ದಾಸ್ ಕ್ಯಾಪಿಟಲ್
ಟಿ.ದೇವಿದಾಸ್, ಬರಹಗಾರ, ಶಿಕ್ಷಕ
ಸ್ವಾತಂತ್ರ್ಯೋತ್ತರ ಭಾರತದ ಪ್ರಚಲಿತ ವಿದ್ಯಮಾನಗಳು ಸಾರುವ ಅನೇಕ ಸಮಸ್ಯೆಗಳಲ್ಲಿ ನಿರುದ್ಯೋಗವೂ ಒಂದು. ಅದರಲ್ಲೂ ‘ಮೋದಿಯ ಭಾರತ’ದಲ್ಲಿ ಎಂದು ಆರೋಪಿಸುತ್ತ ನಿರುದ್ಯೋಗ ಮಿತಿಮೀರಿ ಹೋಗಿದೆ ಅಂತ ಬೊಬ್ಬಿಡುವವರಿಗೆ ಭಾರತದಲ್ಲಿ ಕಡಿಮೆಯೇನಿಲ್ಲ.
ದೇಶದ ಯಾವುದೇ ಮೂಲೆಯಲ್ಲಿ ಏನೇ ಆದರೂ ಮೋದಿ ಕಾರಣವೆಂದು ಗಂಟಲು ನರ ಹರಿದುಹೋಗುವಷ್ಟು ಹುಯಿಲಿಡು ವವರಿಗೆ ಭಾರತದಂಥ ದೊಡ್ಡಪ್ರಮಾಣದ ಜನಸಂಖ್ಯೆಯ ಬಾಹುಳ್ಯವಿರುವ ರಾಷ್ಟ್ರಕ್ಕೆ ನಿರುದ್ಯೋಗವೆಂಬುದು ಸಾರ್ವಕಾಲಿಕ
ಸಮಸ್ಯೆಯಾಗೇ ಪ್ರಭುತ್ವವನ್ನು ಕಾಡಿದೆ, ಕಾಡುತ್ತದೆ ಎಂಬುದು ಅಷ್ಟು ಸುಲಭವಾಗಿ ಅರ್ಥವಾಗುವುದಿಲ್ಲ.
ಅರ್ಥವಾದರೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸ್ವಾತಂತ್ರ್ಯಾ ನಂತರದಲ್ಲಿ ಎಲ್ಲಾ ಬಗೆಯ ಸಿದ್ಧತೆಗಳೊಂದಿಗೆ ಆಯೋಜಿಸಿ ಕೊಂಡು ಬಂದ ಪಂಚವಾರ್ಷಿಕ ಯೋಜನೆಗಳಲ್ಲಿ ನಿರುದ್ಯೋಗ ಸಮಸ್ಯೆಗೆ ಶಿಕ್ಷಣ, ಕೃಷಿ, ಮೂಲಭೂತ ಸೌಕರ್ಯಗಳ ಒದಗಿಸು ವಿಕೆಗೆ ಕೊಟ್ಟಷ್ಟೇ ಪ್ರಾಧಾನ್ಯವನ್ನು ನೀಡುತ್ತಾ ಬಂದಿದ್ದರೂ ವರ್ಷದಿಂದ ವರ್ಷಕ್ಕೆ ಏರುತ್ತಿರುವ ಜನಸಂಖ್ಯೆಗೆ ಪೂರ್ಣಪ್ರಮಾಣ ದಲ್ಲಿ ಉದ್ಯೋಗವನ್ನು ಒದಗಿಸುವುದು ಬಹುಕಷ್ಟವಾದ ದೊಡ್ಡಕಾರ್ಯವೇ ಅಗುತ್ತಿದೆ. ಇದಕ್ಕೆ ಕಾರಣಗಳು ಹಲವು ನೆಲೆಗಳಲ್ಲಿ ಅಡಕವಾಗಿವೆ.
ಯಾರು ಏನೇ ಅಂದರೂ ಜನತೆಯ ಬದುಕಿನ ಭವಿಷ್ಯದ ಕುರಿತಾದ ಸಮಗ್ರ ದೂರದೃಷ್ಟಿಯುಳ್ಳ ಯೋಜನೆಯನ್ನು ರೂಪಿಸು ವಲ್ಲಿ ನಿಧಾನಗತಿಯೇ ಭಾರತದಲ್ಲಿ ಎದ್ದು ಕಾಣುತ್ತದೆ. ಪರಂಪರೆ ಮತ್ತು ಆಧುನಿಕತೆಯ ಮುಖಾಮುಖಿಯಲ್ಲಿ ಎಲ್ಲವನ್ನೂ ಎದುರಿಸಲು ಸಜ್ಜಾದ ಸುಸಂಘಟಿತ ಸುವ್ಯವಸ್ಥೆಯೊಂದು ಕಾಣಲು ಇನ್ನೂ ನಮಗೆ ಸಾಧ್ಯವಾಗಲೇ ಇಲ್ಲ.
ಮೈನಾರಿಟಿ, ಹಲವು ಬಗೆಯ ಜಾತಿ – ಉಪಜಾತಿ – ಮತ – ಪಂಥ – ಪಂಗಡಗಳ ಮೀಸಲಾತಿಯ ಮೂಸೆಯಲ್ಲಿ ಪುಕ್ಕಟೆಯಾಗಿ ಪಡೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಾ ಹೋದರೆ ನಿರುದ್ಯೋಗ ಕಾಡದಿರಲು ಹೇಗೆ ಸಾಧ್ಯ? ಸಂಪತ್ತೆಲ್ಲ ದುಡಿವವರಿಗಲ್ಲ, ದುಡಿಯದವರಿಗೇ ಕೊಡಲು ಸೋರಿಹೋಗುತ್ತಿದೆ!
ಕೆಲವು ತಿಂಗಳುಗಳ ಹಿಂದೆ ಒಂದು ಗಾಳಿಸುದ್ದಿ ಸೋಷಿಯಲ್ ಮೀಡಿಯಾಗಳಲ್ಲಿ ಓಡಾಡುತ್ತಿತ್ತು. ಅದೇನೆಂದರೆ, ನಿವೃತ್ತಿಯ ವಯಸ್ಸನ್ನು ಎಪ್ಪತ್ತಕ್ಕೆ ಏರಿಸುವ ಪ್ಲಾನಿಂಗ್ ಕೇಂದ್ರ ಸರಕಾರದ ಆಲೋಚನೆಯಲ್ಲಿದೆಯೆಂದು. ಇದು ಎಷ್ಟರಮಟ್ಟಿಗೆ ನಂಬಲರ್ಹವಾದ ಸತ್ಯವಾದ ವಿಚಾರವೋ ಗೊತ್ತಿಲ್ಲ. ನಾನಂತೂ ನಂಬಿಲ್ಲ, ನಂಬುವುದೂ ಇಲ್ಲ. ಆಕಸ್ಮಾತ್ ಇದು ಸತ್ಯವಾಗಿ ನಿವೃತ್ತಿಯ ವಯಸ್ಸನ್ನು ಏರಿಕೆ ಮಾಡಿದ್ದೇ ಆದರೆ ಖಂಡಿತವಾಗಿಯೂ ವಿರೋಧಿಸುತ್ತೇನೆ.
ಮತ್ತದು ವಿರೋಧಾರ್ಹ ಕೂಡ. ಆ ವಿಚಾರ ಒತ್ತಟ್ಟಿಗಿರಲಿ. ಮಜಾ ಏನೆಂದರೆ, ಹೀಗೆ ಹೊರಬಿದ್ದ ಸುಳ್ಳು ಗಾಳಿಸುದ್ದಿಯಲ್ಲಿ ನಿವೃತ್ತಿಯ ವಯಸ್ಸಿನ ಏರಿಕೆಯ ಹಿಂದೆ ಇರುವ ಕಾರಣಗಳು ಕೂಡ ಅದೇ ಗಾಳಿಸುದ್ದಿಯಲ್ಲಿತ್ತು. ಅದೇನೆಂದರೆ, ಅರವತ್ತಕ್ಕೆ ನಿವೃತ್ತಿಯನ್ನು ಪಡೆದ, ಅನಂತರದಲ್ಲೂ ನೀಡುವ ಮಾಸಿಕ ನಿವೃತ್ತಿ ವೇತನವನ್ನು ಕೊಡುವ ಬದಲು ನಿವೃತ್ತಿಯ ವಯಸ್ಸನ್ನೇ ಏರಿಸಿದರೆ ಎರಡು ಪ್ರಯೋಜನವಿದೆಯೆಂಬುದು. ಒಂದು; ನೇಮಕಗೊಂಡ ಹೊಸಬರಿಗೆ ಸಂಬಳವನ್ನು ಕೊಡುವುದು ತಪ್ಪುತ್ತದೆ. ಎರಡು; ಹೊರೆಯ ರೂಪದಲ್ಲಿ ಕಾಡುವ ಮಾಸಿಕ ನಿವೃತ್ತ ವೇತನ ಕೊಡುವುದೂ ತಪ್ಪುತ್ತದೆ. ಈ ಆಲೋಚನೆಯಲ್ಲಿ ಸತ್ಯಾಂಶ ವಿದೆಯಾದರೂ ಬೃಹತ್ ಪ್ರಮಾಣದಲ್ಲಿ ಏರುತ್ತಿರುವ ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸಲು ಇದರಿಂದ ಸಾಧ್ಯವಿಲ್ಲ.
ಅಥವಾ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಇಂಥ ಆಲೋಚನೆಗಳು ಹುಟ್ಟಿಕೊಂಡಿದ್ದೇ ಆದರೂ ಅದೂ ಯಶಸ್ಸೂ ಆಗಲಾರದು. ಕಲಿತು ಉದ್ಯೋಗವಿಲ್ಲದೆ ಯುವಜನಾಂಗ ವಾಮಮಾರ್ಗದಲ್ಲಿ ಅನಾಚಾರ, ಭ್ರಷ್ಟಾಚಾರ ಮಾಡಿ ಬದುಕನ್ನು ನಡೆಸುವಂಥ ದಂಧೆಗಳು ಇನ್ನಷ್ಟು ಮಿತಿಮೀರಿ ಹೆಚ್ಚಾದೀತು!
ಕೊಲೆ, ದರೋಡೆ, ಖೂನಿ, ಕಳ್ಳತನ ಹದ್ದು ಮೀರೀತು! ಈಗಾಗಲೇ ಇದರ ಭೀಕರ ಪರಿಣಾವನ್ನು ದೇಶ ಎದುರಿಸುತ್ತಿದೆ. ಇದರ ಬದಲು ಹೀಗೆ ಮಾಡಬಹುದು: 58ಕ್ಕೆ ನಿವೃತ್ತಿಯ ವಯಸ್ಸನ್ನು ನಿಗದಿಪಡಿಸುವುದು. ಯಾವುದೇ ಕಾರಣಕ್ಕೂ ವೃತ್ತಿಯನ್ನು ಮುಂದುವರಿಸಲು ಅವಕಾಶವನ್ನು ನೀಡದೆ, ಪೆನ್ಷನ್, ಗ್ರ್ಯಾಚ್ಯುಟಿ, ಉಳಿತಾಯ ರಜೆಗಳ ಹಣವನ್ನು ನಿವೃತ್ತಿಯ ಮೂರು ತಿಂಗಳೊಳಗೆ ಪಾವತಿಸುವುದು.
ನಿವೃತ್ತಿಗೆ ಆರು ತಿಂಗಳ ಮುಂಚೆಯೇ ಹೊಸ ಅಭ್ಯರ್ಥಿಯನ್ನು ದಿನಗೂಲಿ ಸಂಬಳದಲ್ಲಿ ನೇಮಕ ಮಾಡಿಕೊಳ್ಳುವುದು. ಆರು
ತಿಂಗಳಾದ ಮೇಲೆ ಕೆಲಸವನ್ನು ಅಧಿಕೃತಗೊಳಿಸಿ ಸಂಬಳವನ್ನು ಸರಕಾರದ ನೀತಿಯಂತೆ ಹೊಸ ಅಭ್ಯರ್ಥಿಗೆ ಅಳವಡಿಸುವುದು. ನಿವೃತ್ತರಾದವರಿಗೆ ನಿವೃತ್ತಿ ವೇತನವನ್ನು ನೀಡುವ ಬದಲು ಸರಕಾರಿ ಸವಲತ್ತು ಸೌಲಭ್ಯಗಳನ್ನು ಜನಪ್ರತಿನಿಧಿಗಳಿಗೆ ನೀಡಿದ ನ್ವಯ ಒದಗಿಸುವುದು. ಶಿಕ್ಷಕರಿಗೆ ಮಾತ್ರ ಅವರ ಗುರುತರವಾದ ದೇಶಸೇವೆಯನ್ನು ಗೌರವಿಸಿ ನಿವೃತ್ತಿಯಾದ ಮೇಲೆ ಕೇವಲ ಎರಡು ವರ್ಷಗಳವರೆಗೆ ನಿವೃತ್ತಿ ವೇತನ ನೀಡುವುದು.
ಎರಡು ವರ್ಷದ ಅನಂತರ ಕೇವಲ ಸರಕಾರಿ ಸವಲತ್ತುಗಳನ್ನು ನೀಡುವುದು. ಈ ನಿಯಮವನ್ನು ಎಲ್ಲಾ ಬಗೆಯ ಖಾಸಗಿ ಸಂಘ ಸಂಸ್ಥೆಗಳಲ್ಲೂ ಅಳವಡಿಸುವಂತೆ ಕಾಯಿದೆಯನ್ನು ತರುವುದು. ಕಾರಣ, ನಿರುದ್ಯೋಗ ಸಮಸ್ಯೆಯ ನಿವಾರಣೆ ಮತ್ತು ನಿಯಂತ್ರಣದಲ್ಲಿ ದೇಶದ ಪ್ರತಿಯೊಂದು ಸಂಘ, ಸಂಸ್ಥೆ, ನಾಗರಿಕರ ಕರ್ತವ್ಯವೂ ಇದೆ. ಈ ಹಿನ್ನೆಲೆಯಲ್ಲಿ ಖಾಸಗಿಯವರು ಕೂಡ ಸರಕಾರದ ಜತೆಯಲ್ಲಿ ಕೈಜೋಡಿಸುವುದು ಮಹತ್ವದ್ದಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳೂ (ಶಾಲಾ, ಕಾಲೇಜು, ವಿಶ್ವವಿದ್ಯಾಲಯ
ಗಳು, ಇನ್ನಿತರ ಖಾಸಗಿ ಸಂಘ ಸಂಸ್ಥೆಗಳೂ ಸೇರಿದಂತೆ) ಕೂಡ ಸರಕಾರದ ಮಾದರಿಯಲ್ಲೇ Salary system ಅನ್ನು ಅನುಸರಿಸು ವಂತೆ ಕಾಯಿದೆಯನ್ನು ಜಾರಿಗೆ ತರುವುದು.
ಈಗಿರುವಂತೆ ತಮಗೆ ಬೇಕಾದ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಆಯ್ಕೆ ಸ್ವಾತಂತ್ರ್ಯವನ್ನು ನೀಡಿ ಸಂಬಳದ
ವಿಚಾರವಾಗಿ ಮಾತ್ರ ಸರಕಾರದ ನಿಯಮವನ್ನು ಅನುಸರಿಸುವಂತೆ ಕಾಯಿದೆಯನ್ನು ತರಬೇಕು. ಫೀಸನ್ನಾಗಲಿ, ಯಾವುದೇ ಆದಾಯದ ಮೂಲವನ್ನಾಗಲಿ ಸರಕಾರದ ನಿಯಮದ ಆಧಾರದ ಸಂಗ್ರಹಿಸಲು ಖಾಸಗಿಯವರಿಗೆ ಸ್ವಾತಂತ್ರ್ಯವನ್ನು ನೀಡುವುದು ಮುಖ್ಯ. ಆವಾಗಲೂ ಈ ನಿಯಮವನ್ನು ವಿರೋಧಿಸುವುದಕ್ಕೆ ಅವಕಾಶವಿರದಂತೆ ಆ ಕಾಯಿದೆ ರಚನೆಯಾಗಿ ಜಾರಿಯಾಗಬೇಕು. ಸರಕಾರ ಅಳವಡಿಸಿದ ರೀತಿಯಲ್ಲಿ ಸಂಬಳ ಕೊಡಲು ಸಾಧ್ಯವಾಗದ ಶಿಕ್ಷಣ ಸಂಸ್ಥೆಗಳು ಒಂದೇ ಮುಚ್ಚಬೇಕು, ಇಲ್ಲವಾದಲ್ಲಿ
ಸರಕಾರದ ವಶ ಮಾಡಬೇಕು.
ಇಲ್ಲವಾದಲ್ಲಿ ಹತ್ತಿರದ ಬೇರೆ ಖಾಸಗಿ ಶಿಕ್ಷಣ ಸಂಸ್ಥೆಯೊಂದಿಗೆ ಕೂಡಿಕೊಳ್ಳಬೇಕು. ಇದೂ ಸಾಧ್ಯವಾಗದಿದ್ದಲ್ಲಿ ಅದೇ ಶಿಕ್ಷಣ ಸಂಸ್ಥೆ ಯನ್ನು ಲೀಸಿಗಾಗಲೀ ಕ್ರಯಕ್ಕಾಗಲೀ ಕೊಡುವುದಕ್ಕೆ ಅವಕಾಶವಿಡಬೇಕು. ಆದರೆ ಯಾವುದೇ ಕಾರಣಕ್ಕೂ ದಾಖಲಾದ ವಿದ್ಯಾರ್ಥಿಗಳ ಓದಿಗೆ, ಅಥವಾ ಉದ್ಯೋಗಿಗಳ ಕೆಲಸಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು.
ಇನ್ನು ರೈತರಿಗೆ ಅಗತ್ಯವೂ ಆವಶ್ಯಕವೂ ಆದ ಮೂಲಭೂತ ಸೌಕರ್ಯಗಳನ್ನು ಒದಗಿಸಿದರೆ ಕೃಷಿಯಾಧಾರಿತ ಭಾರತದಲ್ಲಿ
ನಿರುದ್ಯೋಗ ಸಮಸ್ಯೆಯನ್ನು ಕೃಷಿಯ ಮೂಲಕವೇ ಬಗೆಹರಿಸಲು ಸಾಧ್ಯವಿದೆ. ರೈತರು ಬೆಳೆದ ಬೆಳೆಯನ್ನು ಮಧ್ಯವರ್ತಿಗಳ ಮೂಲಕ ಮಾರ್ಕೆಟಿಂಗ್ ಮಾಡುವುದನ್ನು ನಿಲ್ಲಿಸಬೇಕು. ಒಂದೇ, ಸರಕಾರವೇ ಆ ಬೆಳೆಯನ್ನು ಉತ್ತಮ ಬೆಂಬಲ ಬೆಲೆಗೆ ನಿಯತ ವಾಗಿ ಖರೀದಿಸಬೇಕು. ಅವುಗಳನ್ನೇ ಸರಕಾರಿ ಪ್ರಾಯೋಜಿತ ಮಾರ್ಕೆಟ್ಟಲ್ಲಿ ಕಡಿಮೆ ಲಾಭಾಂಶವನ್ನು ಹೊಂದುವಂತೆ ಜನರಿಗೆ ಪೂರೈಸಬೇಕು.
ಬಂದ ಲಾಭಾಂಶವನ್ನು ರೈತರ ಕಲ್ಯಾಣನಿಧಿಗೆ ತೊಡಗಿಸುವುದರಿಂದ ಪ್ರತಿಕೂಲ ಪರಿಸ್ಥಿತಿಗಳು ಎದುರಾದಾಗ ವಿನಿಯೋಗಿಸಲು
ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ ಒನ್ ಲೈನ್ ಮೂಲಕ ನೇರವಾಗಿ ರೈತರೇ ತಾವು ಬೆಳೆದ ಬೆಳೆಯನ್ನು ಮಾರ್ಕೆಟಿಂಗ್ ಮಾಡಲು ಬೇಕಾದ ತರಬೇತಿಯನ್ನು ಸರಕಾರ ರೈತರಿಗೆ ಒದಗಿಸಿದರೆ ಕಮೀಷನ್ ಹಾವಳಿಯನ್ನು ತಪ್ಪಿಸಬಹುದು. ಕೃಷಿರಂಗವನ್ನು ಜೀವ ಪರ ದೃಷ್ಟಿಯಿಂದ ನೋಡದೆ ಹೋದರೆ ಆಹಾರದ ಕೊರತೆಯನ್ನು ಭವಿಷ್ಯದಲ್ಲಿ ದೊಡ್ದಮಟ್ಟದಲ್ಲಿ ಎದುರಿಸ ಬೇಕಾದೀತು!
ನಿರುದ್ಯೋಗಕ್ಕೆ ಸಂಬಂಧಿಸಿದ ಎಲ್ಲಾ ಬಗೆಯ ಸಮಸ್ಯೆಗಳನ್ನೂ ಕೇಂದ್ರ ಸರಕಾರವೇ ನಿವಾರಿಸಿಬೇಕೆಂಬ ವರಸೆ ರಾಜ್ಯ ಸರಕಾರ ಗಳಿಗೆ ಇರಬಾರದು. ಅದು ಸಾಧುವೂ ಅಲ್ಲ, ಸಾಧ್ಯವೂ ಇಲ್ಲ. ರಾಜ್ಯ ಸರಕಾರಗಳಿಗೆ ಈ ವಿಚಾರದಲ್ಲಿ ಸ್ವಾತಂತ್ರ್ಯವನ್ನು ಕೇಂದ್ರವು ನೀಡಬೇಕು. ತನ್ನ ಸ್ವಾತಂತ್ರ್ಯದ ವಿನಿಯೋಗತ್ವದಲ್ಲಿ ರಾಜ್ಯ ಸರಕಾರಗಳು ಸ್ವಂತಿಕೆಯನ್ನೂ, ಸಾಮರ್ಥ್ಯವನ್ನೂ
ಉಳಿಸಿಕೊಳ್ಳಬೇಕು. ಉಳಿದ ವಿಚಾರಗಳಲ್ಲಿ ರಾಜ್ಯಗಳ ಸಾರ್ವಭೌಮತೆಗೆ ಧಕ್ಕೆ ಬರುತ್ತದೆಂದು ಬೊಬ್ಬಿಡುವ ರಾಜ್ಯ ಸರಕಾರಗಳಿಗೆ ನಿರುದ್ಯೋಗ ವಿಚಾರದಲ್ಲಿ ಮಾತ್ರ ಸಾರ್ವಭೌಮತೆಯನ್ನು, ಅಸ್ಮಿತೆಯನ್ನು ಉಳಿಸಿಕೊಳ್ಳಬೇಕೆಂದು ಯಾಕೆ ಅನಿಸುತ್ತಿಲ್ಲವೇನೋ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ!
ಉಚಿತ ಅಕ್ಕಿ, ಗೋಧಿಯನ್ನು ನೀಡಿದರೆ ಜನ ಸೋಮಾರಿಗಳಾಗದೆ ಇನ್ನೇನಾಗಲು ಸಾಧ್ಯ? ಜನತೆಯ ಶ್ರಮಸಂಸ್ಕೃತಿಯನ್ನು ಕೊಂದು ಸರಕಾರಗಳು ಸಾಧಿಸುವುದಾದರೂ ಏನನ್ನು? ಇಂದಿರಾ ಕ್ಯಾಂಟೀನ್ ಮೂಲಕ ಈ ಹಿಂದಿನ ಕರ್ನಾಟಕ ಸರಕಾರ ಸಾಧಿಸಿದ್ದಾದರೂ ಏನು? ಗೊತ್ತಿಲ್ಲ. ಮತ್ತೊಂದಿಷ್ಟು ಭ್ರಷ್ಟಾಚಾರಕ್ಕೆ ಇಂಥ ಯೋಜನೆಗಳು ಆಸ್ಪದವನ್ನೀಯುತ್ತದೆ ಎಂದು ಮಾಧ್ಯಮಗಳಲ್ಲಿ ಆಧಾರ ಸಹಿತ ಪ್ರಕಟವಾಗುವ ವಿಚಾರಗಳನ್ನು ಓದಿದ ಮೇಲೆಯೇ ಸರಕಾರಗಳು ಯಾರ ಯಾವ ಹಿತವನ್ನು
ಕಾಯುತ್ತದೆ ಎಂಬುದರ ಬಗ್ಗೆಯೇ ಅನುಮಾನ ಹುಟ್ಟುತ್ತದೆ.
ಸರಕಾರದ ಕಾಳಜಿ ಮತ್ತು ಎಚ್ಚರ ಜನರ ಬಗ್ಗೆಯೇ ಇರಬೇಕು ಎಂಬುದು ಪ್ರಜಾಪ್ರಭುತ್ವದ ಮೂಲಸ್ರೋತವೂ ಆಗಿದೆ ಯೆಂಬು ದನ್ನೇ ಸರಕಾರಗಳು ಮರೆತು ವ್ಯವಹರಿಸುತ್ತವೆ. ಯಾವ ನೈತಿಕತೆಯೂ ಇಲ್ಲದ ಬಹುಪಾಲು ಜನಪ್ರತಿನಿಧಿಗಳೇ ತುಂಬಿರುವ ಇಂದಿನ ಸರಕಾರಗಳು ಜಾರಿಗೆ ತರುವ ಯೋಜನೆಗಳು ಮುಖ್ಯವಾಗಿ ಕಮಿಷನ್ ಆಧಾರಿತವಾಗಿರುತ್ತದೆ. ಸರಕಾರಕ್ಕೆ ಆದಾಯ ಬರುವುದು ಜನರಿಂದಲೇ.
ಜನರು ಕೊಡುವ ತೆರಿಗೆಯಿಂದಲೇ. ಅಭಿವೃದ್ಧಿ ಮತ್ತು ಪ್ರಗತಿಯ ವಿಚಾರವಾಗಿ ಜ್ಯೇಷ್ಠತೆ, ಅಗತ್ಯತೆ ಮತ್ತು ಅನಿವಾರ್ಯತೆ ಯನ್ನು ಆಧರಿಸಿ ತೆರಿಗೆಯಿಂದ ಸಂಚಯವಾಗುವ ಹಣವನ್ನು ವಿನಿಯೋಗಿಸಿದರೆ ಕಮಿಷನ್ ಮೂಲಕ ನಡೆಯುವ ಲಂಚಾವ ತಾರ ವನ್ನು ತಡೆಯಲು ಸಾಧ್ಯವಿದೆ. ಲಂಚಗುಳಿತನವನ್ನು ನಿಯಂತ್ರಿಸುವ ಕಾರ್ಯ ಮೊದಲು ವಿಧಾನಸೌಧದಿಂದಲೇ ಆರಂಭ ವಾಗಬೇಕು. ಇದು ಅಗತ್ಯವಾದ ಬಹುದೊಡ್ದ ಸ್ವಚ್ಛತಾ ಅಭಿಯಾನ. ಆದಷ್ಟೂ ಬೇಗ ಈ ಅಭಿಯಾನ ಆಗಬೇಕಿದೆ.
ಒಂದು ಜ್ವಲಂತ ನಿದರ್ಶನವನ್ನು ನೋಡಿ: ಶಾಲೆ ಕಾಲೇಜು ವಿವಿಗಳಲ್ಲಿ ನಿರುದ್ಯೋಗದ ಸಮಸ್ಯೆಯನ್ನು ಕುರಿತು, ಅದರ
ಕಾರಣಗಳನ್ನು ಕುರಿತು, ನಿಯಂತ್ರಣ ಮತ್ತು ಪರಿಹಾರವನ್ನು ಕುರಿತು ಮಕ್ಕಳಿಗೆ ಪ್ರಬಂಧವನ್ನು ಬರೆಸುತ್ತೇವೆ. ಬೋಧನೆಯನ್ನೂ ಮಾಡುತ್ತೇವೆ. ಪರೀಕ್ಷೆಯಲ್ಲೂ ಪ್ರಬಂಧವನ್ನು ಬರೆಯಲು ಕೇಳುತ್ತೇವೆ. ಹಾಸ್ಯವೇನೆಂದರೆ, ಹಾಗೆ ಬೋಧಿಸುವ ಎಷ್ಟೋ ಬೋಧಕರಿಗೆ ನಿವೃತ್ತಿ ವಯಸ್ಸು ದಾಟಿರುತ್ತದೆ. ಹೊಸಬರಿಗೆ ಅವಕಾಶವನ್ನು ಕೊಡಬೇಕು ಎಂದು ಅಂಥವರಲ್ಲಿ ಯಾರಿಗೂ ಅಷ್ಟು ಸುಲಭವಾಗಿ ಅನಿಸುವುದಿಲ್ಲ.
ನಿವೃತ್ತಿಯ ಅನಂತರವೂ ಇನ್ನಷ್ಟು ವರ್ಷ ಕೆಲಸ ನನಗೇ ಸಿಗಲಿ ಎಂಬ ಮಹದಾಸೆ, ಅತಿಯಾಸೆ, ದುರಾಸೆ ಸ್ವಾರ್ಥವಲ್ಲದೇ ಇನ್ನೇನು? ಕೆಲಸಕ್ಕೆ ಬೇಕಾದ ಅರ್ಹತೆಯಿದ್ದರೂ ಕೆಲಸ ಸಿಗದೇ ಅವಕಾಶ ವಂಚಿತವಾಗುವುದು ಈ ನೆಲೆಯ! ಪ್ರತಿಯೊಂದು ಉದ್ಯೋಗವನ್ನೂ ನೀಡುವಲ್ಲಿ ಅನುಭವಕ್ಕೇ ಹೆಚ್ಚು ಆದ್ಯತೆಯನ್ನು ನೀಡುವುದಾದರೆ ಅನುಭವ ಗಳಿಸುವುದಕ್ಕಾದರೂ ಉದ್ಯೋಗವನ್ನು ಕೊಡುವುದು ಅನಿವಾರ್ಯವಾಗಬೇಕಿದೆ. ಒಂದು ಮಾತಂತೂ ಸತ್ಯ. ನಿರುದ್ಯೋಗದ ಬಗ್ಗೆ, ಅದರ ನಿಯಂತ್ರಣ
ಮತ್ತು ಪರಿಹಾರದ ಬಗ್ಗೆ ಎಷ್ಟೇ ಮಾರ್ಗಗಳನ್ನು ಹುಡುಕಿದರೂ, ಸಂಪೂರ್ಣವಾಗಿ ಹತೋಟಿಗೆ ಬರುವುದು ಭಾರತದಂಥ ಬಹು ಜನಸಂಖ್ಯೆಯುಳ್ಳ ದೇಶದಲ್ಲಿ ಅಂದುಕೊಂಡಷ್ಟು ಸುಲಭವಲ್ಲ.
ಆರ್ಥಿಕವಾದ ಪರಿಭಾಷೆಯಲ್ಲಿ ಇದನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿ ವ್ಯಾಖ್ಯಾನ ಮಾಡಿದಷ್ಟೂ ಹೆಚ್ಚುತ್ತಿರುವ ಜನಸಂಖ್ಯೆ ಯಿಂದಾಗಿ ಯಾವತ್ತೂ ನಿರುದ್ಯೋಗ ಸಮಸ್ಯೆ ದೊಡ್ದ ಸವಾಲೇ ಆಗಿರುತ್ತದೆ. ಅದರಲ್ಲೂ ಜಾತಿ – ಉಪಜಾತಿ, ಮತ, ಧರ್ಮ, ಪಂಥ, ಪಂಗಡ ಅಂತ ಎಲ್ಲ ಬಗೆಯಲ್ಲೂ ಮೀಸಲಾತಿ ತುಂಬಿಹೋದರೆ ಸಮಸ್ಯೆಗಳ ಪರಿಹಾರ ಹೇಗೆ ಸಾಧ್ಯ? ಕೆಲಸ ಸಿಗುತ್ತದೆ, ಆದರೆ ಉದ್ಯೋಗ ಸಿಗುವುದಿಲ್ಲ.
ಆದರೆ ಕೆಲಸ ಮಾಡಲು ಯಾರೂ ಸಿದ್ಧರಿರುವುದಿಲ್ಲ. ವೈಟ್ ಕಾಲರ್ ಉದ್ಯೋಗಕ್ಕೇ ಎಲ್ಲರೂ ಹಾತೊರೆಯುತ್ತಾರೆ. ಸಿಗದಿದ್ದಾಗ ಐಚ್ಛಿಕವಾಗಿ ನಿರುದ್ಯೋಗಿ ಗಳಾಬೇಕಾಗುತ್ತದೆ. ಅದಕ್ಕವರು ಸಿದ್ಧರಿರುತ್ತಾರೆ. ಇನ್ನು ಅನೈಚ್ಛಿಕ ನಿರುದ್ಯೋಗದ ಸಮಸ್ಯೆಯೇ ಬೇರೆ. ಅದು ದೇಶಕ್ಕೆ ಯಾವತ್ತೂ ಮಾರಕವೇ ಆಗಿರುತ್ತದೆ. ಸ್ವ-ಉದ್ಯೋಗಕ್ಕೆ ಯುವಜನಾಂಗ ಮುಂದಡಿ ಯಿಡಬೇಕು. ಸರಕಾರ ಇಂಥದ್ದಕ್ಕೆ ಕಡಿಮೆ ಬಡ್ಡಿಯಲ್ಲಿ ಸಾಲವನ್ನು ಪ್ರೋತ್ಸಾಹವನ್ನು ನೀಡಬೇಕು.
1936ರಲ್ಲಿ ಜಾನ್ ಮೇನಾರ್ಡ್ ಕೇನ್ಸ್ ಎಂಬಾತ ಉದ್ಯೋಗ, ಬಡ್ತಿ, ಹಣವನ್ನು ಕುರಿತು ಪ್ರತಿಪಾದಿಸಿದ ಸಿದ್ಧಾಂತ ಜಗತ್ಪ್ರಸಿದ್ಧ ವಾಗಿದೆ. ಅಲ್ಲಿಯವರೆಗೆ ಇದ್ದ ಅಭಿಜಾತ ಸಿದ್ಧಾಂತವನ್ನು ಅದು ಹಿಂದೂಡಿತು. ಉತ್ಪಾದನೆ ಕುಗ್ಗಿದಾಗ ಅವನು ನೀಡಿದ ಸಲಹೆ ಗಳೆಂದರೆ, ಪರಿಣಾಮಕಾರಿ ಬೇಡಿಕೆಯನ್ನು ಏರ್ಪಡಿಸಲು ಕೊಳ್ಳುವ ಶಕ್ತಿಯನ್ನು ಸೃಷ್ಟಿಸುವುದು, ಲೋಕೋಪಯೋಗಿ ಕಾರ್ಯ ಗಳನ್ನು ಸರಕಾರ ಕೈಗೊಳ್ಳುವುದು, ತೆರಿಗೆ ನೀತಿಯಲ್ಲಿ ರಿಯಾಯಿತಿ ತೋರಿಸುವುದು, ಬಡ್ಡಿಯ ದರ ತಗ್ಗಿಸಿ ಧಾರಾಳವಾಗಿ ಸಾಲ ಸೌಲಭ್ಯ ನೀಡುವುದು – ಹೀಗೆ ಹಲವು ಅಂಶಗಳನ್ನು ಅವನು ಹೇಳುತ್ತಾನೆ.
ಹಣದುಬ್ಬರದ ಸಂದರ್ಭವನ್ನು ಹೊರತುಪಡಿಸಿದರೆ ಅವನ ಸಿದ್ಧಾಂತಗಳನ್ನು ಜಗತ್ತು ಅಳವಡಿಸಿಕೊಂಡಿದೆ. ಯಾವುದೇ ಸಿದ್ಧಾಂತಗಳನ್ನು ಅನುಸರಿಸಿದರೂ ಆದಾಯ, ಉತ್ಪಾದನೆ, ಬೇಡಿಕೆ, ಪೂರೈಕೆ ಇವುಗಳ ಸುತ್ತ ಗಿರಕಿ ಹೊಡೆಯುವುದನ್ನು ಬಿಟ್ಟು ಯಾವ ಸಿದ್ಧಾಂತಗಳೂ ರಚನೆಯಾಗುವುದಿಲ್ಲ. ಆದ್ದರಿಂದ ಜನತೆ ದುಡಿಯುವುದನ್ನು ರೂಢಿಸಿಕೊಳ್ಳಬೇಕು.
ನೆನಪಿಡಿ: ದುಡಿದು ಸತ್ತವರಿಗಿಂತ ದುಡಿಯದೇ ಸತ್ತವರೇ ಈ ಜಗತ್ತಿನಲ್ಲಿ ಹೆಚ್ಚು. ವಿದ್ಯಾವಂತ ಮೈಗಳ್ಳರು ದೇಶಕ್ಕೆ ಯಾವತ್ತೂ ನಿರಕ್ಷರಿಗಳಿಗಿಂತ ಅಪಾಯ.
ಕೊನೆಯ ಮಾತು: ಭ್ರಷ್ಟತೆ ಸಮಾಜದ್ದೇ ಸೃಷ್ಟಿಯೆಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಆರ್ಥಿಕ ವಿಕೇಂದ್ರಿಕರಣ ಹೆಚ್ಚು ಬಲವಾಗುತ್ತ ಹೋಗಬೇಕಿದೆ. ಆದ್ದರಿಂದ ಜನರು ಭ್ರಷ್ಟತೆಯನ್ನು ತಮ್ಮೊಳಗೂ ಹುಟ್ಟಗೊಡದಂತೆ ಜಾಗೃತರಾದರೆ ಮಾತ್ರ ಸರಕಾರದ ಭ್ರಷ್ಟಾಚಾರದ ವಿರುದ್ಧ ಪ್ರತಿಭಟಿಸಲು ಸಾಧ್ಯವಿದೆ. ಅರ್ಥವೂ ಇದೆ. ಪ್ರಜಾಪ್ರಭುತ್ವದ ನಿಜವಾದ ಶಕ್ತಿಯಿರುವುದು ಪ್ರಭುತ್ವದಲ್ಲಲ್ಲ, ಪ್ರಜೆಗಳಲ್ಲಿ ಎಂಬುದನ್ನು ಜನರು ಮತ್ತಷ್ಟು ಬಲವಾಗಿ ಸಾಬೀತು ಮಾಡುವ ದಿನಗಳನ್ನು ಭಾರತ ಕಾಣಬೇಕಿದೆ.