Saturday, 14th December 2024

ಗ್ರಾಮೀಣ ಪ್ರವಾಸೋದ್ಯಮ ಬಲವರ್ಧನೆಯಾಗಲಿ

ಸಕಾಲಿಕ
ರಾಜು ಭೂಶೆಟ್ಟಿ

ಬೇರೆ ಬೇರೆ ರಾಷ್ಟ್ರಗಳಿಂದ ಬರುವ ಜನರು ಇಲ್ಲಿನ ಸಂಸ್ಕೃತಿ, ಆಚರಣೆಗಳನ್ನು ತಮ್ಮ ದೇಶದಲ್ಲಿಯೂ ಪರಿಚಯಿಸುವ ಮೂಲಕ ಜಗತ್ತೊಂದು ಕುಟುಂಬ ಎಂಬ ಪ್ರಜ್ಞೆ ಬೆಳೆಸಲು ಸಾಧ್ಯವಾಗುತ್ತದೆ. ಅಂದರೆ ಭ್ರಾತೃತ್ವ ಬೆಳೆಸಲು, ಏಕತೆ ಸಾಧಿಸಲು ಪ್ರವಾಸೋದ್ಯಮದ ಪಾತ್ರ ತುಂಬಾ ದೊಡ್ಡದು. ರಾಜ್ಯದ ಎಲ್ಲ ಜಿಲ್ಲೆೆಗಳ ಮಾಹಿತಿಯನ್ನು ಕ್ರೋಢೀಕರಿಸಿ ದಾಗ ನಮಗೆ ಸಮಗ್ರ ರಾಜ್ಯದಲ್ಲಿರುವ ಎಲ್ಲ ಪ್ರವಾಸೋದ್ಯಮ ತಾಣಗಳ ಮಾಹಿತಿ ದೊರಕುತ್ತದೆ. ಪರಿಸರ  ಸ್ನೇಹಿಯಾಗಿ ರುವ ಪ್ರವಾಸೋದ್ಯಮವನ್ನು ಕೈಗೊಳ್ಳುವ ಕುರಿತು ಜಾಗೃತಿ ಅತೀ ಅವಶ್ಯಕ.

ಕೋವಿಡ್-19ರ ಕರಾಳ ಛಾಯೆ ವಿಶ್ವದ ಸರ್ವ ಕ್ಷೇತ್ರಗಳ ಮೇಲೆ ಪರಿಣಾಮ ಬೀರಿದ್ದು, ಪ್ರವಾಸೋದ್ಯಮ ಕ್ಷೇತ್ರವೂ ಕೂಡ
ಅದರಿಂದ ಹೊರತಾಗಿಲ್ಲ. ಪ್ರವಾಸೋದ್ಯಮದಿಂದ ಬರಬೇಕಾಗಿದ್ದ ಆದಾಯದ ಮೇಲೆ ದೊಡ್ಡ ಹೊಡೆತ ಬಿದ್ದಿದೆ. ಇಂತಹ ಹಲವಾರು ಸವಾಲುಗಳನ್ನು ಮೀರಿ ಪ್ರವಾಸೋದ್ಯಮವನ್ನು ಬೆಳೆಸಬೇಕಾಗಿರುವುದು ಒಂದು ದೊಡ್ಡ ಸವಾಲಾಗಿದೆ.

ದೇಶ ಸುತ್ತು – ಕೋಶ ಓದು ಎಂಬ ಮಾತು ಪ್ರವಾಸೋದ್ಯಮ ದಿನದ ಮಹತ್ವವನ್ನು ಸಾರುತ್ತದೆ. ಪ್ರವಾಸದಿಂದ ಒದಗುವ ಅನುಭವವು, ಪುಸ್ತಕದಿಂದ ದೊರೆಯುವ ಅನುಭವಕ್ಕಿಂತಲೂ ಹೆಚ್ಚಿನದಾಗಿರುತ್ತದೆ. ಪ್ರವಾಸದಲ್ಲಿ ಸಾಕಷ್ಟು ಅನುಭವಾತ್ಮಕ ಕಲಿಕೆ ಉಂಟಾಗುತ್ತದೆ. ಪ್ರತಿ ವರ್ಷ ಸೆಪ್ಟೆಂಬರ್ 27 ರಂದು ಒಂದು ನಿರ್ದಿಷ್ಟ ಥೀಮ್‌ನೊಂದಿಗೆ ವಿಶ್ವ ಪ್ರವಾಸೋದ್ಯಮ ದಿನ ವನ್ನು ಆಚರಿಸಲಾಗುತ್ತಿದೆ.

ಈ ವರ್ಷ Tourism and Rural development ಎಂಬ ಥೀಮ್‌ನೊಂದಿಗೆ ಆಚರಿಸಲಾಗುತ್ತಿದೆ. ಗ್ರಾಮೀಣ ಪ್ರದೇಶದ ಪ್ರವಾಸೋ ದ್ಯಮವು ಮುಖ್ಯವಾಗಿ ಕೃಷಿ ಕ್ಷೇತ್ರಗಳಲ್ಲಿ ನಾವೀನ್ಯತೆಗಳನ್ನು ಅಳವಡಿಸಿಕೊಂಡು ಮುಂಚೂಣಿಯಲ್ಲಿರುವ, ನಿಸರ್ಗ ಹಾಗೂ ಸಾಂಸ್ಕೃತಿಕ ಶ್ರೀಮಂತಿಕೆ ಹೊಂದಿರುವ, ಮೀನುಗಾರಿಕೆ, ಹೈನುಗಾರಿಕೆ, ಮಳೆ ನೀರು ಕೊಯ್ಲು, ಸಾವಯವ ಕೃಷಿ, ಸಿರಿಧಾನ್ಯ ಉತ್ಪಾದನೆ, ಸಾಕು ಪ್ರಾಣಿಗಳ ವೈವಿಧ್ಯತೆ, ಈ ರೀತಿ ಹಲವಾರು ಅಂಶಗಳಿಂದ ಕೂಡಿರುವ ಪ್ರದೇಶಗಳನ್ನು ಒಳಗೊಂಡಿರುತ್ತದೆ.

ಇಡೀ ಜಗತ್ತಿನಲ್ಲಿಯೇ ಭಾರತವು ಸಾಕಷ್ಟು ಪ್ರವಾಸೋದ್ಯಮದ ಐತಿಹಾಸಿಕ ತಾಣಗಳನ್ನು ಹೊಂದಿದ್ದು, ಅವುಗಳು ಬೆಳಕಿಗೆ ಬಾರದೇ ಇರುವುದರಿಂದಾಗಿ ಪ್ರವಾಸೋದ್ಯಮದಿಂದ ಬರುವ ಆದಾಯದ ಮೂಲಕ್ಕೆ ದೊಡ್ಡ ಹೊಡೆತ ಬಿದ್ದಂತಾಗಿದೆ. ಆದ್ದರಿಂದ ಅವುಗಳನ್ನು ಗುರುತಿಸುವುದರ ಜತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಿಗರು ಬರುವಂತೆ ಆಕರ್ಷಣೆಯ
ಕೇಂದ್ರವಾಗಿ ಅಭಿವೃದ್ಧಿಪಡಿಸುವ ಕೆಲಸ ಆಗಬೇಕಾಗಿದೆ. ಉದಾಹರಣೆಗೆ ಒಂದು ರಾಜ್ಯವನ್ನು ಪ್ರವಾಸೋದ್ಯಮ ತಾಣವನ್ನಾಗಿ ಬಲಪಡಿಸಬೇಕೆಂದರೆ – ಗ್ರಾಮೀಣ ಪ್ರದೇಶಗಳಿಂದ ಸ್ಥಳೀಯವಾಗಿ ಐತಿಹಾಸಿಕ ಪರಂಪರೆಗಳನ್ನು ಹೊಂದಿರುವ ಸ್ಮಾರಕ, ದೇವಾಲಯ, ಕೆರೆ, ಬಾವಿಗಳನ್ನು ಸಂದರ್ಶಿಸಿ ಅವುಗಳ ಇತಿಹಾಸ ದೊಂದಿಗೆ ಪಟ್ಟಿ ಮಾಡಬೇಕು. ಈ ಎಲ್ಲ ಅಂಶಗಳನ್ನು ಪಟ್ಟಿ ಮಾಡಿದಾಗ ತಾಲೂಕಿನಲ್ಲಿರುವ ಒಟ್ಟು ಪ್ರವಾಸೋದ್ಯಮದ ಮಾಹಿತಿ ದೊರೆಯುತ್ತದೆ. ತದನಂತರ ಒಂದು ಜಿಲ್ಲೆಯ ವ್ಯಾಪ್ತಿ ಯಲ್ಲಿರುವ ಎಲ್ಲ ತಾಲೂಕುಗಳಿಂದ ಬಂದಂಥ ಮಾಹಿತಿಗಳನ್ನು ಕ್ರೋಢೀಕರಿಸುವುದು.

ನಂತರ ರಾಜ್ಯದ ಎಲ್ಲ ಜಿಲ್ಲೆಗಳ ಮಾಹಿತಿಯನ್ನು ಕ್ರೋಢೀಕರಿಸಿದಾಗ ನಮಗೆ ಸಮಗ್ರ ರಾಜ್ಯದಲ್ಲಿರುವ ಎಲ್ಲ ಪ್ರವಾಸೋದ್ಯಮ ತಾಣಗಳ ಮಾಹಿತಿ ದೊರಕುತ್ತದೆ. ರಾಷ್ಟ್ರದ ಅಭಿವೃದ್ಧಿಯಲ್ಲಿ ಪ್ರವಾಸೋದ್ಯಮದ ಪಾತ್ರ ಉದ್ಯೋಗ ಸೃಷ್ಟಿ, ಆದಾಯದ ಮೂಲ ವೃದ್ಧಿಸುವುದು. ರಾಷ್ಟ್ರೀಯ ಪರಂಪರೆ ಮತ್ತು ಪರಿಸರದ ಸಂರಕ್ಷಣೆ- ಪ್ರವಾಸೋದ್ಯಮದಿಂದಾಗಿ ಬಹಳಷ್ಟು
ಐತಿಹಾಸಿಕ ಮಹತ್ವವಿರುವ ಸ್ಥಳಗಳನ್ನು ರಾಷ್ಟ್ರೀಯ ಪರಂಪರೆ ತಾಣಗಳೆಂದು ಗುರುತಿಸಲಾಗಿದೆ. ನೈಸರ್ಗಿಕ ತಾಣಗಳು ಹಾಗೂ ಅಳಿವಿನ ಅಂಚಿನಲ್ಲಿರುವ ಬಹಳಷ್ಟು ಪ್ರಭೇದಗಳನ್ನು ಸಂರಕ್ಷಿಸಲಾಗಿದೆ.

ಮೂಲ ಸೌಕರ್ಯಗಳ ಅಭಿವೃದ್ಧಿ – ಪ್ರವಾಸೋದ್ಯಮದಿಂದಾಗಿ ಮೂಲ ಸೌಕರ್ಯಗಳಾದ ಅತ್ಯುತ್ತಮ ರಸ್ತೆ, ಸಾರಿಗೆ ಸೌಕರ್ಯ ಗಳು, ಆರೋಗ್ಯ ಸೌಕರ್ಯಗಳು, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ವಿದ್ಯುತ್, ವಸತಿ, ನೀರು ಹೀಗೆ ಮನುಷ್ಯನಿಗೆ ಅಗತ್ಯ ವಿರುವ ಮೂಲ ಸೌಕರ್ಯ ಗಳನ್ನು ಅಭಿವೃದ್ಧಿಪಡಿಸಲಾಗಿದೆ.

ಶಾಂತಿ ಹಾಗೂ ಸ್ಥಿರತೆ ಕಾಪಾಡಲು – ವಸುಧೈವ ಕುಟುಂಬಕಂ ಎಂಬ ಮಾತನ್ನು ಪ್ರಾಯೋಗಿಕವಾಗಿ ಅದನ್ನು ಧೃಡೀಕರಿಸುವ ಶಕ್ತಿ ಪ್ರವಾಸೋದ್ಯಮಕ್ಕಿದೆ ಎಂದರೆ ತಪ್ಪಾಗಲಾರದು. ಕಾರಣ ಬೇರೆ ಬೇರೆ ರಾಷ್ಟ್ರಗಳಿಂದ ಬರುವ ಜನರು ಇಲ್ಲಿನ ಸಂಸ್ಕೃತಿ,
ಆಚರಣೆಗಳನ್ನು ತಮ್ಮ ದೇಶದಲ್ಲಿಯೂ ಪರಿಚಯಿಸುವ ಮೂಲಕ ಜಗತ್ತೊಂದು ಕುಟುಂಬ ಎಂಬ ಪ್ರಜ್ಞೆ ಬೆಳೆಸಲು ಸಾಧ್ಯವಾಗು ತ್ತದೆ. ಅಂದರೆ ಭ್ರಾತೃತ್ವ ಬೆಳೆಸಲು, ಏಕತೆ ಸಾಧಿಸಲು ಪ್ರವಾಸೋದ್ಯಮದ ಪಾತ್ರ ತುಂಬಾ ದೊಡ್ಡದು.

ಪ್ರವಾಸೋದ್ಯಮದ ಪ್ರಕಾರಗಳು: ಬಿಡುವಿನ ಅವಧಿಯ ಪ್ರವಾಸೋದ್ಯಮ – ರಜಾ ಅವಧಿಯಲ್ಲಿ ಸಮುದ್ರದ ವೀಕ್ಷಣೆ, ಈಜುವುದು, ಸ್ಥಳೀಯ ಪ್ರವಾಸ, ವಿಶ್ರಾಂತಿ ತಾಣಗಳು, ಮಿತ್ರರ ಭೇಟಿ, ವಸ್ತುಗಳನ್ನು ಖರೀದಿಸುವುದು. ವ್ಯಾಪಾರಕ್ಕಾಗಿ
ಪ್ರವಾಸೋ ದ್ಯಮ – ರಾಜ್ಯ- ರಾಜ್ಯಗಳ ಅಥವಾ ದೇಶ – ವಿದೇಶಗಳ ನಡುವೆ ನಡೆಯುವ ಸಾಮಗ್ರಿಗಳ ವಹೀವಾಟುಗಳು, ವ್ಯಾಪಾರಕ್ಕೆ ಸಂಬಂಧಿಸಿದ ಸಮ್ಮೇಳನಗಳು, ಪ್ರದರ್ಶನಗಳಲ್ಲಿ ಭಾಗವಹಿಸುವುದು. ಪರಿಸರ ಜ್ಞಾನ ಪ್ರವಾಸಗಳು, ತೀರ್ಥಯಾತ್ರೆ ಪ್ರವಾಸ, ಐತಿಹಾಸಿಕ ಪ್ರವಾಸ – ಆಗ್ರಾದ ತಾಜ್ ಮಹಲ್, ಅಜಂತಾ, ಎಲ್ಲೋರಾ, ದೆಹಲಿ, ರಾಜಸ್ಥಾನ, ಮಹಾರಾಷ್ಟ್ರದ ಕೋಟೆಗಳು, ಅತೀ ಪುರಾತನ – ಐತಿಹಾಸಿಕ ಮಧುರೈ ಸ್ಥಳಗಳು ಮುಂತಾದವುಗಳು. ವೈದ್ಯಕೀಯ ಪ್ರವಾಸ, ಆಯುರ್ವೇದ ಹಾಗೂ ಯೋಗ ಪ್ರವಾಸ – ಆಯುರ್ವೇದದಲ್ಲಿ ಕೇರಳ ರಾಜ್ಯವು ಬಹಳಷ್ಟು ಸಂಶೋಧನೆಗಳನ್ನು ಮಾಡಿ ಮುಂಚೂಣಿಯಲ್ಲಿರು
ವುದರಿಂದ ಬಹಳಷ್ಟು ರೋಗಿಗಳು ಆಯುರ್ವೇದ ಹಾಗೂ ಯೋಗ ಚಿಕಿತ್ಸೆಗಾಗಿ ಕೇರಳಕ್ಕೆ ಹೋಗುವುದು ಸರ್ವೇ ಸಾಮಾನ್ಯ ವಾಗಿದೆ.

ಸಾಹಸ ಪ್ರವಾಸಗಳು – ಸಾಹಸ ಉದ್ದೇಶಗಳಿಗಾಗಿ ಪರ್ವತಾರೋಹನ, ಶಿಖರಗಳನ್ನು ಏರುವುದು, ಒಂಟಿ ಸವಾರಿ, ಕಡಲು
ದಾಟುವುದು, ನದಿಗಳಲ್ಲಿ ಈಜುವುದು, ಕಲ್ಲು ಬಂಡೆಗಳನ್ನು ಏರುವುದು ಮುಂತಾದ ಸಾಹಸಕ್ಕಾಗಿ ಈ ರೀತಿಯ ಪ್ರವಾಸಗಳನ್ನು ಕೈಗೊಳ್ಳಲಾಗುವುದು.

ಕ್ರೀಡಾ ಪ್ರವಾಸ – ಓಲಿಂಪಿಕ್ಸ್, ವಿಶ್ವಕಪ್ ಕ್ರಿಕೆಟ್, ಟೆನಿಸ್, ಗಾಲ್ಫ್‌, ಹೀಗೆ ಮುಂತಾದ ಕ್ರೀಡೆಗಳಲ್ಲಿ ಭಾಗವಹಿಸುವುದಕ್ಕಾಗಿ ವಿಶ್ವದ ವಿವಿಧೆಡೆ ಪ್ರವಾಸ ಕೈಗೊಳ್ಳುವುದು. ಜೀವ ವೈವಿಧ್ಯ ತಾಣಗಳ ಭೇಟಿ – ಪ್ರವಾಸೋದ್ಯಮದ ಮೂಲಕ ಜೀವ ವೈವಿಧ್ಯ ತಾಣ ಗಳನ್ನು ಸಂದರ್ಶಿಸುವುದರ ಮೂಲಕ ಮಾನವನ ಚಟುವಟಿಕೆಗಳಿಂದ ಅವುಗಳ ಮೇಲಾಗುತ್ತಿರುವ ಪರಿಣಾಮಗಳನ್ನು ಕುರಿತು ಅವಲೋಕಿಸಬಹುದಾಗಿದೆ.

ಪ್ರವಾಸೋದ್ಯಮದ ಅಭಿವೃದ್ಧಿಗೆ ಸವಾಲುಗಳು ಪರಿಸರದ ಮೇಲೆ ಪ್ರತಿಕೂಲ ಪರಿಣಾಮ – ಪ್ರವಾಸಿಗರ ಸಂಖ್ಯೆ ಹೆಚ್ಚಳದಿಂದಾಗಿ ನೀರಿನ ಕೊರತೆ, ನೀರಿನ ಮಲೀನತೆ, ಜೀವ ವೈವಿಧ್ಯ ತಾಣಗಳಿಗೆ ಭೇಟಿ ನೀಡುವುದರಿಂದ ಪ್ರಾಣಿ ಆವಾಸ ತಾಣಗಳ ನಾಶ, ವಾಹನ ಗಳ ದಟ್ಟಣೆಯಿಂದ ವಾಯು ಮಾಲಿನ್ಯ, ಪ್ರವಾಸಿಗರಿಗಾಗಿ ರಸ್ತೆ ನಿರ್ಮಾಣಕ್ಕೆ ದೊಡ್ಡ ಪ್ರಮಾಣದಲ್ಲಿ ಅರಣ್ಯ ನಾಶ, ಸಿಗರೇಟ್, ಮದ್ಯ ಸೇವನೆ, ಪ್ಲಾಸ್ಟಿಕ್ ಬಳಕೆ ಮುಂತಾದವುಗಳಿಂದ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.

ಆದ್ದರಿಂದ ಪರಿಸರ ಸ್ನೇಹಿಯಾಗಿರುವ ಪ್ರವಾಸೋದ್ಯಮವನ್ನು ಕೈಗೊಳ್ಳುವ ಕುರಿತು ಜಾಗೃತಿ ಅತೀ ಅವಶ್ಯಕ. ಕೆಲವೊಮ್ಮೆ ವಿದೇಶಿ ಪ್ರವಾಸಿಗರು ತಮ್ಮ ದೇಶದಿಂದಲೇ ಕೆಲಸಕ್ಕಾಗಿ ಕೌಶಲ್ಯಯುತ ಕಾರ್ಮಿಕರನ್ನು ಕರೆ ತರುವುದರಿಂದ, ಸ್ಥಳೀಯರಿಗೆ
ಪ್ರವಾಸೋದ್ಯಮದಿಂದ ಕೆಲಸ ವಂಚಿತರಾಗುತ್ತಾರೆ. ಇದರಿಂದಾಗಿ ಬಹಳಷ್ಟು ಸಂದರ್ಭಗಳಲ್ಲಿ ಕಡಿಮೆ ಹಣಕ್ಕಾಗಿ ಹೆಚ್ಚು ಕೆಲಸ ಮಾಡಬೇಕಾದ ಅನಿವಾರ್ಯತೆ ಬರುತ್ತದೆ.