Thursday, 12th December 2024

ಥಂಡಿ ಶೀತದ ದಿನಗಳಲ್ಲಿ ಜ್ವರದ ಕಾಟ

ಶಶಾಂಕಣ

shashidhara.halady@gmail.com

ಅದೇಕೋ ಈ ವರ್ಷ ಹಲವು ಕಡೆ ಬಹಳ ಮಳೆ ಸುರಿಯುತ್ತಿದೆ. ಮಲೆನಾಡು ಮತ್ತು ಕರಾವಳಿಯಲ್ಲಿ, ಗುಡ್ಡ ಕುಸಿತ, ಮನೆಗೆ ನೀರು ನುಗ್ಗುವುದು, ಕುಸಿದ ಗುಡ್ಡದ ಜತೆ ಜೀವ ಹರಣ, ಎಲ್ಲೆ ಮೀರಿ ಹರಿಯುತ್ತಿರುವ ನದಿ – ಇಂತಹ ಸುದ್ದಿಗಳೇ ಎಲ್ಲೆಡೆ ತುಂಬಿವೆ ಮತ್ತು ಸಣ್ಣಗೆ ನೋವನ್ನೂ ತರುತ್ತಿವೆ. ಅತಿಯಾದ ಮಳೆಯಿಂದ
ಆಗುತ್ತಿರುವ ಅನಾಹುತಗಳಲ್ಲಿ ಕೆಲವು ನಿಸರ್ಗ ನಿರ್ಮಿತ, ಇನ್ನು ಕೆಲವು ಮಾನವನ ಅವೈಜ್ಞಾನಿಕ ಚಿಂತನೆಯಿಂದ ಉಂಟಾದದ್ದು. ‘ಕಾಮಗಾರಿ’ ನಡೆಸುವ ಭರದಲ್ಲಿ, ಅದಾವುದೋ ಅಜಾರೂಕತೆಯಿಂದಲೋ, ಗೊತ್ತಿದ್ದು ಗೊತ್ತಿದ್ದೇಯೋ, ಸೂಕ್ತ ಸುರಕ್ಷಿತ ವ್ಯವಸ್ಥೆಯನ್ನು ಮಾಡದೇ ಇರುವುದರಿಂದಲೂ ಕೆಲವು ಅನಾಹುತಗಳಾಗಿವೆ. ಸೂಕ್ತ ಸುರಕ್ಷಾ ಕ್ರಮಗಳನ್ನು ಕೈಗೊಂಡರೆ, ವಿಪರೀತ ಮಳೆ ಸುರಿದ ತಕ್ಷಣ, ಅನಾಹುತಗಳು ಆಗಬೇಕೆಂದೇನೂ ಇಲ್ಲ, ಅಲ್ಲವೆ?

ಹಾಗೆ ನೋಡಿದರೆ, ಮಳೆಗಾಲದ ಅನುಭವಗಳನ್ನು ಮಧುರ ಎನ್ನುವುದುಂಟು. ಹೊರಗೆ ಜಿರಾಪತಿ ಮಳೆ ಸುರಿಯುತ್ತಿರುವಾಗ, ಮನೆಯೊಳಗೆ ಕುಳಿತು, ಮಳೆಯನ್ನೇ ನೋಡುತ್ತಾ, ಅದರ ಸಂಗೀತ ವನ್ನು ಕೇಳುತ್ತಾ ಮನಸ್ಸಿನ ಲಗಾಮು ಕಳಚಿಬಿಡುವುದು ಒಂದು ಮಧುರ ಅನುಭವವೇ ಸೈ. ಒಲೆಯ ಕೆಂಡ ದಲ್ಲಿಟ್ಟು ಸುಟ್ಟ ಹಲಸಿನ ಹಪ್ಪಳ, ಅದರ ಮೇಲೆ ನಾಲ್ಕಾರು ಸುಟ್ಟ ಗೋಡಂಬಿಗಳಿದ್ದರಂತೂ, ಎಡೆಬಿಡದೆ ಸುರಿವ ಮಳೆಯ ಅನುಭವ ನಿಧಾನವಾಗಿ ಮನದೊಳಗೆ ಇಳಿಯುತ್ತದೆ; ಇತ್ತ ಹಪ್ಪಳ ಮತ್ತು ಸುಟ್ಟ ಗೋಡಂಬಿಯ ಕಾಂಬಿನೇಷನ್‌ನ ರುಚಿ ಹೊಟ್ಟೆಯೊಳಗೆ ಇಳಿಯುತ್ತದೆ!

ಹಾಗಂತ ಮಲೆನಾಡಿನ ಮಳೆಗಾಲದ ದಿನಗಳ ನೆನಪುಗಳೆಲ್ಲವೂ ಮಧುರವೇ ಎಂದು ಕೇಳಿದರೆ ಇಲ್ಲ ಅಂತಲೇ ಅನ್ನಬೇಕು. ಮಲೆನಾಡಿನ ಅಂಚಿನಲ್ಲಿರುವ
ನಮ್ಮೂರಿನಲ್ಲಿ ನನ್ನ ಬಾಲ್ಯದ ಮಳೆಗಾಲವನ್ನು ನೆನಪಿಸಿಕೊಂಡರೆ ವಾಸ್ತವವಾಗಿ ಅದೊಂದು ಮಿಶ್ರ ಅನುಭವ. ಆದರೂ ಬಾಲ್ಯದ ಮಳೆಗಾಲದ ಮಧುರ ಅನುಭವಗಳನ್ನು ಮಾತ್ರ ನೆನಪಿಸಿಕೊಂಡು, ನಾವೆಲ್ಲ ನಾಷ್ಟಲ್ಜಿಕ್ ಆಗುವುದುಂಟು. ಬಹುಶಃ ಮಳೆಗಾಲದ ಮಧುರ ನೆನಪುಗಳು ನಮ್ಮಲ್ಲಿ ಸ್ಥಾಯಿಯಾಗಲು ಬೇರೇನೋ ಭಾವನಾತ್ಮಕ ಕಾರಣಗಳಿರಲೇಬೇಕು.

ನಮ್ಮ ಹಳ್ಳಿಯ ಅಪ್ಪಟ ಗ್ರಾಮೀಣ ಜೀವಗಳಿಗೆ, ಮಳೆಗಾಲ ಎಂದರೆ ಸಣ್ಣಗೆ ಒಂದು ರೀತಿಯ ಭಯ, ನಡುಕ, ಅಳುಕು, ದಿಗಿಲು ಇತ್ತು. ‘ಈ ವರ್ಷದ
ಮಳೆಗಾಲ ಬಂದು ಕಳೆದರೆ ನಾವು ಗೆದ್ದಂತೆ’ ಎಂದು ಪ್ರತಿವರ್ಷ ದೇವರಿಗೆ ಕೈಮುಗಿಯುತ್ತಿದ್ದ ಹಲವು ಕುಟುಂಬಗಳನ್ನು ನಾನು ಕಂಡಿದ್ದೆ. ಕೆಳ ಮಧ್ಯಮ
ವರ್ಗ ಮತ್ತು ಕೃಷಿ ಕಾರ್ಮಿಕರ ಕುಟುಂಬಗಳಿಗಂತೂ, ಮಳೆಗಾಲವೆಂದರೆ ಕಷ್ಟದ ದಿನಗಳು. ನಾಲ್ಕು ತಿಂಗಳುಗಳ ಕಾಲ ಸುರಿಯುವ ಮಳೆಗಾಲವನ್ನು ಕ್ಷೇಮವಾಗಿ, ಗೌರವಯುತವಾಗಿ ಕಳೆಯುವುದೇ ಹಲವರಿಗೆ ಒಂದು ಸವಾಲು.

ಜೂನ್ ಮೊದಲ ವಾರ ಸುರಿಯಲಾರಂಭಿಸಿದ ಮಳೆಯು, ಜನಸಾಮಾನ್ಯರಿಗೆ ಮತ್ತು ಬಡವರಿಗೆ ತಂದಿಡುತ್ತಿದ್ದ ಕಷ್ಟಗಳಿಗೆ ಕೊನೆಯೇ ಇರಲಿಲ್ಲ.
ಒಮ್ಮೆಗೆ ಗದ್ದೆ ನಾಟಿ ಮುಗಿದ ನಂತರ, ಕೃಷಿ ಕಾರ್ಮಿಕರಿಗೆ ಯಾವುದೇ ಕೆಲಸ ದೊರೆಯದೆ, ಮನೆ ಯಿಂದಾಚೆ ಹೋಗದಂತೆ ಮಾಡುವ ದಿನಗಳೆಂದರೆ
ಈ ಮಳೆಗಾಲ. ಸುರಿವ ಮಳೆಯಲ್ಲೇ ನಾಟಿ ಮಾಡಿ, ಮೂರು ತಿಂಗಳ ನಂತರ ನಡೆಯುವ ಕೊಯ್ಲು ಕೆಲಸ ಬರುವ ತನಕ ಯಾರಿಗೂ ಹೆಚ್ಚಿನ ಕೆಲಸವಿಲ್ಲ.
ಜೂನ್‌ನಲ್ಲಿ ಮಾಡಿದ ನಾಟಿ ಕೆಲಸದ ಮಜೂರಿಯನ್ನು, ಕೊಯ್ಲು ಮುಗಿದ ನಂತರ ಕೊಡುತ್ತೇವೆ ಎಂಬ ಸಿರಿವಂತರು ಸಹ ಕೆಲವರಿದ್ದರು.

ಆದರೂ ಹಠಮಾಡಿಯೋ, ಕಾಡಿಬೇಡಿಯೋ ಆ ಕೂಲಿಯನ್ನು ಅಕ್ಕಿಯ ರೂಪದಲ್ಲೋ ಬೇರೆ ಯಾವುದೋ ರೂಪದಲ್ಲೋ ಪಡೆದು ಬರುತ್ತಿದ್ದರು. ಆದರೆ ಆ
ಸಂಪಾದನೆಯು ಎಷ್ಟು ದಿನಕ್ಕೆ ಸಾಕಾದೀತು? ಜುಲೈ ತಿಂಗಳ ಆಷಾಢ ಎಂದರೆ ಇನ್ನಷ್ಟು ಕಷ್ಟ. ಕೆಲಸ ಹುಡುಕಿಕೊಂಡು ಹೋಗೋಣವೆಂದರೆ ನಿರಂತರ
ಸುರಿವ ಮಳೆ. ಮನೆಯಲ್ಲಿ ಕುಳಿತು ಬರಬರನೆ ಸುರಿಯುವ ಮಳೆಯನ್ನು, ಮಾಡಿನ ಅಂಚಿನಿಂದ ಬೀಳುವ ನೀರನ್ನೇ ನೋಡುತ್ತಾ, ಈ ಮಳೆ ಯಾವಾಗ
ಕಡಿಮೆಯಾಗುತ್ತದೆ ಎಂದು ದೇನಿಸುವುದೇ ಪ್ರತಿದಿನದ ದಿನಚರಿ.

ಮಳೆಗಾಲದ ಇಂತಹ ಕಷ್ಟದ ದಿನಗಳನ್ನು ಎದುರಿಸಲೆಂದೇ, ಬೇಸಿಗೆಯಲ್ಲಿ ಕೆಲವು ತಯಾರಿಗಳನ್ನು ಮಾಡುವುದುಂಟು. ಬಿಸಿಲುಕಾಲದಲ್ಲಿ ಸಾಕಷ್ಟು
ಅಗ್ಗದ ಬೆಲೆಗೆ ದೊರೆಯುವ ಗೆಣಸನ್ನು ಖರೀದಿಸಿ, ಸಣ್ಣ ಸಣ್ಣ ಹೋಳುಗಳನ್ನಾಗಿ ಹೆಚ್ಚಿ ಚೆನ್ನಾಗಿ ಒಣಗಿಸಿ, ಅದನ್ನು ಮಳೆಗಾಲದಲ್ಲಿ ಬೇಯಿಸಿ ಹೊಟ್ಟೆ
ತುಂಬಿಸಿಕೊಳ್ಳುತ್ತಿದ್ದ ಕುಟುಂಬಗಳು ಹಲವು. ಡಬ್ಬಿ ಗಟ್ಟಲೆ ಹಲಸಿನ ಬೀಜಗಳನ್ನು ಸಂಗ್ರಹಿಸಿ ಅದನ್ನು ಸುಟ್ಟು ಅಥವಾ ಬೇಯಿಸಿ ತಿನ್ನುತ್ತಿದ್ದವರು ಹಲ
ವರು. ಹಲಸಿನ ಹಪ್ಪಳ ಸಹ ಕೆಲವು ದಿನ ಮಳೆಗಾಲದ ಬೆಳಗಿನ ತಿನಿಸು. ಹಲಸಿನ ಹಣ್ಣನ್ನು ಸಹ ಒಂದು ಹೊತ್ತಿನ ಆಹಾರವಾಗಿ ಸೇವಿಸುವ ಕುಟುಂಬಗಳು
ಇದ್ದವು. ಹಾಗಂತ ದಿನದ ಮೂರೂ ಹೊತ್ತು ಇದನ್ನೇ ಮಾಡುತ್ತಿದ್ದಾರೆಂದು ಅರ್ಥವಲ್ಲ, ಒಂದು ಹೊತ್ತು ಅನ್ನವನ್ನೋ ಗಂಜಿಯನ್ನೋ ಸೇವಿಸಿ, ಇನ್ನೊಂದು
ಹೊತ್ತು ಇಂತಹ ತಿನಿಸುಗಳು ಮಳೆಗಾಲದ ಆಹಾರದ ಪದ್ಧತಿ ಎನಿಸಿತ್ತು.

ನಿರಂತರ ಸುರಿವ ಮಳೆ, ಹಲವು ದಿನಗಳ ಕಾಲ ಮೋಡದ ಮರೆಯಿಂದ ಹೊರಗೆ ಬಾರದ ಸೂರ್ಯ, ಥಂಡಿ ಗಾಳಿ, ಇವೆಲ್ಲವೂ ಹಲವು ರೋಗ ಗಳಿಗೆ ಹೇಳಿ ಮಾಡಿಸಿದ ವಾತಾವರಣ. ನೆಗಡಿ, ಜ್ವರ, ಕೆಮ್ಮು, ಶೀತ, ಮೈ ಕೈ ನೋವು ಇವೆಲ್ಲಾ ನಮ್ಮೂರಿನ ಮಳೆಗಾಲದಲ್ಲಿ ತೀರಾ ಸಾಮಾನ್ಯ. ೧೯೭೦ರ ದಶಕದ
ತನಕ ನಮ್ಮ ಹಳ್ಳಿಯಲ್ಲಿ ಸಣ್ಣ ಪುಟ್ಟ ಕಾಯಿಲೆಗಳಿಗೆಲ್ಲ ಆಸ್ಪತ್ರೆಗೆ ಹೋಗುವ ಕ್ರಮ ಇರಲಿಲ್ಲ. ನಮ್ಮೂರಿನಲ್ಲಿ ಅಸಲಿಗೆ, ಆಸ್ಪತ್ರೆಯೇ ಇರಲಿಲ್ಲ! ಜ್ವರ, ನೆಗಡಿ
ಯಾದರೆ ಹಲವು ರೀತಿಯ ಕಷಾಯಗಳೇ ಚಿಕಿತ್ಸೆ. ಮೆಣಸಿನಕಾಯಿ ಕಾಳಿನ ಕಷಾಯ, ಹಂಗಾರ ಕೆತ್ತೆ ಕಷಾಯ, ಶುಂಠಿ ಬೆಳ್ಳುಳ್ಳಿ ಕಷಾಯ – ಇವೇ ವಿವಿಧ
ರೀತಿಯ ಜ್ವರಗಳಿಗೆ ಔಷಧ. ಯಾವ ಜ್ವರಕ್ಕೆ ಯಾವ ಮರದ ಕೆತ್ತೆಯ ಕಷಾಯ ಮಾಡಬೇಕು ಎಂಬುದನ್ನು ಅನುಭವದ ಮೇಲೆ ನಿರ್ಣಯಿಸುತ್ತಿದ್ದವರು
ಮನೆಯ ಅಜ್ಜಿಯರು.

ಮೆಣಸಿನಕಾಯಿ ಕಾಳಿನ ಕಷಾಯವಂತೂ ಎಲ್ಲಾ ಜ್ವರಗಳಿಗೆ ರಾಮಬಾಣವೆಂದೇ ನಮ್ಮ ಹಳ್ಳಿಯವರ ಅನಿಸಿಕೆ. ಜಾಸ್ತಿ ಜ್ವರ ಬಂದು, ನಾಲಿಗೆಯ ರುಚಿ ಕೆಟ್ಟು, ಊಟ ಸೇರದೆ ಇದ್ದಾಗ, ಹುರಿದ ಅಕ್ಕಿಯ ಗಂಜಿ ಮತ್ತು ಉಪ್ಪಿನ ಕಾಯಿ, ಜತೆಗೆ ಮೆಣಸಿನ ಕಾಳಿನ ಕಷಾಯವನ್ನು ದಿನದ ಮೂರು ಹೊತ್ತು ಸೇವಿಸಿದರೆ, ನಾಲ್ಕಾರು ದಿನಗಳಲ್ಲಿ ಜ್ವರ ವಾಸಿಯಾಗುತ್ತದೆ ಎಂಬ ದೃಢವಾದ ನಂಬಿಕೆಯೇ, ಅಂದಿನ ಜನರನ್ನು ಮುನ್ನಡೆಸುವ ಶಕ್ತಿಯಾಗಿತ್ತು.

ನಮ್ಮ ಹಳ್ಳಿಯ ಅಜ್ಜಿಯಂದಿರು ಬಳಸುತ್ತಿದ್ದ ಇನ್ನೊಂದು ಪ್ರಬಲ ಔಷಧ ಎಂದರೆ ಅರಸಿನ. ಕೆಪ್ಪಟರಾಯ ಅಥವಾ ಮಂಪ್ಸ್ ಆದಾಗ, ದತ್ತೂರದ ಬೀಜವನ್ನು ಅರಿಶಿನ ಪುಡಿಯ ಜೊತೆ ಚೆನ್ನಾಗಿ ತೇಯ್ದು, ಕಪಾಲದ ಭಾಗಕ್ಕೆ ಹಚ್ಚುತ್ತಿದ್ದರು. ಗಂಟಲು ನೋವಾದರೆ ಅರಸಿನ ಮತ್ತು ಮುದ್ದೆ ಬೆಲ್ಲವನ್ನು ಮಿಶ್ರಣ ಮಾಡಿ ಹಚ್ಚುವ ಕ್ರಮ. ಸುಟ್ಟ ಗಾಯವಾದರೆ, ತೇಗದ ಎಲೆಯ ಕುಡಿಯನ್ನು ಕೊಬ್ಬರಿ ಎಣ್ಣೆಯಲ್ಲಿ ಬಿಸಿ ಮಾಡಿ ಗಾಯಕ್ಕೆ ಹಚ್ಚುತ್ತಿದ್ದರು. ಕಿವಿ ನೋವಾದರೆ ಬೆಳ್ಳುಳ್ಳಿ ಮಿಶ್ರಿತ ಕೊಬ್ಬರಿ ಎಣ್ಣೆ ಯನ್ನು, ಸ್ವಲ್ಪ ಬಿಸಿ ಮಾಡಿ, ಕಿವಿಗೆ ಹಾಕಿದರೆ ಕಿವಿ ನೋವು ಮಾಯ! ಇಂತಹ ಕೆಲವು ಔಷಧಿಗಳು ಈಗಿನವರೆಗೆ ವಿಚಿತ್ರ ಎನಿಸಿದರೂ, ಅಂದು ಅವೇ ದಿವ್ಯ ಔಷಧ!

ಇದನ್ನೇಕೆ ಇಷ್ಟು ವಿವರವಾಗಿ ಹೇಳುತ್ತಿರುವೆ ಎಂದರೆ, ಮಳೆಗಾಲವಿದ್ದರೂ, ಆಗಿನ ದಿನಗಳಲ್ಲಿ ವೈದ್ಯರು, ಮಾತ್ರೆಗಳು, ಇಂಜೆಕ್ಷನ್ ಇಲ್ಲದೆ ದಿನಚರಿ ನಡೆಯುತ್ತಿತ್ತು ಎಂಬುದನ್ನು ಸೂಚಿಸಲು. ಜತೆಗೆ ಮೂರು ಅಥವಾ ನಾಲ್ಕು ತಿಂಗಳು ಸುರಿಯುತ್ತಿದ್ದ ಮಳೆಯಿಂದಾಗಿ, ಹಳ್ಳಿಗಳಿಂದ ಪೇಟೆಗೆ ಹೋಗಿ ಔಷಧ ತರುವ ವ್ಯವಧಾನ ವೂ ಇರುತ್ತಿರಲಿಲ್ಲ. ನಮ್ಮ ಅಜ್ಜಿಗೆ ತಾವು ಉಪಯೋಗಿಸುತ್ತಿದ್ದ ಔಷಧಗಳ ಮೇಲೆ ಅದೆಷ್ಟು ದೃಢವಾದ ನಂಬಿಕೆ ಇತ್ತೆಂದು ಒಮ್ಮೆ ನನಗೆ ಗೊತ್ತಾಗುವ ಸಂದರ್ಭ ಬಂತು. ಆ ಪ್ರಯೋಗಕ್ಕೆ ಒಡ್ಡಿಕೊಂಡವನು ನಾನೇ! ಆಗ ನಾಲ್ಕನೆಯ ತರಗತಿಯಲ್ಲಿದ್ದೆ. ಜುಲೈ ತಿಂಗಳಿನ ವಿಪರೀತ ಮಳೆ. ಎಲ್ಲಾ ಕಡೆ ಥಂಡಿ ವಾತಾವರಣ.

ಹೊರಗೆ ಬಿರುಸಾಗಿ ಮಳೆ ಸುರಿದಾಗ, ನೀರಿನ ಅಂಶವು ಗಾಳಿಯಲ್ಲಿ ತೇಲಿಕೊಂಡು ಮನೆಯೊಳಗೆ ಸಲೀಸಾಗಿ ಬರುತ್ತಿತ್ತು. ಅಂಗಳಕ್ಕೆ ಮನೆಗೂ ನಡುವೆ
ಇದ್ದದ್ದು ಮರದ ತಳಿ. ಆದ್ದರಿಂದ ಗಾಳಿ ಸಹಿತ ಮಳೆ ಸುರಿದಾಗ ಸಣ್ಣ ಸಣ್ಣ ನೀರಿನ ಕಣಗಳು ಮನೆಯೊಳಗೆ ತುಂಬಿಕೊಳ್ಳುತ್ತಿದ್ದವು. ಇದು ಕೇವಲ ನಮ್ಮ ಮನೆ
ಮಾತ್ರವಲ್ಲ ನಮ್ಮೂರಿನ ಎಲ್ಲಾ ಮನೆಗಳಲ್ಲೂ ಇದೇ ಸ್ಥಿತಿ. ಇಂತಹ ಥಂಡಿಯ ದಿನಗಳಲ್ಲಿ, ನನ್ನ ತೊಡೆಯ ಸಂದಿಯಲ್ಲಿ ಒಂದು ಕುರ ಆಯಿತು. ಒಂದು ದಿನ
ವಾಯಿತು, ಎರಡು ದಿನವಾಯಿತು, ಕುರ ದೊಡ್ಡ ದಾಗುತ್ತಾ ಹೋಯಿತು. ನಮ್ಮ ಅಮ್ಮಮ್ಮ ಅರಿಶಿನ ವನ್ನು ಎಣ್ಣೆಯಲ್ಲಿ ಬಿಸಿ ಮಾಡಿ ಹಚ್ಚಿದರು.

ನಾಲ್ಕಾರು ದಿನಗಳಾದವು. ಕುರದ ಗಾತ್ರ ದೊಡ್ಡದಾಯಿತು. ಈಗ ನಮ್ಮ ಅಮ್ಮಮ್ಮ ಹೊಸ ಔಷಧ ಪ್ರಯೋಗಿಸಿದರು. ತೊಂಡೆಯ ಎಲೆಯನ್ನು ಬಿಸಿ ಮಾಡಿ, ಅದರ ರಸ ಹಚ್ಚಿದರು. ಗುಣವಾಗಲಿಲ್ಲ. ನಮ್ಮೂರಿನ ಪಂಡಿತರ ಬಳಿಗೆ ಹೋಗಿ ಅದಾವುದೋ ಬೇರು ತಂದು ಅದರ ರಸವನ್ನು ಹಚ್ಚಿದರು. ಮನೆ ತುಂಬ ನಾರು ಬೇರುಗಳ ವಾಸನೆ ತುಂಬಿ ಹೋಯಿತು. ಆದರೆ ಕುರ ವಾಸಿಯಾಗಲಿಲ್ಲ. ಅದರ ನೋವಿನಿಂದಾಗಿ ನಡೆಯಲು ಸಾಧ್ಯವಾಗದೇ ಮಲಗಿದೆ. ಕುರದ ನೋವು ಜಾಸ್ತಿ ಆಗುತ್ತಾ ಹೋಯಿತು.

ಒಟ್ಟು ೧೭ ದಿನ ಶಾಲೆಗೆ ರಜೆ ಹಾಕಿದ್ದು ನೆನಪಿದೆ. ಕುರವಾಗಿ, ೧೬ನೆಯ ದಿನ ಮೂರು ಕಿ.ಮೀ. ದೂರದಲ್ಲಿದ್ದ ಹೈಕಾಡಿಗೆ ಹೋಗಿ, ರಾಮರಾಯರ ಕ್ಲಿನಿಕ್ ನಿಂದ ಒಂದೆರಡು ಮಾತ್ರೆ ತಂದರು. ಆ ದಿನ ಅರ್ಧ ಮಾತ್ರೆ ತಿಂದೆ. ಮರುದಿನ ಕುರ ಒಡೆದು, ಜ್ವರ ಬಿಟ್ಟು ನಾನು ನಡೆಯುವಂತಾದೆ! ಈಗ ನಾನು ನಿಮಗೆ ಹೇಳಿದರೆ ನಂಬಲು ಕಷ್ಟವಾಗಬಹುದು, ಆ ಹದಿನಾರು ದಿನ ನಾನು ಬಹಿರ್ದೆಶೆಗೆ ಹೋಗಿರಲಿಲ್ಲ! ‘ಹಾಂ, ಈಗ ಕಾಣಿ, ಹದಿನಾರು ದಿನ ಆದ ಮೇಲೆ…’ ಬಂತು ಎಂದು ನಮ್ಮ ಅಮ್ಮಮ್ಮ ಉದ್ಗರಿಸಿದ್ದು ಈಗಲೂ ನೆನಪಿದೆ! ಇಂದಿನ ದಿನಗಳಲ್ಲಿ ಇಂತಹ ಸನ್ನಿವೇಶವು ಎದುರಾಗಿದ್ದರೆ, ಪೋಷಕರು ಅದೆಷ್ಟು ಬಾರಿ ಆಸ್ಪತ್ರೆಗೆ ಓಡಾಡುತ್ತಿದ್ದ ರೋ!

ಮಳೆ ಇರಲಿ, ಚಳಿ ಇರಲಿ, ತಮ್ಮ ರೋಗಗಳಿಗೆ ಮನೆಯಲ್ಲೇ ಔಷಧ ಮಾಡಿಕೊಳ್ಳುತ್ತಿದ್ದರು ಎಂಬುದಕ್ಕೆ ಒಂದು ಉದಾಹರಣೆಯಾಗಿ ಮೇಲಿನ ಘಟನೆ ಹೇಳಿದ ನಷ್ಟೇ. ನಂತರದ ವರ್ಷಗಳಲ್ಲಿ ಜ್ವರ, ನೆಗಡಿ ಬಂದಾಗ ಹೈಕಾಡಿ ಡಾಕ್ಟರ್ ಬಳಿ ಓಡುವುದು ಸಾಮಾನ್ಯ ಎನಿಸಿತು. ಹಾಗಂತ ಆ ಓಟ ಸುಲಭದ್ದಾಗಿರಲಿಲ್ಲ. ನಮ್ಮ ಮನೆಯಿಂದ ಮೂರು ಕಿ.ಮೀ. ದೂರದಲ್ಲಿದ್ದ ಅವರ ಕ್ಲಿನಿಕ್‌ಗೆ ಹೋಗಲು ಇದ್ದದ್ದು ಕಾಡುದಾರಿ ಮಾತ್ರ. ಮೊದಲಿಗೆ ಅರ್ಧ ಕಿಮೀ ಗದ್ದೆಯಂಚಿನ ದಾರಿ; ನಂತರ ಹರನ ಗುಡ್ಡ ಎಂಬ ನಿರ್ಜನ ಗುಡ್ಡದ ಮೇಲೆ ಕಾಲ್ದಾರಿ. ಬೈಲಿನಿಂದ ಗುಡ್ಡವೇರಲು, ಮುರಕಲ್ಲಿನ ೧೨೦ ಮೆಟ್ಟಿಲುಗಳನ್ನು ಏರಬೇಕಿತ್ತು. ಅಷ್ಟು ಕಷ್ಟಪಟ್ಟು ಹೋಗಿ, ‘ಒಳ್ಳೆಯ ಕೈಗುಣ’ ಇದ್ದ ಕೈಗುಣವಿದ್ದ ಆ ಡಾಕ್ಟರ ಬಳಿ ಔಷಧ ತಂದರೆ, ಕಾಯಿಲೆ ವಾಸಿಯಾಗುತ್ತಿದ್ದು ಖಚಿತ ಎಂಬ ನಂಬಿಕೆ. ಆ ದಿನಗಳಲ್ಲಿ ಅವರು ಕೊಡುತ್ತಿದ್ದುದು ಕೆಂಪು ಬಣ್ಣದ ಔಷಧಿಗಳು, ಕೆಲವು ಮಾತ್ರೆಗಳು ಮಾತ್ರ.

ಅವರ ಕ್ಲಿನಿಕ್ ಹೊರತುಪಡಿಸಿದರೆ, ನಮ್ಮ ಹಳ್ಳಿಯ ಆರು ಕಿ.ಮೀ. ಪಾಸಲೆಯಲ್ಲಿ ಬೇರೆ ಡಾಕ್ಟರ್ ಇರಲಿಲ್ಲ, ಆಸ್ಪತ್ರೆಯೂ ಇರಲಿಲ್ಲ. ಆದ್ದರಿಂದಲೇ ಮಳೆಗಾಲದಲ್ಲಿ ವೈದ್ಯರನ್ನು ಹುಡುಕಿ ಕೊಂಡು ಹೋಗುವುದೆಂದರೂ ಅಂದಿನ ದಿನಗಳಲ್ಲಿ ಅದೊಂದು ಸಾಹಸ. ನಾಲ್ಕು ತಿಂಗಳು ಮಳೆ ಸುರಿಯುವ ಮಳೆಗಾಲವು, ನಮ್ಮ ಹಳ್ಳಿಯಲ್ಲಿ ಸಣ್ಣ ಮಟ್ಟದ ‘ಖಳ ನಾಯಕ’. ವಿಪರೀತ ಮಳೆ ಸುರಿದಾಗ, ಗದ್ದೆ ಯಂಚಿನ ತೋಡುಗಳಲ್ಲಿ ನೀರು ತುಂಬಿ, ಅವೆಲ್ಲವೂ ಗದ್ದೆಯ ಮೇಲೆ ಹರಿದು, ಬತ್ತದ ಸಸಿಗಳನ್ನು ಕಿತ್ತುಕೊಂಡು ಹೋಗುವುದುಂಟು. ನಮ್ಮ ಮನೆಯ ಬಳಿ ನೆರೆ ಬಂದರೂ, ಜೀವಕ್ಕೆ ಅಪಾಯವಿರಲಿಲ್ಲ.

ಅದೇನಿದ್ದರೂ, ಅಂದಿನ ಜನರ ಗ್ರಹಿಕೆಯಲ್ಲಿ, ಮಳೆಗಾಲವೆಂದರೆ ತೀರಾ ಕಷ್ಟದ ದಿನಗಳು ಎಂಬುದರಲ್ಲಿ ಎರಡುಮಾತಿಲ್ಲ. ಅದನ್ನು ನಮ್ಮೂರಿನವರು
ಹೇಳುತ್ತಿದ್ದುದು ಹೀಗೆ. ವಯಸ್ಸಾದವರು ‘ಇದೊಂದು ವರ್ಷ ಮಳೆಗಾಲದಲ್ಲಿ ಬದುಕಿ ಉಳಿದರೆ, ಇನ್ನು ಒಂದು ವರ್ಷ ತೊಂದರೆ ಇಲ್ಲ!’ ಅನುಭವಜನ್ಯ ಕಟುಸತ್ಯವೊಂದು ನಮ್ಮೂರಿನಲ್ಲಿ ನಾಣ್ಣುಡಿಯ ಸ್ವರೂಪ ಪಡೆದಿತ್ತು.ಮಧುರ ನೆನಪಿನ ಮಳೆಗಾಲವು ಕಷ್ಟದ ದಿನಗಳನ್ನು ಸಹ ಒಳಗೊಂಡಿದೆ ಎಂಬುದನ್ನು ಇದಕ್ಕಿಂತ ಸಮರ್ಪಕವಾಗಿ ಸೂಚಿಸುವ ಇನ್ನೊಂದು ನುಡಿಗಟ್ಟು ಇರಲಿಕ್ಕಿಲ್ಲ.