Thursday, 12th December 2024

ಹಾಸ್ಯೋಪನಿಷತ್ತು ರಾಜ ಹಾಸ್ಯದ ಉದಾಹರಣೆ

ಪ್ರಾಣೇಶ್ ಪ್ರಪಂಚ

ಗಂಗಾವತಿ ಪ್ರಾಣೇಶ್

ಕೆ.ಸತ್ಯನಾರಾಯಣರಾವ್ ಎಂದು ಒಬ್ಬ ಹಾಸ್ಯ ಸಾಹಿತಿಗಳಿದ್ದಾರೆಂದರೆ ಬಹಳ ಜನರಿಗೆ ತಕ್ಷಣಕ್ಕೆ ತಿಳಿಯುವುದಿಲ್ಲ. ಆದರೆ ‘ಗೌರಿಸುತ’ ಎಂಬ ಅಂಕಿತನಾಮ ಎಲ್ಲರಿಗೂ ಚಿರಪರಿಚಿತ. ಇವರು ’ಹಾಸ್ಯೋ ಪನಿಷತ್ತು’ ಎಂಬ ಅಪರೂಪದ ಪುಸ್ತಕ ಬರೆದಿದ್ದಾರೆ.

ಇದು ಉದ್ಯೋಗಸ್ಥರ ಆಪ್ತಮಿತ್ರ ಹಾಸ್ಯಪ್ರeಯ ಕೃತಿ ಎನಿಸಿಕೊಂಡಿದೆ. ಈ ಪುಸ್ತಕದಲ್ಲಿ ಹಾಸ್ಯ, ಹಾಸ್ಯಗಾರ, ಹಾಸ್ಯ ಪ್ರಜ್ಞೆಗಳ ‘ಗಂಭೀರ ಚಿಂತನೆ’ಗಳಿವೆ. ಅನೇಕ ಹಿರಿಯರ ಹೇಳಿಕೆಗಳಿವೆ. ಹಾಸ್ಯದ ಬಗೆಗಿನ ತಾತ್ತ್ವಿಕ ಚಿಂತನೆಗಳಿವೆ. ಉದಾಹರಣೆಗೆ ‘ತನ್ನನ್ನು ತಾನೇ ಹಾಸ್ಯ ಮಾಡಿಕೊಳ್ಳುವ ಯಾವ ವ್ಯಕ್ತಿಗೂ ವೈದ್ಯರಿಂದ ಚಿಕಿತ್ಸೆ ಬೇಕಿಲ್ಲ’ ಎಂಬ ಮಾತನ್ನು ಒಬ್ಬ ಮನಃಶಾಸಜ್ಞ ಹೇಳಿದ್ದಾರೆ. ಈ ಗೌರಿಸುತರ ಹಾಸ್ಯೋಪನಿಷತ್ತನ್ನು ಓದುವಾಗ ಅದರಲ್ಲಿ ಡೆಮಾಸ್ತನಿಸ್ ಎಂಬ ಪ್ರಾಚೀನ ಗ್ರೀಸ್ ದೇಶದ ಒಬ್ಬ ಪ್ರಸಿದ್ಧ ಚಿಂತನಶೀಲನ ಹಾಗೂ ಆತನ ಒಳತೋಟಿಯ ಒಂದು ಕೊರಗು ದಾಖಲಾಗಿದೆ. (ಎಷ್ಟೋ ಸಲ ನಾನೇ ಅನುಭಸುತ್ತ ಬಂದಿರುವ ಕೊರಗೂ ಹೌದು) ಅದನ್ನು ಗೌರಿಸುತರು ಈ ಪುಸ್ತಕದಲ್ಲಿ ಬರೆದಿದ್ದಾರೆ.

ಅದೆಂದರೆ, ಅಥೆನ್ಸಿನ ಜನರೆಲ್ಲ ಡೆಮಾಸ್ತನಿಸ್ ಮಾತು, ಕಥೆ, ನಗು ಕೇಳಲು ಇಷ್ಟಪಡುತ್ತಿದ್ದರಾಗಲೀ, ಆತನ ತತ್ತ್ವಜ್ಞಾನ ಕೇಳುತ್ತಿರಲಿಲ್ಲ. ಹೊತ್ತು ಕಳೆಯುವ, ನಕ್ಕು ಮರೆತುಬಿಡುವ ವಿಷಯವನ್ನೊಳಗೊಂಡ ಕಥೆಗಳನ್ನೇ ಹೇಳಲು ಪೀಡಿಸುತ್ತಿದ್ದರು. ಅವನಿಗೆ ಅನೇಕ ಸಾರಿ ಇದರಿಂದ ಬೇಸರವಾಗುತ್ತಲೇ ಇತ್ತು. ಇವರಿಗೆ ಜೀವನದ ಗುರಿ, ಮೌಲ್ಯಗಳೇ ಬೇಕಿಲ್ಲವಲ್ಲ ಎಂದು ಬೇಜಾರಾಗಿ ಆ ಮಹಾವಾಗ್ಮಿಯೂ, ಚಿಂತನಶೀಲನೂ ಆದ ಆತನಿಗೆ ತನ್ನ ತತ್ತ್ವಜ್ಞಾನಕ್ಕೆ ಬೆಲೆಯೇ ಇಲ್ಲವಲ್ಲ ಎನಿಸುತ್ತಿತ್ತು. ಒಮ್ಮೆ ಮಾಮೂಲಿನಂತೆ ಎಲ್ಲರೂ ಅವನನ್ನು ಕಥೆಗಾಗಿ, ಹಾಸ್ಯಕ್ಕಾಗಿ ಪೀಡಿಸಿದಾಗ ಅವನು ಈ ಕೆಳಗಿನ ಕಥೆ ಹೇಳಿದ.

ಬೇಸಿಗೆ ಕಾಲದ ಒಂದು ದಿನ, ಒಬ್ಬ ತರುಣ ಪಕ್ಕದ ಹಳ್ಳಿಗೆ ಹೋಗಿ ಬರಲು ಒಂದು ಕತ್ತೆಯನ್ನು ಬಾಡಿಗೆಗೆ ಗೊತ್ತು ಮಾಡಿಕೊಂಡ, ಮಧ್ಯಾಹ್ನವಾದಾಗ, ಅವನು ಕತ್ತೆಯನ್ನು ನಿಲ್ಲಿಸಿ, ಅದರ ನೆರಳಲ್ಲಿ ಕುಳಿತು ದಣಿವಾರಿಸಿ ಕೊಳ್ಳುತ್ತಿದ್ದ. ಆಗ ಆ ಕತ್ತೆಯ ಮಾಲಿಕ ಅಲ್ಲಿಗೆ ಧಾವಿಸಿ ಬಂದು, ಆ ತರುಣನನ್ನು ಗದರಿಸಿದ. ನಾನು ನಿನಗೆ ಕತ್ತೆಯನ್ನು ಮಾರಿದ್ದೇನೆಯೇ ಹೊರತು, ಅದರ ನೆರಳನ್ನಲ್ಲ. ಆ ನೆರಳಿನಲ್ಲಿ ಕುಳಿತುಕೊಳ್ಳುವುದು ನನ್ನ ಹಕ್ಕು ಎಂದ. ಆಗ ಆ ತರುಣ ನಾನು ಆ ಕತ್ತೆಯನ್ನು ಬಾಡಿಗೆಗೆ ಪಡೆದಿರುವುದರಿಂದ ಅದರ ನೆರಳೂ ನನ್ನದೇ ಹಕ್ಕು. ಅದನ್ನು ನೀನು ಕಸಿದುಕೊಳ್ಳುವುದು ಮೋಸ ಮತ್ತು ವಂಚನೆ ಎಂದು ಪ್ರತಿವಾದ ಹೂಡಿದಾಗ ಇಬ್ಬರಿಗೂ ವಾದ-ವಿವಾದ ಗಂಟೆಗಟ್ಟಲೇ ನಡೆತು. ಬಗೆ ಹರಿಯಲೇಇಲ್ಲ. ಇಲ್ಲಿಗೆ ಕಥೆ ಮುಗಿಯಿತು ಎಂದು ಡೆಮಾಸ್ತನಿಸ್ ಕಥೆ ಮುಗಿಸಿ ಎದ್ದು ಹೊರಟೇ ಬಿಟ್ಟ.

ಸೇರಿದ್ದ ಜನ ಮುಂದೇನಾಯಿತು, ಮುಂದೇನಾಯಿತು, ನೆರಳು ಯಾರಿಗೆ ಸೇರಿದ್ದು ಹೇಳಿ ಹೋಗು ಎಂದು ದುಂಬಾಲು ಬಿದ್ದರು. ಡೆಮಾಸ್ತನಿಸ್ ಹೇಳಿದ-ಮೂರ್ಖರೇ, ಆ ಕತ್ತೆ, ಅದರ ನೆರಳು ಯಾರಿಗೆ ಸೇರಿದರೇನು? ನಿಮಗಂತೂ ಅದರಿಂದ ಯಾವ ಲಾಭವಿಲ್ಲ ಅಲ್ಲವೇ, ಆದರೂ ಅದನ್ನು ತಿಳಿದುಕೊಳ್ಳಲು ದುಂಬಾಲು ಬಿದ್ದಿರುವಿರಿ. ನಾನು ನನ್ನ ಹಾಸ್ಯ, ಕಥೆ, ಸಂದೇಶಗಳ ಮುಖಾಂತರ ನಿಮ್ಮ ಬಾಳಿನ ಗುರಿ, ಅದನ್ನು ಸಾಧಿಸುವ ಬಗೆ ಇತ್ಯಾದಿಗಳನ್ನು ಹೇಳು ತ್ತಿದ್ದರೂ, ನೀವದನ್ನು ಯೋಚಿಸದೇ ಬರೀ ನಗಲು ಬರುತ್ತೀರಿ. ಹಾಸ್ಯದ ಏಣಿ ಹಿಡಿದು ಸ್ವರ್ಗಕ್ಕೇರುವ ಇಚ್ಛೆ ಯಾರಿಗೂ ಇಲ್ಲ ಎಂದು ಮುಂದಿನ ಊರಿಗೆ ಸಾಗಿದ. ಡೆಮಾಸ್ತನಿಸನ ಪರಿಸ್ಥಿತಿಯು ನಮ್ಮಂತಹ ಹಾಸ್ಯ ಮಾತುಗಾರರ, ಪುರಾಣ, ಪುಣ್ಯಕಥೆ, ಹರಿಕಥೆ, ಉಪನ್ಯಾಸಗಳನ್ನು ಹೇಳುವ ಸಂತ, ಶರಣ, ಸ್ವಾಮೀಜಿಗಳ ಅಳಲೂ ಹೌದು ಎನಿಸುತ್ತದೆ.

ಕೆಲವರು ಇರುತ್ತಾರೆ, ಇದ್ದಾರೆ ಕೂಡ. ಇವರದು ಒಂದೇ ಪ್ರಶ್ನೆ-‘ಯಾಕೆ ನಗಬೇಕ್ರಿ’ ಎನ್ನುವುದೇ ಆಗಿದೆ. ಡೇಡ್ ಎಂಬ ವ್ಯಕ್ತಿ ತನ್ನ ಎಂಬತ್ತನೇಯ ವರ್ಷದಲ್ಲಿ ಮೃತನಾದ; ಸ್ವರ್ಗದ ಬಾಗಿಲಿನ ಬಳಿ ತಲುಪಿದ. ಒಳಗೆ ಹೋಗಲು ಪ್ರಯತ್ನಿಸಿದ, ಬಾಗಿಲು ತೆರೆದುಕೊಳ್ಳಲೇ ಇಲ್ಲ. ಆಗ ದೇವಧೂತ ಪ್ರವೇಶಿಸಿ ಕೆಲ ಪ್ರಶ್ನೆ ಗಳನ್ನು ಕೇಳಿದ.

ಧೂತ: ನೀನು ಯಾರನ್ನಾದರೂ ಸೀಯನ್ನು ಮನಸಾರೆ ಪ್ರೀತಿಸಿದ್ದೆಯಾ?

ಡೇಡ್: ಇಲ್ಲ, ಯಾರನ್ನೂ ಪ್ರೀತಿಸಲಿಲ್ಲ, ನನಗೆ ಬೇಕೂ ಇರಲಿಲ್ಲ.
ಧೂತ: ನೀನು ಎಂದಾದರೂ ನಿನ್ನ ಮಿತ್ರರ ಬಗ್ಗೆ ಚಿಂತಿಸಿದ್ದೆಯಾ?
ಡೇಡ್: ಇಲ್ಲ, ನಾನು ಯಾವ ಮಿತ್ರರ ಬಗ್ಗೆಯೂ ಚಿಂತಿಸುವ ಗೊಡವೆಗೆ ಹೋಗಲೇ ಇಲ್ಲ.
ಧೂತ: ನೀನು ಯಾವುದಾದರೂ ಪ್ರಾಣಿಯನ್ನು ಮುದ್ದಿಗಾಗಿ ಸಾಕಿದ್ದೆಯಾ?
ಡೇಡ್: ನೋ.. ನೋ.. ಪ್ರಾಣಿಗಳನ್ನು ಪ್ರೀತಿಸೋದೆ? ಛೀ..
ಧೂತ: ನೀನು ಯಾರೊಡನೆಯಾದರೂ ನಕ್ಕು ನಲಿದಿದ್ದಿಯಾ? ನಗಿಸಿದ್ದಿಯಾ?
ಡೇಡ್: ನೋ ನೋ ನಾನು ನಗುವನ್ನು, ನಗಿಸುವವರನ್ನು ದೂರಟ್ಟಿದ್ದೇನೆ.
ಧೂತ: ಹಾಗಾದರೆ ನೀ ಬರಲು ಇಷ್ಟೇಕೆ ತಡಮಾಡಿದೆ? ನೀನು ಸತ್ತು ಎಷ್ಟೋ ಯುಗಗಳಾಗಿವೆ ಎಂದನಂತೆ.

ಹೀಗೆ ಇದರಲ್ಲಿ ಅತಿಶಯೋಕ್ತಿ ಎನ್ನುವಂತಹ ಹಾಸ್ಯಗಳಿವೆ. ಇವುಗಳನ್ನು ಕೇಳಿದಾಗ, ಓದಿದಾಗ, ಯಾರಾದರೂ ಹೇಳಿದಾಗ ಒರೆಗೆ ಹಚ್ಚುವುದಾಗಲೀ, ಸಾಧ್ಯವೇ ಇಲ್ಲ ಎನ್ನುವುದಾಗಲೀ ಮಾಡಬಾರದು. ಮಾಡಿ ಹೇಳಿದ ವ್ಯಕ್ತಿಯನ್ನು ಹೀಯಾಳಿಸಬಾರದು. ಕೆಲವು ಮುಸುಂಡಿಗಳಿರುತ್ತವೆ. ಅವಕ್ಕೆ ಅತಿಶಯೋಕ್ತಿ, ಅಪೂರ್ವ ಕಲ್ಪನೆ, ಅದ್ಭುತ ಊಹೆ ಎಂದು ಎನಿಸುವುದೇ ಇಲ್ಲ. ಇಂಥವು ಇರಲು ಸಾಧ್ಯವೇ ಇಲ್ಲ, ಹೇಳ್ತಿದಿ, ಕೇಳ್ತಿವಿ, ಕೇಳ್ತಿವಿ ಅಂತ ಅತೀ ಹೇಳಬಾರದು ಎಂದೇ ಮುನಿಸಿ ಕೊಳ್ಳುತ್ತವೆ. ಇಂಥವು ಕ್ಲಾಸ್ ಫ್ಯಾಮಿಲಿ ಮಕ್ಕಳು, ಗೆಳೆಯರಿಲ್ಲದ ಗೂಬೆಗಳು, ಪ್ರಪಂಚ ಕಾಣದ ಪಾಪುಗಳು ಅಷ್ಟೇ ಎಂದು ಕೈ ಮುಗಿಯಬೇಕು, ದೂರವಿಡ ಬೇಕು.

ಅಪರೂಪದ ಕಲ್ಪನೆ ಜೋಕುಗಳಿವು. ಒಬ್ಬ ಕೂದಲು ಬೆಳೆಸುವ ತೈಲ ಮಾರುತ್ತಿದ್ದ. ಇದನ್ನು ಕೈಯಲ್ಲಿ ಹಾಕಿಕೊಂಡು ತಲೆಗೆ ಹಚ್ಚಿಕೊಳ್ಳಬೇಡಿ, ಏಕೆಂದರೆ ಕೈ ಯಲ್ಲೂ ಕೂದಲು ಬರುತ್ತವೆ ಎನ್ನುತ್ತಿದ್ದ. ಸುಳ್ಳು ಹೇಳುವುದಿಲ್ಲ, ಬೇಕಾದರೆ ಪರೀಕ್ಷಿಸಿರಿ, ಕುಂಬಳಕಾಯಿ ಮೇಲೂ ಕೂದಲು ಬರುವಂಥ ಔಷಧಿಯಿದು ಎನ್ನುತ್ತಿದ್ದ ನಂತೆ; ಇದಕ್ಕೆ ಬಿದ್ದು ಬಿದ್ದು ನಗಬೇಕು ಅಷ್ಟೆ. ಅವನೊಂದಿಗೆ ವಾದಕ್ಕೆ ಇಳಿಯಬಾರದು.

ಅನೇಕರಿಗೆ ಉತ್ಪ್ರೇಕ್ಷೆ, ಹೀಗಾಗುತ್ತಿದ್ದರೆ ಹೇಗೆ? ಎಂಬ ಕಲ್ಪನಾ ವಿಲಾಸದ ಹಾಸ್ಯಗಳು ಸರಿಬರುವುದಿಲ್ಲ, ಅಂಥವರು ಏನನ್ನೂ ಎಂಜಾಯ್ ಮಾಡುವುದಿಲ್ಲ. ‘ಇಟ್ ಇಸ್ ಹೈಲಿ ಇಂಪಾಸಿಬಲ್, ಹೀಗೆಲ್ಲ ಹುಚ್ಚುಚ್ಚು ಹೇಳಬಾರದು’ ಎಂದೆಲ್ಲ ಭಾಷಣ ಬಿಗಿಯುತ್ತ ತಾವು ವಿಚಾರವಾದಿಗಳು, ವಸ್ತುನಿಷ್ಠರು ಎಂದೇ ಭಾವಿಸಿ ಬೀಗುತ್ತಿರುತ್ತಾರೆ. ಜೀವನಾಸ್ವಾದನೆ ಇವರಿಂದ ದೂರ. ಆದರೆ ಹಾಸ್ಯವೆಂದರೆ ಇಲ್ಲಿ ಊಹೆ, ಕಲ್ಪನೆ, ಕಟಕಿಗಳದೇ ಸಾಮ್ರಾಜ್ಯ. ಮರ್ಯಾದಾ ಪುರುಷೋತ್ತಮ ರಿಗೆ ಇದು ಮನೆಯ ಹೊಸ್ತಿಲ ಬಳಿಯೇ ನಿಲ್ಲುವಂಥದು.

ಉತ್ಪ್ರೇಕ್ಷೆಯ ಕೆಲ ಉದಾಹರಣೆಗಳಲ್ಲಿ ಕೆಲವು ಅಪರೂಪದ ವಾಕ್ಯಗಳು ಶ್ರೀಗೌರಿಸುತರ ಹಾಸ್ಯೋಪನಿಷತ್ತಿನಲ್ಲಿದೆ. ಒಂದೆರಡು ಉದಾಹರಣೆಯ ಝಲಕುಗಳು.

? ನಮ್ಮ ಮನೆ ಭದ್ರವಿಲ್ಲವೆಂದು ನನಗನಿಸುತ್ತಿದೆ; ಮೊನ್ನೆ ನಮ್ಮ ಮನೆಯ ಗೆದ್ದಲು ಹುಳುಗಳೂ ಹೆಲ್ಮೆಟ್ ಹಾಕಿಕೊಂಡು ಓಡಾಡುವುದನ್ನು ಕಂಡೆ!
? ಒಬ್ಬ ಸರಕಾರಿ ಅಧಿಕಾರಿ ತನ್ನ ಮೇಜಿನ ಮೇಲೆ ಒಂದು ಫಲಕವನ್ನಿಟ್ಟಿದ್ದ. ಅದರಲ್ಲಿ ಹೀಗೆ ಬರೆದಿತ್ತು. ನಾನು ಮಾಡಬೇಕಾಗಿರುವ ಕೆಲಸ ಬಹಳ ರಹಸ್ಯವಾದುದು, ಅದು ನಾನೇನು ಮಾಡುತ್ತಿದ್ದೇನೆಂಬುದು ನನಗೂ ತಿಳಿಯದು!

? ನಮ್ಮ ಮನೆ ಮಳೆ ಬಂದಾಗ ಎಷ್ಟು ತೇವವಾಗುತ್ತೆ ಗೊತ್ತ? ನಾನು ಇಲ್ಲಿ ಇಲಿಗಳನ್ನು ಹಿಡಿಯಲು ಬೋನನ್ನು ಇಟ್ಟರೆ, ಅದರಲ್ಲಿ ಮೀನುಗಳು ಸಿಕ್ಕಿ ಒದ್ದಾಡುತ್ತವೆ.

ಇನ್ನು, ನಾನು ಆಗಾಗ ಹೇಳುವ ರಾಜಹಾಸ್ಯ ಎನ್ನುವಂಥದು ಒಂದೇ ಗುಕ್ಕಿಗೆ ತಿಳಿಯುವಂಥದಲ್ಲ. ನೀವು ಚುರುಕುಮತಿಗಳಾಗಿದ್ದರೆ, ಹಾಸ್ಯಪ್ರಜ್ಞೆಯುಳ್ಳವ ರಾಗಿದ್ದರೆ ಅದನ್ನು ಕೇಳಿದ ತಕ್ಷಣ ಗ್ರಹಿಸಿ ಮುಗುಳ್ನಗುತ್ತೀರಿ. ಎರಡನೇ ಸಲ ಕೇಳಿದಿರೆಂದರೆ ನೀವು ಚುರುಕುಮತಿಗಳಲ್ಲ ಎನ್ನುವಂತಿಲ್ಲ, ಅದರ ರುಚಿ ಕೇಳಿಸಿದೆ, ಇನ್ನೊಮ್ಮೆ ಕೇಳಿ ಅರಗಿಸಿಕೊಳ್ಳುತ್ತೀರಿ ಎಂದರ್ಥ. ಉದಾಹರಣೆಗಳು ಇಲ್ಲಿವೆ.

? ಸಾವು ಮತ್ತು ಆದಾಯ ತೆರಿಗೆ ಎರಡೂ ಒಂದೇ ರೀತಿಯ ಅನಿಷ್ಟಗಳು. ವ್ಯತ್ಯಾಸವೆಂದರೆ, ಸಾವು ಬಜೆಟ್‌ನಂತೆ ಪ್ರತಿ ವರ್ಷ ಕಾಡುವುದಿಲ್ಲ.

? ನನಗೆ ಬಂದಿರೋ ಕಾಯಿಲೆ ಬಹಳ ಹೊಸದಂತೆ, ಇದಕ್ಕೆ ಔಷಧಿಯೇ ಇಲ್ವಂತೆ. ಆದರೆ ಸಂತೊಷದ, ಹೆಮ್ಮೆಯ ವಿಷಯವೆಂದರೆ ಈ ಕಾಯಿಲೆಗೆ ನನ್ನ ಹೆಸರೇ ಇಡ್ತಾರಂತೆ. ? ಹಾಲಿವುಡ್‌ನ ಚಿತ್ರನಟನೊಬ್ಬ ಸಂದರ್ಶನದಲ್ಲಿ ಹೇಳಿದ.

ನನ್ನ ಪತ್ನಿ ಮತ್ತು ನಾನು ಇಪ್ಪತ್ತು ವರ್ಷ ಸುಖವಾಗಿದ್ದೆವು: ಆಮೇಲೆ ಪರಸ್ಪರ ಭೇಟಿಯಾಯಿತು

? ನಾನು ಎಂದೂ ವಾದಕ್ಕಿಳಿಯುವುದಿಲ್ಲ; ನಾನು ಮಾಡಿದ್ದು ಸರಿ ಎಂಬುದನ್ನು ಮಾತ್ರ ವಿವರಿಸುತ್ತೇನೆ ಅಷ್ಟೆ.
? ಜಗತ್ತಿನಲ್ಲಿ ಎಲ್ಲರೂ ಬಳಸುವ, ಅದೂ ಅತಿ ಕಡಿಮೆ ಬಳಸಲ್ಪಡುವ ಪ್ರದೇಶ ನಿಮ್ಮ ಟೋಪಿಯ ಕೆಳಗೆ ಇದೆ.

ಯಾರಾದಾರೂ ನಮಗೆ ‘ನಿನಗಿಂತ ಜಾಣ, ಶ್ರೇಷ್ಠ’ ಎಂದರೆ ಸಹಜವಾಗಿ ಸಿಟ್ಟು ಬರುತ್ತದೆ. ಆದರೆ, ಅಬ್ರಾಹಿಂ ಲಿಂಕನ್ 1860ರ ಚುನಾವಣೆಯ ನಂತರ ಅವರ ಬಳಿ ಬಂದ ಒಬ್ಬ ಸ್ನೇಹಿತ, ಲಿಂಕನ್‌ಜಿ, ನೀವು ಸಂಸದ ಸಾಲ್ಮನ್ ಚೇಯ್ಸ್ ನನ್ನು ನಿಮ್ಮ ಸಚಿವ ಮಂಡಲಕ್ಕೆ ಸೇರಿಸಿಕೊಳ್ಳುತ್ತಿಲ್ಲ ತಾನೆ? ಲಿಂಕನ್ ಈ ಪ್ರಶ್ನೆ ಏಕೆ ಎಂದು ಕೇಳಿದರು. ಅದಕ್ಕೆ ಆತ ನಿಮಗಿಂತ ತಾನೇ ಶ್ರೇಷ್ಠ ಎಂದು ಹೇಳಿಕೊಳ್ಳುತ್ತಿದ್ದಾನೆ ಅದಕ್ಕೆ ಎಂದರು.

ಆಗ ಲಿಂಕನ್ ನನಗಿಂತ ಶ್ರೇಷ್ಠ ಎಂದು ಯಾರಾದರೂ ಹೇಳಿದರೆ ಸಾಕು, ಅವರ ಮೇಲೆ ನನಗೆ ಕೋಪ, ದ್ವೇಷಗಳಿಲ್ಲ, ಅವರೆಲ್ಲರನ್ನೂ ನನ್ನ ಸಂಪುಟಕ್ಕೆ ಸೇರಿಸಿ ಕೊಳ್ಳಬೇಕೆಂದು ನನಗೆ ಇಷ್ಟ, ಈ ಮೂಲಕ ನಾಡಿನ ಶ್ರೇಷ್ಠರೆಲ್ಲ ನನ್ನ ಜತೆ ಇದ್ದಾರೆಂಬ ಹೆಮ್ಮೆ ನನ್ನದಾಗುತ್ತದೆ ಎಂದರಂತೆ. ಎಂಥ ಉತ್ತರವಲ್ಲವೇ? ಹಾಸ್ಯಪ್ರಜ್ಞೆ ಎಂಬುದು ಎಲ್ಲ ಜ್ಞಾನದ, ಬದುಕಿನ ಆಯಾಮಗಳನ್ನು ಪರಿಚಯಿಸುತ್ತ ದೆಂಬುದೇ ಇದಕ್ಕೆ ಸಾಕ್ಷಿ. ಗೌರಿಸುತರು ಬರೆದ ಹಾಸ್ಯೋಪನಿಷತ್ತು ಹಾಸ್ಯದ ವೈವಿದ್ಯ ಪ್ರಕಾರಗಳ ಪುಸ್ತಕ.