ಸಂಗತ
ಡಾ.ವಿಜಯ್ ದರಡಾ
ಕುಡಿದು ಕಾರು ಓಡಿಸಿ ಇಬ್ಬರ ಮೇಲೆ ಹತ್ತಿಸಿ ಸಾಯಿಸಿದ ಪುಂಡನಿಗೆ ಪ್ರಬಂಧ ಬರೆಯುವ ಷರತ್ತು ವಿಽಸಿ ಜಾಮೀನು ನೀಡುವುದು ಯಾವ ಸೀಮೆಯ ನ್ಯಾಯಾಂಗ ವ್ಯವಸ್ಥೆ? ಪುಣೆಯ ಪೋರ್ಷೆ ಕಾರು ಅಪಘಾತದ ಕೇಸಿನ ಬಗ್ಗೆ ನೀವು ಕೇಳಿರುತ್ತೀರಿ. ಅಂತಹ ಶ್ರೀಮಂತರ ಅಟಾ ಟೋಪಕ್ಕೆ ಬ್ರೇಕ್ ಹಾಕಬೇಡವೇ?
ನನಗೆ ತುಂಬಾ ಬೇಸರವಾಗಿದೆ. ಮನಸ್ಸಿಗೆ ಬಹಳ ನೋವಾಗಿದೆ. ನನ್ನ ಹೃದಯ ಬಿಕ್ಕಿ ಬಿಕ್ಕಿ ಅಳುತ್ತಿದೆ. ನಿಜಕ್ಕೂ ನನಗೆ ಆಘಾತವಾಗಿದೆ. ಮನಸ್ಸು ಸಿಟ್ಟಿನಿಂದ ಕುದಿಯುತ್ತಿದೆ. ಇಷ್ಟೆಲ್ಲಾ ಭಾವನೆಗಳು ಏಕಕಾಲಕ್ಕೆ ಒಬ್ಬನೊಳಗೆ ತಾಂಡವವಾಡುವುದು ಬಹಳ ಅಪರೂಪ! ಆದರೆ ಇತ್ತೀಚೆಗೆ ಪುಣೆಯಲ್ಲಿ ನಡೆದ ಆಘಾತಕಾರಿ ಘಟನೆ ನನ್ನನ್ನು ತುಂಬಾ ವಿಚಲಿತಗೊಳಿಸಿದೆ. ನನ್ನೊಬ್ಬನನ್ನು ಅಲ್ಲ, ಬಹಳ ಜನರ ಮನಶ್ಶಾಂತಿಯನ್ನು ಈ ಘಟನೆ ಕಿತ್ತು ಕೊಂಡಿರುತ್ತದೆ.
ಮಧ್ಯಪ್ರದೇಶ ಮೂಲದ ಇಬ್ಬರು ಯುವ ಎಂಜಿನಿಯರ್ ಗಳು ಆ ದುರಂತದಲ್ಲಿ ಸತ್ತುಹೋದರು. ಅವರ ಹೆಸರು ಅನೀಶ್ ಅವಾಧಿಯಾ ಮತ್ತು ಅಶ್ವಿನಿ ಕೋಷ್ಟಾ. ಇಬ್ಬರೂ ಭವಿಷ್ಯದ ಬಗ್ಗೆ ಹಲವಾರು ಕನಸುಗಳನ್ನು ಹೊತ್ತು ಪುಣೆಗೆ ಬಂದವರು. ಶ್ರೀಮಂತ ಅಪ್ಪನ ಕುಡುಕ ಮಗನೊಬ್ಬ ಅವರ ಮೇಲೆ ಕಾರು ಹತ್ತಿಸಿ ಸಾಯಿಸಿಬಿಟ್ಟ. ಈ ಘಟನೆ ನನ್ನ ಎದೆಯಲ್ಲಿ ತೀವ್ರ ತಳಮಳ ಹುಟ್ಟುಹಾಕಿದೆ. ನತದೃಷ್ಟ ಆ ಇಬ್ಬರು ಯುವ ಎಂಜಿನಿಯರ್‌ಗಳಿಗಾಗಿ ನಾನು
ರೋದಿಸುತ್ತಿದ್ದೇನೆ. ಮೇ ೧೯ರ ಬೆಳಗಿನ ಜಾವ ತನ್ನ ಅಪ್ಪನ ಅತ್ಯಂತ ದುಬಾರಿಯಾದ ಐಷಾರಾಮಿ ಪೋರ್ಷೆ ಕಾರು ಓಡಿಸಿಕೊಂಡು ಬಂದ ಶೋಕಿಲಾಲ ಹುಡುಗ ಕುಡಿದ ಮತ್ತಿನಲ್ಲಿದ್ದ. ಅವನ ಕಾರು ಇವರ ಬೈಕಿನ ಮೇಲೆ ಹರಿದಿತ್ತು. ನನಗೆ ಇನ್ನೂ ಆಶ್ಚರ್ಯವಾಗಿದ್ದೇನೆಂದರೆ, ಅವನನ್ನು ಬಂಧಿಸಿದ ಬಳಿಕ ಕೆಲವೇ ಸಮಯದಲ್ಲಿ ಕೋರ್ಟ್ ಅವನಿಗೆ ಜಾಮೀನು ಕೊಟ್ಟು ಬಿಡುಗಡೆ ಮಾಡಿಬಿಟ್ಟಿತು!
ಜಾಮೀನಿಗೆ ವಿಧಿಸಿದ ಷರತ್ತಾದರೂ ಏನು? ಅವನು ಬಾಲಾಪರಾಧಿ ಆಗಿರುವುದರಿಂದ ೧೫ ದಿನಗಳ ಕಾಲ ಟ್ರಾಫಿಕ್ ಪೊಲೀಸರ ಜೊತೆಗೆ ರಸ್ತೆಗಳಲ್ಲಿ ಸುತ್ತುತ್ತಾ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಸಹಕಾರ ನೀಡಬೇಕು. ಅವನಿಗೆ ಟ್ರಾಫಿಕ್ ನಿಯಮಗಳ ಬಗ್ಗೆ ತಿಳಿವಳಿಕೆ ಬಂದಮೇಲೆ ಸಂಚಾರ
ಪೊಲೀಸರು ಅವನ ಬಗ್ಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ (ಆರ್‌ಟಿಒ) ಸಮಗ್ರ ವರದಿಯೊಂದನ್ನು ಸಲ್ಲಿಸಬೇಕು. ಅದರ ಜೊತೆಗೆ, ಜಾಮೀನು ಪಡೆದ ಹುಡುಗ ರಸ್ತೆ ಅಪಘಾತಗಳು ಮತ್ತು ಅದಕ್ಕೆ ಪರಿಹಾರ ಎಂಬ ವಿಷಯದ ಬಗ್ಗೆ ೩೦೦ ಪದಗಳ ಪ್ರಬಂಧವೊಂದನ್ನು ಬರೆದು ಸಲ್ಲಿಸಬೇಕು.
ನಂತರ ವ್ಯಸನ ಮುಕ್ತಿ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಮದ್ಯಸೇವನೆಯನ್ನು ತ್ಯಜಿಸಬೇಕು. ಈ ಎಲ್ಲ ಷರತ್ತುಗಳನ್ನು ವಿಽಸಿದ ಬಳಿಕ ನ್ಯಾಯಾಲಯವು ಅವನಿಗೆ ಇನ್ನೂ ಒಂದು ಕಂಡೀಶನ್ ಹಾಕಿದೆ. ಅದೇನೆಂದರೆ, ಭವಿಷ್ಯದಲ್ಲಿ ಅವನು ಎಂದಾದರೂ ರಸ್ತೆ ಅಪಘಾತವನ್ನು ನೋಡಿದರೆ ತಕ್ಷಣ ಸ್ಥಳಕ್ಕೆ ಧಾವಿಸಿ ಗಾಯಾಳುಗಳಿಗೆ ಸಹಾಯ ಮಾಡಬೇಕು! ಈ ಷರತ್ತುಗಳೆಲ್ಲ ನನಗೆ ಜೋಕ್‌ಗಳಂತೆ ಕಾಣಿಸುತ್ತಿವೆ.
ಆದರೇನು ಮಾಡುವುದು, ನಮ್ಮ ದೇಶದ ಬಾಲಾಪರಾಧಿ ನ್ಯಾಯಿಕ ಕಾಯ್ದೆ ಇರುವುದೇ ಹಾಗೆ. ಇಬ್ಬರನ್ನು ಕೊಂದ ಹಂತಕನ ಹೆಸರನ್ನು ಕೂಡ ನಾನು ಬಹಿರಂಗವಾಗಿ ಹೇಳುವಂತಿಲ್ಲ. ಹೇಳಿದರೆ ಅದು ಬಾಲನ್ಯಾಯ ಕಾಯ್ದೆಯ ಉಲ್ಲಂಘನೆಯಾಗುತ್ತದೆ! ನನ್ನ ಪ್ರಕಾರ, ಒಬ್ಬ ಅಪ್ರಾಪ್ತ ವ್ಯಕ್ತಿ ತನಗೆ ತಿಳಿಯ ದೆಯೇ ಅಪರಾಧ ಎಸಗಿದರೆ ಅವನಿಗೆ ತನ್ನನ್ನು ತಾನು ಸುಧಾರಣೆ ಮಾಡಿಕೊಳ್ಳಲು ಅವಕಾಶ ನೀಡಬೇಕು. ಆದರೆ, ಕೊಳೆಯುವಷ್ಟು ಸಂಪತ್ತಿ ರುವ ವ್ಯಕ್ತಿಯ ಮಗನೊಬ್ಬ ಕುಡಿದ ಅಮಲಿನಲ್ಲಿ ಬೇಕಾಬಿಟ್ಟಿಯಾಗಿ ವರ್ತಿಸಿದರೆ ಅವನನ್ನು ಕೇವಲ ವಯಸ್ಸಿನ ಕಾರಣಕ್ಕೆ ಅಪ್ರಾಪ್ತ ಎಂದು ಏಕೆ ಪರಿಗಣಿಸ ಬೇಕು? ಇಷ್ಟಕ್ಕೂ ಅವನ ತಂದೆ ವಿಶಾಲ್ ಅಗರ್ವಾಲ್ ಸ್ವತಃ ತಾನೇ ತನ್ನ ಮಗನನ್ನು ಅಪ್ರಾಪ್ತ ಎಂದು ಪರಿಗಣಿಸುತ್ತಿಲ್ಲ. ಅವರೇ ಅವನಿಗೆ ಸ್ನೇಹಿತರ ಜೊತೆಗೆ ಹೋಗಿ ಪಾರ್ಟಿ ಮಾಡಲು ಮತ್ತು ಮದ್ಯ ಸೇವನೆ ಮಾಡಲು ಬಿಡುತ್ತಾರೆ. ಅವನ ಬಳಿ ಡ್ರೈವಿಂಗ್ ಲೈಸನ್ಸ್ ಇಲ್ಲದಿದ್ದರೂ ಇನ್ನೂ ನಂಬರ್ ಪ್ಲೇಟ್ ಕೂಡ ಬಂದಿಲ್ಲದ ಹೊಚ್ಚಹೊಸ ದುಬಾರಿ ಕಾರನ್ನು ಓಡಿಸಲು ಬಿಡುತ್ತಾರೆ.
ಅದಕ್ಕಿಂತ ಹೆಚ್ಚಾಗಿ, ತಡರಾತ್ರಿ ೨.೩೦ಕ್ಕೂ ಅವರು ಮಗನಿಗೆ ಮನೆಯಿಂದ ಹೊರಗೆ ಇರಲು ಅನುಮತಿ ನೀಡುತ್ತಾರೆ ಮತ್ತು ಅವನು ಇಬ್ಬರಿಗೆ ಗುದ್ದಿ ಸಾಯಿಸಿದ ಮೇಲೆ ಅವನನ್ನು ರಕ್ಷಣೆ ಮಾಡಲು ಪ್ರಯತ್ನಿಸುತ್ತಾರೆ. ಆ ಪುಂಡನ ತಾತ ಸುರೇಂದ್ರ ಅಗರ್ವಾಲ್ ತಮ್ಮ ಮನೆಯ ಕಾರು ಚಾಲಕನಿಗೆ ಧಮಕಿ ಹಾಕಿ ಹುಡುಗನ ಬದಲು ತಾನೇ ಆ ದಿನ ಕಾರು ಓಡಿಸುತ್ತಿದ್ದೆ ಎಂದು ಪೊಲೀಸರ ಮುಂದೆ ಒಪ್ಪಿಕೊಳ್ಳುವಂತೆ ಒತ್ತಡ ಹೇರುತ್ತಾರೆ. ಅದಕ್ಕೆ ಅವನು ಒಪ್ಪದಿದ್ದಾಗ ಎರಡು ದಿನ ಕೂಡಿಹಾಕುತ್ತಾರೆ. ನಂತರ ಜನಪ್ರತಿನಿಧಿಗಳನ್ನು ಬಳಸಿ ಪೊಲೀಸರ ಮೇಲೂ ಒತ್ತಡ ತರುತ್ತಾರೆ.
ನಮ್ಮ ರಾಜಕೀಯ ವ್ಯವಸ್ಥೆಯಾದರೂ ಹೇಗಿದೆ ನೋಡಿ. ಒಬ್ಬ ಜನಪ್ರತಿನಿಧಿ ಆ ಉಡಾಳ ಹುಡುಗನ ಅಪರಾಧವನ್ನು ಕೂಡ ಸಮರ್ಥಿಸಿಕೊಳ್ಳಲು ಹೋಗಿ ಉಗಿಸಿಕೊಂಡರು. ಒಂದೇ ಒಂದು ಸಮಾಧಾನಕರ ಸಂಗತಿಯೆಂದರೆ, ಇಡೀ ಘಟನೆಯನ್ನು ಮುಚ್ಚಿಹಾಕಲು ನಡೆಸಿದ ಎಲ್ಲಾ ಕಸರತ್ತೂ ವ್ಯರ್ಥವಾಗಿದೆ. ಅದಕ್ಕೆ ಕಾರಣ- ಜಾಗೃತಗೊಂಡಿರುವ ನಮ್ಮ ಜನಸಾಮಾನ್ಯರು ಮತ್ತು ಘಟನೆಯ ಬಗ್ಗೆ ಸತ್ಯಾಂಶಗಳನ್ನು ಹುಡುಕಿ ಹುಡುಕಿ ವರದಿ
ಮಾಡಿದ ನಮ್ಮ ಕ್ರಿಯಾಶೀಲ ಮಾಧ್ಯಮಗಳು. ಇಲ್ಲದಿದ್ದರೆ ಶ್ರೀಮಂತ ಉದ್ಯಮಿ ವಿಶಾಲ್ ಅಗರ್ವಾಲ್ ತಮ್ಮ ಕ್ರಿಮಿನಲ್ ಮಗನನ್ನು ಬಚಾವು ಮಾಡಿಕೊಂಡಿರುತ್ತಿದ್ದರು!
ನಿಜವಾದ ಪ್ರಶ್ನೆಯಿರುವುದು ಏನೆಂದರೆ, ಒಬ್ಬ ತಂದೆಯೇ ತನ್ನ ಮಗನನ್ನು ಅಪ್ರಾಪ್ತ ಎಂದು ಭಾವಿಸದಿದ್ದರೆ ಮತ್ತು ಮನೆಯ ಹಿರಿಯ ವ್ಯಕ್ತಿಯಾದ ತಾತನೇ ತನ್ನ ಮೊಮ್ಮಗನನ್ನು ಬಾಲಕ ಎಂದು ಪರಿಗಣಿಸದೆ ಇದ್ದರೆ ಏಕೆ ನಮ್ಮ ನ್ಯಾಯಾಂಗ ವ್ಯವಸ್ಥೆಯು ಅವನನ್ನು ಅಪ್ರಾಪ್ತ ಎಂದು ಪರಿಗಣಿಸ ಬೇಕು? ಏಕೆ ಅವನಿಗೆ ಕಾನೂನಿನಲ್ಲಿ ವಿಶೇಷ ಸೌಕರ್ಯಗಳನ್ನು ನೀಡಬೇಕು? ಮೇಲಾಗಿ, ವಿಶಾಲ್ ಅಗರ್ವಾಲ್ ಅವರ ಮಗ ಮಧ್ಯರಾತ್ರಿ ಯವರೆಗೂ ಬಾರ್‌ನಲ್ಲಿ ಬೇರೆ ಬೇರೆ ವಿಧದ ಮದ್ಯಗಳನ್ನು ಸ್ನೇಹಿತರ ಜೊತೆಗೂಡಿ ಕುಡಿದಿದ್ದ. ಆಗಲೇ ಬೆಳಗಿನ ಜಾವ ಸಮೀಪಿಸಿತ್ತು. ಆದರೂ ನಂತರ ಇನ್ನೊಂದು ಪಬ್‌ಗೆ ಹೋಗಿ ಅಲ್ಲೂ ಇನ್ನಷ್ಟು ಕುಡಿದಿದ್ದ. ಒಬ್ಬ ಅಪ್ರಾಪ್ತ ಹುಡುಗ ಇದನ್ನೆಲ್ಲ ಮಾಡಲು ಸಾಧ್ಯವೇ? ಸಣ್ಣ ಹುಡುಗರು ನಡೆದುಕೊಳ್ಳುವ ರೀತಿಯೆ ಇದು? ಖಂಡಿತ ಅಲ್ಲ.
ಇನ್ನೊಂದು ಪ್ರಶ್ನೆ ಏನೆಂದರೆ, ಅವನಿಗೆ ಒಂದು ಬಾರ್ ಮತ್ತು ಇನ್ನೊಂದು ಪಬ್‌ಗೆ ಪ್ರವೇಶ ಸಿಕ್ಕಿದ್ದು ಹೇಗೆ? ಅಪ್ರಾಪ್ತರಿಗೆ ಬಾರ್ ಮತ್ತು ಪಬ್‌ನೊಳಗೆ ಹೋಗಲು ಅನುಮತಿ ಇಲ್ಲ. ಆದರೂ ಅವನನ್ನು ಬಾರ್ ಮತ್ತು ಪಬ್ ನವರು ಒಳಗೆ ಬಿಟ್ಟುಕೊಂಡಿದ್ದರು. ಆ ತಪ್ಪಿಗೆ ಹೋಟೆಲ್ ಕೋಜಿಯ ಮಾಲಿಕ ಪ್ರಹ್ಲಾದ್ ಭೂತದಾ, ಮ್ಯಾನೇಜರ್ ಸಚಿನ್ ಕಾಟ್ಕರ್, ಹೋಟೆಲ್ ಬ್ಲ್ಯಾಕ್‌ನ ಮಾಲಿಕ ಸಂದೀಪ್ ಸಾಂಗ್ಲೆ ಹಾಗೂ ಬಾರ್ ಮ್ಯಾನೇಜರ್ ಜಯೇಶ್ ಬೋಂಕರ್ ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅದರೊಂದಿಗೆ, ಈ ಘಟನೆಯು ಎಷ್ಟೇ ಕಠಿಣ ನಿಯಮಾವಳಿಯಿದ್ದರೂ ಬಾರ್ ಮತ್ತು ಪಬ್‌ಗಳು ವಯಸ್ಸಿನ ಭೇದವಿಲ್ಲದೆ ತಮ್ಮ ಆವರಣದಲ್ಲಿ ಕುಡುಕರಿಗೆ ಆತಿಥ್ಯ ನೀಡುತ್ತವೆ ಎಂಬುದನ್ನು ಇನ್ನೊಮ್ಮೆ ಸಾಬೀತುಪಡಿಸಿದೆ.
ಇಂದು ನಮ್ಮ ಮಹಾನಗರಗಳು ಹೇಗಿವೆ ಅಂದರೆ, ನಿಮ್ಮ ಕಿಸೆಯಲ್ಲಿ ಸಾಕಷ್ಟು ಹಣವಿದ್ದರೆ ಎಷ್ಟು ಗಂಟೆಗೆ ಬೇಕಾದರೂ ನೀವು ಕೇಳಿದಷ್ಟು ಆಲ್ಕೋ ಹಾಲ್ ಸಿಗುತ್ತದೆ. ಪುಣೆ ಅಥವಾ ಮಹಾರಾಷ್ಟ್ರದಲ್ಲಿ ಮಾತ್ರ ಹೀಗಿಲ್ಲ, ಇಡೀ ದೇಶದ ವ್ಯವಸ್ಥೆಯೇ ಹೀಗೆ ಕುಲಗೆಟ್ಟುಹೋಗಿದೆ. ವಿಶಾಲ್ ಅಗರ್ವಾಲ್ ಅವರ ಮಗ ಓಡಿಸುತ್ತಿದ್ದ ಅತ್ಯಂತ ದುಬಾರಿ ಪೋರ್ಷೆ ಕಾರು ಇನ್ನೂ ನೋಂದಣಿ ಕೂಡ ಆಗಿರಲಿಲ್ಲ. ಬ್ರ್ಯಾಂಡ್ ನ್ಯೂ ಕಾರನ್ನು ಆ ಹುಡುಗ
ಅನಾಹುತಕಾರಿ ವೇಗದಲ್ಲಿ ಓಡಿಸಿಕೊಂಡು ಹೋಗುತ್ತಿದ್ದ. ಸಾಮಾನ್ಯವಾಗಿ ಡೀಲರ್‌ಗಳು ಕಾರಿನ ನೋಂದಣಿ ಆದಮೇಲೆಯೇ ಗ್ರಾಹಕರಿಗೆ ಹಸ್ತಾಂತರ ಮಾಡುತ್ತಾರೆ. ಆದರೆ ಮುಂಬೈನ ಡೀಲರ್ ಆ ಕಾರಿನ ನೋಂದಣಿ ಪ್ರಕ್ರಿಯೆಯನ್ನು ಮುಗಿಸದೆಯೇ ಅಗರ್ವಾಲ್‌ಗೆ ನೀಡಿದ್ದ.
ಏಕೆಂದರೆ ಅಗರ್ವಾಲ್ ಅಷ್ಟೊಂದು ಪ್ರಭಾವಿ ವ್ಯಕ್ತಿ. ಎಲ್ಲರಿಗೂ ಅವರ ಸ್ನೇಹ ಬೇಕು. ಇವೆಲ್ಲದರ ಜೊತೆಗೆ, ಕೆಲ ಪೊಲೀಸರು ಕೂಡ ಹಂತಕನಿಗೆ ವಿಐಪಿ ಸೌಕರ್ಯಗಳನ್ನು ನೀಡಿದ್ದಾರೆ ಎಂಬ ಆರೋಪಗಳಿವೆ. ಎಲ್ಲಾ ಪೊಲೀಸರನ್ನೂ ಸಾಮಾನ್ಯೀಕರಿಸಿ ಹೇಳಿದರೆ ತಪ್ಪಾಗುತ್ತದೆ. ನನಗೆ ಪೊಲೀಸ್ ಕಮಿಷನರ್ ಅಮಿತೇಶ್ ಕುಮಾರ್ ಅವರ ದಕ್ಷತೆಯ ಬಗ್ಗೆ ಚೆನ್ನಾಗಿ ಗೊತ್ತಿದೆ. ಆರೋಪಿಯ ತಂದೆಯನ್ನು ಬಂಧಿಸಿದ ಬಳಿಕ ಪೊಲೀಸರು ಆರೋಪಿಯ ತಾತ ಸುರೇಂದ್ರ ಅಗರ್ವಾಲ್ ಅವರನ್ನೂ ಬಂಧಿಸಿದ್ದಾರೆ.
ನಂತರ ತನಿಖೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಆಯುಕ್ತರು ಸಸ್ಪೆಂಡ್ ಮಾಡಿದ್ದಾರೆ. ಮುಖ್ಯಮಂತ್ರಿ ಏಕನಾಥ್ ಶಿಂದೆ ಹಾಗೂ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಇಬ್ಬರೂ ಈ ವಿಷಯದಲ್ಲಿ ಕಠಿಣ ನಿಲುವನ್ನು ಪ್ರದರ್ಶಿಸಿದ್ದಾರೆ. ಆಶ್ಚರ್ಯವೆಂದರೆ, ಪುಣೆಯ ಈ ಘಟನೆ ಈಗ ವಿದೇಶದಲ್ಲೂ ಸುದ್ದಿಯಾಗಿದೆ. ನಾನು ಅಮೆರಿಕ ಮತ್ತು ಮೆಕ್ಸಿಕೋ ಪ್ರವಾಸದಲ್ಲಿದ್ದೇನೆ. ಇಲ್ಲೊಬ್ಬ ಕ್ಯೂಬಾದ ಪ್ರಜೆ ನನ್ನ ಬಳಿ, ಏಕೆ ನಿಮ್ಮ ದೇಶದಲ್ಲಿ ಇಂತಹ ಕ್ರಿಮಿನಲ್‌ಗಳನ್ನು ಶಿಕ್ಷಿಸದೆ ಬಿಡುತ್ತೀರಿ ಎಂದು ಕೇಳಿದ! ಮೆಕ್ಸಿಕೋದ ಇನ್ನೊಬ್ಬ ವ್ಯಕ್ತಿ, ಮಾನವೀಯತೆಯ ವಿಷಯದಲ್ಲಿ ನಿಮ್ಮ ಪ್ರಧಾನ ಮಂತ್ರಿಗಳು ನಂಬರ್ ಒನ್ ಸ್ಥಾನದಲ್ಲಿದ್ದಾರೆ. ನಮ್ಮ ಪ್ರಧಾನಿ ಎರಡನೇ ಸ್ಥಾನದಲ್ಲಿದ್ದಾರೆ.
ಆದರೆ ಅಪರಾಧಗಳ ವಿಷಯದಲ್ಲಿ ಇಂತಹ ಕೆಟ್ಟ ನಿಯಮಗಳನ್ನು ಏಕೆ ನಿಮ್ಮ ದೇಶದಲ್ಲಿ ಇನ್ನೂ ಬದಲಾವಣೆ ಮಾಡಿಲ್ಲ? ಎಂದು ಕೇಳಿದ. ಅವರ ಪ್ರಶ್ನೆಯಲ್ಲಿ ಹುರುಳಿದೆಯಲ್ಲವೇ? ಇತ್ತೀಚಿನ ವರ್ಷಗಳಲ್ಲಿ ಬಾಲಾಪರಾಧಿಗಳು ಎಸಗಿದ ಕೃತ್ಯಗಳನ್ನು ಗಮನಿಸಿದರೆ ಅವರಿಗೆ ಸಂಬಂಧಿಸಿದ ಕಾಯ್ದೆ ಗಳನ್ನು ಪರಿಷ್ಕರಣೆ ಮಾಡುವ ಅಗತ್ಯವಿದೆ ಎಂದು ಅನ್ನಿಸುತ್ತದೆ. ದೆಹಲಿಯಲ್ಲಿ ನಡೆದ ನಿರ್ಭಯಾ ಹತ್ಯೆ ಪ್ರಕರಣದಲ್ಲಿ ಬಾಲಾಪರಾಧಿಯೊಬ್ಬ ಪ್ರದರ್ಶಿಸಿದ್ದ ಕ್ರೌರ್ಯ ನಿಮಗೆ ನೆನಪಿದೆಯೇ? ದೆಹಲಿಯ ಶಾಲೆಯಲ್ಲಿ ನಡೆದ ಅಪ್ರಾಪ್ತನ ಕೊಲೆ ಪ್ರಕರಣ, ಚಂಡೀಗಢದಲ್ಲಿ ಅಪ್ರಾಪ್ರ ಬಾಲಕಿಯ ಮೇಲೆ ಅಪ್ರಾಪ್ತ ಹುಡುಗನೊಬ್ಬ ನಡೆಸಿದ ಸರಣಿ ಅತ್ಯಾಚಾರ ಇವೆಲ್ಲವೂ ನಮಗೆ ಏನು ಸಂದೇಶ ನೀಡುತ್ತವೆ? ನಾನಿಲ್ಲಿ ಹೇಳಿರುವುದು ಕೆಲವೇ ಘಟನೆಗಳನ್ನು. ಇವು ಉದಾಹರಣೆಗಳಷ್ಟೆ. ಇಂತಹ ಘಟನೆಗಳು ದೇಶಾದ್ಯಂತ ನಡೆಯುತ್ತಿವೆ.
ಇದು ಅನಾಹುತಕಾರಿ ಟ್ರೆಂಡ್. ಇದನ್ನು ಸರಿಪಡಿಸಲೇಬೇಕು. ಪ್ರತಿ ವರ್ಷ ನಮ್ಮ ದೇಶದಲ್ಲಿ ೩೦,೦೦೦ಕ್ಕೂ ಹೆಚ್ಚು ಬಾಲಾಪರಾಧಿಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗುತ್ತವೆ. ಅವುಗಳ ಪೈಕಿ ಶೇ.೯೦ರಷ್ಟು ಪ್ರಕರಣಗಳಲ್ಲಿ ಅಪರಾಧ ಸಾಬೀತು ಕೂಡ ಆಗುತ್ತದೆ. ಅಚ್ಚರಿಯ ಇನ್ನೊಂದು ಸಂಗತಿಯೆಂದರೆ, ಅಪರಾಧದ ಕೃತ್ಯಗಳನ್ನು ಎಸಗುವ ಅಪ್ರಾಪ್ತರೆಲ್ಲ ಪರಿತ್ಯಕ್ತರು ಅಥವಾ ಅನಾಥರೇನೂ ಆಗಿರುವುದಿಲ್ಲ. ಅವರಲ್ಲಿ ಹೆಚ್ಚಿನವರು ತಮ್ಮ ತಂದೆ ತಾಯಿಯ ಜೊತೆಗೆ ಮನೆಯಲ್ಲೇ ವಾಸ ಮಾಡುವವರಾಗಿರುತ್ತಾರೆ. ಅಂದರೆ ಪೋಷಕರು ತಮ್ಮ ಮಕ್ಕಳನ್ನು ಸರಿಯಾಗಿ ಬೆಳೆಸುತ್ತಿಲ್ಲ ಎಂದಾಯಿತು.
ಹೀಗಾಗಿ ಇಂದಿನ ಅಪ್ಪ ಅಮ್ಮಂದಿರಿಗೆ ಮಕ್ಕಳನ್ನು ಹೇಗೆ ಬೆಳೆಸಬೇಕು ಎಂಬ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ. ವಿಶಾಲ್ ಅಗರ್ವಾಲ್ ಅವರ ಮಗನಂತೆ ತಮ್ಮ ಮಕ್ಕಳು ದಾರಿ ತಪ್ಪಲು ಅಪ್ಪ ಅಮ್ಮಂದಿರು ಬಿಡಬಾರದು. ಪುಣೆಯ ಪ್ರಕರಣದಲ್ಲಿ ಆ ಉಡಾಳ ಮಗನಿಗಿಂತ ಅವನ ತಂದೆ ಹಾಗೂ ತಾತನೇ ದೊಡ್ಡ ಕ್ರಿಮಿನಲ್‌ಗಳು.
(ಲೇಖಕರು : ಹಿರಿಯ ಪತ್ರಕರ್ತರು, ರಾಜ್ಯಸಭಾ ಮಾಜಿ
ಸದಸ್ಯರು)