ವ್ಯಕ್ತಿತ್ವ ವಿಕಸನ
ಪರಿಣಿತ ರವಿ
parinithabravi@gmail.com
ಜಗತ್ತಿನ ಸಕಲ ಜೀವಿಗಳಲ್ಲಿ ಮನುಷ್ಯ ಭಿನ್ನವಾಗಿರುವುದು ಅವನ ಮಾತನಾಡುವ ಶಕ್ತಿಯಿಂದ. ಹುಟ್ಟಿ ಆರೇ ತಿಂಗಳಿಗೆ ಮಾತು ಕಲಿಯುವ ಮನುಷ್ಯ ಎಲ್ಲಿ, ಹೇಗೆ, ಏನು ಮಾತನಾಡಬೇಕೆಂದು ಸಾಯುವವರೆಗೆ ಕಲಿಯಲಾರ ಅನ್ನುವುದು ವಿಪರ್ಯಾಸ.
ಮಾತು ಮನುಷ್ಯ-ಮನುಷ್ಯನೊಳಗಿನ ಸಂಬಂಧವನ್ನು ಗಟ್ಟಿ ಮಾಡುತ್ತದೆ. ಎರಡು ವ್ಯಕ್ತಿಗಳ ಮನಸ್ಸುಗಳನ್ನು ಬೆಸೆಯುವ ಸೇತುವೆಯಾಗುತ್ತದೆ. ಮನೆ-ಮನಗಳ ಬಾಂಧವ್ಯವನ್ನು ಹೊಸೆಯುತ್ತದೆ. ಒಬ್ಬ ವ್ಯಕ್ತಿಯ ವ್ಯಕ್ತಿತ್ವದ ಕೈಗನ್ನಡಿಯಾಗುತ್ತದೆ. ಹಾಗೆಯೇ ಮಾತು ದುರಂತಕ್ಕೂ, ಅವಘಡಕ್ಕೂ ಕಾರಣವಾಗುತ್ತದೆ. ಮಾತು ಮನುಷ್ಯನಲ್ಲಿ ಎಲ್ಲ ವಿಕಾರಗಳನ್ನು ಹುಟ್ಟುಹಾಕುತ್ತದೆ. ಹಿತವಾಗಿ ಮಿತವಾಗಿ ಮಾತನಾಡುವುದು ಒಂದು ಕಲೆ ಹೇಗೆಯೋ, ಹಾಗೆಯೇ ಉತ್ತಮವಾಗಿ ಮಾತನಾಡುವುದು ಒಂದು ಸಂಪತ್ತು ಕೂಡ ಹೌದು. ಬಹುಶಃ ಮಾತಿನ ಕುರಿತು ಇರುವಷ್ಟು ಗಾದೆಗಳು, ಕಥೆಗಳು, ಸುಭಾಷಿತಗಳು, ವಚನಗಳು ಬೇರಾವುದರ ಬಗ್ಗೆಯೂ ಇರಲಾರದು.
ಮಾತು ಹೃದಯವನ್ನು ಅರಳಿಸುವಂತಿರಬೇಕೇ ಹೊರತು ಕೆರಳಿಸುವಂತಿರಬಾರದಂತೆ. ‘ಮಾತು ಆಡಿದರೆ ಹೋಯ್ತು ಮುತ್ತು ಒಡೆದರೆ ಹೋಯ್ತು’, ‘ಮಾತು ಬೆಳ್ಳಿ ಮೌನ ಬಂಗಾರ’, ‘ಮಾತು ಮನೆ ಕೆಡಿಸಿತು ತೂತು ಒಲೆ ಕೆಡಿಸಿತು’, ‘ಮಾತೇ ಮುತ್ತು ಮಾತೇ ಮೃತ್ಯು’, ‘ಮಾತು ಬಲ್ಲವನಿಗೆ ಜಗಳವಿಲ್ಲ ಊಟ ಬಲ್ಲವನಿಗೆ ರೋಗವಿಲ್ಲ’, ‘ಮಾತು ಬಲ್ಲವ ಮಾಣಿಕ್ಯ ತಂದ ಮಾತರಿಯದವ ಜಗಳ ತಂದ’, ‘ನುಡಿದಂತೆ ನಡೆ ಇದೆ ಜನ್ಮ ಕಡೆ’ ‘ಬಾಯಿಬಿಟ್ಟರೆ ಬಣ್ಣಗೇಡು’, ‘ಮಾತು ಕಡಿಮೆ ಹೆಚ್ಚು ದುಡಿಮೆ’ ಹೀಗೆ ಮಾತಿನ ಅದೆಷ್ಟೋ ನುಡಿಮುತ್ತುಗಳಿವೆ.
ಇನ್ನು ಮಾತಿನ ಮಹತ್ವದ ಕುರಿತು ಸರ್ವಜ್ಞನ ವಚನಗಳಂತೂ ನಮ್ಮನ್ನು ಬೆರಗುಗೊಳಿಸುತ್ತವೆ. ‘ಹೊತ್ತಿಗೊದಗಿದೆ ಮಾತು ಸತ್ತವನು ಎದ್ದಂತೆ| ಹೊತ್ತಾಗಿ ನುಡಿದ ಮಾತು ಕೈಜಾರಿದಾ| ಮುತ್ತಿನಂತಿಹುದು ಸರ್ವಜ್ಞ||’ – ಸಂದರ್ಭೋ ಚಿತವಾದ ಮಾತಿನ ಮೌಲ್ಯವನ್ನು ಹೇಳುತ್ತದೆ. ‘ಮಾತಿನಿಂನಗೆನುಡಿಯು| ಮಾತಿನಿಂ ಹಗೆಕೊಲೆಯು| ಮಾತಿನಿಂಸರ್ವಸಂಪದವು ಲೋಕಕ್ಕೆ| ಮಾತೇ ಮಾಣಿಕ್ಯವು ಸರ್ವಜ್ಞ||’ – ಮಾತೇ ಸರ್ವಸ್ವ ಎಂದು ತಿಳಿಸುತ್ತದೆ. ‘ಮಾತು ಬತಂಗೆ| ಮಾತೊಂದು ಮಾಣಿಕವು| ಮಾತ ತಾನರಿಯದ ಅಧಮಗೆ| ಮಾಣಿಕವು ತೂತು ಬಿದ್ದಂತೆ ಸರ್ವಜ್ಞ||’ – ಈ ವಚನ ಮಾತಿನ ಪ್ರಾಮುಖ್ಯ ಎತ್ತಿ ತೋರಿಸುತ್ತದೆ. ‘ಮಾತು ಮಾಣಿಕ ಮುತ್ತು| ಮಾತೆ ತಾ ಸದನವು| ಮಾತಾಡಿದಂತೆ ನಡೆದಾತ ಜಗವನ್ನು| ಕೂತಲ್ಲಿ ಆಳ್ವ ಸರ್ವಜ್ಞ||’ – ಮಾತಿನಂತೆ ನಡೆಯಬೇಕೆಂಬುದನ್ನು ಸಾರುತ್ತದೆ.
‘ಮಾತಿಂಗೆ ಮಾತುಗಳು| ಓತು ಸಾಸಿರವುಂಟು| ಮಾತಾಡಿದಂತೆ ನಡೆದರಾ ಕೈಲಾಸ| ಕಾತನೇ ಒಡೆಯ ಸರ್ವಜ್ಞ||’ – ನುಡಿದಂತೆ ನಡೆಯುವುದರ ಅಗತ್ಯವನ್ನು ಸೊಗಸಾಗಿ ಮನಗಾಣಿಸುತ್ತದೆ. ‘ಮಾತು ಮಾತಿಗೆ ತಕ್ಕ| ಮಾತು ಕೋಟಿಗಳುಂಟು| ಮಾತಾಡಿ ಮನಕೆ ಮುನಿಸಕ್ಕು ಮಾತಿನಲಿ|ಸೋತವನೆ ಜಾಣ ಸರ್ವಜ್ಞ||’ – ಮಾತಿನಿಂದ ಮನಸ್ಸಿಗೆ ನೋವಾಗುವುದಾದರೆ ಸೋಲುವುದೇ ಉಚಿತವಂತೆ.
‘ಮಾತು ಬತಂಗೆ| ಯಾತವದು ಸುರಿದಂತೆ| ಮಾತಾಡಲರಿಯದಾತಂಗೆ ಬರಿ ಯಾತ|ನೇತಾಡಿದಂತೆ ಸರ್ವಜ್ಞ||’ – ಸವಿಯಾದ ಮಾತಿನ ಲಾಭವನ್ನು ತೋರಿಸುತ್ತದೆ. ‘ಕಾದ ಕಬ್ಬುನವು ತಾ| ಹೊಯ್ದೊಡನೆ ಕೂಡುವದು| ಹೋದಲ್ಲಿ ಮಾತು ಮರೆದರಾ ಕಬ್ಬುನವು| ಕಾದಾರಿದಂತೆ ಸರ್ವಜ್ಞ||’ – ಎಲ್ಲಿ, ಹೇಗೆ ಮಾತಾಡಬೇಕೆಂದು ಎಚ್ಚರಿಸುತ್ತದೆ.
‘ರಸಿಕನಾಡಿದ ಮಾತು| ಶಶಿಯುದಿಸಿ ಬಂದಂತೆ| ರಸಿಕನಲ್ಲದನ ಬರಿಮಾತು ಕಿವಿಯೊಳ್ಕೂರ್ದಸಿಯು ಬಡಿದಂತೆ ಸರ್ವಜ್ಞ||’ – ಮಾತಿನಲ್ಲಿ ರಸಿಕತೆ ಬೇಕೆಂದು ತೋರಿಸುತ್ತದೆ. ‘ಮಾತಿನಾ ಮಾಲೆಯೂ ತೂತಾದ ಮಡಕೆಯೂ| ಹಾತೆಯ ಹುಲ್ಲ ಸರವೆ ಇವು ನಾಲ್ಕು| ಏತಕ್ಕೂ ಬೇಡ ಸರ್ವಜ್ಞ||’ – ಅನಗತ್ಯ ಮಾತಿನ ಅಪಾಯವನ್ನು ಪ್ರಸ್ತುತ ಪಡಿಸುತ್ತದೆ. ‘ಉದ್ದರುಟು ಮಾತಾಡಿ ಇದ್ದುದನು ಹೋಗಾಡೆ| ಉದ್ದನ ಮರದ ತುದಿಗೇರಿ ಕೈಜಾರಿ| ಬಿದ್ದು ಸತ್ತಂತೆ
ಸರ್ವಜ್ಞ||’ – ತಿರುಳಿಲ್ಲದ ಮಾತಿನ ಗತಿಯೇನೆಂದು ತಿಳಿಹೇಳುತ್ತದೆ.
’ಬನೆಂಬುವ ಮಾತು ಎಲ್ಲವೂ ಹುಸಿ ಕಾಣೋ| ಬಲ್ಲರೆ ಬನೆನಬೇಡ ಸುಮ್ಮನಿರ| ಬಲ್ಲವನೆ ಬಲ್ಲ ಸರ್ವಜ್ಞ||’ – ಎಲ್ಲ ಬನೆಂದು ಜಂಭ ಸಲ್ಲ ಎಂಬ ಬುದ್ದಿಮಾತು ಅಡಕವಾಗಿದೆ. ಮಾತಿನ ಪ್ರಾಶಸ್ತ್ಯ ಸಾರುವ ಶ್ಲೋಕಗಳ ಕುರಿತು ಕುತೂಹಲದಿಂದ ಹುಡುಕಿದಾಗ ಬೇರೆ ಬೇರೆ ಮೂಲಗಳಿಂದ ಅನೇಕ
ಸಂಸ್ಕೃತ ಸುಭಾಷಿತಗಳ ದರ್ಶನವಾಯಿತು. ‘ಅನ್ಯಾ ವಾಚಾವಿಮುಂಚತ ಅಮೃತಸ್ಯ ಏಷ ಸೇತುಃ’ ಬೇರೆಯವರ ವೃಥಾ ಮಾತುಗಳನ್ನು ಉಪೇಕ್ಷಿಸು ವುದೇ ಅಮೃತತ್ವ ಹೊಂದಲು ಸೇತುವೆ ಎಂದು ಹೇಳುತ್ತದೆ ಈ ವೇದನುಡಿ. ‘ಕ್ಷಿಯಂತೇಖಿಲ ಭೂಷಣಾನಿ ಸತತಂ ವಾಗ್ಭೂಷಣಂ ಭೂಷಣಮ’ ಎಲ್ಲ
ಆಭರಣಗಳಿಗಿಂತಲೂ ವ್ಯಕ್ತಿಗೆ ಮಾತಿನ ಅಲಂಕಾರವೇ ಭೂಷಣವಂತೆ.
‘ನಾದಾತವ್ಯಂ ನ ದಾತವ್ಯಂ ಕರ್ತವ್ಯಂ ನ ಚ ಕಿಂಚನ| ಸಾಂತ್ವಮೇಕಂ ಪ್ರಯೋಕ್ತವ್ಯಂ ಸರ್ವಂ ತಸ್ಯ ಚಶೇ ಜಗತ್|| ಏನನ್ನೂ ಕೊಡಬೇಕಾಗಿಯೂ, ಪಡೆಯಬೇಕಾಗಿಯೂ, ಮಾಡಬೇಕಾಗಿಯೂ ಇಲ್ಲ. ಬದಲಾಗಿ ಒಳ್ಳೆಯ ಮಾತನಾಡಿದರೆ ಅಷ್ಟೇ ಸಾಕು ಜಗತ್ತೇ ಅವರ ವಶವಾಗುತ್ತದೆ ಎಂದು ಹೇಳುತ್ತದೆ ಈ ಸುಭಾಷಿತ. ‘ಘೃತಾತ್ ಸ್ವರ್ಧಿಯೋ ಮಧುನಶ್ಚ ವೋಚತಃ’ ತುಪ್ಪಕ್ಕಿಂತ ಮಧುರವಾಗಿ ಜೇನಿಗಿಂತ ಸಿಹಿಯಾಗಿ ಮಾತಾಡು ಎಂದು ಹೇಳುತ್ತದೆ ಋಗ್ವೇದದ ಈ ಸಾಲು. ‘ಪ್ರಿಯವಾಕ್ಯ ಪ್ರದಾನೇನ ಸರ್ವೇ ತುಷ್ಯಂತಿ ಜಂತವಃ ತಸ್ಮಾತ್ತದೇವ ವಕ್ತವ್ಯಂ ವಚನೇ ಕಾ ದರಿದ್ರತಾ’ ಅಂದರೆ ನಾವಾಡುವ ಮಾತುಗಳು ಪ್ರಿಯವಾಗಿ, ಸ್ಪಷ್ಟವಾಗಿದ್ದು ಇತರರಿಗೆ ಸಂತೋಷವನ್ನು ಕೊಡಬೇಕು.
ಅದು ಬೇರೆಯವರಿಗೆ ನೋವನ್ನುಂಟು ಮಾಡಬಾರದು ಅನ್ನುವುದು ಇದರರ್ಥ. ‘ಸತ್ಯಾಯ ಮಿತ ಭಾಷಿಣಃ’ ಎಂದು ಹೇಳುತ್ತಾನೆ ಕಾಳಿದಾಸ. ‘ಸತ್ಯಂ ಬ್ರೂಯಾತ್ ಪ್ರಿಯಾಂ ಬ್ರೂಯಾತ್ ನ ಸತ್ಯಂ ಪ್ರಿಯಮ’, ಸತ್ಯವನ್ನು ನುಡಿಯಬೇಕು ಆದರೆ ಅದು ಅಪ್ರಿಯವಾಗದಂತಿರಬೇಕು ಎಂದು ಮಹಾಭಾರತ ದಲ್ಲಿ ಯುಧಿಷ್ಠಿರ ಹೇಳುತ್ತಾನೆ. ಶ್ರೀಕೃಷ್ಣ ಪರಮಾತ್ಮ ಭಗವದ್ಗೀತೆಯಲ್ಲಿ ಹೇಳಿದ ‘ಅಮೃತವಾಣಿ’ ನಿತ್ಯದ ಬದುಕಿಗೆ ದಾರಿದೀಪ. ಅಂದು ಸ್ವಾಮಿ ವಿವೇಕಾನಂದರು ಅಮೆರಿಕದ ಸರ್ವಧರ್ಮ ಸಮ್ಮೇಳನದಲ್ಲಿ ಹಿಂದು ಧರ್ಮವನ್ನು ಜಗತ್ತಿನಾದ್ಯಂತ ಎತ್ತಿ ಹಿಡಿದದ್ದು ಇದೇ ಮಾತಿನ ಶಕ್ತಿಯಿಂದಾಗಿ. ‘ಜಗತ್ತನ್ನೇ ಗೆಲ್ಲಬೇಕೆಂಬ ಇಚ್ಛೆ ನಿನಗಿದ್ದರೆ ಬೇರೆಯವರ ಬಗ್ಗೆ ಕೆಟ್ಟದಾಗಿ ಮಾತಾಡದೇ ಇರುವುದೊಂದೇ ಅದಕ್ಕಿರುವ ಮಾರ್ಗ’ ಎಂದು ಚಾಣಕ್ಯ ಹೇಳುತ್ತಾನೆ. ‘ಮೆನ್ ಆಫ್ – ವರ್ಡ್ಸ್ ಆರ್ ದ ಬೆಸ್ಟ್ ಮೆನ್’ ಎಂದು ಹೇಳುತ್ತಾನೆ ಶೇಕ್ಸ್ಪಿಯರ್.
ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರು ‘ಪ್ರತಿಯೊಬ್ಬರು ಗುರಿ ತಲುಪಬೇಕಾದರೆ ಪರಿಣಾಮಕಾರಿ ಮಾತುಗಾರನಾಗಿರಬೇಕು. ನಾವು ಮಾತುಗಾರಿಕೆ ಯಲ್ಲಿ ವಿಫಲರಾದರೆ ಸಾಧನೆಯ ಹಾದಿಯು ನಮ್ಮಿಂದ ಬಲು ದೂರ ಸಾಗುತ್ತದೆ’ ಎಂದಿದ್ದಾರೆ. ಕೆಲವೊಮ್ಮೆ ನಮ್ಮ ಮಾತು ಇನ್ನೊಬ್ಬರ ಹೃದಯಕ್ಕೆ ನೋವು ಕೊಟ್ಟು ಅನಾಹುತಕ್ಕೆ ಕಾರಣವಾಗುವುದೂ ಇದೆ. ಇಂದ್ರಪ್ರಸ್ಥದಲ್ಲಿ ರಾಜಸೂಯ ಯಾಗದ ಸಂದರ್ಭದಲ್ಲಿ ಜಾರಿಬಿದ್ದ ದುರ್ಯೋಧನನನ್ನು ಕಂಡು ದ್ರೌಪದಿ ಗೇಲಿ ಮಾಡುತ್ತ ‘ಅಂಧಸ್ಯ ಪುತ್ರ ಅಂಧಃ’ ‘ಕುರುಡನ ಮಗ ಕುರುಡ’ ಅಂದಳಂತೆ. ಇದರಿಂದ ಮಹಾಭಾರತವೇ ನಡೆದು ಹೋಗುತ್ತದೆ. ಇತ್ತೀಚೆಗೆ ಕೇರಳದ ಮಹಿಳಾ ಆಯೋಗದ ಅಧ್ಯಕ್ಷೆ ಜೋಸೈನ್, ಕೌಟುಂಬಿಕ ಶೋಷಣೆಯ ಬಗ್ಗೆ ದೂರು ನೀಡಲೆಂದು ಕರೆ ಮಾಡಿದ ಮಹಿಳೆಯ ಜತೆ ನಿಷ್ಠುರವಾಗಿ ಮಾತಾಡಿದರೆಂಬ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿ ರಾಜಿನಾಮೆ ಕೊಟ್ಟರು.
ಒಂದು ಮಾತು ಕಟ್ಟಲೂ-ಕೆಡವಲೂ ಬಹುದು, ನಿರ್ಮಾಣವನ್ನೂ-ನಿರ್ನಾಮವನ್ನೂ ಮಾಡಬಹುದು, ಯಶವೂ- ಪಾಶವೂ ಆಗಬಹುದು. ಮಂಥರೆಯ ಮಾತುಗಳು ಕೈಕೆಯಿ ಯನ್ನು ಹೇಗೆ ಪ್ರಚೋದಿಸಿತು ಎಂದು ರಾಮಾಯಣದಲ್ಲಿ ಕಂಡಿದ್ದೇವೆ. ದ್ರೌಪದಿಯ ಸ್ವಯಂವರ ಮುಗಿಸಿ ಬಂದ
ಪಾಂಡವರಿಗೆ ಕುಂತಿ ‘ಐವರು ಸಮನಾಗಿ ಹಂಚಿಕೊಳ್ಳಿ’ ಎಂದದ್ದು, ಮಾಯಾಜಿಂಕೆಯ ರೂಪದಲ್ಲಿದ್ದ ಮಾರೀಚ ‘ಹಾ ಸೀತಾ…ಹಾ ಲಕ್ಷ್ಮಣ…! ಎಂದಾಗ ದಿಕ್ಕು ತಪ್ಪಿದ ಸೀತೆ, ‘ಅಶ್ವತ್ಥಾಮ ಹತಃ’ ಅಂದ ಯುದಿಷ್ಠಿರನ ಮಾತಿನಿಂದ ಶಸ್ತ್ರ ತ್ಯಜಿಸಿದ ದ್ರೋಣ… ಅಷ್ಟೇಕೆ? ಪ್ರಸ್ತುತ ಸಮಾಜದಲ್ಲಿಯೂ ಕೆಲವು ದುಷ್ಟಶಕ್ತಿಗಳು ದೇಶದ್ರೋಹದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ತಮ್ಮ ಸುಳ್ಳು ಮಾತುಗಳಿಂದ ಜನರ ದಿಕ್ಕು ತಪ್ಪಿಸಲು ಹರಸಾಹಸ ಪಡುತ್ತಿರು ವುದೂ ನಾವು ಕಾಣುತ್ತಲೇ ಇದ್ದೇವೆ.
ಶೇಕ್ಸ್ಪಿಯರ್ನ ನಾಟಕಗಳಲ್ಲಿ ಸ್ವಗತ(oಟ್ಝಜ್ಝಿಟಟ್ಠಿqs)ಗಳ ಮೂಲಕ ಪಾತ್ರಗಳು ಅದ್ಭುತವಾದ, ಚಿಂತನೆಯ ಒರೆಗೆ ಹಚ್ಚುವಂತಹ ಮಾತುಗಳನ್ನಾ ಡುತ್ತವೆ. ಉದಾಹರಣೆಗೆ ಹ್ಯಾಮ್ಲೆಟ್ ಹೇಳುವಂತಹ ‘ಟು ಬಿ ಆರ್ ನಾಟ್ ಟು ಬಿ ದಾಟ್ ಈಸ್ ದ ಕ್ವೆಷ್ಚನ್’, ಮ್ಯಾಕ್ಬೆತ್ ಹೇಳುವ ‘ಲೈಫ್ ಈಸ್ ಬಟ್ ಅ ವಾಕಿಂಗ್ ಶಾಡೋ, ಅ ಟೇಲ್ ಟೋಲ್ಡ್ ಬೈ ಆನ್ ಇಡಿಯೇಟ್ ಫುಲ್ ಆಫ್ ಸೌಂಡ್ ಆಂಡ್ ಫರಿ ಸಿಗ್ನಿಫಿಯಿಂಗ್ ನಥ್ತಿಂಗ್’ ಮೊದಲಾದವುಗಳು ಬಾಳಿ ಗೊಂದು ಸಿದ್ಧಾಂತವನ್ನೇ ಸೃಷ್ಟಿಸಿಬಿಡುತ್ತವೆ. ಇನ್ನು ನಿzಯಲ್ಲಿ ಮಾತನಾಡುವವರಂತೂ ಆಡಬಾರದ್ದು ಆಡಿ ಎಡವಟ್ಟು ಮಾಡಿಕೊಳ್ಳುವುದೇ ಹೆಚ್ಚು. ಕಾಮಿಕ್ ರಿಲೀಸ್ ಸೀನ್ಗಳಲ್ಲಿಯೂ ಗಾಢವಾದ ಬದು ಕಿನ ತತ್ತ್ವಗಳನ್ನು ಪಾತ್ರಗಳು ತಮ್ಮ ಮಾತಿನಲ್ಲಿ ಹೇಳುತ್ತವೆ.
ಕಡ್ಡಿ ಮುರಿದಂತೆ ಮಾತನಾಡುವವರು, ಮುಖಕ್ಕೆ ಹೊಡೆದಂತೆ ಮಾತನಾಡುವವರು, ಮಾತೊಂದು ತುಂಡೆರಡು ಅನ್ನುವಂತೆ ಮಾತನಾಡುವವರು, ಮುಖಕ್ಕೆ ತಕ್ಕಂತೆ ಮಾತನಾಡುವವರು, ಕಿವಿ ತೂತಾಗುವಂತೆ ಮಾತನಾಡುವವರು, ತಲೆ ಕೆರೆಯುವಂತೆ ಮಾತನಾಡುವವರು ಹೀಗೆ ಭಿನ್ನವಿಭಿನ್ನ
ರೀತಿಯ ಮಾತುಗಾರರನ್ನು ನಾವು ಕಾಣುತ್ತೇವೆ. ಹಾಗೆಯೇ ಕೆಚ್ಚು ನುಡಿ, ಹುಚ್ಚು ನುಡಿ, ಮೆಚ್ಚು ನುಡಿ, ಕಚ್ಚು ನುಡಿ, ಚುಚ್ಚು ನುಡಿ, ಮಚ್ಚು ನುಡಿ, ಪೆಚ್ಚು ನುಡಿ, ಸ್ವಚ್ಛ ನುಡಿ, ತುಚ್ಛ ನುಡಿ ಹೀಗೆ ಅನೇಕ ವಿಧದ ಮಾತಿನ ಶೈಲಿಯನ್ನು ಕಾಣಬಹುದು. ಏನೇ ಆದರೂ ಎದುರಿಗಿರುವವನ ಮನಸ್ಸನ್ನು ಕೆರಳಿಸದಂತೆ ಹಿತವಾಗಿ ಮಾತನಾಡುವುದು ಒಂದು ಅದ್ಭುತವಾದ ಕಲೆ ಇಲ್ಲವಾದರೆ ಅದು ಹೇಗೆ ಪರಿಣಾಮ ಬೀರುತ್ತದೆ.
ಕೆಲವು ವೃತ್ತಿಗಳಿಗೆ ಮಾತೇ ಬಂಡವಾಳ. ಹಾಗೆ ನೋಡಿದರೆ ಎಲ್ಲ ವೃತ್ತಿಗಳಲ್ಲಿಯೂ ಪ್ರಬುದ್ಧತೆಯ ಮಾತು ಗಮನ ಸೆಳೆದೇ ಸೆಳೆಯುತ್ತದೆ. ಕಲಾವಿದರು, ವಕೀಲರು, ವ್ಯಾಪಾರಿಗಳು ಮೊದಲಾದವರಿಗೆ ಮಾತೊಂದು ವರದಾನವಿದ್ದಂತೆ. ಬೀರಬಲ, ತೆನಾಲಿರಾಮನ ಚಾತುರ್ಯದ ಮಾತುಗಳು ಇಂದಿಗೂ ಪ್ರಸ್ತುತ ಅನಿಸುತ್ತವೆ. ನಮ್ಮ ಮಾತನ್ನು ಕೇಳುವವರು ನಮಗಿಂತ ಬುದ್ಧಿವಂತರೆಂಬ ಪ್ರe ಸದಾ ನಮ್ಮಲ್ಲಿ ಇರಬೇಕಂತೆ. ನಮ್ಮಲ್ಲಿ ಎಲ್ಲರೂ ಚೆನ್ನಾಗಿ ಮಾತನಾಡಬೇಕೆಂ ದು ನಾವು ಬಯಸುವುದಾದರೆ, ನಮ್ಮಿಂದಲೂ ಎಲ್ಲರೂ ಅದನ್ನೇ ಬಯಸುತ್ತಾರೆ ಅನ್ನುವ ತಿಳಿವಳಿಕೆ ನಮ್ಮನ್ನು ವಿನೀತರನ್ನಾಗಿಸು ತ್ತದೆ. ಬೇಕಾಬಿಟ್ಟಿ ನಾಲಗೆಯನ್ನು ಹರಿಯಬಿಟ್ಟರೆ ಅದರಿಂದ ದುರಂತ ಕಟ್ಟಿಟ್ಟ ಬುತ್ತಿ. ಆದರೆ, ಇವತ್ತಿನ ಸೋಷಿಯಲ್ ಮೀಡಿಯಾ ಯುಗದಲ್ಲಿ, ವಾಟ್ಸಪ್, -ಸ್ಬುಕ್ ಯುನಿವರ್ಸಿಟಿಗಳಲ್ಲಿ ಅನಿಯಂತ್ರಿತವಾಗಿ ನಾಲಗೆಯನ್ನು ಹರಿಯಬಿಡುವವರೇ ಹೆಚ್ಚು.
ಸಮಾಜದ ಎಲ್ಲ ವಿಚಾರಗಳೂ, ರಾಜಕೀಯ ಆಗುಹೋಗುಗಳೂ ಕೆಟ್ಟ ಮಾತಿನ ರೂಪ ಪಡೆದು ಕೆಡುಕನ್ನೇ ಉಂಟುಮಾಡುತ್ತವೆ. ಎಲ್ಲರೂ ದಾರ್ಶನಿ
ಕರೂ, ತತ್ವeನಿಗಳೂ ಆಗಿದ್ದು ಪ್ರಪಂಚದ ಸಕಲ ಘಟನೆಗಳಿಗೂ ಅಭಿಪ್ರಾಯ ವ್ಯಕ್ತಪಡಿಸಲು ಹಾತೊರೆಯುತ್ತಾರೆ. ಹಾಗಾಗಿ ಒಂದೇ ಒಂದು ಸಣ್ಣ ಮಾತು ಸಾಕು ಎಂತಹ ಆತ್ಮೀಯ ಸಂಬಂಧವಾದರೂ ಕೆಡಲು, ಎಲ್ಲವನ್ನೂ ಬುಡಮೇಲು ಮಾಡಲು. ಆದಷ್ಟು ನಾಲಗೆಯ ಮೇಲೆ ನಿಗಾ ಇಟ್ಟು ಸೃಷ್ಟಿಯ ವೈಚಿತ್ರ್ಯದ ಮುಂದೆ ಏನೇನೂ ಅಲ್ಲದ ಮನುಷ್ಯ ತನ್ನ ತುಟಿಗಳನ್ನು ಹೊಲಿಯಬೇಕೆಂದು ಡಿವಿಜಿಯವರು ಹೇಳಿರುವುದನ್ನು ನೆನಪಿಸುವುದು
ಸೂಕ್ತವೆನಿಸುತ್ತದೆ. ಇಳೆಯಿಂದ ಮೊಳಕೆಯೊಗೆವಂದು ತಮಟೆಗಳಿಲ್ಲ| ಫಲ ಮಾಗುವಂದು ತುತ್ತೂರಿ ದನಿಯಿಲ್ಲ|| ಬೆಳಕೀವ ಸೂರ್ಯಚಂದ್ರ ರದೊಂದು ಸದ್ದಿಲ್ಲ| ಹೊಲಿ ನಿನ್ನ ತುಟಿಗಳನು- ಮಂಕುತಿಮ್ಮ||