ಶ್ವೇತಪತ್ರ
shwethabc@gmail.com
ನಮ್ಮೆಲ್ಲರಲ್ಲೂ ಭಯವಿದೆ, ಕೆಲವರಿಗೆ ಸೋಲಿನ ಭಯ. ಪ್ರಯತ್ನಿಸಿಯೂ ಸೋಲಾದರೆ ಎಂಬ ಭಯವನ್ನು ಸದಾ ನಾವು ಅಪ್ಪುತ್ತಲೇ ಇರುತ್ತೇವೆ. ಅಷ್ಟೇ ಅಲ್ಲದೆ ಈ ಭಯವನ್ನು ನಾವು ಬೇರೆಯವರಿಗೂ ದಾಟಿಸುತ್ತೇವೆ. ಗೆಲುವು ಸೋಲಿಗಿಂತ ಹೆಚ್ಚಿನ ಭಯವನ್ನು ಉಂಟು ಮಾಡುತ್ತದೆ. ಭಯಗಳು ನಮ್ಮ ಮುಂದೆ ವಾಸ್ತವದ ತಡೆಗೋಡೆಗಳಾಗಿ ನಿಂತುಬಿಡುತ್ತವೆ.
ಅದ್ಭುತ ಫಲಿತಾಂಶ! ಇದೊಂದೇ ನಮ್ಮೆಲ್ಲರ ಬದುಕಲ್ಲಿ ನಮಗೆ ಬೇಕಿರುವುದು. ಆದರೆ ಇದಕ್ಕೆ ನಾವು ನಮ್ಮ ಭಯವನ್ನು ಮೀರಬೇಕಿದೆ. ನಮಗೆಲ್ಲ ಜಾಸ್ತಿ ದುಡ್ಡು ಅಥವಾ ಜಾಸ್ತಿ ಸಂಬಳದ ಆಸೆ. ಒಂದು ನೈಜ ಪ್ರೀತಿ ಅಥವಾ ಸಂತೃಪ್ತ ಲೈಂಗಿಕ ಸಂಬಂಧ, ಸದ್ದಿಲ್ಲದೇ ಸಿನಿಮಾ ಒಂದರಲ್ಲಿ ನಟಿಸುವ ಕನಸು ಅಥವಾ ಕಾರ್ಪೊ ರೇಟರ್ ಆಗುವ ಬಯಕೆ. ನಮ್ಮೆಲ್ಲರ ಕನಸುಗಳಲ್ಲಿ ನಾವು ಎತ್ತರವಾದದ್ದನ್ನೇ ಬಯಸುತ್ತೇವೆ.
ಆದರೂ ನಮ್ಮಲ್ಲಿ ಅನೇಕರಿಗೆ ಅವರಂದು ಕೊಂಡ ಫಲಿತಾಂಶ ದೊರಕುತ್ತಿಲ್ಲ. ನಮ್ಮ ಹತ್ತಿರ ದುಡ್ಡಿಲ್ಲ, ಪ್ರೀತಿ-ಪ್ರಣಯವಿಲ್ಲ, ಯಶಸ್ಸು ಅಥವಾ ಖುಷಿ ನಮ್ಮ ಬದುಕನ್ನು ತುಂಬಿಲ್ಲ, ಬದುಕು ಅಪರಿಪೂರ್ಣ ಹೀಗೆ. ಆಳವಾದ ವೈಯಕ್ತಿಕ ನೆಲಗಟ್ಟಿನೊಳಗೆ ಸಂವೇದಿಸಿ ನೋಡುವುದಾದರೆ ನಮಗನಿಸುವುದು, ನಾವುಗಳೇ ನಮ್ಮ ಪೂರ್ಣ ಸಾಮರ್ಥ್ಯಕ್ಕನುಗುಣವಾಗಿ ಜೀವಿಸುತ್ತಿಲ್ಲವೇ? ನಾವು ಯಶಸ್ವಿ ವ್ಯಕ್ತಿಗಳಲ್ಲವೇ ಎಂದು!
ಹೀಗೇಕೆ? ನಾವಂದುಕೊಂಡದ್ದನ್ನು ಸಾಧಿಸಲು ನಮಗೆ ಸಾಧ್ಯವಾಗುತ್ತಿಲ್ಲ, ಜಗತ್ತಿನ ಎಲ್ಲ ಸಿರಿವಂತಿಕೆಯ ಹಾರೈಕೆಗಳನ್ನು ಹೊತ್ತು ನಾವು ಬಂದಿಲ್ಲ. ಹಾಗಿದ್ದರೆ ಮುನ್ನುಗ್ಗುವುದಕ್ಕೆ ನಮ್ಮನ್ನು ತಡೆಯುತ್ತಿರುವುದೇನು? ಈ ಎಲ್ಲಾ ಪ್ರಶ್ನೆಗಳನ್ನು ಸಾಧಾರಣ ವ್ಯಕ್ತಿಯೊಬ್ಬನಿಗೆ ಕೇಳಿದರೆ ಅನೇಕ ಕಾರಣಗಳನ್ನು ಆತ ನೀಡುತ್ತಾ ಹೋಗು ತ್ತಾನೆ. ಉದಾಹರಣೆಗೆ: ನಾನು ನೋಡಲು ಸುಂದರವಾಗಿಲ್ಲ, ನಾನು ತುಂಬಾ ದಪ್ಪವಾಗಿದ್ದೇನೆ ಇಲ್ಲವೇ ತುಂಬಾ ತೆಳ್ಳಗಿದ್ದೇನೆ, ನಾನು ತುಂಬಾ ಕುಳ್ಳಗಿದ್ದೇನೆ ಅಥವಾ ಉದ್ದವಿದ್ದೇನೆ, ನನ್ನಲ್ಲಿ ಜಾಣತನವಿಲ್ಲ, ನಾನು ತುಂಬಾ ದುರ್ಬಲ, ನನಗೆ ಅನೇಕ ರೋಗಗಳಿವೆ, ನನಗೆ ಸರಿಯಾದ ವಿದ್ಯೆ ಇಲ್ಲ, ನನ್ನ ತಲೆಯಲ್ಲಿ ಕೂದಲಿಲ್ಲ, ನಾನು ಜೀವನದಲ್ಲಿ ಸೋತಿರುವವನು, ಹೀಗೆ ನಮ್ಮಯ ಕಾರಣಗಳ ಪಟ್ಟಿಯೂ ಬೆಳೆಯುತ್ತಾ ಹೋಗುತ್ತದೆ.
ಮೇಲಿನ ಪಟ್ಟಿಯನ್ನು ಹಾಗೆ ಒಮ್ಮೆ ಕಣ್ಣಾಡಿಸಿ ನೋಡಿ ಮೇಲಿನ ಯಾವ ಕಾರಣಗಳು ನೀವಂದುಕೊಂಡಿರುವ ಸಾಧನೆಯನ್ನು ಮಾಡಲು ತಡೆಯುತ್ತಿವೆ? ಆ ಎಲ್ಲವು ಗಳು ನಿಮಗೆ ಉತ್ತಮ ಕಾರಣಗಳೆನಿಸುತ್ತಿವೆಯೇ? ಅಥವಾ ನಿಮಗೆ ನೀವೇ ನೀಡಿಕೊಳ್ಳುತ್ತಿರುವ ಸಬೂಬುಗಳೇ? ಯೋಚಿಸಿ ನೋಡಿ. ನಮ್ಮ ಮನಸ್ಸಿನ ಆಳದಲ್ಲಿ ನಮಗನಿಸುವುದಿಲ್ಲವೇ, ನಮಗೂ ಸಾಧನೆ ಮಾಡಲು ಸಾಧ್ಯವಿದೆ ಎಂದು. ಹಾಗಿದ್ದರೆ ನಮ್ಮನ್ನು ಹೊರಗಿನಿಂದ ತಡೆಯುತ್ತಿರುವು ದಾದರೂ ಏನು? ನಾವು ಕೊಟ್ಟುಕೊಳ್ಳುತ್ತಿರುವ ಸಬೂಬುಗಳು ನಮ್ಮನ್ನು ಹಿಂದಕ್ಕೆ ನೂಕುತ್ತಿವೆಯೇ ಅಥವಾ ಮುಂದೆ ನೂಕಿ ಏನಾದರೊಂದು ಸಾಧಿಸಲು ನಮ್ಮೊಳಗಿನ ಧೈರ್ಯ ಸಾಲುತ್ತಿಲ್ಲವೇ? ಇದನ್ನು ನಮಗೆ ನಾವೇ ಕೇಳಿಕೊಳ್ಳಬೇಕು.
ಸಾಧಿಸಲು ಹೊರಟಾಗ ಸಬೂಬುಗಳೆಂದಿಗೂ ಇದ್ದೇ ಇರುತ್ತವೆ. ಆದರೆ ಧೈರ್ಯ, ಆತ್ಮವಿಶ್ವಾಸ ಇವುಗಳು ಒಳಗಿನಿಂದ ಮೂಡುವಂಥವು. ಆದರೆ
ಅದೇಕೋ ಒಮ್ಮೊಮ್ಮೆ ಮನಸ್ಸು ಅಳುಕುತ್ತದೆ ಹಿಂಜರಿಯುತ್ತದೆ. ಹಿಂಜರಿಕೆ, ಅಳುಕು ಇವೆಲ್ಲ ಭಯವೆಂಬ ಭಾವದ ಮೂಲ ಅಂಶಗಳು. ದೈಹಿಕ ಹಿಂಸೆಯೊಂದನ್ನು ಬಿಟ್ಟು ನಮ್ಮ ಸಂಸ್ಕೃತಿಯಲ್ಲಿ ಬೇರೆ ಇನ್ನಾವುದೇ ವಿಚಾರದಲ್ಲಿ ಆಗಲಿ ಭಯವನ್ನು ಅಷ್ಟು ಸುಲಭವಾಗಿ ನಾವುಗಳು ಒಪ್ಪುವುದಿಲ್ಲ.
ಸೋಲು ಅಥವಾ ಗೆಲುವಿನ ಭಯ ನಮ್ಮೆಲ್ಲರಲ್ಲೂ ಭಯವಿದೆ, ಕೆಲವರಿಗೆ ಸೋಲಿನ ಭಯ. ಪ್ರಯತ್ನಿಸಿಯೂ ಸೋಲಾದರೆ ಎಂಬ ಭಯವನ್ನು ಸದಾ
ನಾವು ಅಪ್ಪುತ್ತಲೇ ಇರುತ್ತೇವೆ. ಅಷ್ಟೇ ಅಲ್ಲದೆ ಈ ಭಯ ವನ್ನು ನಾವು ಬೇರೆಯವರಿಗೂ ದಾಟಿಸುತ್ತೇವೆ. ಗೆಲುವು ಸೋಲಿಗಿಂತ ಹೆಚ್ಚಿನ ಭಯವನ್ನು ಉಂಟುಮಾಡುತ್ತದೆ. ರಾಜಕೀಯ ಸೇರ ಬಯಸಿ ಕಾರ್ಪೊರೇಟರ್ ಆದೆವೆಂದು ಇಟ್ಟುಕೊಳ್ಳೋಣ. ಭಾರಿ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡ ಬೇಕಾಗುತ್ತದೆ, ಎಲ್ಲಾ ಪಾರ್ಟಿಯವರನ್ನು ಸರಿದೂಗಿಸಿಕೊಂಡು ಹೋಗಬೇಕಾಗುತ್ತದೆ, ಜನರಿಗೆ ಕಾರ್ಯಕರ್ತರಿಗೆ ಉತ್ತರ ಕೊಡಬೇಕಾಗುತ್ತದೆ. ಇದ
ನ್ನೆಲ್ಲಾ ನಾವು ಸರಿದೂಗಿಸಲು ಸಾಧ್ಯವೇ? ಇವೆಲ್ಲವನ್ನು ನಮ್ಮಿಂದ ಮಾಡಲು ಸಾಧ್ಯವೇ? ಎಂಬುದೇ ನಮ್ಮೊಳಗಿನ ಭಯ.
ಡ್ಯಾನಿ ಡಿ ವಿಟೋ ಐದಡಿಗಿಂತ ಕಡಿಮೆ ಎತ್ತರದ ವ್ಯಕ್ತಿ. ಮುಂದೊಂದು ದಿನ ಅಮೆರಿಕ ದೇಶದ ಟಿವಿ ಜಗತ್ತಿನ ಸೂಪರ್‌ಸ್ಟಾರ್, ಸೂಪರ್ ಸಿನಿಮಾ ನಿರ್ದೇಶಕ, ಸಿನಿಮಾ ಸ್ಟಾರ್ ಆಗಿಬಿಡುತ್ತಾನೆ. ಆತ ತನ್ನೆಲ್ಲ ಭಯ ಗಳಿಂದ ಹೊರಬಂದದ್ದಕ್ಕಿಂತ, ಭಯಗಳು ತನ್ನಿಂದ ಹೊರ ಬರುವಂತೆ ನೋಡಿಕೊಳ್ಳು ತ್ತಾನೆ. ಹೀಗೆ ನಮ್ಮೆಲ್ಲ ಭಯ ಗಳನ್ನು ಒಂದೇ ಬಾರಿಗೆ ನಾವು ಗೆಲ್ಲಬೇಕಿದೆ. ‘ನನಗೆ ಸಾಧ್ಯವಿಲ್ಲ, ನನ್ನಿಂದ ಇದು ಆಗದು, ನನ್ನ ಬಳಿ ಜಾಸ್ತಿ ದುಡ್ಡಿಲ್ಲ, ನಮ್ಮ ತಂದೆ ತಾಯಿ ಹೆಚ್ಚು ಸಿರಿವಂತರಲ್ಲ’ ಹೀಗೆ ಇನ್ನೂ ಇದೇ ತರಹದ ಅನೇಕ ಭಯಗಳು ನಮ್ಮ ಮುಂದೆ ವಾಸ್ತವದ ತಡೆಗೋಡೆಗಳಾಗಿ ನಿಂತು ಬಿಡುತ್ತ ವಲ್ಲವೇ? ಸಬೂಬುಗಳು ಭಯಗಳಾಗಿ ನಮ್ಮನ್ನು ಹಿಡಿದು ನಿಲ್ಲಿಸುತ್ತಿರುತ್ತವೆ. ಸೋಲು ಅಥವಾ ಗೆಲುವು ಎರಡರ ಕುರಿತಾದ ಭಯದ ಬಗ್ಗೆ ಇಲ್ಲಿ ನಾವೆಲ್ಲ ತಿಳಿದುಕೊಳ್ಳಬೇಕಾದ ಸತ್ಯವಿಷ್ಟೇ. ಏನಾದರೂ ಮಾಡಬೇಕೆಂದುಕೊಂಡಾಗ ನಮ್ಮನ್ನು ತಡೆದು ನಿಲ್ಲಿಸುವುದು ಅದೇ ಭಯ.
ಬೇರೆ ಯಾವುದೇ ವಿಷಯ ನಮ್ಮನ್ನು ಅಷ್ಟೊಂದು ಹಿಡಿದಿಡುವುದಿಲ್ಲ ಭಯವೊಂದನ್ನು ಹೊರತುಪಡಿಸಿ. ಆದರೆ ಈ ಸೂಕ್ಷ್ಮ ವಿಷಯವನ್ನು ನಾವೆಲ್ಲ ಒಪ್ಪಿಕೊಳ್ಳಲು ತಯಾರಿರುವುದಿಲ್ಲ. ಹೀಗೇಕೆ ಭಯದೊಳಗೆ ನಾವು ಕಳೆದುಹೋಗುತ್ತೇವೆ ಎಂದರೆ ನಮ್ಮ ಸೂಕ್ಷ್ಮತೆಗಳನ್ನು ರಕ್ಷಿಸಿಕೊಳ್ಳಲು, ನಮ್ಮ ಸುಪ್ತ ಮನಸ್ಸಿನ ಆತಂಕಗಳನ್ನು ಅದುಮಿಟ್ಟುಕೊಳ್ಳಲು ಭಯವು ಪರಿಪೂರ್ಣವಾಗಿ ನಮಗೆ ದೊರೆತ ಒಂದು ಅಸವಾಗಿರುತ್ತದೆ. ಅದೇ ಸಮಯಕ್ಕೆ ನಮಗೆ ನಾವು ‘ಅಯ್ಯೋ ನಾನು ಕುಳ್ಳಗಿದ್ದೇನೆ, ನನ್ನ ತಲೆಗೂದಲೆಲ್ಲ ಉದುರಿ ಹೋಗಿದೆ, ಇಷ್ಟು ದಪ್ಪದ ಕನ್ನಡಕ ಹೊತ್ತು ತಿರುಗುತ್ತೇನೆ, ನನ್ನ ಬ್ಯಾಂಕ್
ಅಕೌಂಟ್‌ನಲ್ಲಿ ಒಂದು ರೂಪಾಯಿಯೂ ಇಲ್ಲ, ನನಗೆ ಇಂಗ್ಲಿಷ್ ಬರುವುದಿಲ್ಲ, ನಾನು ದಪ್ಪಗಿದ್ದೇನೆ’ ಹೀಗೆ ಮನಸ್ಸಿನ ಋಣಾತ್ಮಕ ಮಾತುಗಳಿಗೆ ಕಿವಿಯಾಗಿ ನಮ್ಮಷ್ಟಕ್ಕೆ ನಾವೇ ಮನಗಾಣಿಸಿಕೊಂಡು ಭಯದೊಳಗೆ ಕಳೆದುಹೋಗಿಬಿಡುತ್ತೇವೆ.
ಭಯ ನಮ್ಮನ್ನು ಸೀಮಿತ ಗೊಳಿಸಿಬಿಡುತ್ತದೆ. ನಿಜವಲ್ಲದ್ದನ್ನು ಮನಸ್ಸು ಪ್ರತ್ಯೇಕಿಸಿ, ಅವಲೋಕಿಸುವುದನ್ನು ಭಯವೆಂದು ನಾವು ವ್ಯಾಖ್ಯಾನಿಸ ಬಹುದು. ಭಯವೆಂದರೆ ಅದು ನಮ್ಮೆದುರಿಗಿನ ತಡೆ ಗೋಡೆ, ನಮ್ಮನ್ನು ನಾವೇ ಕಳೆದುಕೊಳ್ಳುವ ವರ್ತನೆಯೇ ಭಯ. ಅದು ಅಪರಾಧಿ ಮನೋ ಭಾವವನ್ನು, ಆತಂಕ ವನ್ನು ನಮ್ಮೊಳಗೆ ಇಮ್ಮಡಿಸಿ ನಮ್ಮನ್ನು ಅಲುಗಾಡದಂತೆ ಮಾಡಿಬಿಡುತ್ತದೆ.
ಒಮ್ಮೆ ನನ್ನ ವಿದ್ಯಾರ್ಥಿನಿಯ ತಾಯಿ ಆಪ್ತ ಸಲಹೆ ಗೆಂದು ಬಂದಿದ್ದರು. ಆಕೆಗೆ ತಾನು ಕಾಲೇಜು ಕಲಿತು ಟೀಚರ್ ಆಗಬೇಕಿತ್ತೆಂಬ ಬಯಕೆ. ನಾನದಕ್ಕೆ ‘ಈಗಲೂ ಕಾಲಮಿಂಚಿಲ್ಲ, ನೀವು ಈಗಲೂ ಪ್ರಯತ್ನಿಸಬಹುದು’ ಎಂದು ತಿಳಿಸಿದೆ, ಅದಕ್ಕೆ ಆಕೆ ‘ಅಯ್ಯೋ ಈಗ ನಾನು ಕಾಲೇಜು ಸೇರಿ ಡಿಗ್ರೀ ಮುಗಿಸಿ ಬಿಎಡ್ ಮುಗಿಸಿ ಕೆಲಸಕ್ಕೆ ಸೇರಬೇಕೆಂದರೆ ಐದು ವರ್ಷಗಳಾಗುತ್ತದೆ; ಅವೆಲ್ಲ ಸಾಧ್ಯವಿಲ್ಲ ಬಿಡಿ ಮೇಡಂ’ ಎಂದರು. ಈಗ ಆಕೆಗೆ ೩೯ ವರ್ಷ. ಆಕೆ ಈಗ ಕಾಲೇಜಿಗೆ ಸೇರಿ ಡಿಗ್ರಿ ಹಾಗೂ ಬಿಎಡ್ ಮುಗಿಸುವ ಹೊತ್ತಿಗೆ ಆಕೆಗೆ ೪೫ ವರ್ಷ ವಯಸ್ಸಾಗಿರುತ್ತದೆ.
ಸರಕಾರದ ನಿಯಮದ ಅನುಸಾರ ಇನ್ನು ೧೫ ವರ್ಷಗಳ ಕಾಲ ಆಕೆ ಶಿಕ್ಷಕ ವೃತ್ತಿಗೆ ಸೇವೆ ಸಲ್ಲಿಸಬಹುದಾಗಿರುತ್ತದೆ. ಆದರೆ ಆಕೆಯನ್ನು ಬಹುವಾಗಿ
ಕಾಡುತ್ತಲಿದ್ದದ್ದು ಭಯ. ಭಯವನ್ನು ನಾವು ಗೆಲ್ಲಬಹುದು, ಅದರಿಂದ ಆಚೆ ಬರಬಹುದು. ಅದಕ್ಕೆ ನಮ್ಮೊಳಗೊಂದು ಅರಿವುಂಟಾಗಬೇಕು. ಆ ಅರಿವು
ಏನೆಂದರೆ ಭಯದ ಮೂಲವಿರುವುದು ನಮ್ಮೊಳಗೇ ಹೊರತು ಹೊರಗಲ್ಲ ಎಂಬ ವಾಸ್ತವದ ಸಂಗತಿ.
ಫ್ರಾಂಕ್ಲಿನ್ ರೂಸ್‌ವೆಲ್ಟ್ ಹೇಳುವ ಹಾಗೆ ನಾವು ಭಯಪಡಿಸಬೇಕಿರುವುದು ನಮ್ಮೊಳಗಿನ ಭಯವನ್ನೇ. ‘ಥಿಂಕ್ ಆಂಡ್ ಗ್ರೋ ರಿಚ್’ ಕೃತಿಯ ಲೇಖಕರಾದ
ನೆಪೋಲಿಯನ್ ಹಿಲ್ ಅದರಲ್ಲಿ ಒಂದು ಸಾಲನ್ನು ಬರೆಯುತ್ತಾರೆ: ‘ನಿಮ್ಮ ಭಯಗಳನ್ನು ನೀವು ಎದುರಿಸಿ ನೋಡಿ, ಅವು ಹೆದರಿ ಓಡಿಹೋಗುತ್ತವೆ’ ಎಂದು. ನಮ್ಮ ಸಬೂಬುಗಳ ಆಚೆ ನಮ್ಮ ಯೋಚನೆಗಳನ್ನು ಎತ್ತರಿಸಿದಾಗ ಎದುರಿಗಿನ ಸವಾಲುಗಳನ್ನು ಸುಲಭವಾಗಿ ಮುರಿದುಬಿಡಬಹುದು. ನಮ್ಮ ಸುಪ್ತ ಮನಸ್ಸು ಭಯಗೊಂಡಿದ್ದಾಗ ಅದಕ್ಕೆ ಕಾರಣ ಹೊರಗಿನ ವಿಚಾರಗಳು ಎಂಬುದನ್ನು ನಮಗೆ ನಾವೇ ಸ್ಪಷ್ಟಪಡಿಸಿಕೊಂಡರೆ ಬದುಕಿನ ಮೇಲಿನ ಹಿಡಿತವನ್ನು ಸುಲಭವಾಗಿ ಸಾಧಿಸಬಹುದಾಗಿದೆ.
ಒಮ್ಮೆ ಬದುಕಿನ ಹಿಡಿತ ನಮ್ಮದಾದರೆ ಏನನ್ನಾದರೂ ಸಾಧಿಸುವುದು ಸುಲಭ. ನಮ್ಮೆಲ್ಲರಿಗೂ ಹೂವಿನಂತೆ ಅರಳಿ ಯಶಸ್ವಿಯಾಗಬೇಕೆಂಬ ಹೆಬ್ಬಯಕೆ ಇದ್ದೇ ಇರುತ್ತದೆ. ನಾವೆಲ್ಲರೂ ವಿಭಿನ್ನವಾಗಿರುವುದನ್ನು ಮಾಡಬಯಸುವವರೇ, ನಾವು ಖುಷಿಯಾಗಿಯೂ, ಆರೋಗ್ಯವಾಗಿಯೂ ಇರಬೇಕು ಎಂದು ಕೊಳ್ಳುವವರೇ, ನಮ್ಮೆಲ್ಲರಿಗೂ ಆಳವಾದ ಅರ್ಥಪೂರ್ಣವಾದ ಸಂಬಂಧಗಳ ಬಯಕೆ, ನಮ್ಮೆಲ್ಲರಿಗೂ ಪ್ರೀತಿ, ಖುಷಿ, ಪರಿಪೂರ್ಣತೆಯ ಅಭಿಲಾಷೆ, ನಾವು ಮಾಡುವ ಪ್ರತಿಯೊಂದೂ ಉತ್ತಮವಾಗೇ ಹೊಮ್ಮಬೇಕೆಂಬ ಬಯಕೆ.
ನಿಜವಾದ ರಹಸ್ಯವೇನು ಗೊತ್ತೆ!? ಇವೆಲ್ಲವನ್ನು ಸಾಧ್ಯವಾಗಿಸುವುದು ನಮಗೆ ಸಾಧ್ಯ. ಆದರೆ ಅದಕ್ಕೆ ಮುಖ್ಯವಾಗಿ ನಾವು ನಮ್ಮವೇ ಭಯಗಳನ್ನು ಮೀರಿ
ನಮ್ಮ ಗುರಿಗಳನ್ನು ಸ್ಪಷ್ಟಗೊಳಿಸಿಕೊಳ್ಳಬೇಕಿದೆ ಏನಂತೀರಿ?