Thursday, 19th September 2024

ವಾಟ್ಸಾಪ್‌ ಯೂನಿವರ್ಸಿಟಿ ವರ್ಸಸ್‌ ಬನಾರಸ್ ಯೂನಿವರ್ಸಿಟಿ

ತುಂಟರಗಾಳಿ

ಲೂಸ್ ಟಾಕ್
ಜಮೀರ್ ಅಹ್ಮದ್‌

ಕಂಜಾಜುಲೇಷನ್ ಬ್ರದರ್, ಕಂಜಾಜುಲೇಶನ್, ಮಗನ್ ಸಿನಿಮಾ ಚೆನ್ನಾಗಿ ಓಡ್ತಾ ಇದೆಯಂತೆ, ಲಾಟ್ರಿ, ಲಾಟ್ರಿ ?
-ಥ್ಯಾಂಕ್ಯೂ ಬ್ರದರ್, ಒಟ್ನಲ್ಲಿ ನನ್ನ ಮಗನ್ನ ಕೆಲವರು, ಅಮೀರ್ ಬಾಪ್ ಕಾ ಬೇಟಾ ಅಂತಿದ್ರು, ಈಗ ನಾನು ಜಮೀರ್ ಬಾಪ್ ಕಾ ಬೇಟಾ ಅಂತ ಪ್ರೂವ್ ಮಾಡಿದ್ದಾನೆ.

ನಿಜ, ಆದ್ರೂ ನಿಮ್ಮ ಮಗನ ಸಿನಿಮಾ ಹಿಟ್ ಆಗಿದ್ದು ಕೆಲವರಿಗೆ ಕಷ್ಟ ಆಗಿದೆಯಂತೆ?
-ಯಾಕ್ ಸಾಮೀ, ಬರೀ ಬಡವರ ಮನೆ ಮಕ್ಕಳು ಮಾತ್ರ ಬೆಳಿಬೇಕಂತಾ? ಶ್ರೀಮಂತರ ಮಕ್ಳೂ ಬೆಳೀಲಿ ಬಿಡಿ.

ಅಯ್ಯೋ, ನಾನ್ ಹಂಗೇಳಿಲ್ಲ, ಸರಿ ಕೆಲವರು ನಿಮ್ಮ ಮಗನ ಸಿನಿಮಾನ ಬಾಯ್ಕಾಟ, ಬ್ಯಾನ್ ಮಾಡಬೇಕು ಅಂತ ಹಾರಾಡ್ತಾ ಇದ್ರಲ್ಲ?

-ಈಗ ಅವರಿಗೆಲ್ಲ ನನ್ನ ಖರ್ಚ ಬ್ಯಾನ್ ಕಾಕ್ ಹೋಗೋಕೆ ವ್ಯವಸ್ಥೆ ಮಾಡಿದ್ದೀನಿ ಬ್ರದರ್. ಎಂಜಾಯ್ ಮಾಡ್ಲಿ.

ಕೆಲವರು ಮುಸ್ಲಿಮರನ್ನು ಬರೀ ಪಂರ್ಕ್ಚ ಹಾಕೋರು ಅಂತ ಆಡಿಕೊಳ್ತಾ ಇದ್ರಲ್ಲ?
– ಅದಕ್ಕೇ ಈಗ ನಮಗೆ ಪಂಕ್ಚರ್ ಹಾಕೋದಷ್ಟೇ ಅಲ್ಲ, ಪಿಕ್ಚರ್ ಮಾಡೋಕೂ ಬರುತ್ತೆ ಅಂತ ತೋರಿಸಿದ್ದೀವಿ.

ಆದ್ರೂ, ಎದೆಯಲ್ಲಿ ನಾಕಕ್ಷರ ಇಲ್ಲದೋರ ಸಿನಿಮಾ ಅಂತ ವಾಟ್ಸಾಪ್ ನಲ್ಲಿ ನಿಮ್ಮ ಸಿನಿಮಾ ಬಗ್ಗೆ ಅಪಪ್ರಚಾರ ಮಾಡ್ತಾ ಇದ್ದಾರಲ್ಲ?

-ಹೋಗ್ಲಿ ಬಿಡಿ, ಬ್ರದರ್, ಎದೆಯಲ್ಲಿ ನಾಕಕ್ಷರ ಇಲ್ಲದೋರು ಈಗ ಬನಾರಸ್ ಯೂನಿವರ್ಸಿಟಿವರೆಗೂ ಬಂದಿದ್ದೀವಿ. ವಾಟ್ಸಾಪ್ ಯೂನಿವರ್ಸಿಟಿ ಬೊಗಳ್ತಾ ಇರುತ್ತೆ, ಬನಾರಸ್ ಯೂನಿವರ್ಸಿಟಿ ಹೋಗ್ತಾ ಇರುತ್ತೆ.
(ಕಾಲ್ಪನಿಕ ಸಂದರ್ಶನ)

ಸಿನಿಗನ್ನಡ
ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಬಂದಮೇಲೆ, ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಅವರಿಗೆ ಬರಲಿಲ್ಲ, ಇವರಿಗೆ ಬರಲಿಲ್ಲ ಅಂತ ಮೊಸರಲ್ಲಿ ಕಲ್ಲು ಹುಡುಕೋ ಜನರ ನಡುವೆ ಇನ್ನೊಂದಷ್ಟು ಜನ ಇನ್ನೂ ತಮ್ಮ ಜಾತಿ ವಾದದ ಮುಳುಗಿzರೆ. ಪುನೀತ್ ರಾಜ್‌ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ನಮ್ಮ ಸರಕಾರ ಗೌರವಿಸಿದೆ. ಇದು ಪುನೀತ್ ರಾಜ್ ಕುಮಾರ್ ಅವರು ನಮ್ಮ ಕನ್ನಡ ನಾಡಿನ ಸಮಾಜದಲ್ಲಿ ಸಂಪಾದಿಸಿದ ಪ್ರೀತಿ, ವಿಶ್ವಾಸ ಮತ್ತು ಗೌರವ.

ಆದರೆ ವಿಪರ್ಯಾಸ ಅಂದ್ರೆ ಸಾಮಾಜಿಕ ಜಾಲತಾಣಗಳಲ್ಲಿ ಇದನ್ನು ಕೇವಲ ತಮ್ಮ ಸಮಾಜಕ್ಕೆ ಸಂದ ಗೌರವ ಅಂತ ಎಲ್ಲಿಗ್ ಹೋದ್ರೂ ಸುತ್ತು ಹಾಕ್ಕೊಂಡು ಅಲ್ಲಿಗೇ ಬರೋ ಕೆಲವು ಜಾತಿವಾದಿಗಳು ಪ್ರಚಾರ ಪಡೆದುಕೊಳ್ತಾ ಇರೋದು. ಯಾರೋ ಮಹಾನುಭಾವ, ಇದು ನಮ್ಮ ಈಡಿಗ ಸಮುದಾಯಕ್ಕೆ ಸಂದ ಜಯ, ಪುನೀತ್ ಅವರಿಗೆ ಕರ್ನಾಟಕ ರತ್ನ ಬರಲು ಕಾರಣರಾದ ನಮ್ಮ ಜಾತಿಯ ನಾಯಕರುಗಳಾದ ಅಂತ ಒಂದಷ್ಟು ಹೆಸರುಗಳನ್ನು ಹಾಕಿ ಅವರೆಲ್ಲರಿಗೂ ಪುನೀತ್ ಅಭಿಮಾನಿಗಳ ಪರವಾಗಿ ಧನ್ಯವಾದಗಳು ಅಂತ ಫೇಸ್ ಬುಕ್‌ನಲ್ಲಿ ಬರೆದುಕೊಂಡಿರೋದನ್ನು ನೋಡಿದ್ರೆ, ಇದಕ್ಕೆ ಅಳಬೇಕೋ, ನಗಬೇಕೋ ಎಂಬ ಅನುಮಾನ ಬರೋದಷ್ಟೇ ಅಲ್ಲ, ಎಂಥ ಸಾತ್ವಿಕ ಪುನೀತ್ ಅಭಿಮಾನಿಗಳಿಗಾದ್ರೂ ಸಿಟ್ಟು ನೆತ್ತಿಗೇರೋದು ಸಹಜ.

ಡಾ. ರಾಜ್‌ಕುಮಾರ್ ಅವರಾಗಲಿ ಅವರ ಕುಟುಂಬದವರಾಗಲೀ ಯಾವತ್ತೂ ತಮ್ಮ ಜಾತಿಯನ್ನು ಹೇಳಿಕೊಂಡು ಅದರಿಂದ
ಲಾಭ ಪಡೆದವರೂ ಅಲ್ಲ, ಅಥವಾ ಕೇವಲ ತಮ್ಮ ಜಾತಿಯವರ ಕಲ್ಯಾಣಕ್ಕೆ ಶ್ರಮಿಸಿದವರೂ ಅಲ್ಲ. ಅವರದ್ದು ಕಲಾವಿದರ ಜಾತಿಯ ಕುಟುಂಬ ಅಷ್ಟೇ. ಇದು ಇಡೀ ಕರ್ನಾಟಕಕ್ಕೇ ಗೊತ್ತಿರುವ ವಿಷಯ. ಆದರೆ, ಅಂತಹ ದೊಡ್ಡವರ ಹೆಸರನ್ನೂ ಕೇವಲ ತಮ್ಮ ಜಾತಿಯ ಮಟ್ಟಕ್ಕೆ ಸೀಮಿತಗೊಳಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಜನ ಇನ್ನೂ ನಮ್ಮ ಸಮಾಜದಲ್ಲಿ ಇದ್ದಾರೆ ಅನ್ನೋದೇ ದೊಡ್ಡ ದುರಂತ.

ರಾಜಕಾರಣದಲ್ಲಿ ಇದೆಲ್ಲ ಸಹಜ. ಆದರೆ ರಾಜ್ ಕುಮಾರ್ ಅವರ ಕುಟುಂಬವನ್ನು ತಮ್ಮ ಜಾತಿಗೆ ಸೇರಿಸಿ, ರಾಜ್ ಹೆಸರಲ್ಲಿ ರಾಜಕಾರಣ ಮಾಡೋ ಸಣ್ಣ ಬುದ್ದಿಯನ್ನು ಮಾತ್ರ ಅಸಹ್ಯ.

ನೆಟ್‌ಪಿP
ಖೇಮುಗೆ ಜಂಗಲ್ ಸಫಾರಿ ಮಾಡೋ ಆಸಕ್ತಿ ಜಾಸ್ತಿ. ಹಂಗಾಗಿ ಗೆಳೆಯರ ಜೊತೆ ಆಗಾಗ ಸಫಾರಿ ಹೋಗ್ತಾ ಇದ್ದ. ಅವನ ಈ ಜಂಗಲ್ ಸಫಾರಿಯಲ್ಲಿ ಸಾಕಷ್ಟು ಬಾರಿ ಅಪಾಯಕಾರಿ ಎನಿಸುವಂಥ ಘಟನೆಗಳು ನಡೆದಿದ್ದವು. ಆದರೆ ಈ ಬಾರಿ ಅವನು
ಸೋಮು ಜೊತೆಗೆ ಮೊದಲ ಬಾರಿ ಜಂಗಲ್ ಸಫಾರಿ ಹೊರಟಿದ್ದ. ಸೋಮು ಸ್ವಲ್ಪ ದಡ್ಡ.

ಜತೆಗೆ, ಸ್ಲೋ ಕೂಡ ಆಗಿದ್ರಿಂದ, ಖೇಮು ಹೆಚ್ಚು ಹುಷಾರಾಗಿದ್ದು, ಕಾಡಿನಲ್ಲಿ ಸಿಗೋ ಪ್ರಾಣಿಗಳಿಂದ ಹೇಗೆ ತಪ್ಪಿಸಿಕೊಳ್ಳಬೇಕು ಅಂತ ಯೋಜನೆ ಹಾಕ್ಕೊಂಡು ಸೋಮುವನ್ನು ಕರ್ಕೊಂಡು ಹೊರಟ. ಇಬ್ಬರೂ ಜಂಗಲ್ ಸಫಾರಿ ಹೊರಟ್ರು. ಹೋಗುವಾಗ, ಖೇಮು, ನಾನು ಮುಂದೆ ಹೋಗ್ತೀನಿ, ನಂಗೆ ಯಾವುದಾದ್ರೂ ಪ್ರಾಣಿ ಕಾಣಿಸಿದ್ರೆ ಎಚ್ಚರಿಕೆ ಕೊಡ್ತೀನಿ ಅಂತ ಹೇಳಿದ. ಸರಿ ಅಂತ ಇಬ್ಬರೂ ಹೊರಟರು. ಈ ಬಾರಿ ಯಾಕೋ ಯಾವ ಕಾಡುಪ್ರಾಣಿಗಳೂ ಕಾಣಿಸಲಿಲ್ಲ.

ಕಾಡಿನ ಒಳಗೆ ಸ್ವಲ್ಪ ದೂರ ಹೋದ ಮೇಲೆ, ಖೇಮುಗೆ ಇದ್ದಕ್ಕಿದ್ದಂತೆ ಸೈಡಿನ ಪೊದೆಯಿಂದ ಒಂದು ಚಿರತೆ ನುಗ್ಗಿ ಬರ್ತಾ ಇದ್ದಿದ್ದು ಕಾಣಿಸಿತು. ಕೂಡಲೇ, ‘ಚಿರತೆ ಓಡು’ ಅಂತ ಕೂಗಿ ಓಡಿ ತಪ್ಪಿಸಿಕೊಂಡ ಖೇಮು. ಆದರೆ ಸೋಮು ಮಾತ್ರ ಅ ನಿಂತಿದ್ದ. ಚಿರತೆ ಅವನ ಮೇಲೆ ಅಟ್ಯಾಕ್ ಮಾಡಿತು. ಅಷ್ಟರಲ್ಲಿ ಖೇಮು ವಾಪಸ್ ಬಂದು ತನ್ನ ಬಳಿ ಇದ್ದ ದೊಡ್ಡ ಕುಡುಗೋಲು ತೋರಿಸಿ ಚಿರತೆಯನ್ನು ಹೇಗೋ ಹೆದರಿಸಿ ಓಡಿಸಿದ.

ಆಮೇಲೆ ಸೋಮು ಕಡೆ ನೋಡಿ, ನಿಂಗೇನ್ ಬುದ್ದಿ ಇದ್ಯಾ? ಚಿರತೆ, ಓಡು ಅಂತ ನಾನು ಎಚ್ಚರಿಕೆ ಕೊಟ್ರೂ ನೀನ್ಯಾಕೆ ಇಲ್ಲೇ ನಿಂತಿದ್ದೆ, ಚಿರತೆ ಬಂದಿದ್ದು ಕಾಣಿಸಲಿಲ್ವಾ ನಿಂಗೆ?’ ಅಂತ ಕೇಳಿದ ಖೇಮು. ಅದಕ್ಕೆ ಸೋಮು ಹೇಳಿದ ಚಿರತೆ ಏನೋ ಕಾಣಿಸ್ತು. ಆದ್ರೆ, ನೀನು ಚಿರತೆ, ಓಡು’ ಅಂತ ಎಚ್ಚರಿಕೆ ಕೊಟ್ಟಿದ್ದು ಚಿರತೆಗೆ ಅಂದ್ಕೊಂಡು ಸುಮ್ನೆ ಇದ್ದೆ’.

ಲೈನ್ ಮ್ಯಾನ್

ಲೆಜೆಂಡರೀ ಡೆಂಟಿ ಜೀವನ ಚರಿತ್ರೆ
– ‘ದಂತ’ಕಥೆ
ಫಿಲಾಸಫಿ
-ನಾನೇನೂ ಅವನಷ್ಟು ದೊಡ್ಡ ತಪ್ಪು ಮಾಡಿಲ್ಲ ಅಂತ ನಮ್ಮನ್ನ ನಾವು ಸಮರ್ಥನೆ ಮಾಡಿಕೊಳ್ಳೋದು ತಪ್ಪು. ಯಾಕಂದ್ರೆ ದುಡ್ ಕದ್ರೂ ಕಳ್ಳಾನೇ, ಬ್ರೆಡ್ ಕದ್ರೂ ಕಳ್ಳಾನೇ.
ಜೋಕ್ ಹೇಳುವುದಕ್ಕಿಂತ ದೊಡ್ಡಕಷ್ಟ ಯಾವುದು?
-ಅದನ್ನು ಎಕ್ಸ್ ಪ್ಲೇನ್ ಮಾಡೋದು

ಮೊಬೈಲ್‌ನಲ್ಲಿ ರಾತ್ರಿ ಹೊತ್ತು ರೊಮ್ಯಾಂಟಿಕ್ ಆಗಿ ಚಾಟ್ ಮಾಡೋದು
-ಚಾಟ್ ಮಸಾಲಾ
ಗಾಂಜಾ ಸೇದಿದ್ರೆ ಬೇಲಿಲ್ಲದ ಕೇಸ್ ಆಗುತ್ತೆ
ಗಾಂಜಾ ಗಿರಾಕಿ- ‘ನಾವ್ ಅದಕ್ಕೆ ಸೊಪ್ಪು’ ಹಾಕಲ್ಲ

ಸಿನಿಮಾ ಸತ್ಯ
ಸಿಂಗಲ್ ಥಿಯೇಟರ್ ಮುಂದೆ ಮೂರ್ನಾಲ್ಕು ಫ್ಲೆಕ್ಸ್ ಹಾಕಿಸಿದ ತಕ್ಷಣ ಅದು ಮಲ್ಟಿಪ್ಲೆಕ್ಸ್ ಆಗಲ್ಲ. ಬಸ್ಸಲ್ಲಿ ಕಣ್ ಮುಚ್ಕೊಂಡು ಕೂತಿದ್ದವನೊಬ್ಬನನ್ನು ನೋಡಿ ಪಕ್ಕದಲ್ಲಿದ್ದವನು ಕೇಳಿದ.
ಯಾಕ್ ಸಾರ್ ಹುಷಾರಿಲ್ವಾ ?
-ಹಂಗೇನಿಲ್ಲ, ಬಸ್ಸಲ್ಲಿ ಈ ವಯಸ್ಸಾದವರು ನಿಂತ್ಕೊಂಡ್ ಪ್ರಯಾಣ ಮಾಡೋದನ್ನು ನನ್ ಕೈಲಿ ನೋಡಕಾಗಲ್ಲ ಅದಕ್ಕೆ.

ಸಾರಿಗೆ ಗಾದೆ
ಬಾಯಿ ಬಿಟ್ಟು ಕೇಳದೇ ಇದ್ರೆ, ಬಿಎಂಟಿಸಿ ಡ್ರೈವರ್ ಸ್ಟಾಪ್ ಕೊಡಲ್ಲ
ಫ್ರೀ ಟೈಮ್ ಮಾತು
ರಣಭೂಮಿಯಲ್ಲಿ ಯುದ್ದ ನಿಲ್ಲಿಸಿದ್ರೆ- ಕದನ ವಿರಾಮ
ವಿಧಾನಸೌಧದಲ್ಲಿ ಜಗಳ ನಿಲ್ಲಿಸಿದ್ರೆ -ಸದನ ವಿರಾಮ
ಬೆಳೆಗೆ ಸರಿಯಾದ ಬೆಲೆ ಸಿಗದ ರೈತನ ಸಂಕಟ
– ‘ಮಂಡಿ’ ನೋವು