Thursday, 12th December 2024

ಕರ್ನಾಟಕ-ಉತ್ತರ ಪ್ರದೇಶ ನಡುವೆ ಟಗ್ ಆಫ್ ವಾ‌ರ್‌

ದೇವನಹಳ್ಳಿ ರಸ್ತೆ ಉದ್ದಕ್ಕೂ ಯೋಗಿ ಆದಿತ್ಯನಾಥ್ ಸರಕಾರದ ಜಾಹೀರಾತು

ವಿಶೇಷ ವರದಿ: ರಂಜಿತ್ ಎಚ್. ಅಶ್ವತ್ಥ

ಬೆಂಗಳೂರು: ದೇಶದ ಪ್ರತಿಷ್ಠಿತ ವೈಮಾನಿಕ ಪ್ರದರ್ಶನವಾಗಿರುವ ಏರೋ ಇಂಡಿಯಾ ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಕ ಹಾಗೂ ಉತ್ತರ
ಪ್ರದೇಶ ನಡುವೆ ಟಗ್‌ಆಫ್ ವಾರ್ ಮುಂದುವರಿದಿದೆ.

ಬೆಂಗಳೂರಿನ ವಾಯುನೆಲೆಯಲ್ಲಿ ಏರೋ ಇಂಡಿಯಾ ಆರಂಭವಾಗಿದ್ದರೂ, ಉತ್ತರ ಪ್ರದೇಶ ಸರಕಾರ ಮುಂದಿನ ಏರೋ ಇಂಡಿಯಾವನ್ನು ತಮ್ಮ ನೆಲೆಯಲ್ಲಿ ನಡೆಸಬೇಕು ಎನ್ನುವ ಪ್ರಯತ್ನಕ್ಕೆ ಚಾಲನೆ ನೀಡಿದೆ. ಕರ್ನಾಟಕದ ರೀತಿಯಲ್ಲಿಯೇ ಉತ್ತರ ಪ್ರದೇಶದಲ್ಲಿ ವೈಮಾನಿಕ ಹಾಗೂ ರಕ್ಷಣಾ
ಕ್ಷೇತ್ರಕ್ಕೆ ಸಂಬಂಧಿಸಿದಂತೆ ಖಾಸಗಿ ಹಾಗೂ ಸರಕಾರ ಹೂಡಿಕೆಗೆ ಅವಕಾಶವಿದೆ. ಆದ್ದರಿಂದ ಉತ್ತರಪ್ರದೇಶವನ್ನು ಆರಿಸಿಕೊಳ್ಳಿ ಎನ್ನುವ
ಜಾಹೀರಾತು ಫಲಕವನ್ನು ಹಾಕಲಾಗಿದೆ.

ಉತ್ತರ ಪ್ರದೇಶದಲ್ಲಿ ವೈಮಾನಿಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಕಾರಿಡಾರ್ ಅನ್ನು ಆರಂಭಿಸಿರುವುದರಿಂದ, ಅದನ್ನೇ ಮುಂದಿಟ್ಟುೊಂಡು ವೈಮಾನಿಕ ಪ್ರದರ್ಶನವನ್ನು ಲಕ್ನೋಗೆ ಸ್ಥಳಾಂತರಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಮುಂದುವರಿದಿವೆ. ಆದರೆ ಕರ್ನಾಟಕವು ಬೆಂಗಳೂರು ಏರೋಸ್ಪೇಸ್ ಹಬ್ ಆಗಿದೆ. ಆದ್ದರಿಂದ ಏರೋ ಇಂಡಿಯಾ ಕರ್ನಾಟಕದಲ್ಲಿಯೇ ನಡೆಯಬೇಕು ಎನ್ನುವ ವಾದವನ್ನು ರಕ್ಷಣಾ ಇಲಾಖೆಯ ಮುಂದಿಡುತ್ತಾ ಬಂದಿದೆ.

ಲಕ್ನೋ ಪಾಲಿಟಿಕ್ಸ್‌ ಶುರು: ಕಳೆದ ಎರಡು ಆವೃತ್ತಿಯಿಂದ ಬೆಂಗಳೂರಿನ ಬದಲು ಲಕ್ನೋದಲ್ಲಿ ಏರೋ ಇಂಡಿಯಾ ಆಯೋಜಿಸಬೇಕು ಎನ್ನುವ ಉತ್ತರ ಪ್ರದೇಶ ಸರಕಾರದ ಒತ್ತಡ ಇದೀಗ ಪುನಃ ಶುರುವಾಗಿದೆ. 2023ರ ಏರೋ ಇಂಡಿಯಾವನ್ನು ಲಕ್ನೋದಲ್ಲಿ ಆಯೋಜಿಸಲು ಅಗತ್ಯವಿರುವ ವೇದಿಕೆಯನ್ನು ಈಗಿನಿಂದ ಸಿದ್ಧಪಡಿಸಿಕೊಳ್ಳುತ್ತಿದೆ. ಆದ್ದರಿಂದಲೇ ಈ ಬಾರಿ ಭಾರಿ ಪ್ರಮಾಣದಲ್ಲಿ ಉತ್ತರಪ್ರದೇಶದಲ್ಲಿ ವೈಮಾನಿಕ ಕ್ಷೇತ್ರಕ್ಕಿರುವ ಅವಕಾಶಗಳ ಬಗ್ಗೆ ಪ್ರಚಾರ ನೀಡುತ್ತಿದ್ದಾರೆ.

ರಸ್ತೆ ಉದ್ದಕ್ಕೂ ಉತ್ತರಪ್ರದೇಶ ಸರಕಾರದ ಜಾಹೀರಾತು:ಬುಧವಾರದಿಂದ ಯಲಹಂಕ ವಾಯುನೆಲೆಯಲ್ಲಿ ಆರಂಭಗೊಂಡಿರುವ ಏರೋ ಇಂಡಿಯಾ 2021ರ ವೈಮಾನಿಕ ಪ್ರದರ್ಶನಕ್ಕೆ ಒಂದೆರೆಡು ದಿನಗಳ ಮೊದಲೇ, ಉತ್ತರ ಪ್ರದೇಶ ಸರಕಾರ ಯೋಗಿ ಆದಿತ್ಯನಾಥ್ ಅವರ ಭಾವಚಿತ್ರ ದೊಂದಿಗೆ, ‘ಉತ್ತರ ಪ್ರದೇಶದಲ್ಲಿ ರಕ್ಷಣೆ ಹಾಗೂ ವೈಮಾನಿಕ ಕ್ಷೇತ್ರಕ್ಕಿರುವ ಅವಕಾಶ.

ಉತ್ತರಪ್ರದೇಶಕ್ಕೆ ಬನ್ನಿ’ ಎನ್ನುವ ಘೋಷಣೆಗಳ ಫ್ಲೆಕ್ಸ್‌‌ಗಳನ್ನು ಹಾಕಲಾಗಿದೆ. ಯಲಹಂಕ ವಾಯುನೆಲೆಗೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳಲ್ಲಿಯೂ ಈ ರೀತಿಯ ಫ್ಲೆಕ್ಸ್‌‌ಗಳು ರಾರಾಜಿಸುತ್ತಿವೆ.

ಖಾಸಗಿ ಸಂಸ್ಥೆಗಳನ್ನು ಸೆಳೆಯುವ ತಂತ್ರ ಕೇವಲ ಉತ್ತರ ಪ್ರದೇಶ ಮಾತ್ರವಲ್ಲದೇ, ಗುಜರಾತ್ ಹಾಗೂ ತಮಿಳುನಾಡು ಸರಕಾರಗಳೂ ತಮ್ಮ ರಾಜ್ಯದಲ್ಲಿ ವೈಮಾನಿಕ ಕ್ಷೇತ್ರ ಹಾಗೂ ರಕ್ಷಣಾ ಕ್ಷೇತ್ರಕ್ಕಿರುವ ಅವಕಾಶಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಪ್ರದರ್ಶನ ಮಳಿಗೆ ಹಾಗೂ ವಿಶೇಷ
ಸೆಮಿನಾರ್‌ಗಳನ್ನು ಹಮ್ಮಿಕೊಂಡಿದೆ. ಈ ಮೂಲಕ ಏರೋ ಇಂಡಿಯಾದಲ್ಲಿ ಭಾಗವಹಿಸಿರುವ ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆಗಳನ್ನು ತಮ್ಮ ರಾಜ್ಯದತ್ತ ಸೆಳೆಯುವ ಲೆಕ್ಕಾಚಾರದಲ್ಲಿವೆ.

ಏರೋ ಇಂಡಿಯಾ ಮೇಲೆ ಏಕೆ ಕಣ್ಣು?

*ಇದೊಂದು ಅಂತಾರಾಷ್ಟ್ರೀಯ ಕಾರ್ಯಕ್ರಮ
*ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಹೂಡಿಕೆ ಸಾಧ್ಯತೆ
*ವೈಮಾನಿಕ ಹಾಗೂ ರಕ್ಷಣಾ ಕ್ಷೇತ್ರದಲ್ಲಿ ಉತ್ತರ ಪ್ರದೇಶವನ್ನು ಮುಂದೆ ತರಲು ಸಾಧ್ಯ
*ಮೂರು ದಿನಗಳ ಈ ಕಾರ್ಯಕ್ರಮದಿಂದ, ಪರೋಕ್ಷವಾಗಿ ರಾಜ್ಯಕ್ಕೆ ಕೋಟ್ಯಂತರ ರುಪಾಯಿ ಲಾಭ

ಕರ್ನಾಟಕದ ವಾದವೇನು ?

*ಪ್ರಮುಖ ರಕ್ಷಣಾ ಸಂಸ್ಥೆಗಳ ಕಚೇರಿ ಬೆಂಗಳೂರಿನಲ್ಲಿವೆ
*ಬೆಂಗಳೂರು ಏರೋಸ್ಪೇಸ್ ಹಬ್ ಆಗಿ ರೂಪುಗೊಂಡಿದೆ
*ತುರ್ತು ಪರಿಸ್ಥಿತಿಗೆ ಲ್ಯಾಂಡಿಂಗ್‌ಗೆ 30 ಕಿ.ಮೀ ವ್ಯಾಪ್ತಿಯಲ್ಲಿ ಎಚ್‌ಎಎಲ್, ಜಕ್ಕೂರು ವಿಮಾನ ನಿಲ್ದಾಣ
*ಅಂತಾರಾಷ್ಟ್ರೀಯ ಪ್ರತಿನಿಧಿಗಳಿಗೆ, ಬಂದು-ಹೋಗುವುದಕ್ಕೆ ಅನುಕೂಲವಾಗುವಂತೆ ವಿಮಾನ ನಿಲ್ದಾಣವಿದೆ
*ಅಂತಾರಾಷ್ಟ್ರೀಯ ಮಟ್ಟಕ್ಕೆ ಸರಿಹೊಂದುವ ಹೋಟೆಲ್ ಹಾಗೂ ಇತರ ಸೌಕರ್ಯ ಬೆಂಗಳೂರಿನಲ್ಲಿದೆ.