲ್ಲಾಗುವ ಹೃದಯಾಘಾತಗಳಲ್ಲಿ ಇನ್ನಿತರ ಕಾರಣಗಳಿಂದಾಗುವ
ಹೃದಯಾಘಾತಕ್ಕಿಂತ ಹೆಚ್ಚು ಘೋರ ಪರಿಣಾಮಗಳು ಉಂಟಾಗುತ್ತವೆ.

ಉಸಿರಾಟದ ತೊಂದರೆಗಳು: ಧೂಮದಲ್ಲಿರುವ ರಾಸಾಯನಿಕ ವಸ್ತುಗಳು ಉಸಿರು ನಾಳಗಳನ್ನು ಜಖಂಗೊಳಿಸಿ ದೀರ್ಘಾ ವಧಿಯಲ್ಲಿ ಅವುಗಳನ್ನು ಅಡಚಣೆಗೀಡುಮಾಡಿ ಅಂತಿಮವಾಗಿ ಅಡಚಣೆಯ ಶ್ವಾಸಕೋಶ ರೋಗಗಳಾದ ಕ್ರಾನಿಕ್
ಬ್ರಾಂಕೈಟಿಸ್(ಬೇರೂರಿದ ಶ್ವಾಸನಾಳೂತುರಿ) ಮತ್ತು ಎಂ-ಸೀಮ (ಶ್ವಾಸಕೋಶ ಉಬ್ಬಿಕೆ) ಕಾಯಿಲೆಗಳುಂಟಾಗಿ ಕೆಮ್ಮು, ದಮ್ಮು ಅಂತಿಮವಾಗಿ ಉಸಿರಾಟದ ವಿಫಲತೆಯುಂಟಾಗುತ್ತದೆ. ಈ ಹಂತದ ನ್ಯೂನತೆಗಳನ್ನು ಧೂಮಪಾನ ನಿಲ್ಲಿಸಿದರೂ ಉಂಟಾಗಿರುವ ನ್ಯೂನತೆಗಳು ಸಹಜ ಸ್ಥಿತಿಗೆ ಬಾರುವುದಿಲ್ಲ.

ಸ್ಟ್ರೋಕ್ : ಧೂಮಪಾನದಿಂದುಂಟಾಗುವ ಏರುರಕ್ತ ಒತ್ತಡ ಮತ್ತು ಮೆದುಳಿನ ರಕ್ತನಾಳಗಳ ಜಿಡ್ಡುಗಟ್ಟುವಿಕೆಯಿಂದ ಮೆದುಳಿನ ರಕ್ತನಾಳಗಳು ಹೆಪ್ಪು ಗಟ್ಟಿ ಅಥವಾ ಒಡೆದು ರಕ್ತಸ್ರಾವವಾಗಿ ವಿವಿಧ ಬಗೆಯ ಲಕ್ವಗಳು ಸಂಭವಿಸಿ ಶಾಶ್ವತ, ದೈಹಿಕ ಊನತೆ ಗಳುಂಟಾಗಬಹುದು. ಅಥವಾ ಸಾವು ಸಂಭವಿಸಬಹದು. ಪ್ರತಿನಿತ್ಯ ೫ ಸಿಗರೇಟ್ ಸೇದು ವವರಲ್ಲಿ ಸ್ಟ್ರೋಕ್ ಉಂಟಾಗುವ ಸಾಧ್ಯತೆ ಹೆಚ್ಚು.

ಸಕ್ಕರೆಕಾಯಿಲೆ: ಧೂಮಪಾನ ಮಾಡುವವರಲ್ಲಿ ಸಕ್ಕರೆಕಾಯಿಲೆ ಬರುವ ಸಾಧ್ಯತೆ ಮಾಡದವರಿಗಿಂತ ಶೇ ೩೦-೪೦ರಷ್ಟು ಜಾಸ್ತಿ. ಧೂಮದಲ್ಲಿರುವ ರಾಸಾಯನಿಕ ವಸ್ತುಗಳು ಇನ್ಸ್ಯ್ಯುಲಿನ್ ಅನ್ನು ಕ್ರಿಯಾಹೀನಗೊಳಿಸುತ್ತವೆ. ಧೂಮಪಾನ ಮಾಡುವ ಗರ್ಭಿಣಿಯರಲ್ಲಿ ಗರ್ಭಕೂಸಿನ ರಚನೆ ಯಲ್ಲಿ ಅವ್ಯವಸ್ಥೆಗಳುಂಟಾಗುತ್ತವೆ. ಧೂಮಪಾನ ಮಾಡುವವರಲ್ಲಿ ವೃದ್ಧಾಪ್ಯದ ಲಕ್ಷಣ ಗಳು ಬಹುಬೇಗ ಕಾಣಿಸಿಕೊಳ್ಳುತ್ತವೆ.

ಸಂತಾನಹೀನತೆ: ಧೂಮಪಾನಿಗಳಲ್ಲಿ ವೀರ್ಯಾಣೋತ್ಪತ್ತಿ ಸಂಖ್ಯೆ ಕುಗ್ಗುತ್ತಿದ್ದು, ಮಾನವ ಕುಲದ ಸಂತತಿಯ ಮುಂದುವರಿಕೆ ಸವಾಲಾಗಿ ಪರಿಣಮಿಸಿದೆ. ಧೂಮಪಾನಿಗಳಲ್ಲಿ ಸಂತಾನಹೀನತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಧೂಮಪಾನಿಗಳಲ್ಲಿ
ಲೈಂಗಿಕಾ ಸಕ್ತಿ ಕುಗ್ಗುವುದರ ಜೊತೆಗೆ ಶಿಶ್ನ ನಿಮಿರುವಿಕೆಯ ಸಮಸ್ಯೆಗಳುಂಟಾಗುತ್ತಿವೆ. ಇವೆಲ್ಲದರ ಹೊರತಾಗಿ ತಂಬಾಕು ಪರಿಷ್ಕರಣೆಗಾಗಿ ಕಾಡು ನಷ್ಟವಾಗುತ್ತಿದೆ ಮತ್ತು ಧೂಮದಲ್ಲಿರುವ ರಾಸಾಯನಿಕಗಳು ಪರಿಸರದ ತಾಪಮಾನವನ್ನೂ ಹೆಚ್ಚಿಸಿ ಪರಿಸರ ಮಾಲಿನ್ಯಗೊಳ್ಳುತ್ತಿದೆ.

ತಂಬಾಕಿನ ಹೊಗೆ ಸೇದುವವರನ್ನಲ್ಲದೆ ಅಕ್ಕಪಕ್ಕದ ವರನ್ನೂ ಕೂಡ ರೋಗಗ್ರಸ್ತರನ್ನಾಗಿ ಸುತ್ತದೆ. ತಂಬಾಕು ಬಿಡಲು ಯಾವ ಔಷಧಗಳೂ ಇಲ್ಲ, ದುಷ್ಪರಿಣಾಮಗಳ ಅರಿವಿನಿಂದುಂಟಾದ ದೃಢ ಸಂಕಲ್ಪದಿಂದ ಮಾತ್ರ ಸಾಧ್ಯ. ಭಾರತದಲ್ಲಿ ಶೇ.೩೦ರಷ್ಟು ಜನ ತಂಬಾಕು ಸೇವನೆಯ ಚಟಕ್ಕೀಡಾಗಿ ನಾನಾ ಬಗೆಯ ರೋಗಗಳಿಗೀಡಾಗಿದ್ದಾರೆ. ತಂಬಾಕಿನಿಂದ ಉಂಟಾಗುವ ದುಷ್ಪರಿ ಣಾಮಗಳು ಈಗಾಗಲೆ ಕಾನೂನಿನಲ್ಲಿ ನಿಷೇಧಿಸಲಾಗಿರುವ ಮಾದಕ ವಸ್ತುಗಳಿಗಿಂತಲೂ ವ್ಯಾಪಕ ಮತ್ತು ಗಂಭೀರ ವಾಗಿದ್ದು, ತಂಬಾಕು ಬೆಳೆಯನ್ನೇ ನಿಷೇಧಿಸುವುದು ಮಾನವ ಸಂತತಿಯ ರಕ್ಷಣೆಗೆ ಅತ್ಯವಶ್ಯಕವಾಗಿದೆ.

ತಂಬಾಕಿನಿಂದುಂಟಾಗುತ್ತಿರುವ ಕಾಯಿಲೆಗಳಿಗೆ ಭರಿಸಬೇಕಾದ ವೆಚ್ಚವೂ ದುಬಾರಿಯಾಗಿದ್ದು, ಇದು ತಂಬಾಕಿನಿಂದ ಬರುವ ಆದಾಯಕ್ಕಿಂತ ದುಪ್ಪಟ್ಟಾಗಿದೆ. ಈಗಾಗಲೆ ಭೂತಾನ್ ಮತ್ತು ನ್ಯೂಜಿಲ್ಯಾಂಡ್ ದೇಶಗಳು ತಂಬಾಕು ಬೆಳೆಯನ್ನೇ ನಿಷೇಧಿ ಸಿವೆ.

ಭಾರತದಲ್ಲಿ ತಂಬಾಕು ಬೆಳೆಯುವ ರೈತರು ಸುಮಾರು ೧ಲಕ್ಷ ಮಂದಿ ಇದ್ದು, ರಾಷ್ಟ್ರದಲ್ಲಿ ಇದರ ವಹಿವಾಟು ೪೨೦೦ ಕೋಟಿ ಆಗಿದ್ದು, ಈ ಬೆಳೆಯನ್ನು ನಿಷೇಧಿಸುವುದರಿಂದ ಸರ್ಕಾರಕ್ಕಾಗಲಿ ಅಥವಾ ಸಮುದಾಯಕ್ಕಾಗಲಿ ನಷ್ಟಕ್ಕಿಂತ ಲಾಭವೇ ಹೆಚ್ಚು. ಸರ್ಕಾರ ಜನರಿಗೆ ಆಹಾರವನ್ನು ನೀಡಬೇಕೇ ವಿನಃ ವಿಷಪೂರಿತ ತಂಬಾಕನ್ನಲ್ಲ. ಇಡೀ ಸೃಷ್ಟಿಗೇ ಮಾರಕವಾಗಿರುವ ತಂಬಾಕು ಬೆಳೆಯನ್ನೇ ನಿಷೇಧಿಸಲು ಸರ್ಕಾರ ಶೀಘ್ರ ಕಾರ್ಯೋನ್ಮುಖವಾಗಬೇಕು.