Saturday, 27th July 2024

ಲೋಕಸಭೆ ಚುನಾವಣೆಗೊಂದು ಗಾದೆಮಾತುಗಳ ಗೈಡ್

ಅಕ್ಬರ್‌ನಾಮಾ 

ಎಂ.ಜೆ.ಅಕ್ಬರ್‌

ಚುನಾವಣಾ ಪ್ರಚಾರದ ಪಜಲ್‌ಗಳನ್ನು ಅರ್ಥ ಮಾಡಿಕೊಳ್ಳುವುದು ಹೇಗೆ? ಅದಕ್ಕೊಂದು ವೈಜ್ಞಾನಿಕ ದಾರಿಯೇನಾದರೂ ಇದ್ದರೆ ಆ ಕ್ಷೇತ್ರಕ್ಕೆ ನನ್ನ ಕೊಡುಗೆ ರಷ್ಯನ್ ಗಾದೆಗಳನ್ನು ಬಿಡಿಸುವುದರಲ್ಲಿದೆ. ನಾನು ನೀಡುವ ಎಲ್ಲ ಸುಳಿವುಗಳೂ ಅಂತಹ ಗಾದೆಗಳಲ್ಲಿ ಅಡಗಿವೆ. ನಿಮ್ಮ ಲೆಕ್ಕಾಚಾರವನ್ನು ನೀವೇ ಮಾಡಿಕೊಳ್ಳಿ. ಗೋಜಲಿಗೆ ಸಿಲುಕಿದವರು ಕುಂಟುತ್ತೀರಿ, ಸುಸ್ತಾಗುತ್ತೀರಿ. ಆದರೆ ಅದರಲ್ಲೂ ಒಂದು ಮಜಾ ಇದೆ. ಪೂರ್ತಿ ಅರ್ಥವಾಗದೇ ಇದ್ದರೂ ನೀವು ಜೂನ್ ೪ರ ಫಲಿತಾಂಶದ ದಿನಕ್ಕೆ ಬೇರೆಯವರಿಗಿಂತ ಹತ್ತಿರದಲ್ಲಿರುತ್ತೀರಿ.

ಆಡಿದ ಮಾತು ಗುಬ್ಬಚ್ಚಿಯಂತೆ ಅಲ್ಲ; ಒಮ್ಮೆ ಅದು ಹಾರಿದರೆ ಹಿಡಿಯಲು ಸಾಧ್ಯವಿಲ್ಲ

ಒಬ್ಬ ಹಳೆಯ ಸ್ನೇಹಿತ ಇಬ್ಬರು ಹೊಸ ಸ್ನೇಹಿತರಿಗಿಂತ ಒಳ್ಳೆಯವನು

ಇತಿಹಾಸ ಲೈಟ್‌ಹೌಸ್ ಇದ್ದಂತೆ, ಆದರೆ ಅದೇ ಬಂದರು ಅಲ್ಲ

ಒಂದೇ ಸಲ ಎರಡು ಮೊಲಗಳ ಬೆನ್ನುಹತ್ತಿದರೆ ಒಂದನ್ನೂ ಹಿಡಿಯಲು ಸಾಧ್ಯವಿಲ್ಲ

ತೋಳದ ತೆಕ್ಕೆಯಿಂದ ಕರಡಿಯ ತೆಕ್ಕೆಗೆ ಓಡಬಾರದು

ಬೆಳಿಗ್ಗೆ ಏಳುವಾಗ ಮೈಕೈ ನೋವಿಲ್ಲದಿದ್ದರೆ ನೀವು ಸತ್ತಿದ್ದೀರಿ ಎಂದರ್ಥ

ನಿಮ್ಮದೇ ರೂಲ್ಸ್‌ಗಳ ಜೊತೆಗೆ ಇನ್ನೊಂದು ಆಶ್ರಮಕ್ಕೆ ಹೋಗಬೇಡಿ

ನಿಮ್ಮ ಮುಂಗೈಯನ್ನು ನೀವೇ ಕಚ್ಚಲು ಸಾಧ್ಯವಿಲ್ಲ

ಸುಳ್ಳಿನಿಂದ ಮುತ್ತು ಪಡೆಯುವ ಬದಲು ಸತ್ಯದಿಂದ ಕೆನ್ನೆಗೆ ಬಾರಿಸಿಕೊಳ್ಳುವುದು ಒಳ್ಳೆಯದು

ಉಚಿತವಾದ ಚೀಸ್ ಇಲಿಯ ಬೋನಿನಲ್ಲಿ ಮಾತ್ರ ಸಿಗುತ್ತದೆ.

ಚುನಾವಣೆಯ ಫಲಿತಾಂಶ ಏನಾಗುತ್ತದೆ ಮತ್ತು ಆಟ ಎಲ್ಲಿಯವರೆಗೆ ಬಂದಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಅಂದರೆ ಸ್ವಯಂಘೋಷಿತ ಚುನಾವಣಾ ವಿಶ್ಲೇಷಕರ ಭಾಷಣಗಳನ್ನು ಕೇಳಿಸಿಕೊಳ್ಳಲು ಹೋಗಬೇಡಿ. ಅವರಲ್ಲಿ ಹೆಚ್ಚಿನವರು ಕನ್ನಡಿಯ ಮುಂದೆ ನಿಂತು ತಮ್ಮದೇ ಪ್ರತಿಬಿಂಬದ ಜೊತೆಗೆ ಸುದೀರ್ಘವಾಗಿ ಮಾತನಾಡಿಕೊಂಡು ಬಂದವರಾಗಿರುತ್ತಾರೆ. ಅದರ ಬದಲು ಚೀಸ್ ಎಲ್ಲಿದೆ ನೋಡಿ. ಚುನಾವಣೆಯ ಅಜೆಂಡಾದಲ್ಲಿ ಚೀಸ್ ಏಕಾಏಕಿ ಮೇಲೆ ಬಂದಿದೆ ಅಂದರೆ ಅದನ್ನು ಇರಿಸಿದವರು ಆತಂಕದಲ್ಲಿದ್ದಾರೆ ಎಂದೇ ಅರ್ಥ. ಒಂದು ರಾಜಕೀಯ ಪಕ್ಷವು ಚುನಾವಣಾ ಪ್ರಚಾರದ ಮಧ್ಯದಲ್ಲಿ ಇದ್ದಕ್ಕಿದ್ದಂತೆ ದೊಡ್ಡದೊಂದು ಘೋಷಣೆ ಮಾಡುತ್ತದೆ.

ಚುನಾವಣೆಯಲ್ಲಿ ನಾವು ಗೆದ್ದು ಸರಕಾರ ರಚಿಸಿದರೆ ದೇಶದ ಎಲ್ಲಾ ಮಹಿಳೆಯರಿಗೂ ವರ್ಷಕ್ಕೆ ೧,೦೦,೦೦೦ ರುಪಾಯಿ ಕೊಡುತ್ತೇವೆ ಎಂದು ಅದರ ನಾಯಕರು ಪ್ರಕಟಿಸುತ್ತಾರೆ. ಸಹಜವಾಗಿಯೇ ಯಾರೂ ಕೂಡ ಆ ಒಂದು ಲಕ್ಷ ರೂಪಾಯಿ ಸರಕಾರಕ್ಕೆ ಹೇಗೆ ಬರುತ್ತದೆ ಎಂದು ವಿವರಿಸಲು ಹೋಗುವುದಿಲ್ಲ. ಈ ಚುನಾವಣೆ ಯಲ್ಲಿ ೫೦ ಕೋಟಿ ಮಹಿಳಾ ಮತದಾರರು ಇದ್ದಾರೆ ಎಂದುಕೊಳ್ಳಿ. ಚುನಾವಣೆ ಮುಗಿದ ಮೇಲೆ ಒಂದು ಲಕ್ಷ ರೂಪಾಯಿಗೆ ಅರ್ಜಿ ಹಾಕಲು ಮತದಾರರ ಪಟ್ಟಿಯಲ್ಲಿ ಇರುವುದಕ್ಕಿಂತ ಹೆಚ್ಚು ಮಹಿಳೆಯರಿರುತ್ತಾರೆ. ನನಗೆ ತಿಳಿದಿರುವ ಸರಳ ಗಣಿತದ ಆಧಾರದಲ್ಲಿ
ಲೆಕ್ಕ ಹಾಕಿದರೂ ಚುನಾವಣೆಯ ಗಾಳಕ್ಕೆ ಸಿಕ್ಕಿಸಿದ ಈ ಒಂದು ಲಕ್ಷ ರುಪಾಯಿಯ ಚೀಸ್ ಸರಕಾರದ ಬೊಕ್ಕಸಕ್ಕೆ ಎಷ್ಟು ಹೊರೆಯಾಗಬಹುದು ಎಂಬುದು ಊಹೆಗೆ ಕೂಡ ನಿಲುಕುತ್ತಿಲ್ಲ.

ತೆರಿಗೆ ಹಣದ ಬದಲು  ಸರಕಾರವು ಖಾಸಗಿ ಕಂಪನಿಗಳಿಂದ ದುಡ್ಡು ವಸೂಲಿ ಮಾಡಿ ಹೀಗೆ ಜನರಿಗೆ ಹಂಚುವುದಾದರೆ ಮಾತ್ರ ಭಾರತೀಯರು ಮುಂದಿನ ಕೆಲ ವರ್ಷಗಳಲ್ಲಿ ಕರೆನ್ಸಿ ನೋಟುಗಳಲ್ಲಿ ತಂಬಾಕು ತುಂಬಿಕೊಂಡು ಸೇದುವ ಚಿತ್ರಣ ಕಣ್ಮುಂದೆ ಕಾಣಿಸಬಹುದು! ಆದರೆ ಇಂತಹ ತಲೆಬುಡವಿಲ್ಲದ ಭರವಸೆಗಳು ಸಾಮಾನ್ಯವಾಗಿ ಯಾವತ್ತೂ ಜಾರಿಗೆ ಬರುವುದಿಲ್ಲ. ಏಕೆಂದರೆ ಇಲ್ಲಿ ಘೋಷಿಸಿರುವ ಕೊಡುಗೆಯೇ ಒಂದು ಭ್ರಮೆ. ಅದೊಂದು ಅಸಾಧ್ಯ ಕಲ್ಪನೆಯಷ್ಟೆ. ಕುರುಡಾಗಿ ನಂಬುವವರು ಮಾತ್ರ ಅದನ್ನು ಕೇಳಿ ತಲೆ ಅಲ್ಲಾಡಿಸುತ್ತಾರೆ. ಹೆಚ್ಚಿನ ಮತದಾರರು ಇದಕ್ಕೆಲ್ಲ ಹಣ ಎಲ್ಲಿಂದ ಬರುತ್ತದೆ ಎಂದು ಕೇಳುತ್ತಾರೆ. ಅವರು ಹುಕುಮ್ ಗಳಿಗೆ ತಲೆಯಾಡಿಸುವುದಿಲ್ಲ.

**
ಈ ಚುನಾವಣೆಯಲ್ಲಿ ಕಾಶ್ಮೀರದ ಶ್ರೀನಗರದಲ್ಲಿ ಕಳೆದ ನಾಲ್ಕು ದಶಕದಲ್ಲೇ ಅತಿ ಹೆಚ್ಚು ಮತದಾನವಾಗಿದೆ. ೧೯೯೦ರ ದಶಕದಲ್ಲಿ, ೩೦ ವರ್ಷಗಳ ಹಿಂದೆ,
ಈ ನಗರದ ಬೀದಿಗಳು ಚುನಾವಣೆಯ ಸಮಯದಲ್ಲಿ ರಕ್ತದಿಂದ ತೋಯ್ದು ಹೋಗುತ್ತಿದ್ದವು. ಮತಗಳ ಬದಲು ಹೆಣಗಳು ಬೀಳುತ್ತಿದ್ದವು. ಚುನಾವಣೆ ಬಂತೆಂದರೆ ಸಾಕು ಹಿಂಸಾಚಾರಗಳು ಶುರುವಾಗುತ್ತಿದ್ದವು. ಪ್ರತ್ಯೇಕತಾವಾದಿಗಳ ಭಾರತ ವಿರೋಧಿ ಘೋಷಣೆಗಳು ಮುಗಿಲು ಮುಟ್ಟುತ್ತಿದ್ದವು. ಇಂದು ಅಂತಹ ಹಿಂಸಾಚಾರ ಶ್ರೀನಗರದಲ್ಲಿ ಅಲ್ಲ, ಬದಲಿಗೆ ಪಾಕ್ ಆಕ್ರಮಿತ ಕಾಶ್ಮೀರದ ಮುಜಾಫರಾಬಾದ್‌ನಲ್ಲಿ ನಡೆಯುತ್ತಿದೆ. ಅದು ಭಾರತದಿಂದ ಪಾಕಿಸ್ತಾನವು ಅಕ್ರಮವಾಗಿ ವಶಪಡಿಸಿಕೊಂಡ ಕಾಶ್ಮೀರದ ಒಂದು ಭಾಗದ ರಾಜಧಾನಿ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ (ಪಿಒಕೆ) ಕಾಶ್ಮೀರಿಗಳು ಈಗ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದಾರೆ.

ಅವರಿಗೆ ಹಸಿವು, ಅನ್ಯಾಯ, ನೆಲಕಚ್ಚಿದ ಆರ್ಥಿಕತೆ, ಭವಿಷ್ಯದ ಮೇಲೆ ಕವಿದ ಕಾರ್ಮೋಡದಿಂದ ಸ್ವಾತಂತ್ರ್ಯ ಬೇಕಾಗಿದೆ. ಅವರ ಮಕ್ಕಳ ತಟ್ಟೆಯಿಂದ ಪಾಕಿಸ್ತಾನವು ಅನ್ನ ಕಿತ್ತುಕೊಂಡಿದೆ. ಆ ಮಕ್ಕಳಿಗೆ ಪಾಕಿಸ್ತಾನದ ಸರಕಾರವು ಕನಿಷ್ಠ ಪಕ್ಷ ಒಳ್ಳೆಯ ಶಿಕ್ಷಣವನ್ನೂ ನೀಡುತ್ತಿಲ್ಲ. ಅಲ್ಲಿ ಪ್ರಜಾಪ್ರಭುತ್ವ
ಹೋಗಿ ಸೇನೆಯ ನಿಯಂತ್ರಣದಲ್ಲಿರುವ ಸರ್ವಾಧಿಕಾರ ಜಾರಿಗೆ ಬಂದಿದೆ. ಬ್ರಿಟಿಷರ ಜೊತೆಗೆ ಸೇರಿಕೊಂಡು ಹರಿತ ಚಾಕು ತೋರಿಸುತ್ತಾ ಸಂಯುಕ್ತ
ಭಾರತವನ್ನು ಒಡೆದು ಮೊಹಮ್ಮದ್ ಅಲಿ ಜಿಹ್ನಾ ಸೃಷ್ಟಿ ಮಾಡಿದ ಪಾಕಿಸ್ತಾನವಿದು.

ಪಾಕಿಸ್ತಾನಕ್ಕೆ ಭಾರತದ ಬೀದಿಗಳಿಂದ ಒಂದಷ್ಟು ಸುದ್ದಿಗಳಿವೆ. ಕಳೆದ ೭೫ ವರ್ಷಗಳಿಂದ ನೀವು ನಿಮ್ಮ ಸೇನಾಪಡೆಗೆ ಚೆನ್ನಾಗಿ ತಿನ್ನಿಸಿ ಕೊಬ್ಬು ಬರಿಸಿದ್ದೀರಿ. ಅದಕ್ಕೆ ಭಾರತದ ನೆಪ ಹೇಳಿದ್ದೀರಿ. ಭಾರತದಿಂದ ನಮ್ಮ ಅಸ್ತಿತ್ವಕ್ಕೇ ಅಪಾಯವಿದೆ, ಅದರಿಂದ ರಕ್ಷಿಸಿಕೊಳ್ಳಲು ನಮಗೆ ಪ್ರಬಲ ಸೇನೆ ಬೇಕು ಎಂದು ಪಾಕಿಸ್ತಾನದ ಜನರಿಗೆ ಮುಂಕುಬೂದಿ ಎರಚಿದ್ದೀರಿ. ಆದರೆ ೨೦೨೦ರ ದಶಕದಲ್ಲಿ ನಿಮಗೊಂದು ಶುಭಸುದ್ದಿ ನೀಡುತ್ತೇವೆ. ಭಾರತದಲ್ಲಿರುವ ಯಾರಿಗೂ ಪಾಕಿಸ್ತಾನವೆಂಬ ದುರಂತಮಯ ದೇಶವನ್ನು ಮರಳಿ ಪಡೆದುಕೊಳ್ಳುವ ಕಿಂಚಿತ್ ಆಸೆ ಕೂಡ ಇಲ್ಲ. ಪಾಕಿಸ್ತಾನದ ಬಗ್ಗೆ ಭಾರತಕ್ಕೆ ಇರುವ ಏಕೈಕ ಅನುಕಂಪ ಮಾನವೀಯತೆಯ ಆಧಾರ ದಲ್ಲಿ ಇರುವಂಥದ್ದು.

ಪಾಕಿಸ್ತಾನದ ಜನಸಾಮಾನ್ಯರು ಎಷ್ಟು ಕಷ್ಟಪಡುತ್ತಾರೆ, ಅವರನ್ನು ಅಲ್ಲಿನ ಸರಕಾರ ಹೇಗೆ ದಾರಿ ತಪ್ಪಿಸುತ್ತಿದೆ, ಹೇಗೆ ಪಾಕಿಸ್ತಾನೀಯರು ಭಾರತವನ್ನು ದ್ವೇಷಿಸುವಂತೆ ಮಾಡಿ ಅವರನ್ನು ಒಳ್ಳೆಯ ಬದುಕಿನಿಂದ ವಂಚಿತರಾಗಿಸಲಾಗಿದೆ, ಹೇಗೆ ೧೯೪೭ರ ಸುಳ್ಳು ಕತೆಗಳನ್ನೇ ಹೇಳುತ್ತಾ ಪಾಕಿಸ್ತಾನೀಯರ ತಲೆಗೆ ವಿಷ ತುಂಬಲಾಗುತ್ತಿದೆ ಎಂಬುದನ್ನು ನೋಡಿ ಭಾರತೀಯರು ಅಯ್ಯೋ ಎನ್ನುತ್ತಾರೆ. ಪಾಕಿಸ್ತಾನವನ್ನು ಸೃಷ್ಟಿಸಿದ ಶ್ರೀಮಂತರು ಇಂದಿಗೂ ಅಲ್ಲಿನ
ಮುಳುಗುತ್ತಿರುವ ಆರ್ಥಿಕತೆಯಿಂದ ಹಣ ಬಾಚಿ ಬಾಚಿ ಇನ್ನಷ್ಟು ಶ್ರೀಮಂತರಾಗುತ್ತಿದ್ದಾರೆ. ಅವರು ಇತಿಹಾಸದಲ್ಲಿ ನಡೆದ ಅತಿದೊಡ್ಡ ಸುಲಿಗೆಯ
ಫಲಾನುಭವಿಗಳು.

ನನ್ನ ಪುಸ್ತಕ ‘ಟಿಂಡರ್‌ಬಾಕ್ಸ್’ನಲ್ಲಿ ಪಾಕಿಸ್ತಾನವನ್ನು ಜೆಲ್ಲಿ-ಸ್ಟೇಟ್ ಎಂದು ಕರೆದಿದ್ದೇನೆ. ಜೆಲ್ಲಿ ಅಂದರೆ ಸ್ಥಿರವಾಗಿಲ್ಲದ, ಕರಗಿಯೂ ಹೋಗದ ಅಥವಾ ಅಸ್ತಿತ್ವ ಕೂಡ ಕಳೆದುಕೊಳ್ಳದ ಒಂದು ಮೆತ್ತಗಿನ ಸ್ಥಿತಿ. ಪಾಕಿಸ್ತಾನ ತನ್ನ ಸೃಷ್ಟಿಯ ಜೊತೆಗೆ ಆದ ತಪ್ಪುಗಳ ಬಲೆಯಲ್ಲೇ ಇಂದಿಗೂ ಸಿಲುಕಿ ಒದ್ದಾಡುತ್ತಿದೆ. ಈ ಸ್ವಯಂಕೃತ ಅಪರಾಧದಿಂದ ಮುಕ್ತಿ ಪಡೆಯಲು ಅದಕ್ಕೆ ದೂರದೃಷ್ಟಿಯ ಹಾಗೂ ಧೈರ್ಯವಂತ ನಾಯಕ ಬೇಕು. ಈಗ ಅಲ್ಲಿರುವ ನಾಯಕರಲ್ಲಿ ಇಂತಹ ಶಕ್ತಿ ಯಾರಲ್ಲೂ ಕಾಣಿಸುತ್ತಿಲ್ಲ. ಬಹುಶಃ ಪಾಕಿಸ್ತಾನದ ಜನಸಾಮಾನ್ಯರ ನಡುವೆ ಅನಾಮಿಕನಾಗಿ ಅಂತಹ ನಾಯಕನೊಬ್ಬ ಅಡಗಿರಬಹುದು. ಆದರೆ, ಆ ವ್ಯಕ್ತಿ ಹೊರಗೆ ಬಂದು ಪಾಕಿಸ್ತಾನದ ಚುಕ್ಕಾಣಿಯನ್ನು ಕೈಗೆ ತೆಗೆದುಕೊಂಡರೂ ಒಂದು ಸತ್ಯವನ್ನು ಆ ದೇಶ ಅರ್ಥ ಮಾಡಿಕೊಳ್ಳಲೇಬೇಕು. ಪಾಕಿಸ್ತಾನ ತನ್ನ ಇತಿಹಾಸದಲ್ಲಿ ಘಟಿಸಿದ ಮೂಲಭೂತ ತಪ್ಪುಗಳನ್ನು ಸರಿಪಡಿಸಿಕೊಂಡು, ತನ್ನನ್ನು ತಾನು ಹೊಸದಾಗಿ ಅನ್ವೇಷಿಸಿಕೊಂಡು, ಆಧುನಿಕ ದೇಶವಾಗಿ ಹೊರಹೊಮ್ಮದ ಹೊರತು ಒಳ್ಳೆಯ ಭವಿಷ್ಯವನ್ನು ಕಾಣಲು ಸಾಧ್ಯವಿಲ್ಲ ಎಂಬುದೇ ಆ ಸತ್ಯ.

ಏಕೆಂದರೆ ಪಾಕಿಸ್ತಾನದ ರಾಜಕೀಯ ಸಿದ್ಧಾಂತ ಈಗಾಗಲೇ ತುಕ್ಕು ಹಿಡಿದು ಪುಡಿ ಯಾಗಿ ಉದುರುತ್ತಿದೆ. ಅದರ ಎಕ್ಸ್‌ಪೈರಿ ದಿನಾಂಕ ಯಾವತ್ತೋ ಮುಗಿದುಹೋಗಿದೆ.

**
ಹೆಸರಿನ ಮಾಲಿಕತ್ವ ಇರುವುದು ಅಪ್ಪ ಅಮ್ಮನಲ್ಲೇ ಹೊರತು ಮಕ್ಕಳಲ್ಲಿ ಅಲ್ಲ. ಮಕ್ಕಳು ಯಾವಾಗಲೂ ತಮ್ಮ ತಂದೆ ತಾಯಿಯ ಪ್ರೀತಿಯ ಆಶೋತ್ತರ ಗಳಿಗೆ ತಕ್ಕಂತೆ ಬೆಳೆಯುತ್ತಾರೆ. ಪಿ.ಜಿ.ವುಡ್‌ಹೌಸ್ ನನ್ನ ನೆಚ್ಚಿನ ತತ್ವಜ್ಞಾನಿ. ಅವನ ಸಿದ್ಧಾಂತಗಳಿಗೆ ಸಾವಿಲ್ಲ. ಅವನು, ಎಲ್ಲಾ ಮಕ್ಕಳೂ ಒಂದೇ ಥರ ಕಾಣಿಸುತ್ತಾರೆ ಎನ್ನುತ್ತಾನೆ. ಶಿಶುವಾಗಿದ್ದಾಗ ಎಲ್ಲರೂ ಹೆಚ್ಚುಕಮ್ಮಿ ಒಂದೇ ರೀತಿ ಇರುತ್ತಾರೆ. ಆದರೂ ತಮ್ಮ ಮಗುವನ್ನು ನೋಡಿದಾಗ ಮಾತ್ರ ಅಪ್ಪ ಅಮ್ಮನ ಮುಖ ಅರಳುತ್ತದೆ. ಅವರು ಬಹಳ ಖುಷಿಯಿಂದ, ತಮ್ಮ ಕಲ್ಪನೆಗೆ ಬರುವ ಅತ್ಯಂತ ಸುಂದರ ಹೆಸರನ್ನು ಆ ಮಗುವಿಗೆ ಇರಿಸುತ್ತಾರೆ.

ಹೆಚ್ಚಾಗಿ ಆ ಹೆಸರಿನಲ್ಲಿ ಯಾವುದೋ ಒಂದು ದೇವರ ಹೆಸರಿನ ಅಂಶವೂ ಅಡಗಿರುತ್ತದೆ. ಅದಿಲ್ಲವಾದರೆ, ಹೊಸ ರೀತಿಯ ಹೆಸರು ಇಡುವವರು ಪ್ರಕೃತಿಯಿಂದ ಆಯ್ದುಕೊಂಡ ಯಾವುದಾದರೂ ಹೆಸರಿಡುತ್ತಾರೆ. ಹಾಗೆ ಹೆಸರಿಡುವಾಗಲೂ ಅತ್ಯಂತ ಸುಂದರ ಹೂವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಎಲಾನ್ ಮಸ್ಕ್ ತನ್ನ ಮಕ್ಕಳಿಗೆ ಹೆಸರಿಡುವಾಗ ಆಲಾಬೆಟ್‌ಗಳನ್ನು ಆಯ್ದುಕೊಂಡಿದ್ದರಲ್ಲಿ ಈ ಸೌಂದರ್ಯದ ಹುಡುಕಾಟ ಇಲ್ಲ ಎಂದು ನೀವು ಹೇಳಬಹುದು. ಆದರೆ ಆತ ಕೂಡ ತನ್ನ ಮಕ್ಕಳು ಭವಿಷ್ಯದಲ್ಲಿ ಯಾರಿಗೂ ಗೊತ್ತಿಲ್ಲದ ಗ್ಯಾಲೆಕ್ಸಿಗಳಿಗೆ ಮನುಷ್ಯನನ್ನು ಕರೆದುಕೊಂಡು ಹೋಗುವ ಮಹಾಯಾತ್ರೆಯ ಕಮಾಂಡರ್‌ಗಳಾಗಲಿ ಎಂಬ ಕನಸಿನೊಂದಿಗೆ ಆಲಾಬೆಟ್‌ಗಳ ಹೆಸರಿಟ್ಟಿದ್ದಾರೆ.

ಹೆಸರಿನ ಹಿನ್ನೆಲೆ ಹೀಗಿರುವಾಗ, ನಾನು ನೋಡಿದ ಅತ್ಯಂತ ಪ್ರಾಮಾಣಿಕ ಹೆಸರೆಂದರೆ ಭವೇಶ್ ಭಿಂಡೆಯದು. ಮುಂಬೈನ ಘಾಟ್ಕೋಪರ್‌ನಿಂದ ಬಂದ ಈ ವ್ಯಕ್ತಿ ಸದ್ಯಕ್ಕೆ ಪೊಲೀಸ್ ಕಸ್ಟಡಿಯಲ್ಲಿದ್ದಾನೆ. ಅವನು ತನ್ನ ಜಾಹೀರಾತು ಏಜೆನ್ಸಿಗೆ ಇಗೋ ಮೀಡಿಯಾ ಪ್ರೈ.ಲಿ. ಎಂದು ಹೆಸರಿಟ್ಟಿದ್ದಾನೆ. ಇಗೋ ಅಂದರೆ ದರ್ಪ.

ಮುಂಬೈ ಪೊಲೀಸರಿಗೆ ಭಿಂಡೆ ತಾತ್ಕಾಲಿಕ ಅತಿಥಿಯಷ್ಟೆ. ಬಹಳ ದಿನ ಆತ ಅವರ ಕಸ್ಟಡಿಯಲ್ಲಿ ಇರುವುದಿಲ್ಲ. ಏಕೆಂದರೆ, ಎರಡು ವರ್ಷದ ಹಿಂದೆ ಆತ
ರೈಲ್ವೆ ಇಲಾಖೆಗೆ ಸೇರಿದ ಜಾಗದಲ್ಲಿ ದೈತ್ಯಾಕಾರದ ಬಿಲ್‌ಬೋರ್ಡ್ ನಿರ್ಮಿಸಲು ನಗರಾಡಳಿತದ ಭ್ರಷ್ಟ ರಾಜಕಾರಣಿಗಳು ಹಾಗೂ ಕುಲಗೆಟ್ಟುಹೋದ
ಅಽಕಾರಿಗಳ ನೆರವನ್ನೇ ಪಡೆದಿದ್ದ. ಅವರು ಎಲ್ಲಾ ನಿಯಮಗಳನ್ನೂ ಮೀರಿ ಇವನಿಗೆ ಅಂತಹದ್ದೊಂದು ಹೋರ್ಡಿಂಗ್ ಹಾಕಲು ಅನುಮತಿ ನೀಡಿದ್ದರು.
ನಂತರದ ಎರಡು ವರ್ಷಗಳ ಕಾಲ ಅಕ್ರಮ ಹೋರ್ಡಿಂಗ್‌ಗಳನ್ನು ಹುಡುಕುವ ಅಧಿಕಾರಿಗಳ ಕಣ್ಣಿಗೆ ಈ ಹೋರ್ಡಿಂಗ್ ಕಾಣಿಸಲೇ ಇಲ್ಲ. ಏಕೆಂದರೆ
ರಸ್ತೆಯಲ್ಲಿ ಓಡಾಡುವ ಎಲ್ಲರಿಗೂ ಕಾಣಿಸುವ ಈ ಬೃಹದಾಕಾರದ ಹೋರ್ಡಿಂಗ್ ಅನ್ನು ಅವರು ದಾಖಲೆಯ ಪುಸ್ತಕಗಳಲ್ಲಿ ಹುಡುಕುತ್ತಿದ್ದರು. ತಿಂಗಳ
ಹಿಂದೆ ಪೊಲೀಸರು ಭಿಂಡೆಗೆ ಈ ಹೋರ್ಡಿಂಗ್ ವಿಷಯದಲ್ಲಿ ನೋಟಿಸ್ ಕಳುಹಿಸಿದ್ದರು.

ಆದರೆ ತನ್ನ ಭ್ರಷ್ಟ ಪ್ರಭಾವಿ ಸ್ನೇಹಿತರಿಗೆ ಚೆನ್ನಾಗಿ ತಿನ್ನಿಸಿ ಸುಖವಾಗಿದ್ದ ಆತ ಆ ನೋಟಿಸ್‌ಗೆ ಕವಡೆ ಕಿಮ್ಮತ್ತು ನೀಡಲಿಲ್ಲ. ಬಹಶಃ ಆತನಿಗೆ ೨೦೨೬ ರಲ್ಲೂ ಇಂತಹುದೇ ಇನ್ನೊಂದು ನೋಟಿಸ್ ಬರುತ್ತಿತ್ತೋ ಏನೋ. ಆದರೆ ಹದಿನೈದು ದಿನಗಳ ಹಿಂದೆ ಬಂದ ಬಿರುಗಾಳಿ ಆ ಬಿಲ್‌ಬೋರ್ಡನ್ನೇ ನೆಲಕ್ಕೆ ಉರುಳಿಸಿ ೧೬ ಜೀವಗಳನ್ನು ಬಲಿ ಪಡೆಯಿತು. ೭೦ಕ್ಕೂ ಹೆಚ್ಚು ಜನರು ಅದರಡಿ ಸಿಲುಕಿ ಗಾಯಗೊಂಡರು. ಮೃತರ ಸಂಖ್ಯೆಯು ಭ್ರಷ್ಟಾಚಾರದ ಮಟ್ಟಕ್ಕೆ ಹಿಡಿದ ಕನ್ನಡಿಯಿದ್ದಂತೆ. ನಿಮಗೊಂದು ವಿಷಯ ಗೊತ್ತಾ? ಮುಂಬೈ ಮಹಾನಗರ ಪಾಲಿಕೆಗೆ ಕಾರ್ಪೊರೇಟರ್ ಆಗಿ ಆಯ್ಕೆಯಾಗುವುದು ಲೋಕಸಭೆಗೆ ಸಂಸದನಾಗಿ ಆಯ್ಕೆಯಾಗುವುದಕ್ಕಿಂತ ದೊಡ್ಡ ವಿಷಯ.

ಅದೇಕೆ? ಕಾರಣ, ಇವೇ ಬಿಲ್‌ಬೋರ್ಡ್‌ಗಳು. ದಿಲ್ಲಿಯ ಸಂಸತ್ ಸದಸ್ಯತ್ವ ಗಿಟ್ಟಿಸಿಕೊಂಡರೆ ಮಾಡಬಹುದಾದ ಹಣಕ್ಕಿಂತ ಹೆಚ್ಚು ಹಣವನ್ನು ಮುಂಬೈನ ಕಾರ್ಪೊರೇಟರ್ ಆಗಿ ಈ ಅಕ್ರಮ ಹೋರ್ಡಿಂಗ್ ಗಳಿಂದ ಮಾಡಬಹುದು. ಅಷ್ಟು ದೊಡ್ಡ ದಂಧೆ ಅದು. ಭಿಂಡೆ ಬಹಳ ಪಾರದರ್ಶಕ ವ್ಯಕ್ತಿ. ಅವನ ಕಂಪನಿಯ ಹೆಸರೇ ಇಗೋ. ಅವನು ಬೆಳೆದಿದ್ದು ಕೂಡ ದರ್ಪದಿಂದಲೇ. ಸಾಮಾನ್ಯವಾಗಿ ನಾವು ಯಾರಾದರೂ ಸಾಧಕರನ್ನು ಹೊಗಳುವಾಗ ಈ ವ್ಯಕ್ತಿ ತುಂಬಾ ವಿನಮ್ರ ಹಿನ್ನೆಲೆಯಿಂದ ಬಂದವರು ಎಂದು ಹೇಳುತ್ತೇವಲ್ಲ, ಅಂತಹ ಹಿನ್ನೆಲೆಯಿಂದಲೇ ಭಿಂಡೆ ಕೂಡ ಬಂದಿದ್ದಾನೆ. ಆದರೆ ವಿಧೇಯತೆಯು ಮುಂಬೈನ ಉದ್ಯಮ ವಲಯದಲ್ಲಿ, ಅದರಲ್ಲೂ ಅಕ್ರಮ ಬಿಲ್‌ಬೋರ್ಡ್‌ಗಳ ದಂಧೆಯಲ್ಲಿ ನಿಮ್ಮನ್ನು ತುಂಬಾ ದೂರ ಕರೆದುಕೊಂಡು ಹೋಗುವುದಿಲ್ಲ. ಆದರೆ ದರ್ಪವಿದ್ದರೆ ಬಹಳ ಮೇಲೆ ಹೋಗಬಹುದು.

ದರ್ಪ ತೋರಿದರೆ ಕಾರ್ಪೊರೇಟರ್‌ಗಳು ನಿಮ್ಮ ಕಿಸೆಯೊಳಗೆ ಬಂದು ಬೀಳುತ್ತಾರೆ. ಅಲ್ಲಿಂದ ಅವರಿಗೆ ಏನು ಬೇಕೋ ಅದನ್ನು ತೆಗೆದುಕೊಂಡು ಹೊರಗೆ ಜಿಗಿದು ನಿಂತು ನಿಮ್ಮನ್ನು ಮನಸಾರೆ ಹರಸುತ್ತಾರೆ. ಇಲ್ಲಿ ನನಗೆ ಇನ್ನೊಂದು ಗಾದೆ ನೆನಪಾಗುತ್ತದೆ: Pಜಿbಛಿ ಟಞಛಿo ಚಿಛ್ಛಿಟ್ಟಛಿ Z ಚಿಜ್ಝ್ಝಿಚಿಟZb Z.
**

ಹೊಸ ಹೊಸ ಮಾರ್ಕೆಟಿಂಗ್ ತಂತ್ರಗಳನ್ನು ಹೆಣೆಯುವ ಬಹುರಾಷ್ಟ್ರೀಯ ಕಂಪನಿಗಳ ಜಾಣ ಹುಡುಗರು omZqಜ್ಞಿಜ ಎಂಬ ಇನ್ನೊಂದು ಹೊಸ ಪದವನ್ನು ಸೃಷ್ಟಿಸಿದ್ದಾರೆ. ಈ ಪದವೀಗ ಎಲ್ಲೆಡೆ ಹರಿದಾಡುತ್ತಿದೆ. ಸ್ಪೇವಿಂಗ್ ಅಂದರೆ ಸ್ಪೆಂಡಿಂಗ್ ಮತ್ತು ಸೇವಿಂಗ್, ಅಂದರೆ ಉಳಿತಾಯ ಮಾಡುವು ದಕ್ಕಾಗಿ ಖರ್ಚು ಮಾಡುವುದು! ಮೂರು ಸೋಪು ತೆಗೆದುಕೊಂಡರೆ ನಾಲ್ಕನೆಯದು ಉಚಿತ ಎಂಬ ತಲೆ ಬೋಳಿಸುವ ಆಫರ್‌ನಷ್ಟೇ ಕುತಂತ್ರದ ಪದವಿದು. ಮೂರು ಸೋಪಿನ ಬೆಲೆಯಲ್ಲೇ ನಾಲ್ಕನೆಯ ಸೋಪಿನ ಬೆಲೆಯನ್ನೂ ಸೇರಿಸಿ ನಿಮ್ಮನ್ನು ಸುಲಿಗೆ ಮಾಡಿರುವುದು ಎಲ್ಲರಿಗೂ ಹೇಗೆ ತಿಳಿಯುವುದಿಲ್ಲವೋ ಹಾಗೆಯೇ ಈ ಸ್ಪೇವಿಂಗ್‌ನ ಮಸಲತ್ತು ನಮಗೆ ಅರ್ಥವಾಗುವುದಕ್ಕೂ ಬಹಳ ದಿನ ಹಿಡಿಯಬಹುದು.

ಹಣದ ಮೌಲ್ಯ ಕುಸಿದಿರುವ ದುಬಾರಿ ಹಣದುಬ್ಬರದ ಕಾಲದಲ್ಲಿ ಸ್ಪೇವಿಂಗ್ ಮಾಡುವುದಕ್ಕೆ ಕೊಂಚ ಅರ್ಥವಿದೆ. ಏಕೆಂದರೆ ಆಗ ಹಣದ ಮೌಲ್ಯ
ಕಡಿಮೆಯಾಗಿದ್ದರೂ ವಸ್ತುವಿನ ಪ್ರಯೋಜನ ಅಷ್ಟೇ ಇರುತ್ತದೆ. ಬೇರೆ ಸಮಯದಲ್ಲಿ ಇದು ಜನರ ಕೈಲಿರುವ ಹಣವನ್ನು ಹೊಳೆಗೆ ಹಾಕಿಸಲು ಎಂಎನ್
ಸಿಗಳು ಕಂಡುಕೊಂಡ ಹೊಸ ಉಪಾಯವೇ ಆಗುತ್ತದೆ. ಬಹುಶಃ ಈ ಪದ ಸದ್ಯದಲ್ಲೇ ಡಿಕ್ಷನರಿಗೂ ಸೇರಬಹುದು. ಅಥವಾ ಅರ್ಥಶಾಸಜ್ಞರಿಗೆ ಈ ಪದ ಆಕರ್ಷಕವಾಗಿ ತೋರಬಹುದು. ಚುನಾವಣಾ ರಾಜಕಾರಣದಲ್ಲೂ ಸ್ಪೇವಿಂಗ್ ಎಂಬ ತಂತ್ರಕ್ಕೆ ಜಾಗ ಸಿಗಬಹುದು. ಚುನಾವಣೆಯಲ್ಲಿ ಧಾರಾಳವಾಗಿ
ಖರ್ಚು ಮಾಡಿ, ನಂತರ ಅಧಿಕಾರಕ್ಕೆ ಬಂದಾಗ ಅದರ ಹತ್ತಾರು ಪಟ್ಟು ಸಂಪಾದನೆ ಮಾಡಿ ಎಂಬುದು ಹಳೆಯ ಸಿದ್ಧಾಂತವೇ ಅಲ್ಲವೇ? ಅಮೆರಿಕ,
ಯುರೋಪ್, ಆಫ್ರಿಕಾ ಅಥವಾ ಭಾರತ ಹೀಗೆ ಎಲ್ಲಾ ಪ್ರಜಾಪ್ರಭುತ್ವಗಳೂ ಜನರಿಗೆ ಎಣ್ಣೆ ಸವರುವ ತಂತ್ರವನ್ನೇ ಪ್ರಯೋಗಿಸುತ್ತವೆ. ಹಚ್ಚುವ ಎಣ್ಣೆಯ
ಪ್ರಮಾಣ ಮತ್ತು ಎಣ್ಣೆ ಹಚ್ಚುವ ವಿಧಾನ ಬದಲಾಗುತ್ತದೆ ಅಷ್ಟೆ, ಆದರೆ ಉದ್ದೇಶ ಬದಲಾಗುವುದಿಲ್ಲ. ಇದರಲ್ಲಿ ರಹಸ್ಯವೇನೂ ಇಲ್ಲ.

**
ಹಾಗಿದ್ದರೆ ಇನ್ನೊಂದು ರಷ್ಯನ್ ಗಾದೆಯೊಂದಿಗೆ ಈ ಅಂಕಣ ಮುಗಿಸೋಣ. ಮೂವರು ತಮ್ಮಲ್ಲಿರುವ ರಹಸ್ಯವನ್ನು ಕಾಪಾಡಿಕೊಳ್ಳಬೇಕು ಅಂದರೆ ಅವರಲ್ಲಿಬ್ಬರು ಸತ್ತಿರಬೇಕು. ಪ್ರಜಾಪ್ರಭುತ್ವದಲ್ಲಿ ರಹಸ್ಯಗಳಿರುವುದಿಲ್ಲ.

(ಲೇಖಕರು: ಹಿರಿಯ ಪತ್ರಕರ್ತ)

Leave a Reply

Your email address will not be published. Required fields are marked *

error: Content is protected !!