Tuesday, 10th September 2024

ಸಂಹಿತೆಯ ಜಾರಿ ಅಂಬೇಡ್ಕರರ ಆದ್ಯತೆಯಾಗಿತ್ತು

ಚರ್ಚಾ ವೇದಿಕೆ

ಡಾ.ಸುಧಾಕರ ಹೊಸಳ್ಳಿ

ಉತ್ತರಾಖಂಡ ರಾಜ್ಯವು ಏಕರೂಪ ನಾಗರಿಕ ಸಂಹಿತೆಯ ವಿಧೇಯಕವನ್ನು ಅಂಗೀಕರಿಸುವ ಮುಖಾಂತರ ಸ್ವತಂತ್ರ ಭಾರತದಲ್ಲಿ ಈ ಕಾಯ್ದೆಯನ್ನು ಜಾರಿಗೊಳಿಸಿದ ಮೊದಲ ರಾಜ್ಯವೆಂಬ ಕೀರ್ತಿಗೆ ಪಾತ್ರವಾಗಿದೆ. ‘ಭಾರತವು ಜಾತ್ಯತೀತ ರಾಷ್ಟ್ರ, ಇಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡುವುದು
ಅಸಾಧ್ಯ. ಇದರಿಂದ ಮುಸ್ಲಿಮರ ವೈಯಕ್ತಿಕ ಕಾನೂನು ಗಳಿಗೆ ಧಕ್ಕೆಯಾಗುತ್ತದೆ’ ಎಂದು ಎಡಪಂಥೀಯ ವರ್ಗ ೭೫ ವರ್ಷಗಳಿಂದಲೂ ಬೊಬ್ಬೆಯಿಡುತ್ತಲೇ ಬಂದಿದೆ.

ಎಲ್ಲದಕ್ಕೂ ಸಂವಿಧಾನವನ್ನೇ ಮುಂದುಮಾಡುವವರು, ಸಂವಿಧಾನದ ಪ್ರಧಾನ ಆಶಯವಾದ ಏಕರೂಪ ನಾಗರಿಕ ಸಂಹಿತೆಯ ಜಾರಿಗೆ ಜಾಣಮೌನ ತೋರಿಸುತ್ತಾ ಬಂದಿರುವುದು ಕಣ್ಣಿಗೆ ರಾಚುವಂತಿರುವ ಸತ್ಯ. ಇತ್ತೀಚೆಗೆ ಕೇಂದ್ರ ಸರಕಾರ ಕೂಡ ಈ ನೀತಿಯ ಜಾರಿಯ ಕುರಿತು ಅಭಿಪ್ರಾಯ, ಸಲಹೆ-ಸೂಚನೆ ನೀಡುವಂತೆ ಸಾರ್ವಜನಿಕರಿಗೆ ಕರೆ ನೀಡಿತ್ತು. ಇನ್ನೇನು ಇಡೀ ರಾಷ್ಟ್ರದಲ್ಲಿ ಈ ನಿಯಮ ಜಾರಿಯಾಗುವ ಲಕ್ಷಣಗಳು ಗೋಚರಿಸುತ್ತಿರುವಾಗ, ಈ ನಿಯಮದ ಆಚರಣೆಗೆ ಅಥವಾ ಜಾರಿಗೆ ಸಂವಿಧಾನವನ್ನೇ ಬಳಸಿಕೊಳ್ಳುವ, ಸಂವಿಧಾನವನ್ನೇ ಎದುರಿಗೇರಿಸುವ ಪ್ರಕ್ರಿಯೆಯು ನಡೆಯುತ್ತಿದೆ.

ಹೀಗಾಗಿ ಪ್ರಜ್ಞಾವಂತ ನಾಗರಿಕ ವಲಯ ಅಂಬೇಡ್ಕರರ ಅಭಿಮತ ಮತ್ತು ಸಾಂವಿಧಾನಿಕ ಅವಕಾಶವನ್ನು ವಿಮರ್ಶೆಗೆ ಒಳಪಡಿಸಬೇಕಾದ ಜರೂರತು ನೆಲೆಕಂಡಿದೆ. ಈ ಕುರಿತು ಸಂವಿಧಾನ ಶಿಲ್ಪಿ ಅಂಬೇಡ್ಕರರು ಹೊಂದಿದ್ದ ಅಭಿಪ್ರಾಯ ದೆಡೆಗೆ ಗಮನ ಹರಿಸೋಣ. ಭಾರತದಲ್ಲಿ ಮುಸ್ಲಿಮರ ಸಾಮಾಜಿಕ ಕೆಡುಕುಗಳು ಮತ್ತು ಮುಸ್ಲಿಂ ದಾಳಿಕೋರರ ಬಗ್ಗೆ ಅತ್ಯಂತ ವಸ್ತುನಿಷ್ಠವಾಗಿ ವಿಶ್ಲೇಷಣೆ ಮಾಡಿದವರ ಪೈಕಿ ಅಂಬೇಡ್ಕರ್ ಮೊದಲಿಗರು. ಅಂದು ಸಂವಿ ಧಾನ ರಚನಾ ಸಭೆಯಲ್ಲಿ (೧೯೪೮ ನವೆಂಬರ್ ೨೩) ಮಹಮ್ಮದ್ ಇಸ್ಮಾಯಿಲ್, ನಜೀರುದ್ದೀನ್ ಅಹ್ಮದ್, ಪಾಕೀರ್ ಸಾಹೇಬರವರುಗಳು, ಸಂವಿ
ಧಾನದ ಭಾಗವಾಗಿರುವ ೪೪ನೇ ವಿಧಿಯನ್ನು (ಆಂದು ಸೂಚಿತ ೩೫ನೇ ವಿಽ) ಜಾರಿಗೆ ತರುವುದರಿಂದ ಮುಸ್ಲಿಮರ ವೈಯಕ್ತಿಕ ಹಕ್ಕುಗಳು ದಮನಗೊಳ್ಳು ತ್ತವೆ. ಹಾಗಾಗಿ ಈ ವಿಧಿಯನ್ನು ಕೈಬಿಡಬೇಕು ಎಂಬ ಕಠೋರ ಪ್ರತಿಪಾದನೆ ಮಾಡಿದ್ದರು.

ಆಗ ಅಂಬೇಡ್ಕರರು, ‘ಷರಿಯತ್‌ಗಾಗಿ ಈ ದೇಶದ ಏಕತೆಯ ಭಾಗವಾದ ಏಕರೂಪ ನಾಗರಿಕ ಸಂಹಿತೆಯನ್ನು ವಿರೂಪಗೊಳಿಸಲು ಸಾಧ್ಯವಿಲ್ಲ’ ಎಂದು
ಸಾರಿದರು. ಅಂದಿನ ಚರ್ಚೆಯಲ್ಲಿ ಅಂಬೇಡ್ಕರರು ಮಾತಾಡಿದ ಪರಿ ಹೀಗಿತ್ತು: ಮಾನ್ಯರೇ, ಈ ಅನುಚ್ಛೇದಕ್ಕಾಗಿ ಮಂಡಿಸಲಾದ ತಿದ್ದುಪಡಿಗಳನ್ನು ಒಪ್ಪಿಕೊಳ್ಳಲಾರೆ. ನಾನು ಹಿಂಜರಿಯುತ್ತೇನೆ. ಈ ವಿಷಯವನ್ನು ವ್ಯವಹರಿಸುತ್ತ, ಈ ದೇಶಕ್ಕೆ ಒಂದು ನಾಗರಿಕ ಸಂಹಿತೆ ಇರಬೇಕು ಅಥವಾ ಇರಬಾರದು
ಎನ್ನುವ ಪ್ರಶ್ನೆಯ ಒಳಿತುಗಳನ್ನು ಚರ್ಚಿಸಲು ಕೇಳಿಕೊಳ್ಳುವುದಿಲ್ಲ. ನಾನು ತಿಳಿದುಕೊಂಡಂತೆ ಈ ವಿಷಯವನ್ನು ಸ್ನೇಹಿತರಾದ ಮುನ್ಷಿ ಅಲ್ಲದೆ ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್ ಯುಕ್ತ ರೀತಿಯಲ್ಲಿ ಸಾಂದರ್ಭಿಕವಾಗಿ ಚರ್ಚಿಸಿದ್ದಾರೆ.

ಮೂಲಭೂತ ಹಕ್ಕಿಗೆ ತಿದ್ದುಪಡಿಯನ್ನು ಮಂಡಿಸಲಾದಾಗ, ಈ ವಿಷಯದ ಮೇಲೆ ಪೂರ್ಣಪ್ರಮಾಣದ ಟಿಪ್ಪಣಿ ಮಾಡಲು ನನ್ನಿಂದ ಸಾಧ್ಯ ಮತ್ತು ಈ ಕಾರಣಕ್ಕಾಗಿ ಈ ವಿಷಯವಾಗಿ ನಾನು ಹೆಚ್ಚು ಚರ್ಚಿಸುವುದಿಲ್ಲ. ಸ್ನೇಹಿತರಾದ ಹುಸೇನ್ ಇಮಾಮರು, ತಿದ್ದುಪಡಿಗಳಿಗೆ ಬೆಂಬಲವನ್ನು ಸೂಚಿಸುತ್ತ, ಇಂಥ ವಿಶಾಲವಾದ ದೇಶಕ್ಕೆ ಸಮಾನವಾದ ಕಾನೂನು ಸಂಹಿತೆಯನ್ನು ಹೊಂದಲು ಸಾಧ್ಯವೇ ಮತ್ತು ಅದು ಆಶಿಸುವಂಥಹುದೇ ಎಂದು ಪ್ರಶ್ನಿಸಿದ್ದಾರೆ. ಬಹಳ ಚೆನ್ನಾಗಿದೆ, ಮಾನವ ಸಂಬಂಧದ ಎಲ್ಲ ಸ್ತರಗಳನ್ನು ಒಳಗೊಳ್ಳುವ ಏಕರೂಪದ ಸಂಹಿತೆಯನ್ನು ಹೊಂದಿದ್ದೇವೆ ಎನ್ನುವ ಸರಳ ಸತ್ಯ ಗೊತ್ತಿದ್ದರೂ, ಅವರ ಮಾತು ಕೇಳಿ ನಾನು ಆಶ್ಚರ್ಯಚಕಿತನಾಗಿದ್ದೇನೆ ಎಂಬುದನ್ನು ಒಪ್ಪಿಕೊಳ್ಳಲೇಬೇಕು.

ದಂಡಸಂಹಿತೆ ಮತ್ತು ಅಪರಾಧ ಸಂಹಿತೆಯಲ್ಲಿರು ವಂಥ, ಏಕರೂಪದ ಮತ್ತು ಸಮಗ್ರ ಅಪರಾಧ ಸಂಹಿತೆ ದೇಶದಲ್ಲಿ ಚಾಲ್ತಿಯಲ್ಲಿದೆ. ನಮ್ಮಲ್ಲಿ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ಮತ್ತು ಈಗಾಗಲೇ ಚಲಾವಣೆಯಲ್ಲಿರುವ ವರ್ಗಾವಣೆ ಕಾಯ್ದೆ ಕೂಡ ಇದೆ. ನಂತರ, ನಮ್ಮಲ್ಲಿ ಸಂಧಾನಸೂತ್ರ ಅಧಿನಿಯಮ ಇದೆ. ತಾತ್ಪರ್ಯದಲ್ಲಿ ಏಕರೂಪವಾಗಿರುವ ಮತ್ತು ಸಮಗ್ರ ದೇಶಕ್ಕೆ ಅಳವಡಿಸಲು ಯೋಗ್ಯವಾದ ನಾಗರಿಕ ಕಾನೂನು ಪ್ರವೇಶಿಸಬಾರದ
ಯಾವುದಾದರೂ ಕ್ಷೇತ್ರವಿದ್ದರೆ, ಅದು ಮದುವೆ ಮತ್ತು ಉತ್ತರಾಧಿಕಾರ.

ಈ ಪುಟ್ಟಮೂಲೆಯನ್ನು ನಾವು ಇಲ್ಲಿಯವರೆಗೂ ಗೆಲ್ಲಲು ಅಸಾಧ್ಯವಾಗಿದೆ ಮತ್ತು ಅಂಥ ಬದಲಾವಣೆಯನ್ನು ತರಲು ೩೫ನೇ ಅನುಚ್ಛೇದವು
ಸಂವಿಧಾನದ ಭಾಗವಾಗಬೇಕೆಂದು ಬಯಸುವವರ ಉದ್ದೇಶವೂ ಇದೇ ಆಗಿದೆ. ಹಾಗಾಗಿ ಅಂಥದೊಂದು ಕಾರ್ಯವನ್ನು ಕೈಗೆತ್ತಿಕೊಳ್ಳಲು ಪ್ರಯತ್ನಿಸ ಬೇಕೇ? ಬೇಡವೇ? ಎನ್ನುವ ವಾಗ್ವಾದವು ವಾಸ್ತವದಲ್ಲಿ, ನಾಗರಿಕ ಸಂಹಿತೆಯು ಆವರಿಸಿರುವ ದೇಶದ ಎಲ್ಲ ಕ್ಷೇತ್ರಗಳನ್ನು ನಾವು ಪರಿಗಣಿಸಿದ್ದೇವೆ ಎಂಬ ಸರಳ ಕಾರಣಕ್ಕಾಗಿ ಎಲ್ಲೋ ತಪ್ಪಾಗಿ ಭಾವಿಸಲ್ಪಟ್ಟಿದೆ ಎಂದು ನನಗನಿಸುತ್ತದೆ.

ಹಾಗಾಗಿ ಇದನ್ನು ನಾವು ಸಾಧಿಸಲು ಸಾಧ್ಯವೇ ಎಂದು ಈಗ ಕೇಳುವುದು ತುಂಬಾ ವಿಳಂಬವೆನಿಸುತ್ತದೆ. ನಾನು ಹೇಳುವುದು, ನಾವದನ್ನು ಸಾಧಿಸಿದ್ದೇವೆ. ತಿದ್ದುಪಡಿಯ ವಿಷಯಕ್ಕೆ ಬರುವುದಾದರೆ, ಕೇವಲ ಎರಡು ಗಮನಾರ್ಹ ಅಂಶವನ್ನು ಹೇಳಬಯಸುತ್ತೇನೆ. ನಾನು ಗಮನಿಸಿದ ಮೊದಲ ವಿಷಯವು ಈ ತಿದ್ದುಪಡಿಗಳನ್ನು ಮಂಡಿಸಿದವರ ಪ್ರಕಾರ, ಮುಸ್ಲಿಂ ವೈಯಕ್ತಿಕ ಕಾನೂನು ಈ ದೇಶಕ್ಕೆ ಸಂಬಂಧಿಸಿದಂತೆ ಅಪಭ್ರಂಶಗೊಳಿಸಲಾಗದ್ದು, ಸಂಪೂರ್ಣ ಭಾರತದಲ್ಲಿ ಏಕರೂಪವಾಗಿರುವಂಥದ್ದು ಎಂದು. ಈ ಅಭಿಪ್ರಾಯವನ್ನು ಸವಾಲಿಗೆಳೆಯ ಬಯಸುತ್ತೇನೆ.

ಈ ಅನುಚ್ಛೇದದ ಕುರಿತಾಗಿ ಮಾತನಾಡಿದ ನನ್ನೆಲ್ಲ ಸ್ನೇಹಿತರು ಬಹುಶಃ ೧೯೩೫ರವರೆಗೆ, ವಾಯವ್ಯ ಗಡಿಯ ಪ್ರಾಂತ್ಯಗಳು ಷರಿಯತ್ ಕಾನೂನಿಗೆ ಒಳಪಟ್ಟಿರಲಿಲ್ಲ ಎಂಬುದನ್ನು ಮರೆತಿರಬೇಕು. ಅವು ಉತ್ತರಾಧಿಕಾರ ಮತ್ತು ಇತರ ವಿಷಯಗಳಲ್ಲಿ ಎಷ್ಟರ ಮಟ್ಟಿಗೆ ಹಿಂದೂ ಕಾನೂನನ್ನು ಅನು ಸರಿಸುತ್ತಿದ್ದವೆಂದರೆ, ೧೯೩೯ರಲ್ಲಿ ಕೇಂದ್ರ ಶಾಸಕಾಂಗವು ಈ ವಿಷಯದಲ್ಲಿ ಮಧ್ಯೆ ಪ್ರವೇಶಿಸಿ, ವಾಯವ್ಯ ಗಡಿ ಪ್ರಾಂತ್ಯದ ಮುಸ್ಲಿಮರಿಗೆ ಅನ್ವಯವಾಗಿದ್ದ ಹಿಂದೂ ಕಾನೂನನ್ನು ಹಿಂಪಡೆದು, ಷರಿಯತ್ ಕಾನೂನನ್ನು ಅಳವಡಿಸಿತು.

ವಾಯವ್ಯ ಗಡಿ ಪ್ರಾಂತ್ಯವಲ್ಲದೆ, ೧೯೩೭ರ ತನಕ ಭಾರತದ ಉಳಿದ ಭಾಗಗಳು ಎಂದರೆ ಏಕೀಕೃತ ಪ್ರಾಂತ್ಯಗಳು, ಕೇಂದ್ರೀಯ ಪ್ರಾಂತ್ಯಗಳು, ಬಾಂಬೆ
ಇತ್ಯಾದಿ ಕಡೆಗಳಲ್ಲಿ ಮುಸ್ಲಿಮರು ಉತ್ತರಾಧಿಕಾರದ ವಿಷಯದಲ್ಲಿ ಹಿಂದೂ ಕಾನೂನನ್ನೇ ಅನುಸರಿಸುತ್ತಾರೆ ಎಂಬುದನ್ನು ಸ್ನೇಹಿತರು ಮರೆತಿದ್ದಾರೆ. ಷರಿಯತ್ ಕಾನೂನನ್ನು ಅನುಸರಿಸುತ್ತಿದ್ದ ಇತರೆ ಮುಸ್ಲಿಮರಿಗೆ ಸರಿಸಮಾನವಾದ ಸಮತಲಕ್ಕೆ ಇವರನ್ನು ತರಲು ೧೯೩೭ರಲ್ಲಿ ಶಾಸಕಾಂಗವು ಮಧ್ಯೆ ಪ್ರವೇಶಿಸಿ ದೇಶದ ಉಳಿದ ಭಾಗ ಗಳಲ್ಲಿಯೂ ಷರಿಯತ್ ಕಾನೂನನ್ನು ಅಳವಡಿಸಿತು.

ಕರುಣಾಕರ ಮೆನನ್ ಅವರಿಂದ ಸಿಕ್ಕ ಮಾಹಿತಿಯನುಸಾರ, ಉತ್ತರ ಮಲಬಾರಿನಲ್ಲಿ ಹಿಂದೂ, ಮುಸ್ಲಿಮರಾದಿಯಾಗಿ ಎಲ್ಲರಿಗೂ ಮರುಮಕ್ಕತಾಯಂ ಕಾನೂನು ಅನ್ವಯಿಸುತ್ತದೆ. ಮರುಮಕ್ಕತಾಯಂ ಕಾನೂನು ಪಿತೃಪ್ರಧಾನ ಕಾನೂನಿನ ರೂಪವಾಗಿರದೆ, ಮಾತೃಪ್ರಧಾನ ಕಾನೂನಿನ ರೂಪ ಎಂಬುದನ್ನು ಇಲ್ಲಿ ನೆನಪಿಡಬೇಕು. ಉತ್ತರ ಮಲಬಾರಿನ ಮುಸಲ್ಮಾನರು ಇಂದಿನವರೆಗೂ ಮರುಮಕ್ಕ ತಾಯಂ ಕಾನೂನನ್ನು ಪಾಲಿಸುತ್ತಿದ್ದಾರೆ. ಈ ಕಾರಣದಿಂದ, ಸನಾತನ ಕಾಲದಿಂದಲೂ ಪರಿ ಪಾಲಿಸಿಕೊಂಡು ಬಂದಿರುವ ಮುಸ್ಲಿಂ ಕಾನೂನು, ಬದಲಾಯಿಸಲಾಗದ ಕಾನೂನು ಆಗಿರುವುದೆಂದು ವರ್ಗೀಕೃತ ಹೇಳಿಕೆಯನ್ನು ನೀಡುವುದು ನಿರುಪಯುಕ್ತ ವಾಗಿದೆ.

ಕೆಲ ಭಾಗಗಳಲ್ಲಿ ಅದರಂಥ ಕಾನೂನು ಅನ್ವಯವಾಗುವಂಥದಲ್ಲ. ಆದರೂ ಅದನ್ನು ಹತ್ತು ವರ್ಷ ಗಳ ಹಿಂದೆ ಅನ್ವಯ ಮಾಡಲಾಗಿದೆ.
ಯಾವುದೇ ಧರ್ಮದ ಹಂಗಿಲ್ಲದೆ ಎಲ್ಲ ನಾಗರಿಕರಿಗೆ ಏಕರೂಪದ ನಾಗರಿಕ ಸಂಹಿತೆಯನ್ನು ಅಳವಡಿಸುವ ಉದ್ದೇಶಕ್ಕಾಗಿ ಹಿಂದೂ ಕಾನೂನಿನ ಕೆಲ ಭಾಗಗಳನ್ನು, ಅವು ಹಿಂದೂ ಕಾನೂನಿನಲ್ಲಿದ್ದವು ಎಂಬುದಕ್ಕಿಂತ ಅವು ಬಹು ಸೂಕ್ತವೆಂದು ೩೫ನೇ ಅನುಚ್ಛೇದವು ಬಿಂಬಿಸುವ ಹೊಸ ನಾಗರಿಕ ಸಂಹಿತೆಗಳಲ್ಲಿ ಅಳವಡಿಸಲಾಗಿದೆ. ನಾಗರಿಕ ಸಂಹಿತೆಯನ್ನು ರೂಪಿಸಿದವರು ಮುಸ್ಲಿಂ ಸಮುದಾಯದ ಭಾವನೆಗಳಿಗೆ ಬಲವಾದ ಧಕ್ಕೆ ಯನ್ನುಂಟು ಮಾಡಿದ್ದಾರೆ ಎಂದು ಹೇಳುವ ಸನ್ನಿವೇಶವನ್ನು ಸೃಷ್ಟಿಮಾಡಿಕೊಡಲಾರದೆಂದು ನಾನು ಗಾಢವಾಗಿ ನಂಬುತ್ತೇನೆ. ಅವುಗಳಿಗೆ ಭರವಸೆಯನ್ನು ಕೊಡುವುದು ನನ್ನ ಎರಡನೆಯ ಅಭಿಪ್ರಾಯವಾಗಿದೆ.

ಈ ವಿಷಯಗಳಲ್ಲಿ ಅವರ ಭಾವನೆಗಳನ್ನು ಸ್ವಲ್ಪ ಅರ್ಥೈಸಿಕೊಳ್ಳಬಲ್ಲೆ. ಈ ೩೫ನೇ ಅನುಚ್ಛೇದವನ್ನು ಸ್ವಲ್ಪ ಹೆಚ್ಚಾಗಿಯೇ ವಿಶ್ಲೇಷಿಸಿದಂತೆನಿಸುತ್ತದೆ. ಆದರೆ ಆ ಅನುಚ್ಛೇದವು ದೇಶದ ನಾಗರಿಕರಿಗೆ ನಾಗರಿಕ ಸಂಹಿತೆ ಯನ್ನು ಭದ್ರಪಡಿಸಲು ಸರಕಾರವು ಶ್ರಮಿಸಬೇಕು ಎಂದು ಮಾತ್ರ ಹೇಳುತ್ತದೆ. ಅದು ಸಂಹಿತೆಯ ರಚನೆಯ ನಂತರ ಸರಕಾರವು ನಾಗರಿಕರ ಮೇಲೆ, ನಾಗರಿಕರೆನ್ನುವ ಕಾರಣಕ್ಕಾಗಿ, ಬಲವಂತದಿಂದ ಹೇರಬೇಕೆಂದು ಮಾತ್ರ ಹೇಳುವುದಿಲ್ಲ. ಪ್ರಾಥಮಿಕ ಹಂತದಲ್ಲಿ ಸಂಹಿತೆಯ ಅಳವಡಿಕೆಯು ಸ್ವಯಂಪ್ರೇರಿತವಾಗಲು ಸಂಹಿತೆಯನ್ನು ಅನುಸರಿಸಲು ಸಿದ್ಧರಿದ್ದೇವೆ; ಘೋಷಣೆ ಮಾಡುವವರಿಗೆ ಮಾತ್ರ ಈ ಸಂಹಿತೆ ಅನ್ವಯಿಸಬೇಕು. ಮುಂಬರುವ ಲೋಕಸಭೆಯು ಮುನ್ನುಡಿ ಬರೆಯುವುದು ಸರ್ವಥಾ ಸಾಧ್ಯವಿದೆ.

ಅಂಥ ಕೆಲ ವಿಧಾನಗಳ ಮೂಲಕ ಲೋಕಸಭೆಯು ಹಿನ್ನೆಲೆಯನ್ನು ಅರಿತುಕೊಳ್ಳಬಹುದು. ಇದು ಹೊಸ ವಿಧಾನವೇನೂ ಅಲ್ಲ. ವಾಯವ್ಯ ಗಡಿ ಆಗದ ಪ್ರಾಂತ್ಯಗಳನ್ನು ಹೊರತುಪಡಿಸಿ ಇತರೆ ಪ್ರಾಂತ್ಯಗಳಲ್ಲಿ ೧೯೩೭ರ ಸುಮಾರಿಗೆ ಷರಿಯತ್ ಅಽನಿಯಮದಲ್ಲಿ ಇದನ್ನು ಅಳವಡಿಸಿಕೊಳ್ಳಲಾಯಿತು. ಈ ಅನುಚ್ಛೇದವು, ಇಲ್ಲೊಂದು ಮುಸಲ್ಮಾನರು ಅನುಸರಿಸುವ ಷರಿಯತ್ ಕಾನೂನಿದೆ, ಅದಕ್ಕೆ ಬದ್ಧನಾಗಿರುವ ಇಂಗಿತವುಳ್ಳ ಓರ್ವ ಮುಸಲ್ಮಾನ, ರಾಜ್ಯದ ಓರ್ವ ಅಧಿಕಾರಿಯ ಬಳಿ ಹೋಗಿ ತಾನು ಅದಕ್ಕೆ ಬದ್ಧನಾಗಿರುವೆನೆಂದು ಘೋಷಿಸಬೇಕು ಮತ್ತು ಹಾಗೆ ಘೋಷಣೆ ಮಾಡಿದ ನಂತರ ಆತ ಮತ್ತು ಆತನ ವಾರಸುದಾರರು ಷರಿಯತ್ ಕಾನೂನಿಗೆ ಒಳಪಡುತ್ತಾರೆ ಎಂದು ಹೇಳಿದೆ. ಈ ರೀತಿಯಾದ ಅವಕಾಶವನ್ನು ಪರಿಚಯಿಸಲು ಲೋಕಸಭೆಗೆ ನಿಜವಾಗಿಯೂ
ಸಾಧ್ಯವಿದೆ.

ಹೀಗಾದಲ್ಲಿ ನನ್ನ ಸ್ನೇಹಿತರು ತೋಡಿಕೊಂಡ ಆತಂಕಗಳು ಸಂಪೂರ್ಣವಾಗಿ ಮಾಯವಾಗಲಿವೆ. ಹೀಗಾಗಿ ನಾನು ಈ ತಿದ್ದುಪಡಿಗಳಲ್ಲಿ ಹುರುಳಿಲ್ಲವೆಂದು
ಮಂಡಿಸುತ್ತ ಅವುಗಳನ್ನು ವಿರೋಧಿಸುತ್ತೇನೆ.. ಅಂದು ಸೂಚಿತವಾಗಿದ್ದ ಎಲ್ಲ ತಿದ್ದುಪಡಿಗಳನ್ನು ಅಂತಿಮವಾಗಿ ತಿರಸ್ಕರಿಸಲಾಯಿತು. ಈ ಪ್ರಸ್ತಾವ
ವನ್ನು ಅಂಗೀಕರಿಸಲಾಯಿತು. ೩೫ನೇ ಅನುಚ್ಛೇದವನ್ನು ಸಂವಿಧಾನಕ್ಕೆ ಸೇರಿಸಲಾಯಿತು. ವಸ್ತುಸ್ಥಿತಿ ಮತ್ತು ಐತಿಹಾಸಿಕ ಚಿಂತನೆಗಳು ಏಕಮುಖ ವಾಗಿರುವುದರಿಂದ, ಏಕರೂಪ ನಾಗರಿಕ ಸಂಹಿತೆಯ ಶೀಘ್ರಜಾರಿಗೆ ಪ್ರಜ್ಞಾವಂತ ನಾಗರಿಕ ಸಮಾಜ ಒತ್ತಾಯಿಸುತ್ತಿದೆ.

ಆಧಾರ: ‘ಭಾರತ ಸಂವಿಧಾನ ರಚನಾ ಸಭೆಯ ಚರ್ಚೆಗಳು’. ಪುಟಸಂಖ್ಯೆ: ೭೩೦, ೭೩೩, ೭೩೯, ೭೪೦, ೭೪೧, ೭೪೨. ಸಂಪುಟ-೩.

(ಲೇಖಕರು ಸಂವಿಧಾನ ತಜ್ಞರು)

Leave a Reply

Your email address will not be published. Required fields are marked *