ಅವಲೋಕನ
ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ
ತೀವ್ರ ಸ್ವರೂಪದ ಆರ್ಥಿಕ ಅಸಮಾನತೆಗೆ ಕಡಿವಾಣ ಹಾಕಿ, ಆರ್ಥಿಕತೆಗೆ ಚೇತರಿಕೆ ನೀಡಿ ಅಭಿವೃದ್ಧಿಯ ಗುರಿಯನ್ನು ಸಾಽಸಬಲ್ಲ
ದೇಶದ ಹಿತದೃಷ್ಟಿಗೆ ಪೂರಕವಾದ ಮುಂಗಡ ಪತ್ರವನ್ನು ಜನತೆ ನಿರೀಕ್ಷಿಸುತ್ತಿದ್ದಾರೆ.
ಅಗಾಧವಾದ ಸಂಪನ್ಮೂಲಗಳ ಕೊರತೆಯಿರುವಾಗ ಆಯವ್ಯಯದ ಸಮತೋಲನತೆ ಯಿಂದ ದೇಶದ ಆರ್ಥಿಕತೆಯನ್ನು ಮರಳಿ ಹಳಿಗೆ ತಂದು ಅಭಿವೃದ್ಧಿ ಪಥದತ್ತ ಸಾಗಿಸಬೇಕಾಗಿರುವುದು ಸರಕಾರಕ್ಕೆ ಅತೀ ಕಠಿಣ ಸವಾಲೇ ಆಗಿದೆ. ಈ ಗುರುತರವಾದ
ಜವಾಬ್ದಾರಿಯನ್ನು ಕೇಂದ್ರ ಸರಕಾರ ಬಜೆಟ್ ನಿರ್ಧಾರಗಳಿಂದ ನಿಭಾಯಿಸಬೇಕಾಗಿದೆ. ಇದೇ ಸಂದರ್ಭ ದಲ್ಲಿ ಬಡ ಕುಟುಂಬಗಳ ಕಲ್ಯಾಣಕ್ಕೆ ಯೋಜನೆ ನಿರೂಪಿಸಬೇಕಾಗಿದೆ.
ಬಡತನ: ಸ್ವಾತಂತ್ರ್ಯ ದೊರೆತು ೭೩ ವರ್ಷಗಳು ಕಳೆದು ಹೋದವು. ೧೨ ಪಂಚವಾರ್ಷಿಕ ಯೋಜನೆಗಳು ಆರೂವರೆ ವರ್ಷ ಮೋದಿ ನೇತೃತ್ವದ ಸರಕಾರ ಮುಗಿದಿದೆ. ಈ ಮಧ್ಯೆಯೂ ಬಡತನವು ದೇಶದ ಗಂಭೀರ ಸಮಸ್ಯೆಯಾಗಿದೆ, ಅಲ್ಲದೆ ಇನ್ನೂ ಕೂಡಾ ಎಲ್ಲಾ ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆಯಲ್ಲಿ ಬಡತನ ನಿವಾರಣೆ ಪ್ರಮುಖ ಕಾರ್ಯಸೂಚಿಯಾಗಿರುವುದು ಈ ದೇಶದ ಕಗ್ಗಂಟಾಗಿರುವ ಸಮಸ್ಯೆ.
ನಮ್ಮ ದೇಶದ ಬಡತನ ನಿವಾರಣೆಯಾಗಬೇಕಾದರೆ ಶೇ.೧೦ರಷ್ಟು ಆರ್ಥಿಕ ಬೆಳವಣಿಗೆಯ ಅವಶ್ಯಕತೆಯಿದೆ. ದೇಶದಲ್ಲಿ ದಿನಕ್ಕೆ ೧೩೫ರು. ಗಿಂತಲೂ ಕಡಿಮೆ ಸಂಪಾದನೆಯ ಕಡು ಬಡತನ ಸಂಖ್ಯೆ ೨೦೧೯ರಲ್ಲಿ ೫ ಕೋಟಿಗೆ ಇಳಿದಿದೆ ಎಂದು ವಿಶ್ವಬ್ಯಾಂಕ್ ವರದಿ ಮಾಡಿತ್ತು. ಈಗ ಕರೋನಾ ಮಹಾಮಾರಿಯ ಅವತಾರದಿಂದ ಪುನಃ ಕಡು ಬಡವರ ಸಂಖ್ಯೆ ಹೆಚ್ಚಾಗಿದೆ.
ಸಾಲದ ಹೊರೆ: ಮಿತಿ ಮೀರಿದ ೧೦೭ ಲಕ್ಷ ಕೋಟಿ ಯಷ್ಟಿರುವ ಕೇಂದ್ರ ಸರಕಾರದ ಸಾಲದ ಹೊರೆಯೊಂದಿಗೆ ಪ್ರಸಕ್ತ ವರ್ಷದಲ್ಲಿ ಸರಕಾರವು ತನ್ನ ಅಽನದಲ್ಲಿರುವ ಸಂಸ್ಥೆಗಳ ಮಾರಾಟ ಅಥವಾ ಬಂಡವಾಳ ಹಿಂತೆಗೆತದಿಂದ ೨.೧ ಲಕ್ಷ ರು. ಕೋಟಿ ಗುರಿ ಹಾಕಿಕೊಂಡಿತ್ತು. ಆದರೆ ಸಂಗ್ರಹವಾದ ಹಣ ಕೇವಲ ೧೩,೮೦೦ ಕೋಟಿ ರು. ಮಾತ್ರ. ವಿತ್ತೀಯ ಕೊರತೆಯು ಜಿಡಿಪಿಯ ಶೇ.೭.೫ರಷ್ಟಾಗಿದೆ. ಇದು ಆರ್ಥಿಕತೆಯ ಮೇಲೆ ಬೀರಿದ ಎಚ್ಚರಿಕೆಯ ಕರೆ ಘಂಟೆ.
ಪ್ರಸಕ್ತ ವರ್ಷ ಸರಕಾರಕ್ಕೆ ೭ ಲಕ್ಷ ಕೋಟಿ ರು. ಆದಾಯದ ಕೊರತೆ ಎದುರಾಗಲಿದೆ. ನವೆಂಬರ್ ಅಂತ್ಯಕ್ಕೆ ವಿತ್ತೀಯ ಕೊರತೆ ಮೊತ್ತ ೧೦.೭೫ ಲಕ್ಷ ರು. ಕೋಟಿ ಇದು ೨೦೨೦ – ೨೦೨೧ನೇ ಸಾಲಿನ ಬಜೆಟ್‌ನ ಅಂದಾಜಿಗಿಂತಲೂ ಹೆಚ್ಚು.
ಕೋವಿಡ್ ಬಿಕ್ಕಟ್ಟು: ದೇಶದ ಅರ್ಥವ್ಯವಸ್ಥೆಯು ಕೋವಿಡ್ – ೧೯ ಸೃಷ್ಟಿಸಿದ ಬಿಕ್ಕಟ್ಟಿನಿಂದಾದ ಅವಾಂತರಗಳಿಂದ ಹೊರಬರು ತ್ತಿರುವ ಲಕ್ಷಣಗಳು ಕಾಣುತ್ತಿದ್ದರೂ, ಕಾರ್ಮೋಡದ ಛಾಯೆ ಇನ್ನೂ ತಿಳಿಯಾಗಿಲ್ಲ. ಈಗ ಸ್ವಲ್ಪ ಮಟ್ಟಿಗೆ ಆರ್ಥಿಕ ಪರಿಸ್ಥಿತಿ ಚೇತರಿಸಿಕೊಳ್ಳುತ್ತಿರುವ ಕಾರಣ ತೆರಿಗೆ ಅಂದಾಜು ಹೆಚ್ಚಾಗಿ ಸರಕಾರಕ್ಕೆ ಸ್ವಲ್ಪ ಮಟ್ಟಿನ ಉಪಶಮನ ದೊರಕಿದೆ.
ಮಾರುಕಟ್ಟೆಯಲ್ಲಿನ ಚೇತರಿಕೆ, ಡಿಸೆಂಬರ್‌ನಲ್ಲಿ ಸಂಗ್ರಹವಾಗಿರುವ ಸಾರ್ವಕಾಲಿಕ ದಾಖಲೆಯಾದ ೧.೧೫ ಲಕ್ಷ ರು. ಜಿಎಸ್‌ಟಿ ಸಂಗ್ರಹಣೆ, ಸರಕು ಸಾಗಣೆ ಪ್ರಮಾಣ ಹೆಚ್ಚಾಗುತ್ತಿರುವುದು ಸಮಾಧಾನ ತರುವ ವಿಚಾರ. ಅದೇ ಸಂದರ್ಭದಲ್ಲಿ ಮಾರುಕಟ್ಟೆ ಯಲ್ಲಿ ಕಂಡು ಬಂದಿರುವ ಸುಧಾರಣೆಯ ಗತಿಯನ್ನು ಕಾಯ್ದುಕೊಳ್ಳುವ ಹೊಣೆ ಸರಕಾರದ ಮೇಲಿದೆ.
ಇದೇ ಲವಲವಿಕೆಯನ್ನು ಕಾಪಾಡಿಕೊಂಡು ಬಂದರೆ ಮಾತ್ರ ಆರ್ಥಿಕ ಹಿಂಜರಿಕೆಯ ಪರಿಸ್ಥಿತಿಯಿಂದ ಹೊರಬಂದು ಮತ್ತೆ
ಬೆಳವಣಿಗೆಯ ಹಾದಿಯನ್ನು ಹಿಡಿಯಬಹುದು. ಈ ನಿಟ್ಟಿನಲ್ಲಿ ಜನರ ಖರೀದಿ ಸಾಮರ್ಥ್ಯ ಹೆಚ್ಚುವಂತೆ ನೋಡಿಕೊಳ್ಳುವ ಗುರುತರ ಜವಾಬ್ದಾರಿ ಇರುವುದು ಬಜೆಟ್ ಮೇಲೆ. ಈಗ ಸುಧಾರಣೆ ಕಂಡು ಬರುತ್ತಿದೆ ಇದನ್ನು ಕಾಯ್ದುಕೊಳ್ಳುವ ಹೊಣೆ ಸರಕಾರದ ಮೇಲಿದೆ ಮತ್ತು ಕೇಂದ್ರ ಮಂಡಿಸುವ ಬಜೆಟ್ ಮೇಲಿದೆ.
ಜಿಡಿಪಿ: ಆರ್‌ಬಿಐ ಸರಕಾರ ಮತ್ತು ಪ್ರಮುಖ ಏಜೆನ್ಸಿಗಳ ಅಂದಾಜಿನ ಪ್ರಕಾರ ಜಿಡಿಪಿ ಸರಾಸರಿ ಶೇ. (-) ೭.೭ಕ್ಕೆ ಇಳಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. ೨೦೧೯ – ೨೦೨೦ರ ಜಿಡಿಪಿ ಶೇ. (+) ೪.೨ ಆಗಿತ್ತು. ಕೋವಿಡ್ ಬಿಕ್ಕಟ್ಟಿನಿಂದ ಕೃಷಿ ಶೇ. (+) ೩.೪ ಹೊರತು ಪಡಿಸಿ ಉಳಿದೆಲ್ಲಾ ಪ್ರಮುಖ ಕ್ಷೇತ್ರಗಳಲ್ಲಿ ಇಳಿಕೆಯಾಗಿದೆ. ೨೦೨೦ – ೨೦೨೧ರ ಹಣದುಬ್ಬರವನ್ನು ಪರಿಗಣಿಸಿದರೆ ನೈಜ ಜಿಡಿಪಿ ೧೩೪.೪೦ ಲಕ್ಷ ಕೋಟಿಯಾಗುತ್ತದೆ. ೨೦೧೯ – ೨೦ರ ಜಿಡಿಪಿ ಮೌಲ್ಯ ೧೪೫ ಲಕ್ಷ ಕೋಟಿಯಾಗಿತ್ತು.
೨೦೨೦ – ೨೧ರ ಆರ್ಥಿಕ ವರ್ಷಾಂತ್ಯಕ್ಕೆ ದೇಶದ ವಿತ್ತೀಯ ಕೊರತೆ ಜಿಡಿಪಿಯ (ಒಟ್ಟು ದೇಶದ ಉತ್ಪನ್ನ) ಶೇ.೭ಕ್ಕಿಂತಲೂ ಹೆಚ್ಚಾಗಲಿದೆ. ಇದು ಲಾಕ್‌ಡೌನ್‌ನಿಂದಾದ ಎಚ್ಚರಿಕೆಯ ಘಂಟೆಯಾಗಿದೆ. ಅದೇ ಸಂದರ್ಭದಲ್ಲಿ ಐಎಂಎಫ್ ೨೦೨೧ರಲ್ಲಿ ದೇಶವು ವಿಶ್ವದಾಖಲೆಯ ಗರಿಷ್ಟ ಶೇ. ೧೧.೫ ಆರ್ಥಿಕ ಬೆಳವಣಿಗೆ ಅಂದಾಜಿಸಿರುವುದು ಆಶಾದಾಯಕವಾಗಿದೆ.
ಬ್ಯಾಂಕಿಂಗ್ ವಲಯ: ಆರ್ಥಿಕತೆಯ ಬೆನ್ನೆಲುಬಾದ ಬ್ಯಾಂಕಿಂಗ್ ವಸೂಲಾಗದ ಸಾಲ (ಎನ್‌ಪಿಎ) ಸುಳಿಯಲ್ಲಿ ಕಂಗಾಲಾಗಿದೆ. ಸೆ. ೨೦೨೦ರಲ್ಲಿ ಶೇ. ೭.೫ರಷ್ಟಿದೆ. ಬ್ಯಾಂಕ್‌ಗಳ ಎನ್‌ಪಿಎ ಪ್ರಮಾಣ ಸೆ. ೨೦೨೧ರ ವೇಳೆಗೆ ಶೇ.೧೩.೫ಕ್ಕೆ ಏರುವ ಸಾಧ್ಯತೆಯಿದೆ ಎಂದು ಆರ್‌ಬಿಐ ವರದಿ ಮಾಡಿದೆ. ಸರಕಾರಿ ಬ್ಯಾಂಕ್‌ಗಳ ಎನ್‌ಪಿಎ ಶೇ.೧೬.೨ ಕ್ಕೇರುವ ಸಾಧ್ಯತೆಯಿದೆ ಎಂದು ವರದಿ ಮಾಡಿದೆ.
ಸಾಲ ಮರುಪಾವತಿಯಲ್ಲಿ ಅಸಾಮರ್ಥ್ಯ, ಉದ್ದೇಶಪೂರ್ವಕ ಮತ್ತು ದುರುದ್ದೇಶದ ಸಾಲಗಳು ಹೆಚ್ಚುತ್ತಿವೆ. ಋಣಸ್ಥಂಭನ, ಕಂತುಗಳ ಮುಂದೂಡಿಕೆ ಮರು ವಿನ್ಯಾಸಗಳಿಂದ ಸಾಲ ವಸೂಲಿಯಲ್ಲಿ ಎಡರುತೊಡರುಗಳು ಎದುರಾಗುತ್ತಿವೆ. ಎನ್‌ಪಿಎ ಬಹು
ಅಲಗಿನ ಕತ್ತಿ. ಇದರಿಂದ ಬ್ಯಾಂಕ್‌ಗಳಲ್ಲಿ ಸಾಲ ನೀಡುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಉದ್ದಿಮೆಗಳಲ್ಲಿ ಬಂಡವಾಳ ಕಡಿಮೆಯಾಗುತ್ತದೆ. ಬ್ಯಾಂಕ್‌ಗಳಿಗೆ ಮಾರುಕಟ್ಟೆಯಿಂದ ಬಂಡವಾಳ ಸಂಗ್ರಹಕ್ಕೆ ಹಾಗೂ ಒಟ್ಟಾರೆ ಆರ್ಥಿಕ ಚಟುವಟಿಕೆಗಳ ಹಿಂಜರಿಕೆಗೆ ಕಾರಣವಾಗುತ್ತದೆ ಹಾಗೂ ಬ್ಯಾಂಕ್‌ಗಳಲ್ಲಿನ ಬಂಡವಾಳದ ಮೇಲೆ ಪರಿಣಾಮ ಬೀರುತ್ತದೆ.
ಬಜೆಟ್ ಸಂಪನ್ಮೂಲ: ಆಯ್ದ ವಲಯಗಳಿಂದ ಕಾರ್ಪೋರೇಟ್ ತೆರಿಗೆಯನ್ನು ಹೆಚ್ಚಿಸಿಕೊಳ್ಳಬಹುದು. ಮೇಲ್ವರ್ಗಕ್ಕೆ ಆದಾಯ ತೆರಿಗೆ ಹೆಚ್ಚಿಸಬಹುದು. ಸಂಕಷ್ಟಕ್ಕೀಡಾದ ವಲಯಗಳಿಗೆ ೨ ಲಕ್ಷ ಕೋಟಿಯಷ್ಟು ಜಿಎಸ್‌ಟಿ ಇಳಿಕೆ ಮಾಡಬಹುದು. ಕಸ್ಟಮ್ಸ್ ಸುಂಕದಿಂದ ಹೆಚ್ಚಿನ ಆದಾಯ ಗಳಿಸಿಕೊಳ್ಳಬಹುದು. ಪೆಟ್ರೋಲಿಯಂ ಮತ್ತು ಅಬಕಾರಿ ಸುಂಕಗಳಿಂದ ನಿರೀಕ್ಷಿತ ಶೇ.೭ರಷ್ಟು
ವಿತ್ತೀಯ ಕೊರತೆಯನ್ನು ಸರಿದೂಗಿಸಬಹುದು. ರಕ್ಷಣಾ ವೆಚ್ಚ ಮತ್ತು ತಂತ್ರಜ್ಞಾನಕ್ಕೆ ಹೂಡಿಕೆ ಹೆಚ್ಚಳ ಅಗತ್ಯ. ಮೂಲ ಸೌಕರ್ಯ ಅಭಿವೃದ್ಧಿಗೊಳಿಸಿ ಮಾರುಕಟ್ಟೆಯಲ್ಲಿನ ಸರಕು ಬೇಡಿಕೆ ಹಾಗೂ ಉದ್ಯೋಗ ಸೃಷ್ಟಿಯ ಬಜೆಟ್ ರಾಷ್ಟ್ರದ ನಿರೀಕ್ಷೆ.
ಅನಿವಾರ್ಯತೆಗಳು: ೧೫ನೇ ಹಣಕಾಸು ಆಯೋಗದ ಪ್ರಕಾರ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಗಣನೀಯವಾಗಿ ಸುಧಾರಿಸುವ ಅಗತ್ಯತೆಯನ್ನು ಪರಿಗಣಿಸಬೇಕಾಗಿದೆ. ಭಾರತದಲ್ಲಿ ಸೃಷ್ಟಿಯಾಗುವ ಉದ್ಯೋಗಗಳಲ್ಲಿ ಸೇವಾ ವಲಯದ ಕೊಡುಗೆ ಶೇ. ೪೫ ರಷ್ಟಿದೆ. ಸಣ್ಣ ಮತ್ತು ಮಧ್ಯಮ ವರ್ಗದ ಉದ್ಯಮಗಳಿಗೆ ನೆಮ್ಮದಿ ನೀಡಿ ಪುನಃಶ್ಚೇತನ ಪಡೆದುಕೊಳ್ಳುವ ಬಗ್ಗೆ ಬಜೆಟ್ ಗಮನಹರಿಸಬೇಕು.
ಆಘಾತ ಸಂಭವಿಸಿರುವ ಪ್ರವಾಸೋದ್ಯಮ, ಹೊಟೇಲ್, ರೆಸ್ಟೋರೆಂಟ್ ಉದ್ಯಮಗಳಿಗೆ ತೆರಿಗೆ ವಿನಾಯತಿ, ಸಾಲ ಮರುವಿನ್ಯಾಸ ಮತ್ತು ಬಡ್ಡಿ ರಿಯಾಯಿತಿ ನೀಡಬೇಕು. ಹೂಡಿಕೆದಾರರಿಗೆ ಧಕ್ಕೆಯುಂಟುಮಾಡುವ ಯಾವುದೇ ತೆರಿಗೆ ಹೆಚ್ಚಳ ಮಾಡಬಾರದು. ವಿದೇಶಿ ಮತ್ತು ದೇಶಿ ಬಂಡವಾಳ ಹೂಡಿಕೆಗೆ ಪ್ರೋತ್ಸಾಹಿಸುವುದರೊಂದಿಗೆ ಪ್ರಾಮಾಣಿಕ ತೆರಿಗೆದಾರರಿಗೆ ರಿಯಾಯತಿ ನೀಡಬೇಕು.
ಸಾಂಕ್ರಾಮಿಕದಿಂದ ಬಳಲಿರುವ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ತಂತ್ರಜ್ಞಾನ ಮತ್ತು ಕೌಶಲಾಭಿವೃದ್ಧಿ ತರಬೇತಿ ನೀಡಬೇಕು.
ಖಾಸಗೀಕರಣ: ಬಜೆಟ್ ನಿಮಿತ್ತ ಪ್ರಧಾನಿಯವರು ಆರ್ಥಿಕ ವಿಚಾರಗಳ ಬಗ್ಗೆ ಪ್ರಮುಖ ಆರ್ಥಿಕ ತಜ್ಞರೊಂದಿಗೆ ಸಮಾಲೋಚನೆ ನಡೆಸಿದರು. ಆರ್ಥಿಕ ತಜ್ಞರೆಲ್ಲರೂ ಖಾಸಗೀಕರಣ ಪ್ರಕ್ರಿಯೆನ್ನು ಚುರುಕುಗೊಳಿಸಲು ಒತ್ತಾಯಿಸಿದ್ದಾರೆ. ಹತ್ತು ವರ್ಷದೊಳಗೆ ದೇಶವು ಹತ್ತು ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿಸಲು ಮಾರ್ಗಸೂಚಿಯನ್ನು ಹಾಕಿಕೊಳ್ಳಬೇಕು. ಜಾಗತಿಕ
ಪೂರೈಕೆಯ ಭಾಗವಾಗಿ ಭಾರತ ಹೊರಹೊಮ್ಮಲು ಪೂರಕವಾದ ಆಮದು ಸುಂಕವನ್ನು ಕಡಿಮೆಗೊಳಿಸಬೇಕು.
ಆರ್ಥಿಕತೆಯ ಪುನಶ್ಚೇತನಕ್ಕೆ ಖಾಸಗೀಕರಣ ನಿರ್ಣಾಯಕವಾಗಲಿದೆ. ಹೂಡಿಕೆದಾರರ ವಿಶ್ವಾಸ ವೃದ್ಧಿಗೆ ಸರಕಾರವು ಕ್ರಮ ತೆಗೆದುಕೊಳ್ಳಬೇಕು ಎಂಬ ಸಲಹೆಯನ್ನು ನೀಡಿದ್ದಾರೆ. ಬಂಡವಾಳ ಹಿಂತೆಗೆತಕ್ಕೆ ಸರಕಾರವು ಪ್ರತ್ಯೇಕ ಇಲಾಖೆಯನ್ನು
ಸ್ಥಾಪಿಸಬೇಕು ಹಾಗೂ ಮೂಲ ಸೌಕರ್ಯಕ್ಕೆ ಧಾರಾಳವಾಗಿ ವೆಚ್ಚ ಮಾಡುವ ಸಲುವಾಗಿ ವಿತ್ತೀಯ ಕೊರತೆಯ ನಿಯಂತ್ರಣದ ಗುರಿಯನ್ನು ಸಡಿಲಗೊಳಿಸಬೇಕು. ರಫ್ತು ಹೆಚ್ಚಳಕ್ಕೆ ಆದ್ಯತೆ ನೀಡಬೇಕು ಮತ್ತು ಬ್ಯಾಂಕ್‌ಗಳಿಗೆ ಬಂಡವಾಳದ ನೆರವು ಒದಗಿಸಿ ಆಮದು ಸುಂಕ ಇಳಿಸುವ ಪ್ರಸ್ತಾವನೆಯನ್ನು ಮಂಡಿಸಿದ್ದಾರೆ.
ಈ ನಿಟ್ಟಿನಲ್ಲಿ ಬಜೆಟ್ ಮುಂದಡಿಯಿಡಬಹುದು. ಬಜೆಟ್ ಹಣದುಬ್ಬರ ಶಕ್ತಿಗಳಿಗೆ ದಾರಿ ಮಾಡಿಕೊಡದಂತೆ ಮುಂಜಾಗ್ರತೆ ವಹಿಸಿ ಕೃಷಿ ಸಂಕಷ್ಟಗಳಿಗೆ ಸ್ಪಂದಿಸಬೇಕು. ಇವೆರಡಕ್ಕೂ ಸರಕಾರದ ಭವಿಷ್ಯ ಬದಲಿಸುವ ಶಕ್ತಿ ಇದೆ.