Saturday, 14th December 2024

ಆರೋಗ್ಯ ತಪಾಸಣೆ ವ್ಯವಹಾರ ಎಲ್ಲೆ ಮೀರುತ್ತಿದೆಯೇ ?

ಅಭಿವ್ಯಕ್ತಿ

ಡಾ.ದಯಾನಂದ ಲಿಂಗೇಗೌಡ

ಬಿಸಿಸಿಐ ಅಧ್ಯಕ್ಷ ಮತ್ತು ಭಾರತೀಯ ತಂಡದ ಮಾಜಿ ನಾಯಕ ಸೌರವ್ ಗಂಗೂಲಿಯವರು ಇತ್ತೀಚೆಗೆ, ವ್ಯಾಯಾಮ ಮಾಡುವಾಗ ಲಘು ಹೃದಯಾಘಾತಕ್ಕೆ ಒಳಗಾಗಿದ್ದು ನಿಮಗೆ ಗೊತ್ತೇ ಇದೆ. ಆ ಸಂದರ್ಭದಲ್ಲಿ ಅವರು ಕೋಲ್ಕತಾದ ಆಸ್ಪತ್ರೆಗೆ ದಾಖಲಾಗಿದ್ದರು. ಹೃದಯದ ರಕ್ತನಾಳದ ಪರೀಕ್ಷೆ (ಆಂಜಿಯೋಗ್ರಾಮ) ಮಾಡಿದಾಗ, ಹೃದಯದ ಎ3 ರಕ್ತನಾಳಗಳಲ್ಲೂ ಅಡೆತಡೆ ಇದ್ದುದ್ದು
ತಿಳಿದುಬಂದಿತು.

ಮೊದಲ ಹಂತದಲ್ಲಿ ಎರಡು ಸ್ಟೆಂಟ್ ಅಳವಡಿಕೆ ಮಾತ್ರ ಮಾಡಲಾಯಿತು. ಆಸ್ಪತ್ರೆಯಿಂದ ಬಿಡುಗಡೆಯಾಗಿ ಒಂದು ವಾರದೊಳಗೆ ಮತ್ತೆ ಆಸ್ಪತ್ರೆಗೆ ಎದೆನೋವಿನಿಂದ ದಾಖಲಾದ ಸೌರವ್ ಗಂಗೂಲಿಯವರಿಗೆ ಉಳಿದ ರಕ್ತನಾಳಕ್ಕೂ ಸ್ಟೆಂಟ್ ಅಳವಡಿಕೆ ಮಾಡಲಾಯಿತು. ಸೌರವ್ ಗಂಗೂಲಿಗೆ ಚಿಕಿತ್ಸೆ ನೀಡಿದ ವೈದ್ಯರ ತಂಡದಲ್ಲಿ ಪ್ರಖ್ಯಾತರಾದ ವೈದ್ಯರಾದ ಡಾ.ದೇವಿಶೆಟ್ಟಿಯವರು ಕೂಡ ಇದ್ದರು. ಈ ಸಂದರ್ಭದಲ್ಲಿ ನೆರೆದಿದ್ದ ಪತ್ರಕರ್ತರೊಂದಿಗೆ ಮಾತನಾಡಿದ ಡಾ.ದೇವಿಶೆಟ್ಟಿ ಯವರು ‘ಸೌರವ್ ಗಂಗೂಲಿ ಅವರಿಗೆ ಆದ ಹೃದಯಾಘಾತ ಇಡೀ ಪ್ರಪಂಚದಲ್ಲಿ ಸಣ್ಣನೆಯ ನಡುಕ ಹುಟ್ಟಿಸಿದೆ.

48 ವರ್ಷದ ಕ್ರೀಡಾಪಟು, ಕುಡಿಯುವ ಅಥವಾ ಧೂಮಪಾನದಂಥ ದುರಭ್ಯಾಸ ವಿಲ್ಲದ, ನಿಯಮಿತ ವ್ಯಾಯಾಮ ಮಾಡಿ ಸದೃಢವಾಗಿರುವಂಥ ಮನುಷ್ಯನಿಗೆ ಹೃದಯಾಘಾತವಾಗುತ್ತದೆ ಅಂದರೆ ಏನು ಅರ್ಥ?. ಇದು ನಮ್ಮ ಇಂದಿನ ಆಧುನಿಕ ಜೀವನ ಶೈಲಿಗೆ ಕೊಡುತ್ತಿರುವ ಬೆಲೆ. ನೀವು ಎಷ್ಟು ಆರೋಗ್ಯಕರವಾದ ಜೀವನಶೈಲಿ ಹೊಂದಿದ್ದರೂ, ಎಷ್ಟೇ ಆರೋಗ್ಯವಂತರಾಗಿ ಕಂಡರೂ ಕೂಡ, ನಿಮಗೂ ಕೂಡ ಹೃದಯಾಘಾತವಾಗುವ ಸಾಧ್ಯತೆ ಇರುತ್ತದೆ.

ಆದ್ದರಿಂದ ಪ್ರತಿಯೊಬ್ಬ ಭಾರತೀಯರು ಕೂಡ ಹೃದಯಾಘಾತ ತಡೆಯುವುದಕ್ಕೆ ನಿಯಮಿತವಾಗಿ ಮುಂಜಾಗ್ರತಾ ತಪಾಸಣೆಗೆ
ಒಳಗಾಗಬೇಕು’ ಎಂದು ಕರೆ ನೀಡಿದರು. ಅಂದರೆ ಅವರ ಪ್ರಕಾರ ಪ್ರತಿಯೊಬ್ಬ ಭಾರತೀಯರು ಕೂಡ ನಿಯಮಿತವಾಗಿ
ಹೃದಯದ ತಪಾಸಣೆಯನ್ನು ಆಸ್ಪತ್ರೆಗಳಲ್ಲಿ ಮಾಡಿಸಿಕೊಳ್ಳಬೇಕು ಎಂಬುದಾಗಿತ್ತು.

ಡಾ.ದೇವಿ ಶೆಟ್ಟಿ ಅವರು ಆಡಿದ ಮಾತಿನಲ್ಲಿ ಮೇಲ್ನೋಟಕ್ಕೆ ಯಾವುದೇ ತಪ್ಪು ಕಾಣಿಸುವುದಿಲ್ಲ. ಅದರಲ್ಲಿ ಜನಪರ ಕಾಳಜಿ
ಇರುವಂತೆ ಕಾಣುವಂತಿದೆ . ಈ ಸಂದರ್ಭವನ್ನು ಅವರು ಹೃದಯಾಘಾತದ ತಡೆಗಟ್ಟುವ ಬಗ್ಗೆ ಜಾಗೃತಿ ಮೂಡಿಸಿದ್ದಾರೆ
ಎಂದು ಅನ್ನಿಸಬಹುದು. ಆದರೆ ಇಲ್ಲಿ ಗಮನಿಸಬೇಕಾದುದು, ಅವರು ಸಾಮಾನ್ಯ ರಕ್ತ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು
ಎಂದು ಕರೆ ಕೊಡುತ್ತಿಲ್ಲ. ಅವರು ಕರೆ ಕೊಡುತ್ತಿರುವುದು ಉನ್ನತ ಮಟ್ಟದ ದುಬಾರಿ ಪರೀಕ್ಷೆಗಳ ಮಾಡಿಸಿಕೊಳ್ಳಿ ಎಂದು.

ಈ ವಿಷಯದ ಗಾಂಭೀರ್ಯತೆ ಅರ್ಥ ಮಾಡಿಸಿಕೊಳ್ಳುವ ಒಂದು ಉದಾಹರಣೆ ಗಮನಿಸೋಣ. ನಿಮ್ಮ ಕಾರಿಗೆ ಪ್ರತಿವರ್ಷ
ಸರ್ವಿಸಿಂಗ್ ಮಾಡಿಸಬೇಕಾಗುತ್ತದೆ ಎಂದಿಟ್ಟುಕೊಳ್ಳೋಣ. ನಿಮ್ಮ ಮೆಕ್ಯಾನಿಕ್ ‘ವರ್ಷದಲ್ಲಿ ಒಂದು ಬಾರಿ ಬರೀ ಎಣ್ಣೆ
ಬದಲಾಯಿಸಿ ಸರ್ವಿಸ್ ಮಾಡಿದರೆ ಸಾಕಾಗುವುದಿಲ್ಲ. ಪ್ರತಿ ತಿಂಗಳು ಸರ್ವಿಸ್ ಮಾಡಿಸಬೇಕು. ಇಷ್ಟೇ ಅಲ್ಲ. ಕಾರಿನ ಇಂಜಿನ್
ನನ್ನು ಬಿಚ್ಚಿ ಪ್ರತ್ಯೇಕವಾಗಿ ಪರೀಕ್ಷಿಸಬೇಕು’ಎಂದು ಸಲಹೆ ಕೊಟ್ಟ ಎಂದುಕೊಳ್ಳೋಣ.

ಇದಕ್ಕೆ ಗ್ರಾಹಕರ ಸಾವಿರಾರು ರುಪಾಯಿಗಳು ಖರ್ಚಾಗುತ್ತದೆ. ಮಾತ್ರವಲ್ಲದೆ ಮಾನವ ಸಂಪನ್ಮೂಲ ಕೂಡ ವ್ಯಹಿಸಬೇಕಾಗುತ್ತದೆ. ಹಾಗೆ ಮಾಡಿದರೂ ಕೂಡ ಮೆಕಾನಿಕ್ ಲಕ್ಷದಲ್ಲಿ ಒಂದು ಕಾರಿನ ಸಮಸ್ಯೆಯನ್ನು ಕಂಡುಹಿಡಿಯಬಹುದು. ಲಕ್ಷದಲ್ಲಿ ಒಂದು ಕಾರಿನ ದೋಷ ವನ್ನು ಕಂಡುಹಿಡಿಯುವುದಕ್ಕೆ, ಮಿಕ್ಕ ಲಕ್ಷ ಜನ ಖರ್ಚು ಮಾಡುವುದು ತರವೇ ಎಂಬ ಪ್ರಶ್ನೆ ಮೂಡುತ್ತದೆ. ಇದನ್ನೇ ರಿಸ್ಕ್ ಅಂಡ್ ಬೆನಿಫಿಟ್ ಅನಾಲಿಸಿಸ್ ಅನ್ನುತ್ತಾರೆ. ಯಾವುದಾದರೂ ಸಮುದಾಯ ಮಟ್ಟದಲ್ಲಿ ತಪಾಸಣೆಗೆ
ಸಲಹೆ ನೀಡಬೇಕಾದರೆ ಕೆಲವೊಂದು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಸ್ಕ್ರೀನಿಂಗ್ ಪರೀಕ್ಷೆಯ ಖರ್ಚು ಕಡಿಮೆ ಇರಬೇಕು, ನಿರ್ದಿಷ್ಟ ರೋಗದ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇರಬೇಕು, ರೋಗಕ್ಕೆ ಆರಂಭಿಕ ಹಂತದ ಚಿಕಿತ್ಸೆ ನೀಡಿದರೆ ರೋಗಿಯ ಆಯಸ್ಸು ಅಥವಾ ಜೀವನದ ಗುಣಮಟ್ಟ ವೃದ್ಧಿಸಬೇಕು ಎಂಬ ಇತ್ಯಾದಿ ನಿಯಮಗಳಿವೆ. ಈ ದೃಷ್ಟಿಯಲ್ಲಿ ನೋಡಿದರೆ ಸಾರ್ವಜನಿಕರು ದೈಹಿಕ ತಪಾಸಣೆ, ರಕ್ತದೊತ್ತಡ, ಮಧುಮೇಹ, ಕೊಲೆಸ್ಟ್ರಾಲ್ ಇಂಥ ಸಾಮಾನ್ಯ ರಕ್ತ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದರಲ್ಲಿ ಯಾವುದೇ ತೊಂದರೆ ಇಲ್ಲ. ಇವೆಲ್ಲವನ್ನು ಕೂಡ ಸೌರವ್ ಗಂಗೂಲಿಯವರು ಕೂಡ ಎಷ್ಟೋ ಬಾರಿ ಒಳಗಾಗಿದ್ದಾರೆ.

ಆದರೆ ಡಾ.ದೇವಿಶೆಟ್ಟಿಯವರು ಹೇಳುತ್ತಿರುವುದು ಈ ಸಾಮಾನ್ಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳಿ ಅಂತ ಅಲ್ಲ. ಇಸಿಜಿ,
ಎಕೊಕಾರ್ಡಿಯೋಗ್ರಾಮ್ ಅಥವಾ ಸಿಟಿ ಆಂಜಿಯೋಗ್ರಾಮ್ ಗಳಂಥ ಉನ್ನತ ಮಟ್ಟದ ಪರೀಕ್ಷೆಗಳನ್ನು ಮಾಡಿಸಿಕೊಳ್ಳಿ ಎಂದು.
ಇಸಿಜಿಗಳ ರಿಪೋರ್ಟ್ ಬರೆಯುವಾಗ ರೋಗಿಯ ರೋಗ ಲಕ್ಷಣಗಳನ್ನು ಗಮನದಲ್ಲಿ ತೆಗೆದುಕೊಂಡೆ ಬರೆಯಬೇಕಾಗುತ್ತದೆ.
ಯಾವುದೇ ರೋಗ ಲಕ್ಷಣಗಳು ಇಲ್ಲದ ವ್ಯಕ್ತಿಗೆ ಇಸಿಜಿ ಮಾಡಿದರೆ, ಬಹಳಷ್ಟು ಅನಾವಶ್ಯಕ ವಿಷಯಗಳು ಸೇರಿಕೊಂಡು,
ಈ ಪರೀಕ್ಷೆಯ ಉಪಯುಕ್ತತೆ ಕಡಿಮೆಯಾಗುವ ಸಾಧ್ಯತೆಗಳು ಹೆಚ್ಚಿರುತ್ತದೆ.

ಅನಾವಶ್ಯಕ ವಿಷಯಗಳನ್ನು ಚಿಕಿತ್ಸೆ ನೀಡುವ ವೈದ್ಯ ಅಲಕ್ಷಿಸದೇ ಹೋದರೆ, ಇನ್ನು ಹೆಚ್ಚಿನ ಪರೀಕ್ಷೆಗೆ ಒಳಗಾಗುವ ಸಂದರ್ಭ ಗಳು ಹೆಚ್ಚಾಗಬಹುದು. ಹಲವಾರು ಅಧ್ಯಯನಗಳ ಪ್ರಕಾರ, ಯಾವುದೇ ಗುಣಲಕ್ಷಣವಿಲ್ಲದ ಮನುಷ್ಯರಲ್ಲಿ, ನಿಯಮಿತವಾಗಿ ಇಸಿಜಿ ಮಾಡಿಸುವುದು ಅಥವಾ ಸಿಟಿ ಆಂಜಿಯೋಗ್ರಾಮ್ ಅಥವಾ ಎಕೋ ಕಾರ್ಡಿಯೋಗ್ರಫಿಗಳನ್ನು ಮಾಡುವುದರಿಂದ, ವ್ಯಕ್ತಿಗಳ ಆಯುಷ್ಯ ಅಥವಾ ಜೀವನ ಮಟ್ಟವನ್ನು ಹೆಚ್ಚಿಸಲು ಸಾಧ್ಯವಿಲ್ಲ.

ಆರೋಗ್ಯವಂತ ಸಾರ್ವಜನಿಕ ವ್ಯಕ್ತಿಗಳಲ್ಲಿ ಬಿಡಿ, ಯಾವುದೇ ಆಪರೇಷನ್ ಮಾಡುವ ಮುಂಚೆ ಕೂಡ ರೋಗಿಗೆ ಹೃದಯದ
ಯಾವುದೇ ಗುಣಲಕ್ಷಣಗಳು ಇಲ್ಲದಿದ್ದರೆ ಇಸಿಜಿಯನ್ನೇ ಮಾಡಿಸುವುದನ್ನು ಅನಾವಶ್ಯಕ ಎಂದೇ ಪರಿಗಣಿಸಲಾಗುತ್ತದೆ.
ಅಂತಹದರಲ್ಲಿ ಸಾರ್ವಜನಿಕರಿಗೆ ಎಲ್ಲರೂ ನಿಯಮಿತವಾಗಿ ಇಂತಹ ಮುಂದುವರೆದ ಪರೀಕ್ಷೆಗಳನ್ನು ಮಾಡಿಸಿ ಎಂದರೆ
ಒಪ್ಪಬಹುದೆ?. ಇಂತಹ ಮುಂದುವರೆದ ಪರೀಕ್ಷೆಗಳನ್ನು ಸಣ್ಣ ವಯಸ್ಸಿನವರಿಗೆ ಮಾಡಿಸಬೇಕಾದರೆ , ಅನುವಂಶಿಕ ಅಕಾಲಿಕ
ಹೃದಯಾಘಾತವೋ , ವಿಪರೀತ ಧೂಮಪಾನ , ದೀರ್ಘಕಾಲಿಕ ಸಕ್ಕರೆಕಾಯಿಲೆ ಯಂತ ಬಲವಾದ ಕಾರಣಗಳು ಬೇಕಾಗುತ್ತವೆ.

ಯಾವುದೇ ದೇಶದ ವೈದ್ಯಕೀಯ ಸಂಸ್ಥೆಗಳು ಇಂತಹ ಮಧ್ಯ ವಯಸ್ಕರಿಗೆ ಹೃದಯ ಸಂಬಂಧಿ ಪರೀಕ್ಷೆ ಮಾಡಿಸಲು ಸಲಹೆ
ನೀಡಿಲ್ಲ . ದೇವಿಶೆಟ್ಟಿಯವರ ಈ ಸಲಹೆಗೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ ಎಂದು ಹೇಳಲು ಅಡ್ಡಿಯಿಲ್ಲ. ಅನಾವಶ್ಯಕ ಪರೀಕ್ಷೆಗಳು ಇಂದಿನ ಆಧುನಿಕ ವೈದ್ಯಪದ್ಧತಿಗೆ ಅಂಟಿದ ಶಾಪ ಎಂದರೆ ತಪ್ಪಾಗಲಾರದು. ಯಾವುದೋ ತೊಂದರೆಯಿಂದ ಆಸ್ಪತ್ರೆಗೆ ಬರುವ ರೋಗಿಗಳಿಗೆ ಅನಾವಶ್ಯಕ ರಕ್ತ ಪರೀಕ್ಷೆಗಳಿಗೆ ಮಾಡಿಸುವುದಕ್ಕೆ ಕನಿಷ್ಠ ಪಕ್ಷ ಯಾವುದಾದರೂ ಒಂದು ಸಕಾರಣ ವಿಚಾರಬಹುದು.

ಕೆಲವೊಮ್ಮೆ ವೈದ್ಯರುಗಳ ಅನುಭವ ಕೊರತೆ, ಕೆಲವೊಮ್ಮೆ ಕಾನೂನು ತೊಂದರೆ ತಪ್ಪಿಸಿಕೊಳ್ಳಲು ದಾಖಲೆ ಸೃಷ್ಟಿಗೆ , ಕಾಯಿಲೆ ಯಾವುದು ಎಂದು ಗೊತ್ತಾಗದೆ ಇರುವುದು, ಆದಾಯಕ್ಕೆ ಹೆಚ್ಚಳಕ್ಕೆ ಆಡಳಿತ ಮಂಡಳಿಗಳ ಒತ್ತಡ ಅಥವಾ ಲ್ಯಾಬೋರೇಟರಿ ಗಳು ಕೊಡುವ ಕಮಿಷನ್ ಆಸೆ ಮುಂತಾದವುಗಳು ಕಾರಣವಾಗಿರಬಹುದು. ಇಂತಹ ಅನಾವಶ್ಯಕ ಪರೀಕ್ಷೆಗಳ ಮುಂದುವರಿದ
ಮತ್ತೊಂದು ರೂಪವೇ ಮುಂಜಾಗ್ರತ ಆರೋಗ್ಯ ತಪಾಸಣೆಗಳು (ಪ್ರೆವೆಂಟಿವ್ ಹೆಲ್ತ್ ಚೆಕ್) . ಇವುಗಳಲ್ಲಿ ದೈಹಿಕ ತಪಾಸಣೆ,
ಬಿಪಿ, ಸಕ್ಕರೆ ಕಾಯಿಲೆ , ಕೊಲೆಸ್ಟ್ರಾಲ್‌ನಂಥ, ಮ್ಯಾಮೋಗ್ರಾಮ್ ನಂಥ ಸಾಮಾನ್ಯ ರಕ್ತ ಪರೀಕ್ಷೆಗಳನ್ನು ಮಾಡುವುದಕ್ಕೆ ಬಹುಶಃ
ಯಾವುದೇ ಅಡ್ಡಿ ಇಲ್ಲ.

ಆದರೆ ನೀವು ಯಾವುದೇ ಕಾರ್ಪೊರೇಟ್ ಆಸ್ಪತ್ರೆಗಳನ್ನು ಗಮನಿಸಿ, ಹೆಲ್ತ ಚೆಕ್‌ಗಳ ವಿವಿಧ ದೊಡ್ಡ ಪ್ಯಾಕೇಜ್ ಪಟ್ಟಿಯನ್ನೇ ಕೊಡುತ್ತಾರೆ. ಅವುಗಳಲ್ಲಿ ಕೆಲವೊಂದು ಸಾವಿರ ರುಪಾಯಿಗಳಿಂದ ಹಿಡಿದು ಲಕ್ಷದವರೆಗೂ ಪರೀಕ್ಷೆ ಮಾಡುವ ಅವಕಾಶ ಇರುತ್ತದೆ. ಕೆಲವೊಂದು ಆಸ್ಪತ್ರೆಗಳಲ್ಲಿ ತಲೆಯಿಂದ ಕಾಲಿನವರೆಗೆ ಮಾಡುವ ಎಮ್‌ಆರ್‌ಐ (ಹೋಲ್ ಬಾಡಿ ಎಂಆರ್‌ಐ), ಮ್ಯಾಮೋಗ್ರಾಮ್‌ನ ಬದಲು ಸ್ತನದ ಎಂಆರ್ ಐ, ಸಿಟಿ ಕೊರೋನರಿ ಆಂಜಿಯೋಗ್ರಾಫಿಯಂಥ ಅತ್ಯಾಧುನಿಕ ಪರೀಕ್ಷೆಗಳನ್ನು ಹೆಲ್ತ ಚೆಕ್‌ನಲ್ಲಿ ಸೇರಿಸುವ ಮೂಲಕ ದುರುಪಯೋಗ ಇನ್ನೊಂದು ಮಟ್ಟಕ್ಕೆ ಹೋಗಿದೆ.

ಸಾಮಾನ್ಯವಾಗಿ ಮಾಡುವ ರಕ್ತ ಪರೀಕ್ಷೆಗಳನ್ನು ಹೊರತುಪಡಿಸಿ ಹೇಳುವುದಾದರೆ, ಸಮುದಾಯದ ಮಟ್ಟದಲ್ಲಿ ಮುಂದುವರಿದ ಪರೀಕ್ಷೆಗಳನ್ನು ಮಾಡಿದರೆ ಅನುಕೂಲಕ್ಕಿಂತ , ಅನಾನುಕೂಲಗಳು ಹೆಚ್ಚು. ಹಣವಿದ್ದವರು ಇಸಿಜಿ ಅಥವಾ ಎಕಾಕಾರ್ಡಿಯೋಗ್ರಂಗಳನ್ನು ಸುಮ್ಮನೆ ಮಾಡಿಸಿಕೊಂಡರೆ ಏನು ತಪ್ಪು ಎಂದು ನೀವು ಕೇಳಬಹುದು.

ಆರೋಗ್ಯವಂತ ವ್ಯಕ್ತಿಗಳಲ್ಲಿ ಇಂತಹ ಪರೀಕ್ಷೆಗಳನ್ನು ಮಾಡಿಸಿದಾಗ ಕೆಲವೊಮ್ಮೆ ತಪ್ಪಾಗಿ ರೋಗ ನಿರ್ಣಯ ವಾಗಬಹುದು ಅಥವಾ ಆರಂಭಿಕ ಹಂತದ ರೋಗವನ್ನು ಕಂಡು ಹಿಡಿಯದೇ ಇರಬಹುದು. ಇದರಿಂದ ಮತ್ಯಾವುದೋ ಟೆಸ್ಟುಗಳನ್ನು ಮಾಡಬೇಕಾದ ಅವಶ್ಯಕತೆ ಬರಬಹುದು, ಅಲ್ಲದೆ ಅನಾವಶ್ಯಕ ಮನಸ್ಸಿನ ದುಗುಡಕ್ಕೆ ಕಾರಣವಾಗಬಹುದು. ಒಂದು ರೀತಿ ಹಣವು ವ್ಯರ್ಥ. ಆದ್ದರಿಂದ ಯಾವುದೇ ಉಪಯೋಗವೂ ಇಲ್ಲ ಎಂದರೆ ತಪ್ಪಾಗಲಾರದು.

ತನ್ನಲ್ಲಿರುವ ನುರಿತ ವೈದ್ಯರನ್ನು ಉಪಯೋಗಿಸಿಕೊಂಡು, ಕ್ಲಿಷ್ಟ ಕೇಸುಗಳಿಗೆ ಚಿಕಿತ್ಸೆ ನೀಡಬೇಕಾಗಿದ್ದ ದೊಡ್ಡದೊಡ್ಡ
ಕಾರ್ಪೊರೇಟ್ ಆಸ್ಪತ್ರೆಗಳು ಇಂದು ನಿಜವಾದ ರೋಗಿಗಳಿಂದ ವಿಮುಖವಾಗಿ, ಆರೋಗ್ಯವಂಥ ಜನರನ್ನು ಗುರಿ ಮಾಡಿಕೊಂಡಿವೆ. ದೊಡ್ಡ ಕಾರ್ಪೊರೇಟ್ ಆಸ್ಪತ್ರೆಗಳಿಗೆ ರೋಗಿಗಳಿಂದ ಬರುವ ಹಣ ಸಾಕಾಗದೆ, ವ್ಯಾಪಾರ ವಿಸ್ತರಣೆಗೆ ಆರೋಗ್ಯವಂತ ಜನರ ಕಡೆ ಮುಖ ಮಾಡುತ್ತಿದ್ದಾರೆ. ಕಾರ್ಪೊರೇಟ್ ಆಸ್ಪತ್ರೆಗಳಲ್ಲಿ ‘ಹೆಲ್ತ ಚೆಕ್’ ಗ್ರಾಹಕರಿಗೆ ಕೊಡುವ ಮಹತ್ವ, ನಿಜವಾದ ರೋಗಿಗಳಿಗೆ ಸಿಗುತ್ತಿಲ್ಲ. ಹೆಲ್ತ್ ಚೆಕ್ ಮಾಡಿಸಲು ಬಂದವರಿಗೆ ಊಟ, ಉಪಹಾರದ , ರಾಜಮರ್ಯಾದೆ , ಪ್ರಥಮ ಆದ್ಯತೆ ಮುಂತಾದ ಅನುಕೂಲ ಮಾಡಿಕೊಡಲಾಗುತ್ತದೆ.

ಆಸ್ಪತ್ರೆಗಳಲ್ಲಿ ನಿಜವಾದ ರೋಗಿ ಸಾಲಿನಲ್ಲಿ ಕಾಯುತ್ತಿದ್ದರೆ, ಹೆಲ್ತ ಚೆಕ್ ಮಾಡಿಸಿಕೊಳ್ಳಲು ಬಂದ ಗ್ರಾಹಕ , ನೇರವಾಗಿ ಒಳಗೆ ಹೋಗುವಂಥ ವ್ಯವಸ್ಥೆ ಇದೆ. ಇದು ಆಸ್ಪತ್ರೆಗಳ ಧನ – ಆರೋಗ್ಯಕ್ಕೆ ಒಂದು ಉತ್ತಮ ಬೆಳವಣಿಗೆಯೇ ಹೊರತು, ಸಾರ್ವಜನಿಕರಿಗೆ ದೊಡ್ಡ ಮಟ್ಟದಲ್ಲಿ ಯಾವುದೇ ಪ್ರಯೋಜನವಿಲ್ಲ ಎಂದು ಹೇಳಬೇಕು. ಅವಶ್ಯವಿಲ್ಲದ ವಸ್ತುಗಳನ್ನು ಕೊಂಡುಕೊಳ್ಳುವುದು, ಅವಶ್ಯ ವಿಲ್ಲದ ವಸ್ತುಗಳನ್ನು ಉಪಯೋಗಿಸುವುದು, ಅವಶ್ಯವಿಲ್ಲದ ಪರೀಕ್ಷೆಗಳನ್ನು ಮಾಡುವುದು ಇಂದಿನ ಜೀವನ ಕ್ರಮವಾಗಿದೆ.

ಪ್ರತಿಯೊಂದು ವಸ್ತುಗಳ ಪ್ರತ್ಯಕ್ಷ ಅಥವಾ ಪರೋಕ್ಷ ಮೂಲ ಭೂಮಿ. ಇಂತಹ ಅನಾವಶ್ಯಕ ಉಪಯೋಗ ಹೆಚ್ಚಾದಷ್ಟು
ಪರಿಸರಕ್ಕೆ ಹಾನಿ. ಆಸ್ಪತ್ರೆಗಳಲ್ಲಿ ಇಂತಹ ಅನಾವಶ್ಯಕ ಪರೀಕ್ಷೆ ಗಳನ್ನು ನಿಯಂತ್ರಿಸುವ ಸಲುವಾಗಿ ಹಲವಾರು ದೇಶಗಳಲ್ಲಿ
‘ಚೂಸ್ ವೈಸ್ಲಿ (choose wisely)’ ಯಂಥ ಅನೇಕ ತಜ್ಞರ ಸಂಘಟನೆಗಳು ಕೆಲಸಮಾಡುತ್ತಿವೆ. ಆದರೆ ಭಾರತದಲ್ಲಿ ಇಂತವು ಗಳನ್ನು ನಿಯಂತ್ರಣದಲ್ಲಿಡಲು ಸರಕಾರದಿಂದ ರಾಷ್ಟ್ರೀಯ ನೀತಿ ನಿಯಮಗಳಾಗಲಿ, ಭಾರತೀಯ ವೈದ್ಯ ಸಂಘದಿಂದ ಸಲಹೆಗಳಾಗಲಿ ಇಲ್ಲ ಎಂಬುದೇ ಒಂದು ದುರಂತ.

ಕೊನೆಮಾತು: ನಿಮ್ಮ ಎಲ್ಲಾ ಆಸೆಗಳನ್ನು ಪೂರೈಸುವ ಶಕ್ತಿ ಈ ಭೂಮಿಗಿದೆ. ಆದರೆ ನಿಮ್ಮ ದುರಾಸೆಗಳನ್ನಲ್ಲ.