ಪ್ರಸ್ತುತ
ತುರುವೇಕೆರೆ ಪ್ರಸಾದ್
ಮೊನ್ನೆ ಸೋಶಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ವೈರಲ್ ಆಗಿತ್ತು. ‘ತಾಲಿಬಾನಿಗಳ ಆಪ್ಘಾನಿಸ್ತಾನದಲ್ಲಿ ಹೆಣ್ಣು ಮಕ್ಕಳು ಬುರ್ಕಾ, ಹಿಜಾಬ್ ನಿಂದ ಈಚೆ ಬರೋದಕ್ಕೆ ಪ್ರತಿಭಟನೆ ಮಾಡ್ತಿದಾರೆ. ಆದ್ರೆ ನಮ್ ಭಾರತದಲ್ಲಿ ಬುರ್ಕಾ, ಹಿಜಾಬ್ ಬೇಕು ಅಂತ ಪ್ರತಿಭಟನೆ ಮಾಡ್ತಿದಾರೆ. ನಮ್ಮ ಪ್ರಗತಿಯ ಚಕ್ರ ಹಿಂದೆ ಸರೀತಾ ಇದೆ’ ಅಂತ.
ಇದು ಅಕ್ಷರಶಃ ನಿಜ ಅನಿಸ್ತು. ಹಾಗೇ ಚಿಕ್ಕಂದಿನಿಂದ ನಾನು ಬೆಳದು ಬಂದ ಸಾಮಾಜಿಕ, ಸಾಂಸ್ಕೃತಿಕ ಪರಿಸರ ವನ್ನು ಒಮ್ಮೆ ಮೆಲುಕು ಹಾಕುತ್ತ ಹೋದೆ. ಅವತ್ತು ಮುಸ್ಲಿಂ ಹುಡುಗರಿಗೇ ಅಂತ ಯಾವ ಮದರಾಸನೂ ಇದ್ದ ನೆನಪಿಲ್ಲ, ನಮ್ಮಂತಹ ಊರುಗಳಲ್ಲಿ ಅವರೂ ನಮ್ಮ ಪಕ್ಕನೋ, ಹಿಂದೋ, ಮುಂದೋ ಕೂತು ಪಾಠ ಕಲೀತಾ ಇದ್ರು. ಅಸಲಿ ಅವರು ಸಾಬರು ಅನ್ನೋಕೆ ಯಾವ ಕುರುಹು, ಲಾಂಛನವನ್ನೂ ಅವರು ಧರಿಸಿ ಬರ‍್ತಾ ಇರ‍್ಲಿಲ್ಲ.
‘ಎಲ್ಲರೊಳಗೊಂದಾಗು ಮಂಕುತಿಮ್ಮ’ ಎಂಬಂತೆ ಅವರು ಮುಕ್ತವಾಗಿ ನಮ್ ಜತೆ ಬೆರೆತುಹೋಗಿದ್ರು; ನಾವೂ ಸಹ. ನಮ್ಮ ಜತೆಯೇ ಅವರು ಶಾಲೆಗಳಲ್ಲಿ ಆಟ ಆಡ್ತಿದ್ರು. ಸರಸ್ವತಿ ಪೂಜೇಲಿ ಭಾಗವಸ್ತಿದ್ರು. ಶಾಲೆ ಬಿಟ್ಟ ಮೇಲೂ ಅವರು ನಮ್ ಬೀದಿ ಆಟಗಳಲ್ಲಿ ನಮ್ ಟೀಂಮಲ್ಲೇ ಇರ‍್ತಿದ್ರು. ಐಸ್‌ಪೈಸ್ ಆಡ್ಬೇಕಾದ್ರೆ ಬ್ರಾಹ್ಮಣರು, ಲಿಂಗಾಯತರ ಮನೆ ಅಂತ ಲೆಕ್ಕ ಇಲ್ದೆ ಅವರೂ ನಮ್ ಮನೆ ಕಾಂಪೌಂಲ್ಲೋ,
ವೆರಾಂಡಾದಲ್ಲೋ ಅವಿತ್ಕೋತಿದ್ರು. ನಾವೂ ಸಾಬರ ಮನೆ ಗ್ಯಾರೇಜಲ್ಲೋ, ಕೋಳಿಮನೇಲೋ ಬಚ್ಚಿಟ್ಕೊಳ್ತಿದ್ವಿ. ಜೂಟಾಟದಲ್ಲಿ ಅವರಿವರನ್ನು ಮುಟ್ಟಬಾರದು ಅಂತ ಇರ‍್ಲಿಲ್ಲ. ಅವರ ಜತೆನೇ ಬೇಲಿ ಹಾರ‍್ತಿದ್ವಿ, ಮರ ಹತ್ತು ತ್ತಿದ್ವಿ, ಹುಣಿಸೇ ಹಣ್ಣೊ, ಮಾವಿನಕಾಯೋ ಒಟ್ಟಿಗೆ ಕಚ್ಕೊಂಡೇ ತಿಂತಿದ್ವಿ. ಬೇಲಿಗೆ ಸಿಕ್ಕಿ ಹರ‍್ದೋಗಿದ್ದ ಸಯ್ಯದ್ ಅಂಗೀನ ಮುಚ್ಚಿ ತಂದು ಅಮ್ಮನ್ ಕೈಲಿ ಹೊಲಿಗೆ ಹಾಕಿಸ್ಕೊಟ್ಟದ್ದೂ ಇದೆ. ಸಂಜೆ ಮತ್ತೆ ಮನೆಯಿಂದ ಪುಸ್ತಕದ ಚೀಲ ಎತ್ಕೊಂಡ್ ಒಂದಿಬ್ರು ಸಾಬಿಗಳು ನಮ್ ಮನೆಗೇ ಓದ್ಕೊತೀನಿ ಅಂತ ಬಂದು ಟೆಂಟ್ ಹಾಕ್ತಿದ್ರು.
ಒಂದೊಂದಿನ ಅವರ ಜತೇಲೇ ನಮಗೂ ವೆರಾಂಡದಲ್ಲೇ ಊಟ ಹಾಕಿಬಿಡ್ತಿದ್ಲು ನಮ್ ಅಜ್ಜಿ. ನಮ್ಮಮ್ಮಂಗೆ ದೇವರಕೋಣೆ ಮಾತ್ರ ಮಡಿ, ನಮ್ಮಜ್ಜಿಗೆ
ದೇವರಕೋಣೆ, ಹಾಲು ಎರಡೂ ಮಡಿ, ನಮ್ಮಪ್ಪಂಗಂತೂ ಮಡಿಯ ಲಕ್ಷ್ಮಣ ರೇಖೆಯೇ ಇರ‍್ಲಿಲ್ಲ, ಅವರಿಗೆ ಬೆಳಗ್ಗೆ ಸಂಧ್ಯಾವಂದನೆ, ಹಬ್ಬದ ದಿನ ಪೂಜೆಗೆ , ಅವರು ಕೂತ ಜಾಗದಲ್ಲಿ ಮಾತ್ರ ಮಡಿ. ಈ ಸಾಬರ ಮನೆಗಳಲ್ಲೂ ಅಷ್ಟೇ… ನಮ್ಮದೇ ಬೀದಿಲಿದ್ದ ಮುನೀರ್ ಮನೆ ರೂಮೊಂದು ಮಾತ್ರ ಮಡಿ ಜಾಗ. ಅದು ಅವರಜ್ಜಿಯ ನಮಾಜ್ ಮಾಡುವ ಮೆಕ್ಕಾ!
ಅಲ್ಲಿಗೆ ಮಾತ್ರ ನಮಗೆ ಪ್ರವೇಶರಲಿಲ್ಲ ಅನ್ನೋದು ಬಿಟ್ರೆ ಬೇರೆಲ್ಲ ಕಡೆ ಓಡಾಡ್ತಿದ್ವಿ. ಅವರ ಮನೇಲೇ ಒಮ್ಮೊಮ್ಮೆ ಬೆಳಗ್ಗೆ ತಿಂಡಿಯೂ ಆಗಿಹೋಗ್ತಿತ್ತು. ಇನ್ನು ಹೈಸ್ಕೂಲಿಗೆ ಬಂದಾಗಲೂ ಅಷ್ಟೇ..ನಮ್ ಜತೆ ಇಂಗ್ಲಿಷ್ ಮೀಡಿಯಂನಲ್ಲಿ ೧೦-೧೨ ಮುಸ್ಲಿಂ ಹೆಣ್ಣು ಮಕ್ಕಳಿದ್ದರು. ಪಿಯುಸಿಗೆ ಬರುವ ವೇಳೆಗೆ
ಅವರ ಸಂಖ್ಯೆ ಅರ್ಧಕ್ಕಿಳಿತು. ೪-೫ ವರ್ಷಗಳಲ್ಲಿ ಯಾವೊಬ್ಬ ಹೆಣ್ಣುಮಗಳೂ ಬುರ್ಕಾ, ಹಿಜಾಬ್ ಧರಿಸಿ ಬಂದದ್ದು ನಾವು ನೋಡಲಿಲ್ಲ. ಸ್ಕೂಲಿನ ಯೂನಿಫಾರಂ ಬಿಟ್ಟರೆ ಶುಕ್ರವಾರ ಅವರೂ ನಮ್ಮ ಹೆಣ್ಣುಮಕ್ಕಳ ರೀತಿಯೇ ಚೂಡಿದಾರವನ್ನೋ, ಲಂಗ-ದಾವಣಿಯನ್ನೋ ಹಾಕಿ ಬರುತ್ತಿದ್ದರಷ್ಟೇ. ಅಂದಿನ ನಮ್ಮ ಪಿಇ ಟೀಚರ್ ಅಬ್ದುಲ್ ರೆಹಮಾನ್ ಖಾನ್ ೩೦ ವರ್ಷಗಳಷ್ಟು ಹಿಂದೆಯೇ ನಮಗೊಂದಿಷ್ಟು ಅನೌಪಚಾರಿಕ ಯೋಗಶಿಕ್ಷಣ ನೀಡಿದ್ದರು.
ಆಗ ‘ನಮ್ಮ ಮಕ್ಕಳಿಗೆ ಯಾಕೆ ಯೋಗ ಕಲಿಸುತ್ತೀರಿ’ ಎಂದು ಯಾವ ಪೋಷಕರೂ ಬಂದು ಯಾವ ಆಕ್ಷೇಪ ಮಾಡಲೇ ಇಲ್ಲ. ಹೀಗಾಗಿ ನನ್ನ ಅತ್ಯಂತ ಆತ್ಮೀಯ ಬಾಲ್ಯದ ಗೆಳೆಯ ಮುನೀರ್ ಅಹಮದ್ ಒಬ್ಬ ಮುಸ್ಲಿಂ. ಪ್ಯಾರೀಜಾನ್, ಸಯ್ಯದ್ ಅಹಮದ್ ಖಾನ್, -ಕ್ರುಲ್ಲಾ ಇವರೆಲ್ಲ ನನ್ನ ಜತೆ ಬಾಲ್ಯದ ಕಷ್ಟ, ಸುಖ ಹಂಚಿಕೊಂಡವರು. ನಾನು ಸುಲಭವಾಗಿ ಖರೀದಿಸಬಹುದಿದ್ದ ಒಂದು ಬೆಲೆಬಾಳುವ ನಿವೇಶನವನ್ನು ಸ್ನೇಹಕ್ಕಾಗಿ ಬಿಟ್ಟುಕೊಟ್ಟಿದ್ದು ಒಬ್ಬ ಮುಸ್ಲಿಂ ಗೆಳೆಯ ನಿಗಾಗಿ. ೩೦ ವರ್ಷಗಳ ಹಿಂದೆಯೇ ವ್ಯಕ್ತಿತ್ವಕಸನದ ಬಗ್ಗೆ ಪಾಠ ಹೇಳುತ್ತಿದ್ದ, ಯೋಗದ ಬಗ್ಗೆ ಗೌರವವಿದ್ದ ಅಬ್ದುಲ್ ರೆಹಮಾನ್ ಸರ್ ನನ್ನ ನೆಚ್ಚಿನ ದೈಹಿಕ ಶಿಕ್ಷಣ ಶಿಕ್ಷಕರು.
ನನಗೆ ಪ್ರತಿಹಬ್ಬಕ್ಕೂ ಮರೆಯದೆ ಶುಭ ಹಾರೈಸುವ ಶಿಷ್ಯವೃಂದದ ಒಬ್ಬ ಕಾಯಂ ಪ್ರಿಯ ಶಿಷ್ಯೆ ಹೀನಾ ಒಬ್ಬಳು ಮುಸ್ಲಿಂ. ನನ್ನ ಮಕ್ಕಳ ಬಟ್ಟೆ ಹೊಲೆದುಕೊಡುವ ಖರೀಂ ಮುಸ್ಲಿಂ, ನನ್ನ ಹೆಂಡತಿಗೆ ಅಚ್ಚುಮೆಚ್ಚಿನ ನೆರಮನೆಯವಳಾಗಿದ್ದ ಮಾತಿನ ಮಲ್ಲಿ ಜರೀನಾ ಮುಸ್ಲಿಂ. ನನಗೆ ಕಾರು ಚಾಲನೆ ಕಲಿಸಿಕೊಟ್ಟ ಏಜಾಸ್ ಮುಸ್ಲಿಂ. ನಮ್ಮ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಒಂದು ಫೋನ್ ಮಾಡಿದರೆ ಸಾಕು, ದೇಣಿಗೆ ನೀಡುವ ಶಿಷ್ಯ ಆಸೀಫ್ ಮುಸ್ಲಿಂ. ನನ್ನ ಮಂಗಳೂರಿನ ಗೆಳೆಯ ಮೀನು ತಿನ್ನುವಾಗ ನಾನು ಪಕ್ಕದಲ್ಲಿ ಕುಳಿತು ಮೊಸರನ್ನ ತಿನ್ನುತ್ತಿದ್ದೆ.
ನನ್ನ ವಾಟ್ಸಪ್, ಫೇಸ್ಬುಕ್ ಕಾಂಟ್ಯಾಕ್ಟ್‌ಗಳಲ್ಲಿ ಹಲವು ಮುಸ್ಲಿಂ ಗೆಳೆಯರಿದ್ದಾರೆ. ನನ್ನೂರಿನ ರೆಹನಾ ಬೇಗಂ ಎನ್ನುವ ಒಬ್ಬ ಮುಸ್ಲಿಂ ಮಳೆ ರಾತ್ರಿ ಹಗಲೆ ನ್ನದೆ ಹಾವು ಕಡಿದ ಸಾವಿರಾರು ಹಿಂದೂಗಳಿಗೆ ಉಪಚರಿಸಿ ಸೇವೆ ಮಾಡುತ್ತಾರೆ. ಹಿಂದೂ ಹಬ್ಬಗಳನ್ನೂ ಆಚರಿಸುತ್ತಾರೆ. ಆದರೆ, ಈಗ ಕೆಲವರ್ಷಗಳಿಂದ ನಾನು ನೋಡುತ್ತಿರುವುದೆಲ್ಲ ಚದುರಿದ ಚಿತ್ರಗಳು. ಮುಸ್ಲಿಂ ಮಕ್ಕಳೇ ಇರುವ ಶಾಗಳಲ್ಲಿ, ಮದರಾಸಗಳಲ್ಲಿ ಗೇಟಿನೊಳಗೆ ಬಂದಿಯಾಗಿ ಹೊರಗಿನ ಪ್ರಪಂಚವನ್ನು ಆಸೆ ಕಣ್‌ಗಳಿಂದ ಮುಗ್ಧವಾಗಿ ನೋಡುವ, ಬಿಡುಗಡೆಗಾಗಿ ಹಾತೊರೆಯುವ ಹೊಳೆವ ಕಣ್ಣುಗಳನ್ನು ನೋಡಿದ್ದೇನೆ.
ಇಂತಹ ಮಕ್ಕಳಿಗೆ ಶಾಲೆಯಲ್ಲಷ್ಟೇ ಅಲ್ಲ, ಮನೆಯೂ ಜೈಲು, ಹೊರಗೆ ಬಂದರೂ ಬಯಲು ಬಂದೀಖಾನೆ. ಎಷ್ಟೋ ಮಕ್ಕಳು ಕಣ್ತುಂಬಾ ನಿದ್ದೆ ಸವಿಯುವ ಹೊತ್ತಿನಲ್ಲಿ ಏಳಲಾರದೇ ಎದ್ದು ಬೆಳಗಿನ ಜಾವದಲ್ಲೇ ಮದರಸಾ ಕಡೆ ಹೆಜ್ಜೆ ಹಾಕುತ್ತವೆ. ಸಂಜೆ ಅವು ಬೇರೆ ಮಕ್ಕಳೊಂದಿಗೆ ಆಡುವಂತಿಲ್ಲ. ನಮ್ಮೆದುರು ಮನೆಯಲ್ಲಿದ್ದ ಮುಸ್ಲಿಂ ಮಕ್ಕಳು ಒಂದು ದಿನವೂ ನೆರೆಹೊರೆಯ ಮಕ್ಕಳೊಂದಿಗೆ ಆಡುವುದಿಲ್ಲ. ಅವು ತಮ್ಮದೇ ಮುಸ್ಲಿಂ ಗೆಳೆಯರನ್ನು ಹುಡುಕಿಕೊಂಡು ಬೇರೆ ಏರಿಯಾಗೆ ಹೋಗುತ್ತವೆ. ನಮ್ಮೊಂದಿಗೆ ಸೌಹಾರ್ದಯುತ ಮಾತುಕತೆಯೂ ಇಲ್ಲ. ಒಬ್ಬ ಮುಸ್ಲಿಂ ಗೆಳೆಯ ಓದಲಾಗದ ಸ್ಥಿತಿಯಲ್ಲಿದ್ದಾಗ ನಾವು ಒಂದಿಬ್ಬರು ಅವನ ಎದೆಗೆ ಒಂದಿಷ್ಟು ಅಕ್ಷರ ಬೀಳಲಿ ಎಂದು ಸೈಕಲ್ ಕ್ಯಾರಿಯರ್ ಮೇಲೆ ಅಕ್ಷರಶಃ ಹೊತ್ತುಕೊಂಡು ಶಾಲೆಗೆ ಕರೆ
ದೊಯ್ಯುತ್ತಿದ್ದೆವು. ಅವನೊಂದಿಗೆ ನಮ್ಮ ಮನೆಯೂಟ ಶೇರ್ ಮಾಡುತ್ತಿದ್ದೆವು. ಅವನು ಓದಿಕೊಂಡು ದೊಡ್ಡಮನುಷ್ಯನಾದ.
ಈಗ ತನ್ನ ಮನೆ ಹೆಣ್ಣುಮಕ್ಕಳಿಗೆ ಹಿಜಾಬ್, ಬುರ್ಕಾ ಹಾಕಿ ಮನೆಯೊಳಗೆ ಕೂರಿಸಿದ್ದಾನೆ. ಅವನ ಪುಟ್ಟ ಮಗಳು ತನ್ನ ಆಪ್ತ ಹಿಂದೂ ಗೆಳತಿಯ ಮನೆಗೂ ಹೋಗದಂತೆ ನಿರ್ಬಂಧ ಹಾಕಿದ್ದಾನೆ. ಪಾಕಿಸ್ತಾನದ ಪರ ಕ್ರಿಕೆಟ್‌ನಲ್ಲಿ ಬೆಟ್ ಕಟ್ಟುತ್ತಾನೆ. ನಮ್ಮನೆಗಳ ಹಾಲೆಲ್ಲ ಹೀಗೆ ಧರ್ಮದ ದತ್ತೂರಿ ಬೀಜ ಬಿದ್ದು
ವಿಷವಾದದ್ದು ಹೇಗೆ? ಎಲ್ಲರೂ ಹೀಗಿಲ್ಲ, ಆದರೂ ಬಹಳಷ್ಟು ಜನ ಹೀಗಾಗಿ ಹೋಗಿದ್ದಾರೆ ಎಂಬುದೇ ವಿಷಾದದ ಸಂಗತಿ. ಇದು ಮುಸ್ಮಲ್ಮಾನರಿಗೆ ಮಾತ್ರ ಸೀಮಿತವಾಗಿಲ್ಲ. ಧರ್ಮದ ಅಫೀಮು ಯಾರನ್ನೂ ಬಿಟ್ಟಿಲ್ಲ. ಇದಕ್ಕೆ ಹಿಂದೂಗಳಾದ ನಮ್ಮ ಕೊಡುಗೆಯೇನೂ ಕುಮ್ಮಿಯಿಲ್ಲ. ಧರ್ಮ, ಜಾತಿ ನಮ್ಮ
ಮನೆಗಳ ಸಾಲಿಗ್ರಾಮದ ಡಬ್ಬಿಯಲ್ಲಿ ಹಾಯಾಗಿತ್ತು. ಈಗ ಅದು ಬುಟ್ಟಿಯೊಳಗೆ ಕೂತ ಹಾವಾಗಿ ಅವಾಗವಾಗ ಬುಸ್ ಬುಸ್ ಎಂದು ಎಲ್ಲರನ್ನೂ ಹೆದರಿಸುತ್ತಿದೆ. ನಮಗೆ ಜಾತಿ, ಧರ್ಮದ ಕಟ್ಟುಪಾಡುಗಳಿದ್ದದ್ದು ಮನೆಯೊಳಗೆ ಮಾತ್ರ. ಈಚೆ ಹೊರಟರೆ ನಾವು ವಿಶ್ವಮಾನವರು.
ಚಿಕ್ಕಂದಿನಲ್ಲಿ ಶ್ರಾವಣ ಮಾಸದಲ್ಲಿ ಹಣೆಗೆ ನಾಮ ಹಾಕಿ ಕೈಗೊಂದು ಚೊಂಬು ಕೊಟ್ಟು ಪಡಿ ಬೇಡ್ಕೊಂಡ್ ಬಾ ಎಂದು ಕಳಿಸ್ತಿದ್ರು. ಆಗಂತೂ ಆ ಚೊಂಬು ಹಿಡಿದು ಮನೆ ಮನೆಗೆ ಹೋಗಿ ಅಕ್ಕಿ ಎತ್ತೋದು ಅಂದ್ರೆ ತೀರಾ ಮುಜಗರದ, ಹಿಂಸೆಯ ಕೆಲಸವಾಗಿತ್ತು. ಎರಡು ಮನೆಗೆ ಹೋದ ಶಾಸ ಮಾಡಿ ಬಂದು ನಾಮ ಅಳುಸ್ಕೊಂಡ್ ಆಚೆ ಓಡ್ ಬರ‍್ತಿದ್ವಿ. ಶಾಲೆಗೆ ನಾಮ, ವಿಭೂತಿ, ಟೋಪಿ ಹಾಕ್ಕೊಂಡ್ ಬಂದೋರನ್ನಂತೂ ಕಾಲು ಎಳೀದೇ ಬಿಡ್ತಾನೇ ಇರ‍್ಲಿಲ್ಲ. ಇನ್ನು ಎಲ್ಲಾದ್ರೂ ಸಂತರ್ಪಣೆ ಊಟಕ್ಕೆ ಹೋಗ್ಬೇಕು ಅಂದ್ರೂ ಅರನಗ್ನ ಫಕೀರನಂತೆ ಹೊಟ್ಟೆ, ಮೈ ಬಿಟ್ಕೊಂಡ್ ರಸ್ತೇಲಿ ನಡ್ಕೊಂಡ್ ಹೋಗಕ್ಕೆ ತೀರಾ ಸಂಕೋಚ ಆಗ್ತಿತ್ತು.
ಜನಿವಾರ, ಲಿಂಗ ಎಲ್ಲ ಅಂತಃರಂಗದ ಶ್ರದ್ಧೆ, ಭಕ್ತಿಯ ಪ್ರತೀಕವಾಗಿದ್ದವು. ಮನೆಯಲ್ಲಿ ಬಿಟ್ರೆ ಅಪರೂಪಕ್ಕೆ ಯಾವುದಾದರೂ ಧಾರ್ಮಿಕ ಸಮಾರಂಭ ದಲ್ಲೋ, ದೇವಸ್ಥಾನದಲ್ಲೋ ಅವು ಈಚೆ ಬರ‍್ತಿದ್ವು. ನಮ್ಮ ಮಕ್ಕಳಿಗೂ ಅಷ್ಟೇ. ಯಾರೂ ಯಾವುದೇ ಜಾತಿ ಸೂಚಕಗಳನ್ನು, ಧರ್ಮದ ಸಂತೆಗಳನ್ನು ತಮ್ಮ ಮೇಲೇ ಆವಾಹನೆ ಮಾಡ್ಕೊಂಡು ಉತ್ಸವ ಮಾಡ್ತಿರ‍್ಲಿಲ್ಲ. ನಮ್ಮನೆಗೆ ತೆಂಗಿನ ಹೆಡೆಮಟ್ಟೆ ಹಾಕುತ್ತಿದ್ದ ಗೋಂವಿದಪ್ಪ ದಾರಿಯಲ್ಲಿ ಗಾಡಿ ನಿಲ್ಲಿಸಿ ಕೊಂಡು ನನ್ನನ್ನ ‘ಗೌಡ್ರೇ’ ಅಂತಲೇ ವರುಷಗಟ್ಟಲೆ ಕೂಗ್ತಿದ್ದ. ಅಕ್ಕ ಪಕ್ಕದವರಾರೋ ಒಮ್ಮೆ ಅವರು ಗೌಡರಲ್ಲ ಅಂತ ತಿಳಿಹೇಳಿದ ಮೇಲೆ ’ಹೌದಾ? ಅವರನ್ ನೋಡುದ್ರೆ ಬಾಂಬ್ರು’ ಥರ ಕಾಣೋದೇ ಇಲ್ಲ ಅಂತ ನಕ್ಕಿದ್ದ.
ಅದು ನನ್ನ ಬ್ರಾಹ್ಮಣತ್ವಕ್ಕೆ ಮಾಡಿದ ಅವಮಾನವೋ? ನನ್ನನ್ನು ವಿಶ್ವಮಾನವನಾಗಿಸಿದ ಪರಿಯೋ ದೇವರಿಗೇ ಗೊತ್ತು. ಆದರೆ, ಈಗ ಕೆಲವರ್ಷಗಳಿಂದ ಹೀಗಿಲ್ಲ. ನಮಗೂ ನಮ್ಮ ಜಾತಿ, ಧರ್ಮದ ಲಾಂಛನಗಳನ್ನು ವಿಜೃಂಬಿಸುವ ಅಮಲು ಹತ್ತಿಹೋಗಿದೆ. ಹೆಸರಿನಿಂದ ಹಿಡಿದು ನಮ್ಮ ನಡೆ, ನುಡಿ
ಎಲ್ಲದರಲ್ಲೂ ನಾವು ಧರ್ಮ, ಜಾತಿಯ ಆರಾಧಕರಾಗಿ ಹೋಗಿದ್ದೇವೆ. ಇದು ಭಕ್ತಿ, ಶ್ರದ್ಧೆ ಎನ್ನುವುದಕ್ಕಿಂತ ಅತಿರೇಕದ ಒಂದು ಡಾಂಭಿಕ ಆಟೋ ಟೋಪವಾಗಿ ಹೋಗಿದೆ. ಮಕ್ಕಳಿಗೆ ಜಾತಿ ಸೂಚಕ ಹೆಸರುಗಳನ್ನು ಇಡಲು ಹಿಂದೆ ಮುಂದೆ ನೋಡುವ ಕಾಲ ಒಂದಿತ್ತು.
ಆದರೆ ಈಗ ಹಾಗಿಲ್ಲ, ಅದೊಂದು ಹೆಮ್ಮೆ, ದೊಡ್ಡಸ್ತಿಕೆಯ ವಿಷಯವಾಗಿ ಹೋಗಿದೆ. ಹಿಂದೆ ಗೌಡಾಳಿಕೆ ಮಾಡುವ ಗ್ರಾಮದ ಕೆಲವರು ಮಾತ್ರ ಹೆಸರಿ
ನೊಂದಿಗೆ ಗೌಡ ಎಂದು ಸರ್ ನೇಮ್ ಥರ ಸೇರಿಸ್ಕೊತಿದ್ರು. ಇದು ಜಾತಿ, ಧರ್ಮಕ್ಕೆ ಮುಗಿದಿಲ್ಲ, ಒಂದ್ಹೊತ್ತೂ ಸಂಧ್ಯಾವನೆ ಮಾಡದ, ಒಂದ್ ಹತ್ತು ಗಾಯತ್ರಿ ಹೇಳದ ಸುಖ ಲೋಲುಪತೆಯಲ್ಲೇ ಮುಳುಗಿರುವ ಹಲವು ಬ್ರಾಹ್ಮಣರೂ ಹೆಸರಿನ ಮುಂದಕ್ಕೆ ವಸಿಷ್ಠ, ಭಾರದ್ವಾಜ, ವಿಶ್ವಾಮಿತ್ರ ಹೀಗೆ ಸಿಕ್ಕ
ಸಿಕ್ಕ ಋಷಿಪುಂ ಗವರ ಹೆಸರನ್ನು ಸಿಗಿಸಿಕೊಳ್ಳುತ್ತಿದ್ದಾರೆ.
ನಂದೀಶ್ ವಿಶ್ವಕರ್ಮ, ಯತಿರಾಜ್ ಶರಣ, ಲೋಕೇಶ ವಾಲ್ಮೀಕಿ, ಅಂಕಿತ್ ಶೆಟ್ಟಿ ಹೀಗೇ ಯಾವ ಜಾತಿ, ಧರ್ಮ ದವರೂ ಈ ವಿಷಯದಲ್ಲಿ ಕಮ್ಮಿ ಇಲ್ಲ. ಇದು ಹೆಸರುಗಳಿಗೇ ನಿಂತಿಲ್ಲ, ಕಾರುಗಳ ಹಿಂಬಂದಿ ಗಾಜುಗಳ ಮೇಲೂ ಗೌಡಾಸ್, ಕೃಷ್ಣರಥ, ಅಯ್ಯಂಗಾರ‍್ಸ್ ಎಂದು ತಮ್ಮ ಐಡೆಂಟಿಸಿ ಗುರುತಿಸಿ ಕೊಳ್ಳುವ ಪದಪುಂಜಗಳು ರಾರಾಜಿಸುತ್ತಿರುವುದನ್ನು ಹೆದ್ದಾರಿಯುದ್ದಕ್ಕೂ ನೋಡಬ ಹುದು. ಮಾರುತಿ ಚಿತ್ರವಂತೂ ಹತ್ತರಲ್ಲಿ ಒಂದು ಕಾರಿನ ಮೇಲೆ ಎದ್ದು ಕಾಣುತ್ತಿರುತ್ತದೆ.
ಕೇಸರಿ, ಪಂಚೆ ಶಾಲುಗಳು ಸ್ವಾಮಿಗಳಿಗೆ, ಸಂತರಿಗೆ ಮಾತ್ರ ಸೀಇತವಾಗಿತ್ತು. ಈಗ ಮಠಗಳೇ ಒಂದು ಹತ್ತಾಗಿ ಒಡೆದು ಹೋಗುತ್ತಿವೆ. ಮಠ, ಮಂದಿರ, ಮಸೀದಿ, ಚರ್ಚ್ ಬಿಟ್ಟು ಈಚೆ ಬರುವುದರ ಬದಲು ನಾವು ಕೇರಿಗೊಂದು ಮಸೀದಿ, ಊರಿಗೆರಡು ಹೊಸ ದೇವಸ್ಥಾನ, ದಾರಿಗೊಂದು ಚರ್ಚ್
ಕಟ್ಟಿಕೊಂಡು ಅದರೊಳಗೇ ಲೀನವಾಗುತ್ತಿದ್ದೇವೆ. ಇದೆಲ್ಲ ತಪ್ಪು ಎಂದು ನಾನು ಹೇಳುತ್ತಿಲ್ಲ, ನಮಗೆ ಸಂವಿಧಾನದತ್ತ ಸ್ವಾತಂತ್ರ್ಯವಿದೆ. ಆದರೆ ಜಾತಿ, ಧರ್ಮಗಳು ಪ್ರದರ್ಶನ ಹಂತಕ್ಕೆ, ಇನ್ನೊಬ್ಬನ ಸಹಿಷ್ಣುತೆಯನ್ನು ಪರೀಕ್ಷಿಸುವ ಮಟ್ಟಕ್ಕೆ ಹೋಗುವುದೇ ಭಕ್ತಿಯೇ? ಆತ್ಮಸಾಕ್ಷಾತ್ಕಾರ, ಮುಕ್ತಿಗೆ
ಇದೇ ಮಾರ್ಗ ಎಂದು ಯಾವ ಪುರಾಣದಲ್ಲಿ ಹೇಳಿದೆ? ವಿದ್ಯಾವಂತರಾದಂತೆ ನಾವು ಪ್ರಗತಿಯತ್ತ ಸಾಗಬೇಕಿತ್ತು.
ಅಕ್ಷರ ನಮ್ಮೊಳಗಿನ ಕತ್ತಲನ್ನು ಒದ್ದೋಡಿಸಿ ವಿವೇಕದ ಬೆಳಕನ್ನು ಚೆಲ್ಲಬೇಕಿತ್ತು. ಆದರೆ ಹಾಗಾಗುತ್ತಿಲ್ಲ. ವಿದ್ಯಾವಂತರು ಹೆಚ್ಚು ಹೆಚ್ಚು ಜಾತಿ, ಧರ್ಮಗಳ ಕಡೆ ಧ್ರುವೀಕರಣಗೊಳ್ಳುತ್ತಿದ್ದಾರೆ. ಹಾಗಾಗಿ ಇಡೀ ಸಾಮಾಜಿಕ ಪರಿಸರವೇ ಹಿಮ್ಮುಖವಾಗಿ ಚಲಿಸುತ್ತಿದೆ ಎನಿಸತೊಡಗಿದೆ. ಜಾಗತೀಕರಣ, ಉದಾರೀಕರಣದ ಆಧುನಿಕ ಸುಖಲೋಲುಪತೆಗೆ ಮಾತ್ರ ನಾವು ತೆರೆದುಕೊಂಡಿದ್ದೇವೆ. ಅಂತರಂಗದಲ್ಲಿ ಧರ್ಮವನ್ನು ಧಾರ್ಷ್ಟ್ಯದ, ದರ್ಪದ, ಅಹಮಿಕೆಯ, ಆಳುವಿಕೆಯ ರಾಕ್ಷಸ ರೂಪದ ಬಾಂಬುಗಳಾಗಿ ಪರಿವರ್ತಿಸಿ ಎಲ್ಲೆಂದರಲ್ಲಿ ಎಸೆದು ನಾವು ವಾಪಸ್ ಚಿಪ್ಪಿನೊಳಗೆ ಹೋಗಿ ಅಡಗಿ ಕೂರುತ್ತಿದ್ದೇವೆ. ನಮ್ಮ ಮಕ್ಕಳೂ ಅದನ್ನೇ ಕಲಿಯುತ್ತಿದ್ದಾರೆ. ನಮ್ಮದೇ ರಕ್ತ, ನಮ್ಮನ್ನೇ ಅನುಕರಿಸುತ್ತಿದ್ದಾರೆ, ಯಾರನ್ನು ದೂರುವುದು?