ಶ್ವೇತಪತ್ರ
shwethabc@gmail.com
ಸುಮ್ಮನೆ ಕಲ್ಪಿಸಿಕೊಳ್ಳಿ, ಬದುಕು ಎಂತಹುದೇ ಸವಾಲನ್ನು ನಿಮ್ಮೆದರು ಎಸೆದರೂ ಗಾಬರಿಗೊಳ್ಳದೆ, ಅತಿರೇಕವಾಗಿ ಪ್ರತಿಕ್ರಿಯಿಸದೆ ಅದರಿಂದ ಆಚೆ ಬರುವ ತಂತ್ರಗಳನ್ನು ಅಳವಡಿಸಿಕೊಂಡು ಸವಾಲನ್ನು ಸಮಚಿತ್ತದಿಂದ ಎದುರಿಸುವುದು. ಈ ಕಲ್ಪನೆಯನ್ನು ನಿಮ್ಮ ದೃಢ ನಂಬಿಕೆಯಾಗಿಸಿ ಅಸಾಧ್ಯ ಗಳನ್ನು ಸಾಧ್ಯವಾಗಿಸಿ.
ಒತ್ತಡದ ಆಳಕ್ಕಿಳಿದು ನೋಡಿದಾಗ ಸ್ಪಷ್ಟವಾಗಿ ಅರ್ಥವಾಗುವ ವಿಚಾರವೆಂದರೆ, ಧನಾತ್ಮಕ ಒತ್ತಡ ಅಥವಾ ಪಾಸಿಟಿವ್ ಸ್ಟ್ರೆಸ್ ಮೂಲಕ ಬದುಕನ್ನು ಪರಿಪೂರ್ಣವಾಗಿಸಿಕೊಳ್ಳಬಹುದು ಎಂಬುದು. ಇದನ್ನು ಕೇಳಿದಾಗ ನಿಮಗೆ ಅಚ್ಚರಿಯಾಗಿ, ‘ಅರೆ ಏನಿದು? ಒತ್ತಡ ಅಂದರೇನೇ ಋಣಾತ್ಮಕ ವಿಚಾರ ವನ್ನು ತುಂಬುತ್ತ ಗೊಂದಲವನ್ನು ಸೃಷ್ಟಿಸುತ್ತದೆ, ವ್ಯಕ್ತಿಯ ಸಾಮರ್ಥ್ಯವನ್ನೇ ಕುಗ್ಗಿಸಿಬಿಡುತ್ತದೆ. ಅಂತಹುದರಲ್ಲಿ ಅದು ಹೇಗೆ ಒತ್ತಡ ಪಾಸಿಟಿವ್ ಕೂಡ ಆದೀತು?’ ಎಂಬ ಪ್ರಶ್ನೆಯೂ ಮೂಡಬಹುದು. ಈ ಒತ್ತಡ ನಮ್ಮೆಲ್ಲರ ದೈನಂದಿನ ಬದುಕಿನಲ್ಲಿ, ಶಬ್ದಕೋಶಗಳಲ್ಲಿ ಬೇರೂರಿಬಿಟ್ಟಿದೆ.
‘ದೊಡ್ಡವರಾದ ಮೇಲೆ ಬದುಕು ಒತ್ತಡಕಾರಿ’ ಎಂಬ ಆಲೋಚನೆಗಳನ್ನೇ ಚಿಕ್ಕ ವಯಸ್ಸಿನಿಂದಲೇ ನಮಗೆ ತುಂಬಲಾಗುತ್ತದೆ. ಈ ಮನಸ್ಥಿತಿಯಲ್ಲೇ ಮುಂದೆ ದೊಡ್ಡವರಾದಾಗ ಜವಾಬ್ದಾರಿಗಳನ್ನು ನಮ್ಮವಾಗಿಸಿಕೊಂಡು ಜೀವನದಲ್ಲಿ ಏನಾದರೊಂದು ಸಾಧಿಸಲು ನಮಗೆ ನಾವೇ ಸವಾಲು ಒಡ್ಡಿ ಕೊಳ್ಳುತ್ತಾ ಒತ್ತಡಕ್ಕೊಳಗಾಗುತ್ತೇವೆ.
ಒತ್ತಡದ ಬಗೆಗಿನ ಈ ಸಾಂಪ್ರದಾಯಿಕ ನೋಟ ಎಷ್ಟು ಗಟ್ಟಿಯಾಗಿರುತ್ತದೆಯೆಂದರೆ ನಾವು ಒತ್ತಡಕ್ಕೊಳಗಾಗದೆ ಜೀವನ ನಡೆಸಿದರೆ ನಮ್ಮ ಅತ್ಯುತ್ತಮ ವಾದುದನ್ನು ನೀಡುತ್ತಿಲ್ಲವೆಂದೇ ಭಾವಿಸಲಾಗುತ್ತದೆ. ೫೦ನೇ ದಶಕದವರೆಗೂ ಈ ಒತ್ತಡವೆಂಬ ಅಂಶ ವೈಜ್ಞಾನಿಕವಾಗಿ ಯಾವುದೇ ಗಮನ ಸೆಳೆದಿರಲಿಲ್ಲ. ಕಾರ್ಯಕ್ಷೇತ್ರಗಳಲ್ಲಿ ವಿರಾಮದ ಸಮಯವನ್ನು ಹೆಚ್ಚಿಸಬೇಕೆಂಬ ಬೇಡಿಕೆಗಳ ಹಿನ್ನೆಲೆಯಲ್ಲಿ ಪಾಶ್ಚಾತ್ಯ ಪ್ರಪಂಚ ಒತ್ತಡವನ್ನು ಇತ್ತೀಚೆಗೆ ಒಪ್ಪಲು ಶುರುಮಾಡಿತ್ತು. ಒತ್ತಡವನ್ನು ಹೇಗೆ ಗ್ರಹಿಸುತ್ತೇವೆ ಎನ್ನುವ ಆಧಾರದ ಮೇಲೆ ಅದರ ಸ್ವರೂಪವನ್ನು ನಾವು ಬದಲಿಸಿಕೊಳ್ಳಬಹುದು. ಇಲ್ಲಿ ನಾವೆಲ್ಲ ರೂ ನಮ್ಮನ್ನೇ ಪ್ರಶ್ನಿಸಿಕೊಳ್ಳೋಣ: ಎಲ್ಲಾ ಒತ್ತಡಗಳು ಕೆಟ್ಟವೇ? ಬಹುತೇಕರು ಒತ್ತಡವನ್ನು ಕೆಟ್ಟದ್ದೆಂದೇ ನೋಡುತ್ತಾರೆ. ಆದರೆ
ಇದರ ಮೂಲವ್ಯಾಖ್ಯಾನವನ್ನು ಸೂಕ್ಷ್ಮವಾಗಿ ಗಮನಿಸೋಣ.
ಯಾವುದೇ ಸವಾಲಿಗೆ ನಮ್ಮ ದೇಹ ತೋರುವ ಅಸ್ಪಷ್ಟ ಪ್ರತಿಕ್ರಿಯೆಯೇ ಒತ್ತಡ. ಇವತ್ತು ವಿಶ್ವಾದ್ಯಂತ ಒತ್ತಡವನ್ನು, ಹೃದ್ರೋಗ, ಆತಂಕ, ಖಿನ್ನತೆ ಯನ್ನುಂಟುಮಾಡುವ ಅನಾರೋಗ್ಯಕರ ಅಂಶವೆಂದೇ ಭಾವಿಸಲಾಗಿದೆ. ಅಂತೆಯೇ, ಅನೇಕರು ಒತ್ತಡದ ಬಗ್ಗೆ ಮತ್ತಷ್ಟು ಒತ್ತಡಕ್ಕೊಳಗಾಗುತ್ತಿದ್ದಾರೆ!
ಇಲ್ಲೊಂದು ಸೂಕ್ಷ್ಮವನ್ನು ಗಮನಿಸಬೇಕು. ‘ಒತ್ತಡ’ ಎಂಬ ಪದವನ್ನು ನಾವೆಲ್ಲ ‘ಯಾತನೆ’ ಎಂಬುದರ ಸಮನಾರ್ಥಕವಾಗಿ ಬಳಸುತ್ತಿದ್ದೇವೆ. ಸಂತೋಷ/ಆರಾಮದಾಯಕ ಸ್ಥಿತಿಗಳು ರೋಗಗ್ರಸ್ತವಾಗುವುದೇ ಯಾತನೆ. ಇವತ್ತು ಸಣ್ಣಪುಟ್ಟ ತೊಂದರೆಗಳಿಂದ ಹಿಡಿದು ದೊಡ್ಡ ಅಸ್ತವ್ಯಸ್ತತೆಗಳವರೆಗೂ (ಉದಾ
ಹರಣೆಗೆ ಹೆಚ್ಚಿನ ಕಾರ್ಯಾವಧಿ, ವಿಚ್ಛೇದನ, ರಸ್ತೆ ಅಪಘಾತ) ನಾವು ಒತ್ತಡಕ್ಕೊಳಗಾಗುತ್ತ ಒತ್ತಡವನ್ನು ಮೈಮೇಲೂ ಮನಸ್ಸಿನೊಳಗೂ ಎಳೆದು ಕೊಂಡಿದ್ದೇವೆ.
ಹಾಗೆಂದು ಒತ್ತಡವೇನೂ ಸುಲಭದ್ದಲ್ಲ, ಅದು ಕಷ್ಟಕರ ಮಾನಸಿಕ ಸ್ಥಿತಿಗಳಿಗೆ ತಳ್ಳುವುದು ಸುಳ್ಳೇನಲ್ಲ. ಆದರೆ ಈ ಒತ್ತಡ ನಮ್ಮ ನರನಾಡಿಗಳಲ್ಲಿ ಹರಿದಾಡಿದಾಗಲೂ ಅದಕ್ಕೆ ಪೂರಕವಾಗಿ ಸ್ಪಂದಿಸುತ್ತಾ ಆಂತರಿಕ ನೆಮ್ಮದಿಯನ್ನು ಹೇಗೆ ನಮ್ಮದಾಗಿಸಿಕೊಳ್ಳುತ್ತೇವೆ ಎಂಬುದಿಲ್ಲಿ ಮುಖ್ಯವಾಗುತ್ತದೆ. ಒತ್ತಡ ಕೆಟ್ಟದ್ದು, ತೊಂದರೆಯುಂಟು ಮಾಡುತ್ತದೆ ಆರೋಗ್ಯವನ್ನು ಕೆಡಿಸುತ್ತದೆ ಇವು ಅದರ ಬಗೆಗಿನ ಸಾಮಾನ್ಯ ಅಭಿಪ್ರಾಯಗಳು. ಇಲ್ಲಿ ಗಮನಿಸ ಬೇಕಾದ ಸಂಗತಿಯೆಂದರೆ ಒತ್ತಡಕ್ಕೆ ಮಾನಸಿಕವಾಗಿ ಹೇಗೆ ಪ್ರತಿಕ್ರಿಯಿ ಸುತ್ತೇವೆ ಎಂಬುದು. ಒತ್ತಡದ ಬಗೆಗಿನ ನಮ್ಮ ನಂಬಿಕೆಗಳೇ ಇದಕ್ಕೆ ಬುನಾದಿ ಯಾಗಿರುತ್ತದೆ ನೆನಪಿರಲಿ.
ಒತ್ತಡ ಕೆಟ್ಟದ್ದು ಎಂಬ ಆಳಗ್ರಹಿಕೆಯು ನಮ್ಮ ಪ್ರತಿಕ್ರಿಯೆ ಗಳನ್ನು ಪ್ರಭಾವಿಸುತ್ತದೆ. ಒತ್ತಡ ಕೆಟ್ಟದ್ದೋ ಒಳ್ಳೆಯದೋ, ಅದು ನಮ್ಮ ಗ್ರಹಿಕೆಗೆ ಬಿಟ್ಟದ್ದು. ಬದುಕಿನ ಅಸ್ತಿತ್ವಕ್ಕೆ ಒತ್ತಡ ಸಹಕಾರಿಯೂ ಹೌದು. ಒಂದು ಕೆಲಸವನ್ನು ಸರಿಯಾದ ಸಮಯಕ್ಕೆ ಮುಗಿಸಬೇಕಾದರೆ ಒತ್ತಡ ಅತ್ಯಗತ್ಯ. ಹಾಗಾಗಿ ಎಲ್ಲಾ ಒತ್ತಡಗಳು ಹಾನಿಕರವೆಂಬ ಗ್ರಹಿಕೆ ಬದಲಾಗಬೇಕಿದೆ. ಅನೇಕ ಮನೋವೈಜ್ಞಾನಿಕ ಸಂಶೋಧನೆಗಳು ಒತ್ತಡದ ಬಗ್ಗೆ ನೀಡಿರುವ ನಿರೂಪಣೆಗಳು ಹೊಸ ಹೊಳಹುಗಳನ್ನು ನೀಡುತ್ತವೆ. ಆ ಮೂಲಕ ಒತ್ತಡದ ಬಗ್ಗೆ ನಮಗಿರುವ ನೆಗೆಟಿವ್ ಗ್ರಹಿಕೆಯನ್ನು ಬದಲಿಸಿಕೊಂಡು, ಬದುಕನ್ನು ಬದಲಿಸಿಕೊಳ್ಳ
ಬಲ್ಲ ಸಾಮರ್ಥ್ಯವನ್ನು ನಾವೆಲ್ಲ ಬೆಳೆಸಿಕೊಳ್ಳಬೇಕಿದೆ.
ಈ ಒತ್ತಡ ಅಥವಾ ಸ್ಟ್ರೆಸ್ ಎಂಬ ಪರಿಕಲ್ಪನೆಯು ದಶಕಗಳ ಕಾಲ ಭೌತಶಾಸದಲ್ಲಿ ಲೋಹದ ವಸ್ತುವಿನ ಎಲಾಸ್ಟಿಸಿಟಿ ಹಾಗೂ ಅದರ ಬಿಗಿಗೊಳಿಸು ವಿಕೆಯ ಕುರಿತಾದ ವಿವರಣೆಯಲ್ಲಿ ಮಾತ್ರ ಬಳಕೆಯಾಗುತ್ತಿತ್ತು. ಪ್ರಾಚೀನ ಗ್ರೀಸ್‌ನ ಹಿಪ್ಪೋಕ್ರೈಟಿಸ್ ಕೂಡ ಸಂಕಟವನ್ನು ಅನುಭವಿಸುತ್ತಿರುವ ಕಾಯಿಲೆಯನ್ನು ಸೂಚಿಸುವಾಗ ‘ಸ್ಟ್ರೆಸ್’ ಪದಬಳಕೆ ಮಾಡುತ್ತಾನೆ. ೨೦ನೇ ಶತಮಾನದ ಈಚೆಗೆ ಸ್ಟ್ರೆಸ್ ಬಗೆಗಿನ ಋಣಾತ್ಮಕ ಕಲ್ಪನೆಗಳು ವ್ಯಾಪಕ ಗೊಂಡವು. ಕೈಗಾರಿಕೀಕರಣ ಮತ್ತು ನಗರೀಕರಣ ಪಾಶ್ಚಾತ್ಯ ಸಮಾಜದ ಮಾನಸಿಕ ಪರಿಕಲ್ಪನೆಗೆ ಆಕಾರ ನೀಡುವಲ್ಲಿ ಸಾಮೂಹಿಕ ಪಾತ್ರವನ್ನು ವಹಿಸುತ್ತವೆ.
ಏನಿದು ಯೂ ಸ್ಟ್ರೆಸ್ ಅಥವಾ ಧನಾತ್ಮಕ ಒತ್ತಡ?! ಗ್ರೀಕ್ ಮೂಲದ ‘ಯೂ ಸ್ಟ್ರೆಸ್’ ಒಳ್ಳೆಯ, ಹಿತವಾಗಿರುವ ಎಂಬ ಅರ್ಥವನ್ನು ಸೂಚಿಸುತ್ತದೆ. ಹೀಗೆ ಧನಾತ್ಮಕ ಒತ್ತಡವನ್ನು ನಿರೂಪಿಸುವಾಗ ಯೂ ಸ್ಟ್ರೆಸ್ ಪದವನ್ನು ಬಳಸಲಾಗುತ್ತದೆ. ಯೂ ಸ್ಟ್ರೆಸ್ ಎಂದರೆ ಬರಿಯೇ ನಕಾರಾತ್ಮಕ ಚಿತ್ರಣವಲ್ಲ ಎಂಬ
ಮುಖ್ಯ ವಿಚಾರವನ್ನು ತಿಳಿಸಿಕೊಡುತ್ತದೆ. ಯೂ ಸ್ಟ್ರೆಸ್ ಅಥವಾ ಪಾಸಿಟಿವ್ ಸ್ಟ್ರೆಸ್ ಎಂಬುದು ಸಂಕಟ, ಯಾತನೆ, ಬೇಗುದಿಗಳಿಗಿಂತ ಭಿನ್ನವಾದ ಗುಣಲಕ್ಷಣಗಳನ್ನು ಹೊಂದಿದ್ದು, ನಮ್ಮಲ್ಲಿ ಶಕ್ತಿ ತುಂಬಿ ಪ್ರೇರೇಪಿಸುತ್ತಾ ನಮ್ಮ ಗಮನ ಮತ್ತು ಕಾರ್ಯ ಕ್ಷಮತೆಯನ್ನು ಹೆಚ್ಚಿಸುತ್ತದೆ. ಉದಾಹರಣೆಗೆ ಮದುವೆ ಕೆಲಸ, ಶಿಶುಜನನ, ಹೊಸಮನೆ ಕೊಳ್ಳುವಿಕೆ ಮುಂತಾದ ಸಂದರ್ಭಗಳಲ್ಲಿ ನಮಗಾಗುವ ಹಿತವಾದ ಒತ್ತಡಗಳ ಅನುಭವವೇ ಯೂ ಸ್ಟ್ರೆಸ್. ಇದರ ವಿಚಾರವನ್ನು ಒಪ್ಪಿಕೊಳ್ಳಬೇಕಾದರೆ ನಮ್ಮ ಮಿದುಳಿನಲ್ಲಿ ನಡೆಯುವ ರಾಸಾಯನಿಕ ಕ್ರಿಯೆಗಳನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ.
ಯಾವುದಾದರೂ ಒತ್ತಡಕಾರಕ ಘಟನೆ ಸಂಭವಿಸಿದಾಗ ಸ್ವಾಯತ್ತ ನರಮಂಡಲ ವ್ಯವಸ್ಥೆಯಿಂದ ತಕ್ಷಣ ಪ್ರತಿಕ್ರಿಯೆಯೊಂದು ಹೊಮ್ಮುತ್ತದೆ. ಈ ಪ್ರತಿಕ್ರಿಯೆಯು ಅನುಕಂಪೀ ನರಕೋಶಗಳನ್ನು ಚುರುಕುಗೊಳಿಸುತ್ತ ಕಾರ್ಟಿಸಾಲ್ ಹಾಗೂ ನಾರ್‌ಎಫಿನೆಫ್ರಿನ್ ಹಾರ್ಮೋನುಗಳ ಬಿಡುಗಡೆಗೆ ಕಾರಣವಾಗುತ್ತದೆ. ಈ ಹಾರ್ಮೋನುಗಳು ಹೃದಯಬಡಿತ, ರಕ್ತದೊತ್ತಡ ಮತ್ತು ಮಿದುಳಿನ ಕ್ರಿಯೆಗಳನ್ನು ಹೆಚ್ಚಿಸುತ್ತಾ ಕೋಪ, ಆತಂಕ, ಉದ್ವಿಗ್ನತೆ ಯಂಥ ಭಾವನೆಗಳು ನಮ್ಮಲ್ಲುಂಟಾಗಲಿಕ್ಕೆ ಕಾರಣವಾಗುತ್ತವೆ. ಒತ್ತಡಕಾರಕ ಸನ್ನಿವೇಶ ಕಡಿಮೆಯಾಗತೊಡಗಿದಂತೆ ಉದ್ರಿಕ್ತ ದೇಹ ಹಾಗೂ ಮನಸ್ಸುಗ
ಳನ್ನು ಉಪಅನುಕಂಪೀ ನರಕೋಶಗಳು ಶಾಂತಗೊಳಿಸುತ್ತವೆ. ಅಪಾಯದ ಸಂದರ್ಭಗಳಲ್ಲಿ ಮಿದುಳಿನ ಈ ಪ್ರಕ್ರಿಯೆ ಮುಖ್ಯವಾಗುತ್ತದೆ.
ವಿಕಾಸದ ಹಾದಿಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಕಂಡುಬರುವ ಒಂದು ವಿಚಾರವೆಂದರೆ ಆದಿ ಮಾನವರನ್ನು ಕೋರೆಹಲ್ಲುಳ್ಳ ಬೆಕ್ಕುಗಳಿಂದ ರಕ್ಷಿಸುತ್ತಲಿದ್ದುದು ಮಿದುಳಿನ ಈ ಚಟುವಟಿಕೆಯೇ. ದುರದೃಷ್ಟವಶಾತ್ ಮಿದುಳಿನ ಈ ರಾಸಾಯನಿಕ ಕ್ರಿಯೆ ಹಾಗೇ ಉಳಿದು ಇಂದಿನ ಮಾನಸಿಕ
ಪ್ರತಿಕ್ರಿಯೆಗಳಲ್ಲಿ ಬೇಕಿಲ್ಲದಿದ್ದರೂ ಮೂಲಲಕ್ಷಣವಾಗಿ ಉಳಿದುಬಿಟ್ಟಿದೆ. ಜೀವಬೆದರಿಕೆಯೋ ಒತ್ತಡಕಾರಕ ಘಟನಾವಳಿಯೋ ಎದುರಾದರೆ ಹಾರ್ಮೋನುಗಳಂತೂ ಬಿಡುಗಡೆಗೊಳ್ಳುತ್ತವೆ.
ಇದರರ್ಥ ಒತ್ತಡದ ಯೋಚನೆಯು ದೇಹ- ಮನಸ್ಸಿನಲ್ಲಿ ಬದಲಾವಣೆ ಉಂಟುಮಾಡುತ್ತದೆ, ‘ಮಾಡು ಇಲ್ಲವೇ ಮಡಿ’ ಸಂದರ್ಭವನ್ನು ಸೃಜಿಸುತ್ತದೆ. ಈ ಪ್ರವೃತ್ತಿಯನ್ನು ಮಾರ್ಪಡಿಸಬೇಕೆಂದರೆ ಯೂ ಸ್ಟ್ರೆಸ್ ಅಥವಾ ಧನಾತ್ಮಕ ಒತ್ತಡವು ಅತಿನಿರ್ಣಾಯಕ ಪಾತ್ರದಲ್ಲಿ ಗುರುತಿಸಿಕೊಳ್ಳಬೇಕಾಗುತ್ತದೆ. ಏಕೆಂದರೆ ನಮ್ಮ ಆಲೋಚನೆ, ಭಾವನೆಗಳ ಮೇಲೆ ಸಮತೋಲನ ಉಂಟುಮಾಡುವಲ್ಲಿ ಧನಾತ್ಮಕ ಒತ್ತಡವು ಪ್ರಮುಖಪಾತ್ರ ವಹಿಸುತ್ತದೆ.
ಹಾಗಿದ್ದರೆ ಮಿದುಳನ್ನು ಧನಾತ್ಮಕ ಒತ್ತಡದ ಗ್ರಹಿಕೆಗೆ ಪೂರಕವಾಗಿ ಕೆಲಸ ಮಾಡಲು ಪ್ರೋತ್ಸಾಹಿಸಬೇಕಾಗುತ್ತದೆ. ಈಗ ಸಹಜವಾಗಿ ಮೂಡುವ ಪ್ರಶ್ನೆಯೆಂದರೆ, ಯಾತನಾ ಮಯ ಒತ್ತಡವನ್ನು ಹಿತಕರ ಒತ್ತಡವನ್ನಾಗಿ ಹೇಗೆ ಬದಲಾಯಿಸುವುದು? ಎಂಬುದು. ಒತ್ತಡಗಳನ್ನು ಸಂಕಟಮ ಯವನ್ನಾಗಿಸಿ ಕೊಳ್ಳುವ ಬದಲು ಅವನ್ನು ಅನುಭವಿಸಲು ಶುರುಮಾಡೋಣ. ಒತ್ತಡದ ವೇಳೆ, ‘ಇದನ್ನು ನಿಭಾಯಿಸಬಲ್ಲೆ’ ಎಂಬ ಸೂಚನೆಯನ್ನು ದೇಹ ಮತ್ತು ಮನಸ್ಸಿಗೆ ನೀಡುತ್ತಾ ಬನ್ನಿ. ಇದನ್ನು ನಿಭಾಯಿಸಬಲ್ಲೆ, ಮಾಡಬಲ್ಲೆ ಎಂಬ ಪಾಸಿಟಿವ್ ಗ್ರಹಿಕೆ ಪಾಸಿಟಿವ್ ಪರಿಣಾಮವನ್ನೇ ಉಂಟು ಮಾಡುತ್ತದೆ.
ನಿರಂತರ ವಾಗಿ ಇಂಥ ಧನಾತ್ಮಕತೆಯನ್ನು ಅನುಭವಿಸುವವರಲ್ಲಿ ಸಕಾರಾತ್ಮಕ ದೈಹಿಕ-ಮಾನಸಿಕ ಆರೋಗ್ಯ ಕಂಡುಬಂದಿರುವುದನ್ನು ಸಂಶೋಧನೆ ಗಳು ದೃಢಪಡಿಸಿವೆ. ಸ್ಪೆಕ್ಟರ್ ಎಂಬ ಮನೋವಿಜ್ಞಾನಿಯ ‘ಕಂಟ್ರೋಲ್ ಥಿಯರಿ’ಯು ಸ್ಟ್ರೆಸ್ ಬಗೆಗಿನ ನಮ್ಮ ಗ್ರಹಿಕೆಯನ್ನೇ ಬದಲಿಸುತ್ತದೆ. ಆತನ ಪ್ರಕಾರ, ಸುತ್ತಲಿನ ಘಟನೆಗಳಿಗೆ ಪ್ರತಿಕ್ರಿಯಿಸುವ ರೀತಿಯಲ್ಲಿ ನಮಗೆ ಹಿಡಿತವಿದ್ದರೆ, ಪರಿಸ್ಥಿತಿ ಬದಲಿಸಲು ನಮಗೆ ಆಯ್ಕೆಗಳು ಸಿಗುತ್ತವೆ. ಒತ್ತಡದ ವೇಳೆ ‘ಹೀ…ಗೇ’ ಪ್ರತಿಕ್ರಿಯಿಸಬೇಕೆಂಬ ಷರತ್ತಿಗೆ ಒಳಗಾಗದೆ ಸ್ಪಂದಿಸಿದರೆ, ಕೆಟ್ಟದ್ದನ್ನು ಒಳ್ಳೆಯದಾಗಿಸಿಕೊಳ್ಳುವ ಸಾಮರ್ಥ್ಯ ನಮ್ಮಲ್ಲಿ ಉಂಟಾಗುತ್ತದೆ. ಈ ಸಿದ್ಧಾಂತದ ಪ್ರಕಾರ, ಒತ್ತಡದ ಬಗೆಗಿನ ವ್ಯಕ್ತಿಯ ಗ್ರಹಿಕೆ ಮತ್ತು ಭಾವನಾತ್ಮಕ ಪ್ರತಿಕ್ರಿಯೆಗಳು, ಒತ್ತಡವನ್ನು ಆತ ಯಾತನೆಯಾಗಿಸಿಕೊಳ್ಳುತ್ತಾನಾ ಹಿತಾನುಭವವಾಗಿಸಿಕೊಳ್ಳುತ್ತಾನಾ ಎಂಬುದನ್ನು ನಿರ್ಧರಿಸುತ್ತವೆ.
ಒತ್ತಡವು ನಮ್ಮ ದೈಹಿಕ-ಮಾನಸಿಕ ಆರೋಗ್ಯದಲ್ಲಿ ವ್ಯತ್ಯಯವನ್ನುಂಟುಮಾಡುತ್ತದೆ ಎಂಬ ನಂಬಿಕೆಯಿಂದ ನಾವು ಹೊರಬರಬೇಕಿದೆ. ಈ ಮನಸ್ಥಿತಿ ಯು, ಎಂತಹುದೇ ಸವಾಲನ್ನು ಭಯಪಡದೆ ಎದುರಿಸುವ ಶಕ್ತಿಯನ್ನು ನಮಗೆ ತುಂಬುತ್ತದೆ. ಈ ಶಕ್ತಿ ನಮ್ಮೊಳಗೊಂದು ಸ್ಥಿತಪ್ರಜ್ಞತೆಯನ್ನು ಮೂಡಿಸು ತ್ತದೆ. ಈ ಸ್ಥಿತಪ್ರeಯು, ನಮ್ಮ ಬದುಕಿಗೆ ಎಂತಹುದೇ ಸಂದರ್ಭದಲ್ಲೂ ಅರ್ಥವಿದೆ ಎಂಬುದನ್ನು ಜ್ಞಾಪಿಸಿ ಅದನ್ನು ನಿಭಾಯಿಸುವ ಧೈರ್ಯವನ್ನು ಉಂಟುಮಾಡುತ್ತದೆ. ಅದಕ್ಕಾಗಿಯೇ ಬದುಕಲ್ಲಿರಲಿ ‘ಯೂ ಸ್ಟ್ರೆಸ್’.