Saturday, 14th December 2024

ಸಮಾನ ನಾಗರಿಕ ಸಂಹಿತೆಯ ಜಾರಿಗೆ ಸಹಕರಿಸಬೇಕು

ಚರ್ಚಾವೇದಿಕೆ
ಪ್ರೊ.ಆರ್.ಜಿ. ಹೆಗಡೆ

ಸಂವಿಧಾನ ಜಾರಿಗೆ ತರುವಾಗಲೇ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತಂದುಬಿಟ್ಟಿದ್ದರೆ ವಿಷಯ ಮುಗಿದು ಹೋಗು ತ್ತಿತ್ತು. ಆದರೆ ಏಕೋ ಏನೋ, ಬಹುಶಃ ರಗಳೆ ಬೇಡವೆಂದು, ಅಥವಾ ರಾಜಕೀಯ ಕಾರಣಗಳಿಗಾಗಿ ಅದು ಜಾರಿಗೆ ಬರಲೇ ಇಲ್ಲ. ನಂತರ ಕೂಡ ಸತತವಾಗಿ ಚುನಾವಣಾ ರಾಜಕೀಯದ ಮೇಲೆ ಒಂದು ಕಣ್ಣು ಇಟ್ಟುಕೊಂಡೇ ಕುಳಿತುಕೊಂಡಿದ್ದ ಸರಕಾರಗಳು ಸಂಹಿತೆಯ ರಚನೆಯನ್ನು ಮುಂದೂಡುತ್ತಲೇ ಬಂದವು. ಈಗ ಮಾತು ಮತ್ತೆ ಮುಂದೆ ಬಂದಿದೆ.

ಏಕರೂಪ ನಾಗರಿಕ ಸಂಹಿತೆ ಕುರಿತಾದ ಪರ ಅಥವಾ ವಿರೋಧಿ ನಿಲುವು ತೆಗೆದು ಕೊಳ್ಳುವುದರ ಮೊದಲು ಒಂದಷ್ಟು ವಿಷಯ ಗಳನ್ನು ಅರ್ಥಮಾಡಿಕೊಳ್ಳಬೇಕು. ಮೊದಲನೆಯ ವಿಷಯ, ನಾಗರಿಕ ಸಂಹಿತೆ ಎಂದರೇನು ಎಂಬುದು. ಹಾಗೆಂದರೆ ಮುಖ್ಯ ವಾಗಿ ವೈಯಕ್ತಿಕ ವಿಷಯಗಳು, ಅಂದರೆ ವಿವಾಹ, ವಿಚ್ಛೇದನ, ಮರುವಿವಾಹ, ಕೌಟುಂಬಿಕ/ಪಿತ್ರಾರ್ಜಿತ ಆಸ್ತಿಯ ಹಕ್ಕು ಇಂಥವುಗಳಿಗೆ ಸಂಬಂಧಿಸಿದಂತೆ ಪುರುಷ/ಮಹಿಳೆಗೆ ಇರುವ ಕಾನೂನಾತ್ಮಕ ಅಧಿಕಾರ ಏನು ಎಂಬುದನ್ನು ಸ್ಪಷ್ಟಪಡಿಸುವ, ಹಾಗೆಯೇ ಅಂಥ ಅಧಿಕಾರದ ಮಿತಿಯನ್ನು ಗುರುತಿಸುವ ಕಾನೂನುಗಳ ಚೌಕಟ್ಟು, ವ್ಯವಸ್ಥೆ.

Read E-Paper click here

ಇಂಥ ಸಂಗತಿಗಳಿಗೆ ಸಂಬಂಧಿಸಿದ ಕಟ್ಟಳೆಗಳನ್ನು ನಾಗರಿಕತೆಗಳು, ಸಮಾಜಗಳು, ಸಂಸ್ಕೃತಿಗಳು, ಧರ್ಮ, ಜಾತಿ- ಉಪಜಾತಿಗಳು, ಜನಾಂಗಗಳು ತಮ್ಮ ತಮ್ಮ ಸ್ವಾಸ್ಥ್ಯ ಕಾಪಾಡಿಕೊಳ್ಳುವುದಕ್ಕಾಗಿ ನಿರೂಪಿಸಿರುತ್ತವೆ. ಸಾವಿರಾರು ವರ್ಷಗಳಿಂದ ಸಂಪ್ರದಾಯ ಗಳಾಗಿ, ಪದ್ಧತಿಗಳಾಗಿ, ಅಲಿಖಿತ ಸಾಮಾಜಿಕ ಒಪ್ಪಂದಗಳಾಗಿ ಇವು ಜಾರಿಗೊಂಡಿರುತ್ತವೆ. ಹೀಗೆ ಒಪ್ಪಿಕೊಳ್ಳಲಾದ ಸಾಮಾಜಿಕ, ಆರ್ಥಿಕ ನಡವಳಿಕೆಯೇ ನಾಗರಿಕ ಸಂಹಿತೆ. ಈ ಸಂಹಿತೆಗಳನ್ನು ಸಾಮಾಜಿಕ ಮೌಲ್ಯಗಳಾಗಿ ಪರಿವರ್ತಿಸುವ ಸಂಸ್ಕೃತಿಗಳು, ಅವನ್ನು ತಮ್ಮ ಪಠ್ಯಗಳು, ಕಥಾನಕಗಳು, ಧರ್ಮಗ್ರಂಥಗಳು, ಜನ ಪದ, ನಾಟಕಗಳು, ಲಾವಣಿಗಳು, ಭಾಷೆ, ಹಬ್ಬಗಳು, ಜಾತ್ರೆ ಗಳು ಇಂಥವುಗಳ ಮೂಲಕ ಪ್ರಚುರಪಡಿಸುತ್ತವೆ ಮತ್ತು ದೃಢೀಕರಿಸುತ್ತವೆ.

ಉದಾಹರಣೆಗೆ, ರಾಮಾಯಣ-ಮಹಾಭಾರತ ವೈಯಕ್ತಿಕ ಕಾನೂನುಗಳ ಕುರಿತಾದ ಹಿಂದೂ ಪರಿಕಲ್ಪನೆಯ ದಾಖಲೆಗಳು.
ಶ್ರೀರಾಮ ಏಕಪತ್ನೀ ವ್ರತಸ್ಥ. ಮಹಾಭಾರತದ ಮುಖ್ಯ ವಿಷಯ ಕುಟುಂಬದೊಳಗಿನ ಆಸ್ತಿವಿವಾದ. ಹಾಗೆಯೇ ಅದು ಇತರ ಹಲವು ಸಾಮಾಜಿಕ ಮೌಲ್ಯಗಳನ್ನು, ಉದಾಹರಣೆಗೆ ಧರ್ಮದಂತೆ ನಡೆಯುವುದು ಹೇಗೆ ಎಂಬುದನ್ನೂ ವಿಜೃಂಭಿಸಿ ಹೇಳುತ್ತದೆ. ಹಾಗೆಯೇ ಪವಿತ್ರ ಕುರಾನ್ ನಿರ್ವಿವಾದವಾಗಿ ‘ಶರಿಯಾ’ ಕಾನೂನಿನ ಮೂಲ.

ನಾಗರಿಕ ಸಂಹಿತೆ ಹುಟ್ಟಿಕೊಳ್ಳುವುದು, ಬೆಳೆಯುವುದು ಹೀಗೆ. ಇನ್ನೂ ಒಂದು ವಿಚಾರ. ಇಂಥ ಸಂಹಿತೆಗಳನ್ನು ಬೆಳೆಸಬೇಕಾದರೆ ಸಮಾಜಗಳು, ಸಂಸ್ಕೃತಿಗಳು ತಾವು ಬದುಕಿರುವ ಪರಿಸರದ ಭೂಗೋಳ, ವಾತಾವರಣ, ಗಂಡು-ಹೆಣ್ಣಿನ ಫಲವತ್ತತೆ, ಶರೀರ ರಚನೆ, ಮಗುವಿನ ಜನನದ ಪ್ರಮಾಣ, ಮಕ್ಕಳ ಕಾಳಜಿಯ ಅವಶ್ಯಕತೆಗಳು, ಕನಿಷ್ಠ ಜೀವನಕ್ಕೆ ಅಗತ್ಯವಿರುವ ಆಸ್ತಿ ಇತ್ಯಾದಿ ಅಂಶಗಳನ್ನು ಗಮನಕ್ಕೆ ತೆಗೆದುಕೊಳ್ಳುತ್ತವೆ, ತೆಗೆದುಕೊಂಡಿರಬೇಕು. (ಹಿಂದೂ ಗ್ರಂಥಗಳು, ಕುರಾನ್ ಇತ್ಯಾದಿ ಎಲ್ಲವೂ) ತಾವು ಹುಟ್ಟಿದ ಸಮಯದ ಭೌಗೋಳಿಕ, ಸಾಮಾಜಿಕ ಪರಿಸರವನ್ನೂ ಪರಿಗಣನೆಗೆ ತೆಗೆದು ಕೊಂಡಿದ್ದಿರಬೇಕು. ಅವನ್ನು ಆಧರಿಸಿ ಹುಟ್ಟಿರಬೇಕು. ವಿವಿಧ ಧರ್ಮಗಳು, ಸಂಸ್ಕೃತಿಗಳು ತಮ್ಮ ನಡುವೆ ನಾಗರಿಕ ಸಂಹಿತೆಯಲ್ಲಿ ಅಪಾರ ವಿಭಿನ್ನತೆಗಳನ್ನು ಹೊಂದಿ ರುವ ಕಾರಣ ಇದು.

ಹಾಗೆಯೇ ಅವು ತಾವು ದಾಟಿ ಬಂದ ಐತಿಹಾಸಿಕ ಸಂದರ್ಭಗಳ/ಒತ್ತಡಗಳ ಹಿನ್ನೆಲೆಯಲ್ಲಿ ತಮ್ಮ ಸಂಹಿತೆಯಲ್ಲಿ ಬದಲಾವಣೆ ಬೇಕೆನಿಸಿದರೆ ತಂದುಕೊಳ್ಳುತ್ತಾ ಹೋಗುತ್ತವೆ ಅಥವಾ ಮಾರ್ಪಾಡು ಅನುಭವಿಸುತ್ತವೆ. ಹಾಗಾಗಿ ಆಂತರಿಕವಾಗಿ ಹೆಚ್ಚು ಧಾರ್ಮಿಕ ಕ್ರಾಂತಿಗಳನ್ನು, ಒತ್ತಡಗಳನ್ನು ಕಂಡಿರುವ ಸಮಾಜ/ಸಮಾಜಗಳು ಬೇರೆ ಕೆಲವು ಧರ್ಮಗಳಿಗೆ ಹೋಲಿಸಿದರೆ ಹೆಚ್ಚು ‘ಆಧುನಿಕ’ವಾದ ನಾಗರಿಕ ಸಂಹಿತೆ ಹೊಂದಿರಬಹುದು.

ಚರಿತ್ರೆಯ ಮುಂದಿನ ಒಂದು ಹಂತದಲ್ಲಿ ಒಂದೇ ರೀತಿಯ ಸಾಂಸ್ಕೃತಿಕ ಹಿನ್ನೆಲೆ ಹೊಂದಿದ ಭೂಖಂಡ ಗಳು ಕ್ರಮೇಣ ‘ರಾಜಕೀಯ ರಾಷ್ಟ್ರ’ಗಳಾಗಿ (ಪೊಲಿಟಿಕಲ್ ಸ್ಟೇಟ್) ಪರಿವರ್ತನೆಗೊಂಡು, ತಮ್ಮನ್ನು ಸ್ವಯಮಾಧಿಕಾರವುಳ್ಳ ರಾಜಕೀಯ ವ್ಯವಸ್ಥೆಗಳಾಗಿ ನಿರೂಪಿಸಿಕೊಂಡವು. ಇದೆಲ್ಲ ವಿವಿಧ ಶತಮಾನಗಳಲ್ಲಿ ನಡೆದಿದೆ. ಇಪ್ಪತ್ತನೆಯ ಶತಮಾನದಲ್ಲಿ ಇಂಥ ಪೊಲಿ
ಟಿಕಲ್ ಸ್ಟೇಟ್‌ಗಳ ಸ್ಥಾಪನೆ ವೇಗ ಪಡೆಯಿತು.

ನೂರಾರು ದೇಶಗಳು ಹುಟ್ಟಿಕೊಂಡವು. ಹಲವು ವಿಧಗಳಲ್ಲಿ ಹುಟ್ಟಿಕೊಂಡವು. ಪ್ರಜಾಪ್ರಭುತ್ವ, ಧಾರ್ಮಿಕ, ರಾಜಸತ್ತೆ, ಸರ್ವಾಧಿ ಕಾರಿ, ಮಿಲಿಟರಿ ದೇಶಗಳು ಹೀಗೆ. ಮತ್ತು ಈ ಎಲ್ಲ ದೇಶಗಳು ಆಡಳಿತದ ಅನುಕೂಲಕ್ಕಾಗಿ ‘ಸಂವಿಧಾನ’ವನ್ನು ಸೃಷ್ಟಿಸಿ ಕೊಂಡವು. ಅಂದರೆ ಕಾನೂನುಗಳ ಕ್ರೋಡೀಕೃತ ದಸ್ತಾವೇಜುಗಳನ್ನು ಸೃಷ್ಟಿಸಿಕೊಂಡವು. ಪೊಲಿಟಿಕಲ್ ಸ್ಟೇಟ್‌ಗಳಿಗೆ ಸಂವಿ ಧಾನ ಪ್ರಾಥಮಿಕ ಅಗತ್ಯ. ಇದು ಜಗತ್ತಿನ ಎಲ್ಲ ದೇಶಗಳಲ್ಲಿಯೂ ನಡೆಯಿತು.

ಇನ್ನೂ ಒಂದು ವಿಷಯ. ಜಗತ್ತಿನ ಹಲವು ಭಾಗಗಳನ್ನು ಆಳಿದ ಇಂಗ್ಲೆಂಡ್, ಫ್ರಾನ್ಸ್, ಚೀನಾದಂಥ ದೇಶಗಳು ತಾವು ಆಳಿದ ದೇಶಗಳಲ್ಲಿ ತಮ ತಮಗೆ ತೋರಿದ, ಬೇಕಾದ ರೀತಿಯಲ್ಲಿ ತಮ್ಮದೇ ಆದ (ಸಾಂಸ್ಕೃತಿಕ ಮೂಲವಿಲ್ಲದ) ‘ನಾಗರಿಕ ಕಾನೂನು’
ಗಳನ್ನು ರಚಿಸಿದ್ದವು. ಉದಾಹರಣೆಗೆ ಭಾರತದಲ್ಲಿ ಶರಿಯಾ ಕಾನೂನು ೧೯೩೭ರಲ್ಲಿ ಬ್ರಿಟಿಷ್ ಆಡಳಿತದ ಸಂದರ್ಭದಲ್ಲಿ ಜಾರಿಯಾಯಿತು, ಸ್ವಾತಂತ್ರ್ಯ ದೊರೆಯುವುದಕ್ಕಿಂತಲೂ ಬಹಳ ಮೊದಲೇ.

ಹೀಗೆ ರಾಜಕೀಯ ದೇಶಗಳಿಗೆ ಸಂವಿಧಾನ ರಚಿಸಿಕೊಳ್ಳಲು ಐತಿಹಾಸಿಕವಾಗಿ ಎರಡು ರೀತಿಯ ಮಾರ್ಗದರ್ಶಿ ಸೂತ್ರಗಳು, ಆಕರ ಗಳು ಲಭ್ಯವಿದ್ದವು. ಒಂದು, ಸಾಮಾಜಿಕ ಪದ್ಧತಿಗಳು ನೀಡಿದ ಮೂಲಗಳು. ಎರಡು, ಪಾಶ್ಚಿಮಾತ್ಯ ದೇಶಗಳು ನೀಡಿಹೋದ ಕಾನೂನುಗಳು. ಹೀಗೆ ಲಭ್ಯವಿದ್ದ ಕಾನೂನು ಸೂತ್ರಗಳನ್ನೇ, ನಾಗರಿಕ ಸಂಹಿತೆಗಳನ್ನೇ ಹಲವು ದೇಶಗಳು (ಹೆಚ್ಚು ಕಡಿಮೆ) ಬಳಸಿಕೊಂಡವು. ಧರ್ಮ ಆಧರಿತ ದೇಶಗಳಲ್ಲಂತೂ ಮರುಮಾತು ಬರಲಿಲ್ಲ. ಧಾರ್ಮಿಕ ಸಂಹಿತೆಗಳನ್ನು ನೇರ ವಾಗಿ ಅವು ನಾಗರಿಕ ಸಂಹಿತೆಗಳ ನ್ನಾಗಿ ಒಪ್ಪಿ ಕೊಂಡುಬಿಟ್ಟವು. ಉದಾಹರಣೆಗೆ ಪಾಕಿಸ್ತಾನ.

ಇತರ ಹಲವು ಮುಸ್ಲಿಂ ದೇಶಗಳೂ ಹಾಗೆಯೇ ಮಾಡಿದವು. ಇತ್ತೀಚೆಗೆ ತಾಲಿಬಾನ್ ಅಂತೂ ಪವಿತ್ರ ಕುರಾನ್ ಗ್ರಂಥವೇ ತನ್ನ ಕಾನೂನು ಎಂದು ಹೇಳಿ ಬಿಟ್ಟಿದೆ. ಮಾತಾಡುವ ಹಾಗಿಲ್ಲ. ಕ್ರಿಶ್ಚಿಯನ್ ದೇಶಗಳು ಧರ್ಮ ಮತ್ತು ದೇಶದ ನಡುವೆ ವ್ಯತ್ಯಾಸ ಕಂಡು
ಕೊಂಡು (ಅಥವಾ ಹಾಗೆ ಹೇಳಿಕೊಂಡು) ಕಾನೂನುಗಳನ್ನು ತಂದವು. ಅವುಗಳಲ್ಲಿ ಕೆಲವು ಪ್ರಗತಿಪರ ನಿಲುವು ತಳೆದಿದ್ದೂ ಹೌದು. ಉದಾಹರಣೆಗೆ ಅಮೆರಿಕ.

ಇನ್ನೂ ಒಂದು ಮಾತು: ಕ್ರಾಂತಿಕಾರಿತ್ವ ಅಥವಾ ಧಾರ್ಮಿಕತೆ ಎರಡರಲ್ಲಿ ಒಂದು ಹೆಚ್ಚು ಶಕ್ತಿಯುತವಾಗಿದ್ದ ದೇಶಗಳಲ್ಲಿ ನಂತರದ ವರ್ಷಗಳಲ್ಲಿ ಬದಲಾವಣೆಯ ಅಗತ್ಯ ಕಂಡರೆ ಅದನ್ನು ಜಾರಿಗೆ ತರುವುದೂ ಸುಲಭವೇ ಆಗಿಹೋಯಿತು. ಏಕೆಂದರೆ
ಒಂದು ಲಾಬಿಗೆ ಅಲ್ಲಿ ಸ್ಪಷ್ಟವಾಗಿ ಹೆಚ್ಚು ಬಲವಿದೆ. ಆದರೆ ವಿಷಯ ಸಂಕೀರ್ಣವಾಗಿ ಹೋಗಿದ್ದು ಭಾರತದಲ್ಲಿ. ಏಕೆಂದರೆ ಭಾರತ ಸಾಂಸ್ಕೃತಿಕವಾಗಿ, ರಾಜಕೀಯವಾಗಿ ಜಗತ್ತಿನ ಎಲ್ಲ ದೇಶಗಳಿಗಿಂತಲೂ ವಿಭಿನ್ನವಾದ ದೇಶ. ಚಾರಿತ್ರಿಕ ಕಾರಣಗಳಿಂದಾಗಿ ಜಗತ್ತಿನ ಎಲ್ಲಾ ಧರ್ಮಗಳನ್ನು ಆಚರಣೆ ಮಾಡುವ ದೊಡ್ಡ ಸಂಖ್ಯೆಯ ಜನ ಇಲ್ಲಿದ್ದಾರೆ. ಒಳ, ಉಪ ಸಂಸ್ಕೃತಿಗಳು ಇವೆ.

ತಮ್ಮದೇ ಆದ ವ್ಯವಸ್ಥೆಗಳನ್ನು ಹೊಂದಿರುವ ಬುಡಕಟ್ಟು ಜನಾಂಗಗಳೂ ಇವೆ. ಅಷ್ಟೇ ಅಲ್ಲ, ಭಾರತವು ಜಾತ್ಯತೀತ ಕನಸು ಗಳನ್ನು, ವ್ಯವಸ್ಥೆಯನ್ನು ಇಟ್ಟುಕೊಂಡಿರುವ ದೇಶ. ಧಾರ್ಮಿಕ ಆಧಾರದ ಮೇಲೆ ದೇಶ ವಿಭಜನೆಯಂಥ ಮಹಾದುರಂತ ನಡೆದು ಹೋದರೂ ಭಾರತ ಆದರ್ಶಗಳ ಗುಂಗಿನಲ್ಲಿಯೇ ಇತ್ತು. ದೇಶವನ್ನು ರವೀಂದ್ರನಾಥ ಟ್ಯಾಗೋರರು ಹೇಳುವ ರೀತಿಯ ‘ಸ್ವಾತಂತ್ರ್ಯದ ಸ್ವರ್ಗ’ವನ್ನಾಗಿಸುವ (‘ಹೆವನ್ ಆಫ್ ಫ್ರೀಡಮ್’) ರೊಮ್ಯಾಂಟಿಕ್ ಹಂಬಲದಲ್ಲಿ ನೆಹರು ಇದ್ದರು. ಹೀಗೆಲ್ಲ ಆಗಿ ತನ್ನನ್ನು ತಾನು ಜಾತ್ಯತೀತ ಎಂದು ದೇಶ ಕರೆದುಕೊಂಡೂಬಿಟ್ಟಿತು.

ಮತ್ತು ಧಾರ್ಮಿಕ ಹಕ್ಕನ್ನು ಮೂಲಭೂತ ಹಕ್ಕಾಗಿ ನೀಡಿ ಬಿಟ್ಟಿತು. ಏಕರೂಪ ನಾಗರಿಕ ಸಂಹಿತೆಯನ್ನು ಕೇವಲ ‘ಅಪೇಕ್ಷಣೀಯ’ ಎಂದು ಭಾವಿಸಿ ಅದರ ಜಾರಿಯನ್ನು ಸಂವಿಧಾನದ ನಿರ್ದೇಶಕ ತತ್ತ್ವಗಳ ಭಾಗವನ್ನಾಗಿಸಿತು. ನಾಗರಿಕ ಸಂಹಿತೆ ತರಲು ಸರಕಾರ ಗಳು ಪ್ರಯತ್ನಿಸಬೇಕು ಎನ್ನುವ ಮಾತು ಹೇಳಿ ಕೈ ತೊಳೆದುಕೊಂಡು ಬಿಟ್ಟಿತು. ಬಹುಶಃ ಸಂವಿಧಾನ ಜಾರಿಗೆ ತರು ವಾಗಲೇ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತಂದುಬಿಟ್ಟಿದ್ದರೆ ವಿಷಯ ಮುಗಿದುಹೋಗುತ್ತಿತ್ತು.

ಆದರೆ ಏಕೋ ಏನೋ, ಬಹುಶಃ ರಗಳೆ ಬೇಡವೆಂದು, ಅಥವಾ ರಾಜಕೀಯ ಕಾರಣಗಳಿಗಾಗಿ ಅದು ಜಾರಿಗೆ ಬರಲೇ ಇಲ್ಲ. ನಂತರ ಕೂಡ ಸತತವಾಗಿ ಚುನಾವಣಾ ರಾಜಕೀಯದ ಮೇಲೆ ಒಂದು ಕಣ್ಣು ಇಟ್ಟುಕೊಂಡೇ ಕುಳಿತುಕೊಂಡಿದ್ದ ಸರಕಾರಗಳು ಸಂಹಿತೆ ಯ ರಚನೆಯನ್ನು ಮುಂದೂಡುತ್ತಲೇ ಬಂದವು. ಈಗ ಮಾತು ಮತ್ತೆ ಮುಂದೆ ಬಂದಿದೆ.

ಈ ಹಿನ್ನೆಲೆಯಲ್ಲಿ, ದೇಶಕ್ಕೆ ಸಮಾನ ನಾಗರಿಕ ಸಂಹಿತೆಯ ಪ್ರಶ್ನೆ ಏಕೆ ಪದೇಪದೆ ಮುನ್ನೆಲೆಗೆ ಬರುತ್ತಿದೆ? ಅದರ ಅಗತ್ಯವಿದೆಯೇ? ಅಥವಾ ವಿಷಯವನ್ನು ಇಲ್ಲಿಗೇ ಬಿಟ್ಟುಬಿಡಬೇಕೇ? ಸಂಹಿತೆ ಜಾರಿಗೊಳಿಸುವುದರ ಹಿಂದಿನ ನಮ್ಮ ಉದ್ದೇಶಗಳೇನು? ಅದು ಹೇಗೆ ಇರಬೇಕು? ಜಾರಿಗೆ ತಂದರೆ ಎದುರಿಸಬೇಕಾಗುವ ಸವಾಲುಗಳೇನು? ಅದನ್ನು ಸಾಧಿಸಲು ಈಗಿನ ಸಂವಿಧಾನದಲ್ಲಿ ಏನು ಬದಲಾವಣೆ ತರಬೇಕಾಗುತ್ತದೆ? ಎನ್ನುವುದರ ಕುರಿತು ಈಗ ನಾವು ಯೋಚಿಸಬೇಕು. ವಿಷಯ ಸ್ಪಷ್ಟ. ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬರಬೇಕು ಎಂಬ ವಾದ ಪದೇಪದೆ ಎದುರು ಬಂದು ನಿಲ್ಲುತ್ತಿರುವುದಕ್ಕೆ ಪ್ರಮುಖ ಕಾರಣ ೧೯೩೭ರಲ್ಲಿ ದೇಶದಲ್ಲಿ ಜಾರಿಯಾದ, ನಂತರ ಮುಂದುವರಿದ ಶರಿಯಾ ಕಾನೂನು ಅಥವಾ ಮುಸ್ಲಿಂ ವೈಯಕ್ತಿಕ ಕಾನೂನು.

ಏಕೆಂದರೆ ಅದು ದೇಶದ ಉಳಿದೆಲ್ಲ ಧರ್ಮಗಳ ಸಂಹಿತೆಗಳಿಗಿಂತಲೂ ವಿಭಿನ್ನ. ಅದರ (ಹಲವು) ಅಂಶಗಳ ಕುರಿತು ಹಲವು ವಾದ ಗಳ ಹಿನ್ನೆಲೆಯಲ್ಲಿ ತಕರಾರು ಇದೆ. ಆದರೆ ವಿವಾದಿತ ವಿಷಯ ಶರಿಯಾ ಕಾನೂನು ಒಂದೇ ಏನೂ ಅಲ್ಲ. ಹಿಂದೂ ಅವಿಭಕ್ತ ಕುಟುಂಬ ಹೊಂದಿರುವ ವಿಶೇಷ ಕಾನೂನಿಗೆ ಕೂಡ ತಕರಾರು ಇದೆ. ಉಳಿದಂತೆ ಕ್ರಿಶ್ಚಿಯನ್, ಸಿಖ್, ಪಾರ್ಸಿ ಇತ್ಯಾದಿ ಪದ್ಧತಿಗಳ ನಡುವೆ ಸಣ್ಣ ಪುಟ್ಟ ಭಿನ್ನತೆಗಳಿವೆ. ಅವನ್ನೆಲ್ಲ ನಾಗರಿಕ ಸಂಹಿತೆಯ ಕೊಡೆಯ ಒಳಗೆ ತರಲು ಬಹಳ ದೊಡ್ಡ ಸಮಸ್ಯೆಗಳು ಇದ್ದಂತಿಲ್ಲ.

ಶರಿಯಾ ಕಾನೂನು ಹಾಗೂ ಹಿಂದೂ ಅವಿಭಕ್ತ ಕುಟುಂಬಗಳ ಕಾನೂನು, ಏಕರೂಪ ನಾಗರಿಕ ಸಂಹಿತೆ ಬೇಕೇ ಬೇಕು ಎನ್ನುವ ಬೇಡಿಕೆಯ ಹಿಂದಿರುವ ಬಲವಾದ ಕಾರಣಗಳು ಮತ್ತು ಸಂಹಿತೆಗೆ ಅಡ್ಡಗಾಲಾಗಿರುವ ವಿಷಯಗಳು. ಶರಿಯಾ ಕಾನೂನು ವಿರೋಧಿಸುವವರ ವಾದಕ್ಕೆ ಮೂರು ಆಯಾಮಗಳಿವೆ. ಒಂದು, ಮಹಿಳಾ ಸಬಲೀಕರಣ ಕುರಿತಾದ ವಾದ. ಅಂದರೆ ‘ಶರಿಯಾ’ ದಲ್ಲಿರುವ ಕೆಲವು ಅಂಶಗಳು ಸಮಾನತೆಗೆ ವಿರುದ್ಧವಾಗಿವೆ.

ಪುರುಷನ ಸಮಾನವಾದ ಹಕ್ಕನ್ನು ಅದು ಮಹಿಳೆಯರಿಗೆ ನೀಡುವುದಿಲ್ಲ, ಮಹಿಳೆಯ ಘನತೆಯನ್ನು ಅವಗಣಿಸುತ್ತದೆ ಎನ್ನುವುದು. ಈ ಮಾತಿಗೆ ಆಧಾರವಾಗಿ ವಾದ ತೋರಿಸುವುದು ಶರಿಯಾ ಬೆಂಬಲಿತ ಬಹುಪತ್ನಿತ್ವ ಪದ್ಧತಿ, ಹುಡುಗಿಯರ ವಿವಾಹಕ್ಕೆ ಕನಿಷ್ಠ ವಯೋಮಿತಿ ಇಲ್ಲದಿರುವುದು, ಪತಿ ಹೆಂಡತಿಯನ್ನು ಹಿಂಸಿಸಲು ಅವಕಾಶ ಕಲ್ಪಿಸಿಬಿಡಬಹುದಾದ ತಲಾಕ್ ಪದ್ಧತಿ (ವಿಚ್ಛೇದನ), ಗಂಡ ತೀರಿಹೋದರೆ ಹೆಂಡತಿ ಮರು ವಿವಾಹವಾಗುವ ಮೊದಲು ಅನುಸರಿಸಬೇಕಾದ ಇದ್ದತ್ ಪದ್ಧತಿ (ಕನಿಷ್ಠ ಕಾಯುವಿಕೆಯ ಅವಧಿ). ಹಾಗೆಯೇ ಮಹಿಳೆಗೆ ಸಮಾನ ಹಕ್ಕು ನೀಡದ ಗಂಡನ ಆಸ್ತಿಯ ಪಾಲು ಪಡೆಯುವ ಹಕ್ಕು, ವಿಚ್ಛೇದನ ಪಡೆದ ಮಹಿಳೆ ಪುನಃ ಅದೇ ವ್ಯಕ್ತಿಯನ್ನು ಮದುವೆಯಾಗಲು ಬಯಸಿದರೆ ಆಕೆ ಅನುಸರಿಸಬೇಕಾದ ಒಂದು
ಅವಮಾನಕರ ಪದ್ಧತಿ ಇಸ್ಲಾಂನ ಕೆಲವು ಸೆಕ್ಟ್‌ಗಳಲ್ಲಿವೆ ಎಂಬುದು ಶರಿಯಾ ವಿರೋಧಿಗಳ ವಾದ.

ಈ ವ್ಯವಸ್ಥೆಗಳು ಮಹಿಳೆಯರ ಘನತೆಗೆ ವಿರೋಧ ವಾಗಿವೆ. ಆದ್ದರಿಂದ ಶರಿಯಾ ಅನ್ನು ರದ್ದುಪಡಿಸಬೇಕು ಎನ್ನುವುದು ಒಂದು ವಾದ. ಎರಡನೆಯ ವಾದ, ಇಸ್ಲಾಂನಲ್ಲಿರುವ ಬಹುಪತ್ನಿತ್ವದಿಂದಾಗಿ ಮುಸ್ಲಿಂ ಜನಸಂಖ್ಯೆ ಬೆಳೆಯುತ್ತಿದೆ. ಹಾಗಾಗಿ ಅದನ್ನು
ರದ್ದುಪಡಿಸಬೇಕು ಎನ್ನುವುದು. ಮೂರನೆಯ ವಾದ, ಬಹುಪತ್ನಿತ್ವ ಹೊಂದುವುದಕ್ಕೆ ಮತ್ತು ಅವರ ಕೀಳು ಅಭಿರುಚಿಗಳಿಗೆ ಶರಿಯಾ ರಕ್ಷಣೆ ನೀಡಿದೆ ಎನ್ನುವುದು. ಈ ವಾದವನ್ನು ಎತ್ತಿಹಿಡಿಯುವವರು ಬೆರಳಿಟ್ಟು ತೋರಿಸುವುದು ಕೆಲವು ಅನ್ಯಧರ್ಮೀ ಯರೂ ತಮ್ಮ ಬಹುಪತ್ನಿತ್ವ ರಕ್ಷಿಸಿಕೊಳ್ಳುವ ಸಲುವಾಗಿ ಇಸ್ಲಾಂಗೆ ಮತಾಂತರಗೊಂಡು ಈ ಕಾನೂನುಗಳನ್ನು ಬಳಸಿಕೊಂಡರು ಎನ್ನುವುದು.

ಅಂದರೆ ಈ ಕಾನೂನುಗಳ ದುರ್ಬಳಕೆ ಆಗಿವೆ ಎನ್ನುವ ವಾದ. ತಕರಾರು ಇರುವುದು ಕೇವಲ ಇಸ್ಲಾಂನ ಕುರಿತಾಗಿ ಅಲ್ಲ. ಹಿಂದೂ
ಅವಿಭಕ್ತ ಕುಟುಂಬದ ಕಾನೂನು ಹಿಂದುಗಳಿಗೆ ಆರ್ಥಿಕವಾಗಿ ಹಲವು ವಿಶೇಷ ಸವಲತ್ತುಗಳನ್ನು ನೀಡುತ್ತದೆ ಎಂದು ವಾದವಿದೆ.
ಏಕರೂಪ ನಾಗರಿಕ ಸಂಹಿತೆ ಬೇಡ ಎನ್ನುವ ವಾದಕ್ಕೆ ಎರಡು ಆಯಾಮಗಳಿವೆ. ಒಂದನೆಯದೆಂದರೆ, ಈ ಸಂಹಿತೆಯನ್ನು ಜಾರಿಗೆ ತರುವುದರ ಹಿಂದೆ ಮುಸ್ಲಿಂ ಸಮುದಾಯದ ಧಾರ್ಮಿಕ ಹಕ್ಕುಗಳನ್ನೇ ಮೊಟಕು ಗೊಳಿಸುವ ಹುನ್ನಾರವಿದೆ ಎನ್ನುವುದು.

ಹಿಂದುತ್ವದ ರಾಜಕೀಯದ ಹುನ್ನಾರವಿದೆ ಎನ್ನುವುದು. ಹಾಗೆಯೇ ವಾದ ಹೇಳುವುದೆಂದರೆ, ಏಕರೂಪ ನಾಗರಿಕ ಸಂಹಿತೆಯು ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾಗಿದೆ ಎನ್ನುವುದು, ಅಂದರೆ ವ್ಯಕ್ತಿಯ ಧಾರ್ಮಿಕ ಸ್ವಾತಂತ್ರ್ಯದ ಆಚರಣೆಗೆ ಅವಕಾಶ ಇರುವುದಿಲ್ಲ ಎನ್ನುವುದು. ವಾದ ಹೇಳುವುದೆಂದರೆ, ಸಂಹಿತೆಯು ಆದಿವಾಸಿ ಸಂಸ್ಕೃತಿಗಳ ಮೇಲೂ ಗದಾಪ್ರಹಾರ ಮಾಡಿ ಅವನ್ನು ನಾಶಗೊಳಿಸುತ್ತದೆ ಎನ್ನುವುದು (ಆದಿವಾಸಿಗಳ ಸಾಂಸ್ಕೃತಿಕ ಪದ್ಧತಿಗಳು ಚಿತ್ರ-ವಿಚಿತ್ರವಾಗಿವೆ).

ಸಮಾನ ನಾಗರಿಕ ಸಂಹಿತೆ ಜಾರಿಯಾದರೆ ಒಳ್ಳೆಯದು ಎನ್ನುವ ವಾದ ತಾತ್ತ್ವಿಕವಾಗಿ ಸರಿ. ಆದರೆ ಪ್ರಶ್ನೆ ಇರುವುದು ದೇಶದೊಳಗೆ ರಕ್ತಪಾತಕ್ಕೆ ಎಡೆಕೊಡದೆ ಏಕರೂಪತೆ ತರುವುದು ಹೇಗೆ ಎನ್ನುವುದು, ಸಂಬಂಧಿಸಿದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳು
ವುದು ಹೇಗೆ ಎನ್ನುವುದು. ಸಂತೋಷದ ವಿಷಯವೆಂದರೆ ಭಾರತದ ಕಾನೂನು ಆಯೋಗ ಈ ದಿಶೆಯಲ್ಲಿ ಬಹಳ ನ್ಯಾಯಯುತ ವಾದ, ಪಾರದರ್ಶಕವಾದ ರೀತಿ ಯಲ್ಲಿ ಹೆಜ್ಜೆ ಇಡಲು ಆರಂಭಿಸಿದೆ.

ಸಾರ್ವಜನಿಕರಿಂದ ಅಹವಾಲು, ಸಲಹೆ-ಸೂಚನೆ ಕೇಳಿದೆ. ವಿಚಾರ ಸಂಕಿರಣಗಳನ್ನು ಹಮ್ಮಿಕೊಳ್ಳುವುದಾಗಿ ಹೇಳಿದೆ. ಸರ್ವ
ಸಮ್ಮತಿಯಿಂದ, ಮಾತುಕತೆಯ ಮೂಲಕ, ನ್ಯಾಯ ವಾದ ರೀತಿಯಲ್ಲಿ ಏಕರೂಪ ನಾಗರಿಕ ಸಂಹಿತೆಯೊಂದನ್ನು ಜಾರಿಗೆ ತರಲು ಅದು ಉದ್ದೇಶಿಸಿದೆ. ಆಯೋಗದ ಜತೆ ಸಹಕರಿಸುವುದು, ಏಕರೂಪ ಸಂಹಿತೆ ಜಾರಿಗೆ ತರಲು ಸಹಕರಿಸುವುದು ನಮ್ಮೆಲ್ಲರ ಕರ್ತವ್ಯ.