Thursday, 12th December 2024

ಟುಕಡೇ ಗ್ಯಾಂಗ್’ನ ಕೈಗೊಂಬೆ ಈ ಚೇತನ್‌

ವೀಕೆಂಡ್ ವಿತ್‌ ಮೋಹನ್

camohanbn@gmail.com

ಕನ್ನಡ ಸಿನಿಮಾಗಳು ಬಾಲಿವುಡ್‌ನ ಖಾನ್‌ಗಳಿಗೆ ಸೆಡ್ಡು ಹೊಡೆದು ರಾಷ್ಟ್ರಮಟ್ಟದಲ್ಲಿ ಸದ್ದುಮಾಡುತ್ತಿವೆ. ಒಂದು ಕಾಲಕ್ಕೆ ಎಡಚರ (ಅಂದರೆ ಎಡಪಂಥೀಯರ) ‘ಅಡ್ಡಾ’ ಆಗಿದ್ದ ಬಾಲಿವುಡ್‌ಗೆ, ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಚಿತ್ರ ಗಳನ್ನು ನಿರ್ಮಿಸಿದರೆ ಮಾತ್ರವೇ ಉಳಿಗಾಲ ಎಂಬಂಥ ಪರಿಸ್ಥಿತಿ ಇಂದು ಎದುರಾಗಿದೆ.

ಹಿಂದೂಧರ್ಮದ ಅವಹೇಳನವೇ ಚಿತ್ರದ ಕಥಾವಸ್ತುವಾಗಿದ್ದ ಕಾಲ ಹೊರಟು ಹೋಯಿತು; ಹಿಂದೂಧರ್ಮಕ್ಕೆ ಹಾನಿ ಯುಂಟುಮಾಡುವಂಥ ಸಣ್ಣ ಸನ್ನಿವೇಶ ವಿದ್ದರೂ ಆ ಚಿತ್ರ ನೆಲಕಚ್ಚುತ್ತದೆ. ಒಟ್ಟಾರೆಯಾಗಿ, ಸಿನಿಮಾರಂಗದಲ್ಲಿ ತಾವಾಡಿದ್ದೇ ಆಟವೆಂದುಕೊಂಡಿದ್ದ ಎಡಚರ ಬುಡಕ್ಕೆ ಬೆಂಕಿ ಬಿದ್ದಿದೆ. ಸಿನಿಮಾಗಳ ಮೂಲಕ ಯುವಪೀಳಿಗೆಯ ಮನಸ್ಥಿತಿ ಬದಲಿಸಿ ತಮ್ಮ ಸತ್ತುಹೋದ ಸಿದ್ಧಾಂತವನ್ನು ತುರುಕುವ ಕಾಲ ಹೊರಟುಹೋಗಿದೆ.

ಭಾರತೀಯ ಸಂಸ್ಕೃತಿ, ಮುಚ್ಚಿಟ್ಟ ಇತಿಹಾಸ, ಹಿಂದೂ ಧರ್ಮದ ಆಚರಣೆಗಳನ್ನು ದಕ್ಷಿಣ ಭಾರತದ ಹಲವು ಚಿತ್ರಗಳು ಬೆಳ್ಳಿತೆರೆಯ ಮೇಲೆ ಮೂಡಿಸುತ್ತಿರುವ ಪರಿಯನ್ನು ಕಂಡ ಪ್ರೇಕ್ಷಕ ಹುಚ್ಚೆದ್ದು ಕುಣಿಯುತ್ತಿದ್ದಾನೆ. ಈ ಸಿನಿಮಾಗಳು ಬಾಲಿವುಡ್ ಸಿನಿಮಾ ಗಳನ್ನೂ ಮೀರಿಸಿ ನೂರಾರು ಕೋಟಿ ರು. ವ್ಯವಹಾರ ಮಾಡುತ್ತಿವೆ. ಅವುಗಳಲ್ಲೊಂದು- ‘ಕಾಂತಾರ’ ಸಿನಿಮಾ.

ಕನ್ನಡದ ಪ್ರತಿಭೆ ರಿಷಭ್ ಶೆಟ್ಟಿ ನಿರ್ದೇಶನದ ಈ ಚಿತ್ರ, ಕರಾವಳಿಯ ಜನ ಆರಾಧಿಸುವ ದೈವನರ್ತನದ  ಕಥಾಹಂದರವನ್ನೊಳ ಗೊಂಡಿದೆ. ದೈವವೊಂದು ತನ್ನನ್ನು ನಂಬಿರುವ ಜನರ ಅಸ್ತಿತ್ವವನ್ನು ಉಳಿಸಿಕೊಡುವ ಕಥೆಯುಳ್ಳ ಈ ಚಿತ್ರದಲ್ಲಿ ದೈವದ ರೂಪದಲ್ಲಿ ಕಾಣಿಸಿಕೊಂಡಿರುವ ರಿಷಭ್ ಶೆಟ್ಟಿಯ ಅದ್ಭುತ ನಟನೆ ಪ್ರೇಕ್ಷಕರನ್ನು ಮಂತ್ರ ಮುಗ್ಧರನ್ನಾಗಿಸುತ್ತದೆ; ಆದರೆ, ಕರ್ನಾಟಕದ ‘ಟುಕಡೇ’ ಗ್ಯಾಂಗಿನ ಸದಸ್ಯ ಚೇತನ್‌ರಿಗೆ ಇದು ಮೈಯೆಲ್ಲ ಉರಿಯುವಂತೆ ಮಾಡಿರುವುದೇಕೋ ಗೊತ್ತಿಲ್ಲ!

ಸರಿಯಾದ ಕನ್ನಡ ಪದಗಳನ್ನು ಬಳಸಲು ಬಾರದ ಇವರು ಕರಾವಳಿಯ ನಂಬಿಕೆಯನ್ನೊಳಗೊಂಡ ಈ ಚಿತ್ರದ ಬಗ್ಗೆ ಹಗುರ ವಾಗಿ ಮಾತನಾಡಿದ್ದಾರೆ. ‘ಸಂವಿಧಾನವನ್ನು ಹರಿದುಹಾಕಬೇಕಾಗುತ್ತದೆ’ ಎಂದಿದ್ದ ಪೆರಿಯಾರ್‌ನ ಅನುಯಾಯಿಯಾಗಿರುವ
ಚೇತನ್, ಪಕ್ಕಾ ಎಡಚರ ಚಿಂತನೆಯ ಮನುಷ್ಯ. ಇವರ ಬಾಯಲ್ಲಿ ಯಾವಾಗಲೂ ಬರುವ ಪದಗಳೆಂದರೆ, ‘ಬ್ರಾಹ್ಮಣ್ಯ’, ‘ಸಂಸ್ಕೃತ’, ‘ಹೇರಿಕೆ’ ಮತ್ತು ‘ಜಾತ್ಯತೀತ’; ಸಾಮಾಜಿಕ ಜಾಲತಾಣದಲ್ಲಿ ಇವರು ಬರೆಯುವ ಟೊಳ್ಳುಕಥೆಗಳಲ್ಲಿ ಈ ೪ ಪದಗಳು ಇರಲೇಬೇಕು!

ಅತ್ತ ಬುದ್ಧಿಜೀವಿಯೂ ಅಲ್ಲದ, ಇತ್ತ ಬುದ್ಧಿವಂತನೂ ಅಲ್ಲದ ಎಡಬಿಡಂಗಿ ವ್ಯಕ್ತಿ ಇವರು. ‘ಕಾಂತಾರ ಸಿನಿಮಾದಲ್ಲಿನ
ಆದಿವಾಸಿಗಳ ಸಾಂಸ್ಕೃತಿಕ ಆಚರಣೆ ಹಿಂದೂಧರ್ಮದ್ದಲ್ಲ, ಅದು 75000 ವರ್ಷಗಳಷ್ಟು ಹಳೆಯ ಆಚರಣೆ’ ಎನ್ನುತ್ತಾರೆ
ಚೇತನ್. ಹಾಗಾದರೆ, ಲಕ್ಷಾಂತರ ವರ್ಷಗಳ ಹಿಂದಿದ್ದ ಸತ್ಯಯುಗದಲ್ಲಿ ಭಗವಂತನಾದ ವಿಷ್ಣುವು ‘ವರಾಹ’ನ ಅವತಾರವೆತ್ತಿ ಬಂದಾಗ ಇದ್ದದ್ದು ಹಿಂದೂಧರ್ಮ.

ಭಾರತೀಯ ಸಂಸ್ಕೃತಿಯನ್ನು ನಾಶಮಾಡಲು ಬ್ರಿಟಿಷರು ಸೃಷ್ಟಿಸಿದ ‘ಆರ್ಯ’ ಮತ್ತು ‘ದ್ರಾವಿಡ’ ಸಿದ್ಧಾಂತಕ್ಕೆ ಬಲಿಯಾದವರು ಈ ಚೇತನ್. ಹಿಂದೂಧರ್ಮ ಕೇವಲ 3500 ವರ್ಷಗಳಷ್ಟು ಹಳೆಯದ್ದೆಂದು ಬೊಗಳೆಬಿಡುವ ಇವರಿಗೆ, ಆರ್ಯರು ಭಾರತದ ಮೇಲೆ ಆಕ್ರಮಣ ಮಾಡಿದ್ದಕ್ಕೆ ಒಂದೇ ಒಂದು ಸಾಕ್ಷ್ಯಾಧಾರವನ್ನೂ ಒದಗಿಸಲಾಗಲಿಲ್ಲ. ಲಕ್ಷಾಂತರ ವರ್ಷಗಳ ಹಿಂದಿನ ತ್ರೇತಾಯುಗದಲ್ಲಿ ನಡೆದ ರಾಮಾಯಣದ ಕುರುಹುಗಳು ಇಂದಿಗೂ ಭಾರತದಲ್ಲಿ ಕಾಣಸಿಗುತ್ತವೆ. ಶ್ರೀಕೃಷ್ಣ ಪರಮಾತ್ಮನ ವಾಸಸ್ಥಾನವಾಗಿದ್ದ ದ್ವಾರಕಾ ನಗರದ ಅವಶೇಷಗಳು ಇಂದಿಗೂ ಗುಜರಾತಿನ ಸಮುದ್ರದ ತಳದಲ್ಲಿವೆ.

ಉತ್ತರ ಪ್ರದೇಶದ ಸಿನೌಲಿಯಲ್ಲಿ ಉತ್ಖನನ ಮಾಡಿದಾಗ ಪುರಾತತ್ತ್ವ ಇಲಾಖೆಯವರಿಗೆ ಸಿಕ್ಕಂಥ ಗೋರಿಗಳಲ್ಲಿ ೪೫೦೦ ವರ್ಷಗಳ ಹಿಂದಿನ ಹಿಂದೂ ಸಂಸ್ಕೃತಿಯನ್ನು ಕಾಣಬಹುದು. ಆರ್ಯರು ಭಾರತಕ್ಕೆ ಕುದುರೆಗಳನ್ನು ಪರಿಚಯಿಸಿದರೆಂದು ಎಡಚರು ಬಿಡುವ ಬೊಗಳೆಯು, ಸಿನೌಲಿಯ ಸಮಾಧಿಯಲ್ಲಿ ಸಿಕ್ಕಂಥ ಕುದುರೆಯ ರಥಗಳಿಂದ ಬಟಾಬಯಲಾಗಿದೆ. ‘ಸಂವಿಧಾನವನ್ನು ಸುಡಬೇಕಾಗುತ್ತದೆ’ ಎಂದಿದ್ದ ತಮಿಳುನಾಡಿನ ಪೆರಿಯಾರ್ ಕೂಡ ಕ್ರಿಶ್ಚಿಯನ್ ಮಿಷನರಿಗಳ ಬ್ರೇನ್‌ವಾಷ್ ಗೆ ಸಿಕ್ಕಿ ಬಲಿಪಶು ವಾದಂಥ ವ್ಯಕ್ತಿ.

ದಕ್ಷಿಣ ಭಾರತದಲ್ಲಿ ಅತಿಹೆಚ್ಚು ಹಿಂದೂ ದೇಗುಲಗಳಿರುವುದು ತಮಿಳುನಾಡಿನಲ್ಲಿ. ಚೋಳರು ಸಾವಿರಾರು ವರ್ಷಗಳ ಹಿಂದೆಯೇ ಬೃಹತ್ ದೇಗುಲಗಳನ್ನು ಕಟ್ಟಿಸಿದ್ದರು. ಆರ್ಯರು ಹೊರಗಿನಿಂದ ಬಂದವರಾಗಿದ್ದರೆ, ಅಖಂಡ ಭಾರತವನ್ನು ಬಿಟ್ಟು
ಅನ್ಯದೇಶಗಳಲ್ಲಿ ಈ ಮಟ್ಟದ ಪುರಾತನ ದೇಗುಲಗಳಿಲ್ಲವೇಕೆ? ಅನ್ಯದೇಶದ ಜನರೇಕೆ ಹಿಂದೂಧರ್ಮವನ್ನು ಅನುಸರಿಸುವು
ದಿಲ್ಲ? ರಾಮಾಯಣದ ಕುರುಹುಗಳು ಬೇರೆಡೆ ಹೆಚ್ಚಾಗಿ ಕಾಣಸಿಗುವುದಿಲ್ಲವೇಕೆ? ಚೇತನ್‌ರ ಹಿಂದೆ ದೊಡ್ಡದೊಂದು ಎಡಚರ ಪಟಾಲಂ ಕೆಲಸ ಮಾಡುತ್ತಿದೆ, ಇವರು ಕೇವಲ ಕೀಕೊಟ್ಟ ಬೊಂಬೆಯಷ್ಟೇ!

ತಮ್ಮ ಮಾತಿನಲ್ಲಿ ಬ್ರಾಹ್ಮಣ್ಯವನ್ನು ಎಳೆತರುವ ಇವರಿಗೊಂದು ಮಾಹಿತಿ ನೀಡಬೇಕಿದೆ- ಬ್ರಾಹ್ಮಣರು ಪೂಜಿಸುವ ಶ್ರೀಕೃಷ್ಣ ಪರಮಾತ್ಮ ಬ್ರಾಹ್ಮಣನಲ್ಲ. ಶ್ರೀರಾಮಚಂದ್ರ ಕ್ಷತ್ರಿಯ ಕುಲದವನು, ಆದಿಯೋಗಿ ಶಿವ ಕೂಡ ಬ್ರಾಹ್ಮಣನಲ್ಲ. ಬ್ರಾಹ್ಮಣನಾದ ರಾವಣನನ್ನು ಯಾರೂ ಪೂಜಿಸುವುದಿಲ್ಲ. ಆದರೆ ಜಾತ್ಯತೀತತೆಯ ಹೆಸರಿನಲ್ಲಿ ರಾಮನ ಜತೆಗೆ ರಾವಣನನ್ನೂ ಪೂಜಿಸು ತ್ತೇವೆಂದು ಹೋರಾಟ ಮಾಡುವ ಎಡಚರ ಗುಂಪೊಂದಿದೆ. ಇವರ ಹೋರಾಟ ಬ್ರಾಹ್ಮಣರ ವಿರುದ್ಧವಲ್ಲ, ಬ್ರಿಟಿಷರ  ಮಾದರಿ ಯಲ್ಲಿ ಭಾರತವನ್ನು ತುಂಡುತುಂಡು ಮಾಡಿ ಹಿಂದೂ ಸಂಸ್ಕೃತಿಯನ್ನು ನಾಶಪಡಿಸುವುದಷ್ಟೇ ಇವರ ಉದ್ದೇಶ.

ಆದಿವಾಸಿಗಳ ಬಗ್ಗೆ ಇಷ್ಟು ಕಾಳಜಿಯಿರುವ ಚೇತನ್, ಕಾಡಿನಲ್ಲಿ ವಾಸಿಸುತ್ತಿದ್ದಂಥ ನೂರಾರು ಆದಿವಾಸಿಗಳ ತಲೆಯನ್ನು ಹಾಳುಮಾಡಿ ನಕ್ಸಲರನ್ನಾಗಿಸಿದ್ದವರ ವಿರುದ್ಧ ದನಿಯೆತ್ತುವುದಿಲ್ಲವೇಕೆ? ಅವರ ಸಮಸ್ಯೆಗಳ ಕುರಿತಾಗಿ ಗಟ್ಟಿನಿಲುವು ತಾಳ ಲಾರದ ಚೇತನ್, ತಮಗಿಷ್ಟ ಬಂದಂತೆ ಆದಿವಾಸಿಗಳು ಮತ್ತು ದಲಿತರ ಹೆಸರನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣ ದಲ್ಲಿ ಬರೆಯುತ್ತಾರೆ, ತಮ್ಮ ಬೊಗಳೆಗಳನ್ನು ಸಮರ್ಥಿಸಿಕೊಳ್ಳಲು ಬಾಬಾ ಸಾಹೇಬ್ ಅಂಬೇಡ್ಕರರ ಹೆಸರನ್ನು ಮುನ್ನೆಲೆಗೆ ತರುತ್ತಾರೆ.

ಹಿಜಾಬ್ ವಿಷಯದಲ್ಲೂ ಅಷ್ಟೇ, ಕಿರಿಕ್ ಮಾಡಿದ ಉಡುಪಿಯ ಹೆಣ್ಣುಮಕ್ಕಳು ಪತ್ರಿಕಾಗೋಷ್ಠಿಯ ಸಂದರ್ಭದಲ್ಲಿ ಮಧ್ಯೆಮಧ್ಯೆ ಬಳಸುತ್ತಿದ್ದಂಥ ಪದಗಳು ಮತ್ತದೇ ‘ಸಂವಿಧಾನ’ ಹಾಗೂ ‘ಬಾಬಾ ಸಾಹೇಬರು’. ಅಂಬೇಡ್ಕರರು ರಚಿಸಿದ ಸಂವಿಧಾನದ ವಿರುದ್ಧ ನಡೆದುಕೊಂಡು ಅವರ ಹೆಸರನ್ನೇ ತಮ್ಮ ಕವಚವನ್ನಾಗಿ ಬಳಸಿಕೊಳ್ಳುವುದು ಎಡಚರ ದಿನನಿತ್ಯದ ಸುಳ್ಳಿನ ಒಂದು ಭಾಗ. ಮೌಖಿಕ ಭಯೋತ್ಪಾದನೆಯಲ್ಲಿ ಪರಿಣತರಾಗಿರುವ ಎಡಚರು, ಸಮಾಜದ ಮುಂದೆ ಮಾತನಾಡುವಾಗ ನಿರ್ದಿಷ್ಟ ಪದಪುಂಜ ಗಳನ್ನು ಬಳಸುವುದು ವಾಡಿಕೆ.

ಉದಾಹರಣೆಗೆ, ‘ಹಿಂದುತ್ವ’ದ ವಿರುದ್ಧವಾಗಿ ‘ಜಾತ್ಯತೀತತೆ’ಯನ್ನೂ, ‘ರಾಷ್ಟ್ರೀಯತೆ’ಯ ಚರ್ಚೆ ನಡೆಯುವಾಗ ‘ವಿಶ್ವಮಾನವ’ ಪದವನ್ನೂ ಇವರು ಹೆಚ್ಚು ಹೇಳುತ್ತಾರೆ, ಮುಸಲ್ಮಾನ್ ಧರ್ಮದ ಆಚರಣೆಗಳ ವಿರುದ್ಧ ಸಮಾಜದಲ್ಲಿ ಚರ್ಚೆಗಳು ಶುರುವಾದಾಗ ‘ಸಂವಿಧಾನ’ ಎಂಬ ಪದವನ್ನು ಬಳಸುತ್ತಾರೆ. ವೀರ ಸಾವರ್ಕರ್ ವಿಷಯದಲ್ಲಿ ಬ್ರಿಟಿಷರಿಗಿಂತಲೂ ಹೆಚ್ಚು ಸುಳ್ಳುಸುದ್ದಿಗಳನ್ನು ಹರಡಿಸಿದ್ದು ಎಡಚರ ಪಟಾಲಂ; ಭಾರತವನ್ನು ಒಡೆಯುವ ಕೆಲಸಲ್ಲೇ ನಿರತರಾಗಿರುವ ಇವರ ಮತ್ತೊಂದು ಬಲಿಪಶುವೇ ಈ ಚಿತ್ರನಟ ಚೇತನ್!

ಆದಿವಾಸಿಗಳ ಮೇಲೆ ಹಿಂದುತ್ವವನ್ನು ಹೇರಲಾಗುತ್ತಿದೆಯೆಂದು ಬೊಗಳೆ ಬಿಡುವ ಚೇತನ್, ಇದೇ ಆದಿವಾಸಿಗಳ ಸಂಸ್ಕೃತಿಯ ಮೇಲೆ ಕ್ರಿಶ್ಚಿಯನ್ ಮಿಷನರಿಗಳು ಹೇರುವ ಏಸುಕ್ರಿಸ್ತನ ಧರ್ಮದ ಆಚರಣೆಗಳ ಬಗ್ಗೆ ತುಟಿ ಬಿಚ್ಚುವುದಿಲ್ಲ. ಕರಾವಳಿ ಭಾಗದಲ್ಲಿ ಆದಿವಾಸಿಗಳ ದೇವಸ್ಥಾನಗಳ ಬಳಿ ನಿರ್ಮಾಣವಾಗಿರುವ ಚರ್ಚುಗಳು ಚೇತನ್‌ಗೆ ಹೇರಿಕೆಯಂತೆ ಕಾಣಿಸುವುದಿಲ್ಲ. ಅವು, ದಲಿತರು ಮತ್ತು ಆದಿವಾಸಿಗಳು ಪೂಜಿಸುವ ದೇವಸ್ಥಾನದ ಮಾದರಿಯಲ್ಲಿದ್ದರೆ ಚೇತನ್ ಗೆ ಅದು ಹೇರಿಕೆಯಂತೆ ಕಾಣಿಸುವುದಿಲ್ಲ.

ಕನ್ನಡ ಚಿತ್ರರಂಗದಲ್ಲಿ ತಮಗೆ ಯಾರೂ ಸೊಪ್ಪುಹಾಕುತ್ತಿಲ್ಲವೆಂದು ಭ್ರಮನಿರಸನಗೊಂಡಿರುವ ಚೇತನ್, ಎಡಚರ ಆಣತಿ ಯಂತೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಒಂದು ವೇಳೆ, ‘ಕಾಂತಾರ’ ಸಿನಿಮಾದಲ್ಲಿ ಊರಜನರ ಮೇಲೆ ದೌರ್ಜನ್ಯ ವೆಸಗುವ ಖಳನಾಯಕ ಪಾತ್ರಧಾರಿಯ ಜಾತಿ ‘ಬ್ರಾಹ್ಮಣ’ ಆಗಿದ್ದಿದ್ದರೆ ಇವರಿಗೆ ತಕರಾರಿರುತ್ತಿರಲಿಲ್ಲ ಅಥವಾ ‘ಶಿವ’ನ ಪಾತ್ರದ ರಿಷಭ್ ಶೆಟ್ಟಿ ನಕ್ಸಲರ ರೀತಿ ವೇಷಭೂಷಣ ತೊಟ್ಟು ಕೆಂಪುಬಾವುಟವನ್ನಿಟ್ಟುಕೊಂಡಿದ್ದರೆ ಇವರಿಗೆ ತಕರಾರಿರುತ್ತಿರಲಿಲ್ಲ.

ಊರ ಜನರ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ದೈವ ಸಹಾಯಮಾಡುವುದು ಇವರಿಗೆ ಸಮಸ್ಯೆ; ಬದಲಾಗಿ ಒಬ್ಬ ಬಂದೂಕು ಧಾರಿ ನಕ್ಸಲೈಟ್ ಊರಿನ ಸಮಸ್ಯೆಗೆ ಪರಿಹಾರ ನೀಡಿದ್ದರೆ ಇವರಿಗೆ ತಕರಾರಿರುತ್ತಿರಲಿಲ್ಲ. ಪೆರಿಯಾರ್ ಸಿದ್ಧಾಂತದ ಅನುಯಾಯಿ ಯಾದ ಚೇತನ್, ಹಿಂದೂಧರ್ಮದ ಆಚರಣೆಗಳ ವಿರುದ್ಧವಷ್ಟೇ ಮಾತಾಡುವುದೇಕೆ? ಇಸ್ಲಾಂ ಧರ್ಮದಲ್ಲಿ ಸುಮಾರು 17 ದಲಿತ ಪಂಗಡಗಳಿವೆ.

ಅವರ ವಿಚಾರದಲ್ಲಿ ನಡೆಯುತ್ತಿರುವ ತಾರತಮ್ಯದ ಬಗ್ಗೆ ಸೊಲ್ಲೆತ್ತುವ ಧೈರ್ಯವಿಲ್ಲದ ಚೇತನ್‌ಗೆ, ಕ್ರಿಶ್ಚಿಯನ್ ಧರ್ಮದಲ್ಲಿನ ‘ಪ್ರಾಟೆಸ್ಟಂಟ್’ ಮತ್ತು ‘ಕ್ಯಾಥೊಲಿಕ್’ ನಡುವಿನ ತಾರತಮ್ಯದ ಬಗ್ಗೆಯೂ ಚಿಂತೆಯಿಲ್ಲ. ಪರಮಸಹಿಷ್ಣುವಾಗಿರುವ ಹಿಂದೂ ಧರ್ಮದ ವಿರುದ್ಧ ಏನು ಮಾತನಾಡಿದರೂ ನಡೆಯುತ್ತದೆ, ಸೊಂಟಕ್ಕೆ ಬಾಂಬುಗಳನ್ನು ಕಟ್ಟಿಕೊಂಡು ದೇಗುಲಗಳನ್ನು
ನಾಶಪಡಿಸುವ ಮನಸ್ಥಿತಿಯವರಲ್ಲ ಈ ಧರ್ಮದವರು ಎಂಬ ಭಂಡಧೈರ್ಯ ಚೇತನ್‌ಗಿದೆ. ಭಾರತದ ಅತ್ಯುನ್ನತ ಪದವಿ ಯಲ್ಲಿರುವ ದ್ರೌಪದಿ ಮುರ್ಮು ಆದಿವಾಸಿ ಮಹಿಳೆ; ಭಾರತವು ಬ್ರಾಹ್ಮಣರ ದೌರ್ಜನ್ಯದ ನಾಡಾಗಿದ್ದಿದ್ದರೆ ಆದಿವಾಸಿ ಮಹಿಳೆ ಯೊಬ್ಬಳನ್ನು ರಾಷ್ಟ್ರಪತಿಯಾಗಿ ಮಾಡಲಾಗುತ್ತಿತ್ತೇ? ಶತಮಾನಗಳ ಇತಿಹಾಸವಿರುವ ಮೈಸೂರು ದಸರಾವನ್ನು ಅವರು ಉದ್ಘಾಟಿಸಲು ಸಾಧ್ಯವಾಗುತ್ತಿತ್ತೇ? ಯಾವುದೇ ಪರಿಕಲ್ಪನೆಯನ್ನು ನೆಲಮಟ್ಟದಲ್ಲಿ ಅನುಷ್ಠಾನಗೊಳಿಸುವುದು, ಸಾಮಾಜಿಕ ಜಾಲತಾಣಗಳಲ್ಲಿ ಬುರುಡೆ ಬಿಡುವಷ್ಟು ಸುಲಭವಲ್ಲ.

ಚೇತನ್‌ರಿಗೆ ಅಷ್ಟೊಂದು ಕೆಚ್ಚಿದ್ದರೆ ಕಾಡುಗಳಲ್ಲಿ, ದಲಿತ ಕೇರಿಗಳಲ್ಲಿ ಹೋರಾಡಲಿ; ಅದನ್ನು ಬಿಟ್ಟು ವಿನಾಕಾರಣ ಹಿಂದೂ ಧರ್ಮವನ್ನು ಅವಹೇಳನ ಮಾಡುವುದನ್ನು ಹೋರಾಟವೆನ್ನಲಾಗುವುದಿಲ್ಲ. ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ, ಬ್ರಾಹ್ಮಣೇತರರು ಪೂಜೆಯಲ್ಲಿ ಪಾಲ್ಗೊಳ್ಳುವ ಹಲವಾರು ಊರಹಬ್ಬಗಳು ಹಿಂದೂಧರ್ಮದಲ್ಲಿವೆ. ಹಳೇ ಮೈಸೂರು ಭಾಗದ ಸಾವಿರಾರು ಹಳ್ಳಿಗಳಲ್ಲಿ, ಬ್ರಾಹ್ಮಣೇತರರು ಕೈಗೊಳ್ಳುವ ಪೂಜಾಕೈಂಕರ್ಯಗಳು, ಆಚರಣೆಗಳು ಇವೆ.

ಅವರಾರೂ ಬ್ರಾಹ್ಮಣ ರಾವಣನನ್ನು ಪೂಜಿಸುವುದಿಲ್ಲ. ಚಾತುರ್ವರ್ಣ ವ್ಯವಸ್ಥೆಯು ಜಾತಿವ್ಯವಸ್ಥೆಯಲ್ಲ, ವ್ಯಕ್ತಿಯೊಬ್ಬನ ಕೆಲಸದ ಆಯ್ಕೆ/ಸಾಮರ್ಥ್ಯದ ಮೇಲೆ ನಿರ್ಧರಿತವಾಗುವ ವ್ಯವಸ್ಥೆಯದು. ದಲಿತ, ಆದಿವಾಸಿ ಕುಟುಂಬದಿಂದ ಬಂದಂಥ ನೂರಾರು ದಕ್ಷ ಅಽಕಾರಿಗಳು ಪ್ರಸ್ತುತ ಭಾರತದ ಕಾರ್ಯಾಂಗ ವ್ಯವಸ್ಥೆಯಲ್ಲಿದ್ದಾರೆ, ಮತ್ತೊಂದೆಡೆ ದೇವಸ್ಥಾನಗಳಲ್ಲಿ ಪೂಜೆ ಮಾಡಿಕೊಂಡು ಒಂದು ದಿನದ ಜೀವನ ನಡೆಸಲೂ ಕಷ್ಟಪಡುತ್ತಿರುವ ಬ್ರಾಹ್ಮಣ ಅರ್ಚಕರಿದ್ದಾರೆ. ಹಿಂದೂಧರ್ಮವನ್ನು ಟೀಕಿಸಲೇಬೇಕೆಂಬ ಏಕೈಕ ಉದ್ದೇಶದಿಂದ ಮಾತಾಡುವುದನ್ನು ಹೋರಾಟವೆನ್ನುವುದಿಲ್ಲ, ಮಾನಸಿಕ ರೋಗವೆನ್ನುತ್ತಾರೆ!