Thursday, 12th December 2024

ಗೋರಿಗಳ ಸಂತೆಯಲ್ಲಿ ವಿಳಾಸವಿಲ್ಲದವರೆಲ್ಲ ದೇವರಿಗೆ ಗೊತ್ತು

ಅಲೆಮಾರಿ ಡೈರಿ

ಸಂತೋಷಕುಮಾರ ಮೆಹೆಂದಳೆ

mehandale100@gmail.com

ನೋಡು ಸಂಸಾರ ಸಾಯಲಿ, ಕೆಲವರಿಗೆ ಮೀಸೆನೂ ಬಲಿತಿರಲಿಲ್ಲ. ಅವರೆಲ್ಲ ಮಿಡತೆ ಗಳಂತೆ ಇಲ್ಲಿ ಸತ್ತುಹೋದರು. ಹೆಣಕ್ಕೆ ದನಿ ಇದ್ದರೆ ಇಲ್ಲಿಯವರೆಗೂ
ರೋಧನ ಕೇಳಿಸುತ್ತಿತ್ತು..’ ಎನ್ನುತ್ತಿದ್ದಳು ಆಕೆ. ನಾನು ಸಾಲು ಸಾಲು ಗೋರಿಗಳನ್ನು ನೋಡುತ್ತಾ ಯಾವ ಕಡೆ ಹೋಗಲಿ ಎಂದು ಪ್ರತೀ ಗೋರಿಯ ಮೇಲಿದ್ದ ಹೆಸರಿನ ಬೋರ್ಡು ನೋಡುತ್ತ ನಿಂತಿದ್ದೆ. ಆಗ ಕಂಡಿದ್ದೇ ಆ ವಿಚಿತ್ರ ಬೋರ್ಡುಗಳು. ‘ಹೆಸರು ದೇವರಿಗೆ ಗೊತ್ತು..’

ಬಹುಶಃ ಇದು ಮಣಿಪುರದ ಇತಿಹಾಸದ ಅತ್ಯಂತ ಯಾತನಾದಾಯಕ ಮತ್ತು ಕರಾಳ ಅಧ್ಯಾಯ ಎಂದರೂ ತಪ್ಪಿಲ್ಲ. ಕಾರಣ ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿ ಇಲ್ಲಿನ ಜನರನ್ನು ಮತ್ತು ಮಣಿಪುರವನ್ನು ಆಕ್ರಮಿಸಿದ್ದ ಜಪಾನಿಯರನ್ನು ಹಿಮ್ಮೆಟಿಸಲು, ರಂಗೂನ್ ಕಡೆಯ ದಾಳಿಯನ್ನು ಸಮರ್ಥವಾಗಿ ಎದುರಿ ಸಲು ನಡೆಸಿದ ಸಮಯದಲ್ಲಿ ಅವರಿದ್ದರು. ಭಾರತದ ಒಂದು ಆಜ್ಞೆ ಅವರನ್ನು ರಣಭಯಂಕರ ಚಳಿಗಾಲದಲ್ಲಿ ಮೇಲ್ಪರ್ವತದ ತುದಿಗಳಲ್ಲಿ ಟೆಂಟು ಹಾಕುವಂತೆ ಮಾಡಲಾಗಿತ್ತು. ಆಗ ಅವರ ಬದುಕಿನ್ನು ಆರಂಭವಾಗಿರಲೇ ಇಲ್ಲ.

ನೋಡು ಸ್ಯಾಮ.. ಇವರಲ್ಲಿ ಅರ್ಧಕ್ಕಿಂತ ಕಮ್ಮಿ ಜನರಿಗೆ ಇದು ಎಂಥಾ ನೌಕರಿ ಅಥವಾ ಸೇವೆ ಎಂದೇ ಗೊತ್ತಿರಲಿಲ್ಲ. ಯುದ್ಧದ ಒಂದು ಅಂದಾಜಿರುತ್ತದಾದರೂ ನೇತೃತ್ವವೇ ಇಲ್ಲದೆ ಕೊನೆ ಕೊನೆಯಲ್ಲಿ ಬಡಿದಾಡುವುದಿದೆಯಲ್ಲ ಅದೆಲ್ಲ  ಎಂಥಾ ದುರಂತ ಗೊತ್ತಾ..? ಎಷ್ಟೊ ಜನಕ್ಕೆ ಆಗಷ್ಟೆ ಮದುವೆ ಆಗಿದ್ದರೆ ಉಳಿದವರಲ್ಲಿ ಅರ್ಧದಷ್ಟು ಜನರಿಗೆ ಇನ್ನು ಜೀವನ ಆರಂಭದ ಮೊದಲ ವರ್ಷ ಅದು. ಒಟ್ಟಾರೆ ಇವರೆಲ್ಲರ ಬದುಕೂ ಇನ್ನೇನು ಅರಳುವ ಹಂತದಲ್ಲಿತ್ತು. ಆಗಲೇ ಮುಗಿದು ಹೋಗಿದ್ದು ಇತಿಹಾಸದ ದುರಂತ’ ಎಂದರೆ ಸಣ್ಣ ಶಬ್ದವಾಗಲಾರದೆ..?’ ಎಂದವಳು ಸಂಚಾನ್ಬಿ.

ಇಂಫಾಲದ ಖೈರಂ ಬಝಾರ್‌ನಲ್ಲಿ ಬಿದಿರಿನ ಕಳಿಲೆಯ ಸಿಪ್ಪೆಯಂಥ ಪದರನ್ನು, ಕಾಪು ಮಾಡಿ ಅದಕ್ಕಿಷ್ಟು ಮೆಣಸಿನ ಹುಡಿ ಹರಡಿ ಬಿಸಿ ಮಾಡಿಕೊಡುವ, ಹಸಿ ಕಳಿಲೆ ಮಾರಾಟ ಮಾಡುವ ಅಂಗಡಿ ಇಟ್ಟುಕೊಂಡಿರುವ ಅಪ್ಪಟ ಮಣಿಪುರಿ ರುಂಗಾಮೈ ಜನಾಂಗದ ಸಂಚಾನ್ಬಿ’ ಮುಖ ಸಣ್ಣಗೆ ಮಾಡಿ ವಿವರಿಸುತ್ತಿದ್ದರೆ ಎದುರಿಗಿದ್ದ ಸಾಲುಸಾಲು ಗೋರಿಗಳನ್ನೇ ಮೂಕವಾಗಿ ನಾನು ನೋಡುತ್ತಾ ನಿಂತಿದ್ದೆ. ಒಬ್ಬಿಬ್ಬರಲ್ಲ ಅನಾಮತ್ತು ಹದಿನೆಂಟು ಸಾವಿರ ಚಿಲ್ರೆ ಹೆಣಗಳು ಬಿದ್ದಿದ್ದವು
ಆ ನೆಲದ ಮೇಲೆ. ಎರಡೂ ಕಡೆಯವರದ್ದು ಸೇರಿದರೆ ಸುಮಾರು ತೊಂಭತ್ತು ಸಾವಿರಕ್ಕೊ ಮಿಗಿಲು ಸೈನಿಕರು ಮಕಾಡೆ ಮಲಗಿದ್ದರು ಆ ಎತ್ತರದಲ್ಲಿ. ಯಾವ ಆತ್ಮ ತಾನೆ ನಿರುಮ್ಮಳವಾಗಿ ಮಲಗೀತು..? ಮಣಿಪುರ ರಾಜ್ಯ ಪ್ರವಾಸದ ಕೊನೆಯ ವಾರದಲ್ಲಿ ಮೊದಲೇ ಯೋಜಿಸಿದ್ದಂತೆ ಸ್ಥಳೀಯವಾಗಿ ಉಳಿದಿದ್ದ ಒಂದೆರಡು ಪ್ರದೇಶಗಳನ್ನು ನೋಡುವ ಉದ್ದೇಶದಿಂದ, ಆಟೊ ತೆಗೆದುಕೊಂಡು ಬರುವಂತೆ ಸಂಚಾನ್ಬಿಗೆ ಹೇಳಿದ್ದೆ.

ಆಕೆ ಬರುವ ಭರವಸೆ ಏನೂ ಇರಲಿಲ್ಲ. ಕಾರಣ ಪೀಕ್ ಅವರ್ಸ್ ಬಿಸಿನೆಸ್ಸ್ ಬಿಟ್ಟು ಬಂದಾಳೆಂದು ನನಗೆ ಖಾತರಿ ಇರಲಿಲ್ಲ. ಅಂಗಡಿ ಮುಚ್ಚಿ ದಿನದ ವ್ಯವಹಾರ ಲುಕ್ಸಾನು ಮಾಡಿಕೊಂಡು ಯಾಕಾದರೂ ಬಂದಾಳು ನನ್ನ ಜೊತೆ ತಿರುಗೋಕೆ..? ಆದರೆ ನನ್ನ ಅನಿಸಿಕೆ ಸುಳ್ಳು ಮಾಡಿ ಬೆಳಿಗ್ಗೆ ಎಂಟಕ್ಕೆ ಇಂಫಾಲದ ಹೃದಯ
ಭಾಗವಾದ ಗಾಂಽ ಪಾರ್ಕ್‌ಗೆ ಬಂದು ರಿಕ್ಷಾ ನಿಲ್ಲಿಸಿದ್ದಳು. ಇದ್ದುದರಲ್ಲಿ ಓದಿಕೊಂಡ, ಕೊಂಚ ಇತಿಹಾಸ ತಿಳಿದುಕೊಂಡ ಈಗೀಗ ಮಣಿಪುರದಗುತ್ತಿದ್ದ ಸ್ಥಿತ್ಯಂತರದ ಮೇಲೆ ತುಂಬಾ ಪಕ್ವವಾದ ಮಾತುಗಳನ್ನಾಡುತ್ತಿದ್ದಳು ಸಂಚಾನ್ಬಿ. ರಾಜಕೀಯ ದಿಂದ ತಮ್ಮ ಮಹಿಳಾ ಪ್ರಧಾನ ವ್ಯವಸ್ಥೆಯ ಒಳಹೊರಗನ್ನು ಅತ್ಯಂತ ವ್ಯವಸ್ಥಿತ ವಾಗಿ ತೆರೆದಿಟ್ಟವಳು. ಹೆಂಗಸರ ಸಾಮ್ರಾಜ್ಯ ಎಂದು ಗಂಡಸರ ಸೋಮಾರಿತನಕ್ಕೆ ಬಯ್ಯುತ್ತಿದ್ದಳು.

ಸೋಮಾರಿತನ ಇರಲಿಕ್ಕಿಲ್ಲ ಮಕ್ಕಳಾಗ್ತಿವೆಯಲ್ಲ ದಂಡಿಯಾಗಿ ಎಂದಿದ್ದೆ. ಅದಕ್ಕೇನು ದೊಡ್ಡ ಶ್ರಮ ಹಾಕ್ಬೇಕಾ..? ಎಂದಿದ್ದಳು ಕೋಪದಿಂದ. ನಾನು ಕಿಸಕ್ಕನೆ ನಕ್ಕಿದ್ದೆ. ನಗರದಿಂದ ಆರೆಂಟು ಕಿ.ಮೀ. ದೂರದ ವಾರ್ ಸಿಮಿಟ್ರಿಗೆ ಬಂದು ನಿಂತಿದ್ದೆವು. ಎದುರಿನಲ್ಲಿ ಕೆಸರು ಕೆಸರಾಗಿದ್ದ, ನಿರ್ವಹಣೆಯನ್ನೂ ಕಾಣದ ಅಕ್ಕಪಕ್ಕದ ಕಾಲೇಜು ಹುಡ್ಗಹುಡ್ಗಿಯರಿಗೆ ಕೂತುಕೊಳ್ಳುವ ಪಾರ್ಕ್‌ನಂತಾಗಿರುವ, ಅಲ್ಲಲ್ಲಿ ಗಾಂಜಾ, ತಂಬಾಕಿನ ಸ್ಥಳೀಯ ‘ಝುರ್ಕಿ’ ಎಳೆಯುವ ಪಡ್ಡೆಗಳಿಗೆ ಅಡ್ಡೆಯಾಗಿರುವ ಈ ಗೋರಿಗಳ ತಾಣ ಅನಾಮತ್ತಾಗಿ ಎರಡೂವರೆ ಸಾವಿರ ಸೈನಿಕರ ಆತ್ಮಗಳಿಗೆ ನೆಲೆಯಾಗಿದೆ.

ಸುಮಾರು ಸಾವಿರದಷ್ಟು ಸೈನಿಕರ ಆತ್ಮಗಳು ಈಗಲೂ ಇಲ್ಲಿ ಮಗ್ಗಲು ಬದಲಿಸುತ್ತಿರುತ್ತವೆ. ಆಗೀಗ ಸ್ಥಳೀಯ ಆಡಳಿತ ಇವುಗಳ ಮೇಲೆ ನೀರು ಹನಿಸಿ
ತಂಪಾಗಿಸೋ ಪ್ರಯತ್ನ ಮಾಡುತ್ತಿರುತ್ತದೆ. ಇವರಾರಿಗೂ ಯುದ್ಧದ ಬಿಸಿ ಎಂದರೇನೆಂದೇ ಗೊತ್ತಿರಲಿಲ್ಲ. ಅಷ್ಟಕ್ಕೂ ಅವರಿಗೆ ಇದು ಮೊದಲ ಯುದ್ಧವೇ ಆಗಿತ್ತು. 1939ರಿಂದ 1945ರವರೆಗಿನ ವರ್ಷ ಇದೆಯಲ್ಲ. ಭಾರತ ಯಾವ ಮೂಲೆಗೂ ಇಲ್ಲಿನ ವರ್ತಮಾನವೇ ಹೋಗುತ್ತಿರಲಿಲ್ಲ. ವಾರಕ್ಕೊಮ್ಮೆ ಆ ಕಡೆಯಿಂದ ಕುದುರೆ ಮೇಲೆ ವರ್ತಮಾನ ಬಂದರೆ ಅದೇ ದೊಡ್ಡದಾಗಿತ್ತು. ಸರಿಯಾದ ಅನುಭವ ಮತ್ತು ಯುದ್ಧಭೂಮಿ ಕಂಡೇ ಇರದವರನ್ನು ಇಲ್ಲಿ ಯುದ್ಧಕ್ಕೆ ಇಳಿಸಿಬಿಟ್ಟರು ನೋಡು. ಹುಳುಗಳಂತೆ ಹುಡುಗರು ಸತ್ತು ಹೋಗುತ್ತಿದ್ದರು.

ಎಡೆಯೂ ಬಾಂಬಿಂಗು. ಜಪಾನಿಗರು ಮೊದಲೇ ರಂಗೂನ್ ಕಡೆಯಲ್ಲಿ ಆಯಕಟ್ಟಿನ ಜಾಗದಲ್ಲಿ ಬಂದು ಕೂತಿದ್ದರಲ್ಲ. ನಮ್ಮ ಹುಡುಗರಿಗೆ ಏನು ಮಾಡುವು ದೆನ್ನುವುದಕ್ಕೆ ನಾಯಕತ್ವವೇ ಉಳಿದಿರಲಿಲ್ಲ. ಮಾಹಿತಿಯ ಕೊರತೆ. ಸಂವಹನವೇ ಇರಲಿಲ್ಲ. ಒಟ್ರಾಶಿ ಗುಂಡು ಇದ್ದಷ್ಟು ದಿನ ಹಾರಿಸಿ ಬದುಕಿಕೊಂಡರು. ಆಮೇಲೆ..? ಇಲ್ಲಿಂದ ಹಿಡಿದು ಮಾವೋ ತನಕ.

ಆಚೆಕಡೆಯಲ್ಲಿ ಚುರ್ಚಾಂಡುರ್ ಸಹಿತ ಇತ್ತಲಿನ ಬಿಷ್ಣುಪುರ್ ಎಲ್ಲಾ ಪೂರ್ತಿ ತೋಪೆದ್ದು ಹೋಗಿತ್ತು. ಸಂಪೂರ್ಣ ಮಣಿಪುರ ಮಣ್ಣಾಗಿತ್ತು. ಇದನ್ನು ರಕ್ಷಿಸಲು ಹೋರಾಡಿದ ಹುಡುಗರು ಮಿಡತೆಗಳಂತೆ ಸತ್ತು ಹೋದರು. ಬದುಕು ಅ ಮುರುಟಿ ಹೋಗಿತ್ತು. ಯಾವ ಸರಕಾರ ಯಾವ ಅಧಿಕಾರಿಯೂ ಅದನ್ನು ಮರಳಿಸಲು ಆಗಲ್ಲ. ಆದರೆ ಅವರಿಗೊಂದು ಗೌರವಯುತ ಸಲಾಂ ಆದರೂ ಬೇಡವಾ..?’ ಗೋರಿಗಳ ಮಧ್ಯೆ ನಿರ್ಮಿಸಿದ್ದ ಸ್ಮಾರಕವೊಂದರ ಕಟ್ಟೆಯ ತುದಿಗೆ ಕೂತು ಆಕೆ ಮಾತಾಡುತ್ತಿದ್ದರೆ ನಾನು ಮೌನವಾಗಿ ಆಗಿನ ಸ್ಥಿತಿಗತಿಯನ್ನು ನೆನೆಯುತ್ತಿದ್ದೆ.

ಇತ್ತಿಚೆಗೆ ಇಂಫಾಲ ಬೆರಗಿಗೆ, ಹೊಸ ಬದುಕಿಗೆ ಕಣ್ಣು ಬಿಡುತ್ತಿದೆ. ಇನ್ನು ಏಳು ದಶಕಗಳ ಹಿಂದೆ ಅದಿನ್ನೆಂಗೆ ಇದ್ದೀತು..? ಈಗಲೂ ಅಲ್ಲಲ್ಲಿ ಕುಟುಂಬ ಸಮೇತ ತಂಬಾಕಿನ ಘಾಟಿಗೆ ಒಡ್ಡಿಕೊಳ್ಳುವ ಜನಾಂಗ ಆಗ ಅದಿನ್ನೆಂಗೆ ಇದ್ದೀತು..? ಇಲ್ಲಿಗೆ ತಲುಪಲು ಸರಾಸರಿ ವೇಗ, ಗಂಟೆಗೆ ಕೇವಲ 25-30ರ ಆಸುಪಾಸಿ ನಲ್ಲಿರುವಾಗ ಆ ಕಾಲದಲ್ಲಿ ಅದೂ ಯುದ್ಧದ ಸಂದರ್ಭದಲ್ಲಿ ಅದಿನ್ಯಾವ ನಾಯಕ ಈ ಸ್ಥಳವನ್ನು ಸಂಭಾಳಿಸಿಯಾನು..? ಆಗೆಲ್ಲ ಹುತಾತ್ಮರಾದವರ ನೆನಪಿಗೆ ಅಂದು ನೀರಿನ ಮಡುವನ್ನು ನಿರ್ಮಿಸಿ ಅದರ ಸುತ್ತಲೂ ಮತ್ತು ಗೋರಿಗಳ ಸುತ್ತಲೂ ಹೂವಿನ, ಹಸಿರಿನ ಪೊದೆಗಳನ್ನು ಹೂಡಿ ಸಾಲುಸಾಲಾಗಿ ಅವರವರ ಹೆಸರು ಪದವಿ ಮತ್ತು ಅವರ ಹುಟ್ಟಿದ ದಿನಾಂಕ ಮತ್ತು ತೀರಿಕೊಂಡಾಗಿನ ವಯಸ್ಸನ್ನು ನಮೂದಿಸಿದ ಯುದ್ಧ ಸ್ಮಾರಕ ಒಮ್ಮೆ ಕರಳು ಹಿಂಡುತ್ತದೆ.

ಸುತ್ತಲೂ ಜಾಗ ಅತಿಕ್ರಮಣವಾಗದಂತೆ ಆ ವಾರವನ್ನು ನಿರ್ಮಿಸಿ ಮಧ್ಯದಲ್ಲಿ ಸ್ಮರಣ ಫಲಕ ಅಳವಡಿಸಲಾಗಿದ್ದರೂ ಮೂಲ ಸೌಕರ್ಯವೇನೂ ಇಲ್ಲವೇ ಇಲ್ಲ. ನಿರ್ವಹಣೆ ಇಲ್ಲದೆ, ಈಗಿನ ಯುವ ಸಮುದಾಯಕ್ಕೆ ಆ ತ್ಯಾಗ ಶ್ರಮದ ಅರಿವಿಲ್ಲದೆ ಅರ್ಧಗಂಟೆಯಲ್ಲಿ ಯಾತ್ರಿ ಹೊರಬರುತಾನೆ. ಇತಿಹಾಸ ಗೊತ್ತಿಲ್ಲದಿದ್ದರೆ ಅದಕ್ಕೂ ಮೊದಲೇ. ಯಾರ ಮಾಹಿತಿ ಲಭ್ಯವಿಲ್ಲವೋ ಅಂಥಾ ಬೇನಾಮಿ ಶವಗಳಿಗೆ ಫಲಕಗಳ ಮೇಲೆ, ದಿನಾಂಕದ ಜಾಗದಲ್ಲಿ ದೇವರಿಗೆ ಗೊತ್ತು ಎನ್ನುವ ಅಕ್ಷರಗಳನ್ನು ಓದುವಾಗ ಜಗತ್ತಿಗಲ್ಲ, ಯಾವ ಕಾಲಕ್ಕೂ ಯುದ್ಧ ಯಾಕೆ ಬೇಕು ಎನ್ನಿಸುವ ಅಗೋಚರ ಅರಿವಾಗದ ಪ್ರಶ್ನೆ ಮೂಡುತ್ತದೆ.

ಇತ್ತೀಚಿಗೆ ಸ್ಥಳೀಯ ಪ್ರಾಧಿಕಾರ ಇವುಗಳನ್ನೆ ತನ್ನ ಸುಪರ್ದಿಗೆ ತೆಗೆದುಕೊಂಡು ನಿರ್ವಹಣೆ ಮಾಡುತ್ತಿದೆಯಾದರೂ ಅಂತಾರಾಷ್ಟ್ರೀಯ ಮಟ್ಟಕ್ಕೆ ಪ್ರಚಾರ
ಮಾಡುವಾಗ ಇದರ ವ್ಯಾಪ್ತಿ ದೊಡ್ಡದಾಗಬೇಕಿತ್ತು. ಸುತ್ತಲೂ ಸ್ಥಳೀಯ ನಿವಾಸಿಗಳು ಆವರಿಸಿಕೊಂಡಿದ್ದು ಬರುವ ಪ್ರವಾಸಿಗರಿಗೆ ಕಿರಿಕಿರಿ ಆಗುತ್ತಿದೆ. ಅವರ ಹಿಡಿತದಿಂದಾಗಿ ವೀರರ ಸಮಾಽ ಅಷ್ಟಾಗಿ ಬರುವ ಹೊರ ರಾಜ್ಯದ ಪ್ರವಾಸಿಗರಿಗೆ ಅಪ್ಯಾಯ ಎನ್ನಿಸುವುದಿಲ್ಲ. ಹೊರಬಂದು ಸಂಚಾನ್ಬಿಯೊಂದಿಗೆ ಅಷ್ಟು ದೂರದ ರಸ್ತೆ ಬದಿಗಿದ್ದ ಚಹದಂಗಡಿ ತಲುಪಿ ಕೂತು, ನಾನು ನೀರಿನ ಬಾಟಲ್ಲು ತಡಕಾಡುತ್ತಿದ್ದರೆ, ಆಕೆ ನಗುತ್ತ ಹಂಡೆಯಂಥ ಮಡಿಕೆಯಲ್ಲಿ ತುಂಬಿಸಿಟ್ಟಿದ್ದ ನೀರಿನಲ್ಲಿ ಜಗ್ ಅದ್ದಿ ತೆಗೆದು ಬಾಯಿ ತುಂಬಾ ತುಂಬಿಕೊಂಡು ಕುಡಿಯತೊಡಗಿದಳು. ಅಭ್ಯಾಸ ಬಲ.

ಆಟೊ ನಾನು ಓಡಿಸಲಾ ಎಂದೆ. ಅಬ್ಬಾ ಅಂತೂ ಯೋಚನೆ ಬಂತಲ್ಲ, ಮತ್ತೆ ಆಗಿನಿಂದ ಮಹಾರಾಜನಂತೆ ಹಿಂದೆ ಕೂತು ಬರ್ತಿದಿಯಲ್ಲ ಬಾ ಮುಂದಕ್ಕೆ. ಡ್ರೈವಿಂಗ್ ಲೈಸನ್ಸು ಇದೆಯಾ..?’ ಎನ್ನುವಷ್ಟರಲ್ಲಿ ಚಲಿಸಲಾರಂಭಿಸಿದ್ದ ಆಟೊದಲ್ಲಿ ಹಾಗೆ ನುಸುಳಿ ಮುಂದೆ ಕೂತು ಸ್ಟೇರಿಂಗ್‌ಗೆ ಕೈ ಇಟ್ಟಿದ್ದೆ. ರಾ.ಹೆ. ದಾಟಿ ಇಂಫಾಲ ಕೆಂಚುಪ್ ರಸ್ತೆಯಲ್ಲಿ ಅಷ್ಟು ದೂರ ಓಡಿಸಿಕೊಂಡು ಬಲತಿರುವು ತೆಗೆದುಕೊಂಡು ಸುಮಾರು ಐದಾರು ಕಿ.ಮೀ. ಕ್ರಮಿಸಿದರೆ ಎದುರಿಗಿನ ಬಿಲ್ಡಿಂಗ್ ಪಕ್ಕ ನಿಲ್ಲಿಸು ಎಂದಿದ್ದಳು. ಏನಿದು ಎಂದರೆ ಇಮಾ ಮಾರ್ಕೇಟ್ ಎಂದಳು. ಅಂದರೆ ಬರೀ ಹೆಂಗಸರೇ ಮಾರಾಟಗಾರರು. ಕೊಳ್ಳುವವರು..? ಎಂದು ಹುಬ್ಬೇರಿಸಿದೆ. ಗಂಡಸರು ಆ ಕೆಲಸನಾದರೂ ಮಾಡಲಿ ಬಿಡು ಎಂದಳು. ಅದೆಲ್ಲ ಇನ್ಯಾವತ್ತಾದರೂ ಬರೆದೇನು.