Monday, 16th September 2024

ನೀ ನನ್ನ ಕೈ ಹಿಡಿದೆ, ನಾವಿಬ್ಬರೂ ಬೆಳೆದೆವು ಎನ್ನುವ ಸ್ಪರ್ಶ !

ತಿಳಿರು ತೋರಣ

srivathsajoshi@yahoo.com

ಅನಿಮೇಶ್, ಯಶಸ್, ಗೌತಮ್, ಯಶಾಂಕ್… ಲ್ಕೈದು ಹುಡುಗರು ಮೊದಲ ದಿನದಿಂದಲೇ ಸಾಕಷ್ಟು ಉತ್ಸಾಹ ತೋರಿಸಿ ದ್ದರು. ಶ್ಲೋಕಗಳನ್ನು ಮತ್ತು ಅವುಗಳ ಉಚ್ಚಾರ ವಿವರಣೆಯನ್ನು ಕೇಳಿಸಿಕೊಳ್ಳುವುದರಲ್ಲಿ ಅವರಿಗೆ ಆಸಕ್ತಿ ಇದೆಯೆಂದು ಗೊತ್ತಾಗುತ್ತಿತ್ತು.

ಎರಡು-ಮೂರು ದಿನಗಳಾದ ಮೇಲೆ ಮೊತ್ತಮೊದಲಾಗಿ ಅನಿಮೇಶ ಮುಂದೆ ಬಂದು ಒಂದು ಶ್ಲೋಕ ಸಲೀಸಾಗಿ ಓದಿಹೇಳಿದನು. ಭೇಷ್ ಎಂದು ಮೆಚ್ಚುಗೆ ಗಳಿಸಿದನು. ಅವನನ್ನು ನೋಡಿ ಮತ್ತೂ ಒಂದಿಬ್ಬರಿಗೆ ಆತ್ಮವಿಶ್ವಾಸ ಅರಳಿತು. ಅವರೂ ಶ್ಲೋಕ ಹೇಳಿದರು. ಅಲ್ಲಿಇಲ್ಲಿ ಸ್ವಲ್ಪ ತಪ್ಪಿದರೂ ಅಳುಕಲಿಲ್ಲ. ೧೨ನೆಯ ಅಧ್ಯಾಯ ಮುಗಿಯುವ ವೇಳೆಗೆ ಅವರೆಲ್ಲ ಸ್ಪಷ್ಟವಾಗಿ ಶ್ಲೋಕ ಹೇಳಬಲ್ಲವರಾಗಿದ್ದರು. ೧೫ನೆಯ ಅಧ್ಯಾಯ ಕಲಿಸುವಾಗ ಇನ್ನೂ ಒಂದು ಮಜಾ ನಡೆಯಿತು. ಆವತ್ತು ‘ನ ತದ್ಭಾಸಯತೇ ಸೂರ್ಯೋ ನ ಶಶಾಂಕೋ ನ ಪಾವಕಃ…’ ಆರನೆಯ ಶ್ಲೋಕದ ಕಲಿಕೆ.

ತರಗತಿಯಲ್ಲೊಬ್ಬ ಶಶಾಂಕ ಹೆಸರಿನ ಹುಡುಗನಿದ್ದಾನೆ ಎಂದು ನನಗೆ ಮೊದಲ ದಿನವೇ ಗೊತ್ತಾಗಿತ್ತು. ಶ್ಲೋಕ ಕಲಿಸುವಾಗ ‘ನೋಡಿ ಮಕ್ಕಳೇ, ಇದರಲ್ಲಿ ನಿಮ್ಮ ಫ್ರೆಂಡ್ ಶಶಾಂಕನ ಹೆಸರೂ ಬಂದಿದೆ!’ ಎಂದು ಹೇಳಿದಾಗ ಹುಡುಗರಿಗೆಲ್ಲ ಅಚ್ಚರಿ. ಆಮೇಲೆ ಶಶಾಂಕ ಅಂದ್ರೆ ಏನು ಅರ್ಥ, ಚಂದ್ರನಿಗೇಕೆ ಆ ಹೆಸರು ಅಂತೆಲ್ಲ ಅವರಿಗೆ ವಿವರಿಸಿದೆ. ಈಗ ಶ್ಲೋಕ ಹೇಳಲಿಕ್ಕೆ ಶಶಾಂಕನೂ ಮುಂದೆ ಬಂದ! ಹೀಗೆ ಸಾಗಿತ್ತು ಸುಮಾರು ೩೫ರಿಂದ ೪೦ ಹುಡುಗರಿದ್ದ Sparsha Boys (ಝೂಮ್ ತರಗತಿಯಲ್ಲಿ ಅವರ ಖಾತೆಯ ಹೆಸರು) ಬಳಗಕ್ಕೆ ಆನ್‌ಲೈನ್‌ನಲ್ಲಿ ಭಗವದ್ಗೀತೆ ಕಲಿಸುವಿಕೆ. ಕೊನೆಯ ವಾರ ನನ್ನ ಭಾರತ-ಪ್ರವಾಸದ ಕಾರಣ ನಾನು ತರಗತಿಗಳನ್ನು ತೆಗೆದುಕೊಳ್ಳಲಿಕ್ಕಾಗಲಿಲ್ಲ.

ನನ್ನ ಬದಲಿಗೆ ಮುಂಬೈಯಿಂದ ವಾಮನ ನಾಯಕ್ ಆ ಜವಾಬ್ದಾರಿ ನಿರ್ವಹಿಸಿದರು. ಅಂತೂ ನಾಲ್ಕು ವಾರಗಳಲ್ಲಿ ಎರಡು
ಅಧ್ಯಾಯಗಳ ಕಲಿಕೆ ಯಶಸ್ವಿಯಾಗಿ ಮುಗಿಯಿತು. ನಾನು ಗಮನಿಸಿದಂತೆ ಸ್ಪರ್ಶ ಬಾಯ್ಸ್ ತುಂಬ ಸುಲಭವಾಗಿಯೇ
‘ಭಗವದ್ಗೀತಾ ಕಿಂಚಿದಽತಾ…’ ಮಾಡಿಕೊಂಡರು. ಯಾರು ಈ ‘ಸ್ಪರ್ಶ ಬಾಯ್ಸ್’? ಆರಂಭದಲ್ಲಿ ನನಗೂ ಸರಿಯಾದ ಕಲ್ಪನೆ ಇರಲಿಲ್ಲ. ಕಳೆದೆರಡು ವರ್ಷಗಳಿಂದ ಆನ್ ಲೈನ್‌ನಲ್ಲಿ ಭಗವದ್ಗೀತೆ ಕಲಿಕೆಯ ದೊಡ್ಡದೊಂದು ಕ್ರಾಂತಿಯನ್ನೇ ಮಾಡಿರುವ ‘ಗೀತಾಪರಿವಾರ’ದವರು ಈಚಿನ ದಿನಗಳಲ್ಲಿ ಶಾಲಾ ಮಕ್ಕಳಿಗೆ ಸಾಮೂಹಿಕ ತರಗತಿಗಳನ್ನು ನಡೆಸಲಾರಂಭಿಸಿದ್ದು ನನಗೆ ಗೊತ್ತಿತ್ತು; ಅಷ್ಟೇಅಲ್ಲ, ಹಿಮಾಲಯದಲ್ಲಿ ದೇಶದ ಗಡಿ ಕಾಯುವ ಸೈನಿಕರಿಗೆ ಅವರ ಶಿಬಿರಗಳಲ್ಲೇ, ಮತ್ತು ಮಧ್ಯಪ್ರದೇಶದ ಭೋಪಾಲ್‌ನಲ್ಲಂತೂ ಖೈದಿಗಳಿಗೆ ಸೆರೆಮನೆಯಲ್ಲೇ ಭಗವದ್ಗೀತೆ ಕಲಿಕೆ ಝೂಮ್ ತರಗತಿಗಳ ಏರ್ಪಾಡನ್ನೂ ನಾನು ಅರಿತಿದ್ದೆ.

ಗೀತಾ ಪರಿವಾರದ ಒಬ್ಬ ಸ್ವಯಂಸೇವಕ ಸದಸ್ಯನಾಗಿ ಈಬಗ್ಗೆ ಹೆಮ್ಮೆಪಟ್ಟಿದ್ದೆ. ಇದು ಅಂಥದೇ ಒಂದು ಹೊಸ ಹೆಜ್ಜೆ ಬೆಂಗಳೂರಿನ ‘ಸ್ಪರ್ಶ’ ಟ್ರಸ್ಟ್ ನಡೆಸುವ ಅನಾಥಾಶ್ರಮಗಳಲ್ಲಿನ ಮಕ್ಕಳಿಗೆ ಝೂಮ್ ಮೂಲಕ ಭಗವದ್ಗೀತೆ ಕಲಿಸುವಿಕೆ. ಗೀತಾಪರಿವಾರದ ಹಿರಿಯ ಸದಸ್ಯೆ, ದಿಲ್ಲಿಯಲ್ಲಿರುವ ಅಂಶು ಗರ್ಗ್ ಇದರ ವ್ಯವಸ್ಥಾಪಕಿ. ಮೊದಲಿಗೆ ಒಂದು ಡೆಮೊ ಕ್ಲಾಸ್ ನಡೆಸುವಂತೆ ಅವರು ಕೇಳಿಕೊಂಡದ್ದು ಮುಂಬೈಯಲ್ಲಿರುವ ಶ್ರುತಿ ನಾಯಕ್‌ರನ್ನು ಮತ್ತು ಅಮೆರಿಕದಲ್ಲಿರುವ ನನ್ನನ್ನು.

ಸಪ್ಟೆಂಬರ್ ಕೊನೆಯಲ್ಲಿ ಒಂದುದಿನ ಡೆಮೊ ಕ್ಲಾಸ್ ಮಾಡಿದೆವು. ಅದರಲ್ಲಿ ಸ್ಪರ್ಶ ಅನಾಥಾಶ್ರಮದ ಹುಡುಗರೂ ಹುಡುಗಿಯರೂ ಭಾಗವಹಿಸಿದ್ದರು. ಸ್ಪರ್ಶ ಟ್ರಸ್ಟಿಗಳಲ್ಲೊಬ್ಬರಾದ ಮೂರ್ತಿ ದಂಪತಿ ಸಹ ಇದ್ದರು. ನಮಗೆ ಅದೊಂದು ವಿಶಿಷ್ಟವಾದ, ರೋಮಾಂಚನಕಾರಿ ಅನುಭವ. ಡೆಮೊ ಕ್ಲಾಸ್ ನಮ್ಮ ನಿರೀಕ್ಷೆಗಿಂತಲೂ ಚೆನ್ನಾಗಿಯೇ ನಡೆಯಿತು. ಸರಿ, ಅಕ್ಟೋಬರ್ ೪ರಿಂದ ತರಗತಿಗಳ ಆರಂಭ, ಸಂಖ್ಯೆಯ ದೃಷ್ಟಿಯಿಂದ ಹುಡುಗರು ಮತ್ತು ಹುಡುಗಿಯರ ಪ್ರತ್ಯೇಕ ಎರಡು ಬ್ಯಾಚ್‌ಗಳನ್ನು ನಡೆಸುವುದು, ಹುಡುಗರ ಬ್ಯಾಚ್‌ಗೆ ಶ್ರೀವತ್ಸ ಜೋಶಿ ಪ್ರಶಿಕ್ಷಕ, ಹುಡುಗಿಯರಿಗೆ ಶ್ರುತಿ ನಾಯಕ್
ಪ್ರಶಿಕ್ಷಕಿ ಎಂದು ನಿರ್ಣಯವಾಯಿತು.

ಮಿಕ್ಕಿದ್ದೆಲ್ಲ ಗೀತಾಪರಿವಾರದ ಕೈಮ್ ಟೆಸ್ಟೆಡ್ ಸ್ಟಾಂಡರ್ಡ್ ಕಾರ್ಯವಿಧಾನ. ಅನಾಥಾಶ್ರಮ ಎಂದಷ್ಟೇ ಹೇಳಿದರೆ ಬಹುಶಃ ಸ್ಪರ್ಶ ಸಂಸ್ಥೆಯನ್ನು ತೀರ ಸಂಕುಚಿತ ದೃಷ್ಟಿಕೋನದಿಂದ ನೋಡಿದಂತಾಗುತ್ತದೆ. ಅದು ಬರೀ ಅನಾಥಾಶ್ರಮ ಅಲ್ಲ,
ತುಂಬ ಮಿಗಿಲಾದದ್ದಿರಬಹುದು ಎಂದು ಸಣ್ಣದೊಂದು ಅನುಮಾನ ಭಗವದ್ಗೀತೆ ತರಗತಿಯಲ್ಲಿ ಹುಡುಗರ ಉತ್ಸಾಹ
ಮತ್ತು ಕಲಿಕೆಯ ವೇಗವನ್ನು ಗಮನಿಸಿದಾಗಲೇ ನನಗೆ ಬಂದಿತ್ತು.

ಅಕ್ಟೋಬರ್ ಕೊನೆಯಲ್ಲಿ ಹೇಗೂ ಬೆಂಗಳೂರಿಗೆ ಹೋಗುತ್ತಿದ್ದೇನೆ, ಆಗ ‘ಸ್ಪರ್ಶ’ವನ್ನು ನಾನೊಮ್ಮೆ ಕಣ್ಣಾರೆ ನೋಡುತ್ತೇನೆ, ಇನ್ನಷ್ಟು ವಿಚಾರಗಳನ್ನು ತಿಳಿದುಕೊಳ್ಳುತ್ತೇನೆ ಎಂದು ಆಗಲೇ ನಿರ್ಧರಿಸಿದ್ದೆ. ಬೆಂಗಳೂರಿಗೆ ಹೋದಮೇಲೆ ಮೂರ್ತಿ ದಂಪತಿಯನ್ನು ಸಂಪರ್ಕಿಸಿ ನನ್ನ ಇಚ್ಛೆ ವ್ಯಕ್ತಪಡಿಸಿದೆ. ಅವರು ಸಂತೋಷದಿಂದ ಒಪ್ಪಿದರು. ನವೆಂಬರ್ ೮ರಂದು ಸಂಜೆ
ಅವರೇ ನನ್ನನ್ನು ಅಲ್ಲಿಗೆ ಕರೆದುಕೊಂಡು ಹೋಗುವುದೆಂದೂ, ಗೀತೆ ಕಲಿಕೆಯ ಒಂದು ಸ್ತರ ಯಶಸ್ವಿಯಾಗಿ ಮುಗಿದಿರುವ
ಸಂದರ್ಭದಲ್ಲಿ ಹುಡುಗರ-ಹುಡುಗಿಯರ ಎರಡೂ ತರಗತಿಗಳನ್ನು ಸೇರಿಸಿ ‘ಆನಂದೋತ್ಸವ’ ನಡೆಸುವುದೆಂದೂ
ಮಾತಾಡಿ ಕೊಂಡೆವು.

ಹಾಗೆ ನಾನು ಪ್ರತ್ಯಕ್ಷ ಅನುಭವಿಸಿದ ‘ಸ್ಪರ್ಶ’ದ ಹೃದಯಸ್ಪರ್ಶಿ ಅನಾವರಣ ಇದೋ ಇಲ್ಲಿ ನಿಮಗಾಗಿ. ವಿಂಗ್ ಕಮಾಂಡರ್ ಆರ್. ಎಸ್. ಮೂರ್ತಿ. ಈಗ ನಿವೃತ್ತರಾಗಿ ಬೆಂಗಳೂರಿನ ಆರ್.ಟಿ.ನಗರ ಬಡಾವಣೆಯಲ್ಲಿ ನೆಲೆಸಿದ್ದಾರೆ. ಭಾರತೀಯ ವಾಯುಪಡೆಯಲ್ಲಿ ಮೂವತ್ತು ವರ್ಷ ಸೇವೆ ಸಲ್ಲಿಸಿರುವ ಅವರು ಭಾರತ-ಪಾಕಿಸ್ತಾನ ಯುದ್ಧಗಳಲ್ಲಿ ಭಾಗವಹಿಸಿದ ಕೆಚ್ಚೆದೆಯ ಕಡುಗಲಿ. ಅವರ ಪತ್ನಿ ನೀನಾ ಮೂರ್ತಿ. ಕನ್ನಡದ ಕುಲಪುರೋಹಿತ ಆಲೂರು ವೆಂಕಟರಾಯರ ಮೊಮ್ಮಗಳು (ಹಿರಿಯ ಮಗನ ಹಿರಿಯ ಮಗಳು)! ಅವರ ಒಬ್ಬ ಮಗ ಭಾರತೀಯ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿ ಈಗ ನಿವೃತ್ತಿಯ ಬಳಿಕ ಇಂಡಿಗೋ
ವಾಣಿಜ್ಯವಿಮಾನಯಾನ ಸಂಸ್ಥೆಯಲ್ಲಿ ಪೈಲಟ್ ಆಗಿದ್ದಾರಂತೆ.

ಸಮಾಜಮುಖಿ ಕೆಲಸಗಳನ್ನು ಮಾಡಬೇಕು, ದೇಶದ ಒಳಿತಿಗೆ ಅಳಿಲುಸೇವೆ ಸಲ್ಲಿಸಬೇಕು ಎಂಬ ತುಡಿತ ಮೂರ್ತಿಯವರಿಗೆ.
ಅದಕ್ಕೆ ಸಾಥ್ ಕೊಡುವ ಪತ್ನಿ. ಆರ್.ಟಿ.ನಗರದ ಅವರ ಮನೆಯಿಂದ ನಾವು ಕಾರಿನಲ್ಲಿ ಹೊರಟೆವು. ಮೂರ್ತಿಯವರದೇ
ಡ್ರೈವಿಂಗ್. ನೀನಾ ಮೂರ್ತಿ ಸಹ ನಮ್ಮ ಜೊತೆಗಿದ್ದರು. ಗಮ್ಯ ಸ್ಥಳ ಆರ್.ಟಿ.ನಗರದಿಂದ ಈಶಾನ್ಯ ದಿಕ್ಕಿನಲ್ಲಿ, ಸುಮಾರು ಒಂದು ಗಂಟೆ ಡ್ರೈವಿಂಗ್‌ನಷ್ಟು ದೂರ ಕ್ರಮಿಸಿದಾಗ ಸಿಗುವ ಹೆಸರಘಟ್ಟದ ಬಳಿಯಿರುವ ‘ನಿಸರ್ಗ ಗ್ರಾಮ’.

ದಾರಿಯುದ್ದಕ್ಕೂ ಉಭಯಕುಶಲೋಪರಿ. ಮೂರ್ತಿಯವರಿಗೆ ನನ್ನ ಬಗ್ಗೆ ತಿಳಿದುಕೊಳ್ಳುವ ಕುತೂಹಲವಾದರೆ ನನಗೆ ಅದಕ್ಕಿಂತ ಹೆಚ್ಚು ಕುತೂಹಲ ‘ಸ್ಪರ್ಶ’ದ ಬಗ್ಗೆ ತಿಳಿದುಕೊಳ್ಳುವುದಕ್ಕೆ. ನಡುನಡುವೆ ನೀನಾ ಮೂರ್ತಿ ಸಹ ಮಾತು ಸೇರಿಸು ತ್ತಿದ್ದರು. ‘ಸ್ಪರ್ಶವನ್ನು ಸ್ಥಾಪಿಸಿದ ಗೋಪಿನಾಥ್(ಗೋಪಿ) ಬಗ್ಗೆ ನಿಮಗೆ ಹೇಳುತ್ತೇನೆ. ಗೋಪಿಯ ತಂದೆ ದುರ್ವ್ಯಸನಿ ಆಗಿದ್ದವರು. ಒಂದುದಿನ ಹೆಂಡತಿ ಮಕ್ಕಳನ್ನು ಏಕಾಏಕಿ ಬಿಟ್ಟು ಬೇರಾರೋ ಹೆಣ್ಣಿನೊಡನೆ ಓಡಿಹೋದವರು. ಹಾಗೆ ಅನಾಥರಾದ ಒಡಹುಟ್ಟಿದವರು ಮತ್ತು ತಾಯಿಯೊಡನೆ ಗೋಪಿಯದು ಅಕ್ಷರಶಃ ದನದ ಕೊಟ್ಟಿಗೆಯಲ್ಲಿ ವಾಸ.

ಶಾಲೆ-ಶಿಕ್ಷಣದ ಮಾತಿರಲಿ ಉಡಲು ಬಟ್ಟೆಯಿಲ್ಲ ಉಣ್ಣಲಿಕ್ಕೆ ಕೂಳಿಲ್ಲ ಎಂಬಂಥ ಪರಿಸ್ಥಿತಿ. ಆದರೂ ಯಾರೋ ಪುಣ್ಯಾತ್ಮರ ಸಹಾಯದಿಂದ ಗೋಪಿ ಸುಮಾರು ಹನ್ನೆರಡರ ವಯಸ್ಸಿನಲ್ಲಿ ಶಾಲೆಯ ಮೆಟ್ಟಲೇರಿದರು. ಜನ್ಮದಿನಾಂಕ ಎಲ್ಲ ಏನೂ ಗೊತ್ತಿಲ್ಲ. ಹೆಸರು ಸಹ ಗೋಪಾಲ ಅಂತ ಇದ್ದದ್ದನ್ನು ಶಾಲೆಗೆ ಸೇರಿಸಿಕೊಂಡವರು ಗೋಪಿನಾಥ್ ಎಂದು ಬದಲಾಯಿಸಿದ್ದಂತೆ. ಛಲದಿಂದ ಕಲಿತ ಗೋಪಿನಾಥ್ ಸೋಶಿಯಲ್ ವರ್ಕ್ ಕೋರ್ಸ್‌ನಲ್ಲಿ ತೇರ್ಗಡೆಯಾದರು. ತಾನು ಬಾಲ್ಯದಲ್ಲಿ ಅನುಭವಿಸಿದ ಕಷ್ಟಗಳು ಬೇರಾರಿಗೂ ಬರಬಾರದು, ಅದಕ್ಕೋಸ್ಕರ ಏನಾದರೂ ಮಾಡಬೇಕು ಎಂಬ ಸಂಕಲ್ಪ ಅವರದು.

೨೦೦೫ರಲ್ಲಿ ಮೂರ್ನಾಲ್ಕು ಅನಾಥ ಮಕ್ಕಳನ್ನು ಕರೆದುಕೊಂಡು ಬಂದು ಹೆಚ್ಚೂಕಡಿಮೆ ದನದ ಕೊಟ್ಟಿಗೆಯಂತೆಯೇ ಇದ್ದ ಒಂದು ಶೆಡ್‌ನಲ್ಲಿ ಪೋಷಿಸತೊಡಗಿದರು. ಗೋಪಿಯ ಮನದಲ್ಲಿ ಮೂಡಿದ್ದ ಸ್ಪರ್ಶದ ಕಲ್ಪನೆ ಸಾಕಾರಗೊಂಡಿತು. ಇಂದು ಅದು ನಿಸರ್ಗ ಗ್ರಾಮ ಎಂಬ ದೊಡ್ಡದೊಂದು ಸಂಸ್ಥೆಯೇ ಆಗಿದೆ. ಇಷ್ಟು ವರ್ಷಗಳಲ್ಲಿ ಸಾವಿರಾರು ಮಕ್ಕಳಿಗೆ ಬದುಕಿನ ಹೊಸ ವ್ಯಾಖ್ಯೆ ಬರೆದ ಭರವಸೆಯ ಆಶಾಕಿರಣವಾಗಿದೆ. ಈದಿನ ನಾವು ಅಲ್ಲಿಗೆ ಹೋದಾಗ ಗೋಪಿ ಇರುತ್ತಾರೆ. ನೀವೇ ಮಾತಾಡಿಸು ವಿರಂತೆ’ ಎನ್ನುವಾಗ ಮೂರ್ತಿಯವರ ಮಾತಿನಲ್ಲಿ ಅಭಿಮಾನ ಉಕ್ಕಿಹರಿಯುತ್ತಿತ್ತು.

ಇಕ್ಕೆಲಗಳಲ್ಲಿ ತೆಂಗು-ಕಂಗು-ಬಾಳೆ ತೋಟವಿರುವ ಕಿರಿದಾದ ರಸ್ತೆಯಲ್ಲಿ ಸಾಗಿದ ಕಾರು ನಿಸರ್ಗ ಗ್ರಾಮ ತಲುಪಿದಾಗ ಮಕ್ಕಳೆಲ್ಲ ಸಂಜೆಹೊತ್ತು ಆಟ ಆಡುತ್ತ ಇದ್ದರು. ಮೂರ್ತಿ ದಂಪತಿಯನ್ನು ಕಂಡೊಡನೆ ಅಪ್ಪ-ಅಮ್ಮನೇ ಬಂದರೇನೋ ಎಂಬಂತೆ ಮುತ್ತಿಕೊಂಡರು. ಮೂರ್ತಿಯವರಾದರೂ ಅಷ್ಟೇ, ಅವರನ್ನೆಲ್ಲ ತಮ್ಮದೇ ಮಕ್ಕಳೆಂಬಂತೆ ನೋಡುತ್ತಾರೆ. ಇತ್ತೀಚಿನವರೆಗೂ ನಿಸರ್ಗ ಗ್ರಾಮದಲ್ಲೇ ಹುಡುಗರಿಗೂ ಹುಡುಗಿಯರಿಗೂ ವಸತಿವ್ಯವಸ್ಥೆ ಇದ್ದದ್ದಂತೆ. ಈಗ ಅಲ್ಲಿ ಹುಡುಗರು ಮಾತ್ರ ಇರುತ್ತಾರೆ. ಹುಡುಗಿಯರು ದೇವನಹಳ್ಳಿ ಬಳಿ ‘ಮಕ್ಕಳ ಧಾಮ’ ಎಂಬ ಕಟ್ಟಡದಲ್ಲಿರುತ್ತಾರೆ.

‘ಇವರು ಯಾರು ಗೊತ್ತೇನ್ರೋ?’ ಎಂದು ಮೂರ್ತಿಯವರು ಹುಡುಗರನ್ನು ಕೇಳಿದಾಗ ಭಗವದ್ಗೀತೆ ಕಲಿಸಿಕೊಟ್ಟವರು ಎಂದು ನನ್ನನ್ನು ಸುಲಭವಾಗಿ ಗುರುತಿಸಿದರು. ಝೂಮ್‌ನಲ್ಲಷ್ಟೇ ನೋಡಿದ್ದ ಅನಿಮೇಶ್, ಗೌತಮ್, ಶಶಾಂಕ್… ಎಲ್ಲ ತಂತಮ್ಮ ಹೆಸರು ಹೇಳಿ ನನ್ನೊಡನೆ ಮಾತನಾಡಿದರು. ಅಷ್ಟುಹೊತ್ತಿಗೆ ಗೋಪಿನಾಥ್ ಅಲ್ಲಿಗೆ ಬಂದರು. ಜೊತೆಯಲ್ಲಿ ಅವರಣ್ಣನ ಮಗಳು ಗೌತಮಿ. ಆಕೆ ನಿಸರ್ಗ ಗ್ರಾಮದಲ್ಲೇ ಬೆಳೆದು ಈಗ ನರ್ಸಿಂಗ್ ಕೋರ್ಸ್ ಮಾಡುತ್ತಿದ್ದಾಳೆ. ‘ನಿಮಗೆ ನಿಸರ್ಗ ಗ್ರಾಮವನ್ನು ನಾನಾಗಲೀ ಗೋಪಿಯಾಗಲೀ ತೋರಿಸುವುದಕ್ಕಿಂತ ಮಕ್ಕಳೇ ವಿವರಿಸಿದರೆ ಚಂದ!’ ಎಂದು ಮೂರ್ತಿಯವರ ಆಣತಿ.

ಗೌತಮಿಯ ನೇತೃತ್ವದಲ್ಲಿ ಮಕ್ಕಳ ಸೈನ್ಯ ಹೊರಟಿತು ನನಗೆ ನಿಸರ್ಗ ಗ್ರಾಮದ ಗೈಡೆಡ್ ಟೂರ್ ಕೊಡಲಿಕ್ಕೆ. ಆಟದ ಬಯಲು, ಹಸುಗಳ ಕೊಟ್ಟಿಗೆ, ಕೋಳಿ-ಬಾತು- ಟರ್ಕಿಗಳಿದ್ದ ಪೌಲ್ಟ್ರಿ, ಹತ್ತೈವತ್ತು ಮೊಲಗಳಿದ್ದ ದೊಡ್ಡ ಗೂಡು, ಬದನೆ ಮತ್ತಿತರ ತರಕಾರಿ ಬೆಳೆದ ಹಸುರುಮನೆ(ಗ್ರೀನ್ ಹೌಸ್), ಹತ್ತಿಪ್ಪತ್ತು ಜೇನುಪೆಟ್ಟಿಗೆಗಳನ್ನಿಟ್ಟ ಮಧುವನ, ಸಾವಯವ ಗೊಬ್ಬರದ ಗುಂಡಿ… ನಿಸರ್ಗ ಗ್ರಾಮದ ಒಂದೊಂದೇ ಆಯಾಮ ತೆರೆಯತೊಡಗಿತು. ಆಮೇಲೆ ಕೌಶಲ ಮನೆ, ಅದರೊಳಗೆ ಆರ್ಟ್ ಏಂಡ್ ಕ್ರಾಫ್ಟ್‌ನ ಹಲವಾರು ಮಾದರಿಗಳು, ಹೊಲಿಗೆಯಂತ್ರಗಳು, ಅಡಕೆಹಾಳೆಯಿಂದ ತಟ್ಟೆ ಮಾಡುವ ಯಂತ್ರ, ಕಂಪ್ಯೂಟರ್ ಲ್ಯಾಬ್, ಆಡಿಯೊ-ವಿಡಿಯೊ ರೆಕಾರ್ಡಿಂಗ್ ಮತ್ತು ಎಡಿಟಿಂಗ್ ಸ್ಟುಡಿಯೊ, ಪುಟ್ಟ ಮ್ಯೂಸಿಯಂ, ಸಾವಿರಾರು ಪುಸ್ತಕಗಳಿರುವ ಒಂದು ಗ್ರಂಥಾಲಯ, ಚಿಕ್ಕಚಿಕ್ಕ ಕ್ಲಾಸ್‌ರೂಮ್‌ಗಳು, ಲೇಖನಸಾಮಗ್ರಿ ಮತ್ತಿತರ ದೈನಂದಿನ ಬಳಕೆ ವಸ್ತುಗಳ ದಾಸ್ತಾನು ಕೊಠಡಿ, ಟೆರೇಸ್ ಮೇಲೆ ಸೋಲಾರ್ ಪ್ಯಾನೆಲ್‌ಗಳು, ಕಟ್ಟಡದ ತುಂಬೆಲ್ಲ ಗೋಡೆ ಮೇಲೆ ಪ್ರೇರಣಾದಾಯಕ ಬರಹಗಳು, ಪ್ರಸಿದ್ಧ ವ್ಯಕ್ತಿಗಳ ಭಾವಚಿತ್ರಗಳು, ದೊಡ್ಡದೊಂದು ಭೋಜನಾಲಯ, ಹಾಸಿಗೆಗಳನ್ನು ವ್ಯವಸ್ಥಿತವಾಗಿ ಜೋಡಿಸಿಟ್ಟಿರುವ ಡಾರ್ಮಿಟ್ರಿಗಳು, ಸ್ನಾನ/ಶೌಚ ಗೃಹಗಳು, ಕೊಳೆನೀರು ರೀಸೈಕಲ್ ಆಗಿ ಗಿಡಗಳಿಗೆ ನೀರುಣಿಸುವ ವ್ಯವಸ್ಥೆ… ಏನುಂಟು ಏನಿಲ್ಲ!

ಎಲ್ಲವೂ ಮಕ್ಕಳಿಂದ, ಮಕ್ಕಳಿಗೋಸ್ಕರ, ಮಕ್ಕಳೇ ಮೈಂಟೇನ್ ಮಾಡುವುದು! ಸ್ವಾಭಿಮಾನ ಮತ್ತು ಆತ್ಮವಿಶ್ವಾಸ
ಅಲ್ಲಿಯ ಮಕ್ಕಳಿಗಿದ್ದಷ್ಟು ಹಳ್ಳಿ-ಪಟ್ಟಣಗಳಲ್ಲಿ ಹೆತ್ತವರೊಡನೆ ಐಷಾರಾಮಿ ಬದುಕು ನಡೆಸುವ ಮಕ್ಕಳಿಗೆ ಇಲ್ಲ ಮತ್ತು ಇರಲಿಕ್ಕೆ
ಸಾಧ್ಯವೇ ಇಲ್ಲ ಎಂದು ನಾನು ಘಂಟಾಘೋಷವಾಗಿ ಹೇಳಬಲ್ಲೆ! ನಿಸರ್ಗ ಗ್ರಾಮದಲ್ಲಿ ಮಕ್ಕಳ ಚಟುವಟಿಕೆಗಳು ಬೆಳಗ್ಗೆ ೬ಕ್ಕೆ
ಪ್ರಾತರ್ವಿಽಗಳೊಂದಿಗೆ ಆರಂಭ. ಯೋಗಾಸನ, ವ್ಯಾಯಾಮಗಳ ಬಳಿಕ ಬೆಳಗಿನ ಉಪಾಹಾರ. ಆಮೇಲೆ ಶಾಲೆಗಳಿಗೆ ಹೋಗುವ ಮಕ್ಕಳು ಸ್ಕೂಲ್ ಬಸ್‌ಗಳಲ್ಲಿ ತಮ್ಮತಮ್ಮ ಶಾಲೆಗೆ ಹೋಗುತ್ತಾರೆ.

ಉಳಿದವರು ಅಲ್ಲಿಯೇ ಬೇರೆಬೇರೆ ಕಲಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಸಂಜೆ ಶಾಲೆ ಮುಗಿದ ಮೇಲೆ ಗಿಟಾರ್ ಮತ್ತಿತರ ಸಂಗೀತ ಕ್ಲಾಸುಗಳು. ಎಸ್ಸೆಸ್ಸೆಲ್ಸಿಯಂಥ ನಿರ್ಣಾಯಕ ಘಟ್ಟದಲ್ಲಿರುವವರಿಗೆ ಸ್ಪೆಷಲ್ ಕ್ಲಾಸುಗಳು. ಸ್ವಲ್ಪ ಹೊತ್ತು ಭಜನೆ, ಅದಾದಮೇಲೆ ಭೋಜನ. ರಾತ್ರಿ ೧೦ಕ್ಕೆ ಎಲ್ಲ ಡಾರ್ಮಿಟ್ರಿಗಳಲ್ಲಿ ಲೈಟ್ ಆಫ್. ಹೆಚ್ಚುವರಿಯಾಗಿ ಓದಿಕೊಳ್ಳಬಯಸುವವರಿಗೆ ಪ್ರತ್ಯೇಕ ವ್ಯವಸ್ಥೆ. ದಿನದ ಬೇರೆಬೇರೆ ಸಮಯದಲ್ಲಿ ಹೇಳಲಿಕ್ಕೆ ಒಟ್ಟು ೩೨ ಶ್ಲೋಕ/ಸ್ತೋತ್ರ/ಸೂಕ್ತಿಗಳನ್ನು ಮಕ್ಕಳಿಗೆ ಹೇಳಿಕೊಟ್ಟದ್ದಿದೆ.

ಅದೆಲ್ಲವೂ ಮಕ್ಕಳಿಗೆ ಕಂಠಪಾಠ. ವಾರಾಂತ್ಯಗಳಲ್ಲಿ ಟಿವಿ/ಪ್ರೊಜೆಕ್ಟರ್ ಮೂಲಕ ಸಿನೆಮಾ ಅಥವಾ ಸಾಕ್ಷ್ಯಚಿತ್ರಗಳ ವೀಕ್ಷಣೆ ಇರುತ್ತದೆ. ವರ್ಷದಲ್ಲೊಮ್ಮೆ ‘ಜಾಯ್ ಆಫ್ ಲರ್ನಿಂಗ್’ ಎಂಬ ಉತ್ಸವ. ಆಗ ಸಾಂಸ್ಕೃತಿಕ ಸ್ಪರ್ಧೆಗಳು, ಯಕ್ಷಗಾನ, ಡೊಳ್ಳು ಕುಣಿತ ಇತ್ಯಾದಿ ಪ್ರದರ್ಶನಗಳು ಇರುತ್ತವೆ. ನೆನಪಿಡಿ: ಈ ಮಕ್ಕಳೆಲ್ಲ ನಿಸರ್ಗ ಗ್ರಾಮಕ್ಕೆ ಬರುವ ಮೊದಲು ಭಿಕ್ಷೆ ಬೇಡಿ
ಬದುಕುತ್ತಿದ್ದವರು, ಕಟ್ಟಡ ಕಾಮಗಾರಿ ಕಾರ್ಮಿಕರ ಮಕ್ಕಳಾಗಿ ಸರಿಯಾದ ಪಾಲನೆ ಪೋಷಣೆ ಇಲ್ಲದವರು, ಚಿಂದಿ ಆಯುವ
ಬಡ ಮಕ್ಕಳು, ದುರ್ವ್ಯಸನಿ ತಂದೆ-ತಾಯಿಗಳಿಂದ ಅಥವಾ ಹಿರಿಯರಿಂದ ಶೋಷಣೆಗೊಳಗಾದವರು, ರೋಗರುಜಿನಗಳಿಂದ
ತಂದೆ-ತಾಯಿ ಸತ್ತಾಗ ಅನಾಥರಾದವರು… ಇತ್ಯಾದಿ.

ಅಂದರೆ ಹಾಗೇ ಬಿಟ್ಟಿದ್ದರೆ ಅವರೆಲ್ಲರ ಬದುಕು ಛಿದ್ರವಿಚ್ಛಿದ್ರವಾಗಿ ಹೋಗಿರೋದು. ಅಂಥವರನ್ನು ಕರೆತಂದು, ಊಟ-ವಸತಿ
ವ್ಯವಸ್ಥೆಯಷ್ಟೇ ಅಲ್ಲದೇ ಬೌದ್ಧಿಕ ಬೆಳವಣಿಗೆ, ಸರ್ವತೋಮುಖ ಕೌಶಲ ಅಭಿವೃದ್ಧಿ, ಸಮಾಜದಲ್ಲಿ ಒಳ್ಳೆಯ ಪ್ರಜೆಯಾಗಿ ಬಾಳಲಿಕ್ಕೆ ಯೋಗ್ಯತೆ… ಎಲ್ಲವನ್ನೂ ಒದಗಿಸಿರುವುದು ‘ಸ್ಪರ್ಶ’. ಅಲ್ಲಿ ಬಾಳು ಬೆಳಗಿಸಿಕೊಂಡವರ ಯಶೋಗಾಥೆಗಳು ಒಂದೆರಡಲ್ಲ.

ಎಸ್ಸೆಸ್ಸೆಲ್ಸಿ ಮತ್ತಿತರ ಪರೀಕ್ಷೆಗಳಲ್ಲಿ ಅತ್ಯಽಕ ಅಂಕಗಳನ್ನು ಪಡೆದವರು, ತಮ್ಮ ಕನಸಿನ ವೃತ್ತಿಜೀವನಕ್ಕೆ ಸೋಪಾನ
ಕಟ್ಟಿಕೊಂಡವರನೇಕರು ಸ್ಪರ್ಶಕ್ಕೆ ಋಣಿಯಾಗಿದ್ದಾರೆ. ನಿಸರ್ಗ ಗ್ರಾಮದ ಎಲ್ಲ ಚಟುವಟಿಕೆಗಳ ಪಾರದರ್ಶಕ ಲೆಕ್ಕಪತ್ರವನ್ನು ಸರಕಾರಕ್ಕೆ, ಇಲಾಖೆಗಳಿಗೆ, ವಿಶ್ವಸ್ಥ ಮಂಡಳಿಗೆ, ದಾನಿಗಳಿಗೆ ಕಾಲಕಾಲಕ್ಕೆ ಕ್ಲಪ್ತವಾಗಿ ಸಲ್ಲಿಸಲಾಗುತ್ತದೆ. ಐಬಿಎಂ,
ವಾಲ್‌ಮಾರ್ಟ್, ವಿಪ್ರೊ ಮುಂತಾದ ದೊಡ್ಡದೊಡ್ಡ ಕಂಪನಿಗಳಿಂದ ಹಿಡಿದು ಕೆಲವಾರು ಲಾಭರಹಿತ ಸಂಘಸಂಸ್ಥೆಗಳು
ಸ್ಪರ್ಶಕ್ಕೆ ಪ್ರಾಯೋಜಕರಾಗಿ, ಬೆನ್ನೆಲುಬಾಗಿ ನಿಂತಿವೆ. ಅಂತಹ ಸಹಕಾರ, ಸಹಾಯಗಳ ಸದುಪಯೋಗ ಆಗಬೇಕೆಂದು ಸ್ಪರ್ಶ ಟ್ರಸ್ಟ್ ಬೇರೆಬೇರೆ ಯೋಜನೆಗಳನ್ನು ಕೈಗೆತ್ತಿಕೊಂಡಿದೆ.

ಹಾಗಾಗಿ ನಿಸರ್ಗ ಗ್ರಾಮಕ್ಕೆ ಪ್ರಮುಖರ ಭೇಟಿಗಳು ಆಗಾಗ ನಡೆಯುತ್ತಿರುತ್ತವೆ. ನಾನು ಹೋಗಿದ್ದ ದಿನ ಚೈಲ್ಡ್ ವೆಲ್‌ಫೇರ್
ಕಮಿಟಿಯ ಜಿಲ್ಲಾ ಆಡಳಿತಾಽಕಾರಿ ಬಂದಿದ್ದರು. ಅವರಿಂದ ಮಕ್ಕಳನ್ನುದ್ದೇಶಿಸಿ ಒಂದೆರಡು ಮಾತುಗಳಿದ್ದವು. ಗೈಡೆಡ್ ಟೂರ್
ಮುಗಿದಿದ್ದರಿಂದ ಅದೇ ಸಭಾಂಗಣದಲ್ಲಿ ಆಮೇಲೆ ಹುಡುಗರೆಲ್ಲ ಸೇರಿ ಭಗವದ್ಗೀತೆಯ ೧೫ನೆಯ ಅಧ್ಯಾಯವನ್ನು ಸ್ಪಷ್ಟ, ಶುದ್ಧ ಉಚ್ಚಾರದಲ್ಲಿ ಪಠಿಸಿದರು. ಎರಡು ಅಧ್ಯಾಯಗಳ ಕಲಿಕೆ ಮುಗಿಸಿದ್ದರ ಸಂಭ್ರಮಕ್ಕಾಗಿ ‘ಆನಂದೋತ್ಸವ’ವೂ ನಡೆಯಿತು.

ಭಗವದ್ಗೀತೆ ಕಲಿಕೆ ತರಗತಿಗಳಿಂದ ತಾನು ಏನನ್ನು ಪಡೆದೆ ಎಂದು ಒಂದಿಬ್ಬರು ಹುಡುಗರು ಅನಿಸಿಕೆ ವ್ಯಕ್ತಪಡಿಸಿದರು.
‘ಶ್ಲೋಕಗಳನ್ನು ಕಂಠಪಾಠ ಮಾಡಿ ಒಪ್ಪಿಸಿದವರಿಗೆ ನನ್ನ ಕಡೆಯಿಂದ ಬಹುಮಾನವಿದೆ. ಅವರನ್ನು ನಾನು ಏರ್‌ಪೋಟ್
ಗೆ ಕರೆದುಕೊಂಡುಹೋಗಿ ವಿಮಾನ ತೋರಿಸುತ್ತೇನೆ’ ಎಂದು ಮೂರ್ತಿ ಹುರಿದುಂಬಿಸಿದರು. ಅಮೆರಿಕದಿಂದ ನಾನು ಒಯ್ದಿದ್ದ
ಚಾಕೊಲೆಟ್‌ಗಳ ವಿತರಣೆಯೂ ಆಯಿತು. ‘ಸ್ಪರ್ಶ ಟ್ರಸ್ಟ್. ಶ್ರೀವತ್ಸ ಜೋಶಿ ಅವರಿಗೆ, ಗೀತೆಯ ಕಡೆಗೆ ನಮ್ಮ ಮನ ಒಲಿಸಿದ್ದಕ್ಕೆ
ಕೃತಜ್ಞತೆಗಳು. ಸ್ಪರ್ಶ ಮಕ್ಕಳು. ಜೈ ಶ್ರೀಕೃಷ್ಣ.’ ಎಂದು ಮುದ್ದಾದ ಕನ್ನಡ ಅಕ್ಷರಗಳನ್ನು ಎಂಬ್ರಾಯ್ಡರಿ ಮಾಡಿದ ಸುಂದರ
ವಿನ್ಯಾಸವೊಂದನ್ನು ಮಕ್ಕಳು ನನಗೆ ಉಡುಗೊರೆಯಾಗಿ ಕೊಟ್ಟರು.

ಗದ್ಗದಿತನಾದ ನನಗೆ ಮಾತೇ ಹೊರಡದಾಯಿತು. ನಿಸರ್ಗ ಗ್ರಾಮದ ಪ್ರವೇಶದ್ವಾರದಲ್ಲಿ ಮಕ್ಕಳೇ ವಿನ್ಯಾಸ ಮಾಡಿದ
‘ನೀ ನನ್ನ ಕೈ ಹಿಡಿದೆ; ನಾವಿಬ್ಬರೂ ಬೆಳೆದೆವು’ ಗೋಡೆಬರಹ ಮತ್ತೆಮತ್ತೆ ಕಣ್ಮುಂದೆ ಬಂತು. ನಿಜ. ಸ್ಪರ್ಶದಲ್ಲಿ ಮಕ್ಕಳೂ
ಬೆಳೆಯುತ್ತಾರೆ; ಸ್ಪರ್ಶದೊಡನೆ ಕೈಜೋಡಿಸಿದವರೂ ಬೆಳೆಯುತ್ತಾರೆ. ನಾವೇನೋ ಅಲ್ಲಿಯ ಮಕ್ಕಳಿಗೆ ಗೀತೆ ಕಲಿಸಿದೆವು ಎಂಬುದನ್ನೇ ದೊಡ್ಡ ಸಾಧನೆಯೆಂಬಂತೆ ಬಿಂಬಿಸಬೇಕಿಲ್ಲ. ಸ್ಪರ್ಶದ ವ್ಯಾಪ್ತಿ-ವಿಸ್ತಾರಗಳೆದುರಿಗೆ ಅದೊಂದು ಬಿಂದು ಮಾತ್ರ.
ಮೂರ್ತಿಯವರ ಜೊತೆ ಅಲ್ಲಿಂದ ಕಾರಲ್ಲಿ ಹೊರಟಾಗ ಹುಡುಗರೆಲ್ಲ ಬಂದು ಸುತ್ತುವರಿದು ‘ಜೋಪಾನವಾಗಿ ಹೋಗಿಬನ್ನಿ’ ಎಂದರು. ಮಿನುಗುಕಣ್ಗಳಲ್ಲಿದ್ದ ಆ ಪ್ರೀತಿ ಬೆಲೆಕಟ್ಟಲಾಗದಂಥದ್ದು. ಸ್ಪರ್ಶದ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳಲಿಕ್ಕೆ, ಸ್ಪರ್ಶದೊಡನೆ ಕೈಜೋಡಿಸಲಿಕ್ಕೆ, ನಿಮಗೆ ಆಸಕ್ತಿಯಿದೆಯಾದರೆ ಒಮ್ಮೆ ಭೇಟಿ ಕೊಡಿ: ಡಿಡಿಡಿ.omZoeZ. ಟ್ಟಜ