Sunday, 15th December 2024

ಮೋದಿ ನೆಟ್ಟ ಸಸಿಗಳಿಂದ ಇಂದು ಆಮ್ಲಜನಕ ಲಭ್ಯ

ರಾವ್-ಭಾಜಿ

ಪಿ.ಎಂ.ವಿಜಯೇಂದ್ರ ರಾವ್

ಕಳೆದ ವರ್ಷ, ಲಾಕ್‌ಡೌನ್ ಘೋಷಣೆಯಾದ ನಂತರದಲ್ಲಿ ಮಂಡ್ಯ ಜಿಯ ಒಂದು ಊರಿನಲ್ಲಿ ನಡೆದ ಘಟನೆ. ಇಡೀ ದಿನ ಮನೆಯಲ್ಲಿ ಉಳಿದಿದ್ದ ಮಂದಿ ಸೂರ್ಯಾಸ್ತಮದ ವೇಳೆಗೆ ಲಾಕ್‌ಡೌನ್ ಯಶಸ್ವಿಯಾಗಿದ್ದನ್ನು ಸಂಭ್ರಮಿಸಲು ಬೀದಿಗೆ ಇಳಿದು
ಮೆರವಣಿಗೆ ಕೊಂಡೊಯ್ದರು.

ಕೊಡಲಿ ತೆಗೆದುಕೊಂಡು ತಲೆ ತುರಿಸ್ಕೊಂಡ್ರು ಅನ್ನೋದು ಇದಕ್ಕೇ. ಕೋವಿಡ್ ಭೀತಿ ಹಸಿಯಾಗಿರುವಾಗಲೇ ಮಾಲ್‌ಗಳಲ್ಲಿ, ಹೆಂಗಸರಾದಿಯಾಗಿ ಜನ ಎಗ್ಗೇ ಇಲ್ಲದೆ ಪರಸ್ಪರರ ಮೇಲೆ ಮುಗಿಬೀಳುವ ದೃಶ್ಯ ಅಂದಿನಿಂದಲೂ ಇಂದಿನವರೆವಿಗೂ ನಿತ್ಯ ಕಂಡುಬರುತ್ತಿದೆ. ಬೈಕ್‌ಗಳಲ್ಲಿ ನಾಲ್ಕು ಜನ ಕೂತು ಮಾಸ್ಕ್‌ರಹಿತ (ಅಥವಾ ಮಾಸ್ಕ್ ನಿರರ್ಥಕ) ಗಲ್ಲವನ್ನು ಮುಂದಿನವನ ಹೆಗಲಮೇಲೆ ಆನಿಸಿ ಚಲಿಸುತ್ತಿದ್ದರೆ ಚತುರ್ಮುಖ ಬ್ರಹ್ಮನೇ ಬೈಕ್ ಸವಾರಿ ಮಾಡುತ್ತಿದ್ದೆನೇನೊ ಎನಿಸದಿರದು. ಇದು ನಮ್ಮ ನಿತ್ಯ
ಜೀವನದ ತುಣುಕು. ಈ ಹಿನ್ನೆಲೆಯಲ್ಲಿ, ಕೋವಿಡ್ ಹಾವಳಿ ಸ್ವಲ್ಪ ತಣ್ಣಗಾಗಿದ್ದು, ಎರಡನೇ ಅಲೆ ಅಪ್ಪಳಿಸಲು ತಡವಾಗಿದ್ದು ಪವಾಡವೇ.

ಕರೋನಾ ವೈರಸ್‌ನ ಮರುಭೇಟಿಯ ಮೊದಲು ನಂಜನಗೂಡಿನ ಸ್ಥಳೀಯ ಪತ್ರಕರ್ತರೊಬ್ಬರು ತಮ್ಮ ದ್ವಂದ್ವವನ್ನು ತೋಡಿ ಕೊಂಡರು. ವ್ಯಕ್ತಿಯಾಗಿ ನಂಜುಂಡೇಶ್ವರನ ರಥಯಾತ್ರೆಯ ಪರವಿರುವುದಾಗಿಯೂ, ವರದಿಗಾರನಾಗಿ ಅದನ್ನು ವಿರೋಧಿಸುವು ದಾಗಿಯೂ ಹೇಳಿ ಯಾವುದು ಸರಿ ಎಂಬ ಗೊಂದಲ ತಮ್ಮನ್ನು ಕಾಡುತ್ತಿದೆ ಎಂದರು. ಜಾತ್ರೆ ನಡೆಯುವುದೂ ಜನರ ಹಿತಾಸಕ್ತಿಗೇ, ತುರ್ತು ಪರಿಸ್ಥಿತಿಯೊಂದರಲ್ಲಿ ಅದನ್ನು ರದ್ದು ಪಡಿಸಬೇಕೆನ್ನುವುದೂ ಸಾರ್ವಜನಿಕರ ಒಳಿತಿಗೇ.

ಹಾಗಾಗಿ ಗೊಂದಲ ಸಹಜವೇ. ಯಾವ ನಿರ್ಧಾರದಿಂದ ಜನಸಮೂಹಕ್ಕೆ ಹೆಚ್ಚಿನ ಒಳಿತಾಗುತ್ತದೋ ಅಂತಹ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಆ ನಿರ್ಧಾರವನ್ನು ತೆಗೆದುಕೊಳ್ಳುವುದು ಸರಕಾರವೇ ಆದ್ದರಿಂದ ಆಡಳಿತ ಪಕ್ಷ ಜನಹಿತವನ್ನು ಗಮನ ದಲ್ಲಿಟ್ಟುಕೊಂಡು ವರ್ತಿಸಬೇಕು. ಧಾರ್ಮಿಕ ಸೇವೆಯಿಂದ ಆದ ಒಳಿತಿನ ಪರಿಮಾಣವನ್ನು ಅಳೆಯುವ ಸಾಧನ ಅಲಭ್ಯ ಎನ್ನುವ ಕಾರಣವನ್ನು ರಥಯಾತ್ರೆಯ ವಿರೋಧಿಗಳು ತಮ್ಮ ಮೂಗಿನ ನೇರಕ್ಕೆ ವಾದಿಸುವ ಸಾಧ್ಯತೆ ಇದ್ದೇ ಇದೆ.

ಶ್ರದ್ಧಾ ನಂಬಿಕೆಗಳಿಗೆ ಹೆಸರಾದ ನಮ್ಮ ದೇಶದಲ್ಲಿ ಧಾರ್ಮಿಕ ವಿಷಯ ಕುರಿತಾದ ರಾಜಕೀಯ ನಿರ್ಧಾರವನ್ನು ತೆಗೆದು ಕೊಳ್ಳುವುದು ಸುಲಭದ ಮಾತಲ್ಲ. ಧಾರ್ಮಿಕ ಆಚರಣೆಯೂ ಮುಖ್ಯ, ಸಾರ್ವಜನಿಕ ಆರೋಗ್ಯವೂ ಮುಖ್ಯ. ಇವೆರಡರ ನಡುವೆ ಗೆರೆ ಎಳೆಯಬಹುದೇ? ನನ್ನ ಅಭಿಪ್ರಾಯದಲ್ಲಿ, ಈ ಸಂದಿಗ್ಧಕ್ಕೆ ತೆರೆ ಎಳೆಯಬೇಕಾದವರು ಧರ್ಮಾಸಕ್ತರೇ, ಸರಕಾರವಲ್ಲ. ಜಾತ್ರೆ, ತೇರುಗಳಲ್ಲಿ ಶಿಸ್ತನ್ನು ಕಾಪಾಡಿಕೊಳ್ಳುವ ಭರವಸೆ ಇದ್ದರೆ, ಸರಕಾರದ ಅನುಮತಿ ಕೇವಲ ಔಪಚಾರಿಕ.

ಕೋವಿಡ್ ಇರಲಿ, ಇಲ್ಲದಿರಲಿ, ಅಂತಹ ಶಿಸ್ತನ್ನು ಅಳವಡಿಸಿಕೊಳ್ಳುವುದು ದೇಶದ ಸಮಸ್ತ ಪ್ರಜೆಗಳ ಮೊದಲ ಆದ್ಯತೆಯಾಗ ಬೇಕು. ಧಾರ್ಮಿಕ ಶಿಸ್ತಿನ ಜತೆಜತೆಯಾಗಿ ಸಾರ್ವಜನಿಕ ಶಿಸ್ತನ್ನೂ ಮೈಗೂಡಿಸಿಕೊಂಡಾಗ ಧಾರ್ಮಿಕ ಶ್ರದ್ಧೆಯಲ್ಲಿ ಧರ್ಮ
ನಿರಪೇಕ್ಷಿತ ಸರಕಾರ ಮೂಗು ತೂರಿಸಲಾಗದು. ಈ ಪರಿಯ ದ್ವಂದ್ವ ಬಹುವ್ಯಾಪಿ. ಅದು ಸಾರ್ವಜನಿಕರಲ್ಲಷ್ಟೇ ಅಲ್ಲ, ಆಡಳಿತದ ಚುಕ್ಕಾಣಿ ಹಿಡಿದವರಲ್ಲೂ ಮನೆ ಮಾಡಿರುತ್ತದೆ. ಅವರು ದ್ವಂದ್ವಗಳಿಂದ ಹೊರಬಂದು ನಿರ್ಧಾರಗಳನ್ನು ತೆಗೆದುಕೊಳ್ಳುವುದು
ಮುಖ್ಯ. ಮತಪೆಟ್ಟಿಗೆಯ ಮೇಲೆ ಸದಾ ನೆಟ್ಟ ಕಣ್ಣು ಹಾಗಾಗಲು ಅನುವು ಮಾಡಿಕೊಳ್ಳುವುದಿಲ್ಲ. ಆ ಕಾರಣಕ್ಕೇ ಅಶಿಸ್ತಿನಿಂದ ವರ್ತಿಸುವ ಸಾರ್ವಜನಿಕರನ್ನಷ್ಟೇ ಹಳಿಯುವುದು ತರವಲ್ಲ.

ಅಮೆರಿಕದ ಅಧ್ಯಕ್ಷರೂ ದ್ವಂದ್ವಮುಕ್ತರಾಗಿಲ್ಲ. ಏಪ್ರಿಲ್ ಹತ್ತರಂದೇ ಭಾರತೀಯ ಸಿರಂ ಸಂಸ್ಥೆಯ ಮುಖ್ಯಸ್ಥರಾದ ಆದರ್ ಪೂನಾವಾಲಾ ಅವರು ಜೋ ಬೈಡನ್ನ್‌ನ್ನು ಉದ್ದೇಶಿಸಿ ಟ್ವೀಟ್ ಮಾಡಿದ್ದರು. ಕೋವಿಡ್ ಚುಚ್ಚುಮದ್ದಿಗೆ ಅಗತ್ಯವಾದ ಕಚ್ಚಾ ಸಾಮಗ್ರಿಯ ಮೇಲಿನ ನಿರ್ಬಂಧವನ್ನು ತಕ್ಷಣವೇ ಹಿಂತೆಗೆಯಲು ಕೋರಿದ್ದರು. ಕೋರಿಕೆ ಸಲ್ಲಿಸಿದ ಒಂದು ನಂತರ – ಸದ್ಯದ ಆತಂಕಕಾರಿ ಪರಿಸ್ಥಿತಿಯಲ್ಲಿ ಒಂದು ಗಂಟೆಯೂ ಸುದೀರ್ಘಾವಧಿಯೇ – ಸರಕಾರೀ ವಕ್ತಾರರೊಬ್ಬರು ನಕಾರಾತ್ಮಕವಾಗಿ ಉತ್ತರಿಸಿದರು.

ಅಮೆರಿಕದ ತಕ್ಷಣದ ಕಾಳಜಿ ಅಮೆರಿಕನ್ನರ ಸಂರಕ್ಷಣೆ ಎಂಬ ಪ್ರತಿಕ್ರಿಯೆ. ಭಾರತದ ಕೋವಿಡ್ ಪರಿಸ್ಥಿತಿಯ ಭೀಕರತೆಯ
ಅರಿವಿರುವ ಅಮೆರಿಕದ ಅನಿವಾಸಿ ಭಾರತೀಯರ ಒತ್ತಾಯ ಹೆಚ್ಚಾಗುತ್ತಿದ್ದಂತೆ ಬೈಡನ್ ತಮ್ಮ ನಿರ್ಧಾರವನ್ನು ಸಡಿಲಗೊಳಿಸಿ ದ್ದಾರೆ. ಏತನ್ಮಧ್ಯೆ ಮತ್ತೆ ಮೂರು ದಿನಗಳು ಸಂದಿವೆ. ವಿಶೇಷವಾಗಿ ಕೋವಿಡ್ -19 ತಲೆದೋರಿದ ನಂತರದ ದಿನಗಳಲ್ಲಿ ಭಾರತ ಅಮೆರಿಕವೂ ಸೇರಿದಂತೆ ಇತರೆ ದೇಶಗಳಿಗೆ ತೋರಿದ ಔದಾರ್ಯದ ನೆನಪು ಬೈಡನ್‌ಗೆ ತಡವಾಗಿಯಾದರೂ ಆದಂತಿದೆ.

ತನ್ನ ರಾಜಕೀಯ ವಿರೋಧಿಯಾದ ಡೊನಾಲ್ಡ ಟ್ರಂಪ್‌ಗೆ ಹತ್ತಿರವಾಗಿದ್ದ ನರೇಂದ್ರ ಮೋದಿಯನ್ನು ಸಹಜವಾಗೇ ವಿರೋಧ ಮಾಡುವ ಮನಸ್ಸು ಬೈಡನ್‌ನದ್ದಾದರೂ, ಹೆಮ್ಮಾರಿಯನ್ನು ಹಿಮ್ಮೆಟ್ಟಿಸುವಲ್ಲಿ ಮನುಕುಲವೇ ಒಂದಾಗಬೇಕಿರುವ ಪರಿಸ್ಥಿತಿ ಯಲ್ಲಿ ಎಂದಿನ ಅಮೆರಿಕದ ಉಡಾಫೆ ನಿಲುವು ತರವಲ್ಲ ಎಂಬುದು ಅರ್ಥವಾಗಿದೆ. ಜತೆಗೆ ಮೋದಿಯ ಲಸಿಕಾ ರಾಜತಾಂತ್ರಿಕತೆಗೆ
ಪ್ರತಿಸ್ಪಂದಿಸಬೇಕಾದ ಅನಿವಾರ್ಯತೆಯಿದೆ. ಇಸ್ಲಾಂ ರಾಷ್ಟ್ರದ ನಾಯಕನಾದ ಇಮ್ರಾನ್ ಖಾನ್‌ನೇ ತನ್ನ ಸ್ವಭಾವಕ್ಕಂಟಿದ ಜಗಳಗಂಟಿತನವನ್ನು ಬಿಟ್ಟು ದ್ವಂದ್ವಮುಕ್ತನಾಗಿ ಭಾರತದೊಂದಿಗೆ ಹೆಗಲುಗೊಡಬಲ್ಲರಾದರೆ, ಬೈಡನ್‌ಗೆ ಅದು ಯಾವ ಲೆಕ್ಕ!

ಇಮ್ರಾನ್‌ನ ನವ ನಿಲುವಿಗೆ ತನ್ನ ರಾಷ್ಟ್ರದ ಆಂತರಿಕ ಕ್ಷೋಭೆ ಕೂಡ ಕಾರಣ ಎನ್ನುವುದು ಮರೆಯುವಂತಿಲ್ಲ. ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಬಗ್ಗೆ ಒಂದು ಮಾತು. ಆಕೆ ಭಾರತದ ಮೂಲದವಳಷ್ಟೆ, ಬೇರು ಅಲ್ಲಿಯದೆ. ಸ್ಥಳಾಂತರಿಸಿದ ಗಿಡ. ದತ್ತುಪುತ್ರನಿಗೆಲ್ಲಿ ಪಿತೃಪ್ರೇಮ ಎಂಬ ಮಾತು ಆಕೆಗೆ ಅನ್ವಯಿಸುತ್ತದೆ. ತನ್ನ ಮೂಲ ಭಾರತ ಎಂಬ ಕಾರಣಕ್ಕೆ ಆಕೆ ಭಾರತದ ಪರ
ವಕಾಲತ್ತು ವಹಿಸಬೇಕಿಲ್ಲ, ಮಾನವೀಯತೆಯ ದೃಷ್ಟಿಯಿಂದಷ್ಟೇ ಅಮೆರಿಕದಲ್ಲಿ ಉಪಯೋಗಕ್ಕೆ ಬಾರದ ಸುಮಾರು ಮೂರೂ ವರೆ ಕೋಟಿ ಅಸ್ತರ ಝೆನೆಕಾ ಲಸಿಕೆಯನ್ನು ಭಾರತಕ್ಕೆ ತಡಮಾಡದೆ ಕಳಿಸುವುದಕ್ಕೆ ಒತ್ತಡ ಹೇರಿದ್ದರೂ ನಡೆಯುತ್ತಿತ್ತು.

ಈಗ, ಕೃತಜ್ಞತೆಯ ಮೂಲಕ ಮರುಪಾವತಿ ಮಾಡಬಹುದಾಗಿದ್ದ ಪ್ರಕ್ರಿಯೆಗೆ ದಾನದ ಹೊದಿಸಲಾಗುತ್ತಿದೆ. ಪ್ರಯೋಗ ಹಂತದಲ್ಲಿ, ಈ ಲಸಿಕೆ ಪಡೆದ ಕೆಲವು ಪ್ರಕರಣಗಳಲ್ಲಿ ಅಮೆರಿಕನ್ನರ ಮತ್ತು ಯೂರೋಪಿಯನ್ನರ ರಕ್ತ ಹೆಪ್ಪುಗಟ್ಟಿತ್ತು. ಅಮೆರಿಕದ ಫೆಡರಲ್ ಡ್ರಗ್ ಏಜೆನ್ಸಿಯ ಅನುಮತಿ ಇನ್ನೂ ಸಿಕ್ಕಿಲ್ಲ. ವಿವಿಧ ಜನಾಂಗಗಳ ಮೇಲೆ ಒಂದೇ ಲಸಿಕೆ ವೈವಿಧ್ಯ
ಪರಿಣಾಮ ಬೀರಬಹುದಾಗಿದ್ದು ಭಾರತದಲ್ಲಿ ಲಸಿಕೆ ಪಡೆದವರ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರಿಲ್ಲ. ಲಸಿಕೆಯೂ ದ್ವಂದ್ವಮುಕ್ತವಲ್ಲ! ಎಷ್ಟೇ ಬೇಗ ಈ ಲಸಿಕೆ ಭಾರತವನ್ನು ತಲುಪಿದರೂ ಈಗಾಗಲೇ ಆದ ವಿಳಂಬದಿಂದ ಸಂಭವಿಸಿದ ಹಾನಿ ಯನ್ನು ಸರಿಪಡಿಸಲಾಗುವುದಿಲ್ಲ. ದೊಡ್ಡಣ್ಣ ಅಮೆರಿಕದ ವರ್ತನೆ ಅಕ್ಷಮ್ಯ.

ಜಾಗತಿಕ ಮಟ್ಟದಿಂದ ಸ್ಥಳೀಯ ಮಟ್ಟದವರೆಗೂ ಪರಸ್ಪರರ ಹೆಗಲಿಗೆ ಹೆಗಲು ಕೊಡುವುದು, ಸಹಕರಿಸುವುದು ಪ್ರಸಕ್ತ ಸನ್ನಿವೇಶದ ಅಗತ್ಯ. ಅಮೆರಿಕ ಅಲ್ಲದೆ ಫ್ರಾನ್ಸ್, ಬ್ರಿಟನ್, ಜರ್ಮನಿ, ಕೆನಡಾ, ಸಿಂಗಾಪೂರ್, ಸೌದಿ ಅರೇಬಿಯಾ ರಾಷ್ಟ್ರಗಳು ಭಾರತದ ಬೆಂಬಲಕ್ಕೆ ನಿಂತಿವೆ. ದುರಂಧರರಷ್ಟೆ ಇಂತಹ ಉದಾತ್ತ ಮನೋಭಾವಕ್ಕೆ ವ್ಯತಿರಿಕ್ತವಾಗಿ ವರ್ತಿಸಬಲ್ಲರು, ಪರಿಸ್ಥಿತಿಯ ಲಾಭವನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳಬಲ್ಲರು.

ಉದಾಹರಣೆಗೆ, ಆಕ್ಸಿಜನ್ ಅಭಾವ ಸೃಷ್ಟಿಸಿ ಅದರಿಂದ ಹಣಮಾಡುವ ದಂಧೆ. ಲಿಂಡ್ ಇಂಡಿಯಾದ ಉಪಾಧ್ಯಕ್ಷರಾಗಿ ನಿವೃತ್ತಿ ಗೊಂಡ ಹನುಮಾನ್ ಮಲ್ ಬೆಗಾಂನಿ ದೇಶದ ಆಮ್ಲಜನಕ ಉತ್ಪಾದನಾ ಘಟಕಗಳ ಒಳಹೊರಗನ್ನು ಬಲ್ಲವರು. ಕೈಗಾರಿಕಾ ಬಳಕೆಗೆ ಉತ್ಪಾದಿಸಲಾಗುವ ಒಟ್ಟು ಆಕ್ಸಿಜನ್ನಿನ ಶೇಕಡಾ ಒಂದು ಭಾಗದಷ್ಟು ಮಾತ್ರ ವೈದ್ಯಕೀಯ ಕ್ಷೇತ್ರದಲ್ಲಿ ಬಳಕೆಯಾಗುತ್ತದೆ. ಉಕ್ಕು ತಯಾರಿಕೆಯಲ್ಲಿ ಬೃಹತ್ ಪ್ರಮಾಣದಲ್ಲಿ ಉಪಯೋಗಿಸಲ್ಪಡುವ ಆಕ್ಸಿಜನ್ ದ್ರವರೂಪದಲ್ಲಿ ಶೇಖರಣೆಯಾಗುತ್ತದೆ.

ಒಟ್ಟು ಉತ್ಪಾದನೆಯ ಪ್ರತಿಶತ ಐದರಷ್ಟು ಮಾತ್ರ ಸಿಲಿಂಡರ್‌ಗಳಲ್ಲಿ ರವಾನೆಯಾಗುತ್ತದೆ. ರಸ್ತೆಯ ಸ್ಥಿತಿಯನ್ನಅವಲಂಬಿಸಿ ಸದ್ಯಕ್ಕೆ ವೈದ್ಯಕೀಯ ಬಳಕೆಗೆ ಅವಶ್ಯಕತೆಯಿರುವ ಸ್ಥಳಕ್ಕೆ ಸರಬರಾಜು ಪೂರೈಸಿ ಹಿಂತಿರುಗಲು ಕನಿಷ್ಠ ಏಳುದಿನ ಬೇಕು. ಕೈಗಾರಿಕೆಯಲ್ಲಿ ಬಳಸುವ ಆಮ್ಲಜನಕದ ಶುದ್ಧತೆ ಶೇಕಡಾ 99.5 ರಷ್ಟಿದ್ದರೆ, ವೈದ್ಯಕೀಯ ಉದ್ದೇಶಗಳಿಗೆ ಬಳಸುವ ಆಮ್ಲಜನಕದ ಶುದ್ಧತೆ ತುಸು ಕಡಿಮೆ (ಶೇ.93%).

ಸಾಗಾಣಿಕೆಗೆ ಬಳಸಲ್ಪಡುವ ಒಂದು ಟ್ಯಾಂಕರ್‌ನ ಬೆಲೆಯೇ ಸುಮಾರು 50 ಲಕ್ಷವಾದರೆ, ಒಂದು ಸಿಲಿಂಡರ್‌ನ ಬೆಲೆ ೧೦,೦೦೦. (ಸಿಲಿಂಡರ್ ಒಳಗಿನ ಆಮ್ಲಜನಕದ ಬೆಲೆ ಕೇವಲ 300 ರು.ಗಳು). ಬಂಡವಾಳದ ಖರ್ಚು ಹೆಚ್ಚಿರುವುದರಿಂದ, ಅವಶ್ಯಕತೆ ಯಿದ್ದಷ್ಟೇ ಆಮ್ಲಜನಕವನ್ನು ತಯಾರಿಸಲಾಗುತ್ತದೆ. ಅಂದ ಹಾಗೆ, 495ಆಕ್ಸಿಜನ್ ಕಾನ್ಸನ್ಟ್ರೇಟರ್ಸ್, 140 ವೆಂಟಿಲೇಟರ್ಸ್‌ ಗಳನ್ನೊಳಗೊಂಡ ಒಂಭತ್ತು ಕಂಟೇನರ್‌ಗಳು ಇಂದಷ್ಟೆ ಬ್ರಿಟಿಷ್ ಸರಕಾರದ ಕೊಡುಗೆಯಾಗಿ ಭಾರತವನ್ನು ತಲುಪುತ್ತಿವೆ.

ಇಷ್ಟೂ ವರ್ಷ ಮೋದಿ ವಿದೇಶಗಳಲ್ಲಿ ನೆಟ್ಟ ಸದ್ಭಾವನೆಯ ಸಸಿಗಳು ಹೆಮ್ಮರವಾಗಿ ಬೆಳೆದು ಭಾರತದ ಇಂದಿನ ಆಪತ್ಕಾಲದಲ್ಲಿ ಯತೇಚ್ಛವಾಗಿ ಆಮ್ಲಜನಕವನ್ನು ಹೊರಸೂಸಲಾರಂಭಿಸಿವೆ. ಜನಸೇವೆ ಮುಖ್ಯವೋ ಅಥವಾ ಪರಿಸ್ಥಿತಿಯನ್ನು ಸ್ವಂತ ಲಾಭಕ್ಕಾಗಿ ಬಳಸಿಕೊಳ್ಳುವುದೋ ಎಂಬ ದ್ವಂದ್ವವನ್ನು ಬಗೆಹರಿಸಿಕೊಳ್ಳುವ ಯತ್ನದಲ್ಲಿ ಕೆಲವು ರಾಜ್ಯಗಳ ನಾಯಕರು ಮೋದಿಯ ತಲೆಯ ಮೇಲೆ ಗೂಬೆ ಕೂಡಿಸುತ್ತಿದ್ದಾರೆ.