Sunday, 1st December 2024

ಟಲ್ಸಾ ಹತ್ಯಾಕಾಂಡಕ್ಕೆ ನೂರು ವರ್ಷ

ಅವಲೋಕನ

ಶಶಿಧರ ಹಾಲಾಡಿ

ಸುಮಾರು 300 ಜನರನ್ನು ಬಂದೂಕಿನಿಂದ, ಬಾಂಬ್‌ನಿಂದ ಸಾಯಿಸಿದ ಭೀಕರ ಹತ್ಯಾಕಾಂಡವೊಂದನ್ನು ಆಧುನಿಕ ಯುಗ
ದಲ್ಲಿ ಮುಚ್ಚಿಹಾಕಲು ಸಾಧ್ಯವೆ? 1256 ಮನೆಗಳನ್ನು, ಇತರ ನೂರಾರು ಕಟ್ಟಡಗಳನ್ನು ಬೆಂಕಿಹಚ್ಚಿ ನಾಶ ಮಾಡಿ ಮತ್ತು
ವಾಸ್ತವವಾಗಿ ಒಂದಿಡೀ ಪಟ್ಟಣವನ್ನೇ ಸುಟ್ಟು ಹಾಕಿ, 10000 ಜನರನ್ನು ನಿರಾಶ್ರಿತರನ್ನಾಗಿಸಿದ ದುರ್ಭರ ನೆನಪುಗಳನ್ನು
ಒಂದೆರಡು ತಲೆಮಾರಿನ ನೆನಪಿನಿಂದ ಅಳಿಸಿಹಾಕಲು ಸಾಧ್ಯವೆ? ಅಮೆರಿಕದ ಓಕ್ಲಹೋಮಾ ಪಟ್ಟಣದ ಟಲ್ಸಾದಲ್ಲಿರುವ ಗ್ರೀನ್‌ವುಡ್ ಪ್ರದೇಶದ ಹತ್ಯಾಕಾಂಡದ ವಿವರಗಳು ಒಂದೊಂದಾಗಿ ಹೊರ ಬಂದಂತೆಲ್ಲಾ, ಹಲವು ಉತ್ತರವಿಲ್ಲದ ಪ್ರಶ್ನೆಗಳನ್ನು ಈಗಿನ ತಲೆಮಾರು ಕೇಳಲು ಆರಂಭಿಸಿದಂತೆಲ್ಲಾ, ಅನಿಸಿದ್ದೊಂದೇ – ಅಮೆರಿಕದಂಥ ವ್ಯವಸ್ಥಿತ, ಬುದ್ಧಿವಂತ ಮತ್ತು ಆಧುನಿಕ ದೇಶದ ಜನರು ಮನಸ್ಸು ಮಾಡಿದರೆ ಅಂಥ ಭೀಕರ ಹತ್ಯಾಕಾಂಡದ ವಿವರಗಳನ್ನು ಜಗತ್ತಿನ ಇತರರಿಗೆ ತಿಳಿಯದಂತೆ ಮುಚ್ಚಿ
ಹಾಕಬಲ್ಲರು, ಅಷ್ಟೇಕೆ ಇತಿಹಾಸದ ಪುಸ್ತಕಗಳಿಂದಲೂ ಅಳಿಸಿಹಾಕಬಲ್ಲರು!

ಈ ಘೋರ ಘಟನೆ ನಡೆದು 100 ವರ್ಷಗಳ ನಂತರ, ಇದೀಗ ಅದರ ಕುರಿತು ಹೆಚ್ಚು ಹೆಚ್ಚು ಚರ್ಚೆ ನಡೆಯುತ್ತಿದೆ, ಬೆಚ್ಚಿ ಬೀಳಿಸುವ ಹೊಸ ವಿಚಾರಗಳು ಒಂದೊಂದಾಗಿ ಹೊರಬರುತ್ತಿವೆ. ಕಳೆದ ವರ್ಷ ಅಮೆರಿಕದ ಬಿಳಿಯ ಪೊಲೀಸ ನೊಬ್ಬನು, ಜಾರ್ಜ್ ಫ್ಲಾಯ್ಡ್ ಎಂಬ ಕರಿಯ ನೊಬ್ಬನನ್ನು ಕಾಲಿನಿಂದ ಒತ್ತಿ ಸಾಯಿಸಿದ ಘಟನೆಯು ವಿಡಿಯೋಗಳ ಮೂಲಕ ಪ್ರಚುರ ಗೊಂಡ ನಂತರ, ಟಲ್ಸಾದಂಥ ಘಟನೆಗಳು ಹೆಚ್ಚು ಚರ್ಚೆಗೆ ಒಳಗಾಗುತ್ತಿವೆ.

ಯಾವುದೇ ಬಂದೂಕು ಹೊಂದಿರದ ಫ್ಲಾಯ್ಡ್‌ನನ್ನು ಆ ಬಿಳಿಯ ಪೊಲೀಸನು ಕುತ್ತಿಗೆ ಒತ್ತಿ ಕೊಂದ ಘಟನೆಯ ವಿಡಿಯೋ ಗಳಿದ್ದರೂ, ಅದನ್ನು ಅಲ್ಲಗಳೆಯುವ ಪ್ರಯತ್ನವನ್ನು ಆರಂಭದಲ್ಲಿ ಮಾಡಲಾಗಿತ್ತು ಎಂಬ ವಿಚಾರ ಇಲ್ಲಿ ಗಮನಕ್ಕೆ ಬರುತ್ತದೆ. ಏಕೆಂದರೆ, ನೂರು ವರ್ಷಗಳ ಹಿಂದೆ ನಡೆದ ಟಲ್ಸಾ ಹತ್ಯಾಕಾಂಡವನ್ನು ತೆರೆಮರೆಗೆ ಸರಿಸಿ, ಯಾರೂ ಅದರ ಕುರಿತು ಚರ್ಚಿಸದೇ, ಇದ್ದಬದ್ದ ದಾಖಲೆ ಗಳನ್ನು ಸುಟ್ಟು ಹಾಕಿ, ಸಾಕ್ಷ್ಯಗಳನ್ನು ನಾಶಮಾಡಲಾಗಿತ್ತು!

ಆ ಹತ್ಯಾಕಾಂಡದ ಕುರಿತಾಗಿ ಯಾರಿಗೂ ಶಿಕ್ಷೆಯಾಗಿಲ್ಲ! ಅಮೆರಿಕದ ಈಗಿನ ಅಧ್ಯಕ್ಷರು ಟಲ್ಸಾ ಹತ್ಯಾಕಾಂಡ ನಡೆದ ಒಕ್ಲಹಾಮ ಪಟ್ಟಣಕ್ಕೆ 1.6.2021ರಂದು ಭೇಟಿ ನೀಡಿ, ನೂರು ವರ್ಷಗಳ ಹಿಂದೆ ಅಂಥದೊಂದು ಹತ್ಯಾಕಾಂಡ ನಡೆಯಬಾರದಿತ್ತು ಎಂದು ಪಶ್ಚಾತ್ತಾಪ ಪಟ್ಟರು. ಇದರಲ್ಲೇನು ವಿಶೇಷ ಎಂದಿರಾ? ಈ ಹತ್ಯಾಕಾಂಡ ನಡೆದ ಸ್ಥಳಕ್ಕೆ ಭೇಟಿನೀಡಿದ ಮೊದಲ ಅಧ್ಯಕ್ಷರು ಇವರು! ನಿಜ, 100 ವರ್ಷಗಳ ತನಕ ಹಿಂದಿನ ಯಾವುದೇ ಅಧ್ಯಕ್ಷರಿಗೂ ಅಲ್ಲಿಗೆ ಭೇಟಿ ನೀಡಿ, ತಮ್ಮ ದೇಶದ ಬಿಳಿಯರು ಅಲ್ಲಿದ್ದ ಕರಿಯರನ್ನು ಸಾಯಿಸಿದ್ದನ್ನು, ಅವರ ಆಸ್ತಿಯನ್ನು ನಾಶಪಡಿಸಿದ್ದನ್ನು ಬಹಿರಂಗವಾಗಿ ಖಂಡಿಸಿ, ಸಂತಾಪ ವ್ಯಕ್ತಪಡಿಸುವ ಮನಸ್ಸು ಮಾಡಿರಲಿಲ್ಲ ಮತ್ತು ಇದು ಸಹ ಹೀಗೇಕೆ ಎಂಬ ಪ್ರಶ್ನೆಯನ್ನು ಮೂಡಿಸುತ್ತದೆ!

ಅಮೆರಿಕದ ಓಕ್ಲಹೋಮಾ ಪಟ್ಟಣದಲ್ಲಿ ವ್ಯಾಪಾರ ಮಾಡಿಕೊಂಡಿದ್ದ ಕಪ್ಪು ಜನರ ಮೇಲೆ ನಡೆಸಿದ ಈ ಭೀಕರ ದೌರ್ಜನ್ಯವು ಅದೆಷ್ಟೋ ವರ್ಷಗಳ ತನಕ ಹೊರ ಜಗತ್ತಿಗೆ ತಿಳಿದಿರಲಿಲ್ಲ ಎಂಬ ವಿಚಾರವೇ ವಿಸ್ಮಯ ಹುಟ್ಟಿಸುತ್ತದೆ. ಮತ್ತು ‘ಆಧುನಿಕ ಅಮೆರಿಕದ’ಲ್ಲೂ ಇಂಥ ಅನಧಿಕೃತ, ಆದರೆ ವ್ಯವಸ್ಥಿತ ‘ಸೆನ್ಸಾರ್’ ಸಾಧ್ಯವೇ ಎಂಬ ಅಚ್ಚರಿಯನ್ನೂ ಮೂಡಿಸುತ್ತದೆ.

1921ರಲ್ಲಿ ಅಮೆರಿಕವು ಅದಾಗಲೇ ಮುಂದುವರಿದ ದೇಶವಾಗಿ ಹೊರಹೊಮ್ಮಿತ್ತು. ಟಲ್ಸಾ ಹತ್ಯಾಕಾಂಡ ನಡೆದ ರೀತಿ ಮತ್ತು ನಂತರ ಅದನ್ನು ಮುಚ್ಚಿ ಹಾಕುವ ಪ್ರಯತ್ನ ಹೀಗಿತ್ತು ನೋಡಿ – ಓಕ್ಲಹೋಮಾದಲ್ಲಿ ಕರಿಯರು ವ್ಯವಹಾರ ಮಾಡಿ ಸಾಕಷ್ಟು ಶ್ರೀಮಂತರಾಗಿದ್ದರು ಮತ್ತು ಬ್ಲಾಕ್ ವಾಲ್ ಸ್ಟ್ರೀಟ್ ಎಂಬ ಸ್ಥಿತಿವಂತ ಜಾಗದಲ್ಲಿ ವಾಸಿಸುತ್ತಿದ್ದರು. ಹತ್ಯಾಕಾಂಡ ನಡೆದ ನಂತರ, ಕೇವಲ 39ಜನರು ಸತ್ತರು ಎಂದು ಸ್ಥಳೀಯ ಅಧಿಕಾರಶಾಹಿಯು ವರದಿ ಮಾಡಿತು.

1921ರಲ್ಲಿ ಈ ಹತ್ಯಾಕಾಂಡ ನಡೆದರೂ, ಅದರ ನೂರಾರು ಫೋಟೋಗಳು ಲಭ್ಯವಿದ್ದರೂ, ಯಾರಿಗೂ ಶಿಕ್ಷೆಯಾಗಲಿಲ್ಲ.
2001ರಲ್ಲಿ ಈ ಹತ್ಯಾಕಾಂಡದ ಕುರಿತು ಸಂಶೋಧನಾ ವರದಿ ಪ್ರಕಟಗೊಂಡಾಗಲೇ, ಹತ್ಯಾಕಾಂಡದ ಭೀಕರ ವಿವರಗಳು ಅಮೆರಿಕದ ಜನರಿಗೆ ಗೊತ್ತಾದದ್ದು! ಅಂದರೆ ಸುಮಾರು 80 ವರ್ಷಗಳ ಕಾಲ ಮಾಹಿತಿಯನ್ನು ಮುಚ್ಚಿಹಾಕಲಾಗಿತ್ತು! ಈ ವರದಿಯು ಸುಮಾರು 300 ಜನರು ಸತ್ತಿರುವರು ಎಂದು ಹೇಳಿತು. ಸಾವಿರಾರು ಕಟ್ಟಡಗಳಿಗೆ ಬೆಂಕಿ ಹಚ್ಚಲಾಗಿದ್ದರೂ,
ಓಕ್ಲ ಹಾಮಾ ಅಗ್ನಿಶಾಮಕ ದಳದ ಅಧಿಕೃತ ದಾಖಲೆಯಲ್ಲಿ ಈ ದುರ್ಘಟನೆಯ ವಿವರಗಳೇ ಇಲ್ಲ!

ಕಪ್ಪು ಜನರ ಮೇಲೆ ಬಿಳಿಯರು ವೈಮಾನಿಕ ದಾಳಿಯನ್ನು ಸಹ ನಡೆಸಿದ್ದರು! ಅದಕ್ಕಾಗಿ ಖಾಸಗಿ ವಿಮಾನಗಳನ್ನು ಬಳಸಿ, ಟರ್ಪಂಟೈನ್ ಬಾಂಬ್‌ಗಳನ್ನು ಕಟ್ಟಡಗಳ ಮೇಲೆ ಎಸೆದು, ಕಟ್ಟಡಗಳನ್ನು ಸುಟ್ಟುಹಾಕಿದ್ದರು. ವಿಮಾನಗಳಲ್ಲಿ ಬಂದು ಜನರ ಮೇಲೆ ಗುಂಡು ಹಾರಿಸಿದ್ದರು. ಎಷ್ಟೋ ಶವಗಳನ್ನು ಸಾಮೂಹಿಕ ಸಮಾಧಿಯಲ್ಲಿ ಹೂಳಲಾಗಿತ್ತು ಮತ್ತು ಅವರ ದಾಖಲೆಗಳನ್ನೇ ಇಟ್ಟಿಲ್ಲ!

ಸ್ಥಳೀಯ ಪೊಲೀಸರು ಮತ್ತು ಇತರ ಸರಕಾರಿ ಇಲಾಖೆಗಳು ಹತ್ಯಾಕಾಂಡ ನಡೆಸಲು ಪ್ರಚೋದನೆ ನೀಡಿದ್ದವು. ಓಕ್ಲಹೋಮಾ ಪಟ್ಟಣದಲ್ಲಿ 1921ರಲ್ಲಿ ನಡೆದ ಟಲ್ಸಾ ಹತ್ಯಾಕಾಂಡವು, ಆ ದೇಶದಲ್ಲಿ ನಡೆದ ಅತಿ ಭೀಕರ ಹತ್ಯಾಕಾಂಡಗಳಲ್ಲಿ ಒಂದು. ಘಟನೆಗೆ ಕಾರಣ ಒಂದು ಗಾಳಿಸುದ್ದಿ. ಅಲ್ಲಿದ್ದ ಒಬ್ಬ ಕರಿಯನು, ಲಿಫ್ಟ್ ಒಂದರಲ್ಲಿ ಅಕಸ್ಮಾತ್ ಆಗಿ ಎಡವಿ, ಬಿಳಿಯ ಹುಡುಗಿಯ ಮೇಲೆ ಬಿದ್ದ ಎನ್ನುತ್ತದೆ ಒಂದು ವರದಿ. ಆದರೆ ಸ್ಥಳೀಯ ಬಿಳಿಯರ ಪತ್ರಿಕೆಯು ಇದಕ್ಕೆ ನೀಡಿದ ಬಣ್ಣವೇ ಬೇರೆ –  ಕರಿಯ ನೊಬ್ಬನು ಲಿಫ್ಟ್ನಲ್ಲಿ ಬಿಳಿಯ ಹುಡುಗಿಯ ಕೈ ಹಿಡಿದು ಎಳೆದ ಎಂದು ಅದು ವರ್ಣರಂಜಿತವಾಗಿ ವರದಿ ಮಾಡಿತು.

ಆ ಕರಿಯನನ್ನು ಪೊಲೀಸರು ತಕ್ಷಣ ಬಂಧಿಸಿದರು, ತಾನು ಅಂತಹದ್ದೇನೂ ಮಾಡಿಲ್ಲ ಎಂದೇ ಆತ ಹೇಳಿದ. ಆದರೆ, ಅದಾಗಲೇ ಕರಿಯರ ಮೇಲೆ ದಾಳಿ ಆರಂಭವಾಗಿತ್ತು. ಅದಕ್ಕೂ ಮೊದಲು ಕೆಲವು ವರ್ಷಗಳಿಂದಲೂ ಓಕ್ಲಹೋಮಾದ ಕರಿಯರ ಮೇಲೆ ಸುತ್ತಲಿನ ಬಿಳಿಯರು ಕಣ್ಣುಹಾಕಿದ್ದರು. ಬಿಳಿಯ ಜನಾಂಗವೇ ಶ್ರೇಷ್ಠ ಎಂದು ನಂಬಿದ್ದ ಕು ಕ್ಲುಕ್ಸ್ ಕ್ಲಾನ್ ಮತ್ತು ಇತರ ಸಂಘಟನೆ ಗಳು ಕರಿಯರನ್ನು ಆಗಾಗ ಹಿಂಸೆಗೆ ಒಳಪಡಿಸುತ್ತಲೇ ಇದ್ದವು.

ಗುಲಾಮರಾಗಿದ್ದ ಕರಿಯ ಜನಾಂಗವನ್ನು, ಕಾನೂನಿನ ರಕ್ಷಣೆಯ ಮೂಲಕ ಗುಲಾಮತನದಿಂದ ಹೊರಬಂದಿದ್ದರೂ, ಸಮಾಜ ದಲ್ಲಿ ಅವರನ್ನು ಕೀಳಾಗಿ ಕಾಣುವುದು ನಿಂತಿರಲಿಲ್ಲ. ಓಕ್ಲಹೋಮಾದಲ್ಲಿ ಕೆಲವು ಸ್ಥಿತಿವಂತ ಕರಿಯರು ಉತ್ತಮ ಕಟ್ಟಡಗಳನ್ನು ನಿರ್ಮಿಸಿ, ವ್ಯಾಪಾರ ನಡೆಸುತ್ತಿದ್ದರು. ಬ್ಲಾಕ್ ವಾಲ್ ಸ್ಟ್ರೀಟ್ ಎಂಬ ಬೀದಿಯು ಸಂಪದ್ಭರಿತವಾಗಿತ್ತು. ಲಿಫ್ಟ್’ನಲ್ಲಿ ಕರಿಯ ನೊಬ್ಬನು ಬಿಳಿಯ ಹುಡುಗಿಯನ್ನು ಮುಟ್ಟಿದ ಎಂಬ ಗಾಳಿಸುದ್ದಿಯನ್ನು ನೆಪಮಾಡಿಕೊಂಡು, ಬಹುಸಂಖ್ಯಾತರಾಗಿದ್ದ ಸುತ್ತಲಿನ ಬಿಳಿಯರು ಕರಿಯರನ್ನು ಮಟ್ಟಹಾಕಲು ಸಂಚು ರೂಪಿಸಿದರು.

31 ಮೇ 1921ರಂದು ಗಲಭೆಗಳು ಆರಂಭವಾದವು. ಲಿಫ್ಟ್ನಲ್ಲಿ ಬಿಳಿಯ ಹುಡುಗಿಯನ್ನು ಮುಟ್ಟಿದ್ದ ಎಂಬ ಸುಳ್ಳು ಆರೋಪಕ್ಕೆ ಒಳಗಾದ ಕರಿಯನನ್ನು ಪೊಲೀಸರು ಬಂಧಿಸಿದ್ದರು. ಅವನನ್ನು ಬಿಡಿಸಲೆಂದು 50 ರಿಂದ 60 ಜನ ಕರಿಯ ಜನರು, ಬಂದೂಕಿನ ಸಮೇತ ಕಾರಿನಲ್ಲಿ ಕುಳಿತು ಬಂದರು. ಅದನ್ನು ಕಂಡ ಸುಮಾರು 1000 ಬಿಳಿಯರು ಬಂದೂಕುಗಳನ್ನು ಕೈಗೆತ್ತಿ ಕೊಂಡರು. ಈ ನಡುವೆ ಕಡಿಮೆ ಸಂಖ್ಯೆಯಲ್ಲಿದ್ದ ಕರಿಯರ ಗುಂಪಿನಿಂದ ಒಂದು ಗುಂಡು ಹಾರಿ ಬಿಳಿಯನೊಬ್ಬನನ್ನು ಸಾಯಿಸಿತು. ಸಾವಿರಾರು ಸಂಖ್ಯೆಯಲ್ಲಿದ್ದ ಬಿಳಿಯರು ಪ್ರತೀಕಾರಕ್ಕೆ ನಿರ್ಧರಿಸಿದರು.

ಮುಂದಿನ 18 ಗಂಟೆಗಳ ಕಾಲ ಅಲ್ಲಿ ನಡೆದದ್ದು ಮಾರಣಹೋಮ. ಸಾವಿರಾರು ಸಂಖ್ಯೆಯ ಬಿಳಿಯರು ಬಂದೂಕು ಬಳಸಿ, ಕರಿಯರನ್ನು ಗುಂಡಿಟ್ಟು ಸಾಯಿಸಲು ಆರಂಭಿಸಿದರು. ಕಡಿಮೆ ಸಂಖ್ಯೆಯಲ್ಲಿದ್ದ ಕರಿಯರು ಪ್ರತಿರೋಧ ವ್ಯಕ್ತಪಡಿಸಿದರೂ, ಅದ್ಯಾವ ಮೂಲೆಗೂ ಸಾಕಾಗಲಿಲ್ಲ. ಬಿಳಿಯರು ವ್ಯವಸ್ಥಿತವಾಗಿ ಬೆಂಕಿ ಹಚ್ಚುವುದು, ಕೊಲೆ, ಲೂಟಿ ನಡೆಸಿದರು. ಪುಟ್ಟ ಪುಟ್ಟ ಖಾಸಗಿ ವಿಮಾನಗಳನ್ನು ಬಳಸಿ, ಕರಿಯರ ಕಟ್ಟಡಗಳಿಗೆ ಬೆಂಕಿ ಹಚ್ಚಿದರು, ಗುಂಡಿನ ದಾಳಿ ನಡೆಸಿದರು.

ಹೆಚ್ಚಿನ ರಕ್ಷಣಾ ಪಡೆ ಬಂದು, ಪಟ್ಟಣದಲ್ಲಿ ಮಾರ್ಷಿಯಲ್ ಲಾ ಜಾರಿ ಮಾಡಿ, ಗಲಭೆಯನ್ನು ನಿಯಂತ್ರಿಸುವ ಇಡೀ ಪ್ರದೇಶ ವನ್ನೇ ಸಂಪೂರ್ಣ ನಾಶಮಾಡಲಾಗಿತ್ತು. ಅವೆಲ್ಲವೂ ಕರಿಯರ ಒಡೆತನದಲ್ಲಿದ್ದ ಕಟ್ಟಡಗಳು. ಈಚಿನ ಅಧ್ಯಯನಗಳ ಪ್ರಕಾರ ಸುಮಾರು 300 ಜನರು ಸತ್ತಿದ್ದು, ಅವರಲ್ಲಿ ಬಹುಪಾಲು ಜನರು ಕರಿಯರು ಎಂದು ತಿಳಿಯಲಾಗಿದೆ. ಹಾಗಿದ್ದರೂ ಸಾವಿರಾರು ಕರಿಯರನ್ನು ಸರಕಾರವು ಬಂಧಿಸಿತು. ಅಂದು ಅಮೆರಿಕದಲ್ಲಿ ಒಂದು ವಿಚಿತ್ರ ಕಾನೂನಿತ್ತು. ಬಂಧನಗೊಂಡ ಕರಿಯ ವ್ಯಕ್ತಿ ಯನ್ನು ಬಿಡಿಸಲು, ಬಿಳಿಯನೊಬ್ಬನು ಜಾಮೀನು ನೀಡಬೇಕಿತ್ತು ಮತ್ತು ಮುಂದೆ ಆ ಕರಿಯ ನಡೆಸಬಹುದಾದ ಅಪರಾಧಕ್ಕೆ ಜವಾಬ್ದಾರನಾಗಬೇಕಿತ್ತು.

ಸಹಜವಾಗಿ ಬಹಳಷ್ಟು ಜನ ಕರಿಯರು ದೀರ್ಘಕಾಲದ ತನಕ ಜೈಲಿನಲ್ಲಿ ಕೊಳೆತರು. ಇನ್ನೂ ಕ್ರೂರವೆಂದರೆ, ಸುಟ್ಟುಹೋದ ಕಟ್ಟಡಗಳನ್ನು ಮರು ನಿರ್ಮಿಸಲು ಅಲ್ಲಿನ ಸರಕಾರವು ಕರಿಯ ಜನಾಂಗಕ್ಕೆ ಸಹಕಾರ ನೀಡಲಿಲ್ಲ. ಬದಲಾಗಿ, ಆ ಪ್ರದೇಶದಲ್ಲಿ ಕರಿಯರು ಮತ್ತೆ ಕಟ್ಟದಂತೆ ಕಾನೂನು ಮಾಡಲು ಕೆಲವರು ಶ್ರಮಿಸಿದರು. ಆದರೂ ರೆಡ್‌ಕ್ರಾಸ್ ಸಹಾಯದಿಂದ, ಕರಿಯರು ಪುನಃ ತಮ್ಮ ವ್ಯವಹಾರವನ್ನು ಕಟ್ಟಿಕೊಂಡಿದ್ದು ದಾಖಲಾಗಿದೆ.

ಅಂದಿನ ದಿನಗಳಲ್ಲಿ ಅಮೆರಿಕವು ಮುಂದುವರಿದ ದೇಶ ಎನಿಸಿತ್ತು. ಆದರೆ, ಟಲ್ಸಾ ಹತ್ಯಾಕಾಂಡವನ್ನು ಮುಚ್ಚಿಡುವಲ್ಲಿ ಅಲ್ಲಿನ ಎಲ್ಲಾ ವಿಭಾಗಗಳೂ ರಹಸ್ಯವಾಗಿ ಕೈಜೋಡಿಸಿದವು ಎನಿಸುತ್ತದೆ. ಮುಂದಿನ ಕೆಲವು ದಶಕಗಳ ತನಕ ಟಲ್ಸಾ ಹತ್ಯಾಕಾಂಡದ
ವಿವರಗಳನ್ನು ಯಾರೂ ಬಹಿರಂಗವಾಗಿ ಚರ್ಚಿಸುತ್ತಲೇ ಇರಲಿಲ್ಲ. ಸ್ಥಳೀಯ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಐತಿಹಾಸಿಕ ದಾಖಲೆಗಳಲ್ಲಿ ಈ ಹತ್ಯಾಕಾಂಡದ ವಿವರಗಳನ್ನು ಬರೆಯುತ್ತಿರಲಿಲ್ಲ.

ಪಠ್ಯಗಳಲ್ಲಿ, ಇತಿಹಾಸದ ಪುಸ್ತಕಗಳಲ್ಲಿ ಇಂಥದೊಂದು ಹತ್ಯಾಕಾಂಡ ನಡೆದಿತ್ತು ಎಂಬ ಸುಳಿವೂ ಸಿಗದಂತೆ ಮಾಡಲಾಗಿತ್ತು.
ಟಲ್ಸಾ ಹತ್ಯಾಕಾಂಡ ಮತ್ತು ವಿನಾಶ ನಡೆದು 50 ವರ್ಷಗಳ ನಂತರ, 1971ರಲ್ಲಿ ಕೆಲವು ಸಂತ್ರಸ್ತರು ತಾವು ಕಂಡ ಭೀಕರ
ಘಟನೆಗಳನ್ನು ನೆನಪಿಸಿಕೊಳ್ಳಲು ಪ್ರಯತ್ನ ನಡೆಸಿದರು. ಇದೇ ವರ್ಷ ಎಡ್ ವ್ಹೀಲರ್ ಎಂಬಾತ ಹತ್ಯಾಕಾಂಡದ ಫೋಟೋ ಗಳನ್ನು ಸಂಗ್ರಹಿಸಿ, ವಿವರಗಳನ್ನು ಸ್ಥಳೀಯ ಪತ್ರಿಕೆಯಲ್ಲಿ ಪ್ರಕಟಿಸಲು ಕೋರಿದಾಗ, ಎರಡು ಪತ್ರಿಕೆಗಳು ಸಾರಾಸಗಟಾಗಿ ತಿರಸ್ಕರಿಸಿದವು!

ಕೊನೆಗೆ, ಕರಿಯರಿಗೆಂದೇ ಹೊರಬರುತ್ತಿದ್ದ ‘ಇಂಪ್ಯಾಕ್ಟ್ ಮ್ಯಾಗಜಿನ್’ ಎಂಬ ಪತ್ರಿಕೆಯಲ್ಲಿ ಆತ ಆ ಭೀಕರ ದೃಶ್ಯಗಳ ಫೋಟೋ ಗಳನ್ನು ಪ್ರಕಟಿಸಬೇಕಾಯಿತು. ಆದರೂ, ಅದು ಹೆಚ್ಚಿನ ಬಿಳಿಯರ ಗಮನಕ್ಕೆ ಬರಲೇ ಇಲ್ಲ!

ಹತ್ಯಾಕಾಂಡ ನಡೆದ 75ನೇ ವರ್ಷದ ಸಂದರ್ಭದಲ್ಲಿ, ಓಕ್ಲಹೋಮಾದ ಪ್ರಾಧಿಕಾರವು, ತನ್ನ ಪಟ್ಟಣದಲ್ಲಿ ನಡೆದ ಟಲ್ಸಾ ಹತ್ಯಾ ಕಾಂಡದ ಕುರಿತು ತನಿಖೆ ನಡೆಸಲು ಕೊನೆಗೂ ಒಂದು ಸಮಿತಿಯನ್ನು ನೇಮಿಸಿತು. ಐದು ವರ್ಷಗಳ ಕಾಲ ಅಧ್ಯಯನ ನಡೆಸಿದ ಸಮಿತಿಯು 2001ರಲ್ಲಿ ತನ್ನ ಅಂತಿಮ ವರದಿಯನ್ನು ನೀಡಿದಾಗಲೇ, ಅಮೆರಿಕದ ಸಮಾಜವು ಮುಚ್ಚಿಹಾಕಿದ್ದ ಕರಿಯರ ಹತ್ಯಾ ಕಾಂಡವ ವಿವರಗಳು ಜಗತ್ತಿಗೆ ಬಯಲಾಯಿತು.

ಈಗ ಟಲ್ಸಾ ಹತ್ಯಾಕಾಂಡ ನಡೆದು ನೂರು ವರ್ಷ. ಅಂದು ಸತ್ತವರ ನಿಖರ ಸಂಖ್ಯೆ ಇಂದಿಗೂ ಬಯಲಾಗಿಲ್ಲ. ಸುಮಾರು 300 ಎನ್ನುತ್ತಾರೆ! ಇಂಥ ಅಂದಾಜು ನಡೆಯುತ್ತಿರುವುದು ನಾವೆಲ್ಲಾ ಮುಂದುವರಿದಿದೆ ಎಂದು ತಿಳಿಯುತ್ತಿರುವ ಅಮೆರಿಕದಲ್ಲಿ. ಕರಿಯರ ವಿರುದ್ಧ ಜನಾಂಗೀಯ ಪಕ್ಷಪಾತ ಇನ್ನೂ ಅಲ್ಲಿ ಚಾಲ್ತಿಯಲ್ಲಿದೆ!