Sunday, 15th December 2024

ನಿರಂತರ ಪ್ರಯತ್ನಶೀಲತೆಯೇ ಯಶಸ್ಸಿನ ಗುಟ್ಟು !

ಯಶೋ ಬೆಳಗು

yashomathy@gmail.com

ಅರ್ಧ ಹೊಳೆ ಈಜಿದ ಮೇಲೆ ಹೊಳೆದಂಡೆಯೆಡೆಗೆ ಸಾಗುವ ಹಾದಿ ಸಲೀಸೆನ್ನಿಸತೊಡಗಿದೆ. ಯಾರೂ ಒತ್ತಡ ತರದೆಯೇ ಈಗ ಬರವಣಿಗೆಯೆಂಬುದು ನನ್ನ ಬದುಕಿನ ಒಂದು ಭಾಗವಾಗಿ ಹೋದಂತಾಗಿದೆ. ಜತೆಗೆ ಪಟ್ಟ ಶ್ರಮಕ್ಕೆಲ್ಲ ಸಾರ್ಥಕ ವೆಂಬಂತೆ ನನಗೀಗ ಅಂಕಣಕಾರ್ತಿಯೆಂಬ ಐಡೆಂಟಿಟಿಯನ್ನೂ ತಂದುಕೊಟ್ಟಿದೆ.

ಇದು ನನ್ನ ನಲವತ್ತೆಂಟನೆಯ ಅಂಕಣ ಬರಹ. ಇನ್ನೆರಡು ದಾಟಿದರೆ ಬರೋಬ್ಬರಿ ಅರ್ಧ ಶತಕ! ಒಂದು ಮಂಡಲ ಸಂಪೂರ್ಣ ವಾಗುವುಕ್ಕೆ ನಲವತ್ತೆಂಟು ದಿನಗಳು ಬೇಕಾಗುತ್ತದೆ. ಮಂಡಲವೆಂದರೆ ಕೇಂದ್ರಬಿಂದು ಎನ್ನುವ ಅರ್ಥವೂ ಇದೆ. ಧರಣಿ ಮಂಡಲ, ನಕ್ಷತ್ರ ಮಂಡಲ, ಜೀವ ಮಂಡಲ, ಮಂತ್ರಿ ಮಂಡಲ…. ಹೀಗೆ ಅನೇಕ ಮಂಡಲಗಳ ನಡುವೆ ನಾವಿದ್ದೇವೆ.

ನಮ್ಮ ಯಾವುದೇ ಸಂಕಲ್ಪ ಸಿದ್ಧಿಸಲು ನಲವತ್ತೆಂಟು ದಿನಗಳ ಸತತ ಪರಿಶ್ರಮ ಅತ್ಯಗತ್ಯ ಎನ್ನುವ ನಂಬಿಕೆಯಿದೆ. ಭ್ರೂಣಾವಸ್ಥೆ ಯಿಂದ ಶಿಶು ರೂಪ ಪಡೆಯಲಿಕ್ಕೂ ನಲವ ತ್ತೆಂಟು ದಿನಗಳು ಬೇಕಾಗುತ್ತದೆ. ಹಾಗೆಯೇ ಈ ಜನ್ಮದಿಂದ ಮುಕ್ತಿ ಪಡೆಯಲೂ ಸಹ ಒಂದು ಮಂಡಲದ ಅಂದರೆ ನಲವತ್ತೆಂಟು ದಿನಗಳ ಮುನ್ನವೇ ಸೂಚನೆಗಳು ದೊರೆಯಲಾರಂಭವಾಗುತ್ತದೆ ಎನ್ನುವ ಮಾತೂ ಇದೆ.

ಒಂಭತ್ತು ಗ್ರಹಗಳು, ಇಪ್ಪತ್ತೇಳು ನಕ್ಷತ್ರಗಳು, ಹನ್ನೆರಡು ತಿಂಗಳುಗಳು ಕೂಡಿದಾಗಲೂ ಬರುವುದು ನಲವತ್ತೆಂಟೇ. ಅಂದರೆ ಯಾವುದಾದರೂ ಹೊಸ ವಸ್ತು ತನ್ನ ಅಸ್ತಿತ್ವ ಸ್ಥಾಪಿಸಲು ನಲವತ್ತೆಂಟು ಎನ್ನುವುದು ಬಹಳ ಪ್ರಮುಖವಾದದ್ದು. ಅದೇನೇ ಕಷ್ಟವಾದರೂ ಇವತ್ತಿನಿಂದ ಬಿಡದಂತೆ ನಲವತ್ತೆಂಟು ದಿನ ಬೆಳಗಿನ ವಾಯುವಿಹಾರಕ್ಕೆ ಹೋಗುತ್ತೇನೆ ಎಂದು ಸಂಕಲ್ಪಿಸಿ ನಡಿಗೆಯನ್ನು ಆರಂಭಿಸಿ ನೋಡಿ. ನಲವ ತ್ತೊಂಬತ್ತನೆಯ ದಿನದ ಹೊತ್ತಿಗೆ ಅದು ನಿಮ್ಮ ರೂಢಿಯೊಳಗೊಂದು ಭಾಗವಾಗಿ ಹೋಗಿರುತ್ತದೆ.

ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ಇಂದಿನಿಂದಲೇ ಓದಲು ಆರಂಭಿಸುತ್ತೇನೆ ಎನ್ನುವ ಸಂಕಲ್ಪ ತೊಟ್ಟು ಅದೇನೇ ಸಮಸ್ಯೆಗಳು ಎದುರಾದರೂ ಬಿಡದಂತೆ ನಲವತ್ತೆಂಟು ದಿನಗಳ ಕಾಲ ಸತತವಾಗಿ ಓದುವ ಪ್ರಯತ್ನ ಮಾಡಿ ನೋಡಿ, ನಂತರ ಯಾರೂ ಹೇಳದೆಯೇ ನಿರ್ದಿಷ್ಟ ಸಮಯಕ್ಕೆ ಓದುವುದು ನಿಮಗೆ ರೂಢಿಯಾಗಿ ಹೋಗಿರುತ್ತದೆ. ಅದಕ್ಕೇ ಮಕ್ಕಳಿಗೆ ಉತ್ತಮವಾದ ಹವ್ಯಾಸಗಳನ್ನು ರೂಢಿಸಿಕೊಳ್ಳಲಿಕ್ಕೆ ನಲವತ್ತೆಂಟು ದಿನಗಳ ಗಡುವನ್ನು ನೀಡುತ್ತಾರೆ. ಕಾರಣ ಮನಸ್ಸಿಗೆ ಅರಿವು ಮೂಡಿಸಲಿಕ್ಕೆ
ಅಷ್ಟು ಕಾಲಾವಕಾಶದ ಅವಶ್ಯಕತೆ ಇದೆ.

ಇಂದಿಗೂ ಆಯುರ್ವೇದದಲ್ಲಿ ಕೊಡುವ ಔಷಧಿಯನ್ನು ನಲವತ್ತೆಂಟು ದಿನಗಳ ಕಾಲ ಉಪಯೋಗಿಸಲು ತಿಳಿಸುತ್ತಾರೆ. ಆ ಔಷಽಯ ಗುಣ ನಮ್ಮ ದೇಹದಲ್ಲಿ ಬೇರೂರಿ ರೋಗವನ್ನು ನಿವಾರಣೆ ಮಾಡಲು ಅಷ್ಟು ದಿನಗಳ ಅಗತ್ಯ ಇರುತ್ತದೆ. ಆದರೆ ಸಾಕಷ್ಟು ಬಾರಿ ಕೈಗೆತ್ತಿಕೊಂಡ ಕಾರ್ಯಗಳು ಮೂರು ದಿನ ಮಾಡುವಷ್ಟರಲ್ಲಿ ಯಾವುದೋ ನೆಪ ಅಡ್ಡ ಬಂದು ಮಾಡುತ್ತಿರುವ ಕೆಲಸ ಭಗ್ನಗೊಂಡು ಅರ್ಧಕ್ಕೇ ನಿಂತು ಹೋಗುತ್ತದೆ. ಆದರೆ ಅದೇನೇ ಅಡ್ಡಿ ಆತಂಕಗಳು ಎದುರಾದರೂ ಬಿಡದಂತೆ ನೀವು ನಲವತ್ತೆಂಟು ದಿನಗಳು ಮುಂದುವರೆಸಿದರೆ ಆ ಕಾರ್ಯ ಗೆಲುವಿನೆಡೆಗೆ ನಮ್ಮನ್ನು ಕರೆದುಕೊಂಡು ಹೋಗುವುದರಲ್ಲಿ ಅನುಮಾನವೇ ಇಲ್ಲ.

ಒಮ್ಮೆ ಪ್ರಯತ್ನಿಸಿ ನೋಡಿ. ಇಂಪಾಸಿಬಲ್ ಅನ್ನುವ ಕೆಲಸಗಳೆಲ್ಲ ‘ಐ ಆಮ್ ಪಾಸಿಬಲ್’ ಎಂಬಂತೆ ಬದಲಾಗದಿದ್ದರೆ ಕೇಳಿ.
ಈ ಅಂಕಣ ಬರೆಯಲು ಆರಂಭಿಸಿದಾಗ ಮೊದಲೆರಡು ವಾರ ಮನದಲ್ಲಿ ಹೆಪ್ಪುಗಟ್ಟಿದ್ದ ಮಾತುಗಳೆಲ್ಲ ಝರಿಯಾಗಿ ಹರಿಯ ತೊಡಗಿತು. ಮೂರನೇ ವಾರಕ್ಕಾಗಲೇ ‘ಅಯ್ಯೋ ದಿನಗಳು ಅದೆಷ್ಟು ಬೇಗ ಓಡುತ್ತಿವೆಯಲ್ಲ? ಸೋಮವಾರ ಕಳೆದು ಇನ್ನೂ ಎರಡು ದಿನವಾಗಿಲ್ಲ… ಆಗಲೇ ಮತ್ತೊಂದು ಎದುರಾಗಿ ಬಿಟ್ಟಿತಾ? ಏನಪ್ಪಾ ಬರೆಯುವುದು ಅನ್ನಿಸುವ ಹೊತ್ತಿಗೆ ಸರಿಯಾಗಿ, ಏನೂ ವಿಷಯವಿಲ್ಲದಿದ್ದಾಗಲೂ ಖುಷ್ವಂತ್ ಸಿಂಗ್ ಹೇಗೆ ತಮ್ಮ ಅಂಕಣವನ್ನು ಆಸಕ್ತಿಕರವೆನ್ನಿಸುವ ಹಾಗೆ ಬರೆಯುತ್ತಿದ್ದರು’ ಎನ್ನುವ ಮಾತುಗಳು ಬರೆಯಲು ಉತ್ಸಾಹ ತುಂಬಿದವು.

ಮತ್ತೆರಡು ವಾರ ಕಳೆಯುತ್ತಿದ್ದಂತೆಯೇ ನಾನು ಬರೆದು, ಅದನ್ನು ಓದಿ ಯಾರು ಉದ್ಧಾರವಾಗ ಬೇಕಿದೆ? ಯಾರು ಬರೆದರೂ, ಬರೆಯದಿದ್ದರೂ ಪತ್ರಿಕೆಯೇನೂ ನಿಂತು ಹೋಗುವುದಿಲ್ಲವಲ್ಲ? ಸಾಕಿದು. ಮನೆ, ಮಗನ ಕಡೆಗೆ ಹೆಚ್ಚಿನ ಗಮನ ಹರಿಸೋಣ ವೆಂದು ತಪ್ಪಿಸಿಕೊಳ್ಳಲು ಕಾರಣವನ್ನು ಹುಡುಕಲಾರಂಭಿಸಿತು ಕಳ್ಳ ಮನಸ್ಸು. ‘ನೂರು ಅಂಕಣ ಆದ ಮೇಲೆ ಪುಸ್ತಕ  ಮಾಡೋಣ’ ಅನ್ನುವ ಮಾತುಗಳು ಮಾರ್ದನಿಸಲು ಶುರುವಾಗಿ ಮತ್ತೆ ಬರಹದೆಡೆಗೆ ಮರಳುತ್ತಿದ್ದೆ.

ಮತ್ತೊಂದೆರಡು ವಾರ ಕಳೆಯುವ ಹೊತ್ತಿಗೆ ಬರಹದ ಕುರಿತು ಮೆಚ್ಚುಗೆಯ ಮಾತುಗಳು ಕೇಳಿ ಬರಲಾರಂಭಿಸಿತು. ಈ ವಿಷಯದ ಬಗ್ಗೆ ಬರೆದರೆ ಚೆನ್ನಾಗಿರತ್ತೆ ನೋಡಿ ಎನ್ನುತ್ತಾ ಹಿತೈಷಿಗಳು ಒಂದಷ್ಟು ಸಲಹೆಗಳನ್ನು ಕೊಟ್ಟರು. ಅದು ಮತ್ತೊಂದೆರಡು ವಾರದವರೆಗೂ ಮುನ್ನಡೆಸಿತು. ಅಮ್ಮಾ ವಾರದಲ್ಲಿ ಸಿಗೋದೇ ಒಂದು ಭಾನುವಾರ. ನೀನು ಆ ದಿನವೂ ಹೀಗೆ ಬರೆಯುತ್ತಾ ಕುಳಿತುಬಿಟ್ಟರೆ ಹೇಗೆ? ನಿನಗೆ ತುಂಬ ಕಷ್ಟವೆನಿಸುತ್ತಿದ್ದರೆ ಬಿಟ್ಟುಬಿಡು… ಅನ್ನುವ ಮಗನ ಮಾತುಗಳಿಂದ ಅಯ್ಯೋ ಅವನಿಗೆ ಸರಿಯಾಗಿ ಸಮಯ ಕೊಡಲಾಗುತ್ತಿಲ್ಲವೆಂಬ ತೊಳಲಾಟ.

ಇದೆಲ್ಲದರ ನಡುವೆ, ನೀವ್ಯಾಕೆ ಈ ಪತ್ರಿಕೆಗೆ ಬರೆಯುತ್ತಿದ್ದೀರಿ? ನಿಮ್ಮದೇ ಪತ್ರಿಕೆ ಇತ್ತಲ್ಲ? ಅನ್ನುವ ಮಾತುಗಳು. ಬೇರು ಒಂದೇ ಆದರೂ ಕೊಂಬೆಗಳು ಬೇರೆ ಬೇರೆಯಲ್ಲವೇ? ರವಿಯ ಕನಸನ್ನು ಮುನ್ನಡೆಸುವ ಶಕ್ತಿ ಇದ್ದ ಮಕ್ಕಳು ಅದರ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಅದನ್ನು ಚೆನ್ನಾಗಿ ಮುಂದುವರೆಸಿಕೊಂಡು ಹೋಗಲಿ. ಅದಕ್ಕೆ ನಾನು ಅಡ್ಡಿಯಾಗಬಾರದು. ನನಗೆ ನನ್ನದೇ ಆದ
ಸಾಮಾಜಿಕ ಜವಾಬ್ದಾರಿಗಳಿವೆ. ಅದರಲ್ಲಿ ನನಗೆ ತೃಪ್ತಿ ಇದೆ ಎಂದು ಎದುರಾದ ಪ್ರಶ್ನೆಗಳಿಗೆ ಉತ್ತರಿಸುತ್ತಾ ಮತ್ತೊಂದೆರಡು
ವಾರ ಮುನ್ನಡೆಯಿತು ಬರವಣಿಗೆಯ ರಥ. ನಂತರ ಇದು ನನ್ನ ಬದುಕು. ಯಾರಿಗೂ ಉತ್ತರಿಸುವ ಅವಶ್ಯಕತೆಯಿಲ್ಲ.

ಯಾರಿಗೂ ನೋವು ಮಾಡದಂತೆ, ತೊಂದರೆಯಾಗದಂತೆ ಬದುಕುವ ಎಲ್ಲ ಹಕ್ಕೂ ನನಗಿದೆ. ಗೆರೆ ಗೀಚಿಕೊಂಡು ದೂರ ಉಳಿದವ ರಿಗೆ ನನ್ನ ಅವಶ್ಯಕತೆಯಿಲ್ಲ ಎನ್ನುವ ನಿರ್ಧಾರಕ್ಕೆ ಬಂದ ಮೇಲೆ ಮನಸ್ಸಿಗೊಂಥರಾ ನಿರುಮ್ಮಳ. ಹತ್ತತ್ತು ಬರಹಗಳು ಪೂರ್ಣ ಗೊಂಡಾಗಲೂ ಅಬ್ಬಾ! ಹತ್ತಾಯಿತು, ಇಪ್ಪತ್ತಾಯಿತು, ಮೂವತ್ತಾಯಿತು, ನಲವತ್ತಾಯಿತು ಎಂದು ಏರಿಳಿಯುವ ಎಣಿಕೆಯ ನಿರತವಾಗಿದ್ದೆ. ಆದರೆ ಇನ್ನೆರಡೇ ಎರಡು ಕಮ್ಮಿ ಇದೆ ಐವತ್ತಕ್ಕೆ ಎನ್ನುವುದನ್ನು ಕಂಡಾಗ ಮನಸ್ಸಿನಲ್ಲಿ ಒಂದು
ಗೆಲುವಿನ ಉತ್ಸಾಹ.

ಅರ್ಧ ಹೊಳೆ ಈಜಿದ ಮೇಲೆ ಹೊಳೆದಂಡೆಯೆಡೆಗೆ ಸಾಗುವ ಹಾದಿ ಸಲೀಸೆನ್ನಿಸತೊಡಗಿದೆ. ಯಾರೂ ಒತ್ತಡ ತರದೆಯೇ ಈಗ ಬರವಣಿಗೆಯೆಂಬುದು ನನ್ನ ಬದುಕಿನ ಒಂದು ಭಾಗವಾಗಿ ಹೋದಂತಾಗಿದೆ. ಜತೆಗೆ ಪಟ್ಟ ಶ್ರಮಕ್ಕೆಲ್ಲ ಸಾರ್ಥಕವೆಂಬಂತೆ ನನಗೀಗ ಅಂಕಣಕಾರ್ತಿಯೆಂಬ ಐಡೆಂಟಿಟಿಯನ್ನೂ ತಂದುಕೊಟ್ಟಿದೆ. ಅವಕಾಶ ಕೊಟ್ಟು, ಪ್ರೋತ್ಸಾಹಿಸಿ, ಬೆಳೆಸಿದ ಎಲ್ಲರಿಗೂ ನನ್ನ ವಿನಯಪೂರ್ವಕ ನಮನಗಳು.

ಮೊದಲು ಪ್ರತಿ ಕೆಲಸವೂ ಕಷ್ಟಕರ ಅಂತಲೇ ಅನ್ನಿಸುತ್ತದೆ. ಬರವಣಿಗೆಯೊಂದೇ ಅಲ್ಲ. ಯಾವುದೇ ರಂಗವಿರಬಹುದು. ಎದುರಿ ಗಿರುವ ಟಾ ನನ್ನಿಂದ ಸಾಧ್ಯವಿಲ್ಲವೆ ನಿಸಿಬಿಡುತ್ತದೆ. ಹಾಗನ್ನಿಸಿದ ಕೂಡಲೇ ನೀವು ಕೈಚೆಲ್ಲಿ ಕುಳಿತರೆ ಪ್ರಯತ್ನಕ್ಕೆ ಮುಂಚೆಯೇ ಸೋತಂತಾಗುತ್ತದೆ. ಇರುವ ಅಲ್ಪಸ್ವಲ್ಪ ಧೈರ್ಯವನ್ನೆಲ್ಲ ಕಲೆ ಹಾಕಿಕೊಂಡು ಆದದ್ದಾಗಲಿ ಒಮ್ಮೆ ಪ್ರಯತ್ನಿಸಿ ನೋಡೋಣ ಎಂದು ಹಟ ಹಿಡಿದು ಹೊರಟರೆ, ಗೆಲುವು ನಿಮ್ಮ ಕಾಲ ಬಳಿ ಗಿರಕಿ ಹೊಡೆಯುತ್ತದೆ.

ಸಾಧನೆಯ ಹಾದಿಯಲ್ಲಿ ಸ್ವಲ್ಪ ದೂರ ಸಾಗಿದ ಕೂಡಲೇ ಇದು ನನ್ನಿಂದಾಗುವುದಿಲ್ಲ ಎನ್ನುವ ಭಯ ಹುಟ್ಟುವುದು ಸಹಜವೇ. ಅದನ್ನು ಸವಾಲಾಗಿ ಸ್ವೀಕರಿಸಿ ಮುಂದುವರೆಯುವ ಸಂಕಲ್ಪ ಮಾಡಿದಿರೆಂದರೆ ನೀವು ಅರ್ಧ ಗೆದ್ದಂತೆಯೇ. ಗೆಲುವುಗಳು ದಕ್ಕು ವುದೇ ಹಾಗೆ. ಅವು ಚಿಕ್ಕವಿರಬಹುದು. ದೊಡ್ಡವಿರಬಹುದು. ಮೊದಲು ಅಸಾಧ್ಯವೆನ್ನಿಸಿದ್ದು, ಕ್ರಮೇಣ ಆಗಲಿಕ್ಕಿಲ್ಲವೇನೋ ಅನ್ನಿಸಿ, ಅರ್ಧ ಹೊಳೆ ದಾಟಿದ ಮೇಲೆ ಮತ್ತೇನಿದೆ? ಒಂದಾದ ಮೇಲೊಂದರಂತೆ ಗೆಲುವನ್ನು ಸಾಧಿಸುತ್ತಾ ಹೋಗುತ್ತೀರಿ.

ಇದರಲ್ಲಿ ಅದೃಷ್ಟದ ಪ್ರಶ್ನೆಯಿಲ್ಲ. ಆಶೀರ್ವಾದಗಳ ಅವಶ್ಯಕತೆಯಿಲ್ಲ. ಬೆಸ್ಟ್ ಆಫ್ ಲಕ್ ಎನ್ನಲು ಒಬ್ಬ ಗೆಳೆಯ ಅಥವಾ ಗೆಳತಿ ಕೂಡ ಬೇಕಾಗುವುದಿಲ್ಲ. ಅದಕ್ಕೆ ಬೇಕಾಗಿರುವುದು ಗೆದ್ದೇ ಗೆಲ್ಲುವೆ ಒಂದು ದಿನ ಎನ್ನುವಂಥ ನಿಮ್ಮ ದೃಢವಾದ ಮನಸ್ಸು.
ಇಂದಿಗೂ ಜನ ಮಾತಾಡುತ್ತಲೇ ಇದ್ದಾರೆ. ರಜನಿ ಕಾಂತ್ ಬಸ್ಸಲ್ಲಿ ಟಿಕೆಟ್ ಹರೀತಿದ್ದ, ಮೋದಿ ಚಾಯ್ ಮಾರ್ತಿದ್ದ ಅಂತ. ಆದರೆ ಅವರಿವರ ಬಗ್ಗೆ ಅಂಥದ್ದೇ ಮಾತುಗಳನ್ನು ಆಡುತ್ತಾ ಇಂದಿಗೂ ಅ ಇದ್ದಾರೆ ಒಂದಿಂಚೂ ಸರಿಯದೆ, ಬೆಳೆಯದೆ.

ಅದೇ ಗುಂಪಿನ ನಡುವೆಯಿಂದ ತಮ್ಮ ಗುರಿಯತ್ತ ಗಮನವಿಟ್ಟು ಸಾಗುತ್ತಾ ಹೋದವರು ಇಂದು ಅವರೆಲ್ಲರಿಗಿಂತ ಉಚ್ಛ ಸ್ಥಾನದಲ್ಲಿ ನಿಂತು ಗೆಲುವಿನ ಕಿರೀಟ ಧರಿಸಿದ್ದಾರೆ. ಅವರು ಅಷ್ಟೆತ್ತರಕ್ಕೆ ಸುಮ್ಮನೇ ಏರಿರುವುದಿಲ್ಲ. ಬಂದ ಸವಾಲುಗಳನ್ನೆಲ್ಲ
ಎದುರಿಸುತ್ತಲೇ ತಮ್ಮ ನಡೆಯನ್ನು ಮುಂದುವರೆಸಿದವರು. ಹೀಗೆ ಹುಡುಕುತ್ತಾ ಹೋದರೆ ಎಲ್ಲ ಸಾಧಕರ ಹಿಂದೆಯೂ ಇಂಥಾ ನೂರಾರು ಕಥೆಗಳನ್ನು ಕಾಣಬಹುದು.

ಅಂಥ ಸಾಧಕರ ಪಟ್ಟಿಯಲ್ಲಿ ನಿಮ್ಮ ಹೆಸರೂ ಮೂಡಬೇಕೆಂದರೆ ಇಂದಿನಿಂದಲೇ ನಿಮ್ಮ ಸಂಕಲ್ಪದೆಡೆಗೆ ಗಮನ ಕೇಂದ್ರೀ ಕರಿಸುತ್ತಾ ಕೆಲಸಗಳನ್ನು ಆರಂಭಿಸಿ. ನಿಶ್ಚಯವಾಗಿಯೂ ಗೆಲುವು ನಿಮ್ಮದಾಗುತ್ತದೆ.