ಕಳಕಳಿ
ಡಾ.ದಯಾನಂದ ಲಿಂಗೇಗೌಡ
ಕೆಲ ದಿನಗಳ ಹಿಂದೆ ಮಧ್ಯರಾತ್ರಿಯಲ್ಲಿ ಆಸ್ಪತ್ರೆಗೆಯಿಂದ ಕರೆಯೊಂದು ಬಂದಿತ್ತು. ಚಡಪಡಿಸಿ ಎದ್ದು ಆಸ್ಪತ್ರೆಗೆ ಹೋಗಿ ನೋಡಿದರೆ, ಇದು ಮೃತ ರೋಗಿಯೊಬ್ಬರಿಗೆ ಸಂಬಂಧಿಸಿದ ಕರೆಯಾಗಿತ್ತು. ಕ್ಯಾನ್ಸರ್‌ನಿಂದ ತೀರಿಕೊಂಡ ವ್ಯಕ್ತಿಯ ಶವವನ್ನು ತೆಗೆದುಕೊಂಡು ಹೋಗುವ ಮೊದಲು, ಅವನಲ್ಲಿ ಅಳವಡಿಸಿದ ‘ಪೇಸ್ ಮೇಕರ್’ ಸಾಧನವನ್ನು ತೆಗೆಯುವುದಕ್ಕಾಗಿ ತುರ್ತಾಗಿ ಕರೆ ಮಾಡಿದ್ದರು.
ಹೃದಯದ ಬಡಿತದ ಲಯದ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗೆ ಸಾಮಾನ್ಯವಾಗಿ, ಇಂತಹ ಫೇಸ್ ಮೇಕರ್‌ಗಳನ್ನು ಅಳವಡಿಸಿರುತ್ತಾರೆ. ಹೃದಯ ಬಡಿತ ಲಯ ತಪ್ಪಿದರೆ ಬ್ಯಾಟರಿ ಸಹಾಯ ದಿಂದ ಇವು ಸರಿಪಡಿಸುತ್ತವೆ. ವ್ಯಕ್ತಿ ತೀರಿಕೊಂಡ ನಂತರ ಪೇಸ್ ಮೇಕರ್ ಸಹಿತ ಚಿತಾಗಾರ ದಲ್ಲಿ ಸುಡಲು ಅನುಮತಿ ಇರುವುದಿಲ್ಲ. ಏಕೆಂದರೆ ಅದರಲ್ಲಿರುವ ಲಿಥಿಯಂ ಬ್ಯಾಟರಿಗಳು ಬೆಂಕಿ ತಾಗು ತ್ತಿದ್ದಂತೆ ಸ್ಫೋಟವಾಗುವ ಸಂಭವವಿರುತ್ತದೆ. ಆದ್ದರಿಂದ ವ್ಯಕ್ತಿ ಮೃತಪಡುತ್ತಿದ್ದಂತೆಯೇ ಇಂತಹ ಸಾಧನಗಳನ್ನು ಹೊರತೆಗೆಯಬೇಕಾಗುತ್ತದೆ.
ಹೀಗೆ ಹೊರ ತೆಗೆದ ಪೇಸ್ ಮೇಕರ್‌ಗಳನ್ನು ಬೇರೆ ರೋಗಿಗಳ ಪುನರ್ ಬಳಕೆಗೆ ದಾನ ಮಾಡ ಬಹುದು ಅಥವಾ ಅದನ್ನು ಸಂಶೋಧನೆಗಳಿಗೆ ಕೂಡ ಬಳಸಿ ಕೊಳ್ಳಲಾಗುತ್ತದೆ. ವ್ಯಕ್ತಿ ಮರಣದ ನಂತರ ಪರಿಸ್ಥಿತಿ ಬಹಳ ಸೂಕ್ಷ್ಮವಾಗಿರುವುದರಿಂದ ಇಂತಹ ಮರಣೋತ್ತರ ಶಸಚಿಕಿತ್ಸೆಗಳಿಗೆ ತಡ ಮಾಡುವಂತಿಲ್ಲ ! ಮರಣೋತ್ತರ ಶಸ ಚಿಕಿತ್ಸೆಗಳು ಅಪರೂಪವೇನೂ ಅಲ್ಲ. ಕೀಮೋಥೆರಪಿ ನೀಡಲೆಂದು ರೋಗಿಗಳಿಗೆ ಅಳವಡಿಸಿದ ‘ಕಿಮೋ ಪೋರ್ಟ್’ ಗಳು, ದೀರ್ಘ ಕಾಲಿಕ ಔಷಧ ನೀಡಲು ಉಪಯೋಗಿಸುವ ನಳಿಕೆಗಳನ್ನು ಸಂಪ್ರದಾಯಸ್ಥ ಕುಟುಂಬಗಳು ಶವಸಂಸ್ಕಾರದ ಮುಂಚೆ
ತೆಗೆಯಲು ಬಯಸುತ್ತಾರೆ. ಕೆಲವೊಮ್ಮೆ ರೋಗ ಯಾವುದೆಂದು ಗೊತ್ತಾಗದೇ ಮರಣಿಸಿದವರಿಗೆ, ಹೆಚ್ಚಿನ ಸಂಶೋಧನೆ ಮಾಡಲೆಂದು ಸತ್ತ ನಂತರ ‘ಬಯಾಪ್ಸಿ’ ಸ್ಯಾಂಪಲ್‌ಗಳನ್ನು ತೆಗೆಯಲು ಕೂಡ ಕರೆಗಳು ಬರುತ್ತಿರುತ್ತವೆ.
ಇತ್ತೀಚೆಗೆ ಮನೆಯಲ್ಲಿ ಹುಟ್ಟುವ ಮಕ್ಕಳು ಅಪರೂಪವಾಗುತ್ತಿರುವಂತೆ, ಮನೆಯಲ್ಲಿ ಸಾಯುವವರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಬಹುತೇಕ ಜನರ ಕೊನೆ ದಿನಗಳು ಅಥವಾ ಸಾವು ಆಸ್ಪತ್ರೆಗಳಲ್ಲಿ ಸಂಭವಿಸುತ್ತಿದೆ. ಇದಕ್ಕೆ ಕಾರಣ, ವ್ಯಕ್ತಿ ಸಾಯುವವರೆಗೂ ಒಂದಿಲ್ಲೊಂದು ಚಿಕಿತ್ಸೆಗಳು ಲಭ್ಯವಿರುವುದು. ಕೆಲವೊಮ್ಮೆ ಸತ್ತ ವ್ಯಕ್ತಿಯನ್ನು ಮರಣದ ದಾಖಲೆ ಸುಲಭವಾಗಿ ಸಿಗಲಿ ಎಂಬ ಕಾರಣದಿಂದಲೂ ಆಸ್ಪತ್ರೆಗಳಿಗೆ ತರುವುದೂ ಇದೆ.
ಇತ್ತೀಚಿಗಂತೂ ಚಿಕಿತ್ಸೆಗಳಿಗೆ ಕೊನೆಯೆಂಬುದೇ ಇಲ್ಲ.
ಇಂಥವುಗಳನ್ನು ರೋಗಿಗಳಿಗೆ ಕೊಡಬೇಕೋ, ಬೇಡವೋ ಎಂಬುವ ಗೊಂದಲ ವೈದ್ಯರಿಗೂ ಮತ್ತು ರೋಗಿಯ ಸಂಬಂಧಿಕರಿಗೂ ಕಾಡುತ್ತಲೇ ಇರುತ್ತದೆ. ಇತ್ತೀಚಿಗಂತೂ ಒಂದೆರಡು ತಿಂಗಳು ಜೀವಿತಾವಧಿಯನ್ನು ಹೆಚ್ಚಿಸುವ ಬಹಳಷ್ಟು ಕಾನ್ಸರ್ ಔಷಧಗಳೂ ಲಭ್ಯವಿವೆ. ಅವುಗಳಿಗೆ
ಲಕ್ಷಾಂತರ ರು. ಖರ್ಚು ಆಗುತ್ತದೆ. ಇವನ್ನು ಸ್ಥಿತಿವಂತ, ಕ್ರಿಯಾಶೀಲ ವ್ಯಕ್ತಿಗಳಿಗೆ ಕೊಟ್ಟರೆ ಒಂದು ಅರ್ಥ. ಅದನ್ನು ಬಿಟ್ಟು, ಮಲಗಿದ್ದರೆ ಎದ್ದು ಕೂರಲಾರದ, ಕೂತರೆ ನಿಲ್ಲಲಾರದದಷ್ಟು ಹಾಸಿಗೆ ಹಿಡಿರುವ ರೋಗಿಗಳಿಗೆ ಂಥ ಚಿಕಿತ್ಸೆ ಕೊಡುವುದರಲ್ಲಿ ಅರ್ಥವೇನೂ ಇಲ್ಲ. ಇಂತಹ ದಯನಿಯ ಪರಿಸ್ಥಿಯಲ್ಲಿರುವ ರೋಗಿಗಳನ್ನು ಒಂದೆರಡು ತಿಂಗಳು ಹೆಚ್ಚಾಗಿ ಬದುಕಿಸುವುದರಲ್ಲಿ ಪುರುಷಾರ್ಥವೇನು ಎಂಬ ಪ್ರಶ್ನೆ ಕಾಡುತ್ತದೆ.
ಮನೆಯಲ್ಲಿ ಯಾರೂ ನೋಡಿಕೊಳ್ಳುವವರು ಇಲ್ಲದೆ ಗೋಡೆ ನೋಡುತ್ತ ಬದುಕುತ್ತಿರುವವರಿಗೆ ಇದರ ಔಚಿತ್ಯವೇನು? ಚೆನ್ನಾಗಿ ಬದುಕಿದ್ದಾಗ ಯಾವುದರ ಬೆಲೆಯೂ ಗೊತ್ತಿಲ್ಲದ ಮನುಷ್ಯನಿಗೆ ಅಂತ್ಯ ಬರುತ್ತಿದ್ದಂತೆ ಪ್ರತಿಕ್ಷಣಕ್ಕೂ ಸಾವಿರಾರು ಖರ್ಚು ಮಾಡಲು ಸಿದ್ಧರಾಗುವ ಮನಃಸ್ಥಿತಿ ಉಂಟಾಗುವುದು ಸಹಜ. ಇತ್ತೀಚೆಗೆ ನಾಲ್ಕನೇ ಹಂತದ ಕ್ಯಾನ್ಸರ್‌ನಿಂದ ವೃದ್ಧರೊಬ್ಬರು ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅವರಿಗೆ ಉಳಿದಿರುವ ಜೀವತಾವಧಿ ಒಂದೆರಡು ತಿಂಗಳು ಎಂದು ಅಂದಾಜಿತ್ತು. ಇವರಿಗೆ ಕರುಳಿನ ರಕ್ತಸ್ರಾವ ಉಂಟಾಯಿತು.
ಎಷ್ಟು ರಕ್ತ ಕೊಟ್ಟರೂ ಸಾಕಾಗುತ್ತಿರಲಿಲ್ಲ. ಆಂಜಿಯೋಗ್ರಾಮ್ ಮೂಲಕ ರಕ್ತಸ್ರಾವ ನಿಲ್ಲಿಸಲು ನಮ್ಮ ವಿಭಾಗಕ್ಕೆ ಕಳಿಸಲಾಗಿತ್ತು. ಹೇಗಾದರೂ ಒಂದೆರಡು ತಿಂಗಳಲ್ಲಿ ಸಾಯುವ ರೋಗಿಗೆ, ಒಂದೆರಡು ಲಕ್ಷ ಖರ್ಚು ಮಾಡಿಸಿ ಆಂಜಿಯೋಗ್ರಾಮ್ ಮೂಲಕ ರಕ್ತಸ್ರಾವವನ್ನು ನಿಲ್ಲಿಸುವ ಮಾಡಿಸಿ ಚಿಕಿತ್ಸೆ ನೀಡುವುದೋ ಬೇಡವೋ ಎಂಬುದು ದ್ವಂದ್ವ. ರೋಗಿಯ ಕಡೆಯವರಿಗೂ ಚಿಕಿತ್ಸೆ ಮಾಡಿಸದೇ ಇದ್ದರೆ ಹೇಗೆ ಎಂಬ ಧರ್ಮಸಂಕಟ. ಹೀಗೆ
ಚಿಕಿತ್ಸೆಯನ್ನು ನಿರಾಕರಿಸುವ ಪರಿಸ್ಥಿತಿಯಲ್ಲಿ ವೈದ್ಯರೂ ಅಥವಾ ರೋಗಿಯ ಸಂಬಂಧಿಕರೂ ಇರಲಿಲ್ಲ.
ಆಂಜಿಯೋಗ್ರಾಮ್ ಮಾಡಿ ಕರುಳಿನ ರಕ್ತಸ್ರಾವ ನಿಲ್ಲಿಸಲಾಯಿತು. ಲಕ್ಷಾಂತರ ಬಿಲ್ಲುಗಳನ್ನು ಸಂಬಂಧಿಕರಿಗೆ ಬಿಟ್ಟು, ಒಂದೆರಡು ತಿಂಗಳಿನ ನಂತರ ರೋಗಿ ಮರಣ ಹೊಂದಿದರು. ಕೇವಲ ಒಂದೆರಡು ತಿಂಗಳು ಹೆಚ್ಚಿಗೆ ಬದುಕಿಸಲು ಸಂಪೂರ್ಣ ಹಾಸಿಗೆ ಹಿಡಿದಿದ್ದ ರೋಗಿಗೆ ಅಷ್ಟು ಹಣ ವಿನಿಯೋಗಿಸ ಲಾಗಿತ್ತು. ಇದು ಬರಿ ರೋಗಿ ಮತ್ತು ವೈದ್ಯಕೀಯ ವ್ಯಕ್ತಿಗೆ ಸಂಬಂಧಿಸಿದ ಪ್ರಶ್ನೆ ಮಾತ್ರವಲ್ಲ. ಸೀಮಿತ ಸಂಪನ್ಮೂಲ ಇರುವ ಭೂಮಿಯಲ್ಲಿ ಸಿಗುವ ಸಂಪತ್ತುಗಳನ್ನು ಜವಾಬ್ದಾರಿಯುತವಾಗಿ ಉಪಯೋಗಿಸುತ್ತಿದ್ದೇವೆಯೇ ಎಂಬ ಪ್ರಶ್ನೆಯನ್ನೂ ಕೇಳಿಕೊಳ್ಳಬೇಕು.
ಇತ್ತೀಚೆಗೆ ೮೫ ವರ್ಷದ ಗಟ್ಟಿಮುಟ್ಟಾದ ವೃದ್ಧರೊಬ್ಬರಿಗೆ ಲಿವರ್ ಕ್ಯಾನ್ಸರ್ ಸಮಸ್ಯೆ ಕಾಣಿಸಿಕೊಂಡು ಭೇಟಿಯಾದರು. ಅವರಿಗೆ ರಕ್ತನಾಳದ ಮೂಲಕ ವಿಕಿರಣ ಸೂಸುವ ಔಷಧವನ್ನು ಕೊಡುವ ಚಿಕಿತ್ಸೆ ಸೂಕ್ತವಾಗಿತ್ತು. ಆದರೆ ಅದಕ್ಕೆ ೧೦ ಲಕ್ಷ ಖರ್ಚು ಬರುತ್ತಿತ್ತು. ಖರ್ಚನ್ನು ಹೇಗಾದರೂ ಹೊಂದಿಸಿ ಚಿಕಿತ್ಸೆ ಕೊಡಿಸುವುದಕ್ಕೆ ಸಂಬಂಧಿಕರನ್ನು ವೈದ್ಯರು ಒತ್ತಾಯ ಮಾಡುತ್ತಿದ್ದರು. ಆದರೆ ಆ ವೃದ್ಧರಿಗೆ ಈ ಚಿಕಿತ್ಸೆ ಪಡೆಯುವುದಕ್ಕೆ ಮನಸ್ಸಿರಲಿಲ್ಲ.
ಅವರೊಂದಿಗೆ ನಡೆದ ಸಂಭಾಷಣೆಗಳು ನನ್ನನ್ನು ಇನ್ನೂ ಕಾಡುತ್ತಿವೆ. ‘ಡಾಕ್ಟ್ರೇ ನಾನು ನನ್ನ ಎಲ್ಲ ಕರ್ತವ್ಯಗಳನ್ನೂ ನಿಭಾಯಿಸಿದ್ದೇನೆ. ನನಗೆ ಈ ಲೋಕದಲ್ಲಿ ಮಾಡುವುದಕ್ಕೆ ಯಾವುದೇ ಕೆಲಸವಿಲ್ಲ. ನನ್ನ ತುಂಬ ಜೀವನವನ್ನು ಸಮೃದ್ಧಿಯಿಂದ ಕಳೆದಿದ್ದೇನೆ.
ನನ್ನ ಸಂಗಾತಿ ಕೂಡ ಮರಣ ಹೊಂದಿದ್ದಾಳೆ. ಈ ಸಮಯದಲ್ಲಿ ನಾನು ಸಾವಿಗೆ ಎದುರು ನೋಡುತ್ತ ಕುಳಿತಿದ್ದೇನೆ; ನಚಿಕೇತನ ಹಾಗೆ. ನನಗೂ ಸಾವಿನ ನಂತರ ಇರುವ ರಹಸ್ಯಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಇದೆ. ಇಂತಹ ಸಮಯದಲ್ಲಿ ನನ್ನನ್ನು ಕೆಲವು ತಿಂಗಳು ಹೆಚ್ಚು ಬದುಕಿಸಿ ಸಾಯುವುದರಲ್ಲಿ ಏನು ಅರ್ಥ ಇದೆ. ನಾನು ಸಾಯುವ ಸಮಯದಲ್ಲಿ ನನ್ನ ಮಕ್ಕಳನ್ನು ಹಣಕಾಸಿನ ಸಂಕಷ್ಟದಲ್ಲಿ ಉಳಿಸಿ ಹೋಗಲು ಇಷ್ಟವಿಲ್ಲ. ಈ
ಸಂದರ್ಭದಲ್ಲಿ ನೀವು ಇನ್ನೂ ನನಗೆ ಚಿಕಿತ್ಸೆ ಕೊಡಿಸಲು ಬಯಸುತ್ತೀರಾ?’ ಎಂಬುದು ಅವರ ಮಾತಿನ ಸಾರಾಂಶ.
ಆ ವೃದ್ಧರ ಪ್ರಶ್ನೆಗೆ ನನ್ನಲ್ಲಿ ಉತ್ತರವಿರಲಿಲ್ಲ. ವಯಸ್ಸಿನ ಕಾರಣದಿಂದ ಚಿಕಿತ್ಸೆ ನಿರಾಕರಿಸುವ ಮನೋಧರ್ಮ ಪ್ರಚಲಿತದಲ್ಲಿಲ್ಲ. ವೃದ್ಧರ ನಿರಾಸಕ್ತಿಯ
ನಡುವೆಯೂ ಅವರ ಸಂಬಂಧಿಕರು ಚಿಕಿತ್ಸೆಯನ್ನು ಕೊಡಿಸಿದರು. ಆದರೆ ಅವರು ಕೇಳಿದ ಪ್ರಶ್ನೆ, ಅವರ ಮರಣ ನಂತರವೂ ನನಗೆ ಕಾಡುತ್ತಲೇ ಇದೆ.
ಸರಕಾರಿ ಸ್ಕೀಮ್‌ಗಳ ಅಡಿಯಲ್ಲಿ ಚಿಕಿತ್ಸೆ ಪಡೆಯುವವರ ಅಥವಾ ಇನ್ಸೂರೆನ್ಸ್‌ನ ಮೂಲಕ ಚಿಕಿತ್ಸೆ ಪಡೆಯುವವರ ಪರಿಸ್ಥಿತಿ ಇನ್ನೂ ಹೇಳುವುದೇ ಬೇಡ.
ಇನ್ಸೂರೆನ್ಸ್‌ನ ಹಣ ಮುಗಿಯುವವರೆಗೂ ಅವರು ಚಿಕಿತ್ಸೆಯನ್ನು ನಿಲ್ಲಿಸುವುದಕ್ಕೆ ಮನಸ್ಸು ಮಾಡುವುದಿಲ್ಲ. ವೈಯಕ್ತಿಕವಾಗಿ ಹಣಕೊಟ್ಟು ಚಿಕಿತ್ಸೆ ಮಾಡುವವರಿಗೆ ಹಣ ಮುಗಿದ ತಕ್ಷಣ ಚಿಕಿತ್ಸೆಯನ್ನು ನಿಲ್ಲಿಸುವುದಕ್ಕೆ ಒತ್ತಡವಿರುತ್ತದೆ. ಆದರೆ ಇನ್ಸುರೆನ್ಸ್ ಮೂಲಕ ಚಿಕಿತ್ಸೆ ಮಾಡುವವರಿಗೆ ಅದು ಇರುವುದಿಲ್ಲ. ಇಂದು ಭಾರತದ ಜನಸಂಖ್ಯೆಯಲ್ಲಿ ಇನ್ನು ಕೆಲವೇ ತಿಂಗಳಲ್ಲಿ ನಂಬರ್ ಒನ್ ಸ್ಥಾನವನ್ನು ಆಕ್ರಮಿಸುತ್ತದೆ. ಇಷ್ಟು ಚಿಕ್ಕ ಭೂ ಪ್ರದೇಶ ದಲ್ಲಿ ಇಷ್ಟೊಂದು ಜನ ಸಾಂದ್ರತೆ, ಭಾರತಕ್ಕೆ ಆರ್ಥಿಕ ಫಲವನ್ನು ಕೊಡುತ್ತದೆಯಾದರೂ, ಅದು ಈ ಭೂಮಿಯ ಮೇಲೆ ಇರುವ ಸಂಪನ್ಮೂಲ ಮೇಲೆ ಅತಿಯಾದ ಒತ್ತಡವನ್ನು ತರುತ್ತದೆ.
ಈ ಭೂಮಿ ಇನ್ನು ಕೋಟ್ಯಂತರ ವರ್ಷಗಳ ನಂತರವೂ ಜೀವಿಸಲು ಯೋಗ್ಯವಾದಷ್ಟು ಸಂಪನ್ಮೂಲವನ್ನು ಉಳಿಸಿಕೊಳ್ಳಬೇಕು. ಇಂತಹ ಸಂದರ್ಭದಲ್ಲಿ, ಗುಣವಾಗದ ರೋಗಗಳಿಗೆ,ಅತಿಯಾದ ಸಂಪನ್ಮೂಲ ಬಳಸಿ ಮನುಷ್ಯರನ್ನು ಉಳಿಸಿಕೊಳ್ಳುವ ಅತ್ಯಮೂಲ್ಯ ವಸ್ತುವಾಗಿ ಗೋಚರಿಸುತ್ತಿಲ್ಲ. ಇಲ್ಲಿ ಮನುಷ್ಯರನ್ನು ಅಮರ ಮಾಡುವ ಅವಶ್ಯಕತೆ ಇಲ್ಲ. ಕೊನೆಗಾಲದಲ್ಲಿ ಇರುವಷ್ಟು ದಿನ ಗೌರವ ಪೂರ್ವಕವಾಗಿ, ನೋವಿಲ್ಲದೆ ಸಹಜವಾಗಿ ಸಾಯಲು ನಮ್ಮ ಸಂಪನ್ಮೂಲಗಳನ್ನು ಉಪಯೋಗಿಸ ಬೇಕೇ ಹೊರತು, ವೈದ್ಯಕೀಯ ಚಮತ್ಕಾರಗಳನ್ನು ತೋರುವುದಕ್ಕೆ ಅಲ್ಲ. ಈ ನಿಟ್ಟಿನಲ್ಲಿ, ಗುಣವಾಗದ ರೋಗಗಳಿಂದ ಅತೀವ ನೋವು ಅನುಭವಿಸುತ್ತಿರುವರ ದಯಾಮರಣ ಬಗ್ಗೆಯೂ ಅವಕಾಶ ನೀಡುವ ಬಗ್ಗೆ
ಆಲೋಚಿಸಬೇಕಿದೆ.
ಸರಕಾರಗಳೇ ವೈದ್ಯಕೀಯ ವೆಚ್ಚ ಸಂಪೂರ್ಣ ಭರಿಸುವ ದೇಶಗಳಲ್ಲಿ, ದೇಶದ ಸಂಪನ್ಮೂಲಗಳನ್ನು ಜವಾಬ್ದಾರಿಯುತವಾಗಿ ಹೇಗೆ ಬಳಸಿಕೊಳ್ಳ ಬೇಕು ಎಂಬುದರ ಬಗ್ಗೆ ಮಾರ್ಗ ನಿರ್ದೇಶನಗಳನ್ನು ಅಳವಡಿಸಿಕೊಂಡಿದ್ದಾರೆ. ಆದರೆ ಅಮೆರಿಕ ರೀತಿಯ ವ್ಯಾಪಾರೀ ವೈದ್ಯಕೀಯ ಮಾದರಿಗಳನ್ನು ಅಳವಡಿಸಿಕೊಂಡಿರುವ ನಮ್ಮ ದೇಶದಲ್ಲಿ ಇಂತಹ ನಿಯಮಗಳಿಗೆ ಅವಕಾಶವಿಲ್ಲ. ವೈದ್ಯಕೀಯ ಕ್ಷೇತ್ರದ ಹೊಸ ಹೊಸ ಆವಿಷ್ಕಾರಗಳು ಸ್ಫೋಟ ಗೊಳ್ಳುತ್ತಿ ರುವ ಕಾಲಘಟ್ಟದಲ್ಲಿ, ನಮ್ಮ ದೇಶದ ಪರಿಸ್ಥಿತಿಗೆ ಹೊಂದಿಕೊಳ್ಳುವಂಥ ಪರಿಸರ ಸ್ನೇಹಿ ಚಿಕಿತ್ಸೆ ಗಳ ಬಗ್ಗೆ ಮಾರ್ಗದರ್ಶನ ವೈದ್ಯ ಕ್ಷೇತ್ರಕ್ಕಿದೆ.
ಕೊನೆಮಾತು: ಲಕ್ಷಾಂತರ ಜನರು ಹುಟ್ಟಿ ಸಾಯುವ ನಮ್ಮ ನಾಡಿನಲ್ಲಿ, ಅಂಗಾಂಗ ಕಸಿ ಮಾಡಿಸಿಕೊಳ್ಳಲು ವರ್ಷಗಟ್ಟಲೆ ಅಂಗಾಂಗಕ್ಕೆ ಕಾಯುವವರ ಸಂಖ್ಯೆ ಅಧಿಕವಾಗಿದೆ. ಸಾಯುವವರ ಅಂಗಾಂಗಳನ್ನು ಸಮರ್ಥ ವಾಗಿ ಬಳಸಿಕೊಂಡರೆ, ಇಡೀ ವಿಶ್ವದ ರೋಗಿಗಳಿಗೆಲ್ಲ ಜನರಿಗೆಲ್ಲ ಅಂಗಾಂಗಗಳ ಕಸಿಯನ್ನು ಭಾರತದ ಮಾಡಬಹುದು. ಭೂಮಿಯ ಮೇಲೆ ಮಾನವ ಎಂಬುವುದೊಂದೇ ಬಳಸಿಕೊಳ್ಳಲಾಗದ ಸಂಪನ್ಮೂಲ. ಅದಕ್ಕೆ ಅಲ್ಲವೇ ಕವಿ ನರಸಿಂಹಾಚಾರ್ಯರು ‘ನೀನ್ಯಾರಿಗಾದೆಯೋ ಎಲೆ ಮಾನವ’ ಎಂದಿದ್ದು !
Read E-Paper click here