ಗಂಟಾಘೋಷ
ಗುರುರಾಜ್ ಗಂಟಿಹೊಳೆ
ಒಂದು ತತ್ವ-ಸಿದ್ಧಾಂತವನ್ನು ಬಲವಾಗಿ ನಂಬಿಕೊಂಡು, ತಮ್ಮ ಊರಿನ – ದೇಶದ ಕುರಿತಂತೆ ತಮ್ಮದೇ ಆದ ವಿಚಾರ ಧಾರೆ ಗಳನ್ನು ಕಾರ್ಯಕರ್ತರು ಇಟ್ಟುಕೊಂಡಿರುತ್ತಾರೆ. ವಿಚಾರಭೇದಗಳು ಸಾಮಾನ್ಯ. ಆದರೆ ದ್ವೇಷ ತುಂಬಿದ, ಮಾನವೀಯತೆಯ ಮೇರೆ ಮೀರಿದ ಯಾವ ವ್ಯವಸ್ಥೆಯೂ, ತತ್ವಸಿದ್ಧಾಂತವು ಬಹುಕಾಲ ನಿಲ್ಲದು ಎಂಬುದನ್ನು ಅರಿತಿರಬೇಕು ಕೂಡ. ಯಾವುದೇ ಪಕ್ಷದ, ಯಾವುದೇ ಕಾರ್ಯಕರ್ತರ ಬೆಂಬಲದ ವ್ಯಕ್ತಿ ಗೆದ್ದುಬರಲಿ, ಅದು ಪ್ರಜಾ ಪ್ರಭುತ್ವದ ಗೆಲುವಾಗಿರುತ್ತದೆ.
ವಿಶ್ವ ಸೃಷ್ಟಿಯಾದ ಮೊದಲ ದಿನವೆಂದು ಪರಿಗಣಿಸಿ, ಸಮಸ್ತ ಭಾರತೀಯರು ಯುಗದ ಆದಿಯನ್ನು ‘ಯುಗಾದಿ’ ಹಬ್ಬವೆಂದು ಕರೆದು, ಚೈತ್ರಮಾಸದ ಮೊದಲ ದಿನವನ್ನು ಬಹು ವಿಜೃಂಭಣೆಯಿಂದ ಆಚರಿಸುವ ಮೂಲಕ ಬರಮಾಡಿಕೊಳ್ಳುತ್ತಾರೆ. ಜನರು ಸೂರ್ಯೋದಯಕ್ಕೆ ಮುಂಚಿತವಾಗಿ ಎದ್ದು, ಸಾಂಪ್ರದಾಯಿಕ ಎಣ್ಣೆ-ಸ್ನಾನವನ್ನು ಮುಗಿಸಿ, ಹೊಸ ಬಟ್ಟೆಗಳನ್ನು
ಧರಿಸುತ್ತಾರೆ.
ಮಾವಿನ ಎಲೆಗಳ ತಳಿರು ತೋರಣಗಳಿಂದ ದೇವಾಲಯಗಳು, ಮನೆಗಳು ಮತ್ತು ಅಂಗಡಿಗಳ ಪ್ರವೇಶದ್ವಾರಗಳನ್ನು ಸಂಭ್ರಮ ದಿಂದಲೇ ಅಲಂಕರಿಸಲಾಗುತ್ತದೆ. ಹಿಂದೂ ಧರ್ಮಶಾಸದ ಪ್ರಕಾರ, ಸಾಡೇ ತೀನ್ ಮುಹೂರ್ತಗಳಲ್ಲಿ ಪ್ರಮುಖ ಮುಹೂರ್ತ ಈ ಯುಗಾದಿ. (ಇನ್ನು ಳಿದಂತೆ, ಅಕ್ಷಯ ತೃತೀಯ, ವಿಜಯದಶಮಿ, ಹಾಗೂ ಕಾರ್ತಿಕ ಶುಕ್ಲ ಪಾಡ್ಯಮಿಯನ್ನು ಈ ಮುಹೂರ್ತದಲ್ಲಿ ಪರಿಗಣಿಸುತ್ತಾರೆ. ಈ ಶುಭದಿನಗಳಲ್ಲಿ ಯಾವುದೇ ತೆರನಾದ ಕೆಟ್ಟ ಸಮಯ ಇರುವುದಿಲ್ಲ ಎಂಬುದು ಪೂರ್ವ ಕಾಲದಿಂದಲೂ ಇರುವ ಶ್ರದ್ಧೆ) ಪಾಡ್ಯ-ಪ್ರತಿಪದೆಯ ದಿನವನ್ನು ಸಮೃದ್ಧ ದಿನವೆಂದು ಪರಿಗಣಿಸುತ್ತಾರೆ.
ಹೊಸ ಉದ್ಯಮಗಳ ಆರಂಭ, ಹೊಸ ವಾಹನ ಖರೀದಿ, ಗೃಹಪ್ರವೇಶ, ಅಂಗಡಿ ಮತ್ತು ಮಾಲ್ಗಳ ಉದ್ಘಾಟನೆಗೆ ಈ ದಿನ ಶ್ರೇಷ್ಠ ಎಂಬ ನಂಬಿಕೆಯೂ ಇದೆ. ಕುಟುಂಬದ ಸದಸ್ಯರು ಮತ್ತು ಸಂಬಂಧಿಕರ ನಡುವೆ ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳು ವಂತಹ ಸಾಂಪ್ರದಾಯಿಕ ಸಂಭ್ರಮಗಳು ಸಹ ಸಾಮಾನ್ಯ. ಇಂತಹ ಯುಗಾದಿಯು ಭೂತಕಾಲದ ಕಹಿಯನ್ನು ಕಳೆದು, ಜೀವನದಲ್ಲಿ ಹೊಸ ಆರಂಭವನ್ನು, ಉತ್ತಮ ಭವಿಷ್ಯದ ಭರವಸೆ ಹೊತ್ತು ಸಕಾರಾತ್ಮಕ ಮನಸ್ಸಿನೊಂದಿಗೆ ಸ್ವೀಕರಿಸುವುದನ್ನು ಸೂಚಿಸುತ್ತದೆ.
ಒಟ್ಟಾರೆ ಯುಗಾದಿಯು ಹಿಂದೂ ಸಂಪ್ರದಾಯದ ಮೊದಲ, ಹೊಸವರ್ಷ ದಿನ ಹಾಗೂ ಸಂತೋಷದ ಹಬ್ಬ. ಹೀಗೆ ಯುಗಾದಿಯನ್ನು ಜನರು ಶಾಂತಿ, ಸಂತೋಷ ಮತ್ತು ಸಮೃದ್ಧಿಯ ಮುನ್ನುಡಿಯಾಗಿ ನೋಡುತ್ತಾರೆ. ವ್ಯಕ್ತಿಗಳ ನಡುವೆ, ಕುಟುಂಬಗಳ ನಡುಗೆ, ಊರು-ಊರುಗಳ ನಡುವೆ ಉಂಟಾದ ವೈಮನಸ್ಸುಗಳನ್ನು ಕೆಲ ಪ್ರಮುಖರು ಸೇರಿ, ಸಂಧಾನ ಏರ್ಪಡಿಸಿ, ದ್ವೇಷ-ಸೂಯೆಗಳನ್ನು ತೊಡೆದುಹಾಕುವ ಸಂಧಾನಂತಹ ಕಾರ್ಯಕ್ರಮಗಳನ್ನು ಬಹು ಹಿಂದಿನಿಂದಲೂ ಅನುಸರಿಸಿಕೊಂಡು ಬಂದ ಸಾಮಾಜಿಕ ಪದ್ಧತಿಯೂ ಈ ಹಬ್ಬದ ಒಂದು ಭಾಗವೇ ಆಗಿದೆ.
ಇಷ್ಟೆ ಪೀಠಿಕೆ ಏಕೆಂದರೆ, ಯುಗಾದಿ ಹಬ್ಬದ ಮಾಸದಲ್ಲಿಯೇ ದೇಶದಲ್ಲಿ ಸಂಸದರ ಸ್ಥಾನಕ್ಕೆ ಚುನಾವಣೆಯ ಹಬ್ಬವೂ ನಡೆಯುತ್ತಿದೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ದೇಶ ನಮ್ಮದು. ೧೪೩ ಕೋಟಿಗೂ ಅಧಿಕ
ಜನಸಂಖ್ಯೆ ಹೊಂದಿರುವ ಈ ದೇಶದಲ್ಲಿ ಒಂದು ವ್ಯವಸ್ಥೆಯನ್ನು ಚಲಾಯಿಸುವುದು ಅಷ್ಟು ಸುಲಭದ ಕೆಲಸವಲ್ಲ. ಅದಕ್ಕೆ ಪ್ರತ್ಯಕ್ಷ ಉದಾಹರಣೆಯೆಂದರೆ, ಚುನಾವಣಾ ವ್ಯವಸ್ಥೆ ಮತ್ತು ಭಾರತೀಯ ರೈಲ್ವೆ ವ್ಯವಸ್ಥೆ. ಈ ಎರಡು ವ್ಯವಸ್ಥೆಗಳು ಅತ್ಯಂತ
ವ್ಯವಸ್ಥಿತವಾಗಿ ನಡೆಯುವುದನ್ನು ನೋಡಿ ವಿಶ್ವದ ಬಹುತೇಕ ಮುಂದುವರೆದ ರಾಷ್ಟ್ರಗಳು ಇವತ್ತಿಗೂ ಅಶ್ಚರ್ಯ ವ್ಯಕ್ತಪಡಿಸುತ್ತವೆ ಮತ್ತು ಮೆಚ್ಚುಗೆ ಸೂಚಿಸುತ್ತವೆ ಕೂಡ.
ಬಿರುಬೇಸಿಗೆಯ ಈ ಬೇಗೆಯಲ್ಲಿ ಬಲು ಬಿರುಸಿನಿಂದ ನಡೆಯುತ್ತಿರುವ ಚುನಾವಣೆಯ ಕುರಿತಂತೆ ಗಮನಿಸಿದಾಗ, ಅದರ ಉಸ್ತುವಾರಿ ವಹಿಸಿಕೊಂಡಿರುವ ಭಾರತೀಯ ಚುನಾವಣಾ ಆಯೋಗದ ಕಾರ್ಯವೈಖರಿ ಎಂಥವರಿಗೂ ಹೆಮ್ಮೆ ಮೂಡಿಸು ವಂತಿದೆ. ಭಾರತದಲ್ಲಿನ ಪ್ರಮುಖ ಸಾಂವಿಧಾನಿಕ ಸಂಸ್ಥೆಗಳಲ್ಲಿ, ಚುನಾವಣಾ ಆಯೋಗವು ಶಾಶ್ವತ ಸಾಂವಿಧಾನಿಕ ಸಂಸ್ಥೆ ಯಾಗಿದೆ. ಇದನ್ನು ಸಂವಿಧಾನದ ಆರ್ಟಿಕಲ್ ೩೨೪ (ಚುನಾವಣಾ ಆಯೋಗದ ಸ್ವಾತಂತ್ರ್ಯ ಮತ್ತು ನಿಷ್ಪಕ್ಷಪಾತ ಕಾರ್ಯ ನಿರ್ವಹಣೆಗೆ ಸಂಬಂಧಿಸಿದಂತೆ)ರ ವಿಧಿಯಾಗಿ ಜನವರಿ ೨೫, ೧೯೫೦ ರಂದು ಸ್ಥಾಪಿಸಲಾಯಿತು.
ಅಂದಿನಿಂದ ಇಂದಿನವರೆಗೂ ಅತ್ಯಂತ ಶ್ರದ್ಧೆಯಿಂದ ಕೇವಲ ಒಬ್ಬ ವ್ಯಕ್ತಿಯ ಮತದಾನ ಹೊಂದಿರುವ ಗುಜರಾತ್ ರಾಜ್ಯದ ದಟ್ಟವಾದ ಗಿರ್ ಕಾಡಿನಲ್ಲಿ ೭೦ಕಿ.ಮೀ. ನಷ್ಟು ದೂರ ಹೋಗಿ ಮತದಾನ ಕೇಂದ್ರ ಸ್ಥಾಪಿಸುವುದರಿಂದ ಹಿಡಿದು, ೩೧,೫೯,೩೦೩ನಷ್ಟು ದಟ್ಟ ಮತದಾರರನ್ನು ಹೊಂದಿರುವ ತೆಲಂಗಾಣ ರಾಜ್ಯದ ಮಲ್ಕಾಜ್ ಗಿರಿಯನ್ನು ಕೂಡ ಅತ್ಯಂತ ಸಮಾಧಾನದಿಂದ ಸಂಭಾಳಿಸುವುದು ಇದೇ ಚುನಾವಣಾ ಆಯೋಗ.
ಭಾರತದ ಸಂವಿಧಾನದ ೬೧ ನೇ ತಿದ್ದುಪಡಿ ಅಧಿಕೃತ ಸಂವಿಧಾನ ಕಾಯಿದೆ, ೧೯೮೮ ಅನ್ನು ತಿದ್ದುಪಡಿ ಮಾಡುವ ಮೂಲಕ, ಲೋಕಸಭೆ ಮತ್ತು ರಾಜ್ಯಗಳ ಶಾಸನ ಸಭೆಗಳಿಗೆ ನಡೆಸುವ ಚುನಾವಣೆಯ ಸಾರ್ವತ್ರಿಕ ಮತದಾನದ ವಯಸ್ಸನ್ನು ೨೧ ವರ್ಷಗಳಿಂದ ೧೮ ವರ್ಷಗಳಿಗೆ ಇಳಿಸಲಾಯಿತು. ಭಾರತದ ಗಣರಾಜ್ಯ, ಒಕ್ಕೂಟ ಸರ್ಕಾರದ ಎರಡು ಶಾಸನಸಭೆಗಗಳಿರುವ
ಸರ್ವೋಚ್ಚ ವಿಧಾಯಕ ಘಟಕವಾಗಿದ್ದು, ರಾಜ್ಯಗಳ ಪರಿಷತ್ತನ್ನು ಮೇಲ್ಮನೆ ಎಂದು, ಪ್ರಜಾಪ್ರತಿನಿಽಗಳ ಸಭೆಯನ್ನು ಲೋಕಸಭೆ
ಅಥವಾ ಕೆಳಮನೆ ಎಂದು ಕರೆಯುತ್ತಾರೆ.
ಆರ್ಟಿಕಲ್ – ೮೧ರ ಪ್ರಕಾರ, ಪ್ರಜಾಪ್ರತಿನಿಧಿಗಳ ಸಭೆಯ (ಗರಿಷ್ಠ) ೫೫೨ ಸದಸ್ಯರ ಪೈಕಿ ೫೩೦ ಸದಸ್ಯರು ರಾಜ್ಯಗಳಲ್ಲಿನ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನು ಪ್ರತಿನಿಽಸುತ್ತಾರೆ ಮತ್ತು ಸಂಸತ್ತಿನಿಂದ ಅವಕಾಶ ನೀಡಲ್ಪಟ್ಟ ರೀತಿಯಲ್ಲಿ ಕಾನೂನಿನ
ಅನುಸಾರದ ವಿಧಾನದಲ್ಲಿ ಆರಿಸಲ್ಪಡುವ ೨೦ ಸದಸ್ಯರು ಕೇಂದ್ರಾಡಳಿತ ಪ್ರದೇಶಗಳನ್ನು ಪ್ರತಿನಿಧಿಸುತ್ತಾರೆ. ಇಲ್ಲಿ ಆಯ್ಕೆಯಾದ
ಸದಸ್ಯರು, ಮುಂದಿನ ಸಾರ್ವತ್ರಿಕ ಚುನಾವಣೆಯೂ ನಡೆಯುವ ತನಕ ಅಂದರೆ, ಐದು ವರ್ಷದ ಅವಧಿಯವರೆಗೆ ಸೇವೆ
ಸಲ್ಲಿಸುತ್ತಾರೆ. ಇದರೊಂದಿಗೆ ಇಬ್ಬರು ಸದಸ್ಯರು ರಾಷ್ಟ್ರಪತಿಯಿಂದ ಆರಿಸಲ್ಪಡುತ್ತಾರೆ. ಸದನದ ಸ್ಥಾನಗಳು ಜನಸಂಖ್ಯೆಯ
ಆಧಾರದ ಮೇಲೆ ರಾಜ್ಯಗಳ ನಡುವೆ ಹಂಚಲ್ಪಡುತ್ತವೆ.
ವಿಶೇಷವೆಂದರೆ, ಈ ಹಿಂದೆ ಇದ್ದ, ೧೦೪ ನೇ ಸಾಂವಿ ಧಾನಿಕ ತಿದ್ದುಪಡಿ ಕಾಯ್ದೆಯ ಮೂಲಕ, ಲೋಕಸಭೆಯಲ್ಲಿ ಆಂಗ್ಲೋ-ಇಂಡಿಯನ್ ಸಮುದಾಯಕ್ಕೆ ಮಾತ್ರವೇ ಮೀಸಲಿಟ್ಟಿದ್ದ ೨ ಸ್ಥಾನಗಳನ್ನು ತೆಗೆದು ಹಾಕಲಾಯಿತು. ಹಾಗೆಯೇ, ಆರ್ಟಿಕಲ್ – ೮೪ರ ಪ್ರಕಾರ, ಲೋಕಸಭೆಯಲ್ಲಿನ ಸದಸ್ಯತ್ವ ಪಡೆಯುವುದಕ್ಕೆ ಸಂಬಂಧಿಸಿದಂತೆ ಅರ್ಹತೆ ಯನ್ನು ಪಡೆಯಲು ವ್ಯಕ್ತಿಯೋ ರ್ವನು ಭಾರತದ ಓರ್ವ ನಾಗರಿಕನಾಗಿರಬೇಕು ಮತ್ತು ೨೫ ವರ್ಷಗಳು ಅಥವಾ ಅದಕ್ಕಿಂತ ಹೆಚ್ಚಿನ ವಯೋ ಮಾನದವನಾಗಿರ ಬೇಕು. ಅವನು ಮಾನಸಿಕವಾಗಿ ಸದೃಢನಾಗಿರಬೇಕು, ದಿವಾಳಿಯಾಗಿರಬಾರದು ಮತ್ತು ಅವನ/ಅವಳ ವಿರುದ್ಧ ಅಪರಾಧ ಸಂಬಂಧದ ಯಾವುದೇ ಕಾಯಿದೆ-ಕ್ರಮಗಳು ಜರುಗಿರಬಾರದು ಎಂಬ ನಿಯಮವನ್ನು ಜನರ ಪ್ರಾತಿನಿಧ್ಯ ಕಾಯಿದೆ, ೧೯೫೧ರ ಅಡಿಯಲ್ಲಿ ರೂಪಿಸಲಾಗಿದೆ.
ಇತರೆ ದೇಶಗಳಂತೆ ಅತ್ತ ಕಠಿಣವೂ ಅಲ್ಲದ, ಇತ್ತ ಸರಳವೂ ಅಲ್ಲದ ಮತ್ತು ಜನರ, ಕಾಲದ ಅವಶ್ಯಕತೆಗೆ ತಕ್ಕಂತೆ ತಿದ್ದುಪಡಿ ಮಾಡಬಹುದಾದ ನಮ್ಯ ಸಂವಿಧಾನ ಮಾದರಿಯನ್ನು ನಮ್ಮ ಹಿರಿಯರು ಅತ್ಯಂತ ಸಮರ್ಪಕವಾಗಿ ನಿರ್ಮಿಸಿಕೊಟ್ಟಿರುವು
ದರಿಂದ ಇಂತಹ ಒಂದು ಬೃಹತ್ ದೇಶವನ್ನು ಸರಾಗವಾಗಿ ಮುನ್ನಡೆಸಲು, ಸಂವಿಧಾನವು ಒಂದು ಭಗವದ್ಗೀತೆಯಂತೆ ದಾರಿದೀಪವಾಗಿದೆ.
ಜನಸಾಮಾನ್ಯರೂ ಚುನಾವಣೆಗೆ ನಿಲ್ಲುವ ಇಷ್ಟೆಲ್ಲ ಸದವಾಕಾಶಗಳಿzಗ, ಪ್ರಸ್ತುತದ ಪರಿಸ್ಥಿತಿಯಲ್ಲಿ ವಿಪರೀತ ಹಣವನ್ನು ಹೊಂದಿರುವ ವ್ಯಕ್ತಿ ಖರ್ಚುಮಾಡಿ ಗೆದ್ದುಬರುವ ವಾತಾವರಣವನ್ನು ನಾವಾಗಿಯೇ ಸೃಷ್ಠಿಸಿಕೊಂಡಿದ್ದೇನು ಗುಟ್ಟಾಗಿ ಉಳಿದಿಲ್ಲ. ಇಂತಹ ಕಠಿಣ ಸಂದರ್ಭದಲ್ಲೂ ಒಬ್ಬ ಸಾಮಾನ್ಯ ಕಾರ್ಯಕರ್ತ, ಬಹುನಿಷ್ಠೆಯಿಂದ, ಯಾವ ಪ್ರತಿಫಲಾಪೇಕ್ಷೆಯಿಲ್ಲದೇ ತನ್ನ ಮೆಚ್ಚಿನ ವ್ಯಕ್ತಿಯೋ, ನಾಯಕನೋ ಗೆದ್ದು ಬಂದು ತಮ್ಮಗಳ, ತಮ್ಮ ಊರಿನ ಸಮಸ್ಯೆಗಳನ್ನು ಸರಿ ಮಾಡಬಹುದೆಂಬ ಪುಟ್ಟ ಆಸೆಯೊಂದಿಗೆ ಪ್ರಚಾರ ಇತ್ಯಾದಿ ಕಾರ್ಯಗಳಲ್ಲಿ ತೊಡಗುತ್ತಾರೆ.
ಉದಾಹರಣೆಗೆ ಅಮೆರಿಕವನ್ನೇ ತೆಗೆದುಕೊಂಡಾಗ, ಅಲ್ಲಿ ಎರಡು ಪಕ್ಷಗಳು ತಮ್ಮ ತಮ್ಮ ತತ್ವ-ಸಿದ್ಧಾಂತಗಳನ್ನು, ತಾವು
ಮಾಡುವ ಕಾರ್ಯಗಳನ್ನು ಜನರ ಮುಂದಿಟ್ಟು ಗೆಲ್ಲುವ ಪ್ರಯತ್ನ ಮಾಡುತ್ತವೆ. ಚುನಾವಣೆ ಮುಗಿದ ಮೇಲೆ, ವೈಯಕ್ತಿಕ ಈರ್ಷೆ-ದ್ವೇಷಗಳಿಗೆ ಆಸ್ಪದವಿಲ್ಲದಂತೆ ರಾಷ್ಟ್ರ ಮೊದಲು ಎಂಬಂತೆ ಅಲ್ಲಿನ ಆಡಳಿತ ವ್ಯವಸ್ಥೆ ನಡೆಯುತ್ತ ಹೋಗುತ್ತದೆ. ಅಲ್ಲಿಯೂ ವ್ಯತ್ಯಾಸಗಳಿಲ್ಲವೆಂದಲ್ಲ, ಅವುಗಳನ್ನು ಮೀರಿ ಸರ್ಕಾರಗಳು ಎಲ್ಲರನ್ನು ಒಳಗೊಂಡು ನಡೆಯುತ್ತವೆ.
ಹೀಗೆ, ಪ್ರಜಾಪ್ರಭುತ್ವದಲ್ಲಿ ವಿಚಾರಭೇದಗಳು, ತತ್ವ-ಸಿದ್ಧಾಂತಗಳು ಇದ್ದೇ ಇರುತ್ತವೆ. ಇನ್ನು ೬ ರಾಷ್ಟ್ರೀಯ ಪಾರ್ಟಿಗಳು, ೫೭ ರಾಜ್ಯಮಟ್ಟದ ಪಾರ್ಟಿಗಳು, ಆಯೋಗದಿಂದ ಅಧಿಕೃತವಾಗಿ ಗುರುತಿಸಿಕೊಳ್ಳದ ೨,೫೯೭ ಪಾರ್ಟಿಗಳು ನಮ್ಮ ದೇಶದಲ್ಲಿರುವಾಗ ರಾಜಕಾರಣದ ಪರಿಸ್ಥಿತಿ ಹೇಗಿರಬೇಡ.! ಈ ಸಂದರ್ಭದಲ್ಲಿ, ಪಕ್ಷ ಭೇದಗಳುಂಟಾಗುವುದು ಸರ್ವೇಸಾಮಾನ್ಯ. ಪರಸ್ಪರ ಗೆಳೆಯರಾಗಿದ್ದವರು ರಾಜಕೀಯ ನಿಲುವುಗಳಿಂದ ಬೇರ್ಪಡುವಂತಾಗುತ್ತದೆ. ಇದೆಲ್ಲ ಕೇವಲ ಚುನಾವಣೆಗೆ ಮಾತ್ರ ಸೀಮಿತವಾದರೆ ಆರೋಗ್ಯಕರವೇ.
ಆದರೆ, ಪರಸ್ಪರರು ಕೇಸ್ ದಾಖಲು ಮಾಡಿಕೊಳ್ಳುತ್ತಾರೆ, ಪ್ರತಿಷ್ಠೆಗೆ ಬೀಳುತ್ತಾರೆ. ಅಕ್ಕಪಕ್ಕದ ಮನೆಯವರಾದರೂ, ಒಂದೇ
ಊರಿನವರಾದರೂ, ಈ ಮುಂಚೆ ಒಟ್ಟಿಗೇ ಚಹಾ ಕುಡಿಯುತ್ತ ಓಡಾಡುತ್ತಿದ್ದವರೂ ಇದ್ದಕ್ಕಿದ್ದಂತೆಯೇ ಶತೃಗಳಾಗಿಬಿಡುತ್ತಾರೆ.
ಪ್ರಸ್ತುತ ರಾಜಕೀಯ ಎಲ್ಲರನ್ನು ಒಳಗೊಂಡಂತೆ ರೂಪುಗೊಳ್ಳ ಬೇಕಾಗಿದ್ದದ್ದು, ಕೆಲವೊಮ್ಮೆ ರಾಜಕೀಯ ನಾಯಕರೇ ಎದುರು
ಪಕ್ಷದ ಕಾರ್ಯಕರ್ತನಿಗೆ ಬೆದರಿಕೆ ಹಾಕುವ ಮಟ್ಟಕ್ಕೆ ಬಂದು ನಿಂತಿರುವುದು ಮಾತ್ರ ಹೇಯತನವೇ ಸರಿ. ರಾಜಕೀಯವನ್ನು
ಕೇವಲ ಅಭ್ಯರ್ಥಿಗಳವರೆಗೆ ಇಟ್ಟು ನೋಡಬೇಕಾದ ಒಂದು ಸುದೃಷ್ಠಿ ಇಂದಿನ ಎಲ್ಲ ಪಕ್ಷಗಳ ಕಾರ್ಯಕರ್ತರಲ್ಲಿ ಮೂಡ
ಬೇಕಾಗಿದೆ. ಚುನಾವಣೆಯ ನಂತರ, ಎಲ್ಲ ನಾಯಕರು ಪಕ್ಷ ಭೇದ ಮರೆತು ಆಡಳಿತ ಯಂತ್ರದ ಭಾಗವಾಗುತ್ತಾರೆ ಎಂಬು ದನ್ನು ಸ್ಥಳೀಯ ಮಟ್ಟದ ಕಾರ್ಯಕರ್ತ ಮೊದಲು ನೆನಪಿಡಬೇಕು.
ಒಂದು ತತ್ವ-ಸಿದ್ಧಾಂತವನ್ನು ಬಲವಾಗಿ ನಂಬಿಕೊಂಡು, ತಮ್ಮ ಊರಿನ – ದೇಶದ ಕುರಿತಂತೆ ತಮ್ಮದೇ ಆದ ವಿಚಾರ ಧಾರೆಗಳನ್ನು ಕಾರ್ಯಕರ್ತರು ಇಟ್ಟುಕೊಂಡಿರುತ್ತಾರೆ. ವಿಚಾರ ಭೇದಗಳು ಸಾಮಾನ್ಯ. ಆದರೆ ದ್ವೇಷ ತುಂಬಿದ, ಮಾನವೀಯ ತೆಯ ಮೇರೆ ಮೀರಿದ ಯಾವ ವ್ಯವಸ್ಥೆಯೂ, ತತ್ವಸಿದ್ಧಾಂತವು ಬಹುಕಾಲ ನಿಲ್ಲದು ಎಂಬುದನ್ನು ಅರಿತಿರಬೇಕು ಕೂಡ. ಯಾವುದೇ ಪಕ್ಷದ, ಯಾವುದೇ ಕಾರ್ಯಕರ್ತರ ಬೆಂಬಲದ ವ್ಯಕ್ತಿ ಗೆದ್ದುಬರಲಿ, ಅದು ಪ್ರಜಾಪ್ರಭುತ್ವದ ಗೆಲುವಾಗಿರುತ್ತದೆ.
ಜನಸಾಮಾನ್ಯರು ತಮ್ಮ ಅಮೂಲ್ಯ ಮತಹಾಕಿ ನಿರ್ಣಯಿಸಿರುತ್ತಾರೆ. ಇಂತಹ ಒಂದು ಸಂದರ್ಭವನ್ನು ಸ್ವೀಕರಿಸುವ ಮನಸ್ಥಿತಿ ಯನ್ನು ಯಾವುದೇ ಪಕ್ಷದ ಕಾರ್ಯಕರ್ತರಿರಲಿ, ನಾಯಕರಿರಲಿ ಸ್ವೀಕರಿಸಬೇಕಿರುವುದು ಇಂದಿನ ಸಂದರ್ಭದ ಜರೂರತ್ತೂ ಹೌದು.
ಒಂದು ವೇಳೆ, ಚುನಾವಣೆಯಲ್ಲಿ ಗೆದ್ದ ವ್ಯಕ್ತಿಯು ಆ ಸ್ಥಾನಕ್ಕೆ ಅನರ್ಹನೆಂದೂ, ವಾಮಮಾರ್ಗದ ಆಯ್ಕೆಯೆಂದು ಅನಿಸಿದಲ್ಲಿ
ಅದಕ್ಕೂ ನಮ್ಮ ಸಂವಿಧಾನದಲ್ಲಿ ಪರಿಹಾರವನ್ನು ತಿಳಿಸಲಾಗಿದೆ. ಕಾನೂನು ರೀತಿಯ ಎಲ್ಲ ಕ್ರಮಗಳನ್ನು ಕೈಗೊಳ್ಳಲು
ಸಾರ್ವಜನಿಕರಿಗೆ, ಚುನಾಯಿಸಿದವರಿಗೆ ಸಂವಿಧಾನಾತ್ಮಕ ಹಕ್ಕೂ ಇದೆ. ಆರ್ಟಿಕಲ್ ೧೦೨ ಮತ್ತು ೧೯೧ರ ಅಡಿಯಲ್ಲಿ ಅನರ್ಹಗೊಳಿಸಬಹುದು ಎಂಬುದನ್ನು ನಾವು ನೆನಪಿಟ್ಟುಕೊಂಡರೂ ಸಾಕು. ಈ ಎಲ್ಲದರ ನಡುವೆ, ಸೋಲು-ಗೆಲುವನ್ನು
ಸಮಾನವಾಗಿ ನೋಡುತ್ತ, ಮತ್ತೆ ೫ ವರ್ಷಕ್ಕೊಮ್ಮೆ ಬರುವ ಈ ಹಬ್ಬವನ್ನು ಆಚರಿಸಲು ತಾಳ್ಮೆಯಿಂದ ಕಾಯೋಣ.
ಗೆದ್ದ ವ್ಯಕ್ತಿ, ಪಕ್ಷ ಯಾರೇ ಆಗಿರಲಿ ಅದು ಜನರ ಆಯ್ಕೆಯಾಗಿರೋದ್ರಿಂದ ಎಲ್ಲ ಮತ-ಭೇದಗಳನ್ನು ಮರೆತು, ಅಭಿವೃದ್ಧಿಯತ್ತ, ಶಾಂತಿ ಸಹಬಾಳ್ವೆಯತ್ತ ಗಮನಹರಿಸೋಣ. ಈ ಮೂಲಕ, ರಕ್ತಸುರಿಸಿ, ಸಾವಿರಾರು ತ್ಯಾಗ ಬಲಿದಾನಗಳ ಮೂಲಕ ನಮಗೆ ಸ್ವಾತಂತ್ರ್ಯ, ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಅವಕಾಶ ಮಾಡಿಕೊಟ್ಟ ಹಿರಿಯರಿಗೆ, ಸಂವಿಧಾನ ನಿರ್ಮಾತೃಗಳಿಗೆ ಕೃತಜ್ಞ ರಾಗಿರೋಣ ಎಂಬುದನ್ನು ಅತ್ಯಂತ ಆರ್ದ್ರ ಹೃದಯದಿಂದಲೇ ಹೇಳಬಯಸುತ್ತೇನೆ.
೧೮ ತುಂಬಿದ ನವ ಯುವ ಮತದಾರರು ತಪ್ಪದೇ ತಮ್ಮ ಮತಹಾಕುವ ಅಽಕಾರವನ್ನು ಚಲಾಯಿಸಿ. ಇತರರಿಗೆ ಈ ಕುರಿತು ಜಾಗೃತಿ ಮೂಡಿಸಿ. ನಿಮ್ಮ ಅಕ್ಕಪಕ್ಕದ ಮನೆಯಲ್ಲಿ ವಯಸ್ಸಾದವರಿದ್ದರೆ, ಅವರ ಮತಹಾಕುವ ಸಾಧ್ಯತೆಯನ್ನು ತಪ್ಪದೇ ವಿವೇಚಿಸಿ. ಎಲ್ಲರೂ ಕೈಜೋಡಿಸುವ ಮೂಲಕ ವಿಶ್ವದ ಬಹುದೊಡ್ಡ ಪ್ರಜಾಪ್ರಭುತ್ವ ಹಬ್ಬವನ್ನು ಉತ್ಸವದಂತೆ ಆಚರಿಸಿ
ಯಶಸ್ವಿಗೊಳಿಸೋಣ.