ಬೈಂದೂರು ಚಂದ್ರಶೇಖರ ನಾವಡ
ಹಿಂದಿ ಭಾಷೆಯ ಸ್ಥಾನಮಾನದ ಕುರಿತಾಗಿ ಸಿನಿಮಾ ಕಲಾವಿದರು ಅನವಶ್ಯಕವಾಗಿ ಜನಭಾವನೆ ಕೆರಳಿಸುವ ವಾಗ್ವಾದದಲ್ಲಿ ತೊಡಗಿದ್ದು
ಇತ್ತೀಚೆಗೆ ಮಾಧ್ಯಮದಲ್ಲಿ ಸುದ್ದಿಯಾಯಿತು. ವಿವಿಧತೆಯಲ್ಲಿ ಏಕತೆ ನಮ್ಮ ದೇಶದ ವಿಶೇಷತೆ. ಕೆಲವೊಮ್ಮೆ ಧರ್ಮ, ಭಾಷೆ, ಪ್ರಾಂತ್ಯ ಮೇಲುಗೈ ಸಾಧಿಸಿದಂತೆ ಕಾಣುತ್ತೇವೆ.
ನಾವು ತಮಿಳರು, ಕನ್ನಡಿಗರು, ಮಲಯಾಳಿಗಳು, ಬಂಗಾಲಿಗಳು, ಪಂಜಾಬಿಗಳು ಎಂದು ಯೋಚಿಸುವ ಬದಲಾಗಿ ಭಾರತೀಯರು ಎಂದು ಯೋಚಿಸುವ ವಿಶಾಲ ಭ್ರಾತೃತ್ವ ಭಾವನೆ ಬೆಳೆದಾಗ ರಾಷ್ಟ್ರೀಯತೆ ಬಲಗೊಳ್ಳುತ್ತದೆ. ರಾಷ್ಟ್ರ ಮೊದಲು ಎನ್ನುವ ಸಿದ್ಧಾಂತವನ್ನು ಯಾವುದೇ ತಾರತಮ್ಯತೆ ಇಲ್ಲದೇ ಎಲ್ಲರೂ ಒಪ್ಪುವುದರಿಂದ, ಅನುಸರಿಸುವುದರಿಂದ ರಾಷ್ಟ್ರೀಯತೆಯ ಬೇರು ಗಟ್ಟಿಗೊಳ್ಳುವುದು ಸಾಧ್ಯವಾಗುತ್ತದೆ.
ರಾಜಕಾರಣಿಗಳ ಜತೆಯಲ್ಲಿ ಕಲಾವಿದರು, ಸಾಹಿತಿಗಳೂ ಇಂತಹ ಸಂಕುಚಿತ ವಾಗ್ವಾದ ದಲ್ಲಿ ಧುಮುಕುವುದು ಸರಿಯಲ್ಲ. ರಾಷ್ಟ್ರೀಯತೆ ನಮ್ಮ ಜನಮಾನಸದಲ್ಲಿ ಇಲ್ಲ ಎಂದಲ್ಲ. ಅದು ಗುಪ್ತಗಾಮಿನಿಯಂತೆ ಹರಿಯುತ್ತಿದೆ. ಯಾವಾಗಲೆಲ್ಲ ದೇಶ ವಿಪತ್ತಿನ ಸ್ಥಿತಿಯನ್ನು ಎದುರಿಸುತ್ತದೋ ಅದು ಮುನ್ನೆಲೆಗೆ ಬರುತ್ತದೆ. ಇಂತಹ ಅನೇಕ ಉದಾಹರಣೆಗಳು ನಮ್ಮ ಮುಂದಿವೆ. ಚೀನಾ-ಪಾಕಿಸ್ಥಾನದೊಂದಿಗಿನ ಯುದ್ಧದ ಸಂದರ್ಭದಲ್ಲಿ ಏಕತೆಯ ಜನಭಾವನೆ ಹರಿಯಿತು.
1962 ರಲ್ಲಿ ಶಾಂತಿಪ್ರಿಯತೆಯ ಆದರ್ಶ ಹೊತ್ತ ನಮ್ಮ ಅಂದಿನ ನಾಯಕರು ಸೈನ್ಯ ತಯಾರಿಗೆ ಮಾಡುವ ಖರ್ಚು ವ್ಯರ್ಥ ಎಂದು ಅಲಕ್ಷಿಸಿದ್ದರು. ಚೀನೀಯರ ಅತ್ಯಾಧುನಿಕ ಬಂದೂಕು, ಅವರು ಸೈನಿಕರಿಗೆ ನೀಡಿದ ಸವಲತ್ತುಗಳ ಎದುರು ಶಸ್ತ್ರಾಸ್ತ್ರಗಳಿಲ್ಲದ, ಚಳಿಯನ್ನು ತಡೆಯಲು ಸರಿಯಾದ ಬಟ್ಟೆ, ಬೂಟು ಇಲ್ಲದ, ಅಸಹಾಯಕ ಸ್ಥಿತಿಯಲ್ಲಿದ್ದ ನಮ್ಮ ಸೈನಿಕರನ್ನು ಯುದ್ಧ ಮಾಡುವಂತೆ ಆದೇಶ ನೀಡಲಾಯಿತು. ಎರಡು ಡಿವಿಜನ್ ಎಂದರೆ ಸುಮಾರು 20000 ದಷ್ಟಿದ್ದ ಚೀನೀಯರ ಮುಂದೆ ಕೇವಲ ಒಂದು ಬ್ರಿಗೇಡ್ ಎಂದರೆ 2500 ಸೈನಿಕರನ್ನು ನೂಕಲಾಯಿತು.
ಪರಿಣಾಮ ಏನಾಯಿತು ಎನ್ನುವುದು ಎಲ್ಲರಿಗೂ ಗೊತ್ತಿರುವ ಇತಿಹಾಸ. ಈ ಹಿನ್ನೆಲೆಯಲ್ಲಿ 1963 ರಲ್ಲಿ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರು ಸಂಸತ್ತಿನಲ್ಲಿ “ಏ ಮೇರೇ ವತನ್ ಕೇ ಲೋಗೋ ಜರಾ ಆಂಖ್ ಮೇ ಭರ್ ಲೋ ಪಾನಿ, ಜೋ ಶಹೀದ್ ಹುಯೇ ಉನಕೀ ಜರಾ ಯಾದ್ ಕರೋ ಕುರಬಾನೀ…. ” ಹಾಡಿದಾಗ ಸ್ವತಹ ಅವರು ಹಾಗೂ ಅಲ್ಲಿ ನೆರೆದಿದ್ದವರೆಲ್ಲರ ಕಣ್ಣುಗಳಲ್ಲಿ ಅಶ್ರುಧಾರೆ ಹರಿಯಿತು. ಇದು ದೇಶದ ಜನರ ಸಂವೇದನೆಯನ್ನು, ಏಕತೆಯ ಭಾವನೆಯನ್ನು ಎತ್ತಿ ತೋರಿಸುತ್ತದೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರರ ಕುರಿತು ಜನಭಾವನೆ ಎಲ್ಲರೆದುರು ಮುನ್ನೆಲೆಗೆ ಬಂತು.
ಅದೇ ರೀತಿಯಲ್ಲಿ 1975ರಲ್ಲಿ ದೇಶದ ಮೇಲೆ ತುರ್ತು ಸ್ಥಿತಿ ಹೇರಿದಾಗ ಜನರೆಲ್ಲರೂ ಸರಕಾರದ ಸರ್ವಾಧಿಕಾರಿ ಧೋರಣೆಯ ವಿರುದ್ಧ ಸಿಡಿದೆದ್ದರು. ಕಾರ್ಗಿಲ್ ಯುದ್ಧದ ಸಮಯದಲ್ಲಿ, ಅಪರೇಶನ್ ಪರಾಕ್ರಮ ಸಂದರ್ಭದಲ್ಲಿ ಸೈನ್ಯ ಬಟಾಲಿಯನ್ಗಳು ಗಡಿಯತ್ತ ಹೊರಟು ನಿಂತಾಗ ರೈಲ್ವೇ ಸ್ಟೇಷನ್ ಗಳಲ್ಲಿ ಸೈನಿಕರಿಗೆ ತಿಲಕವಿಟ್ಟು ಆರತಿ ಬೆಳಗಿ ಹರಸಿ ಬೀಳ್ಕೊಟ್ಟರು. ಅನೇಕ ಪ್ರಾಕೃತಿಕ ವಿಕೋಪ ಸಂದರ್ಭ ದಲ್ಲಿ ನೊಂದವರಿಗೆ ದೇಶದ ಮೂಲೆ ಮೂಲೆಗಳಿಂದ ಸಹಾಯ ಹಸ್ತ ಹರಿದು ಬಂದ ಉದಾಹರಣೆ ಇದೆ. ಕೊರೋನಾ ಸಮಯದಲ್ಲಿ ವಲಸಿಗಕಾರ್ಮಿಕರಿಗಾಗಿ ಅನೇಕರು ಆಹಾರ, ಸಂಚಾರ ವ್ಯವಸ್ಥೆ ಮಾಡಿದ್ದರು.
ಒಟ್ಟಿನಲ್ಲಿ ಹೇಳುವುದಾದರೆ ಒಂದು ಸಣ್ಣ ಸಮೂಹವನ್ನು ಹೊರತುಪಡಿಸಿ ಬಹುಸಂಖ್ಯಾತರು ದೇಶವನ್ನು ಪ್ರೀತಿಸುತ್ತಾರೆ. ಹಿಂದಿಯ ಪ್ರಸಿದ್ಧ ಕವಿ ಮಾಖನ್ ಲಾಲ್ ಚತುರ್ವೇದಿ ಪುಷ್ಪ ಕೀ ಅಭಿಲಾಷಾ ಎನ್ನುವ ಕವಿತೆಯೊಂದರಲ್ಲಿ ಪುಷ್ಪವೊಂದರ ಕೋರಿಕೆಯನ್ನು ಮನೋಜ್ಞ ವಾಗಿ ಚಿತ್ರಿಸಿದ್ದಾರೆ. ತಾನು ದೇವರ ಹಾರವಾಗಿಯೂ, ರಾಜ ಮಹಾರಾಜರ ಅಥವಾ ಸುಂದರ ಮಹಿಳೆಯರ ಮುಡಿಗೆ
ಏರಲು ಬಯಸುವುದಿಲ್ಲ ಎಂದು ಪುಷ್ಪವು ಭಿನ್ನವಿಸಿಕೊಳ್ಳುತ್ತದೆ. ಬದಲಾಗಿ ಅದು ವನಮಾಲಿಯನ್ನು ಉದ್ದೇಶಿಸಿ ದೇಶರಕ್ಷಣೆಗೆ ತಮ್ಮ ಶಿರವನ್ನೇ ಸಮರ್ಪಿಸಲು ಸಿದ್ಧರಾಗಿ ಯುದ್ಧಭೂಮಿಗೆ ತೆರಳುವ ಸೈನಿಕರು ಹಾದು ಹೋಗುವ ದಾರಿಯಲ್ಲಿ ತನ್ನನ್ನು ಎಸೆ ಎಂದು ತನ್ನ ದೇಶಭಕ್ತಿಯ ಭಾವನೆಯನ್ನು ವ್ಯಕ್ತಪಡಿಸುತ್ತದೆ.
ನಿಸ್ಸಂಶಯವಾಗಿಯೂ ದೇಶಭಕ್ತಿಯ ಸಿನಿಮಾಗಳನ್ನು ನೋಡಿದಾಗ, ಹಾಡು ಕೇಳಿದಾಗ ನಮ್ಮ ಮೈ ರೋಮಾಂಚನಗೊಳ್ಳುತ್ತದೆ. ದೇಶ ಮೊದಲು ಎನ್ನುವ ವಿಶಾಲ ಭಾವನೆ ಜಾಗೃತಗೊಳ್ಳುತ್ತದೆ. ಸಾಹಿತ್ಯಕ್ಕೆ ರಾಷ್ಟ್ರಪ್ರೇಮ, ರಾಷ್ಟ್ರೀಯ ಐಕ್ಯತೆಯನ್ನು ಬಡಿದೆಬ್ಬಿಸುವ ಅದ್ಭುತ ಶಕ್ತಿ ಇದೆ. ಹಿಂದಿಯಲ್ಲಿ ದೇಶಭಕ್ತಿ ಹೆಚ್ಚಿಸುವ ಮತ್ತು ಅದರ ಮಹತ್ವ ಸಾರುವ ವಿಫಲ ಸಾಹಿತ್ಯವಿದೆ. ಕನ್ನಡದಲ್ಲೂ ರಾಷ್ಟ್ರೀಯತೆಗೆ ಪೂರಕವಾಗುವ ಮತ್ತು ಪ್ರೇರಕವಾಗಬಲ್ಲ ಕಲೆ, ಸಾಹಿತ್ಯ ಬೆಳೆಯಬೇಕು. ಆ ನಿಟ್ಟಿನಲ್ಲಿ ಎಲ್ಲ ಕಲಾವಿದರು ಸಾಹಿತಿಗಳು ಯೋಚಿಸು ವಂತಾಗಲಿ. ತಮ್ಮ ಪ್ರತಿಭೆಯನ್ನು ರಾಷ್ಟ್ರೀಯತೆಗೆ ಕಂಟಕವಾಗುವ ಬದಲು ಪೂರಕವಾಗುವ ನಿಟ್ಟಿನಲ್ಲಿ ತೊಡಗಿಸಲಿ.