Friday, 25th October 2024

ನಮ್ಮ ಪ್ರವಾಸೋದ್ಯಮಕ್ಕೆ ಪ್ರವಾಸಿಗರೇ ದೊಡ್ಡ ಶಾಪ !

ನೂರೆಂಟು ವಿಶ್ವ

ಒಂದು ಊರು ಪ್ರವಾಸಿ ತಾಣವಾಗಿ ಅಭಿವೃದ್ಧಿಯಾದರೆ, ಅದನ್ನು ಕುಲಗೆಡಿಸುವುದು ಹೇಗೆ ಎಂಬುದು ನಮ್ಮ ಪ್ರವಾಸಿಗರಿಗೆ ಚೆನ್ನಾಗಿ ಗೊತ್ತು. ಈ ವಿಷಯದಲ್ಲೂ ಭಾರತ ವಿಶ್ವಗುರು! ನಮ್ಮ ಪ್ರವಾಸೋದ್ಯಮಕ್ಕೆ ಪ್ರವಾಸಿಗರೇ ದೊಡ್ಡ ಶಾಪ! ನಮ್ಮ ಜನಕ್ಕೆ ಪ್ರವಾಸೋದ್ಯಮ ಅಂದ್ರೆ ಜವಾಬ್ದಾರಿಯುತ ಪ್ರವಾಸೋದ್ಯಮ ಎನ್ನುವುದು ಗೊತ್ತೇ ಇಲ್ಲ. ಪ್ರವಾಸೋದ್ಯಮ ಅಂದ್ರೆ ಮಜಾ ಮಾಡುವುದು ಎಂದೇ ಭಾವಿಸಿದ್ದಾರೆ.

ನಾನು ಸಾಮಾಜಿಕ ಜಾಲತಾಣಗಳಲ್ಲಿ ಕೇವಲ ವಿದೇಶಿ ಪ್ರವಾಸಿ ತಾಣಗಳ ಫೋಟೋಗಳನ್ನೇ ಹಂಚಿಕೊಳ್ಳುತ್ತೇನೆ ಎಂಬ ಆರೋಪ ನನ್ನ ಮೇಲಿದೆ. ಇದರಲ್ಲಿ ಸತ್ಯಾಂಶವೂ ಇದೆ. ಆದರೆ ಇದರಿಂದ, ನಾನು ದೇಶೀಯ ಪ್ರವಾಸಿ ತಾಣಗಳಿಗೆ ಹೋಗುವುದಿಲ್ಲ, ಬರೀ ವಿದೇಶ ಪ್ರವಾಸದಲ್ಲೇ ನಿರತನಾಗಿರುತ್ತೇನೆ ಎಂಬ
ಭಾವನೆ ಮೂಡುವಂತಾಗಿದೆ. ಇದು ಸರಿಯಲ್ಲ. ವಿದೇಶ ಪ್ರವಾಸ ಹೋಗುವುದಕ್ಕಿಂತ ಹೆಚ್ಚಾಗಿ ನಮ್ಮ ರಾಜ್ಯ ಮತ್ತು ಹೊರ ರಾಜ್ಯಗಳಿಗೂ ಹೋಗುತ್ತೇನೆ. ಕೆಲವು ಉದ್ಯೋಗ ಮತ್ತು ವ್ಯವಹಾರ ಸಂಬಂಧಿ ತಿರುಗಾಟ ಹಾಗೂ ಉಳಿದವು ತಿರುಗಾಲು ತಿಪ್ಪನ ಓಡಾಟಗಳು.

ಕಳೆದ ಒಂದು ತಿಂಗಳಿನಿಂದ ನಾನು ಯಾವ ದೇಶಕ್ಕೂ ಹೋಗಿಲ್ಲ. ಈ ವರ್ಷ ನಾನು ಪೂರ್ತಿ ಒಂದು ತಿಂಗಳು ದೇಶದಲ್ಲಿ ಇದ್ದಿದ್ದು ಇಲ್ಲವೇ ಇಲ್ಲ. ಎರಡು
ತಿಂಗಳ ಅವಽಯಲ್ಲಿ ಹನ್ನೊಂದು ದೇಶಕ್ಕೆ ಹೋಗಿ ಬಂದಿದ್ದೆ. ಆದರೆ ಕಳೆದ ಒಂದು ತಿಂಗಳಿನಿಂದ ನಾನು ನಮ್ಮ ರಾಜ್ಯದಲ್ಲಿ, ಬೆಂಗಳೂರು ಸುತ್ತ-ಮುತ್ತ ಓಡಾಡುತ್ತಿದ್ದೆ. ಬೆಂಗಳೂರಿಗೆ ಹೊಂದಿಕೊಂಡಂತೆ ಏನಿಲ್ಲವೆಂದರೂ ಸುಮಾರು ಐವತ್ತು ಕೆರೆ, ಜಲಾಶಯ, ಅಣೆಕಟ್ಟು, ನದಿ, ತೊರೆಗಳನ್ನು ಹುಡುಕಿಕೊಂಡು ಅಲೆದಾಡುತ್ತಿದ್ದೇನೆ. ಆದರೂ ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಎದುರಿಗೆ ಸಿಕ್ಕಾಗ, ‘ಏನ್ಸಾರ್, ನೀವು ಊರಿನಲ್ಲಿದ್ದು ಒಂದು ತಿಂಗಳಾಯಿತು.
ಮುಂದಿನ ವಿದೇಶ ಪ್ರವಾಸ ಯಾವಾಗ?’ ಎಂದು ತಮಾಷೆಯಿಂದ ಮತ್ತು ಗಂಭೀರವಾಗಿ ಕೇಳುವುದುಂಟು.

ಹೀಗೆ ಕೇಳುವವರಿಗೆ ನಾನು ವಿದೇಶ ಪ್ರವಾಸ ಮಾಡುವುದು ಮಾತ್ರ ಗೊತ್ತು. ನನ್ನ ದೇಶೀಯ ಸುತ್ತಾಟ ಅವರಿಗೆ ಗೊತ್ತಿಲ್ಲ. ಇದಕ್ಕೆ ಮುಖ್ಯ ಕಾರಣ, ನಾನು ವಿದೇಶ ಪ್ರವಾಸಕ್ಕೆ ಹೋದಾಗ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಶೇರ್ ಮಾಡುವುದು ಮತ್ತು ನಮ್ಮ ರಾಜ್ಯದ ಯಾವ ಪ್ರವಾಸಿ
ತಾಣ ಮತ್ತು ಅಪರೂಪದ ತಾಣಗಳಿಗೆ ಹೋದರೂ ಫೋಟೋಗಳನ್ನು ಶೇರ್ ಮಾಡದಿರುವುದು. ಇದಕ್ಕೂ ಒಂದು ಪ್ರಬಲ ಕಾರಣವಿದೆ. ವಿದೇಶದ ಯಾವು
ದಾದರೂ ಪ್ರವಾಸಿ ತಾಣ ಅಥವಾ ಸುಂದರ ಸ್ಥಳಗಳ ಫೋಟೋ ವನ್ನು ಶೇರ್ ಮಾಡಿಕೊಂಡರೆ, ಅದರಿಂದ ಹೆಚ್ಚು ಫರಕು ಆಗುವುದಿಲ್ಲ.

ಆದರೆ ನಮ್ಮ ರಾಜ್ಯದ ಯಾವುದಾದರೂ ಅಪರೂಪದ ಪ್ರವಾಸಿ ತಾಣದ ಫೋಟೋಗಳನ್ನಾಗಲಿ, ಡ್ರೋನ್ ವಿಡಿಯೋ ತುಣುಕುಗಳನ್ನಾಗಲಿ ಸಾಮಾಜಿಕ ಜಾತಾಣಗಳಲ್ಲಿ ಶೇರ್ ಮಾಡಿದರೆ, ಅದರಿಂದ ಆಗುವ ಸಮಸ್ಯೆಗಳು ಒಂದೆರಡಲ್ಲ. ಇದು ನಾನು ಶೇರ್ ಮಾಡುವುದರಿಂದ ಮಾತ್ರ ಆಗುವ ಅಧ್ವಾನ ಅಲ್ಲ. ಸಾಮಾಜಿಕ ಜಾಲತಾಣಗಳು ತಂದೊಡ್ಡುವ ಅಪಾಯಗಳು. ನಾನು ಮೊನ್ನೆ ಬೆಂಗಳೂರಿನ ಹೊರವಲಯದಲ್ಲಿರುವ, ನೈಸ್ ರಸ್ತೆಗೆ ತಾಕಿಕೊಂಡಿರುವ ಒಂದು ಹಳ್ಳಿಗೆ ಹೋಗಿದ್ದೆ. ಸುಮಾರು ಐನೂರು ಜನಸಂಖ್ಯೆ ಇರುವ ಪುಟ್ಟ ಹಳ್ಳಿಯದು. ಬೆಂಗಳೂರಿನ ಆಧುನಿಕತೆಯ ಗಾಳಿ ಬೀಸಿದರೂ, ಹಳ್ಳಿಯ ಸೊಗಡನ್ನು ಕಾಪಾಡಿಕೊಂಡಿರುವ ಹಳ್ಳಿಯದು.

ಇತ್ತಿತ್ತಲಾಗಿ, ಅಲ್ಲಿ ಬಡಾವಣೆಗಳು, ವಿಲ್ಲಾಗಳು ಅಲ್ಲೊಂದು-ಇಲ್ಲೊಂದು ತಲೆ ಎತ್ತಿವೆ. ಆ ಹಳ್ಳಿಗೆ ಒಂದು ಸಣ್ಣ ಜಲಪಾತವನ್ನು ಬಳಸಿ ಹೋಗಬೇಕು. ನಂತರ ಅಲ್ಲಿ ಒಂದು ಸುಂದರ ಕೆರೆ ಕಾಣಿಸಿತು. ಅಷ್ಟು ದೊಡ್ಡ ಕೆರೆ ನೋಡಿ ಆಶ್ಚರ್ಯವಾಯಿತು. ಮೆಲ್ಲಗೆ ನಾನು ಹೆಗಲಚೀಲದಿಂದ ಡ್ರೋನ್ ತೆಗೆದೆ. ಅದನ್ನು ಅಲ್ಲಿಯೇ ಸನಿಹದಲ್ಲಿದ್ದ ಹಿರಿಯರೊಬ್ಬರು ನೋಡಿದರು. ‘ಶೂಟಿಂಗ್ ಮಾಡಿ ಪರವಾಗಿಲ್ಲ, ಸೋಷಿಯಲ್ ಮೀಡಿಯಾದಲ್ಲಿ ಬೇಕಾದರೆ ಶೇರ್ ಮಾಡಿ, ಪರವಾಗಿಲ್ಲ. ಆದರೆ..
ದಮ್ಮಯ್ಯ.. ಯಾವ ಜಾಗ ಎಂದು ಮಾತ್ರ ಹೇಳಬೇಡಿ. ಕಾರಣ ನಿಮ್ಮ ಬೆಂಗಳೂರಿನ ಮಂದಿ ಶನಿವಾರ, ಭಾನುವಾರ ಇಲ್ಲಿಗೆ ಬಂದು, ಇಡೀ ಊರನ್ನು ಗಬ್ಬೆಬ್ಬಿಸಿ ಹೋಗುತ್ತಾರೆ.

ನಾವು ಬಹಳ ಪ್ರಯಾಸಪಟ್ಟು ನಮ್ಮ ಊರನ್ನು ಕಾಪಾಡಿಕೊಂಡಿದ್ದೇವೆ. ಶೂಟಿಂಗ್ ಮಾಡಬೇಡಿ ಎಂದು ಹೇಳಲು ನಾವ್ಯಾರು? ಆದರೆ ಲೊಕೇಶನ್ ಹೆಸರನ್ನು ಮಾತ್ರ ಬಹಿರಂಗ ಪಡಿಸಬೇಡಿ’ ಎಂದರು. ‘ಯಜಮಾನರೇ, ನೀವು ಮಾಡಿ ಅಂದರೂ ನಾನು ಮಾಡುವುದಿಲ್ಲ. ನನಗೆ ಇದರ ಅಪಾಯ ಗೊತ್ತಿದೆ’ ಎಂದು ಹೇಳಿದೆ. ನಾವು ಯಾವ ಊರಿಗೆ ಹೋದರೂ, ಫೋಟೋ ಅಥವಾ ವಿಡಿಯೋ ತೆಗೆದಾಗ, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವಾಗ ಹತ್ತು ಸಲ ಯೋಚಿಸುವಂಥ ಕಾಲ ಬಂದಿದೆ. ಮತ್ತೇನೂ ಇಲ್ಲ, ನಾವು ಭೇಟಿ ನೀಡಿದ ಜಾಗದ ವಿವರಗಳನ್ನೆಲ್ಲ ನೀಡಿ, ಫೋಟೋ ಮತ್ತು ವಿಡಿಯೋ ಶೇರ್ ಮಾಡಿಕೊಂಡರೆ, ಮುಂದಿನ ವಾರದಿಂದ ಜನ ಅಲ್ಲಿಗೆ ನುಗ್ಗಲಾರಂಭಿಸುತ್ತಾರೆ.

ಅಲ್ಲಿ ತೆಗೆದ ಫೋಟೋ-ವಿಡಿಯೋಗಳನ್ನು ಶೇರ್ ಮಾಡಲಾರಂಭಿಸುತ್ತಾರೆ. ಸಹಜವಾಗಿ ಆ ಜಾಗ ಒಬ್ಬರ ಮೊಬೈಲಿನಿಂದ ಮತ್ತೊಬ್ಬರ ಮೊಬೈಲಿಗೆ ಹಾರಲಾರಂಭಿಸುತ್ತದೆ. ಒಂದು ಪ್ರಮಾಣದ ವೈರಲ್ ಆಗುತ್ತದೆ. ಗೂಗಲ್‌ನಲ್ಲಿ ಅತಿಹೆಚ್ಚು ಜನ ಹುಡುಕಿದ ತಾಣ ಯಾವುದು ಎಂಬ ಪಟ್ಟಿಯಲ್ಲೂ ಆ ಜಾಗ
ಕಾಣಿಸಿ, ಮತ್ತಷ್ಟು ಜನ ನುಗ್ಗಲಾರಂಭಿಸುತ್ತಾರೆ. SಜಿmZbqಜಿoಟ್ಟ ಮತ್ತು ಮೇಕ್ ಮೈ ಟ್ರಿಪ್, ಅಗೋಡಾ ಮುಂತಾದ ಜನಪ್ರಿಯ ಆಪ್‌ಗಳಲ್ಲೂ ಆ ಜಾಗ ಇಣುಕಲಾರಂಭಿಸಿದರೆ ಮುಗಿದೇಹೋಯಿತು.

ಮೂರ್ನಾಲ್ಕು ತಿಂಗಳ ಅವಧಿಯಲ್ಲಿ ಆ ಜಾಗಕ್ಕೆ ಕಾಲಿಡಲು ಸಹ ಆಗದೇ, ಎಲ್ಲಿ ನೋಡಿದರೂ ಪ್ಲಾಸ್ಟಿಕ್ ಬ್ಯಾಗ್, ಬಾಟಲಿ, ಚಿಪ್ಸ್ ಪ್ಯಾಕೆಟ್, ಬಿಯರ್ ಬಾಟಲಿ, ಕಸ-ಕಡ್ಡಿ, ಹೊಲಸುಗಳಿಂದ ತುಂಬಿ ಹೋಗಿ ಸತ್ಯನಾಶವಾಗಿಬಿಡುತ್ತದೆ. ಒಂದು ವೇಳೆ ಯಾವುದೋ ಒಂದು ಊರಿನಲ್ಲಿ ಒಂದು ಮರವಿದೆ, ಆ ಮರಕ್ಕೆ ತಾಯತ ಕಟ್ಟಿದರೆ ಮಕ್ಕಳಾಗುತ್ತಾರೆ, ಬಳೆ ಕಟ್ಟಿದರೆ ಶಾಶ್ವತ ಮುತ್ತೈದೆ ಭಾಗ್ಯ ಸಿಗುತ್ತದೆ, ಬೀಗ ಕಟ್ಟಿದರೆ ದಾಂಪತ್ಯ ಜೀವನ ಸುಧಾರಿಸುತ್ತದೆ, ಕಾಯಿ ಒಡೆದರೆ ಮಕ್ಕಳು ಬುದ್ಧಿವಂತರಾಗುತ್ತಾರೆ ಎಂದು ಆ ಮರದ ಫೋಟೋ ಹಾಕಿಬಿಡಿ, ಇನ್ನೆರಡು ತಿಂಗಳಲ್ಲಿ ಆ ಮರ ಮರ್ ಗಯಾ! ಅದರಲ್ಲೂ ಆ ಊರಿಗೆ ಹೋಗಿ, ಎರಡು
ಅಡಿ ಅಗೆದರೆ ನಿಽ ಸಿಗುತ್ತದೆ ಎಂಬ ಷರಾ ಬರೆದರೆ, ಆ ಊರಲ್ಲಿ ಕಾಲಿಡಲೂ ಆಗುವುದಿಲ್ಲ.. ಬರೀ ಹೊಂಡಗಳೇ!

ಗಣಿಧಣಿಗಳು ಸೊಂಡೂರನ್ನು ಬಗೆದಂತೆ ಬಗೆದುಬಿಡುತ್ತಾರೆ. ಕೆಲವು ತಿಂಗಳುಗಳ ಹಿಂದೆ, ಉತ್ತರ ಪ್ರದೇಶದ ಇಬ್ಬರು ಯುಟ್ಯೂಬರುಗಳು ತಮಾಷೆಗಾಗಿ ತಮ್ಮ ಪಕ್ಕದ ಹಳ್ಳಿಯ ಗದ್ದೆಯಲ್ಲಿನ ಅರಲು ಮಣ್ಣನ್ನು ಮೆತ್ತಿಕೊಂಡರೆ ಚರ್ಮರೋಗ ವಾಸಿಯಾಗುತ್ತದೆ, ತ್ವಚೆ ಕಾಂತಿಯಿಂದ ಹೊಳೆಯುತ್ತದೆ ಎಂಬ ವಿಡಿಯೋವನ್ನು ಯುಟ್ಯೂಬ್‌ನಲ್ಲಿ ಹಂಚಿಕೊಂಡರು. ಆ ವಿಡಿಯೋ ಆಧರಿಸಿ, ‘ದೈನಿಕ ಭಾಸ್ಕರ್’ ಪತ್ರಿಕೆ ಸುದ್ದಿಮಾಡಿತು. ಆ ಸುದ್ದಿಯನ್ನು ಬೆನ್ನು ಹತ್ತಿ ‘ಆಜ್ ತಕ್’ ನ್ಯೂಸ್ ಚಾನೆಲ್
ವರದಿ ಮಾಡಿತು. ಒಂದೆರಡು ದಿನಗಳಲ್ಲಿ ಆ ಊರಿಗೆ ಧಾವಿಸಿ ಬರುವವರ ಸಂಖ್ಯೆ ಜಾಸ್ತಿಯಾಯಿತು. ಬಂದವರೆಲ್ಲ ಆ ಗದ್ದೆಯನ್ನು ಅಗೆದು ಮಣ್ಣನ್ನು ಗೋಣಿಚೀಲ, ಬುಟ್ಟಿಯಲ್ಲಿ ಸಾಗಿಸಲಾರಂಭಿಸಿದರು. ಎರಡು ತಿಂಗಳಲ್ಲಿ ಪಕ್ಕದಲ್ಲಿಯೇ ಒಂದು ‘ಸ್ಪಾ’ ತಲೆ ಎತ್ತಿತು. ಆ ಮಣ್ಣನ್ನು ಅಗೆದು, ಸಾಗಿಸುವುದಕ್ಕೆ ಸುಲಭವಾಗಲು ಜೆಸಿಬಿಗಳು ಆ ಗ್ರಾಮದತ್ತ ಹೊರಟವು.

ಆ ಗ್ರಾಮದ ಜನರಿಗೆ ತಮ್ಮೂರಿಗೆ ಈ ಪಾಟಿ ಜನ ಯಾಕೆ ಧಾವಿಸುತ್ತಿದ್ದಾರೆ ಎಂಬುದು ಅರ್ಥವಾಗುವ ಹೊತ್ತಿಗೆ ಕಾಲ ಮಿಂಚಿ ಹೋಗಿತ್ತು. ಸುಮಾರು ಐವತ್ತು ಎಕರೆ ಜಾಗದಲ್ಲಿ ಹತ್ತಾರು ದೊಡ್ಡ ದೊಡ್ಡ ಬಾವಿಗಳು, ಕಂಡ ಕಂಡಲ್ಲಿ ಕುಳಿಗಳು ನಿರ್ಮಾಣವಾಗಿದ್ದವು. ಅಲ್ಲಿ ಹೋಗಿ ಮೈತುಂಬಾ ಮಣ್ಣು ಮೆತ್ತಿಕೊಂಡವರು, ತಮ್ಮ ಅನುಭವಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರು. ಅವರ ತ್ವಚೆಯ ಕಾಂತಿ ಜಾಸ್ತಿ ಯಾಗದಿದ್ದರೂ, ಬೇರೆಯವರೂ ಬಕರಾ ಆಗಲಿ ಎಂದು, ‘ನೀವೂ ಮಣ್ಣನ್ನು ಮೆತ್ತಿಕೊಳ್ಳಿ’ ಎಂದು ಬರೆದರು. ಅದರಿಂದ ಮತ್ತಷ್ಟು ಜನ ನುಗ್ಗಲಾರಂಭಿಸಿದರು. ಇಬ್ಬರು ಉಪದ್ವ್ಯಾಪಿಗಳು ಮಾಡಿದ ತರಲೆ ವಿಡಿಯೋ ಒಂದು ಹಳ್ಳಿಯನ್ನೇ ಬಲಿ ತೆಗೆದುಕೊಂಡುಬಿಟ್ಟಿತು. ಒಂದು ನಯನಮನೋಹರ, ಸುಂದರ ಹಳ್ಳಿಯನ್ನು ನಾವೇ ಕೈಯಾರ ಕತ್ತು ಹಿಚುಕಿ
ಸಾಯಿಸುವುದು ಅಂದ್ರೆ ಇದು!

ನಮ್ಮ ಜನಕ್ಕೆ ಪ್ರವಾಸೋದ್ಯಮ ಅಂದ್ರೆ ಜವಾಬ್ದಾರಿಯುತ ಪ್ರವಾಸೋದ್ಯಮ ಎನ್ನುವುದು ಗೊತ್ತೇ ಇಲ್ಲ. ಪ್ರವಾಸೋದ್ಯಮ ಅಂದ್ರೆ ಮಜಾ ಮಾಡುವುದು ಎಂದೇ ಭಾವಿಸಿದ್ದಾರೆ. ಬೇರೆಯವರು ತೊಂದರೆ ಅನುಭವಿಸಿ ಸಾಯಲಿ, ನಾವು ಮಾತ್ರ ಸುಖ ಅನುಭವಿಸಿ ಬರಬೇಕು ಎಂದು ಭಾವಿಸುವವರೇ ಹೆಚ್ಚು. ಪ್ರೇಕ್ಷಣೀಯ ಸ್ಥಳಗಳಲ್ಲಿ ಗಲೀಜು ಮಾಡಬಾರದು, ಹೊಲಸು ಮಾಡಬಾರದು, ಗದ್ದಲ ಮಾಡಬಾರದು, ಕಸಗಳನ್ನು ಎಸೆಯಬಾರದು ಎಂಬ ಪ್ರಾಥಮಿಕ ಸಂಗತಿಯೂ ಗೊತ್ತಿರುವುದಿಲ್ಲ. ಬಿಯರ್ ಕುಡಿಯಲಿ, ಚಿಪ್ಸ್ ತಿನ್ನಲಿ, ಬಾಟಲಿಯಲ್ಲಿ ನೀರು ಕುಡಿಯಲಿ, ಯಾರೂ ಬೇಡ ಎನ್ನುವುದಿಲ್ಲ. ಆದರೆ ಕುಡಿದ ಗಾಜಿನ ಬಾಟಲಿಯನ್ನು
ಒಡೆಯುವುದೇಕೋ? ಪ್ಲಾಸ್ಟಿಕ್ ಬಾಟಲಿಯನ್ನು ಎಲ್ಲೆಂದರಲ್ಲಿ ಬಿಸಾಡುವುದೇಕೋ? ತಮ್ಮ ಈ ನಡೆಯಿಂದ ಸಾರ್ವಜನಿಕರಿಗೆ ಅದೆಷ್ಟು ತೊಂದರೆಯಾಗುತ್ತದೆ ಎಂಬುದನ್ನೂ ಇವರು ಯೋಚಿಸುವುದಿಲ್ಲ.

ಮ್ಯೂಸಿಕ್ ಹಚ್ಚಿಕೊಂಡು ಮದ್ಯ ಸೇವಿಸುತ್ತಾ ಕುಳಿತರೆ ಬೇರೆಯವರಿಗೆ ಕಿರಿಕಿರಿಯಾಗುತ್ತದೆ ಎಂಬುದನ್ನು ಗಮನಕ್ಕೆ ತೆಗೆದುಕೊಳ್ಳುವುದಿಲ್ಲ. ಪ್ರವಾಸಕ್ಕೆ ಹೋಗುವುದು ಅಂದ್ರೆ ಕುಡಿಯಲು ಹೋಗುವುದು, ಬೇಕಾಬಿಟ್ಟಿ ವರ್ತಿಸುವುದು ಎಂದೇ ಹಲವರು ಭಾವಿಸಿದ್ದಾರೆ. ಹೀಗಾಗಿ ಪ್ರತಿ ಪ್ರವಾಸಿ ತಾಣವನ್ನೂ ನರಕಸದೃಶ ಮಾಡಿಬಿಟ್ಟಿದ್ದೇವೆ. ಸುಂದರ ಸ್ಥಳಗಳೆಲ್ಲ ಹೊಲಸು, ಗಬ್ಬುನಾರುವ ತಾಣಗಳಾಗಿವೆ. ಯಾವ ತಾಣವೂ ನೋಡಲು ಯೋಗ್ಯವಾಗಿಲ್ಲದಂತೆ
ಕೆಟ್ಟದಾಗಿ ಇಟ್ಟುಕೊಂಡಿದ್ದೇವೆ. ಒಂದು ಊರು ಪ್ರವಾಸಿ ತಾಣವಾಗಿ ಅಭಿವೃದ್ಧಿಯಾದರೆ, ಅದನ್ನು ಕುಲಗೆಡಿಸುವುದು ಹೇಗೆ ಎಂಬುದು ನಮ್ಮ ಪ್ರವಾಸಿಗರಿಗೆ ಚೆನ್ನಾಗಿ ಗೊತ್ತು. ಈ ವಿಷಯದಲ್ಲೂ ಭಾರತ ವಿಶ್ವಗುರು!

ಅನುಮಾನವೇ ಇಲ್ಲ, ನಮ್ಮ ಪ್ರವಾಸೋದ್ಯಮಕ್ಕೆ ಪ್ರವಾಸಿಗರೇ ದೊಡ್ಡ ಶಾಪ! ನಾನು ಕಳೆದ ಮೂರು ತಿಂಗಳಲ್ಲಿ ಜರ್ಮನಿ (ಎರಡು ಬಾರಿ), ಲಂಡನ್, ಡೆನ್ಮಾರ್ಕ್, ಆಸ್ಟ್ರಿಯಾ, ಫ್ರಾನ್ಸ್, ಬೆಲ್ಜಿಯಂಗೆ ಹೋಗಿ ಬಂದೆ. ನಮಗಿಂತ ಹಿಂದುಳಿದ ಉಜ್ಬೇಕಿಸ್ತಾನ, ಕಜಖಸ್ತಾನ, ಕಿರಿಗಿಜ್‌ಸ್ತಾನದಲ್ಲೆಲ್ಲಾ ಸುತ್ತಾಡಿ ಬಂದೆ. ಒಂದೇ ಒಂದು ಬೆಂಕಿ ಕಡ್ಡಿ, ಬೀಡಿ ಪೊಟ್ಟಣ ಕೂಡ ರಸ್ತೆ ಯಲ್ಲಿ ಬಿದ್ದಿದ್ದನ್ನು ನೋಡಲಿಲ್ಲ. ಮುಸ್ಲಿಮರಿರುವ ಊರು ಗಲೀಜಾಗಿರುತ್ತವೆ ಎಂಬ ಪ್ರತೀತಿ ಇದೆ. ಆದರೆ ಬರೀ ಮುಸ್ಲಿಮರೇ ಇರುವ ಸೌದಿ ಅರೇಬಿಯಾದಲ್ಲೂ ಸುಮಾರು ಆರು ಸಾವಿರ ಕಿ.ಮೀ. ರಸ್ತೆ ಪ್ರವಾಸ ಮಾಡಿ ಬಂದೆ. ಅಲ್ಲಿಯೂ ಒಂದೇ ಒಂದು ಕಸ ಕಾಣಲಿಲ್ಲ. ಭಾರತದಲ್ಲಿ ಮಾತ್ರ ಎಲ್ಲ ಪ್ರವಾಸಿತಾಣಗಳೂ ಕಸದ ಗುಂಡಿಗಳೇ! ಅಂತಾರಾಷ್ಟ್ರೀಯ ಮಾನದಂಡದ ಪ್ರಕಾರ, ನಮ್ಮ ಎಲ್ಲ ಪ್ರವಾಸಿತಾಣಗಳೂ ದೇಶದ ಮಾನ-ಮರ್ಯಾದೆ ಹರಾಜು ಹಾಕುತ್ತವೆ.

ಅವುಗಳನ್ನು ಅಷ್ಟು ಚೆಂದವಾಗಿ ಇಟ್ಟುಕೊಂಡಿದ್ದೇವೆ! ಪ್ರವಾಸಿತಾಣ ಗಳ ಬಗ್ಗೆ ಸಾಮಾಜಿಕ ಜಾಲತಾಣಗಳು ಗೊತ್ತಿಲ್ಲದೇ ಮಾಡುವ ಅಪಚಾರದ ಬಗ್ಗೆ ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ಬರೆದಾಗ ಸುರೇಶಕುಮಾರ ಎಂಬುವವರು ಕಾಮೆಂಟ್ ಮಾಡಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದರು. ಅವರು ಕಾಲೇಜಿನಲ್ಲಿ ಓದುತ್ತಿದ್ದಾಗ ಅವರ ಕನ್ನಡ ಪ್ರಾಧ್ಯಾಪಕರಾಗಿದ್ದ ದೊಡ್ಡರಂಗೇಡರು ಹೇಳಿದ ಒಂದು ಘಟನೆಯನ್ನು ಪ್ರಸ್ತಾಪಿಸಿದ್ದರು- ಒಮ್ಮೆ ದೊಡ್ಡರಂಗೇಗೌಡರು ಹಾಗೂ ಅವರ
ಅಧ್ಯಾಪಕ ಮಿತ್ರರು ಜಪಾನ್ ದೇಶಕ್ಕೆ ಅಧ್ಯಯನ ಪ್ರವಾಸ ಕೈಗೊಂಡಿದ್ದರು. ಆಗ ಇವರು ಫುಟ್‌ಪಾತ್ ನಲ್ಲಿ ನಡೆದು ಹೋಗುತ್ತಿದ್ದಾಗ ಒಬ್ಬ ಜಪಾನಿ ವ್ಯಕ್ತಿ
ಇವರ ಹಿಂದೆ ಬರುತ್ತಿದ್ದನಂತೆ. ಅವನು ಯಾಕೆ ತಮ್ಮನ್ನು ಹಿಂಬಾಲಿಸುತ್ತಿದ್ದಾನೆ ಎಂಬ ಕುತೂಹಲ ಇವರಿಗೆ ಉಂಟಾಯಿತು. ಅದಕ್ಕೆ ಕಾರಣ ಏನು ಎಂದರೆ, ಇವರು ಕೆಲವು ಸಂದರ್ಭಗಳಲ್ಲಿ ನಮ್ಮ ದೇಶದ ಸಹಜ ರೂಢಿಯಂತೆ ಪೇಪರ್ ತುಣುಕು ಇತ್ಯಾದಿಗಳನ್ನು ಫುಟ್‌ಪಾತ್‌ನಲ್ಲಿ ಎಸೆಯುತ್ತಿದ್ದರು.

ಅವನು ಅದನ್ನು ಜೋಪಾನವಾಗಿ ಎತ್ತಿಕೊಂಡು ಡಸ್ ಬಿನ್ ಒಳಗೆ ಹಾಕುತ್ತಿದ್ದ. ಈ ಬಗ್ಗೆ ವಿಚಾರಿಸಿದಾಗ ಅವನು ಹೇಳಿದ್ದೇನೆಂದರೆ, ‘ಇದು ನನ್ನ ದೇಶ. ನನ್ನ
ದೇಶ ಯಾವಾಗಲೂ ಸ್ವಚ್ಛವಾಗಿರಬೇಕು. ಪರಿಸರ ನೈರ್ಮಲ್ಯ ಹಾಳಾದರೆ ಜನರ ಆರೋಗ್ಯ ಕೆಡುತ್ತದೆ. ಕೆಲವು ವಿದೇಶಿಯರು ನಮ್ಮ ಜಪಾನ್ ದೇಶದ
ಸಂಪ್ರದಾಯ ಗೊತ್ತಿಲ್ಲದೇ ಪೇಪರ್ ಚೂರು ಇತ್ಯಾದಿಗಳನ್ನು ರಸ್ತೆ ಬದಿಯಲ್ಲಿ ಎಸೆಯುತ್ತಾರೆ. ನಾವು ಅವರಿಗೆ ಏನನ್ನೂ ಹೇಳಲು ಹೋಗುವುದಿಲ್ಲ. ಆದರೆ ಜಪಾನ್ ದೇಶದ ಒಬ್ಬ ಪ್ರಜೆಯಾಗಿ ನಾನು ನನ್ನ ದೇಶವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎನ್ನುವ ಕಾರಣದಿಂದ ಈ ಕೆಲಸ ಮಾಡುತ್ತಿದ್ದೇನೆ’ ಎಂದು.
ಜಪಾನಿ ಪ್ರಜೆಯಂತೆ, ಬೇರೆಯವರು ಬಿಸಾಡಿದ ಕಾಗದದ ತುಣುಕುಗಳನ್ನು, ಕಸಗಳನ್ನು ನಾವು ಎತ್ತಬೇಕಿಲ್ಲ. ಆದರೆ ನಾವು ಕಸ ಬಿಸಾಡದಿದ್ದರೆ ಸಾಕು. ಕಂಡ ಕಂಡಲ್ಲಿ ಉಗುಳದಿದ್ದರೆ, ಮೂತ್ರ ವಿಸರ್ಜಿಸದಿದ್ದರೆ ಅದೇ ದೊಡ್ಡ ಸಮಾಜಸೇವೆ. ಇವನ್ನು ಬಿಟ್ಟು ಮತ್ತೇನೂ ಮಾಡಬೇಕಿಲ್ಲ.

ಬಂದವರೆಲ್ಲ ತಮ್ಮ ಪಾಲಿನ ಹೊಲಸನ್ನು ಸುರುವಿ ಹೋದರೆ, ಯಾವ ಪ್ರೇಕ್ಷಣೀಯ ಸ್ಥಳ ಸ್ವಚ್ಛವಾಗಿದ್ದೀತು? ಜೋರಾಗಿ ಮ್ಯೂಸಿಕ್ ಹಾಕಿಕೊಂಡು ಗಲಾಟೆ ಮಾಡುವವರು ಮತ್ತು ಕುಡಿದು ಬಾಟಲಿ ಒಡೆದು ಬರುವವರು, ಆ ಕೆಲಸವನ್ನು ತಮ್ಮ ಮನೆಯಲ್ಲಿಯೇ ಮಾಡಬಹುದು. ಅದೂ ದೇಶಸೇವೆಯೇ. ಪ್ರೇಕ್ಷಣೀಯ ಅಥವಾ ಪ್ರವಾಸಿ ತಾಣಗಳಲ್ಲಿ ಇನ್ನಷ್ಟು ಜವಾಬ್ದಾರಿಯಿಂದ ವರ್ತಿಸೋಣ. ಕೇವಲ ಸ್ಥಳಗಳಷ್ಟೇ ಅಲ್ಲ, ನಮ್ಮ ನಡೆಯೂ ಪ್ರೇಕ್ಷಣೀಯ ಆಗಿರಬೇಕಲ್ಲವೇ?!