Sunday, 15th December 2024

ಈ ಹೊತ್ತಿಗೆ ಇದೆಲ್ಲಾ ಬೇಕಿತ್ತಾ…?

ದಾಸ್ ಕ್ಯಾಪಿಟಲ್

dascapital1205@gmail.com

ಐದು ಮತ್ತು ಎಂಟನೆಯ ತರಗತಿಗೆ ಪಬ್ಲಿಕ್ ಪರೀಕ್ಷೆಯ ಕುರಿತಾಗಿ ಸರಕಾರ ಈವರೆಗೆ ನೀಡಿದ ಆದೇಶ ಮತ್ತು ಅದಕ್ಕೆ ಸಂಬಂಧಿಸಿದಂತೆ ಸಾಂದರ್ಭಿಕ ವಾಗಿ ನೀಡಿದ ಹೇಳಿಕೆಗಳು, ಅದೇಶಗಳ ಬದಲಾವಣೆಗಳು ಶಿಕ್ಷಕರು, ವಿದ್ಯಾರ್ಥಿಗಳನ್ನು ಬಿಡಿ ಜನಸಾಮಾನ್ಯರಿಗೂ ಗೊಂದಲವನ್ನು ಆರಂಭದಿಂದಲೂ
ಉಂಟು ಮಾಡುತ್ತಲೇ ಬಂತು. ಪಬ್ಲಿಕ್ ಪರೀಕ್ಷೆ ರದ್ದು ಮಾಡಿ ಎಂದು ಮೊನ್ನೆ ಶುಕ್ರವಾರ ಹೈಕೋರ್ಟು ತೀರ್ಪು ಬಂತು.

ಜೊತೆಯಲ್ಲಿ ಶನಿವಾರವೇ ಮತ್ತೊಂದು ಸುದ್ದಿಯೂ ಹೊರಟಿತು; ಪಬ್ಲಿಕ್ ಪರೀಕ್ಷೆಗೆ ಬೇಕಾದ ಎಲ್ಲ ಸಿದ್ಧತೆ ಗಳನ್ನು ಮಾಡಿಕೊಂಡ ಸರಕಾರ ಪರೀಕ್ಷೆ ನಡೆಸಲು ಅನುಮತಿ ಕೊಡುವಂತೆ ಮೇಲ್ಮನವಿ ಸಲ್ಲಿಸುತ್ತಿದೆ ಎಂದು. ಆದ್ದರಿಂದ ತೀರ್ಪು ಏನು ಬೇಕಾದರೂ ಬರಬಹುದು, ಅಲ್ಲಿಯವರೆಗೆ ಕಾಯಿರಿ ಎಂತ ಅಂತ ಸುದ್ದಿ ಬಂತು. ಗೊಂದಲವೇ ಆಗುವುದಾದರೂ ಅದಕ್ಕೊಂದು ಹದವಾದ ರೀತಿಯ ಪರಿಹಾರವನ್ನು ಹುಡುಕಬಹುದೇನೋ! ಕೊನೆಯಪಕ್ಷ ಹೀಗೆ ಆಗಬಹುದು ಅಂತ ಒಂದು ಅರ್ಧ ನಿರ್ಧಾರಕ್ಕಾದರೂ ಬರಬಹುದು.

ಆದರೆ, ಈ ಪಬ್ಲಿಕ್ ಪರೀಕ್ಷೆಯ ವಿಚಾರದಲ್ಲಿ ಸರಕಾರಕ್ಕೂ ಗೊಂದಲವಾಗಿದೆಯೇನೋ ಅನಿಸಲು ಶುರು ವಾಗಿದ್ದು ಐದು ಮತ್ತು ಎಂಟನೆಯ ತರಗತಿಗೆ ಪಬ್ಲಿಕ್ ಪರೀಕ್ಷೆ ಅಂತ ಸರಕಾರವೇ ಅನೌ ಮಾಡಿದ ದಿನದಿಂದ! ಒಮ್ಮೆಲೇ ವಿದ್ಯಾಮಂತ್ರಿಗಳು ಐದು ಮತ್ತು ಎಂಟನೆಯ ತರಗತಿಗೆ ಈ ವರ್ಷ ಪಬ್ಲಿಕ್ ಪರೀಕ್ಷೆ ಅಂತ ಹೇಳಿಕೆ ಕೊಟ್ಟರು. ತಕ್ಷಣವೇ ಖಾಸಗಿ ಶಾಲೆಯವರ ವಿರೋಧ ಹುಟ್ಟಿತು. ಪೋಷಕರದು ವಿರೋಧವೆದ್ದಿತು (ಹೀಗೆ ಒಮ್ಮೆಲೇ ಪಬ್ಲಿಕ್ ಪರೀಕ್ಷೆ ಅಂತ ಹೇಳಿಕೆ ಕೊಟ್ಟರೆ ಖಾಸಗಿ ಶಾಲೆಗಳು ಏನು ಮಾಡಬಹುದು ಎಂಬ ದೂರ ದೃಷ್ಟಿಯ ಆಲೋಚನೆ ಸರಕಾರಕ್ಕೆ ಇಲ್ಲವೇ? ಖಂಡಿತವಾಗಿಯೂ ಇತ್ತು. ಆದರೆ ಅದಕ್ಕೆ ಪ್ರತ್ಯುತ್ತರದ ಪೂರ್ವ ಸಿದ್ಧತೆ ಇರಲಿಲ್ಲವಷ್ಟೆ!) ಖಾಸಗಿ ಶಾಲೆಗಳ ವಿರೋಧವನ್ನು ತಣಿಸಲು ‘ಎಲ್ಲರನ್ನೂ ಪಾಸು ಮಾಡುತ್ತೇವೆ’ ಎಂದು ವಿದ್ಯಾಮಂತ್ರಿಗಳು ಮತ್ತೊಂದು ಹೇಳಿಕೆ ಕೊಟ್ಟರು.

ಅಲ್ಲಿಗೆ ಪಬ್ಲಿಕ್ ಪರೀಕ್ಷೆಯ ಭಯ ಬಿಡಿ ಪರೀಕ್ಷೆಯ ಭಯವೇ ಸತ್ತುಹೋಯಿತು, ಪರೀಕ್ಷೆಯ ಬಗ್ಗೆ ಇದ್ದ ಚೂರು ಗಾಂಭೀರ್ಯವೂ ಸತ್ತಿತು. ಆದರೂ ಮಾದರಿ ಪ್ರಶ್ನೆಪತ್ರಿಕೆಗಳನ್ನು ಸರಕಾರ ವಿದ್ಯಾರ್ಥಿಗಳಿಗೆ ಕೊಟ್ಟಿತು. ಪಬ್ಲಿಕ್ ಪರೀಕ್ಷೆಯ ಮಾದರಿಯ ಪ್ರಶ್ನೆಪತ್ರಿಕೆಗೆ ಉತ್ತರಿಸಲು ಬೇಕಾದಂತೆ ಅವರನ್ನು ತಯಾರಿಯೂ ಸೂಚಿಸಿತು. ಆಫ್ ಕೋರ್ಸ್ ಅದಕ್ಕೆ ಬೇಕಾದ ಸಿದ್ಧತೆಗಳು ಸರಕಾರದ ಮಟ್ಟದಲ್ಲೂ, ಶಾಲೆಗಳಲ್ಲೂ ನಡೆಯುತ್ತ ಬಂತು. ಹಾಗಂತ
ಆರಂಭದಿಂದಲೂ ಕಲಿಕಾ ಚೇತರಿಕೆ ಪರಿಕಲ್ಪನೆ ಸರಕಾರಿ ಶಾಲೆಗಳಲ್ಲಿ ಮಾತ್ರ ಸರಿಯಾಗಿ ಪಾಲನೆಯಾದದ್ದು ನೂರಕ್ಕೆ ನೂರು ಸತ್ಯವೇ ಅಹುದು!

ಆದರೆ, ಖಾಸಗೀ ಶಾಲೆಗಳಲ್ಲಿ ಕಲಿಕಾ ಚೇತರಿಕೆ ಕಡ್ಡಾಯವಲ್ಲ ಎಂಬ ಸರಕಾರದ ನಿರ್ಧಾರ ಸರಿಹೊತ್ತಿನ ಗೊಂದಲಕ್ಕೆ ಮೊದಲ ಬುನಾದಿಯಾಗಿದೆ.
ಸರಕಾರದ ಮಟ್ಟದಲ್ಲಿ ಶೈಕ್ಷಣಿಕ ಪರಿಕಲ್ಪನೆಗಳನ್ನು ಜಾರಿಗೆ ತರುವಲ್ಲಿ ದೊಡ್ಡಮಟ್ಟದ ಚಿಂತನೆ ಇಲ್ಲವೆಂಬುದು ಮೊದಲಿಂದಲೂ ಶಿಕ್ಷಕರಿಗೆ, ಪೋಷಕ ರಿಗೆ, ವಿದ್ಯಾರ್ಥಿಗಳಿಗೆ ಅನಿಸುತ್ತಲೇ ಇತ್ತು.

ಅಷ್ಟಕ್ಕೂ ಸರಕಾರದ ಮಟ್ಟದಲ್ಲಿ ಈಗಲೂ ಈ ಗೊಂದಲ ಅತೀ ಮಹತ್ವzಗಿ ಕಾಣಿಸುತ್ತಿಲ್ಲ ಎಂದೇ ಅನಿಸುತ್ತದೆ. ಖಾಸಗಿಯವರು ಕೋರ್ಟಿಗೆ ಹೋದರು. ಅವರಲ್ಲಿ ಗೆದ್ದರು ಎಂದೇ ಸರಕಾರ ಭಾವಿಸಿದಂತಿದೆ. ಅದಕ್ಕಾಗಿ ಮತ್ತೆ ಮೇಲ್ಮನವಿಯನ್ನು ಸಲ್ಲಿಸಿದೆ. ಇವತ್ತು ಪಬ್ಲಿಕ್ ಪರೀಕ್ಷೆ ಆರಂಭವಾಗಬೇಕಿತ್ತು. ಆದರೆ, ಕೋರ್ಟು ಮಂಗಳವಾರ ವಿಚಾರಣೆಗೆ ತೆಗೆದುಕೊಳ್ಳಲಿದೆ. ಸರಕಾರವಷ್ಟೇ ಅಲ್ಲ, ಎಲ್ಲರೂ ಕೋರ್ಟು ತೀರ್ಪಿಗೆ ಕಾಯಬೇಕಿದೆ. ಕಾಯುವುದೇನೋ
ಸರಿ, ಕಾಯೋಣ. ಆದರೆ, ಸರಕಾರದ ಈ ನಡೆ ವಿಚಿತ್ರವಾಗಿ ತೋರುತ್ತಿದೆ. ಯಾಕೆಂದರೆ ಈ ಹೊತ್ತಿಗೆ ಇದೆಲ್ಲ ಬೇಕಿತ್ತಾ ಅನಿಸುತ್ತಿದೆ.

ವಿದ್ಯಾರ್ಥಿಗಳಿಗೆ, ಪೋಷಕರಿಗೆ, ಇಲಾಖೆಗೆ ಯಾವುದರ ಬಗ್ಗೆಯೂ ಯಾವ ನೆಲೆಯಲ್ಲೂ ಊಹಿಸದ ಹಾಗೆ ತಿರುವುಗಳು ಆಗುವಂತೆ ಸರಕಾರ ನಡೆದು ಕೊಳ್ಳುತ್ತಿದೆ. ಮಕ್ಕಳು ಗೊಂದಲಕ್ಕೆ ಈಡಾಗಿದ್ದಾರೆ. ಮೇಲಾಗಿ, ಕಂಗಾಲಾಗಿದ್ದಾರೆ. ಮಜಾ ಏನೆಂದರೆ, ಈಗ ಈ ಕುರಿತಾಗಿ ಯಾರು ಯಾವ ಬಗೆಯಲ್ಲೂ ಸುದ್ದಿಯನ್ನು ಹರಡಿಸಬಹುದು. ವಿದ್ಯಾರ್ಥಿಗಳ ಕಿವಿಗೆ ತುಂಬಬಹುದು. ಕಾಲ ಬದಲಾಗಿದೆಯೇನೋ? ಅಥವಾ ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿಯನ್ನು ರೂಢಿಸುವಲ್ಲಿ ದೊಡ್ದವರು ದಾರಿ ತಪ್ಪಿದ್ದರೇನೋ? ತಪ್ಪಿದ್ದರೆ ಎಲ್ಲಿ? ಯಾವಾಗ? ಉತ್ತರ ಕಂಡುಕೊಳ್ಳುವುದು ಕಷ್ಟ.

ಆದರೆ, ಅತೀ ತುರ್ತಾಗಿ ಉತ್ತರ ಕಂಡುಕೊಳ್ಳಬೇಕಿದೆ. ಸರಿಹೊತ್ತಿನ ಮಕ್ಕಳ ವರ್ತನೆಯನ್ನು ಸೂಕ್ಷ್ಮವಾಗಿ ಗ್ರಹಿಸಿ ನೋಡಿ: ಯಾರ ಮೇಲೂ ಗೌರವವಿಲ್ಲ. ಒಂದು ರೀತಿಯ ಹಠ. ಮೊಂಡುತನ. ತಾತ್ಸಾರ, ಉದಾಸೀನತೆ, ಅಸಡ್ದೆ, ಚುಡಾಯಿಸುವುದು. ಎಲ್ಲರೊಂದಿಗೂ ಅತೀಯಾಗಿ ವಾದವನ್ನು ಮಾಡುವುದು. ಗೆಳೆಯರೊಂದಿಗೆ ಕೂಡಿಕೊಂಡು ದುರ್ವರ್ತನೆಯಲ್ಲಿ ಮಜಾ ಹೊಡೆಯುವುದು. ಅವರಿವರು ಅಂತಿಲ್ಲ, ಟೀಸಿಂಗ್ ಮಾಡುವುದು. ರೇಗಿಸುವುದು. ಕಲಿಕೆ ಯಲ್ಲಿ ಆಸಕ್ತಿಯಿಲ್ಲ. ತರಗತಿಗೆ ಗೈರು ಹಾಜರಾಗುವುದು.

ಹಾಜರಾದರೂ ತರಗತಿಯ ಪಾಠ ಮಾಡುವಾಗ ಕುಚೇಷ್ಟೆ ಅಪಹಾಸ್ಯ ಮಾಡುವುದು. ಶಿಕ್ಷಕರನ್ನು ಅಣಕಿಸುವುದು. ಸಹಪಾಠಿಗಳೊಂದಿಗೆ ಜಗಳ, ನೋಟ್ಸ್
ಕದಿಯುವುದು, ಅಭ್ಯಾಸ ಚೆನ್ನಾಗಿ ಮಾಡದಿದ್ದರೆ ಫೇಲಾಗುವ ಭಯವೇ ಇಲ್ಲದಿರುವುದು, ಎಲ್ಲರನ್ನೂ ಪಾಸು ಮಾಡುತ್ತೇವೆಂಬಂಥ ಹೇಳಿಕೆಗಳು ಹುಟ್ಟಿ ಸುವ ಅಭಯ!, (ಈಗಿನ ಹತ್ತನೆಯ ತರಗತಿಯ ವಿದ್ಯಾರ್ಥಿಗಳು ಎಂಟು ಮತ್ತು ಒಂಬತ್ತನೆಯ ತರಗತಿಯಲ್ಲಿ ನೇರ ಬೋಧನೆಯ ಕಲಿಕೆಯಿಲ್ಲದೆ ಪಾಸಾ ದವರು) ಮಕ್ಕಳು ಏನೇ ಮಾಡಿದರೂ ಏನು ಹೇಳದ ಸ್ಥಿತಿಯನ್ನು ತಲುಪಿದ ತಂದೆತಾಯಿಗಳ ಅತೀ ವ್ಯಾಮೋಹ, ಇಂಥ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಶಾಲೆ, ಶಿಕ್ಷಣ, ಶಿಕ್ಷಕ, ಕಲಿಕೆಯ ಬಗ್ಗೆ ಗಾಂಭೀರ್ಯವನ್ನು ಬೆಳೆಸಬೇಕಾದುದು ಶಿಕ್ಷಣ ನೀತಿಗಳು.

ಕಲಿಕಾ ಚೇತರಿಕೆ ಎಂಬ ಕಲಿಕಾ ಯಜ್ಞ ಕರ್ನಾಟಕದ ಎಲ್ಲ ಮಕ್ಕಳನ್ನು ಮುಟ್ಟುವಂತೆ ಸರಕಾರವೇ ನೀತಿ ಮಾಡಬೇಕಿತ್ತು. ಕಲಿಕಾ ಚೇತರಿಕೆ ಖಾಸಗಿ ಯವರಿಗೆ ಕಡ್ಡಾಯವಲ್ಲ ಎಂದು ಹೇಳಿಕೆ ಕೊಟ್ಟಿದ್ದರೂ ಸರಿ, ಪರೀಕ್ಷೆಯ ಬಗ್ಗೆ ಸರಕಾರದ ನಿಲುವುಗಳೇನು ಎಂಬುದನ್ನು ಹೇಳಬೇಕಿತ್ತು. ಖಾಸಗಿ ಯವರು ಏನು ಮಾಡಬೇಕು ಅಂತ ನಿರ್ದಿಷ್ಟ ಆದೇಶವನ್ನು ನೀಡಬೇಕಿತ್ತು. ಯಾವುದನ್ನೂ ಮಾಡದೇ ಇರುವುದರಿಂದ ಈಗ ಗೊಂದಲವಾಗಿದೆ. ಈ ಗೊಂದಲ ಪುಷ್ಟಿಗೊಂಡು ಬೆಳದದ್ದು ಸರಕಾರ ಈ ವರ್ಷ ಐದು ಮತ್ತು ಎಂಟನೆಯ ತರಗತಿಗೆ ಪಬ್ಲಿಕ್ ಪರೀಕ್ಷೆ ಎಂದು ಅನೌ ಮಾಡಿದ ಅನಂತರದಲ್ಲಿ! ಅದರಲ್ಲೂ ಈ ಅನೌಮೆಂಟ್ ಕೊನೆಯ ಹಂತದಲ್ಲಿ ಅತೀ ವಿಳಂಬವಾಗಿ ಆಗಿದ್ದರಿಂದ!

ಪಬ್ಲಿಕ್ ಪರೀಕ್ಷೆಗೆ ಸಿದ್ಧವಾಗೋದು ಮುಖ್ಯವಲ್ಲ, ಆದರೆ ಕಲಿಕಾ ಚೇತರಿಕೆ ಪಠ್ಯವನ್ನು ಆಧರಿಸಿದ ಪ್ರಶ್ನೆಪತ್ರಿಕೆಯನ್ನು ಸಿದ್ಧಪಡಿಸಲಾಗಿದೆ ಎಂಬುದು ಗೊತ್ತಾದಾಗ ವಿದ್ಯಾರ್ಥಿಗಳಿಗೂ ಪೋಷಕರಿಗೂ ಒಮ್ಮೆಲೇ ಗೊಂದಲ ಶುರುವಾದದ್ದು ಮಾತ್ರ ಸುಳ್ಳಲ್ಲ! ಕೊನೆಯ ಹಂತದಲ್ಲಿ ಕಲಿಕಾ ಚೇತರಿಕೆ ಪಠ್ಯ ವನ್ನು ಓದಿಕೊಳ್ಳಬೇಕಾದ ಅವಸರಕ್ಕೆ ಖಾಸಗಿ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಬೀಳಬೇಕಾಯಿತು.

ಯುದ್ಧಕಾಲೇ ಶಸಾಭ್ಯಾಸ ಎನ್ನುವಂತಾಯ್ತು ಕಲಿಕಾ ಚೇತರಿಕೆಯನ್ನು ಓದದ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಪಾಡು! ಐದು ಮತ್ತು ಎಂಟನೆಯ ತರಗತಿ ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದುಳಿದಿದ್ದಾರೆ ಎಂಬ ಸರಕಾರದ ಹೇಳಿಕೆಯೂ ಉಳಿದ ತರಗತಿಯವರು ಕಲಿಕೆಯಲ್ಲಿ ಮುಂದಿದ್ದಾರೆಂಬ ಅರ್ಥ ಕೊಡುವಂತಿದೆ! ಒಂದರಿಂದ ಎಂಟನೆಯ ತರಗತಿಯವರಗೆ ಕಡ್ಡಾಯವಾಗಿ ಪಾಸು ಮಾಡುವ ಶಿಕ್ಷಣ ನೀತಿಯೇ ಬೋಧನೆಯನ್ನೂ ಕಲಿಕೆಯನ್ನೂ ತರಗತಿಯಲ್ಲಿ ನಿಸ್ಸಾರಗೊಳಿಸಿದೆ. ಕೇವಲ ಅಂಕಿ ಅಂಶಗಳನ್ನು ದಾಖಲಿಸುವ ಮಟ್ಟಿಗೆ ಬೋಧನೆ ಸಾಗಿದೆ. ಏನು ಕಲಿಯದಿದ್ದರೂ ಪಾಸಾಗುತ್ತೇನೆ ಎಂಬ ಮಟ್ಟಿಗೆ ಕಲಿಕೆ ಹುಸಿಯಾಗಿದೆ.

ಒಂಥರಾ ಇದು, ನಾನು ಹೊಡದ ಹಾಗೆ ಮಾಡ್ತೇನೆ, ನೀನು ಅತ್ತ ಹಾಗೆ ಮಾಡು ಎಂಬಂತಿದೆ! ಹಾಗಂತ ಹೊಡೆಯುವುದು ಸತ್ಯ! ಅಳುವುದೂ ಸತ್ಯ! ವಿದ್ಯಾರ್ಥಿಗಳು ಸರಿಯಾಗಿ ಓದದೆ, ಪರೀಕ್ಷೆಯನ್ನು ಬರೆದರೆ ನಿನ್ನನ್ನು ಫೇಲು ಮಾಡುವ ಶಕ್ತಿ ನನಗಿದೆ ಎಂದು ಹೇಳುವ ಶಕ್ತಿಯನ್ನು ಶಿಕ್ಷಕರಿಗೆ ಕೊಟ್ಟರೆ
ವಿದ್ಯಾರ್ಥಿಗಳು ಕಲಿಕೆಯಲ್ಲಿ ಆಸಕ್ತಿ ತೋರುವಂತೆ ಮಾಡಲು ಸಾಧ್ಯವಿದೆ ಎಂಬ ಎಚ್ಚರ ಹುಟ್ಟಬೇಕಿದೆ. ಅಷ್ಟಕ್ಕೂ ಮೊದಲೆಲ್ಲ ಇದ್ದದ್ದು ಹಾಗೆಯೇ ತಾನೆ? ಸರಿಹೊತ್ತಿನ ವಿದ್ಯಾರ್ಥಿಗಳ ಮನಸ್ಥಿತಿ ಮತ್ತು ಪರಿಸ್ಥಿತಿ ಹೀಗಿದೆ. ಇರಲಿ ಬಿಡಿ, ಹೇಳುತ್ತ ಹೋದರೆ ಕಥೆ ದೊಡ್ದದಿದೆ.

ಈ ಹೊತ್ತು ಇದಕ್ಕೆಲ್ಲ ಆಸ್ಪದ ಕೊಡಬಾರದಿತ್ತು. ಯಾಕೆಂದರೆ, ಪರೀಕ್ಷೆಗೆ ಬೇಕಾದ ಓದಿನ ಸಿದ್ಧತೆ ಮಾಡಿಕೊಂಡು, ಪರೀಕ್ಷೆ ಶುರುವಾಗಿ ವಿದ್ಯಾರ್ಥಿಗಳು ನೆಮ್ಮದಿಯಿಂದ ಬರೆಯಬೇಕಾದ ಈ ಹೊತ್ತಲ್ಲಿ ಈ ರಂಪ, ರಾಂಪಾಟ ಬೇಕಿತ್ತಾ? ಏನೇ ಆಗಲಿ, ಆದಷ್ಟೂ ಬೇಗ ಈ ಸಮಸ್ಯೆ ಗೊಂದಲ ಪರಿಹಾರವಾಗಿ
ಸುಸೂತ್ರವಾಗಿ ಆರಂಭಗೊಂಡು ಸುಖಾಂತ್ಯದೊಂದಿಗೆ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವಂತಾಗಲಿ ಎಂದು ಆಶಿಸಿ ಕೋರ್ಟು ತೀರ್ಪಿಗೆ ಕಾಯೋಣ, ತೀರ್ಪಿಗೆ ಬದ್ಧರಾಗೋಣ.

Read E-Paper click here