ಭಾಸ್ಕರಾಯಣ
ಎಂ.ಕೆ.ಭಾಸ್ಕರ ರಾವ್
ತುಂಗಭದ್ರಾ ಜಲಾಶಯದ ರುದ್ರರಮಣೀಯ ಸೌಂದರ್ಯದ ಪರದೆಯನ್ನು ಸೀಳಿ ಒಳಹೊಕ್ಕರೆ ನಮ್ಮ ಭವಿಷ್ಯವನ್ನು ಕಂಗಾಲಾಗಿಸುವ ವಾಸ್ತವ ರಾಚುತ್ತದೆ. ತುಂಗಭದ್ರೆಯ ಕರಾಳಕಥೆ ಇರುವುದು ಅದು ಭರ್ತಿಯಾದಾಗ ನಳನಳಿಸುವ ಜಲರಾಶಿಯ ಸಮ್ಮೋಹಕ ದೃಶ್ಯದಲ್ಲಲ್ಲ; ಬದಲಿಗೆ ಅದರ ಒಡಲನ್ನು ತುಂಬುತ್ತಿರುವ ಹೂಳಿನಲ್ಲಿ.
ತುಂಗಭದ್ರಾ ಜಲಾಶಯದಲ್ಲಿ ೩೧ ಟಿಎಂಸಿ ಹೂಳು ತುಂಬಿದೆ. ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಹೂಳಿನ ಪ್ರಮಾಣ, ಕರ್ನಾಟಕದ ಕಾಯ್ದೆಬದ್ಧ ನೀರನ್ನು ತೆಲಂಗಾಣ, ಆಂಧ್ರಪ್ರದೇಶಕ್ಕೆ ಹರಿಯುವಂತೆ ಮಾಡಿದೆ. ಕಾವೇರಿ ನೀರಿನ ವಿಚಾರದಲ್ಲಿ ಸರಕಾರ, ರಾಜಕೀಯ ಪಕ್ಷಗಳು, ರೈತ-ಕನ್ನಡ ಸಂಘಟನೆಗಳು
ನಿರಂತರ ಬೊಬ್ಬೆ ಹೊಡೆಯುತ್ತವೆ. ಅಚ್ಚರಿ ಎಂದರೆ ತುಂಗಭದ್ರಾ, ಕೃಷ್ಣಾ ವಿಚಾರದಲ್ಲಿ ಅವು ಅರ್ಥವಾಗದ ಮೌನಕ್ಕೆ ಜಾರುತ್ತವೆ. ತುಂಗಭದ್ರೆ ಒಡಲ ನೋವು ಕೇಳುವವರು ಯಾರು? ಹೊಸಪೇಟೆ ಬಳಿ ತುಂಗಭದ್ರಾ ನದಿಗೆ ಸಮುದ್ರ ಮಟ್ಟದಿಂದ ೧೬೩೩ ಅಡಿ ಎತ್ತರಕ್ಕೆ ನಿರ್ಮಿಸಿರುವ ಅಣೆಕಟ್ಟೆ ಪಂಪಾಸಾಗರ, ತನ್ನ
ಗಾತ್ರ, ರುದ್ರರಮಣೀಯ ಸೌಂದರ್ಯದ ದೃಷ್ಟಿಯಿಂದ ಗಮನ ಸೆಳೆಯುತ್ತದೆ. ಆದರೆ ಆ ಸೌಂದರ್ಯದ ಪರದೆಯನ್ನು ಸೀಳಿ ಒಳ ಹೊಕ್ಕರೆ ನಮ್ಮ ಭವಿಷ್ಯವನ್ನು ಕಂಗಾಲು ಸ್ಥಿತಿಗೆ ತರುವ ವಾಸ್ತವ ರಾಚುತ್ತದೆ.
ತುಂಗಭದ್ರಾದ ಕರಾಳಕಥೆ ಇರುವುದು ಅದು ಭರ್ತಿಯಾದಾಗ ನಳನಳಿಸುವ ಜಲರಾಶಿಯ ಸಮ್ಮೋಹಕ ದೃಶ್ಯದಲ್ಲಲ್ಲ; ಬದಲಿಗೆ ಅದರ ಒಡಲನ್ನು ತುಂಬುತ್ತಿರುವ ಹೂಳಿನಲ್ಲಿ. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಸರಕಾರಗಳ ಅಧಿಕೃತ ಪ್ರಾತಿನಿಧ್ಯವಿರುವ ತುಂಗಭದ್ರಾ ಮಂಡಳಿ ಲೆಕ್ಕಾಚಾರದಂತೆ ಜಲಾಶಯದಲ್ಲಿ ಪ್ರಸ್ತುತ ೩೧ ಟಿಎಂಸಿಗೂ ಅಧಿಕ ಹೂಳು ಸಂಗ್ರಹವಾಗಿ ಜಲಾಶಯದ ಜಲಧಾರಣಾ ಸಾಮರ್ಥ್ಯವನ್ನು ೧೦೦.೮೫ ಟಿಎಂಸಿಯಿಂದ ೭೯.೮೫ ಟಿಎಂಸಿಗೆ ಕುಗ್ಗಿಸಿದೆ.
ಜಲಾಶಯದಲ್ಲಿ ನೀರು ಹೆಚ್ಚಾದಾಗ, ಮಳೆಗಾಲದಲ್ಲಿ ಉಕ್ಕಿ ಹರಿಯುವಾಗ ಅಣೆಕಟ್ಟೆ ಸಂಗ್ರಹ ಸಾಮರ್ಥ್ಯ ಮೀರುವಾಗ ನದಿಪಾತ್ರಕ್ಕೆ ನೀರನ್ನು ಹರಿಸುವುದು ಸಾಮಾನ್ಯ, ಪ್ರಕೃತಿ ಸಹಜ. ಅಣೆಕಟ್ಟೆಯ ಕೆಳಗಿನ ಪ್ರದೇಶಕ್ಕೆ ಇದು ಒಂದು ರೀತಿಯಲ್ಲಿ ಬೇಡದೇ ಬಯಸದೇ ಒಲಿದು ಬರುವ ವರ. ಆದರೆ ಅಣೆಕಟ್ಟೆಗಾಗಿ
ಸಹಸ್ರ ಸಹಸ್ರ ಹಳ್ಳಿ ಊರುಗಳನ್ನು ಸಾವಿರಾರು ಎಕರೆ ಕೃಷಿ ಅರಣ್ಯ ಪ್ರದೇಶವನ್ನು ಬಲಿಗೊಟ್ಟ ರಾಜ್ಯಕ್ಕೆ ಏನು ಲಾಭ? ಇದೊಂದು ರೀತಿಯಲ್ಲಿ ತನ್ನಲ್ಲಿದ್ದುದನ್ನೆಲ್ಲ ಕೊಟ್ಟು ತಾನೇ ಭಿಕ್ಷುಕನಾಗುವ ಪರಿ. ವಿಶ್ವವಿಖ್ಯಾತ ಹಂಪಿ ತುಂಗಭದ್ರಾ ದಂಡೆ ಮೇಲಿರುವ ಊರು. ಅಣೆಕಟ್ಟೆ, ಜಲಾಶಯ ಎಂಬ ಕಾರಣಕ್ಕೆ ಅದು ತೊಂದರೆಗೆ ಈಡಾಗಿಲ್ಲ.
ಅದೊಂದು ಪ್ರಾಚೀನ ಪಳೆಯುಳಿಕೆ. ಆದರೆ ಅಣೆ ಕಾರಣಕ್ಕೆ ಮುಳುಗಡೆಯಾದ ಪ್ರದೇಶದ ಕಥೆ? ನಿರ್ವಸಿತರಾದವರ ಲಕ್ಷ ಲಕ್ಷ ಜನರ ವ್ಯಥೆ? ಪಾಟೀಲ ಪುಟ್ಟಪ್ಪ, ಎಂ.ಪಿ.ಪ್ರಕಾಶ ಅವರಂಥವರು ಆಗಾಗ ಹೇಳುತ್ತಿದ್ದ ‘ಹಂಪಿ ಪ್ರಾಚೀನ, ತುಂಗಭದ್ರಾ ಅಣೆಕಟ್ಟೆ ಪ್ರಾರಬ್ಧ’ ಎಂಬ ಮಾತು ಈ ವಾಸ್ತವದ ಹಿನ್ನೆಲೆಯಲ್ಲಿ ಈಗೀಗ ಹೆಚ್ಚು ಸತ್ಯವಾಗುವ ಲಕ್ಷಣ ಕಾಣಿಸುತ್ತಿದೆ. ಸಂಗ್ರಹವಾಗದೆ ಹರಿದುಹೋಗುವ ೩೧ ಟಿಎಂಸಿ ನೀರಿನ ಮೇಲೆ ಕರ್ನಾಟಕ ಸ್ವಾಮ್ಯ ಸಾಧಿಸಲಾಗದು. ಕೂತಲ್ಲೆ ಕುಳಿತು ಚಡಪಡಿಸುವುದರ ಆಚೆಗೆ ಅದರ ಕೈಲಿ ಏನೂ ಮಾಡಲಾಗದ ಸ್ಥಿತಿ. ೩೧ ಟಿಎಂಸಿ ನೀರು ಅನಾಯಾಸವಾಗಿ ಬಂದಿದೆ ಎಂಬ ಕಾರಣಕ್ಕೆ ತೆಲಂಗಾಣ, ಆಂಧ್ರಪ್ರದೇಶಗಳು ತಮಗೆ ಬಚಾವತ್ ಆಯೋಗ ಹಂಚಿರುವ ನೀರಿನಲ್ಲಿ ಒಂದಿಷ್ಟು ಕೊಡು- ಕೊಳ್ಳುವ ಮನೋಧರ್ಮ ಅನುಸರಿಸಲಿವೆಯೇ
ಎಂದರೆ ಊಹೂಂ ಇಲ್ಲವೇ ಇಲ್ಲ. ಕರ್ನಾಟಕದ ಸ್ಥಿತಿ ‘ಗಾಣದವನ ಜತೆ ಕಷ್ಟ ಹೇಳಿಕೊಂಡಂತೆ’. ಹಾಗಂತ ಈ ಸಮಸ್ಯೆಗೆ ಮದ್ದು, ಪರಿಹಾರವೇ ಇಲ್ಲವೇ ಎಂದರೆ ಇದೆ. ಪರಿಹಾರ ರೂಪವಾಗಿ ದಶಕಗಳಿಂದ ಚರ್ಚೆಗೆ ಒಳಗಾಗಿರುವುದು ಸಮಾನಾಂತರ ಜಲಾಶಯಗಳನ್ನು (ಬ್ಯಾಲೆನ್ಸಿಂಗ್ ರಿಸರ್ವಾಯರ್ಸ್) ನಿರ್ಮಿಸಿ ನೀರನ್ನು ಕಾಪಿಟ್ಟುಕೊಳ್ಳುವುದು. ಕೊಪ್ಪಳ ಜಿಲ್ಲೆಯ ನವಿಲೆ ಎಂಬಲ್ಲಿ ಅಜಮಾಸು ೪೦ ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯದ ಸಮಾನಾಂತರ ಜಲಾಶಯ ನಿರ್ಮಿಸುವುದು ಕರ್ನಾಟಕ ಸರಕಾರದ ಆಶಯ, ಗುರಿ.
ಈ ಯೋಜನೆಯ ಪ್ರಸ್ತಾಪವಾಗುತ್ತಿದ್ದಂತೆ ಆಗಿನ ಸಂಯುಕ್ತ ಆಂಧ್ರಪ್ರದೇಶ ತಕರಾರು ಒಡ್ಡಿತು. ಈಗ ಅದು ೨ ರಾಜ್ಯವಾಗಿ ತಕರಾರಿನ ಸ್ವರ ತಾರಕಕ್ಕೆ ಏರಿದೆ. ತುಂಗಭದ್ರಾ ನದಿ ಕೃಷ್ಣಾ ಕೊಳ್ಳದ ಭಾಗ. ಕೃಷ್ಣಾ ನದಿನೀರು ಹಂಚಿಕೆ ಕುರಿತ ಬಚಾವತ್ ಆಯೋಗದ ಒಪ್ಪಂದಕ್ಕೆ ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಬಾಧ್ಯಸ್ಥ ರಾಜ್ಯಗಳು. ಪ್ರಸ್ತುತ ತುಂಗಭದ್ರಾ ನದಿ ಅಣೆಕಟ್ಟೆ ನೀರು ಹಂಚಿಕೆ ಮಹಾರಾಷ್ಟ್ರ ಹೊರತಾದ ೩ ರಾಜ್ಯಕ್ಕೆ ಸೀಮಿತ. ಕ್ಯಾತೆ ತಕರಾರು ಏನೇ ಎದುರಾಗುವುದಿದ್ದರೂ ಅದು ನೇರವಾಗಿ ಬರುವುದು ಆಂಧ್ರ, ತೆಲಂಗಾಣದಿಂದ. ನವಿಲೆ ಜಲಾಶಯವನ್ನು ನಿರ್ಮಿಸುವುದರಿಂದ ನದಿನೀರು ಹಂಚಿಕೆಯ ಸೂತ್ರದ ಉಲ್ಲಂಘನೆ ಆಗುತ್ತದೆ ಎನ್ನುವುದು ಈ ರಾಜ್ಯಗಳ ಬೊಬ್ಬೆ, ಅಹವಾಲು, ದುಃಖ, ದೂರು. ಈಗಾಗಲೇ ೩೧ ಟಿಎಂಸಿ ನೀರು ಕಳೆದುಕೊಂಡ ಕರ್ನಾಟಕ ತನ್ನ ಪಾಲಿನದನ್ನು ಕಾಪಾಡಿಕೊಳ್ಳುವುದಕ್ಕೆ ನಡೆಸಿರುವ ಕಸರತ್ತು ಇತರ ಎರಡು ರಾಜ್ಯಗಳ ಹಿತಾಸಕ್ತಿಗೆ ಹೇಗೆ ಮಾರಕ ಎಂದು ಕೇಳಿದರೆ ಅದಕ್ಕೆ ನಿಖರವಾದ ಉತ್ತರ ಇಲ್ಲ.
ವಿರೋಧ ಒಡ್ಡಬೇಕು ಹಾಗಾಗಿ ವಿರೋಧ ಎನ್ನುವುದರ ಆಚೆಗೆ ಆಂಧ್ರ, ತೆಲಂಗಾಣದಲ್ಲಿ ಸಮರ್ಥನೀಯ ಬಂಡವಾಳ ಇಲ್ಲ. ಆದರೆ ಆ ಎರಡೂ ರಾಜ್ಯಗಳಿಗೆ ಒಂದು ಅಗೋಚರ ಶಕ್ತಿಯ ಬೆಂಬಲಾಶೀರ್ವಾದ ಇದೆ. ಅದೆಂದರೆ ಕರ್ನಾಟಕದ ಸರಕಾರಗಳು ಆ ಪಕ್ಷ ಈ ಪಕ್ಷ ಎನ್ನದೆ ಉದ್ದಕ್ಕೂ ತೋರಿಸುತ್ತ ಬಂದಿರುವ ರಾಜಕೀಯ ಇಚ್ಛಾಶಕ್ತಿಯ ಕೊರತೆ. ಈ ದೌರ್ಬಲ್ಯವನ್ನು ತಮ್ಮ ವಿರೋಧಕ್ಕೆ ಬಳಸಿಕೊಳ್ಳುತ್ತಿರುವ ಎರಡೂ ರಾಜ್ಯಗಳ ಮುಂದೆ ಕರ್ನಾಟಕದ ಆಡಳಿತ ಕೈಕಟ್ಟಿ
ನಡುಬಾಗಿಸಿ ವಿನೀತ ಭಾವದಲ್ಲಿ ನಿಂತಿರುವುದು ರಾಜ್ಯದ ದುರದೃಷ್ಟ. ಇದು ರಾಜ್ಯದ ಜನತೆಯ ಸ್ವಾಭಿಮಾನಕ್ಕೆ ಚುನಾಯಿತ ಸರಕಾರಗಳು ಎಸಗಿಕೊಂಡು ಬಂದಿರುವ ಅಪಚಾರವೂ ಹೌದು.
ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ೭ ತಿಂಗಳಾಗಿದೆ. ಒಮ್ಮೆಯೂ ಅವರು ತುಂಗಭದ್ರಾ ಜಲಾಶಯದ ಸಮಸ್ಯೆಯನ್ನು ಪ್ರಸ್ತಾಪಿಸಿಲ್ಲ. ಭಾರಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರ ಆದ್ಯತೆಗಳೇ ಬೇರೆ ಎನಿಸುತ್ತದೆ. ಸರಕಾರ ಗಂಭೀರವಾಗಿ ಪರಿಗಣಿಸಲೇಬೇಕಿರುವ ಸಮಸ್ಯೆ ಇದು ಎಂದು ಅವರಿಗೆ ಅನಿಸಿದಂತೆ ಜನತೆ ಭಾವಿಸಲು ಅಗತ್ಯವಾದ ಸಾಂದರ್ಭಿಕ ಸಾಕ್ಷ್ಯಗಳು ಕಾಣಿಸುತ್ತಿಲ್ಲ. ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆಗೆಂದೇ ಬೆಳಗಾವಿಯಲ್ಲಿ ನಡೆದ ವಿಧಾನಮಂಡಲದ ಅಧಿವೇಶನದಲ್ಲಿ ಕೊಪ್ಪಳ, ರಾಯಚೂರು, ಬಳ್ಳಾರಿ ಶಾಸಕರೂ ತುಂಗಭದ್ರಾದಲ್ಲಿ ತುಂಬುತ್ತಿರುವ ಹೂಳಿನ ವಿಚಾರದಲ್ಲಿ ತಲೆಕೆಡಿಸಿಕೊಂಡಿದ್ದು ವರದಿಯಾಗಿಲ್ಲ.
ಶಾಸಕರಿಗೆ ಬೇಡವಾಗಿದ್ದು ಯಾವುದೇ ಸರಕಾರಕ್ಕೆ ಬೇಡವೇ ಆಗಿರುತ್ತದೆ. ಅದು ಅನುಕೂಲಸಿಂಧು ರಾಜಕಾರಣ. ‘ಬೀಸೋ ದೊಣ್ಣೆ ತಪ್ಪಿದರೆ ಸಾವಿರ ವರ್ಷ ಆಯುಷ್ಯ’ ಎನ್ನುವುದು ಇದಕ್ಕೇ ಅಲ್ಲವೇ? ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿದ್ದ ಅವಧಿಯಲ್ಲಿ ವಿಧಾನಸಭೆಯಲ್ಲೇ ಹೂಳಿನ ವಿಚಾರ ಪ್ರಸ್ತಾಪಿಸಿ ಉದ್ದೇಶಿತ ನವಿಲೆ ಜಲಾಶಯ ನಿರ್ಮಾಣಕ್ಕೆ ಅಗತ್ಯವಾದ ಭೂಸ್ವಾಧೀನಕ್ಕೆ ಆಗ್ರಹಿಸಿದ್ದರು. ಸರಕಾರವನ್ನು ತರಟೆಗೂ ತೆಗೆದುಕೊಂಡಿದ್ದರು. ಈಗ ಕುಂಬಳ ಕಾಯಿ-ಕುಡುಗೋಲು ಎರಡೂ ಅವರ ಸ್ವಾಧೀನದಲ್ಲೇ ಇದ್ದರೂ ಮರೆವು ಅವರನ್ನು ಆವರಿಸಿದಂತಿದೆ.
ಹೀಗೆಂದ ಮಾತ್ರಕ್ಕೆ ಭೂಸ್ವಾಧೀನ ಹೇಳಿದಷ್ಟು ಸುಲಭವಲ್ಲ. ೪೦ ಟಿಎಂಸಿ ನೀರಿನ ಧಾರಣಾ ಸಾಮರ್ಥ್ಯದ ಜಲಾಶಯವೆಂದರೆ ಅಗಾಧ ಪ್ರಮಾಣದ ಭೂಮಿ
ಬೇಕು. ಅದು ನೀರಾವರಿ ಪ್ರದೇಶವೋ ಬಂಜರು ಪ್ರದೇಶವೋ ಎನ್ನುವುದಕ್ಕಿಂತ ಪೂರ್ವಾರ್ಜಿತ ಭೂಮಿಯನ್ನು ಬಿಟ್ಟುಕೊಡುವುದು ರೈತರಿಗೆ ಕಷ್ಟವಾಗುತ್ತದೆ. ಕರುಳನ್ನು ಕತ್ತರಿಸಿ ಕೊಟ್ಟಂತೆ. ಪರಿಹಾರವನ್ನು ಸಮ್ಮತ ರೀತಿಯಲ್ಲಿ ಕೊಟ್ಟ ಮಾತ್ರಕ್ಕೆ ನಿರ್ವಸಿತರ ಪುನರ್ವಸತಿಗೆ ಸರಕಾರ ಆದ್ಯತೆ ಕೊಟ್ಟ ಉದಾಹರಣೆಯೇ ಕರ್ನಾಟಕ ದಲ್ಲಿಲ್ಲ. ಶರಾವತಿ, ಆಲಮಟ್ಟಿ, ನಾರಾಯಣ ಪುರ, ತುಂಗಭದ್ರಾ ಜಲಾಶಯಗಳ ನಿರ್ವಸಿತರು ದಶಕಗಳ ಬಳಿಕವೂ ತಮಗಾದ ಘಾಸಿ ಗಾಯದ
ನೋವು ನೆಕ್ಕುತ್ತ ದಿನಗಳೆಯುತ್ತಿದ್ದಾರೆ. ಈ ವಿಚಾರದಲ್ಲಿ ಸರಕಾರ ನಡೆಸುವವರು ಏನು ಹೇಳಿದರೂ ನಂಬಲಾಗದ ಸ್ಥಿತಿ ರೈತರದು.
ಭೂಸ್ವಾಧೀನದ ಮಾತು ನಡೆದಿದ್ದರೂ ವಾರ್ಷಿಕ ಬಜೆಟ್‌ನಲ್ಲಿ ಅದಕ್ಕಾಗಿ ಹಣ ಮೀಸಲಿಡುವ ಪ್ರಸ್ತಾವ ಆಗಿಲ್ಲ ಎನ್ನುವುದನ್ನು ನಾವು ಗಮನಿಸಬೇಕು. ಸರಕಾರ ಸಮಾನಾಂತರ ಜಲಾಶಯ ನಿರ್ಮಾಣದ ವಿಚಾರದಲ್ಲಿ ಬದ್ಧವಾಗಿದೆ ಎಂದು ತೋರಿಸಿಕೊಳ್ಳುವ ಸಣ್ಣ ನಿದರ್ಶನವೂ ಇಲ್ಲ. ಎಂದರೆ ಗಾಳಿಯಲ್ಲಿ ಮಾತು ಹಾರಿಸುವ ನೌಟಂಕಿ ರಾಜಕೀಯವನ್ನು ಸರಕಾರ ಮಾಡುತ್ತಿರುವುದು ಸ್ಪಷ್ಟ. ಹಾಗಲ್ಲವಾದರೆ ಆಂಧ್ರಪ್ರದೇಶ, ತೆಲಂಗಾಣ ಸರಕಾರದ ಮುಖ್ಯಸ್ಥರೊಂದಿಗೆ ಚರ್ಚಿಸಿ ಉಭಯ ರಾಜ್ಯಗಳ ತುಂಗಭದ್ರಾ ನದಿನೀರಿನ ಹಕ್ಕುಗಳಿಗೆ ಕರ್ನಾಟಕ ಕನ್ನ ಹಾಕುವುದಿಲ್ಲ ಎಂದು ಮನವರಿಕೆ ಮಾಡಿಕೊಡಬಹುದಾಗಿತ್ತು.
ಸಮಾನಾಂತರ ಜಲಾಶಯ ಕರ್ನಾಟಕದಲ್ಲಿ ನಿರ್ಮಾಣವಾಗುವುದು ಮೂರೂ ರಾಜ್ಯಗಳು ಆಕಸ್ಮಿಕವಾಗಿ ಎದುರಿಸಬೇಕಾಗಿ ಬರುವ ಜಲಗಂಡಾಂತರದ
ಬಿಕ್ಕಟ್ಟಿಗೆ ಪರಿಹಾರವಾಗಬಹುದು ಎನ್ನುವುದನ್ನು ಸ್ಪಷ್ಟಗೊಳಿಸಬಹುದಾಗಿತ್ತು. ನದಿನೀರು ಹಂಚಿಕೆ ವಿಚಾರದಲ್ಲಿ ಕೇಂದ್ರದ ಅಽನದಲ್ಲಿರುವ ವಿವಿಧ ಏಜೆನ್ಸಿಗಳ
ಮುಂದೆ ತನ್ನದೇ ಅಹವಾಲನ್ನು ವಿಯಟ್ ಮಾದರಿಯಲ್ಲಿ ಮಂಡಿಸುವ ಮೂಲಕ ಎರಡು ರಾಜ್ಯಗಳ ಕಿರಿಕಿರಿಗೆ ಒಂದು ತಡೆಗೋಡೆ ನಿರ್ಮಿಸಬಹುದಿತ್ತು. ಊಹೂಂ, ಯಾವುದೂ ಆಗಿಲ್ಲ, ಆಗುವ ಸಾಧ್ಯತೆಯೂ ಸನಿಹ ಭವಿಷ್ಯದಲ್ಲಿಲ್ಲ.
ಈಗಂತೂ ತೆಲಂಗಾಣದಲ್ಲಿ ನಮ್ಮ ಉಪಮುಖ್ಯಮಂತ್ರಿ ಡಿಕೆಶಿಯವರದೇ ಸರಕಾರ ಎಂದು ಜನ ಆಡಿಕೊಳ್ಳುತ್ತಿರುವುದನ್ನು ಗಮನಿಸಿದರೆ ಅಲ್ಲಿಯ ಮುಖ್ಯಮಂತ್ರಿ ರೇವಂತ ರೆಡ್ಡಿ ನಮ್ಮ ಅನಿಸಿಕೆ ಭಾವನೆಗಳಿಗೆ ಸೊಪ್ಪು ಹಾಕಿ ಯಾರೆಂಬ ವಿಶ್ವಾಸ ಬಹಳ ತುಟ್ಟಿಯದಾಗಬಹುದು. ತುಂಗಭದ್ರಾ ಅಣೆಕಟ್ಟೆ ನಿರ್ಮಾಣವಾಗಿ ಸಾರ್ವಜನಿಕ ಬಳಕೆಗೆ ದೊರೆತಿದ್ದು ೧೯೫೩ರ ತರುವಾಯ. ಈಗ ೭೦ ವರ್ಷದಲ್ಲಿ ಹೂಳನ್ನೇ ತುಂಬಿಕೊಳ್ಳುವ ಸ್ಥಿತಿಗೆ ತುಂಗಭದ್ರಾ ಒಡಲು ಬಂದಿದೆ. ಒಂದೆಡೆ ಬಳ್ಳಾರಿ, ಇನ್ನೊಂದೆಡೆ ಕೊಪ್ಪಳ, ರಾಯಚೂರು ಜಿಲ್ಲೆಯಲ್ಲಿ ಜನ, ಜಾನುವಾರು, ಪಶು-ಪಕ್ಷಿಗಳಿಗೆ ನೀರಿನ ಆಸರೆ ಯಾಗಿರುವ ಎಡದಂಡೆ ಬಲದಂಡೆ ಕಾಲುವೆ ಗಳು ನೀರಿಗಾಗಿ ಬಾಯಿ ಬಾಯಿ ಬಿಡುವ ಕಾಲ ಬಹಳ ದೂರದಲ್ಲಿಲ್ಲ.
ಗಡ್ಡಕ್ಕೆ ಬೆಂಕಿ ಬಿದ್ದಾಗ ನೀರಿಗಾಗಿ ಬಾವಿ ತೋಡುವ ಪ್ರವೃತ್ತಿಯನ್ನು ಸರಕಾರ ಬಿಡಬೇಕು. ಸಿದ್ದರಾಮಯ್ಯನವರು ಫೆಬ್ರುವರಿ ೧೭ರಂದು ಮಂಡಿಸಲಿರುವ ಬಜೆಟ್‌ನಲ್ಲಿ ನವಿಲೆ ಯೋಜನೆಗೆ ಶ್ರೀಕಾರ ಹಾಡುವ ಪ್ರಸ್ತಾವ ಆಗಬೇಕು. ಬಜೆಟ್ ಪೂರ್ವದಲ್ಲಿ ರೈತ ಸಂಘಟನೆಗಳೊಂದಿಗೆ ಮುಖ್ಯಮಂತ್ರಿ ಚರ್ಚಿಸುವುದು
ವಾಡಿಕೆ. ಆ ಸಮಯದಲ್ಲಿ ರೈತಾಪಿ ವಲಯವನ್ನು ಪ್ರತಿನಿಧಿಸುವವರು ನಿದ್ರೆಗೆ ಜಾರದೆ ಬಾರುಕೋಲನ್ನು ಝಳಪಿಸಬೇಕು. ಗುರಿ ಒಂದೇ ಆಗಿದ್ದರೂ ಮಾರ್ಗ ಬೇರೆ ಬೇರೆ ಆಗಿ ಹರಿದು ಹಂಚಿಹೋಗಿರುವ ರೈತ ಸಂಘಟನೆಗಳಿಂದ ಜನ ಇದನ್ನು ನಿರೀಕ್ಷಿಸಬಹುದೇ?