Sunday, 15th December 2024

ಅನಂತನ ಅವಾಂತರ

ತುಂಟರಗಾಳಿ

ಸಿನಿಗನ್ನಡ

ನಟ, ನಿರ್ದೇಶಕ ದುನಿಯಾ ವಿಜಯ್ ಮತ್ತೊಮ್ಮೆ ತಮ್ಮ ಹುಟ್ಟುಹಬ್ಬವನ್ನು ಸಾರ್ಥಕ ಪಡಿಸಿಕೊಂಡಿದ್ದಾರೆ. ಈ ಬಾರಿ ಕೂಡಾ ಅವರು ಅಸಹಾಯಕ ಖೈದಿಗಳನ್ನು
ಬಿಡುಗಡೆಗೊಳಿಸುವ ಕೆಲಸ ಮಾಡಿದ್ದಾರೆ. ಕೆಲವು ಅಪರಾಧ ಪ್ರಕರಣಗಳಲ್ಲಿ ಅನವಶ್ಯಕವಾಗಿ ಸಿಕ್ಕಿ ಹಾಕಿಕೊಂಡು, ಫೈನ್ ಕಟ್ಟಿ ಜೈಲಿಂದ ಹೊರಗೆ
ಬರೋಕೆ ಆಗದೇ ಇರೋ ಪರಿಸ್ಥಿತಿ ಯಲ್ಲಿ ಇರೋರಿಗೆ ಸಹಾಯ ಮಾಡುವ ದುನಿಯಾ ವಿಜಯ್ ಅವರ ಗುಣದ ಬಗ್ಗೆ ಎಲ್ಲರಿಗೂ ಗೊತ್ತು. ಅವರು ಈ ಮುನ್ನ
ಕೂಡಾ ಇಂಥ ಕೆಲಸ ಮಾಡಿದ್ದರು. ಈ ಬಾರಿ ಕೂಡಾ ತಮ್ಮ ೫೦ನೇ ಹುಟ್ಟುಹಬ್ಬದ ಪ್ರಯುಕ್ತ ೬ ಜನ ಅಸಹಾಯಕ ಖೈದಿಗಳನ್ನು ಜೈಲಿನಿಂದ ಬಿಡಿಸಿ ಅವರನ್ನು ಕತ್ತಲ ಲೋಕದಿಂದ ಮತ್ತೊಮ್ಮೆ ಈ ದುನಿಯಾಗೆ ವಾಪಸ್ ಬರುವಂತೆ ಮಾಡಿದ್ದಾರೆ ವಿಜಯ.

ಜೊತೆಗೆ ಮತ್ತೆ ಇಂಥ ಪ್ರಕರಣಗಳಲ್ಲಿ ಭಾಗಿ ಆಗದೇ ಇರುವಂತೆ ವ್ಯಕ್ತಿತ್ವ ಬೆಳೆಸಿಕೊಳ್ಳಿ ಅನ್ನೋ ಪ್ರೀತಿಯ ಎಚ್ಚರಿಕೆಯ ಮಾತನ್ನೂ ಅವರಿಗೆ ಹೇಳಿದ್ದಾರೆ. ಹುಟ್ಟುಹಬ್ಬ ಅಂದ್ರೆ ಕೇವಲ ಆಡಂಬರ ಅಷ್ಟೇ ಅಲ್ಲ, ಆ ಸಮಯದಲ್ಲಿ ಇನ್ನೊಬ್ಬರಿಗೆ ನೆರವಾಗುವ ಮಾನವೀಯ ಅಂಶಗಳನ್ನೂ ಸೇರಿಸಿಕೊಳ್ಳಬಹುದು ಅನ್ನೋದು
ದುನಿಯಾ ವಿಜಯ್ ಅವರ ಈ ವರ್ತನೆಯಿಂದ ಗೊತ್ತಾಗುತ್ತದೆ. ಇದು ಬಹಳಷ್ಟು ಸೆಲೆಬ್ರಿಟಿಗಳಿಗೆ ಮಾದರಿ ಕೂಡಾ. ವಿಜಯ್ ಅವರನ್ನು ನೋಡಿ ಇನ್ನೊಂದಷ್ಟು ಜನ ದೊಡ್ಡವರು ಸಮಾಜಮುಖಿ ಕೆಲಸಗಳನ್ನು ಮಾಡಿದರೆ, ಅದು ಈ ದುನಿಯಾದಲ್ಲಿ ಇನ್ನೂ ಮಾನವೀಯತೆ ಉಳಿದಿದೆ ಅನ್ನೋದಕ್ಕೆ ಸಾಕ್ಷಿ ಆಗುತ್ತದೆ.

ಲೂಸ್ ಟಾಕ್: ಅನಂತ್ ಕುಮಾರ್‌ ಹೆಗಡೆ

ಏನ್ ಹೆಗಡೆ ಅವ್ರೇ, ಸ್ವಲ್ಪ ವರ್ಷ ಗ್ಯಾಪ್ ಕೊಟ್ಟು ವಾಪಸ್ ಬಂದೋರು, ಮತ್ತೆ ಬಾಯಿಗ್ ಬಂದಂಗೆ ಮಾತಾಡೋ ಅದೇ ಚಾಳಿ ಮುಂದುವರಿಸಿದ್ದೀರಲ್ಲ,
ಏನಿದು ಅನಂತನ ಅವಾಂತರ?

– ಏನ್ ಮಾಡೋಕಾಗಲ್ಲ, ಅದು ನನ್ನ ಹುಟ್ಟುಗುಣ, ಅದು ಎಂದೆಂದಿಗೂ ಅನಂತ, ಎಂದೆಂದಿಗೂ ಜೀವಂತ

ಹಾಗಂತ ನೀವು ಸಿಎಂ ಬಗ್ಗೆ ಹಾಗೆ ಮಾತಾಡೋದು ಸರಿನಾ?
– ಅವೆ ಗೊತ್ತಿಲ್ಲ, ನಮಗೆ ಸಿದ್ರಾಮನಿಗಿಂತ ಶ್ರೀರಾಮನೇ ಮುಖ್ಯ ಕಣ್ರೀ

ಹೋಗ್ಲಿ, ಇಷ್ಟು ವರ್ಷ ಎಲ್ಲಿದ್ರಿ, ಈಗ ರಾಮಮಂದಿರ ಉದ್ಘಾಟನೆ ಆಗೋ ಟೈಮಲ್ಲಿ ವಾಪಸ್ ಬಂದಿದ್ದೀರಲ್ಲ?
– ಹಾ, ವನವಾಸದಲ್ಲಿದ್ದೆ. ಶ್ರೀ ರಾಮನ ಥರ. ವನವಾಸದಿಂದ ವಾಪಸ್ ಬನ್ನಿ ಅಂತ ಯಾವ್ ಬೋ..

ಸಾರಿ ನಿಮ್ಮ ಜೊತೆ ಮಾತಾಡ್ತಾ ನಂಗೂ ನಿಮ್ ಭಾಷೆನೇ ಬರ್ತಾ ಇದೆ ನೋಡಿ
– ಹೌದು, ಅದು ಸಂಘ ದೋಷ.. ಅದ್ಸರಿ, ನಿಮ್ಮ ಈ ಸಂದರ್ಶನದ ಕಾಲಂಗೆ ಲೂಸ್ ಟಾಕ್ ಅಂತ ಯಾಕೆ ಹೆಸರಿಟ್ಟಿದ್ದೀರಾ?

ನಿಮ್ಮಂಥವರನ್ನೆ ಇಂಟವ್ಯೂರ್ ಮಾಡ್ಬೇಕಲ್ಲ ಅದಕ್ಕೆ. ಅದ್ ಬಿಡಿ, ರಾಮ ಮಂದಿರ ನಿರ್ಮಾಣ ಆದ್ಮೇಲೆ ಮತ್ತೆ ನೀವು ಸಂಸದ ಆಗ್ತೀರಾ?
– ಮಾತ ಮಂದಿರ ಕಟ್ಟೋನು ನಾನು, ಆಗದೇ ಇರ್ತೀನಾ?
(ಕಾಲ್ಪನಿಕ ಸಂದರ್ಶನ)

ನೆಟ್ ಪಿಕ್ಸ್

ಈ ಸುರಪಾನ ಬಂದಿದ್ದೇ ಸುರರಿಂದ, ಅಂದ್ರೆ ದೇವತೆ ಗಳಿಂದ ಅಲ್ವಾ. ಅವರೇ ನಮಗೆ ಇದನ್ನೆ ಕಲಿಸಿದ್ದು. ಅದಕ್ಕೇ ಹೆಂಡನ ಪರಮಾತ್ಮ ಅಂತಾರೋ ಏನೋ
ಗೊತ್ತಿಲ್ಲ. ಸರಿ, ಹಿಂಗೇ ಒಂದ್ಸಲ ದೇವಲೋಕದಿಂದ ನಾರದ ಭೂಮಿಗ್ ಬಂದಿದ್ದ. ಅವ್ನು ಅಲ್ಲಿ ಇಲ್ಲಿ ಬತ್ತಿ ಇಡೋ ಕೆಲ್ಸ ಮಾಡಿ ಸುಸ್ತಾಗಿ ಒಂದ್ ಬಾರಿಗೆ ಹೋಗಿ ಎಣ್ಣೆ ಕುಡಿಯೋಕ್ ಕೂತ್ಕೊಂಡ. ಅಲ್ಲಿ ಖೇಮು ವೆಯ್ಟರ್ ಕೆಲ್ಸ ಮಾಡ್ತಾ ಇದ್ದ. ನಾರದ ಬಂದ ಕೂಡಲೇ ಖೇಮು ಹೋಗಿ, ಸಾರ್ ಏನ್ ಕೊಡ್ಲಿ ಅಂದ. ಅದಕ್ಕೆ ನಾರದ ಒಂದ್ ಕ್ವಾಟರ್ ರಮ್ ಕೊಡಪ್ಪಾ ಅಂದ. ಸರಿ ಖೇಮು ಹೋಗಿ ತಂದುಕೊಟ್ಟ. ನಾರದ ಒಂದ್ ಫುಲ್ ಕ್ವಾಟರ್ ಕುಡಿದ. ಅವನಿಗೆ ಅದು ಏನೂ ಏರಲಿಲ್ಲ. ಸರಿ ಅಂತ ಖೇಮುನ ಕರೆದು ಇನ್ನೊಂದ್ ಕ್ವಾಟರ್ ತರಿಸಿದ.

ಕುಡಿದ. ಅದೂ ಏರಲಿಲ್ಲ. ಇನ್ನೊಂದಾಯ್ತು. ಫುಲ್ ಬಾಟ್ಲ್ ಆಯ್ತು. ನಾರದ ಸುಮ್ನೆ ಆಡರ್ ಮಾಡ್ತಾನೇ ಇದ್ದ. ಖೇಮು ತಂದ್ ಕೊಡ್ತಾ ಇದ್ದ. ಇವ್ನು ಕುಡಿತಾ ಇದ್ದ.
ಸರಿ, ಎರಡ್ ಪುಲ್ ಬಾಟ್ಲ್ ಆಯ್ತು. ವೆಯ್ಟರ್ ಖೇಮು ನೋಡ್ತಾನೇ ಇದ್ದ. ಇವ್ನು ಮತ್ತೆ ಇನ್ನೊಂದ್ ಕ್ವಾಟರ್ ಆಡರ್ ಮಾಡೋಕೆ ಖೇಮುನ ಕರೆದ.
ಖೇಮುಗೆ ಇವನು ಕುಡಿತಾ ಇರೋ ಪರಿ ನೋಡಿ ಸಿಕ್ಕಾಪಟ್ಟೆ ಆಶ್ಚರ್ಯ ಆಗಿತ್ತು. ಇನ್ನೊಂದ್ ಕ್ವಾಟರ್ ತಂದು ಕೊಟ್ಟು, ಸಾರ್, ನಂಗೆ ಒಂದ್ ಡೌಟು,
ನೀವು ಇಷ್ಟೊಂದ್ ಕುಡಿದ್ರೂ ನಿಮಗೆ ಒಂಚೂರೂ ಏರಿಲ್ಲವಲ್ಲ ಹೆಂಗೆ ಅಂದ. ಅದಕ್ಕೆ ನಾರದ, ಇ ಕಣಮ್ಮಾ, ಹೆಂಡ ಕುಡಿದ್ರೆ ಚಿತ್ತಾಗೋದು, ಕಿಕ್ ಹೊಡೆ ಯೋದು, ಏರೋದು, ಇದೆಲ್ಲ ಏನಿದ್ರೂ ಬರೀ ನಿಮ್ಮಂಥ ಮನುಷ್ಯ ರಿಗೆ, ನಾನು ನಾರದ, ದೇವಲೋಕ ದಿಂದ ಬಂದಿದೀನಿ ಅಂದ. ಆವಾಗ ವೆಯ್ಟರ್ ಖೇಮು ಅಂದ, ಹಾ, ಬಡ್ಡಿ ಮಗಂಗೆಇವಾಗ್ ಏರ್ತು ನೋಡು.

ಲೈನ್ ಮ್ಯಾನ್

ಆಟೋಗ್ರಾಫ್ ಹಾಕಿಸಿ ಕೊಳ್ಳುವ ಹುಚ್ಚು ಅತಿರೇಕಕ್ಕೆ ಹೋದರೆ ಬರುವ ಖಾಯಿಲೆ

– ಸೈನ್ ಫ್ಲೂ

ಒಂದು ಒಳ್ಳೆಯ ಉದ್ದೇಶಕ್ಕೆ ಸಹಿ ಸಂಗ್ರಹಿಸುವ ಅಭಿಯಾನ ಯಶಸ್ವಿಯಾದರೆ

– ಇಂಡಿಯಾ ಈಸ್ ಸೈನಿಂಗ್

ಅದಕ್ಕೆ ಬ್ರ್ಯಾಂಡ್ ಅಂಬಾಸಿಡರ್‌.

– ಸೈನಾ ನೆಹ್ವಾಲ್

ಆರ್ಟ್ ಬಿಡಿಸುವವನು ಆರ್ಟಿಸ, ಕೊನೆಗೆ ಅದರ ಕೆಳಗೆ ಸಹಿ ಮಾಡುವಾಗ
– ಸೈನ್-ಟಿಸ್ಟ್

ಆರ್ಟಿ ಕೊಡುವ ಆಟೋಗ್ರಾಫ್
– ಡಿ-ಸೈನ್

ನಾನು ಕೆಲಸ ಬಿಡ್ತಾ ಇದ್ದೀನಿ ಎಂದು ಬರೆದುಕೊಡುವಾಗ ಮಾಡುವ ಸಹಿ
– ರಿ-ಸೈನ್

ರಜಾ ಕೇಳಿ ಬರೆದ ಪತ್ರಕ್ಕೆ ಹಾಕುವ ಸಹಿ
– ರುಜು

ಆರ್ಟ್ ಆಫ್ ಸೈನಿಂಗ್ ಅನ್ನು ಏನಂತಾರೆ?
– ಸೈ

ಗಜಿಬಿಜಿ ಮಾಡದೆ ಎಲ್ಲರಿಗೂ ಅರ್ಥ ಆಗುವಂತೆ ಶಿಸ್ತಾಗಿ ಸೈನ್ ಮಾಡುವವನು
– ಸೈನಿಕ

ಇನ್ನೊಬ್ಬರ ಸೈನ್ ಅನ್ನು ಫೋರ್ಜರಿ ಮಾಡಿ ಜೈಲಿಗೆ ಹೋಗಿದ್ದು
– ಸಹಿ ಸುದ್ದಿ