Thursday, 12th December 2024

ನಂಬಿಕೆಯ ಹೇರಿಕೆ ಎಂಬ ಬೇಸರಿಕೆ

ನಾಡಿಮಿಡಿತ

ವಸಂತ ನಾಡಿಗೇರ

ಸಹಿಂದಿ ಹೇರಿಕೆ ಎಂದು ಆಗಾಗ ಬೊಬ್ಬಿರಿಯುವುದನ್ನು, ಪ್ರತಿಭಟಿಸುವುದನ್ನು, ವಿರೋಧಿಸುವುದನ್ನು ನಾವು ನೋಡುತ್ತೇವೆ. ಭಾಷೆ, ಗಡಿ, ನೆಲ ಜಲ ಮೊದಲಾದ ವಿಷಯಗಳಲ್ಲಿ ನಮ್ಮದು ಒಂದು ರೀತಿಯ ಭಾವನಾತ್ಮಕ ಪ್ರತಿಕ್ರಿಯೆ. ಅಲ್ಲದೆ ಇದು ಎಲ್ಲರಿಗೂ ಸಂಬಂಧಿಸಿದ್ದರಿಂದ ಇದು ಸಾಮೂಹಿಕ ಚರ್ಚೆಗೆ ಕಾರಣವಾಗುತ್ತದೆ.

ಇಂಥ ವಿಚಾರಗಳಲ್ಲಿ ಪರ ವಿರೋಧ ಅಭಿಪ್ರಾಯ, ನಿಲುವು ಇರುವುದೂ ಹೌದು. ಆದರೆ ನಾವು ಬೇರೆ ವಿಷಯಗಳಲ್ಲೂ ಕೂಡ (ಅದು ಬಹುತೇಕ ವೈಯಕ್ತಿಕ ಹಿತಾಸಕ್ತಿಗೆ ಸಂಬಂಧಿಸಿದ್ದಾಗಿರುತ್ತದೆ) ಒಂದಲ್ಲ ಒಂದು ರೀತಿಯ ಹೇರಿಕೆಯನ್ನು ಕಾಣುತ್ತೇವೆ. ಅದು ಹೇರುವುದೂ ಆಗಬಹುದು. ಅಥವಾ ಹೇರಿಸಿಕೊಳ್ಳುವುದೂ ಇದ್ದೀತು. ಇದಕ್ಕೆ ಇತಿಮಿತಿ ಎಂಬುದಿಲ್ಲ. ಬೇರೆಯವರು ಯಾವುದೇ ಸಂಗತಿಯನ್ನು ನಮ್ಮ ಮೇಲೆ ಹೇರುವುದನ್ನು ಬಹುತೇಕವಾಗಿ ನಾವ್ಯಾರೂ ಇಷ್ಟಪಡುವುದಿಲ್ಲ. ಸಹಿಸುವುದಿಲ್ಲ. ಆದರೆ ಇದಕ್ಕೆ ಪ್ರತಿಕ್ರಿಯೆ ನೀಡುವ ವಿಚಾರದಲ್ಲಿ ವ್ಯತ್ಯಾಸ ಇರುತ್ತದೆ. ಕೆಲವರು ಅನಿವಾರ್ಯವಾಗಿ ಅದನ್ನು ಸಹಿಸುತ್ತಾರೆ. ಮತ್ತೆ
ಕೆಲವರು ಅಲ್ಲೇ ತಿರುಗೇಟು ನೀಡುತ್ತಾರೆ.

ಇನ್ನೊಂದಿಷ್ಟು ಜನರು ಬ್ರೇನ್‌ವಾಷ್‌ಗೆ ಒಳಗಾಗಿ ತಮ್ಮ ಇಷ್ಟಗಳನ್ನು, ಆಯ್ಕೆಯನ್ನು ಬದಲಾಯಿಸಿಕೊಳ್ಳುತ್ತಾರೆ. ಇದು ಬೇರೆಯವರ ವಿಷಯವಾದರೆ ಈ ವಿಷಯದಲ್ಲಿ ನಮ್ಮ ನಡವಳಿಕೆ ಏನು ಎಂಬುದನ್ನೂ ಗಮನಿಸಬೇಕು. ಈ ವಿಷಯದಲ್ಲಿ ಬಹುಶಃ ನಾವೂ ಬೇರೆಯವರಿಗಿಂತ ಕಡಿಮೆ ಇಲ್ಲ ಎನಿಸುತ್ತದೆ. ಇತರರು ನಮ್ಮ ಮೇಲೆ ಯಾವುದೇ ಸಂಗತಿಯನ್ನು ಹೇರಿದಾಗ
ಆಗುವ ಕಿರಿಕಿರಿ, ಹಿಂಸೆ, ಅಸಹನೆ ಮೊದಲಾದವನ್ನು ನಾವು ಮರೆತವರಂತೆ ವರ್ತಿಸುತ್ತೇವೆ. ಏಕೆಂದರೆ ಅನ್ಯರು ನಮ್ಮ ವಿಷಯ ಗಳಲ್ಲಿ ಮೂಗುತೂರಿಸುವಂತೆ ನಾವೂ ಇತರರ ವಿಷಯದಲ್ಲಿ ಇಲ್ಲದ ಉಸಾಬರಿ ಮಾಡುತ್ತೇವೆ. ಪುಕ್ಕಟೆ ಸಲಹೆ ಕೊಡುತ್ತೆವೆ; ಹೀಗೇಕೆ ಮಾಡಿದೆ ಎಂದು ಹಳಿಯುತ್ತೇವೆ. ಹೀಗೆ ಇದು ಟೂ ವೇ ಟ್ರಾಫಿಕ್.

ಹಾಗೆಂದು ಬೇರೆಯವರ ನಿರ್ಧಾರ, ಆಯ್ಕೆಯ ವಿಚಾರದಲ್ಲಿ ನಾವು ಭಾಗವಹಿಸಲೇಬಾರದೆ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಇಲ್ಲ. ಏಕೆಂದರೆ ಅನೇಕ ಸಂದರ್ಭಗಳಲ್ಲಿ ಬೇರೆಯವರ ಅಭಿಪ್ರಾಯ ನಮಗೆ ಬೇಕಾಗುತ್ತದೆ. ಮುಖ್ಯವಾಗುತ್ತದೆ. ಅದರಿಂದ
ನೆರವಾಗುತ್ತದೆ. ಆದರೆ ನಾವು ಯಾರ ಅಭಿಪ್ರಾಯ ಕೇಳುತ್ತೇವೆ ಎಂಬುದರ ಮೇಲೆ, ಅವರು ಅನವಶ್ಯಕವಾಗಿ ಹಸ್ತಕ್ಷೇಪ ಮಾಡುತ್ತಿದ್ದಾರಾ ಎಂಬುದರ ಮೇಲೆ ಲಾಭ ನಷ್ಟದ ತಕ್ಕಡಿಯು ತೂಗುತ್ತದೆ.

ಇಂಥ ಪ್ರವೃತ್ತಿ, ಮನೋಭಾವವನ್ನು ಬಣ್ಣಿಸಲು, ‘ಬಂದ ನೋಡು ನನ್ನದೂ ಮೂರು ಅಕ್ಕಿ ಕಾಳು ಇರಲಿ ಅಂತ’ ಎಂಬ ಮಾತು ಹೇಳುತ್ತಾರೆ. ಈ ಮೂರು ಅಕ್ಕಿಕಾಳು ಹಾಕುವುದಕ್ಕೆ ಇದೇ ವಿಷಯ ಆಗಬೇಕೆಂದೇನೂ ಇಲ್ಲ. ಅಥವಾ ಅಗತ್ಯವಿರಬೇಕು ಎಂದೂ ಇಲ್ಲ. ಹಾಗೆಯೇ ನಮ್ಮ ಆಯ್ಕೆಯ ವಿಚಾರದಲ್ಲಿ ನಾವು ಒಂದು ರೀತಿ ಪೊಸೆಸಿವ್ ಆಗಿಬಿಡುತ್ತೇವೆ. ನಾವು ಯಾವುದೋ ಬ್ರ್ಯಾಂಡಿನ ಸರಕನ್ನು ತಂದರೆ ಅದರ ಬಗ್ಗೆ ಮಮತೆಯನ್ನು ಬೆಳೆಸಿಕೊಳ್ಳುತ್ತೇವೆ. ನಮಗರಿವಿಲ್ಲದಂತೆಯೇ ಅದರ ಗುಣಗಾನ ಮಾಡತೊಡಗುತ್ತೇವೆ. ಇದು ಇಲ್ಲಿಗೇ ನಿಂತರೆ ಪರವಾಗಿಲ್ಲ. ಆದರೆ ನಿಲ್ಲುವುದಿಲ್ಲ.

ಬೇರೆಯವರಿಗೂ ಅದನ್ನು ಶಿ-ರಸು ಮಾಡುತ್ತೇವೆ. ಅದರ ಅನಧಿಕೃತ ಬ್ರ್ಯಾಂಡ್ ಅಂಬಾಸಿಡರ್ ಆಗಿಬಿಡುತ್ತೇವೆ. ಪುಕ್ಕಟೆ ಪ್ರಚಾರ ಮಾಡುತ್ತೇವೆ. ಇದಕ್ಕೆ ಕಾರಣ ನಮ್ಮ ಬಳಿ ಅದು ಇದೆ ಎಂಬುದು. ಇದು ಹೆಚ್ಚುಗಾರಿಕೆ, ಅಹಮಿಕೆ ಮೊದಲಾದ ಭಾವಗಳನ್ನು
ನಮ್ಮಲ್ಲಿ ತುಂಬಿಬಿಡುತ್ತದೆ. ಇಷ್ಟಾದರೆ ಅಡ್ಡಿ ಇಲ್ಲ ಬಿಡಿ. ಆದರೆ ಬೇರೆಯವರು ಬೇರೆ ಬ್ರ್ಯಾಂಡಿನ ಅದೇ ಸರಕನ್ನು ಕೊಂಡರೆ ನಮಗೆ ಅದ್ಯಾಕೋ ಕಿರಿಕಿರಿ ಆಗತೊಡಗುತ್ತದೆ. ಅದನ್ನು ಮನಸ್ಸಿನಲ್ಲೇ ಇಟ್ಟುಕೊಂಡರೆ ಸರಿ. ಆದರೆ ನಮ್ಮ ಮನವೆಂಬ ಮರ್ಕಟ ಕೇಳಬೇಕಲ್ಲ. ಇದನ್ನು ಯಾಕೆ ತೆಗೆದುಕೊಂಡಿರಿ ಎಂದು ಕೇಳುತ್ತೇವೆ. ಅವರು ಅದಕ್ಕೆ ಏನೋ ಸಮಜಾಯಿಷಿ ಕೊಡಬಹುದು.
ಅಥವಾ ಕೊಡದಿರಲೂಬಹುದು. ಆದರೆ ನಾವು ಬಡಪೆಟ್ಟಿಗೆ ಬಿಡುವವರಲ್ಲ. ಆಕ್ಷೇಪ, ಅಸಮಾಧಾನವನ್ನು ವ್ಯಕ್ತಪಡಿಸುತ್ತೇವೆ. ಅದು ಯಾಕೆ ಸರಿ ಇಲ್ಲ ಎಂದು ಹೇಳುತ್ತ ಅವರ ಸೆಲೆಕ್ಷನ್, ಟೇಸ್ಟ್ ಅನ್ನು ಹೀಗಳೆಯುತ್ತೇವೆ. ಅವರಿಗೆ ಸರಿಯಾದ ನಿರ್ಧಾರ
ಕೈಗೊಳ್ಳಲು ಆಗುವುದಿಲ್ಲ ಎಂದು ತೋರಿಸಿಕೊಡಲು ಯತ್ನಿಸುತ್ತೇವೆ. ಆದರೆ ನಮ್ಮ ಆಯ್ಕೆ ನಮ್ಮದು, ಅವರ ಆಯ್ಕೆ ಅವರದು ಎಂಬ ವಿಶಾಲ ಮನೋಭಾವವನ್ನು ನಾವು ಒಪ್ಪಿಕೊಳ್ಳುವುದೇ ಇಲ್ಲ. ಲೋಕೋ ಭಿನ್ನರುಚಿಃ ಎಂಬ ಮಾತನ್ನು ಮರೆತೇ ಬಿಡುತ್ತೇವೆ. ಹಾಗಿಲ್ಲದೆ ಒಂದು ಫ್ರಿಜ್ಜಿನ ಹತ್ತಾರು ಬ್ರ್ಯಾಂಡುಗಳೇಕೆ ಇರಬೇಕಿತ್ತು ಹೇಳಿ? ಎಲ್ಲ ವಾಷಿಂಗ್‌ಮಷಿನ್‌ಗಳು ಬಟ್ಟೆಗಳನ್ನೇ ತಾನೆ ಒಗೆಯುವುದು. ಆದರೆ ಅದರಲ್ಲೂ ಹಲವಾರು ಹೆಸರಿನ ಪ್ರಾಡಕ್ಟ್‌ಗಳು ಇರುವುದ್ಯಾಕೆ ಹೇಳಿ.

ಏಕೆಂದರೆ ಒಬ್ಬರಿಗೆ ಇಷ್ಟವಾಗುವುದು ಇನ್ನೊಬ್ಬರಿಗೆ ಇಷ್ಟವಾಗದಿರಬಹುದು. ಇಷ್ಟಕ್ಕೂ ಎಲ್ಲರ ಅಭಿರುಚಿ ಒಂದೇ ತೆರನಾಗಿರ ಬೇಕು ಎಂದೇಕೆ ಬಯಸಬೇಕು. ಯಾವುದೇ ಒಂದು ಉತ್ಪನ್ನವನ್ನು ಕೊಳ್ಳುವಾಗ ಒಬ್ಬೊಬ್ಬರ ಆದ್ಯತೆ ಒಂದೊಂದು ಥರ ಇರುತ್ತದೆ. ಕಾರು ಖರೀದಿಯ ವಿಷಯವನ್ನೇ ಗಮನಿಸೋಣ. ನಾಲ್ಕು ಲಕ್ಷಗಳಿಂದ ನಲವತ್ತು ಲಕ್ಷ, ಅಷ್ಟೇ ಏಕೆ ನಲವತ್ತು ಕೋಟಿ ಬೆಲೆಯ ಕಾರುಗಳು ಮಾರುಕಟ್ಟೆಯಲ್ಲಿ ಲಭ್ಯ. ಲೆಕ್ಕವಿಲ್ಲದಷ್ಟು ಬ್ರ್ಯಾಂಡ್ ಗಳು. ಸಾಕು ಬೇಕೆನಿಸುವಷ್ಟು ಫೀಚರ್‌ಗಳು. ಕಾಸಿಗೆ ತಕ್ಕ ಕಜ್ಜಾಯ. ಹಾಗಾದರೆ ಇಷ್ಟು ವರೈಟಿ ಏಕಿರುತ್ತವೆ ಎಂದು ಕೇಳಿದರೆ ಅದು ಬಂದು ನಿಲ್ಲುವುದು ಮತ್ತೆ ಅಭಿರುಚಿ, ಆಯ್ಕೆ, ಆದ್ಯತೆಗೇ. ನನಗೆ ಬೆಂಜ್ ಕಾರು ಕೊಳ್ಳಬೇಕು ಎಂಬ ಆಸೆ ಇರುತ್ತದೇನೋ ನಿಜ.

ಆದರೆ ನೆನಪಿಸಿಕೊಂಡಾಕ್ಷಣ ತರಲು ಅದೇನೂ ಬೆಂಚಲ್ಲ. ಹೀಗಾಗಿ ಆತ ಮೂರ‍್ನಾಲ್ಕು ಲಕ್ಷದ ಬಜೆಟ್ ಕಾರಿಗೆ ಸೆಟ್ಲ್ ಆಗುತ್ತಾನೆ. ಅವರ ಮುಂದೆ ಬೆಂಜ್ ಕಾರಿನ ಗುಣಗಾನ ಮಾಡಿದರೆ ಏನು ಪ್ರಯೋಜನ? ಕೆಲವರು ಪೆಟ್ರೋಲ್ ಕಾರು ಬೇಕೆನ್ನುತ್ತಾರೆ. ಮತ್ತೆ ಕೆಲವರಿಗೆ ಡೀಸೆಲ್ ಮಾಡೆಲ್ ಬೇಕು. ಪರಿಸರ ಕಾಳಜಿ ಇರುವವರು ಎಲೆಕ್ಟ್ರಿಕ್ ಕಾರು ಖರಿದಿಸಬಹುದು. ಕೆಲವರಿಗೆ ಬ್ರ್ಯಾಂಡೇ ಬ್ರ್ಯಾಂಡಿ ಇದ್ದಹಾಗೆ. ಕಿಕ್ಕೇರಿಸುತ್ತದೆ. ಇನ್ನು ಕೆಲವರಿಗೆ ಬೆಲೆಯೇ ಸೂರ್ತಿಯ ಸೆಲೆ. ಆದರೆ ನಾವು ಅದ್ಯಾಕೆ, ಇದ್ಯಾಕೆ, ಹೀಗೇಕೆ ಇತ್ಯಾದಿ ಪ್ರಶ್ನೆಗಳನ್ನು ಕೇಳಿದರೆ ಅವರೇನು ಹೇಳಬೇಕು. ಈ ಸಂದರ್ಭದಲ್ಲಿ ನನಗೊಂದು ಹಳೆಯ ಪ್ರಸಂಗ ನೆನಪಾಗುತ್ತದೆ. ಅವರು ನಮ್ಮ ಸಂಪಾದಕರಾಗಿದ್ದರು. ಅವರ ಬಳಿ ಒಂದು ಒಳ್ಳೆಯ ಕಾರಿತ್ತು.

ಅದರ ಜತೆಗೆ ಒಂದು ನ್ಯಾನೋ ಕಾರೂ ಇತ್ತು. ಒಮ್ಮೆ ಹೀಗೆಯೇ ಚರ್ಚೆಯ ಸಂದರ್ಭದಲ್ಲಿ ನಮ್ಮ ಸಹೋದ್ಯೋಗಿಯೊಬ್ಬರು
‘ನಾನೂ ನ್ಯಾನೊ ಕಾರನ್ನು ತೆಗೆದುಕೊಳ್ಳಬಹುದೆ’ ಎಂದು ಕೇಳಿದರು. ಅದಕ್ಕೆ ಸಂಪಾದಕರು, ‘ಬೇಡ’ ಎಂದರು. ಅಲ್ಲ ಸರ್ ನಿಮ್ಮ ಬಳಿ ಇದೆಯಲ್ಲ. ನೀವು ಓಡಿಸುತ್ತಿದ್ದೀರಿ. ಆದರೆ ನಮಗೆ ಮಾತ್ರ ತೆಗೆದುಕೊಳ್ಳುವುದು ಬೇಡ ಎನ್ನುತ್ತೀರಿ. ಯಾಕೆ ಚೆನ್ನಾಗಿಲ್ಲವಾ?’ ಹೀಗೆ ಪ್ರಶ್ನೆಗಳ ಸುರಿಮಳೆಯೇ ಆದಾಗ ಅವರು ತಣ್ಣಗೆ ಹೇಳಿದ್ದು: ನನ್ನ ಹತ್ರ ಇನ್ನೊಂದು ಕಾರು ಇದೆ. ಇದು ಹತ್ತಿರದಲ್ಲೆಲ್ಲಾ ದರೂ ಹೋಗಲು ಹಾಗೂ ನನ್ನ ಹೆಂಡತಿಯ ಬಳಕೆಗೆಂದು ತೆಗೆದುಕೊಂಡಿರುವುದು. ತೆಗೆದುಕೊಳ್ಳಬೇಡಿ ಎಂದು ನಿಮಗೆ ಏಕೆ ಹೇಳುತ್ತಿದ್ದೇನೆ ಎಂದರೆ ಈ ಕಾರು ಈಗಷ್ಟೇ ಮಾರುಕಟ್ಟೆಗೆ ಬಂದಿದೆ. ಯಾವುದೇ ಪ್ರಾಡಕ್ಟ್‌ನ ಸಾಧಕ ಬಾಧಕ ಗೊತ್ತಾಗಲು ಒಂದಷ್ಟು ಸಮಯ ಬೇಕಾಗುತ್ತದೆ.

ಜನರ ಪ್ರತಿಕ್ರಿಯೆ ಗೊತ್ತಾಗದೇವ ತೆಗೆದುಕೊಳ್ಳುವುದು ಅಷ್ಟೇನೂ ಒಳ್ಳೆಯದಲ್ಲ’. ಅವರ ಮಾತಿನಲ್ಲಿ ಎಷ್ಟು ತೂಕ, ವಿವೇಕ ಇದೆ ಅಲ್ಲವಾ ಎಂದೆನಿಸಿತು. ಅದಕ್ಕಾಗಿಯೇ ಅದು ಇನ್ನೂ ನನ್ನ ಮನದಲ್ಲಿದೆ. ಮನೆಯ ವಿಷಯದಲ್ಲೂ ಹಾಗೆಯೇ. ಫಟ್
ಖರೀದಿಸಿದರೆ ಅಯ್ಯೋ, ಅದನ್ಯಾಕೆ ತೆಗೆದುಕೊಂಡಿರಿ. ಪ್ರೈವಸಿ ಇರಲ್ಲ. ಇಂಡಿಪೆಂಡೆಂಟ್ ಹೌಸ್ ತೊಗೋಬೇಕಿತ್ತು ಎಂಬ ಪುಕ್ಕಟೆ ಸಲಹೆಗಳು ಬರುತ್ತವೆ.

ಬರಿ ಸ್ವತಂತ್ರ ಮನೆಯಾಕೆ? ಪ್ರತಿಷ್ಠಿತ ಪ್ರದೇಶದಲ್ಲಿ ಭವ್ಯ ಬಂಗಲೆಯನ್ನೆ ಕಟ್ಟಿಸುವ ಆಸೆ ಇರುತ್ತೆ. ಆಗಬೇಕಲ್ಲ. ಬಜೆಟ್, ಮತ್ತಿತರ ಅಂಶಗಳನ್ನು ಲೆಕ್ಕ ಹಾಕಿಯೇ ಈ ನಿರ್ಧಾರ ಮಾಡಿರುತ್ತಾರೆ. ಆದರೆ ಇಂಥ ಮಾತುಗಳಿಂದ ಅವರ ನೆಮ್ಮದಿ ಕಸಿದರೆ ಹೇಗೆ.
ಹಾಗೆಂದು ಎಲ್ಲರು ಹೀಗೆಯೇ ಎಂದೇನೂ ಅಲ್ಲ. ನಮ್ಮ ಎಂಜಿನಿಯರ್ ಗೆಳೆಯನೊಬ್ಬ ನಾನು ಖರೀದಿಸಲು ಉದ್ದೇಶಿಸಿದ್ದ ಫಟ್‌ಗೆ ಬಂದು ಅದನ್ನೆಲ್ಲ ಪರಿಶೀಲಿಸಿ, ‘ಕಣ್ಣುಮುಚ್ಚಿ ಖರೀದಿಸಬಹುದು’ ಎಂದು ಹೇಳಿದಾಗ ಏನೋ ನೆಮ್ಮದಿ, ಸಮಾಧಾನ.
ವಿದ್ಯಾಭ್ಯಾಸದ ವಿಚಾರದಲ್ಲೂ ಇದೇ ಗೋಳು.

ನಿಮ್ಮ ಮಕ್ಕಳನ್ನು ಯಾವ ಕಾಲೇಜಿಗೆ ಸೇರಿಸುತ್ತೀರಿ? ಸೈನ್ಸ್‌ಗೆ ಯಾಕೆ ಸೇರಿಸುವುದಿಲ್ಲ. ಒಳ್ಳೇ ಸ್ಕೋಪ್ ಇದೆಯಲ್ಲ ಅಂತೆಲ್ಲ ಸ್ಕೋಪ್ ತೊಗೋತಾರೆ. ನಮ್ಮ ಮಗ ಸಾಫ್ಟ್ವೇರ್ ಎಂಜಿನಿಯರಿಂಗ್ ಓದಿ ಈಗ ಒಳ್ಳೆಯ ಕೆಲಸದಲ್ಲಿದ್ದಾನೆ ಎಂದು ಒಗ್ಗರಣೆ ಹಾಕುತ್ತಾರೆ. ಆಸಕ್ತಿ ಇಲ್ಲದ ವಿಷಯವನ್ನು ಓದಿ ಫಜೀತಿ ಪಡುವುದ್ಯಾಕೆ ಎಂಬ ಸರಳ ಸತ್ಯವನ್ನು ಇವರಿಗೆ ತಿಳಿಹೇಳುವವರಾರು ?
ಹಾಗೆಂದು ಈ ಪ್ರವೃತ್ತಿ ಬೇರೊಬ್ಬರ ಮೇಲೆಯೇ ಆಗಬೇಕೆಂದೇನೂ ಇಲ್ಲ. ಪೋಷಕರು – ಮಕ್ಕಳಲ್ಲೂ ಈ ಹೇರಿಕೆಯ ಕನವರಿಕೆ ಇಣುಕುತ್ತದೆ. ನಾವು ಓದಿ ಆಡಿ ಬೆಳೆದ ವಾತಾವರಣದ ಉದಾಹರಣೆಯನ್ನೇ ನಮ್ಮ ಮಕ್ಕಳಿಗೆ ಸದಾ ಕೊಡುತ್ತೇವೆ. ಕಾಲ ಬದಲಾಗಿದೆಯಪ್ಪ ಎಂದು ಮಕ್ಕಳು ಹೇಳಿದಾಗ ವಿವೇಕ ಇದ್ದವರು ಆ ಸತ್ಯವನ್ನು ಒಪ್ಪಿಕೊಳ್ಳಬೇಕು.

ಆದರೆ ಮನಸ್ಸು, ಪ್ರತಿಷ್ಠೆ ಒಪ್ಪುವುದಿಲ್ಲ. ಹೀಗಾಗಿ ಅನೇಕ ವಿಚಾರಗಳನ್ನು ಹೇರಲು ಯತ್ನಿಸುತ್ತೇವೆ. ಇದು ಮಕ್ಕಳಿಗೂ ಅನ್ವಯಿಸುತ್ತದೆ. ಪೋಷಕರು ಏನು ಹೇಳುತ್ತಾರೆ, ಯಾಕೆ ಹೇಳುತ್ತಾರೆ ಎಂಬುದರತ್ತ ಕೊಂಚ ಗಮನ ಹರಿಸಬೇಕು. ಏಕೆಂದರೆ
ಅವರಿಗೆ ಒಂದಷ್ಟು ಜೀವನಾನುಭವ ಇರುತ್ತದೆ. ಹೀಗೆ ಇಬ್ಬರೂ ಕೊಡುಕೊಳ್ಳುವ, ಪರಸ್ಪರರ ಭಾವನೆ, ಅಭಿಪ್ರಾಯವನ್ನು ಅರಿತರೆ ಸಮಸ್ಯೆಯಾಗುವುದಿಲ್ಲ.

ಅಥವಾ ಸಮಸ್ಯೆ, ತಪ್ಪು ಕಲ್ಪನೆ ಇದ್ದರೂ ಬಗೆಹರಿಸಿಕೊಳ್ಳಬಹುದು. ಇಲ್ಲದಿದ್ದರೆ ಜನರೇಶನ್ ಗ್ಯಾಪ್ ಎಂಬ ಗುಮ್ಮ ಇಬ್ಬರ ಬದುಕನ್ನೂ ನರಕ ಮಾಡಬಹುದು. ಅಷ್ಟಕ್ಕೂ ಇಲ್ಲೆಲ್ಲ ಕೆಲಸ ಮಾಡುವುದು ಹೇರಿಕೆ ಪ್ರವೃತ್ತಿಯೇ. ಇದು ಇಷ್ಟಕ್ಕೇ  ನಿಲ್ಲುವು ದಿಲ್ಲ. ನಮ್ಮ ಹೇರಿಕೆಯ ಚಾಳಿಯನ್ನು ದೇವರು, ದೇವಸ್ಥಾನಗಳಿಗೂ ವಿಸ್ತರಿಸಿಬಿಟ್ಟಿದ್ದೇವೆ. ‘ದೇವನೊಬ್ಬ, ನಾಮ ಹಲವು;
ಎಲ್ಲ ದೇವರೂ ಒಂದೇ’ ಎಂದು ಹೇಳುತ್ತೇವೆ. ಆದರೆ ಅದು ಹೇಳಿಕೆಯಲ್ಲಿ ಮಾತ್ರ. ಆಚರಣೆಯಲ್ಲಿ ಮಾತ್ರ ನಮ್ಮದು ಬೇರೆಯದೇ ಆದ ಧೋರಣೆ. ಗಣೇಶನ ದೇವಸ್ಥಾನಕ್ಕೆ ಹೋದರೆ ಅಲ್ಲಿನ ಅರ್ಚಕರು ಗಣೇಶನಿಗೆ ಶರಣು ಹೋಗಿ ಎಲ್ಲ ಸರಿಹೋಗುತ್ತದೆ ಎನ್ನುತ್ತಾರೆ.

ದೇವಿಯ ಆರಾಧಕರೊಬ್ಬರು ತಾವು ನಂಬಿದ ದೇವಿಯ ಪೂಜೆಯನ್ನು ಮಾತ್ರ ರೆಕಮೆಂಡ್ ಮಾಡುತ್ತಾರೆ. ಒಬ್ಬರು ತಿರುಪತಿಗೆ ಹೋಗಿ ಎಂದರೆ ಮತ್ತೊಬ್ಬರು ಮತ್ತೊಬ್ಬ ದೇವರ ಸನ್ನಿಧಿಯ ಮಹತ್ವದ ಬಗ್ಗೆ ಹೇಳುತ್ತಾರೆ. ಹಾಗೆಯೇ ಮನೆ ಮನೆಗಳಲ್ಲೂ
ಮನೆದೇವರು, ಕುಲದೇವರು ಎಂದಿರುತ್ತಾರೆ. ಅವರು ಅವರಿಗೇ ನಡೆದುಕೊಳ್ಳುವುದು. ತಪ್ಪೇನಿಲ್ಲ. ಆದರೆ ಅವರ ದೇವರೇ ಪವರ್-ಲ್ ಎಂದು ಪ್ರತಿಪಾದಿಸುವುದು, ಅದನ್ನು ಪ್ರೊಮೋಟ್ ಮಾಡುವುದು.

ಬೇರೆ ದೇವರುಗಳು ತಮಗೆ ಸಂಬಂಧವೇ ಇಲ್ಲ ಎಂದು ಹೇಳುವುದು ಹೇರಿಕೆಯ ರೂಪವೇ. ಇದೇ ದೇವರನ್ನು ಪೂಜಿಸಬೇಕು, ಈ ದೇವರನ್ನು ಪೂಜಿಸಬಾರದು ಎಂದು ಯಾವ ದೇವರೂ ಬಹುಶಃ ಹೇಳಲಿಕ್ಕಿಲ್ಲ. ಆದರೆ ನಮ್ಮ ನಮ್ಮಲ್ಲೇ ಆ ಬಗ್ಗೆ ಮೇಲಾಟ, ಬಡಿದಾಟ. ದೇವರನ್ನು ರಕ್ಷಕನಾಗಿ ಬಿಂಬಿಸಬೇಕೇ ಹೊರತು ಹೆದರಿಸಲು ಅಲ್ಲ ಅಲ್ಲವೇ? ಆದರೆ ನಾವು ನಂಬಿದ ದೇವರನ್ನು ಇತರರೂ ನಂಬಬೇಕು ಎಂದು ಆಗ್ರಹಪಡಿಸಲು ತವಕಿಸುತ್ತೇವಲ್ಲ.

ಅಲ್ಲಿಯೇ ಸಮಸ್ಯೆ ಆಗುವುದು. ಯಾವ ದೇವರೂ ಹೆಚ್ಚಲ್ಲ. ಯಾರೂ ಕಡಿಮೆ ಅಲ್ಲ. ಅಥವಾ ಆ ದೇವರು ಸರಿ ಇದ್ದಾನೆ, ಈ ದೇವರು ಸರಿ ಇಲ್ಲ ಎಂದು ಒಂದು ರೀತಿಯಲ್ಲಿ ಒಡಕು ಹುಟ್ಟಿಸುವ ಕೆಲಸವನ್ನು ನಮಗರಿವಿಲ್ಲದೆಯೇ ಮಾಡುತ್ತಿರುತ್ತೇವೆ. ಇಲ್ಲ ಕೆಲಸ ಮಾಡುವುದು ನಮ್ಮ ನಿರ್ದಿಷ್ಟ ಸಂಬಿಕೆ, ಬೇರೆಯದರಲ್ಲಿ ಅಪನಂಬಿಕೆ ಹಾಗೂ ನಮ್ಮ ನಂಬಿಕೆಯ ಹೇರಿಕೆ. ಒಟ್ಟಾರೆ
ಹೇರಿಕೆ ಪ್ರವೃತ್ತಿ ಸರಿಯಲ್ಲ. ಅದು ಬೇರೆಯವರಿಗೆ ಸೇರಿಕೆ ಆಗುವುದಿಲ್ಲ ಎಂಬ ಪ್ರಜ್ಞೆ, ವಿವೇಕ ನಮ್ಮೆಲ್ಲರಲ್ಲೂ ಮೂಡಿದರೆ ಎಲ್ಲರಿಗೂ ಒಳಿತು.

ಹೇರಿಕೆಯ ವಿಚಾರವನ್ನು ಹಲವಾರು ಉದಾಹರಣೆಗಳ ಮೂಲಕ ಬಹುಶಃ ನಾನೂ ಹೇರಲು ಯತ್ನಿಸುತ್ತೇದ್ದೇನೆಯೋ ಎಂಬ ಹಿಂಜರಿಕೆಯಲ್ಲೇ ಈ ವಿಷಯವನ್ನು ಮುಗಿಸುತ್ತೇನೆ.

ನಾಡಿಶಾಸ್ತ್ರ
ಬೇಕೇಬೇಕು ಎಲ್ಲಕ್ಕೂ ನಂಬಿಕೆ
ಆದರೆ ಬೇಡ ಅದರ ಹೇರಿಕೆ
ಅವರವರ ನಂಬಿಕೆ ಅವರಿಗೆ
ಎಂಬ ಅರಿವು ಇರಲಿ ನಮಗೆ