Friday, 15th November 2024

ದೇಶದ ಅಸ್ಮಿತೆಗೆ ಮುಳುವಾದ ಟೂಲ್‌ಕಿಟ್‌ ಕಿತಾಪತಿ

ಅಶ್ವತ್ಥಕಟ್ಟೆ

ರಂಜಿತ್‌ ಎಚ್‌.ಅಶ್ವತ್ಥ

ದೇಶದಲ್ಲಿ ಕರೋನಾ ಬಳಿಕ ಕಳೆದ ಮೂರು ತಿಂಗಳಿನಿಂದ ಭಾರಿ ಸದ್ದು ಮಾಡುತ್ತಿದ್ದ ಏಕೈಕ ವಿಷಯವೆಂದರೆ, ರೈತರ ಪ್ರತಿಭಟನೆ. ಕೇಂದ್ರ ಸರಕಾರ ರೂಪಿಸಿರುವ ಮೂರು ಕೃಷಿ ಕಾಯಿದೆಗಳನ್ನು ವಿರೋಧಿಸಿ ಪಂಜಾಬ್ ಹಾಗೂ ಬಿಹಾರದ
ಭಾಗದ ಕೆಲ ರೈತರು ಪ್ರತಿಭಟನೆ ನಡೆಸುತ್ತಿದ್ದರು.

ಇದನ್ನು ತಾರ್ತಿಕ ಅಂತ್ಯಕ್ಕೆ ತಗೆದುಕೊಂಡು ಹೋಗುವ ಲೆಕ್ಕಾಚಾರ ದಲ್ಲಿ ಸಂಘಟನೆಗಳಿದ್ದವು. ಆದರೆ ಇಡೀ ಪ್ರಕರಣವನ್ನು
ಪಕ್ಕಕ್ಕೆ ಸರಿಸಿ, ಕೆಲದಿನಗಳಿಂದ ಹೆಚ್ಚು ಚರ್ಚೆಯಾಗುತ್ತಿರುವ ವಿಷಯವೆಂದರೆ ‘ಟೂಲ್‌ಕಿಟ್’ ಪ್ರಕರಣ. ಹೌದು, ರೈತರು ಪ್ರತಿಭಟನೆಯ ಭಾಗವಾಗಿ ಜನವರಿ 26ರಂದು ಮಾಡಿದ ಟ್ರ್ಯಾಕ್ಟರ್ ರ‍್ಯಾಲಿ ಹಿಂಸಾಚಾರ ಸ್ವರೂಪ ಪಡೆದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದ ಕೆಲವೇ ದಿನದಲ್ಲಿ ಈ ‘ಟೂಲ್‌ಕಿಟ್’ ಗದ್ದಲ ಶುರುವಾಯಿತು.

ಆರಂಭದಲ್ಲಿ ಕೆಲ ಟೆಕ್ ಸ್ಯಾವಿಗಳನ್ನು ಹೊರತುಪಡಿಸಿದರೆ, ಅನೇಕರಿಗೆ ಟೂಲ್‌ಕಿಟ್‌ನ ತಲೆಬುಡ ಅರ್ಥವಾಗಿರಲಿಲ್ಲ. ಈಗಲೂ ಅನೇಕರಿಗೆ ಅದರ ಪೂರ್ಣ ಮಾಹಿತಿಯಿಲ್ಲ ಎನ್ನುವುದು ಬೇರೆ ಮಾತು. ಆರಂಭದಲ್ಲಿ ಈ ಟೂಲ್‌ಕಿಟ್ ಗಲಾಟೆ ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿತ್ತು. ಮೊದಲಿಗೆ ಗ್ರೇಟಾ ಥನ್ ಬರ್ಗ್ ಭಾರತದ ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ
ಮೊದಲು ಟ್ವೀಟ್ ಮಾಡಿ, ‘ಭಾರತದ ರೈತರೊಂದಿಗೆ ನಾವಿದ್ದೇವೆ’ ಎಂದು ಟ್ವೀಟ್ ಮಾಡಿದಳು.

ಸ್ವೀಡನ್ ಮೂಲದ ಈಕೆ 2019ರಲ್ಲಿ ವಿಶ್ವಸಂಸ್ಥೆಯಲ್ಲಿ, ಪರಿಸರವನ್ನು ಕಾಪಿಟ್ಟುಕೊಳ್ಳುವ ನಿಟ್ಟಿನಲ್ಲಿ ನಾವೇನು ಮಾಡಬೇಕು?
ಅಭಿವೃದ್ಧಿಯ ಹೆಸರಲ್ಲಿ ಪರಿಸರ ನಾಶ ಮಾಡಿದರೆ, ಮುಂದಿನ ಪೀಳಿಗೆ ಏನು ಮಾಡಬೇಕು ಎಂದು ವಿಶ್ವನಾಯಕರನ್ನು ಪ್ರಶ್ನಿಸಿ, how dare you ಎಂದಿದ್ದಳು. ಆಕೆ ಮಾಡಿದ ನಾಲ್ಕೈದು ನಿಮಿಷದ ಭಾಷಣೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿತ್ತು. ಅದಾದ ಬಳಿಕ ಪರಿಸರ ಸಂರಕ್ಷಣೆ, ಹೋರಾಟಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಳ್ಳುತ್ತಿದ್ದಳು. ಆದರೆ ಇದ್ದಕ್ಕಿಂತ ಭಾರತದ ರೈತ ಹೋರಾಟಕ್ಕೆ ಸಂಬಂಧಿಸಿದಂತೆ ಮಾತನಾಡುತ್ತಿದ್ದಂತೆ ಪುನಃ ಚರ್ಚೆಯ ಕೇಂದ್ರವಾದಳು.

ಈಕೆ ಟ್ವೀಟ್ ಮಾಡುತ್ತಿದ್ದಂತೆ ಪರ-ವಿರೋಧ ಚರ್ಚೆಗಳು ಆರಂಭಗೊಂಡವು. ವಿವಿಧ ದೇಶಗಳ ಪ್ರಮುಖರು, ದೇಶದ ಪ್ರತಿಭಟನೆಯಲ್ಲಿ ಮೂಗುತೂರಿಸುವ ಪ್ರಯತ್ನವನ್ನು ಮಾಡಿದರು. ಭಾರತದಲ್ಲಿ ರೈತರ ಪ್ರತಿಭಟನೆ ಬಿಟ್ಟು, ಗ್ರೇಟಾ ಮಾಡಿದ್ದು, ಸರಿಯೋ ತಪ್ಪೋ ಎಂದು ವಿಮರ್ಶೆ ಮಾಡಲು ಶುರು ಮಾಡಿದರು. ಖ್ಯಾತ ನಾಮರೆಲ್ಲ, ಭಾರತದ ವಿಷಯಕ್ಕೆ ಬೇರೆಯವರು ಬರುವ ಅಗತ್ಯವಿಲ್ಲ. ನಮ್ಮ ದೇಶದ ಸಮಸ್ಯೆಯನ್ನು ನಾವು ಬಗೆಹರಿಸಿಕೊಳ್ಳುತ್ತೇವೆ.

ನಿಮ್ಮ ಸಲಹೆ, ಸೂಚನೆ, ಮಧ್ಯಸ್ಥಿಕೆಯ ಅಗತ್ಯವಿಲ್ಲ ಎನ್ನುವ ಸ್ಪಷ್ಟ ಮಾತುಗಳನ್ನು ಆಡಿದರು. ಆದರೆ ಈ ಗಲಾಟೆ ಮಾತ್ರ
ಇತ್ಯರ್ಥವಾಗಲಿಲ್ಲ. ಅತ್ತ ರೈತರು ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದ್ದರೆ, ಇತ್ತ ಇನ್ನೊಂದು ಈ ಗ್ರೇಟಾಳ ಟ್ವೀಟ್ ಅನ್ನು
ಊರುಗೋಲಾಗಿಟ್ಟುಕೊಂಡು, ಸರಕಾರದ ವಿರುದ್ಧ ತಮ್ಮ ಟ್ವೀಟ್ ಸಮರವನ್ನು ಶುರು ಮಾಡಿದ್ದರು. ಆದರೆ ಇಲ್ಲಿ ಗಮನಿಸ ಬೇಕಾಗಿರುವುದು, ಗ್ರೇಟಾ ಎನ್ನುವ ಯುವತಿ ಯಾರು? ಆಕೆಗೂ, ಭಾರತದಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೂ ಏನು ಸಂಬಂಧ? ಅದೆಲ್ಲ ಹೋಗಲಿ, ಇಲ್ಲಿನ ರೈತರ ಸಮಸ್ಯೆ ಬಗ್ಗೆ ಆಕೆಗೆ ತಿಳಿದಿದೆಯೇ? ಅಥವಾ ಈ ತಿದ್ದುಪಡಿಗಳನ್ನು ಸರಕಾರ ತರಲು ಮುಂದಾಗಿರುವದಾದರೂ ಏಕೆ ಎನ್ನುವ ಬಗ್ಗೆ ಮಾಹಿತಿ ಇದೆಯೇ ಎನ್ನುವುದನ್ನು ನೋಡಿದರೆ, ಬಹುಪಾಲು ಆಕೆಗೆ ಇದ್ಯಾವುದು ತಿಳಿದಿರಲಿಕ್ಕಿಲ್ಲ.

ಇನ್ನು ಗ್ರೇಟಾ ರೀತಿಯೇ ಕೆನಡಾ ಮೂಲಕ ಗಾಯಕಿ ರಿಹಾನಾ, ಮೀಯಾ ಕಲೀ- ಸೇರಿದಂತೆ ಅನೇಕರು ಭಾರತದ ಪ್ರತಿಭಟನೆ ಯನ್ನು ತುಂಬಾ ಗಂಭೀರವಾಗಿ ಪರಿಗಣಿಸಿದವರಂತೆ ಟ್ವೀಟ್ ಮಾಡಿದ್ದೇಕೆ ಎನ್ನುವುದನ್ನು ಪತ್ತೆ ಹಚ್ಚುವುದಕ್ಕೂ ಹಲವು ದಿನಗಳೇ ಬೇಕಾಯಿತು. ಭಾರತದಲ್ಲಿ ನಡೆಯುತ್ತಿರುವ ಈ ರೈತರಿಗೂ, ಅದೆಲ್ಲೋ ದೂರದ ಸ್ವೀಡನ್‌ನಲ್ಲಿರುವ ಗ್ರೇಟಾಗೂ ಏನು ಸಂಬಂಧ. ಈ ರೀತಿ ಧಿಗ್ಗನೆ ಎದ್ದು ಟ್ವೀಟ್ ಮಾಡಿದ್ದಾದರೂ ಏಕೆ ಎನ್ನುವುದನ್ನು ಅನೇಕರು ತಲೆಕೆಡಿಸಿಕೊಂಡರು. ಆದರೆ ಈ
ಹಂತದಲ್ಲಿ ತಿಳಿದದ್ದು, ಈ ರೀತಿ ಟ್ವೀಟ್ ಮಾಡುವುದಕ್ಕೆ ಖಲಿಸ್ತಾನದ ಸಂಘಟನೆ ಆ ಒಂದು ಟ್ವಿಟ್‌ಗೆ ಬರೋಬ್ಬರಿ 2.5
ಮಿಲಿಯನ್ ಡಾಲರ್ (ಭಾರತದ ರುಪಾಯಿ ಮೌಲ್ಯದಲ್ಲಿ ಹೇಳುವುದಾದರೆ 18,11,26,250 ರು.) ಕೊಟ್ಟಿತ್ತಂತೆ.

ನಾವಿಲ್ಲಿ ಗಮನಿಸಬೇಕಿರುವುದು, ರೈತರ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸಬೇಕು ಎನ್ನುವ ಏಕೈಕ ಕಾರಣಕ್ಕೆ, ಈ ರೀತಿ ದುಡ್ಡು ಕೊಟ್ಟು ದೇಶದ ಮರ್ಯಾದೆಯನ್ನು ಹಾಳು ಮಾಡುವ ಅಗತ್ಯವಿತ್ತೇ? ದೇಶ ಎಂದರೆ ಒಂದಿಲ್ಲೊಂದು ಸಮಸ್ಯೆಯಿದ್ದೇ ಇರುತ್ತದೆ. ಅದು ದೇಶದ ಆಂತರಿಕ ವಿಷಯ. ಅದನ್ನು ದೇಶದೊಳಗೆ ಬಗೆಹರಿಸಿಕೊಳ್ಳಬೇಕು ಎನ್ನುವುದನ್ನು ಬಿಟ್ಟು ವಿಶ್ವ ಮಟ್ಟದಲ್ಲಿ ಈ ವಿಷಯವನ್ನು ಇಷ್ಟು ದೊಡ್ಡದಾಗಿ ಮಾಡುವ ಅಗತ್ಯವಾದರೂ ಏನಿತ್ತು? ಇನ್ನು ಈ ಪೇಯ್ಡ್ ಟ್ವೀಟ್ ಬೆಳಕಿಗೆ ಬಂದದ್ದು, ಗ್ರೇಟಾಳ ಎಡವಟ್ಟಿನಿಂದ. ಈ ಹೋರಾಟವನ್ನು ಯಾವ ರೀತಿ ದೊಡ್ಡ ಮಟ್ಟಕ್ಕೆ ತಗೆದುಕೊಂಡು ಹೋಗಬೇಕು? ಯಾವ ಹ್ಯಾಷ್ ಟ್ಯಾಗ್ ಬಳಸಿ ಯಾವ ಟ್ವೀಟ್ ಮಾಡಬೇಕು ಎನ್ನುವ ವಿಷಯ ಹಾಗೂ ಗಣರಾಜ್ಯೋತ್ಸವದಂದು ದೇಶದಲ್ಲಿ
ನಡೆದ ಗಲಾಟೆಯನ್ನು ಯಾವ ರೀತಿ ಅಂತಾರಾಷ್ಟ್ರೀಯ ಸುದ್ದಿ ಮಾಡಬೇಕು ಎನ್ನುವ ಸವಿಸ್ತಾರವಾದ ಡಾಕ್ಯೂಮೆಂಟ್
ಒಂದನ್ನು ಅಚಾನಕ್ ಆಗಿ ಟ್ವಿಟ್ ಮಾಡಿದ್ದಳು.

ಈ ಡ್ಯಾಕೂಮೆಂಟ್ ಇದೀಗ ಸದ್ದು ಮಾಡುತ್ತಿರುವ ’ಟೂಲ್ ಕಿಟ್’. ಟೂಲ್‌ಕಿಟ್ ಎಂದ ಕೂಡಲೇ ಅದೇನೋ ದೊಡ್ಡ ರಾಕೆಟ್
ಸೈನ್ಸ್ ಎಂದು ಅನೇಕರು ಅಂದುಕೊಂಡಿದ್ದಾರೆ. ಯಾವುದೇ ವಿಷಯವನ್ನು ಪ್ರಚಾರ ಮಾಡುವುದಕ್ಕೆ ಯಾವ ರೀತಿ ನಡೆದು ಕೊಳ್ಳಬೇಕು. ಯಾವ ರೀತಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಬೇಕು ಎನ್ನುವುದನ್ನು ಹೇಳುವುದಕ್ಕೆ ಟೂಲ್‌ಕಿಟ್ ಎನ್ನುತ್ತಾರೆ. ಪ್ರತಿಭಟನೆ ವೇಳೆ ನಾವೆಲ್ಲ ಹೇಗೆ ಪಾಂಪ್ಲೆಟ್ ಹಂಚಿ ಪ್ರಚಾರ ಮಾಡುತ್ತೇವೋ ಅದೇ ರೀತಿ ಆನ್‌ಲೈನ್ ಅಥವಾ ಸಾಮಾಜಿಕ ಜಾಲತಾಣದಲ್ಲಿ ಈ ಟೂಲ್‌ಕಿಟ್ ಎಲ್ಲರಿಗೂ ಕಳುಹಿಸಿ, ಅದರಲ್ಲಿ ಇರುವಂತೆ ಟ್ವೀಟ್ ಮಾಡುವುದು ಅಥವಾ ಅದರಲ್ಲಿರುವ ಹ್ಯಾಷ್ ಟ್ಯಾಗ್ ಬಳಸಿಕೊಂಡು ಪೋಸ್ಟ್ ಮಾಡುವುದು ಹೇಗೆ ಎನ್ನುವುದನ್ನುತಿಳಿಸುವ ಒಂದು ಸಾಧನವಷ್ಟೇ.

ಗ್ರೇಟಾ ಹಾಕಿದ ಈ ಟೂಲ್‌ಕಿಟ್ ಪೋಸ್ಟ್ ಅನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಸರಕಾರ, ಇದರ ಮೂಲ ಪತ್ತೆಗೆ ಮುಂದಾದಾಗ ಸಿಕ್ಕಿದ್ದು, ಬೆಂಗಳೂರು, ಮುಂಬೈ ನಂಟು. ಹೌದು, ಈ ಟೂಲ್‌ಕಿಟ್ ಅನ್ನು ಸಿದ್ಧಪಡಿಸಿದ್ದು ಬೆಂಗಳೂರು ಮೂಲದ ಸೋಕಾಲ್ಡ್ ಪರಿಸರ ಹೋರಾಟಗಾರ್ತಿ ದಿಶಾ ರವಿ, ಮುಂಬೈ ಮೂಲದ ವಕೀಲೆ ನಿಕಿತಾ ಹಾಗೂ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ಶಾಂತನು ಎನ್ನುವುದು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಹೆಸರನ್ನು ಹಾಳು ಮಾಡುವು ದಕ್ಕಾಗಿಯೇ ವ್ಯವಸ್ಥಿತ ಸಂಚನ್ನು ರೂಪಿಸಿದ ಆರೋಪ ದಲ್ಲಿ ದೇಶದ್ರೋಹದ ಪ್ರಕರಣವನ್ನು ಈ ಎಲ್ಲರ ವಿರುದ್ಧ ದಾಖಲಿಸಿದ್ದಾರೆ. ದೇಶದ್ರೋಹದ ಪ್ರಕರಣ ದಾಖಲಿಸಿದ್ದಕ್ಕೂ ಅನೇಕರು ವಿರೋಧಿಸಿದ್ದಾರೆ. ದಿಶಾ ಎನ್ನುವ ‘ಅಮಾಯಕ’ರ ವಿರುದ್ಧ ಕೇಂದ್ರ ಸರಕಾರ ಸೇಡು ತೀರಿಸಿಕೊಳ್ಳುತ್ತಿದೆ ಎನ್ನುವ
ವ್ಯಾಖ್ಯಾನಗಳು ಬರುತ್ತಿವೆ. ಇನ್ನು ಕೆಲವರು ಈ ರೀತಿ ಸಾಮಾಜಿಕ ಜಾಲತಾಣದಲ್ಲಿ ಸರಕಾರದ ವಿರುದ್ಧ ಮಾತನಾಡಿದ ಮಾತ್ರಕ್ಕೆ, ದೇಶದ್ರೋಹವಾಗುವುದಿಲ್ಲ ಎನ್ನುವ ಕಾನೂನು ಸಲಹೆಯನ್ನು ನೀಡುತ್ತಿದ್ದಾರೆ.

ಆದರೆ ದೇಶದ ವಿರುದ್ಧ ಸಂಚು ಅಥವಾ ದೇಶದ್ರೋಹಿ ಎನಿಸಿಕೊಳ್ಳಲು ಕೇವಲ ಅಶಾಂತಿ ಸೃಷ್ಟಿಸುವುದು ಅಥವಾ ಅದಕ್ಕೆ ಪ್ರೇರಣೆ ನೀಡುವುದು ಮಾತ್ರವಲ್ಲ. ದೇಶದ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪನಂಬಿಕೆ ಸೃಷ್ಟಿಸಿ, ಅಲ್ಲಿಂದ ತಮ್ಮ ವ್ಯವಸ್ಥಿತ ಸಂಚಿನ ಮೂಲಕ ಸರಕಾರ ಅಥವಾ ದೇಶದ ವಿರುದ್ಧ ಜನರನ್ನು ಎತ್ತಿಕಟ್ಟುವುದು ಸಹ ದೇಶದ್ರೋಹವೇ ಆಗುತ್ತದೆ.
ಇದೀಗ ದಿಶಾ ರವಿಯನ್ನು ದೆಹಲಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದು, ಮುಂದೇನಾಗುತ್ತದೆ ಎನ್ನುವುದು ಕಾನೂನು
ವ್ಯಾಪ್ತಿಯಲ್ಲಿ ಏನಾಗಬೇಕೋ ಅದು ಆಗುತ್ತದೆ.

ಅದರ ಬಗ್ಗೆ ಹೆಚ್ಚು ವಿಶ್ಲೇಷಣೆ ಮಾಡುವುದಕ್ಕಿಂತ, ಆ ರೀತಿಯ ಮನಸ್ಥಿತಿ ಹೊಂದಿರುವವರ ಬಗ್ಗೆ ಯೋಚಿಸಬೇಕಿದೆ. ದೇಶದಲ್ಲಿ ನಡೆಯುತ್ತಿರುವ ಹೋರಾಟ, ಪ್ರತಿಭಟನೆಗಳಿಗೆ ಕರೆ ನೀಡುವ ಪ್ರತಿಯೊಂದು ಸಂಘಟನೆ ಅಥವಾ ಗುಂಪುಗಳಿಗೆ, ತಮ್ಮ ನಿಲುವು ಸರಿಯಾಗಿಯೇ ಇರುತ್ತದೆ. ಇನ್ನೊಂದೆಡೆ ಆಡಳಿತದಲ್ಲಿರುವವರಿಗೂ ತಾವು ತೆಗೆದುಕೊಂಡ ನಿರ್ಧಾರಗಳು ಸರಿಯಾಗಿಯೇ ಕಾಣಿಸುತ್ತದೆ.

‘ಜನರನ್ನು ಮೆಚ್ಚಿಸೋಕೆ ಜನಾರ್ದನ’ನಿಂದಲೂ ಸಾಧ್ಯವಿಲ್ಲ ಎನ್ನುವುದು ಅದಕ್ಕೆ ಅಲ್ಲವೇ. ಆದರೆ ಮನೆಯಲ್ಲಿನ ಜಗಳವನ್ನು ಮನೆಯಲ್ಲಿಯೇ ಬಗೆಹರಿಸಿಕೊಳ್ಳದೇ, ದೊಡ್ಡ ವಿಚಾರ ಮಾಡಿ ಮನೆಯಾಚೆ ತಗೆದುಕೊಂಡು ಹೋದರೆ, ಹೊರಗಿನವರಿಗೆ ಆ ಜಗಳವನ್ನು ಇತ್ಯರ್ಥ ಪಡಿಸುವುದಕ್ಕಿಂತ ಹೆಚ್ಚಾಗಿ, ಅದನ್ನು ಮನೋರಂಜನೆಗೆ ಬಳಸಿಕೊಳ್ಳುತ್ತಾರೆ ಎನ್ನುವ ಅರಿವು ನಮಗಿರ ಬೇಕು. ಅದೇ ಮಾತು, ದೇಶದ ವಿಷಯದಲ್ಲಿಯೂ ಅನ್ವಯಿಸುತ್ತದೆ.

ರೈತರ ಹೋರಾಟ ಆರಂಭಗೊಂಡ ದಿನದಿಂದ, ಅದನ್ನು ಶಾಂತಿಯುತವಾಗಿ ಬಗೆಹರಿಸುವ ವಿಷಯಕ್ಕೆ ಸಂಬಂಧಿಸಿದಂತೆ ಹಲವು ಪ್ರಯತ್ನ ನಡೆದರೂ ಫಲ ನೀಡಲಿಲ್ಲ. ಆದರೀಗ ಆ ಗ್ರೇಟಾ ಮಾಡಿದ ಟ್ವೀಟ್, ಅದಕ್ಕೆ ರೂಪುಗೊಂಡ ಪ್ಲಾನ್‌ನಿಂದ ರೈತರಿಗೆ ಫಲ
ಸಿಕ್ಕಿದ್ದಕ್ಕಿಂತ ಹೆಚ್ಚಾಗಿ, ದೇಶದ ಮರ್ಯಾದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುಗ್ಗಿದ್ದಷ್ಟೇ ಪ್ರಯೋಜನ. ಕೇವಲ ರೈತರ ಹೋರಾಟ ಮಾತ್ರವಲ್ಲ ಇತ್ತೀಚಿನ ದಿನದಲ್ಲಿ ಈ ಸೋಷಿಯಲ್ ಮೀಡಿಯಾ ವಾರಿಯರ‍್ಸ್ ಅನೇಕ ವಿಷಯಗಳನ್ನು ತಮ್ಮ ಪ್ರತಿಷ್ಠೆಯ ರೀತಿ ಹಾಕುತ್ತಿದ್ದಾರೆ.

ಅದರಲ್ಲಿಯೂ ಅತ್ಯಂತ ಸೂಕ್ಷ್ಮ ವಿಚಾರಗಳನ್ನು ಹೇಳುವ ಮೂಲಕ ದೇಶದ ವಿರೋಧಿ ಅಥವಾ ದೇಶದ ಅತಿ ಸೂಕ್ಷ್ಮ ವಿಷಯ ಗಳನ್ನು ತಿಳಿಯಬೇಕು ಎನ್ನುವ ಉತ್ಸಾಹದಲ್ಲಿರುವವರಿಗೆ ರಹದಾರಿಯಾಗಿ ಈ ಸೋಷಿಯಲ್ ಮೀಡಿಯಾಗಳಾಗುತ್ತಿವೆ. ಅಂದ ಮಾತ್ರಕ್ಕೆ ವಿರೋಧಿಸುವವರ ಟ್ವೀಟ್ ಮಾತ್ರ ದೇಶಕ್ಕೆ ಅಪಾಯವೆಂದಲ್ಲ. ಕೆಲ ಅಂಧ ಅಭಿಮಾನಿಗಳು, ತಮ್ಮ ಪಕ್ಷ ಅಥವಾ ನಾಯಕರನ್ನು ಆಡಿ ಹೊಗಳಿ ಅಟ್ಟಕ್ಕೆ ಏರಿಸುವ ಭರದಲ್ಲಿಯೂ ರಹಸ್ಯವಾಗಿರಬೇಕಾದ ವಿಷಯ, ಬಟಾಬಯಲಾಗುತ್ತಿವೆ. ಹಾಗೆ ನೋಡಿದರೆ, ಈ ರೀತಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಲೆತಗ್ಗಿಸುವಂತಹ ಘಟನೆಗಳು ನಡೆಯುತ್ತಿರುವುದು ಅನಕ್ಷರಸ್ಥರಿಂದಲ್ಲ.

ಬದಲಿಗೆ ಶಿಕ್ಷಿತ ವರ್ಗದವರೇ ತಮ್ಮ ಪಾಂಡಿತ್ಯ ಪ್ರದರ್ಶನ ಮಾಡುವ ಉತ್ಸಾಹದಲ್ಲಿ ಅಥವಾ ತಮ್ಮ ‘ಇಸಂ’ಗಳ ಸಂಕೋಲೆಗೆ ಸಿಲುಕಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಈಗ ಪುನಃ ಗ್ರೇಟಾಳ ಟ್ವೀಟ್ ಬಗ್ಗೆ ನೋಡುವುದಾದರೆ, ಆ ಒಂದು ಟ್ವೀಟ್ ದೇಶದ ಆಂತರಿಕ
ವಿಷಯ ವಿಶ್ವಕ್ಕೆ ಪ್ರಚಾರವಾಯಿತು. ಹಲವು ರಾಷ್ಟ್ರಗಳು ಭಾರತಕ್ಕೆ ‘ಬುದ್ಧಿ’ ಹೇಳುವ ರೀತಿಯಲ್ಲಿ ನೇರ ಅಥವಾ ಪರೋಕ್ಷವಾಗಿ ಟ್ವೀಟ್ ಶುರು ಮಾಡಿದವು. ಹಲವು ಸೆಲೆಬ್ರೆಟಿಗಳು ಗ್ರೇಟಾ ಮೂಗು ತೂರಿಸುವುದು ಬೇಡ ಎಂದರೆ, ಇನ್ನು ಕೆಲವರು ಗ್ರೇಟಾ ಸಲಹೆ ಪಡೆದುಕೊಂಡೇ ಮೋದಿ ರೈತರ ಸಮಸ್ಯೆ ಬಗೆಹರಿಸಬೇಕು ಎನ್ನುವ ರೀತಿ ಆಕೆಯನ್ನು ಬೆಂಬಲಿಸಿದರು.

ಈ ರೀತಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿ, ಅವರಿಂದ ಸಲಹೆ ಪಡೆದದ್ದು ಇದೇ ಮೊದಲಲ್ಲ. ಬೆಂಗಳೂರಿನ ಕಸ ದಿಂದ ಹಿಡಿದು, ಕಾಶ್ಮೀರ ಗಡಿ ಸಮಸ್ಯೆಯ ತನಕ ವಿದೇಶಿಗರು ಮೂಗು ತೂರಿಸಿ ‘ಭಾರತೀಯರು ಹೀಗೆ ಮಾಡಿದರೆ ಸರಿ ಹೋಗು ತ್ತದೆ’ ಎನ್ನುವುದನ್ನು ಹೇಳಿದ್ದಾರೆ. ಕೆಲವರು ಹೇಳಿರುವ ಸಲಹೆಗಳು ಕೆಲವು ಉತ್ತಮವಾಗಿಯೂ ಇದೆ ಎನ್ನುವುದು ಬೇರೆ ಮಾತು. ಇನ್ನು ತೀರಾ ಇತ್ತೀಚಿಗೆ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಬಗ್ಗೆಯಾಗಲಿ, ಸಿಎಎ ಜಾರಿಗೊಳಿಸಿದಾಗ ನೆರೆ ಪಾಕಿಸ್ತಾನ, ಚೀನಾದಿಂದ ಭಾರತದ ತೀರ್ಮಾನದ ಬಗ್ಗೆ ಅಕ್ಷೇಪವ್ಯಕ್ತವಾಗಿತ್ತು.

ಅದಕ್ಕೆ ಕಾರಣ, ಬಿಡಿಸಿ ಹೇಳಬೇಕಾಗಿಲ್ಲ. ನೆರೆ ರಾಷ್ಟ್ರ ಅಥವಾ ಶತ್ರುರಾಷ್ಟ್ರಗಳು ನಮ್ಮ ದೇಶದ ಪ್ರತಿಯೊಂದು ವಿಷಯದಲ್ಲಿ
‘ಕಾಮೆಂಟ್’ ಮಾಡುವುದು ಅಥವಾ ವಿರೋಧಿಸುವುದು ಸಹಜ. ಕೆಲವೊಮ್ಮೆ ಆ ದೇಶಗಳ ವಿಚಾರದಲ್ಲಿ ಭಾರತವೂ ತನ್ನ ನಿಲುವನ್ನು ವ್ಯಕ್ತಪಡಿಸಿರುತ್ತದೆ. ಸ್ನೇಹ ರಾಷ್ಟ್ರಗಳಾದರೆ ತನ್ನ ಕೈಲಾದ ಸಹಾಯವನ್ನು ಮಾಡುತ್ತವೆ. ವಿದೇಶಾಂಗ ನೀತಿಯಲ್ಲಿ ಇದೊಂದು ಸಹಜ ಪ್ರಕ್ರಿಯೆ. ಆದರೆ ಇದನ್ನೇ ನೆಪವಾಗಿಟ್ಟುಕೊಂಡು, ಈ ರೀತಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಟ್ರೇಂಡ್ ಸೃಷ್ಟಿಸುವುದಕ್ಕಾಗಿಯೇ ತಂಡವನ್ನು ರಚಿಸುವುದು, ಆಡಳಿತ ನಡೆಸುವವರನ್ನು ಟೀಕಿಸುವ ಭರದಲ್ಲಿ ‘ದೇಶವೇ ಸರಿಯಲ್ಲ’ ಎಂದು ತೋರಿಸುವ ರೀತಿ ಸರಿಯಲ್ಲ ಎನ್ನುವುದಷ್ಟೇ ವಾದ.

ಆದ್ದರಿಂದ ದೇಶ ಪ್ರೇಮದ ಹೆಸರಲ್ಲಿ, ಆಡಳಿತವನ್ನು ವಿರೋಧಿಸುವ ಭರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸ್ಥಾನ ವನ್ನು ಕೆಳಕ್ಕೆ ಇಳಿಸುವ ಪ್ರಯತ್ನ ಒಪ್ಪಿತವಲ್ಲ. ಅಂತಿಮವಾಗಿ ಇಲ್ಲಿ ಹೇಳಲು ಹೊರಟಿರುವುದು, ದೇಶದ ರೈತರಿಗೆ ನ್ಯಾಯ ದೊರಕಿಸುವುದೇ ಈ ಇಡೀ ಹೋರಾಟದ ಉದ್ದೇಶವಾಗಿದ್ದರೆ, ಅದಕ್ಕೆ ಅಭ್ಯಂತರವಿಲ್ಲ. ಕೇಂದ್ರದ ಕಾಯಿದೆಗಳಿಂದ ರೈತನಿಗೆ ಒಂದು ವೇಳೆ ವಂಚನೆಯಾಗುತ್ತಿದೆ ಎನ್ನುವುದೇ ನಿಜವಾದರೆ, ದಿಶಾ ರವಿಯಂಥ ಕೋಟ್ಯಂತರ ಯುವಕ, ಯುವತಿಯರು ಹೋರಾಟಕ್ಕೆ ಅಣಿಯಾಗಬೇಕು.

ಆದರೆ ಈ ಪ್ರಕರಣದಲ್ಲಿ ಆಗಿರುವುದು, ರೈತರ ಅನ್ಯಾಯ ಸರಿಪಡಿಸುವ ಕೆಲಸಕ್ಕಿಂತ ಹೆಚ್ಚಾಗಿ, ದೇಶದ ಆಂತರಿಕ ವಿಷಯ ಅಂತಾ ರಾಷ್ಟ್ರೀಯ ಮಟ್ಟದಲ್ಲಿ expose ಆಗಬೇಕು ಎನ್ನುವುದು. ಇದರಿಂದ ರೈತರಿಗಾಗುವ ಲಾಭಕ್ಕಿಂತ ಹೆಚ್ಚಾಗಿ, ದೇಶಕ್ಕಾಗುವ ನಷ್ಟ ಹೆಚ್ಚಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅನ್ಯಾಯವನ್ನು ವಿರೋಧಿಸುವುದಕ್ಕೆ ಅವಕಾಶವಿದೆ ಎನ್ನುವ ಮಾತ್ರಕ್ಕೆ, ದೇಶದ ಮಾನವನ್ನು ವಿಶ್ವಮಟ್ಟದಲ್ಲಿ ಹರಾಜು ಹಾಕಬೇಕು ಎಂದಲ್ಲ.