Wednesday, 11th December 2024

ಮಾಸದ ಹೆಸರು, ಹೆಸರಿನ ಜತೆ ಮಾಸು ಮುಖ್ಯ

ಅಶ್ವತ್ಥಕಟ್ಟೆ

ranjith.hosakere@gmail.com

ವಿಧಾನಸಭಾ ಚುನಾವಣಾ ಚರ್ಚೆ ಆರಂಭವಾಗದಾಗಿನಿಂದಲೂ ಮುಖ್ಯಮಂತ್ರಿಯ ಆಯ್ಕೆ ಬಂದಾಗಲೆಲ್ಲ, ಸಿದ್ದರಾಮಯ್ಯ ಹಾಗೂ ಡಿ.ಕೆ.
ಶಿವಕುಮಾರ್ ಹೆಸರು ಮುನ್ನಲೆಗೆ ಬರುತ್ತದೆ. ಇದೇ ವಿಷಯಕ್ಕಾಗಿ ಡಿಕೆಶಿ, ಸಿದ್ದರಾಮಯ್ಯ ಅವರ ನಡುವೆ ಮುಸುಕಿನ ಗುದ್ದಾಟವೂ ನಡೆಯುತ್ತಿದೆ.

ರಾಜಕೀಯ ವಲಯದಲ್ಲಿ ಸಾಮಾನ್ಯವಾಗಿ ಮಾಸ್ ಲೀಡರ್ ಎನ್ನುವ ಪದಬಳಕೆ ಇದ್ದೇ ಇರುತ್ತದೆ. ಅದರಲ್ಲಿಯೂ ಚುನಾವಣೆಗಳು ಹತ್ತಿರ ವಾಗುತ್ತಿದ್ದಂತೆ, ಈ ಪದ ಬಳಕೆ ಹೆಚ್ಚಾಗುತ್ತದೆ. ಇದಿಷ್ಟೇ ಅಲ್ಲದೇ, ಚುನಾವಣೆ ಘೋಷಣೆಗೊಂಡ ಬಳಿಕ ‘ಸ್ಟಾರ್ ಪ್ರಚಾರಕ’ ಎನ್ನುವ ಸ್ಟಾರ್‌ಗಿರಿ ನೀಡುವು ದಕ್ಕೂ ಅವಕಾಶವಿದೆ. ಆದರೆ ಸ್ಟಾರ್‌ಗಿರಿಗಿಂತ ‘ಮಾಸ್’ಗಿರಿ ಪಡೆದುಕೊಂಡು, ದಶಕಗಳ ಕಾಲ ಉಳಿಸಿಕೊಳ್ಳುವುದು ಸಣ್ಣ ಮಾತಲ್ಲ. ಯಾವುದೇ ಪಕ್ಷದಲ್ಲಿ ಲಕ್ಷಾಂತರ ಕಾರ್ಯಕರ್ತರಿರಬಹುದು. ಸಾವಿರಾರು ಸಂಖ್ಯೆಯಲ್ಲಿ ಮುಖಂಡರಿರಬಹುದು. ನೂರಾರು ಸಂಖ್ಯೆಯಲ್ಲಿ ನಾಯಕರಿರಬಹುದು.

ಆದರೆ ಈ ಎಲ್ಲರನ್ನೂ ಮೀರಿದ, ಜಾತಿ, ಧರ್ಮ, ಕ್ಷೇತ್ರವನ್ನು ಮೀರಿ ನಾಯಕನಾಗಿ ಬೆಳೆಯುವ ಕೆಲವೇ ಕೆಲವು ನಾಯಕರನ್ನು ‘ಮಾಸ್ ಲೀಡರ್’ ಎಂದು ಹೇಳುತ್ತಾರೆ. ಕೆಲವು ಸಂದರ್ಭದಲ್ಲಿ ಈ ನಾಯಕರು ಪಕ್ಷಗಳನ್ನು ಮೀರಿರುವ ನಿದರ್ಶನವಿದೆ. (ರಾಜಕೀಯ ಹೇಳಿಕೆ ಮೀರಿ, ವೈಯಕ್ತಿಕವಾಗಿ ಎಲ್ಲರೊಂದಿಗೆ ಉತ್ತಮ ಒಡನಾಟ ಹೊಂದಿರುತ್ತಾರೆ). ಈ ರೀತಿ ಬೆಳೆಯುವುದು ಕಾರ್ಯಕರ್ತ ನಿಂದ ಮಾಸ್ ಲೀಡರ್ ಆಗಿ ಬೆಳೆಯುವುದು ಒಂದೆರೆಡು ದಿನದಲ್ಲಿ ಆಗುವ ಪ್ರಕ್ರಿಯೆಯಲ್ಲ. ಅದು ಯಜ್ಞದ ರೀತಿ. ಕರ್ನಾಟಕದ ಮಟ್ಟಿಗಷ್ಟೇ ನೋಡುವುದಾದರೆ, ಹಲವಾರು ಮಂದಿ ‘ನಾಯಕರು’ ಬಂದು ಹೋಗಿದ್ದಾರೆ. ಆದರೆ ಇದರಲ್ಲಿ ಕೆಲವೇ ಕೆಲವರು ಮಾಸ್ ಲೀಡರ್‌ಗಳಾಗಿದ್ದಾರೆ.

ರಾಜ್ಯಾದ್ಯಂತ ಸುತ್ತಿ ತಮ್ಮ ಪಕ್ಷಕ್ಕೆ ಮತ ಬೀಳುವಂತೆ ನೋಡಿಕೊಳ್ಳುವ ಛಾಪನ್ನು ಬೆಳೆಸಿಕೊಂಡಿದ್ದು, ಕೆಲವೇ ಕೆಲವರು. ಕರ್ನಾಟಕದ ಮಟ್ಟಿಗೆ ನೋಡುವುದಾದರೆ, ದೇವರಾಜ ಅರಸು, ನಿಜಲಿಂಗಪ್ಪ, ರಾಮಕೃಷ್ಣ ಹೆಗಡೆ ಹೀಗೆ ಕೆಲವರನ್ನು ನೆನಪು ಮಾಡಿಕೊಳ್ಳಬಹುದು. ಆದರೆ ಪ್ರಸ್ತತ ಚಾಲ್ತಿಯಲ್ಲಿರುವ ನಾಯಕರನ್ನು ನೋಡಿದರೆ, ಮೂರು ಪಕ್ಷಗಳಿಂದ ಒಬ್ಬೊಬ್ಬರ ಹೆಸರು ಮಾತ್ರ ಮುನ್ನಲೆಗೆ ಬರುತ್ತದೆ. ಬಿಜೆಪಿಯ ಬಿ.ಎಸ್. ಯಡಿಯೂರಪ್ಪ, ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಹಾಗೂ ಜೆಡಿಎಸ್‌ನಲ್ಲಿ ಎಚ್.ಡಿ. ದೇವೇಗೌಡರು ಮಾತ್ರ ಇಂದಿನ ದಿನಮಾನದಲ್ಲಿ ಕರೆಯಬಹು ದಾಗಿರುವ ‘ಮಾಸ್ ಲೀಡರ್’ಗಳು.

ಇವ್ನರನ್ನು ಹೊರತುಪಡಿಸಿ, ಮೂರು ಪಕ್ಷದಲ್ಲಿಯೂ ಅವರದ್ದೇಯಾಗಿರುವ ಛಾಪನ್ನು ಮೂಡಿಸಿರುವ ನಾಯಕರ ದಂಡಿರಬಹುದು. ಆದರೆ ತಮ್ಮ
ತಮ್ಮ ಪಕ್ಷಗಳಿಗೆ ಈ ಮೂವರು ‘ಟ್ರಂಪ್ ಕಾರ್ಡ್’ ರೀತಿ ಬಳಸಿಕೊಳ್ಳುವ ವ್ಯಕ್ವಿತ್ವಗಳಾಗಿ ರೂಪುಗೊಂಡಿದ್ದಾರೆ. ಬಿಜೆಪಿಯಲ್ಲಿನ ಇಂದಿನ ಸ್ಥಿತಿ ಬಗ್ಗೆ ಚರ್ಚಿಸುವ ಮೊದಲು, ಕಾಂಗ್ರೆಸ್ ಹಾಗೂ ಜೆಡಿಎಸ್ ಬಗ್ಗೆ ನೋಡಬೇಕಿದೆ. ಹಾಗೇ ನೋಡಿದರೆ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಅವರನ್ನು ಹೊರತುಪಡಿಸಿ, ಸಾಲು ಸಾಲು ನಾಯಕರ ದಂಡೇ ಇದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್ ಸೇರಿದಂತೆ ಐವರು ಕಾರ್ಯಾಧ್ಯಕ್ಷರು ಸಾಲು ಸಾಲು ಹಿರಿಯ ನಾಯಕರು, ಆರ್ಥಿಕವಾಗಿ ಬಲ ನೀಡಬಹುದಾದ ಹಲವಾರು ನಾಯಕರ ದಂಡು. ಈ ಎಲ್ಲವನ್ನು ಮೀರಿ ಎಐಸಿಸಿ ಅಧ್ಯಕ್ಷ ಸ್ಥಾನದಲ್ಲಿರುವ ಮಲ್ಲಿಕಾರ್ಜುನ ಖರ್ಗೆ.

ಈ ರೀತಿ ಬಹುದೊಡ್ಡ ಪಡೆಯನ್ನು ಹೊಂದಿದ್ದರೂ, ಪ್ರಚಾರದ ಸಮಯದಲ್ಲಿ ಮಾತ್ರ ‘ಸಿದ್ದರಾಮಯ್ಯ’ ಅವರ ಅಗತ್ಯ ಪಕ್ಷಕ್ಕೆ ಇದ್ದೇ ಇರುತ್ತದೆ. ಈ ಎಲ್ಲ
ನಾಯಕರಿಗಿಂತ ಹೆಚ್ಚಾಗಿ ಮತಗಳನ್ನು ‘ಸೆಳೆಯುವ’ ತಂತ್ರ ಸಿದ್ದರಾಮಯ್ಯ ಅವರಿಗೆ ಸಿದ್ಧಿಸಿದೆ. ಹಾಗೇ ನೋಡಿದರೆ, ವಿಧಾನಸಭಾ ಚುನಾವಣಾ ಚರ್ಚೆ ಆರಂಭವಾಗದಾಗಿನಿಂದಲೂ ಮುಖ್ಯಮಂತ್ರಿಯ ಆಯ್ಕೆ ಬಂದಾಗಲೆಲ್ಲ, ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಹೆಸರು ಮುನ್ನಲೆಗೆ ಬರುತ್ತದೆ. ಇದೇ ವಿಷಯಕ್ಕಾಗಿ ಡಿಕೆಶಿ, ಸಿದ್ದರಾಮಯ್ಯ ಅವರ ನಡುವೆ ಮುಸುಕಿನ ಗುದ್ದಾಟವೂ ನಡೆಯುತ್ತಿದೆ.

ಇಷ್ಟಾದರೂ, ಪಕ್ಷದ ವರಿಷ್ಠರು ಮಾತ್ರ ಸಿದ್ದರಾಮಯ್ಯ ಅವರನ್ನು ‘ನಿರಾಕರಿಸುವ’ ಅಥವಾ ‘ಮೌನವಾಗಿರಿ’ ಎನ್ನುವ ಸಂದೇಶವನ್ನು ಕಳುಹಿಸು ವುದಕ್ಕೆ ಮಾತ್ರ ಸಿದ್ಧವಿರುವುದಿಲ್ಲ. ಏಕೆಂದರೆ, ಚುನಾವಣೆಗೆ ಖರ್ಚು ಮಾಡುವುದಕ್ಕಿಂತ ಮುಖ್ಯವಾಗಿ, ಜನರನ್ನು ಪಕ್ಷದತ್ತ ಸೆಳೆಯುವುದು ಮುಖ್ಯ ವಾಗಿರುತ್ತದೆ. ಇನ್ನು ಜೆಡಿಎಸ್‌ನಲ್ಲಿ ನೋಡುವುದಾದರೆ, ಸದ್ಯ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿರುವುದು, ಉತ್ತರ ಕರ್ನಾಟಕದಿಂದ ದಕ್ಷಿಣ ಕರ್ನಾಟಕದಲ್ಲೆಲ್ಲ ಪಕ್ಷವನ್ನು ಸಂಘಟಿಸುತ್ತಿರುವುದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಾದರೂ, ಪಕ್ಷದಲ್ಲಾಗಲಿ, ಮತದಾರರಾಗಲಿ ಕುಮಾರಸ್ವಾಮಿ ಮಾತಿಗಿಂತ ದೇವೇಗೌಡರ ಮಾತಿಗಿರುವ ಬೆಲೆಯೇ ಬೇರೆ ಹಂತದಲ್ಲಿರುತ್ತದೆ.

ಈ ಇಬ್ಬರೊಂದಿಗೆ ಸದ್ಯಕ್ಕೆ ರಾಜ್ಯದಲ್ಲಿರುವ ಮತ್ತೊಬ್ಬ ಮಾಸ್ ಲೀಡರ್ ಎಂದರೆ ಅದು ಯಡಿಯೂರಪ್ಪನವರು. ಬಿಜೆಪಿಯನ್ನು ಸೊನ್ನೆಯಿಂದ ಕಟ್ಟುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಅವರು, ರಾಜ್ಯದಲ್ಲಿ ಬಹುಮತದೊಂದಿಗೆ ಅಽಕಾರಕ್ಕೆ ಬಿಜೆಪಿಯನ್ನು ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಮುಖ್ಯಮಂತ್ರಿಯಾದ ಬಳಿಕ ಭ್ರಷ್ಟಾಚಾರದ ಆರೋಪದಲ್ಲಿ ಜೈಲು ಸೇರಿ, ಬಳಿಕ ಬಿಜೆಪಿ ವರಿಷ್ಠರು ಮೂಲೆಗುಂಪು ಮಾಡಿದರು ಎನ್ನುವ ಕಾರಣಕ್ಕೆ, ಕೆಜೆಪಿ ಪಕ್ಷವನ್ನು ಕಟ್ಟಿ ೨೦೧೩ರ ಚುನಾವಣೆಯಲ್ಲಿ ಬಿಜೆಪಿಗೆ ಬಲವಾದ ಏಟನ್ನೇ ನೀಡಿದ್ದ ಯಡಿಯೂರಪ್ಪ ಅವರನ್ನು ಪುನಃ ಬಿಜೆಪಿಗೆ ಕರೆದುಕೊಂಡು ಬಂದಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಅಂದಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ. ಯಡಿಯೂರಪ್ಪ ವಾಪಸಾಗಿ ರಾಜ್ಯಾಧ್ಯಕ್ಷರಾಗಿ
ಅಽಕಾರ ಸ್ವೀಕರಿಸಿದ ಬಳಿಕ ನಡೆದ ಚುನಾವಣೆಯಲ್ಲಿ ಬಿಜೆಪಿ ಮತ್ತೆ ನೂರರ ಗಡಿ ದಾಟಿ, ಬಳಿಕ ‘ಆಪರೇಷನ್ ಕಮಲ’ದ ಮೂಲಕ ಅಽಕಾರ ಹಿಡಿದಿದ್ದು ಈಗ ಇತಿಹಾಸ.

ಆಪರೇಷನ್ ಕಮಲದ ಬಳಿಕ ಅಧಿಕಾರಕ್ಕೆ ಬಂದ ಬಿಜೆಪಿಯ ಕಾನೂನಿನ ಪ್ರಕಾರ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಲೇಬಾರದಿತ್ತು. ಆದರೆ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡದಿದ್ದರೆ, ಆಗಬಹುದಾದ ಸಮಸ್ಯೆಯನ್ನು ನೋಡಿ ಅವರಿಗಾಗಿ ೭೫ವರ್ಷವಾದವರಿಗೆ ಅಧಿಕಾರವಿಲ್ಲ ಎನ್ನುವ ಆಂತರಿಕ ಕಾನೂನನ್ನು ಸಡಿಲಗೊಳಿಸಿದರು. ಅದಾದ ಬಳಿಕ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡುವ ಸಮಯದಲ್ಲಿ, ಪಕ್ಷದ ವರಿಷ್ಠರಿಗೂ ಹಾಗೂ ಯಡಿಯೂರಪ್ಪ ನಡುವೆ ಕೆಲಕಾಲ ‘ಆಂತರಿಕ ಸಂಘರ್ಷ’ ನಡೆಯಿತು. ಆದರೆ ಈ ಸಂಘರ್ಷದಲ್ಲಿ ಒಂದು ಹಂತದಲ್ಲಿ, ವರಿಷ್ಠರು ಮೌನಕ್ಕೆ ಶರಣಾಗಬೇಕಾಗಿ ಬಂತು.

ಅದಕ್ಕೆ ಕಾರಣ ಸರಳ, ಚುನಾವಣಾ ಸಮಯದಲ್ಲಿ ಬಿಜೆಪಿಯ ‘ಫೇಸ್’ ಆಗಿ ಬಳಸಿಕೊಳ್ಳಬಹುದಾಗಿರುವ ಏಕೈಕ ಮುಖವೆಂದರೆ, ಅದು ಯಡಿಯೂ ರಪ್ಪ ಅವರು ಮಾತ್ರ ಎನ್ನುವುದು ಕೇಂದ್ರದ ವರಿಷ್ಠರಿಗೆ ಸ್ಪಷ್ಟವಾಗಿತ್ತು. ಈ ನಾಯಕರಿಗೆ ಪರ್ಯಾಯ ನಾಯಕತ್ವವನ್ನು ಬೆಳೆಸಬೇಕು ಎನ್ನುವ ನಿಟ್ಟಿನಲ್ಲಿ ಪ್ರತಿಬಾರಿಯೂ ಪಕ್ಷ ಪ್ರಯತ್ನಿಸಿ ದಾಗಲೆಲ್ಲ ವಿಫಲವಾಗಿದೆ. ಇದರೊಂದಿಗೆ ಯಡಿಯೂರಪ್ಪ ಅವರು ಮುಂದಿನ ಬಾರಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎನ್ನುವ ಸಂದೇಶ ನೀಡುತ್ತಿದ್ದಂತೆ ಬಿಜೆಪಿಗೆ ಇನ್ನಷ್ಟು ಸಂಕಷ್ಟ ಎದುರಾಗಿತ್ತು. ಯಡಿಯೂರಪ್ಪ ಅವರು ನಿಲ್ಲದಿದ್ದರೆ, ಯಾರ ಮುಖ ನೋಡಿ ಮತ ಹಾಕಬೇಕು ಎನ್ನುವ ಜಿಜ್ಞಾಸೆ ಹಲವರಲ್ಲಿ ಕಾಡಿತ್ತು. ಈ ಕಾರಣಕ್ಕಾಗಿಯೇ ಯಡಿಯೂರಪ್ಪ ಅವರು ಚುನಾವಣಾ ರಾಜಕೀಯದಿಂದ ಹಿಂದೆ ಸರಿದರೂ, ಪಕ್ಷ ರಾಜಕೀಯದಲ್ಲಿ ಸಕ್ರಿಯವಾಗಿರುವಂತೆ ನೋಡಿಕೊಳ್ಳುವ ಪ್ರಯತ್ನವನ್ನು ಬಿಜೆಪಿ ವರಿಷ್ಠರು ಮಾಡಿದ್ದಾರೆ.

ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರ ಸಾಲು ಸಾಲು ರಾಜ್ಯ ಪ್ರವಾಸ ಮಾಡಿದರೂ, ಆಗದೇ ಇದ್ದ ‘ಟೇಕ್ ಆಫ್’ ಯಡಿಯೂರಪ್ಪ ಅವರಿಂದ ಆಗುವ ವಿಶ್ವಾಸ ನಾಯಕರಿದೆ. ಈ ಕಾರಣಕ್ಕಾಗಿಯೇ, ಶಿವಮೊಗ್ಗ ವಿಮಾನ ನಿಲ್ದಾಣದ ಉದ್ಘಾಟನೆಯ ನೆಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೇ ಯಡಿಯೂರಪ್ಪ ಅವರ ಜನ್ಮದಿನಕ್ಕೆ ಆಗಮಿಸಿದ್ದರು.

ಈ ಸಮಾವೇಶದಲ್ಲಿ ಸೂಕ್ಷ್ಮವಾಗಿ ಗಮನಿಸಿದರೆ, ಯಡಿಯೂರಪ್ಪ ಅವರನ್ನು ವಿಶ್ವಾಸಕ್ಕೆ ತಗೆದುಕೊಳ್ಳುವುದೊಂದೇ ಮೋದಿ ಹಾಗೂ ಬಿಜೆಪಿ ವರಿಷ್ಠರ ಮುಂದಿರುವ ಗುರಿಯಾಗಿತ್ತು ಎನ್ನುವುದನ್ನು ಗ್ರಹಿಸಬಹುದಾಗಿದೆ. ಯಡಿಯೂರಪ್ಪ ಅವರಾಗಲಿ, ದೇವೇಗೌಡರಾಗಲಿ ಆಡಳಿತ ಪಕ್ಷದಲ್ಲಿ ಕೂತಿದ್ದಕ್ಕಿಂತ ಹೆಚ್ಚು ಪ್ರತಿಪಕ್ಷದಲ್ಲಿ ಕೂತಿದ್ದೆ ಹೆಚ್ಚು. ನೀರಾವರಿ, ಶಿಕ್ಷಣ, ಕಾರ್ಮಿಕ, ರೈತ ಪರವಾಗಿ ದಶಕಗಳಿಂದ ಹೋರಾಟ ಮಾಡಿಕೊಂಡು ಬಂದಿರುವ ಈ ನಾಯಕರಿಗೆ ಜನರ ನಾಡಿ ಮಿಡಿತದ ಸ್ಪಷ್ಟ ಚಿತ್ರಣವಿದೆ. ಪಕ್ಷ ಸಂಘಟನೆಯಲ್ಲಿಯೂ ಗ್ರಾಮ ಪಂಚಾಯಿತಿ ಮಟ್ಟದಿಂದ ಲೋಕಸಭಾ ಚುನಾವಣೆಯ ತನಕ ಗಂಭೀರವಾಗಿ ಪರಿಗಣಿಸುವುದೇ ಈ ಇಳಿವಯಸ್ಸಿನಲ್ಲಿಯೂ ಈ ಇಬ್ಬರ ‘ಅನಿವಾರ್ಯ’ ಪಕ್ಷಕ್ಕೆ ಕಾಡಲು ಪ್ರಮುಖ ಕಾರಣವೆಂದರೆ ತಪ್ಪಾಗುವುದಿಲ್ಲ.

ಹಾಗೇ ನೋಡಿದರೆ ಪ್ರಾದೇಶಿಕ ಪಕ್ಷಗಳಿಗಿಂತ ರಾಷ್ಟ್ರೀಯ ಪಕ್ಷಗಳಲ್ಲಿ ಈ ರೀತಿ ಮಾಸ್ ಲೀಡರ್‌ಗಳಾಗಿ ಬೆಳೆಯುವುದಕ್ಕೆ ಹೆಚ್ಚು ಅವಕಾಶ ವಿರುವುದಿಲ್ಲ. ‘ಹೈಕಮಾಂಡ್ ಸಂಸ್ಕೃತಿ’ಯ ಬಂದಾಗ ರಾಷ್ಟ್ರೀಯ ನಾಯಕರಿಗೆ ‘ಸಲಾಂ’ ಎನ್ನಬೇಕಾದ ಪರಿಸ್ಥಿತಿ ಇರುತ್ತದೆ. ಆದರೆ ಈ ಮಧ್ಯೆ, ರಾಷ್ಟ್ರ ಮಟ್ಟದಲ್ಲಿ ತಮ್ಮ ವರಿಷ್ಠರಿಗೆ ಒಪ್ಪಿಸುವ, ಸವಾಲುಗಳನ್ನು ಎದುರಿಸುವುದು ಸುಲಭವಲ್ಲ. ಈ ರೀತಿಯ ಮಾಸ್ ವ್ಯಕ್ವಿತ್ವವನ್ನು ಹೊಂದಿದ್ದರೂ, ಚುನಾವಣಾ ರಾಜಕೀಯದಿಂದ ಹಿಂದೆ ಸರಿದಿರುವ ಯಡಿಯೂರಪ್ಪ ಅವರನ್ನು ಚುನಾವಣೆಯಲ್ಲಿ ವರಿಷ್ಠರು ಯಾವ ರೀತಿ ಬಳಸಿಕೊಳ್ಳುತ್ತಾರೆ? ಅದಕ್ಕೆ
ಯಡಿಯೂರಪ್ಪ ‘ಬೇಡಿಕೆ’ಗಳೇನು ಎನ್ನುವುದೇ ಈಗಿರುವ ಕುತೂಹಲವಾಗಿದೆ.