Sunday, 24th November 2024

Sri Nirmalanand Swamiji Column: ಉಪನಿಷತ್ತುಗಳ ಸುತ್ತಮುತ್ತ ಒಂದು ಕಿರುನೋಟ

ನಿರ್ಮಲನುಡಿ

ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ

ದಶೋಪನಿಷತ್ತುಗಳು ಒಂದೇ ಕಾಲಘಟ್ಟದಲ್ಲಿ ರಚನೆಯಾದುದಲ್ಲ, ಒಬ್ಬನೇ ವ್ಯಕ್ತಿಯಿಂದ ಬರೆಯ ಲ್ಪಟ್ಟವೂ ಅಲ್ಲ. ಇವು ನಾಲ್ಕೂ ವೇದಗಳಲ್ಲಿ ವ್ಯಾಪಿಸಿವೆ. ಉಪನಿಷತ್ತುಗಳು ಗುರು-ಶಿಷ್ಯರ ನಡುವಿನ ಸಂವಾದವಾಗಿದೆ. ಕಿವಿಯಿಂದ ಕೇಳಿಸಿಕೊಂಡು ಮೌಖಿಕವಾಗಿ ಪೀಳಿಗೆಯಿಂದ ಪೀಳಿಗೆಗೆ ಹರಿದುಬಂದ ಇವು ನಂತರದ ಕಾಲದಲ್ಲಿ ಗ್ರಂಥಸ್ಥವಾಯಿತು. ಆದ್ದರಿಂದ ಉಪನಿಷತ್ತುಗಳನ್ನು ‘ಶ್ರುತಿ’ ಎನ್ನುತ್ತಾರೆ.

ಹಿಂದಿನ ಗುರುಕುಲಗಳಲ್ಲಿ ಪರಾವಿದ್ಯೆ ಮತ್ತು ಅಪರಾವಿದ್ಯೆ ಎರಡನ್ನೂ ಕಲಿಸಲಾಗುತ್ತಿತ್ತು. ಅಪರಾವಿದ್ಯೆ ಎಂದರೆ
ಲೌಕಿಕ ವಿದ್ಯೆ, ಜೀವನೋಪಾಯಕ್ಕಾಗಿ ಕಲಿಯಲಾಗುವ ಕೌಶಲ. ಇಹಲೋಕದ ಸುಖ ಸಮೃದ್ಧಿಗಾಗಿ ದೇವಾನು
ದೇವತೆಗಳನ್ನು ಪ್ರಾರ್ಥಿಸುವುದು, ಯಜ್ಞಯಾಗಾದಿಗಳಲ್ಲಿ ತೊಡಗುವುದು ಸಹ ಅಪರಾವಿದ್ಯೆಯೇ. ಪರಾವಿದ್ಯೆಯಾ
ದರೂ ಇಹಲೋಕಕ್ಕೆ ಸಂಬಂಧಿಸಿದ ವಿದ್ಯೆಯಲ್ಲ, ಅಧ್ಯಾತ್ಮ ವಿದ್ಯೆಯನ್ನು ಪರಾವಿದ್ಯೆ ಎಂದು ಕರೆಯುತ್ತಿದ್ದರು.
ಉಪನಿಷತ್ತುಗಳು ಪರಾವಿದ್ಯೆಯಾಗಿದೆ.

ಉಪನಿಷತ್ತುಗಳಿಗೆ ಲೌಕಿಕ ವಿದ್ಯೆ ಮುಖ್ಯವಲ್ಲ, ಅವು ಯಜ್ಞಯಾಗಾದಿಗಳಿಗೆ ವಿಶೇಷ ಮಹತ್ವ ನೀಡುವುದಿಲ್ಲ. ಯಜ್ಞಯಾಗಾದಿಗಳಿಂದ ದೇವತೆಗಳನ್ನು ಸುಪ್ರೀತರನ್ನಾಗಿಸಿ ಸ್ವರ್ಗಲೋಕ ವನ್ನು ಪಡೆಯಬಹುದಾದರೂ ಆ ಸುಖ ಸ್ವರ್ಗಗಳು ಕ್ಷಣ ಭಂಗುರವಾದುದು, ಕೆಲಕಾಲವಾದ ಮೇಲೆ ಸ್ವರ್ಗದಿಂದ ಪುನಃ ಈ ಲೋಕಕ್ಕೆ ಹಿಂದಿರುಗ ಬೇಕಾಗುತ್ತದೆ ಎಂಬುದು ಉಪನಿಷತ್ತಿನ ನಿಲುವಾಗಿತ್ತು.

ಸುಖ ಸ್ವರ್ಗಗಳನ್ನು ಅನುಗ್ರಹಿಸುವ ದೇವಾನುದೇವತೆಗಳು ಸಹ ಆ ಪರಮತತ್ವಕ್ಕೆ ಅಧೀನರಾಗಿ, ಅದಕ್ಕೆ ಭಯ ಭೀತರಾಗಿ ಲೋಕಕಲ್ಯಾಣ ಕಾರ್ಯಗಳಲ್ಲಿ ತೊಡಗುವರು ಎನ್ನುತ್ತದೆ. ಆಚರಣಾ ಪ್ರಧಾನವಾದ ಯಜ್ಞ, ಯಾಗ, ಹವಿಸ್ಸು, ಸುಖಭೋಗಗಳ ಬದಲಿಗೆ ಸಾಧನಾ ಪ್ರಧಾನವಾದ ತಪಸ್ಸು, ಧ್ಯಾನ, ಬ್ರಹ್ಮಚರ್ಯ, ಆತ್ಮಜ್ಞಾನ ಗಳನ್ನು ಬೋಧಿಸಿದ್ದು ಉಪನಿಷತ್ತಿನ ವಿಶೇಷತೆಯಾಗಿದೆ. ನಮ್ಮ ಜನಗಳಿಗೆ ಕರ್ಮ, ಯಜ್ಞ, ತರ್ಕ, ವಾದ, ಸಿದ್ಧಾಂತ ಪ್ರತಿಪಾದನೆಗಳು ನಿರರ್ಥಕವೆಂದು ಕಾಲಾಂತರದಲ್ಲಿ ಮನದಟ್ಟಾಯಿತು ಎನಿಸುತ್ತದೆ.

ತತಲವಾಗಿ ಉಪನಿಷತ್ತುಗಳ ಜನನವಾಯಿತು. ಧರ್ಮಗಳ ಉದಯಕ್ಕೆ ಮನುಷ್ಯನೊಳಗಿನ ಭಯ ಅಥವಾ ಜೀವೇಷಣೆಯೇ ಮೂಲವೆಂದು ಆಲ್ಬರ್ಟ್ ಐನ್‌ಸ್ಟೀನ್ ಹೇಳುತ್ತಾರೆ. ಉಪನಿಷತ್ತುಗಳಾದರೂ ಭಯ, ಜೀವೇಷಣೆ ಗಳನ್ನು ಅತಿಕ್ರಮಿಸಿ ಪರಜ್ಞಾನ ವನ್ನು ಸಿದ್ಧಿಸಿಕೊಂಡು ಧಾರ್ಮಿಕ ಜೀವನ ನಡೆಸಿದ ಪರಮ ಋಷಿಗಳ ನಿರ್ವಚನ ಗಳಾಗಿವೆ. ಉಪನಿಷತ್ತುಗಳು ಭಾರತೀಯರ ಮನಸ್ಸು ಬುದ್ಧಿಗಳು ಪಕ್ವಗೊಂಡ ಸಂಕ್ರಮಣದ ಕಾಲಘಟ್ಟವನ್ನು ಸೂಚಿಸುತ್ತವೆ.

ಸದಲೃ ಎಂಬ ಧಾತುವಿಗೆ ‘ಉಪ’ ಮತ್ತು ‘ನಿ’ ಎಂಬೆರಡು ಉಪಸರ್ಗಗಳು ಸೇರಿ ‘ಉಪನಿಷತ್’ ಎಂದಾಗಿದೆ.
ಉಪನಿಷತ್ ಎಂಬ ಪದಕ್ಕೆ (ಗುರುವಿನ) ‘ಸಮೀಪಕ್ಕೆ ಹೋಗುವುದು’, ‘ಅಜ್ಞಾನವನ್ನು ನಾಶಗೊಳಿಸುವುದು’
ಮುಂತಾದ ಅರ್ಥಗಳಿವೆ. ಎಲ್ಲ ಉಪನಿಷತ್ತುಳೂ ಸಂಸ್ಕೃತದಲ್ಲಿವೆ. ಉಪನಿಷತ್ತುಗಳ ಸಂಖ್ಯೆಯಲ್ಲಿ ವಿದ್ವಾಂಸರ ನಡುವೆ ಒಮ್ಮತವಿಲ್ಲ.

ಕ್ರಿಸ್ತಪೂರ್ವ ಕಾಲದಿಂದ ಹಿಡಿದು 15ನೆಯ ಶತಮಾನದವರೆಗೆ ನೂರೆಂಟು ಉಪನಿಷತ್ತುಗಳನ್ನು ರಚಿಸಲಾಗಿದೆ. ಅದರಲ್ಲಿ ವೈದಿಕ-ಅವೈದಿಕ, ಪ್ರಧಾನ-ಗೌಣ ಹೀಗೆ ನಾನಾ ವಿಂಗಡಣೆಗಳಿವೆ. ಆಚಾರ್ಯತ್ರಯರಿಂದ ವ್ಯಾಖ್ಯಾನ ಗೊಂಡ 10 ಉಪನಿಷತ್ತುಗಳನ್ನು ಪ್ರಧಾನ ಉಪನಿಷತ್ತು ಎನ್ನುತ್ತಾರೆ. ಈ ದಶೋಪನಿಷತ್ತುಗಳು ಒಂದೇ ಕಾಲಘಟ್ಟದಲ್ಲಿ ರಚನೆಯಾದುದಲ್ಲ, ಒಬ್ಬನೇ ವ್ಯಕ್ತಿಯಿಂದ ಬರೆಯಲ್ಪಟ್ಟವೂ ಅಲ್ಲ. ಇವು ನಾಲ್ಕೂ ವೇದಗಳಲ್ಲಿ ವ್ಯಾಪಿಸಿವೆ.

ಉಪನಿಷತ್ತುಗಳು ಗುರು-ಶಿಷ್ಯರ ನಡುವಿನ ಸಂವಾದವಾಗಿದೆ. ಕಿವಿಯಿಂದ ಕೇಳಿಸಿಕೊಂಡು ಮೌಖಿಕವಾಗಿ ಪೀಳಿಗೆ ಯಿಂದ ಪೀಳಿಗೆಗೆ ಹರಿದುಬಂದ ಇವು ನಂತರದ ಕಾಲದಲ್ಲಿ ಗ್ರಂಥಸ್ಥವಾಯಿತು. ಆದ್ದರಿಂದ ಉಪನಿಷತ್ತುಗಳನ್ನು ‘ಶ್ರುತಿ’ (ಕಿವಿಯಿಂದ ಕೇಳಿದುದು) ಎಂದು ಕರೆಯುತ್ತಾರೆ. ಉಪನಿಷತ್ತುಗಳು ಸಂವಾದ ರೂಪಿಯಾದರೂ ಕೆಲವೆಡೆ ಸೃಷ್ಟಿಯ ಅಗಾಧತೆ, ನಿಗೂಢತೆಗಳಿಗೆ ನಿಬ್ಬೆರಗಾದ ಭಾವೋನ್ಮತ್ತ ಕಾವ್ಯಾತ್ಮಕ ಅಭಿವ್ಯಕ್ತಿಗಳು ಕಾಣಸಿಗುತ್ತವೆ (ಉದಾಹರಣೆಗೆ, ಕಠ, ಮುಂಡಕ, ತೈತ್ತಿರೀಯ, ಬೃಹದಾರಣ್ಯಕಗಳು).

ನಮ್ಮ ದಾರ್ಶನಿಕ ಕವಿ ಕುವೆಂಪು ಅವರ ಕಾವ್ಯದಲ್ಲಿ ಉಪನಿಷತ್ತುಗಳ ಈ ಭಾವೋನ್ಮತ್ತತೆಯ ಪ್ರಭಾವ ದಟ್ಟವಾಗಿ ಕಾಣಿಸುತ್ತದೆ. ಉಪನಿಷತ್ತುಗಳಿಗೆ ವೇದಾಂತವೆಂಬ ಇನ್ನೊಂದು ಹೆಸರೂ ಇದೆ. ವೇದಾಂತವೆಂದರೆ ಅದು ವೇದಗಳ ಕಡೆಯ ಭಾಗ ಎಂದಷ್ಟೇ ಅರ್ಥವಲ್ಲ. ವೇದಗಳಿಗೆ ಅಂತಿಮ ಸ್ಪರ್ಶ ನೀಡಿದ, ವೇದಗಳನ್ನು ಕೃತಾರ್ಥಗೊಳಿಸಿದ ಕೃತಿಗಳು ಎಂಬರ್ಥದಲ್ಲೂ ವೇದಾಂತ ಎಂಬ ಹೆಸರನ್ನು ಪರಿಭಾವಿಸಬಹುದು.

ಇದಕ್ಕೆ ಆದಿಶಂಕರರ ಈ ಮಾತುಗಳೇ ಪ್ರಮಾಣವಾಗಿದೆ: ಈಶಾವಾಸ್ಯ ಉಪನಿಷತ್ತಿನ ಮಂತ್ರಗಳನ್ನು ವೇದೋಕ್ತ ವಾದ ಕರ್ಮಕಾಂಡದ ಆಚರಣೆಗಳಲ್ಲಿ ಅದೇಕೆ ಬಳಸುವುದಿಲ್ಲ? ಏಕೆಂದರೆ ಅದು ಆತ್ಮನ ನಿಜ ಸ್ವರೂಪ
ವನ್ನು ತಿಳಿಸಿಕೊಡುವ ಉಪನಿಷತ್ತಾಗಿದೆ, ಆತ್ಮ ಎಂದಿಗೂ ಕರ್ಮಕ್ಕೆ ಅಂಗವಲ್ಲದ ಕಾರಣ ಮತ್ತು ಆತ್ಮವಿಚಾರ
ಕರ್ಮಕಾಂಡಕ್ಕೆ ವಿರುದ್ಧವಾಗಿರುವುದರಿಂದ ಯಜ್ಞಾದಿ ಕರ್ಮಾಚರಣೆಗಳಲ್ಲಿ ಈ ಉಪನಿಷತ್ತಿನ ಮಂತ್ರಗಳನ್ನು
ಬಳಸುವುದಿಲ್ಲ, ಏನನ್ನಾದರೂ ಪಡೆಯಲು, ಭೋಗಿಸಲು, ಶುದ್ಧೀಕರಿಸಲು ಕರ್ಮ ಮಾಡಬೇಕು.

ಆದರೆ ಆತ್ಮ ಪಡೆವ ವಸ್ತುವಲ್ಲ, ಭೋಗಿಸುವ ವಸ್ತುವಲ್ಲ, ಶುದ್ಧೀಕರಿಸುವ ವಸ್ತುವಲ್ಲ. ಅಂದ ಮೇಲೆ ಯಜ್ಞ ಯಾಗಾದಿಗಳಿಗೆ ಇಂಥ ಉಪನಿಷತ್ತುಗಳಿಂದ ಪ್ರಯೋಜನವಿಲ್ಲ (ಶ್ರೀ ಶಾಂಕರ ಭಾಷ್ಯ, ಈಶಾವಾಸ್ಯೋಪನಿಷತ್, ಭಾಷ್ಯಾವತರಣಿಕೆ). ಸೃಷ್ಟಿ ನಿರ್ಮಾಣ, ಪ್ರeಯ ಉದಯ, ಪಂಚಭೂತ ಗಳು, ನಾಮರೂಪಗಳು, ಸೃಷ್ಟಿಯಲ್ಲಿ ಮನುಷ್ಯರ ಅಲ್ಪತ್ವದ ವಿವೇಚನೆ, ಸೃಷ್ಟಿಯ ಏಕತೆಯ ವಿಷಯದಲ್ಲಿ ಲೋಲುಪತೆಗೆ ವಶರಾದ ಮನುಷ್ಯರ ಅಜ್ಞಾನ, ಸ್ವರ್ಗದ ಕ್ಷಣಭಂಗುರತೆ, ಆತ್ಮದ ಶಾಶ್ವತತೆ ಮತ್ತು ಪುನರ್ಜನ್ಮ, ಆತ್ಯಂತಿಕ ಶಾಂತಿ- ಇವು ಸ್ಥೂಲವಾಗಿ ಉಪನಿಷತ್ತುಗಳಲ್ಲಿ ಚರ್ಚಿಸಲಾದ ವಿಷಯಗಳಾಗಿವೆ. ‘ಸರ್ವಂ ಖಲ್ವಿದಂ ಬ್ರಹ್ಮ’, ‘ತತ್ವಮಸಿ’, ‘ಅಸತೋ ಮಾ ಸದ್ಗಮಯ..’, ‘ಸತ್ಯಂ eನಂ ಅನಂತಂ ಬ್ರಹ್ಮ’, ‘ಶ್ರೇಯಸ್ ಪ್ರೇಯಸ್’, ‘ಶೃಣ್ವಂತು ವಿಶ್ವೇ ಅಮೃತಸ್ಯ ಪುತ್ರಾಃ’, ಇವೇ ಮುಂತಾದ ಮಹಾವಾಕ್ಯಗಳು ಭಾರತೀಯ ವಿವೇಕದ ಜೀವಾಳವಾಗಿವೆ.

ಕೆಲವು ವಿದ್ವಾಂಸರು ಉಪನಿಷತ್ತುಗಳು ಲೋಕದೂರವಾದುದು, ಪ್ರಪಂಚಕ್ಕೆ ಬೆನ್ನು ತೋರಿಸುವಂತಹುದು,
ನಿರಾಶಾವಾದವನ್ನು ಪ್ರತಿಪಾದಿಸುವಂತಹುದು, ಅದರಲ್ಲಿ ಸದೃಢವಾದ, ತರ್ಕಬದ್ಧವಾದ ಒಂದು ಸಿದ್ಧಾಂತವೇ ಇಲ್ಲ ಎಂದು ಉಪನಿಷತ್ತುಗಳನ್ನು ವಿರೋಧಿಸುವುದುಂಟು. ಮತ್ತೆ ಕೆಲವರು ಉಪನಿಷತ್ತುಗಳು ಬೌದ್ಧಧರ್ಮದಿಂದ
ಪ್ರಭಾವಿತವಾದ ರಚನೆಗಳಾಗಿವೆ ಎಂದು ವಾದಿಸುತ್ತಾರೆ.

ನಮ್ಮ ವೇದಾಂತವು ಭಗವಾನ್ ಬುದ್ಧನ ವಿವೇಕದಿಂದ ಪ್ರಭಾವಿತವಾಗಿದೆ ಎಂದರೆ ಅದು ಹೆಮ್ಮೆ ಪಡಬೇಕಾದ
ಸಂಗತಿಯಾಗಿದೆ. ಅದರಿಂದ ಉಪನಿಷತ್ತಿನ ಬೆಲೆ ಹೆಚ್ಚುತ್ತದೆಯೇ ವಿನಾ ಅದು ತಲೆಬಾಗಿಸಬೇಕಾದ, ಮರೆಮಾಚ
ಬೇಕಾದ ವಿಚಾರವೇನಲ್ಲ. ಆದರೆ ಉಪನಿಷತ್ತು ಪ್ರಪಂಚ ವಿರೋಧಿ ಎಂಬ ಮಾತನ್ನಂತೂ ಒಪ್ಪಲಾಗದು. ವೇದಕಾಲದಲ್ಲಿ ಭಾರತ ದೇಶವು ಎಲ್ಲ ದೃಷ್ಟಿಯಿಂದಲೂ ಸಮೃದ್ಧವಾಗಿತ್ತು, ಶ್ರೀಮಂತವಾಗಿತ್ತು.

ಸಮಾಜ ಯಜ್ಞಯಾಗಾದಿ ಬಡಿವಾರ ಗಳಲ್ಲಿ, ಮಾಂಸ ಸೇವನೆ ಮತ್ತು ಸೋಮರಸಪಾನದ ಸುಖಲೋಲುಪತೆಗಳಲ್ಲಿ ಮುಳುಗಿತ್ತು. ಆ ಕಾಲಘಟ್ಟಕ್ಕೆ ಹಣದಿಂದ, ಐಹಿಕ ಸುಖದಿಂದ ಮನುಷ್ಯ ಬದುಕು ಸಾರ್ಥಕವಾಗುವುದಿಲ್ಲ ಎಂಬ ವಿವೇಕದ ಅಗತ್ಯವಿತ್ತು. ತತಲವಾಗಿ ಉಪನಿಷತ್ತುಗಳ ಜನನವಾಯಿತು. ಉಪನಿಷತ್ತುಗಳನ್ನು ವಿರೋಧಿಸುವವರ ವಿಚಾರವನ್ನೇ ಮನ್ನಿಸುವುದಾದರೆ ನಾಗರಿಕತೆಯ ಹುಚ್ಚು ಹಿಡಿಸಿಕೊಂಡಿರುವ ಇಂದಿನ ಕಾಲಘಟ್ಟದಲ್ಲಿ ಸರಳ ಜೀವನದ, ಗ್ರಾಮ ಸ್ವರಾಜ್ಯದ ಕನಸು ಕಂಡ ಮಹಾತ್ಮ ಗಾಂಧಿಯನ್ನೂ ಜೀವನ ವಿರೋಧಿ ಎಂದು ಕರೆಯ ಬೇಕಾಗುತ್ತದೆ. ವಿಷಯಾಸಕ್ತಿಯಲ್ಲಿ ಮುಳುಗಿದ ಸಮಾಜಕ್ಕೆ ಅನಾಸಕ್ತಿ ಯೋಗ ಎಂದಿಗೂ ಪಥ್ಯವಾಗಿದೆ.

ಕರಣೇಂದ್ರಿಯ ಗೋಚರವಾದ ಜಗತ್ತೇ ಪರಮಸತ್ಯವೆಂದು ನಂಬಿದ್ದ ಕಾಲಘಟ್ಟದಲ್ಲಿ ಉಪನಿಷತ್ತಿನ ದಾರ್ಶನಿ
ಕರು ಇಂದ್ರಿಯಾತೀತ ಸತ್ಯವನ್ನು ಸಾಕ್ಷಾತ್ಕರಿಸಿಕೊಂಡಿದ್ದರು. ಆ ಪರಮಸತ್ಯವನ್ನು ಕರಣೇಂದ್ರಿಯ ಜಗತ್ತಿನಲ್ಲಿ
ಸೃಷ್ಟಿಯಾದ ಪದಗಳಿಂದ ವರ್ಣಿಸಲು ಸಾಧ್ಯವಿಲ್ಲ ಎಂಬ ಇಂಗಿತವನ್ನು ವ್ಯಕ್ತಪಡಿಸಲು ‘ನೇತಿ’, ‘ನೇತಿ’ ಎಂದು
ಉದ್ಗರಿಸಿದರು. ಇಂದ್ರಿಯ, ಮನಸ್ಸು, ಬುದ್ಧಿ, ಅಹಂಕಾರಗಳಿಂದ ಅದನ್ನು ಸ್ಪರ್ಶಿಸಲಾಗದು ಎಂದರೇ ವಿನಾ
ಇಂದ್ರಿಯ, ಮನಸ್ಸು, ಬುದ್ಧಿ ಇತ್ಯಾದಿಗಳ ಶಕ್ತಿ ಸಾಮರ್ಥ್ಯ ಗಳನ್ನು ಮತ್ತು ಉಪಯೋಗಗಳನ್ನು ನಿರಾಕರಿಸಲಿಲ್ಲ.

ಕುರ್ವನ್ನೇವೇಹ ಕರ್ಮಾಣಿ ಜಿಜೀವಿಷೇಚ್ಛತಂ ಸಮಾಃ | ಏವಂ ತ್ವಯಿ ನಾನ್ಯಥೇತೋ ಖಸ್ತಿ ನ ಕರ್ಮ ಲಿಪ್ಯತೇ ನರೇ
|| (ಈಶ 2) (ಈ ಲೋಕದಲ್ಲಿ ಕರ್ಮಗಳನ್ನು ಮಾಡುತ್ತಲೇ ನೂರು ವರ್ಷ ಬದುಕಲು ಆಶಿಸಬೇಕು. ಇದುವೇ ಬದುಕುವ ಮಾರ್ಗವಾಗಿದೆ. ಇದಲ್ಲದೆ ಬೇರೆ ಯಾವ ಮಾರ್ಗವೂ ಇಲ್ಲ. ಹೀಗೆ ಬಾಳುವವರಿಗೆ ಕರ್ಮಫಲ ಅಂಟುವು ದಿಲ್ಲ) ಎಂದು ಬೋಽಸುವ ಉಪನಿಷತ್ತನ್ನು ಯಾರಾದರೂ ಜೀವನ ವಿರೋಧಿ ಎಂದು ನಿರ್ಣಯಿಸ ಬಹುದೇ?

ಉಪನಿಷತ್ತು ತರ್ಕಬದ್ಧವಾದ ಒಂದು ಸಿದ್ಧಾಂತವನ್ನು ಮಂಡಿಸುವುದಿಲ್ಲ ಎಂಬ ಆಕ್ಷೇಪಣೆ ಸ್ವಲ್ಪಮಟ್ಟಿಗೆ ನಿಜ.
ಏಕೆಂದರೆ ಸಿದ್ಧಾಂತ ಮಂಡನೆ ಉಪನಿಷತ್ತುಗಳ ಉದ್ದೇಶವೇ ಆಗಿರಲಿಲ್ಲ. ಎಲ್ಲ ಸಿದ್ಧಾಂತಗಳಿಗೂ ಅನುಭಾವವೇ
ಅಡಿಗಿದೆ. ಆ ಅನುಭಾವವನ್ನು ನಿರ್ವಚಿಸುವ ಉಪನಿಷತ್ತು ಸಿದ್ಧಾಂತ, ಪ್ರಮೇಯಗಳನ್ನು ಪ್ರತಿಪಾದಿಸುವ ಬೌದ್ಧಿಕ ಗೊಡವೆಯನ್ನು ಅನ್ಯರಿಗೆ ಬಿಟ್ಟುಕೊಟ್ಟಿದೆ.

(ಮುಂದುವರಿಯುವುದು)
(ಲೇಖಕರು ಶ್ರೀ ಆದಿಚುಂಚನಗಿರಿ
ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರು)

ಇದನ್ನೂ ಓದಿ: Vishweshwar Bhat Column: ಕೊರಿಯನ್‌ ಮನೆಯಲ್ಲಿ ಕಂಡಿದ್ದು