Sunday, 15th December 2024

ಅಮೆರಿಕದ ಬ್ಯಾಂಕುಗಳು ದಿವಾಳಿಯಾಗುತ್ತಿವೆಯೇ ?

ಶಿಶಿರ ಕಾಲ

shishirh@gmail.com

ಕೋವಿಡ್ ಬಂದಾಗಿನಿಂದ, ಇಂದಲ್ಲ ನಾಳೆ ಆರ್ಥಿಕ ಹಿಂಜರಿತ ಆಗಿಯೇ ಆಗುತ್ತದೆ ಎನ್ನುವ ಅನುಮಾನದಲ್ಲಿಯೇ ಎರಡು ವರ್ಷ ಕಳೆದಾಗಿದೆ. ತಜ್ಞರ ಪ್ರಕಾರ ಮುಗ್ಗಟ್ಟು ಎನ್ನುವುದು ಅಡಗಿ ಕೂತ ದೆವ್ವ. ಯಾವುದೋ ಒಂದು ನೆಪವಿಟ್ಟು ಧುತ್ತನೆ ಯಾವಾಗ ಬೇಕಾದರೂ ಬರಬಹುದು, ಇಡೀ ಜಗತ್ತಿನ ಆರ್ಥಿಕ ವ್ಯವಸ್ಥೆ ಬುಡಮೇಲಾಗಬ ಹುದು ಎನ್ನುವುದು ನಿರಂತರ ಅನುಮಾನ.

ಕೋವಿಡ್ ಸಮಯದಲ್ಲಿ ಜಗತ್ತಿನಾದ್ಯಂತ ಪೂರೈಕೆ ಮತ್ತು ಬೇಡಿಕೆಯದ ವ್ಯತ್ಯಯದಿಂದ ಜಗತ್ತಿಗೆ, ಆರ್ಥಿಕತೆಗೆ ಲುಕ್ಸಾನ್ ಅಂತೂ ಹೇರಳವಾಗಿ ಆಗಿದೆ. ಒಮ್ಮಿಂದೊಮ್ಮೆಲೇ ಅಗತ್ಯ ವಸ್ತುಗಳ ಬೇಕು ಬೇಡಗಳ ಪ್ರಮಾಣ ಬದಲಾಗಿವೆ. ಇದೆಲ್ಲದರ ನಡುವೆ ಬಹಳಷ್ಟು ಕೆಲಸಗಳು ತಮ್ಮ ಸ್ಥಳವನ್ನು ಬದಲಾಯಿಸಿವೆ ಇತ್ಯಾದಿ. ಇವೆಲ್ಲವೂ ವ್ಯವಸ್ಥೆಯಲ್ಲಿ ಆದ ಬದಲಾವಣೆಗಳು, ಪರಿಣಾಮ ನೇರವಾಗಿ ಆರ್ಥಿಕತೆಗೆ. ಹಾಗೆ ವ್ಯತ್ಯಯದಿಂದ ಆದ ನಷ್ಟವನ್ನು ನಾವೆಲ್ಲ ಸೇರಿ ಹೇಗಾದರೂ ಭರಿಸಿಕೊಳ್ಳ ಬೇಕು. ಹೇಗೆ ಜಗತ್ತು ಶ್ರೀಮಂತವಾದಂತೆ ಜೀವನ ಸುಲಭವಾಗುತ್ತ ಹೋಗುತ್ತದೆಯೋ
ಹಾಗೆಯೇ ಆರ್ಥಿಕತೆಯಲ್ಲಿ ಯಡವಟ್ಟಾದರೆ ಅದರ ತೊಂದರೆ ಯನ್ನು ಎಲ್ಲರೂ ಸೇರಿಯೇ ಅನುಭವಿಸಬೇಕು.

ರಿಸೆಶನ್ ಎಂದರೆ ಏನು? ಇದು ತೀರಾ ಕ್ಲಿಷ್ಟವಾದದ್ದಾದರೂ ಮೇಲರ್ಥ ಸುಲಭ. ಒಂದು ದೇಶದ ಆರ್ಥಿಕತೆ ಯಾವ ಯಾವುದೋ ಕಾರಣಕ್ಕೆ ತಾತ್ಕಾಲಿಕವಾಗಿ ಮೇಲೆ ಕೆಳಗಾಗುತ್ತಿರುತ್ತದೆ. ಆದರೆ ಯಾವುದೇ ಆರ್ಥಿಕತೆ ಎರಡು ತ್ರೈಮಾಸಿಕ ಅವಧಿಯಲ್ಲಿ ಇಳಿಕೆ ಕಂಡರೆ ಅದನ್ನು ರೆಸೆಷನ್ ಎನ್ನುವುದು. ಇಂತಹ ಆರ್ಥಿಕ ಹಿನ್ನಡೆಗೆ ಕಾರಣ ಬೇರೆ ಬೇರೆ ಇರಬಹುದು. 2008ರಲ್ಲಿ ಇಂಥ ದ್ದೊಂದು ಅವಸ್ಥೆ ಇಡೀ ಆರ್ಥಿಕ ವಲಯವನ್ನು ಬಾಽಸಿತ್ತು. ಇದೆಲ್ಲ ಶುರುವಾಗಿದ್ದು ಅಮೆರಿಕದಲ್ಲಿ. ಇಲ್ಲಿನ ಬ್ಯಾಂಕ್‌ಗಳು ಇಲ್ಲಿನವರ ಮನೆಗಳಿಗೆ ರಿಸ್ಕ್ ತೆಗೆದುಕೊಂಡು ಯಥೇಚ್ಛ ಪ್ರಮಾಣದಲ್ಲಿ ಸಾಲ ಕೊಟ್ಟಿದ್ದವು. ಆ ಸಮಯದಲ್ಲಿ ಆರ್ಥಿಕತೆ ಬಹಳ ಚೆನ್ನಾಗಿಯೇ ಇತ್ತು. ಅಮೆರಿಕನ್ನರೆಲ್ಲ ಲೆಕ್ಕ ಮೀರಿ ಖರ್ಚುಮಾಡುತ್ತಿದ್ದರು.

ಕ್ರಮೇಣ ಸಾರ್ವಜನಿಕ ಮತ್ತು ಮನೆ ಸಾಲಗಳು ಹೆಚ್ಚಿದವು. ಕ್ರಮೇಣ ಸಾಲ ಹೆಚ್ಚಿದಂತೆ ಅದನ್ನು ತೀರಿಸಲಾಗದ ಸ್ಥಿತಿಗೆ ಅಮೆರಿಕನ್ನರು ತಲು ಪಿದ್ದರು. ಅದೇ ಸ್ಥಿತಿ ಸಮಾನಾಂತರವಾಗಿ ಯುರೋಪಿನಲ್ಲಿಯೂ ನಿರ್ಮಾಣವಾಗಿತ್ತು. ಇದರಿಂದ ಕ್ರಮೇಣ ಮನೆ ಸಾಲಗಳ ಮರುಪಾವತಿ ಆಗುವ ಪ್ರಮಾಣ ಕಡಿಮೆಯಾಯಿತು. ಇಡೀ ಅರ್ಥವ್ಯವಸ್ಥೆ ಸರಿಯಾಗಿರಬೇಕೆಂದರೆ, ಜನರು ಖರೀದಿಸುವ ಪ್ರಮಾಣ ಕಡಿಮೆಯಾಗಬಾರದು, ಬ್ಯಾಂಕ್‌ಗಳ ಬಳಿ ಜನರಿಗೆ ಸಾಲ ಒದಗಿಸುವಷ್ಟು ಹಣವಿರಬೇಕು. ಅದರ ಜತೆ ಕೊಟ್ಟ ಸಾಲ ಸರಿಯಾಗಿ ಮರುಪಾವತಿಯಾಗುತ್ತಿರಬೇಕು.

ಇದರಲ್ಲಿ ಸ್ವಲ್ಪವೇ ವ್ಯತ್ಯಾಸವಾದರೂ ಒಂದಕ್ಕೊಂದು ಥಳಕು ಹಾಕಿಕೊಂಡಿರುವ ಆರ್ಥಿಕ ಸಿಸ್ಟಮ್ ಶಿಥಿಲಗೊಂಡುಬಿಡುತ್ತವೆ. 2007ರಲ್ಲಿ ಅಮೆರಿಕದಾದ್ಯಂತ ಜನರು ಸಾಲ ಹೆಚ್ಚಿಸಿಕೊಂಡು ಮರುಪಾವತಿಸಲು ಹೆಣಗಾಡಿದರು. ಸಾಲ ಮರುಪಾವತಿಯಾಗಲಿಲ್ಲ. ಅದರಿಂದ ಇನ್ನಷ್ಟು ಸಾಲ ಕೊಡುವುದು ಬ್ಯಾಂಕ್‌ಗಳಿಗೆ ಕಷ್ಟವಾಯಿತು. ಇದನ್ನು ನೋಡುತ್ತಿದ್ದ ಅಮೆರಿಕ ಸರಕಾರ ಜನರಿಗೆ ಸುಲಭವಾಗಲಿ ಎಂದು ಬಡ್ಡಿದರವನ್ನು ಇಳಿಸಬೇ ಕಾಯಿತು. ಹಾಗೆ ಮಾಡಿದ್ದರಿಂದ ಅತ್ತ ಕಡೆ ಅಗ್ಗದ ಸಾಲ ಪಡೆಯುವ ಪ್ರಮಾಣ ಇನ್ನಷ್ಟು ಏರಿತು. ಆದರೆ ಬ್ಯಾಂಕುಗಳ ಸಾಲಗಳು ಪುನರ್
ಪಾವತಿ ಆಗದ್ದರಿಂದ ಅವರ ಬಳಿ ಹಣದ ಕೊರತೆ ಉಂಟಾಯಿತು.

ವ್ಯವಹಾರಕ್ಕೆ ಸಾಲ ಸಿಗದಂತಾಯಿತು. ಇದು ನೇರವಾಗಿ ಎಲ್ಲ ವ್ಯವಹಾರದ ಮೇಲೆ ಪರಿಣಾಮ ಬೀರಿತು. ಷೇರು, ಆರ್ಥಿಕ ವ್ಯವಹಾರ ನಿಂತಿರು ವುದೇ ನಂಬಿಕೆ ಮತ್ತು ಸೆಂಟಿಮೆಂಟಿನ ಮೇಲೆ. ಯಾವಾಗ ಬ್ಯಾಂಕ್‌ಗಳಿಗೆ ಸಾಲ ಕೊಡಲಿಕ್ಕೆ ಹಣವಿಲ್ಲ ಎನ್ನುವ ಸುದ್ದಿ ಹೊರಬಿದ್ದಿತೋ ತಕ್ಷಣ ಷೇರು ಮಾರುಕಟ್ಟೆಯಲ್ಲಿ ತೊಡಗಿಸಿದ್ದ ಹಣವನ್ನು ಜನರು, ಕಂಪನಿಗಳು ಹೊರತೆಗೆದು ಇಟ್ಟುಕೊಳ್ಳಲಿಕ್ಕೆ ಮುಂದಾದವು. ಮೊದಲೇ ಹಣದ ಕೊರತೆಯಿದೆ, ಮೇಲಿಂದ ಷೇರುಗಳ ಲೆಕ್ಕತಪ್ಪಿದ ಮಾರಾಟ. ಸಾಮೂಹಿಕವಾಗಿ ಷೇರನ್ನು ಎಲ್ಲರೂ ಮಾರಾಟ ಮಾಡಲು ಶುರುಮಾಡಿದಾಗ, ಅದನ್ನು ಖರೀದಿಸುವವರೇ ಇಲ್ಲದಾದಾಗ, ಎಲ್ಲ ಷೇರುಗಳ ಬೆಲೆ ನೆಲಕಚ್ಚಿತು.

ಇತ್ತೀಚಿನ ಇತಿಹಾಸದಲ್ಲಿಯೇ ಅತ್ಯಂತ ಜಟಿಲ ಸ್ಥಿತಿಗೆ ಅಮೆರಿಕ, ಯುರೋಪ್ ಮತ್ತು ಜಗತ್ತು ಒಳಗಾಗಬೇಕಾಯಿತು. ಇದುವೇ 2008ರ ರಿಸೆಶನ್. ಆರ್ಥಿಕ ಹಿನ್ನಡೆ ನಾಲ್ಕು ತ್ರೈಮಾಸಿಕಕ್ಕಿಂತ ಜಾಸ್ತಿ ಸಮಯವಿದ್ದರೆ ಅದನ್ನು ರಿಸೆಶನ್ ಎನ್ನುವುದರ ಬದಲಿಗೆ ಡಿಪ್ರೆಷನ್ ಎನ್ನಲಾಗುತ್ತದೆ. ಅದು ಇತ್ತೀಚೆಗೆ ನಡೆದಿಲ್ಲ. 2008ನಲ್ಲಿ ಆದದ್ದು ರೆಸೆಷನ್ ಮಾತ್ರ. ಏಕೆಂದರೆ ನಾಲ್ಕನೇ ತ್ರೈಮಾಸಿಕದ ಒಳಗೆ ಜಗತ್ತಿನ ಆರ್ಥಿಕತೆ ಮತ್ತೆ ಸುಧಾರಿಸಲು ಶುರುವಾಯಿತು. ಅದನ್ನು ಸರಿಮಾಡಿಕೊಳ್ಳಲು ಅಮೆರಿಕ, ಯುರೋಪ್ ಸರಕಾರಗಳು ಯೆಥೇಚ್ಛ ಹಣವನ್ನು ಆರ್ಥಿಕತೆಗೆ, ಬ್ಯಾಂಕ್‌ ಗಳಿಗೆ ಕೊಡುವುದರ ಮೂಲಕ ನಿಭಾಯಿಸಿದವು.

ಆರ್ಥಿಕ ಹಿಂಜರಿತವೆಂದರೆ ಅದು ಆರ್ಥಿಕ ವಿಷವರ್ತುಲ. ಇಂತಹ ಆರ್ಥಿಕ ಹೊಡೆತ ಬಿದ್ದ ನಂತರ ಮೊದಲಿನಂತೆ ಆಗಲು ಬಹಳಷ್ಟು ಸಮಯ ಬೇಕು. ಅದು ನಿಧಾನದ ಚೇತರಿಕೆ. ಇದು ೨೦೦೮ರ ರಿಸೆಷನ್ ಕಥೆಯಾಯಿತು. ಕಾರಣಾಂತರ ದಿಂದ ಬಡ್ಡಿ ದರದಲ್ಲಿ ಏರಿಕೆಯಾಗುತ್ತ ಹೋಗುವುದು,
ಅವಶ್ಯಕತೆಗೆ ಅನುಗುಣವಾಗಿ ಸಾಲ ಸಿಗದೇ ಇರುವುದು, ಉತ್ಪಾದನೆಯಾದದ್ದು ಮಾರಾಟವಾಗದೇ ಇರುವುದು, ಇದರಿಂದ ಸಾಲ ಮರುಪಾವತಿ ಯಾಗದೇ ಇರುವುದು.

ಹೀಗೆ ಯಾವೊಂದು ಕಾರಣ ಒಂದು ಪ್ರಮಾಣವನ್ನು ಮೀರಿದಾಗ, ವ್ಯವಸ್ಥೆ ಅದನ್ನು ತಡೆದುಕೊಳ್ಳಲಾಗದ ಮಿತಿ ತಲುಪಿದಾಗ, ಇವೆಲ್ಲ ಕೊನೆಗೆ ರಿಸೆಷನ್‌ಗೆ ಸ್ಥಿತಿಯನ್ನು ತಂದುನಿಲ್ಲಿಸುತ್ತವೆ. ಅಮೆರಿಕದಂತಹ ದೇಶದ ರಿಸೆಷನ್ ಯಾವತ್ತೂ ಒಂದೇ ಆರ್ಥಿಕತೆಗೆ ಸೀಮಿತವಾಗಿಬಿಡುವುದಿಲ್ಲ. ಉದಾಹರಣೆಗೆ ಅಮೆರಿಕದ ಕಂಪನಿಗಳು ಕಷ್ಟಕ್ಕೆ ಸಿಲುಕಿದರೆ, ಅದರಿಂದ ಅವುಗಳ ವ್ಯವಹಾರ ಇಳಿಮುಖವಾದರೆ, ಅದರ ಪರಿಣಾಮ, ಬಿಸಿ
ಭಾರತದ ಬೆಂಗಳೂರಿನಲ್ಲಿರುವ ಐಟಿ ಕಂಪನಿಗೆ ಮುಟ್ಟುತ್ತದೆ. 2008ರಲ್ಲಿ ಆರ್ಥಿಕ ಹಿಂಜರಿತವಾದಾಗ ಬೆಂಗಳೂರಿನ ಅದೆಷ್ಟೋ ಕಂಪನಿಗಳು ಉದ್ಯೋಗಿಗಳನ್ನು ಮನೆಗೆ ಕಳಿಸ ಬೇಕಾದ ಸ್ಥಿತಿ ಉಂಟಾಯಿತು. ಇದರಿಂದ ಕೆಲಸ ಕಳೆದುಕೊಂಡವರು, ಅನಿಶ್ಚಿತತೆಯನ್ನು ಕಾಣುವ ಉಳಿದವರೆಲ್ಲ ಹಣವನ್ನು ದುಂದುವೆಚ್ಚ ಮಾಡುವುದರ ಬದಲಿಗೆ ಉಳಿಸಲು ಶುರುಮಾಡಿದರು.

ಇದರ ಪರಿಣಾಮ ಬೆಂಗಳೂರಿನ ರಿಯಲ್ ಎಸ್ಟೇಟ್ ಸೇರಿದಂತೆ ಎಲ್ಲ ವ್ಯವಹಾರದ ಮೇಲೆ ಪರಿಣಾಮ ಬೀರಿತು. ಇದರಿಂದ ತೆರಿಗೆಯಲ್ಲಿ ಇಳಿಮುಖ ವಾಗಿ ಸರಕಾರದ ಕಾರ್ಯಕ್ರಮಗಳು ಹಿನ್ನಡೆ ಕಂಡವು. ಹೀಗೆ ಇಂದಿನ ಒಂದಕ್ಕೊಂದು ಥಳಕು ಹಾಕಿಕೊಂಡಿರುವ ಜಾಗತಿಕ ಆರ್ಥಿಕತೆಯಲ್ಲಿ ಕೋವಿಡ್ ನಿಂದಾಗಿ ಇಂಥದ್ದೊಂದು ಸ್ಥಿತಿ ಮತ್ತೆ ಬರಬಹುದೆನ್ನುವ ಊಹೆ ತೀರಾ ಅವೈಜ್ಞಾನಿಕವೇನಲ್ಲ. ಇಷ್ಟು ಕಾಲ ರಿಸೆಷನ್ ಅನ್ನು ತಡೆಯು ಕೊಳ್ಳುವಂತೆ ನಿರಂತರವಾಗಿ ನೋಡಿಕೊಂಡು, ಜೋಪಾನವಾಗಿಸಿಕೊಂಡು ಬಂದ ದೇಶಗಳಲ್ಲಿ ಅಮೆರಿಕ, ಚೀನಾ, ಭಾರತ, ಜಪಾನ್ ಮತ್ತು ಜರ್ಮನಿಗಳದ್ದು ಅಗ್ರ ಸ್ಥಾನ. ಅದನ್ನು ಈ ದೇಶಗಳು ಸಮರ್ಥವಾಗಿಯೇ ನಿಭಾಯಿಸಿವೆ.

ಬಡ್ಡಿದರವನ್ನು ಹೆಚ್ಚು ಕಡಿಮೆ ಮಾಡುವುದು, ಕಂಪನಿಗಳಿಗೆ ಮತ್ತು ಜನರಿಗೆ ನೇರವಾಗಿ ಹಣ ನೀಡುವುದು, ಸುಂಕದಲ್ಲಿ ಹೆಚ್ಚುಕಡಿಮೆ ಮಾಡುವುದು ಈ ಎಲ್ಲದರ ಮೂಲಕ ಇದನ್ನು ಸಮರ್ಥವಾಗಿಯೇ ನಿಭಾಯಿಸಿವೆ. ಆದರೆ ಉಳಿದೆಲ್ಲ ದೇಶಗಳಿಗೆ ಅಮೆರಿಕದ ಮೇಲೆ, ಅಲ್ಲಿನ ಆರ್ಥಿಕತೆಯ ಮೇಲೆ ಅವಲಂಬನೆ ಇದ್ದೇ ಇದೆ. ಏಕೆಂದರೆ ಅದು ಅಷ್ಟು ಶ್ರೀಮಂತ ದೇಶ, ಸೇವೆಯನ್ನು ಮತ್ತು ವಸ್ತುವನ್ನು ಹಣಕೊಟ್ಟು ಹೆಚ್ಚಿನ ಪ್ರಮಾಣದಲ್ಲಿ ಖರೀ
ದಿಸುವ ದೇಶ. ಆ ಕಾರಣಕ್ಕೇ ಅಮೆರಿಕದ ಆರ್ಥಿಕತೆಯೆಂದರೆ ಅದು ಹೆಚ್ಚುಕಡಿಮೆ ಜಾಗತಿಕ ಆರ್ಥಿಕತೆ ಅಂದದ್ದು.

ಜರ್ಮನಿ, ಜಾಪಾನಿನ ಆರ್ಥಿಕತೆ ನಿಂತಿರುವುದೇ ಅಮೆರಿಕದ ಕಾರು ಮತ್ತು ತಂತ್ರಜ್ಞಾನದ ಅವಶ್ಯಕತೆಯ ವ್ಯವಹಾರದ ಮೇಲೆ. ಭಾರತದ್ದು
ಸೇವೆಯ ವ್ಯವಹಾರ. ಇನ್ನು ಚೀನಾದ್ದು ಉತ್ಪಾದನೆಯದ್ದು. ಈ ಕಾರಣಕ್ಕೆ ಜಗತ್ತಿನ ದೊಡ್ಡ ಐದು ದೇಶಗಳ ಆರ್ಥಿಕತೆ ನಿಂತಿರುವುದು, ಅವಲಂಬಿ ಸಿದುರುವುದು ಅಮೆರಿಕದ ಮೇಲೆ. ಕೋಣ ಹಾದಿ ಬಿಟ್ಟರೆ ಎತ್ತಿಗೆ ಬರೆಯೆನ್ನುವ ಸ್ಥಿತಿ. ಇಂತಹ ಅನುಮಾನದ ಆರ್ಥಿಕ ಸ್ಥಿತಿಯಿರುವಾಗ ಅಮೆರಿಕದ ಹದಿನಾರನೇ ದೊಡ್ಡ ಬ್ಯಾಂಕ್‌ಗೆ ಬೀಗ ಹಾಕಲಾಗಿದೆಯೆನ್ನುವ ಸುದ್ದಿ.

ಅದರಲ್ಲಿಯೂ ಐಟಿ ವ್ಯವಹಾರದ ಕಾಶಿ, ಸಿಲಿಕಾನ್ ವ್ಯಾಲಿ, ಕ್ಯಾಲಿಫೋರ್ನಿಯಾದ ಬಹುತೇಕರು ಹಣ ತೊಡಗಿಸಿಟ್ಟ ಬ್ಯಾಂಕ್ ಒಂದು ಮುಚ್ಚಲಿದೆ ಯಂತೆ ಎನ್ನುವ ಸುದ್ದಿ. ಅಮೆರಿದಲ್ಲಿ ಲಕ್ಷಾಂತರ ಮಂದಿ ಕೆಲಸ ಕಳೆದುಕೊಳ್ಳುತ್ತಿದ್ದಾರಂತೆ. ಸಿಲಿಕಾನ್ ವ್ಯಾಲಿ ಬ್ಯಾಂಕ್ ಮುಚ್ಚಿರುವು ದರಿಂದ ಇನ್ನೊಂದು ಲಕ್ಷ ಮಂದಿ ಕೆಲಸ ಕಳೆದುಕೊಳ್ಳಲಿದ್ದಾರಂತೆ ಎಂದು. ಇದೇನು ರೆಸೆಷನ್‌ನ ಮುನ್ಸೂಚನೆಯೇ? ಇಲ್ಲಿರುವವರೆಲ್ಲ ಕೆಲಸ ಕಳೆದುಕೊಳ್ಳು ತ್ತಾರೆಯೇ? ಕೆಲಸ ಕಳೆದುಕೊಂಡ ಭಾರತದವರು ವಾಪಸಾಗುತ್ತಾರೆಯೇ? ಫೇಸ್‌ಬುಕ್‌ನಲ್ಲಿ ಅದೆಷ್ಟೋ ಮಂದಿಯನ್ನು ಕೆಲಸದಿಂದ ತೆಗೆದುಹಾಕ ಲಾಗುತ್ತಿದೆಯಂತೆ.

ಇದೆಲ್ಲ ಏನು ನಡೆಯುತ್ತಿದೆ ಎನ್ನುವ ಪ್ರಶ್ನೆಗಳು. ನಿನ್ನೆ ಈ ಸುದ್ದಿ ಬಂದಾಗ ಕನ್ನಡದ ಕೆಲವು ಸುದ್ದಿ ವಾಹಿನಿಗಳು ಜಗತ್ತೇ ತಲೆಕೆಳಗಾಗುವ ಸ್ಥಿತಿಯಿದೆ, ಅಮೆರಿಕಕ್ಕೆ ಹೋದವರೆಲ್ಲ ಮರಳಿ ಬರಲಿದ್ದಾರೆ ಎನ್ನುವ ಕಿಲೋಮೀಟರ್ ಉದ್ದುದ್ದದ ಪುಂಗಿ ಊದಿದ್ದು ನೋಡಿದೆ. ಇದೆಲ್ಲ ಹೌದೇ? ಇವೆಲ್ಲ ಪ್ರಶ್ನೆ ಮತ್ತು ಈ ನಿರೂಪಣೆಗಳು ಎಷ್ಟು ಸತ್ಯ ಎನ್ನುವ ಪ್ರಶ್ನೆಗೆ ಉತ್ತರವಾಗಿ ಮುಂದಿನ ಈ ಕೆಲವು ಮಾಹಿತಿಗಳು. ಸಿಲಿಕಾನ್ ವ್ಯಾಲಿ ಬ್ಯಾಂಕ್ ಅಮೆರಿಕದ ಹದಿನಾರನೇ ದೊಡ್ಡ ಬ್ಯಾಂಕ್ ಅನ್ನುವುದಕ್ಕಿಂತ ಬಹಳ ಮಹತ್ವದ ಬ್ಯಾಂಕ್. ಏಕೆಂದರೆ ಕ್ಯಾಲಿಫೋರ್ನಿಯಾದ ಬಹಳಷ್ಟು ಐಟಿ ಕಂಪನಿಗಳು, ಅವುಗಳಲ್ಲಿ ಹಣ ತೊಡಗಿಸುವ ವೆಂಚರ್ ಕೆಪಿಟಲಿಸ್ಟ್‌ಗಳು ಹಣ ಇಟ್ಟ ಬ್ಯಾಂಕ್. ಇದು ಐಟಿ ಕಂಪನಿಗಳ ಹಣವಾಗಿದ್ದರಿಂದ ಅದು ಮುಚ್ಚಿದರೆ ಇಲ್ಲಿರುವ ಕಂಪನಿಗಳು ಮುಚ್ಚಿ ಭಾರತದ ಎಂಜಿನಿಯರುಗಳೆಲ್ಲ ವಾಪಾಸ್ ಬರಬೇಕಾಗುತ್ತದೆ ಎನ್ನುವ ಊಹೆಯ ಸುದ್ದಿಗಳು.

ಶ್ರೀಲಂಕಾ, ಪಾಕಿಸ್ತಾನದ ನಂತರ ಅಮೆರಿಕ ದಿವಾಳಿಯಾಗಲಿದೆ ಎಂದು ಇದನ್ನೆಲ್ಲ ತಪ್ಪಾಗಿ ವಿಶ್ಲೇಷಿಸುವ ನಿರೂಪಣೆ. ಇಲ್ಲಿ ನಡೆದದ್ದು ಬಹಳ ಸರಳ. ಅಮೆರಿಕ ಮತ್ತು ಜಗತ್ತಿನ ಐಟಿ ವ್ಯವಹಾರಗಳು ಹೆಚ್ಚಿದಂತೆ ಕ್ಯಾಲಿಫೋರ್ನಿಯಾದ ಈ ಬ್ಯಾಂಕ್ ಸೇರಿದಂತೆ ಬಹುತೇಕ ಬ್ಯಾಂಕ್‌ಗಳಲ್ಲಿ ತೊಡಗಿ ಸಿಡುವ ಹಣ ಭಾರೀ ಪ್ರಮಾಣದಲ್ಲಿ ಹೆಚ್ಚಿದೆ. ಅವೆಲ್ಲ ದೊಡ್ಡ ಮೊತ್ತದ ಹಣಗಳು. ಅಮೆರಿಕದ ವ್ಯವಹಾರಸ್ಥರಷ್ಟೇ ಅಲ್ಲ, ವಿದೇಶಿ ಕಂಪನಿಗಳೂ ಇಲ್ಲಿ ಹಣವನ್ನುಇಟ್ಟುಕೊಂಡಿದ್ದವು. ೨೦೦೮ರ ರಿಸೆಷನ್ ಮುಗಿದ ನಂತರ ಆರ್ಥಿಕ ವ್ಯವಹಾರ ಸುಧಾರಿಸುತ್ತಿದ್ದಂತೆ ಐಟಿ ತಂತ್ರಜ್ಞಾನದಲ್ಲಿ ತೊಡಗಿಸುವ ಹಣದ ಪ್ರಮಾಣ ಹೆಚ್ಚಿದೆ. ಇದರಿಂದಾಗಿ ಈ ಬ್ಯಾಂಕ್‌ಗೆ ಯಥೇಚ್ಛ ಹಣ ಹರಿದು ಬಂದಿದೆ.

ಬ್ಯಾಂಕ್ ತನ್ನಲ್ಲಿ ಡೆಪಾಸಿಟ್ ಆದ ಹಣವನ್ನು ಹಾಗೆಯೇ ತ್ರಿಜೋರಿಯಲ್ಲಿ ಇಟ್ಟರೆ ಅದರಿಂದ ಲಾಭವಾಗುವುದಿಲ್ಲವಲ್ಲ. ಆ ಹಣವನ್ನು ಬ್ಯಾಂಕ್ ಇನ್ನೊಂದು ಕಡೆ ತೊಡಗಿಸಬೇಕು. ಆಗಲೇ ಬ್ಯಾಂಕ್ ಬದುಕಿರಲು ಸಾಧ್ಯ. ಆ ಕಾರಣಕ್ಕೆ ಸಿಲಿಕಾನ್‌ವ್ಯಾಲಿ ಬ್ಯಾಂಕ್ ತನ್ನಲ್ಲಿ ಬಿಲಿಯನ್‌ಗಟ್ಟಳೆ ಶೇಖರಣೆ ಯಾದ ಹಣವನ್ನು ಅಮೆರಿಕ ಸರಕಾರದ ಬಾಂಡ್‌ಗಳಲ್ಲಿ ತೊಡಗಿಸಿದೆ. ಅದು ಹತ್ತು ವರ್ಷ ಲಾಕಿಂಗ್ ಇರುವ ಬಾಂಡ್. ಅದಕ್ಕಿಂತ ಮುಂಚೆ ಇಟ್ಟ ಹಣ ತೆಗೆಯುವಂತಿಲ್ಲ. ಫಿಕ್ಸಡ್ ಡೆಪಾಸಿಟ್‌ನಂತೆ ಅರ್ಧಕ್ಕೇ ದಂಡ ತೆತ್ತು ಮುರಿಯುವಂತೆಯೂ ಇಲ್ಲ. ಕೋವಿಡ್‌ನ ನಂತರ, ಈಗ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಿದ್ದಂತೆ ಈ ಹಣ ತೊಡಗಿಸಿದ ಕಂಪನಿಗಳು ತಮ್ಮ ಹಣವನ್ನು ವ್ಯವಹಾರಕ್ಕೆ ಬ್ಯಾಂಕಿನಿಂದ ಹೊರತೆಗೆಯಲು  ಶುರು ಮಾಡಿವೆ.

ಇದರಿಂದ ಸಿಲಿಕಾನ್ ವ್ಯಾಲಿ ಬ್ಯಾಂಕಿನ ಬಳಕೆಗೆ, ಸಾಲ ಕೊಡಲು ಬೇಕಾದ ಕ್ಯಾಶ್ ಕೊರತೆ ಉಂಟಾಗಿದೆ. ಯಾವುದೇ ಬ್ಯಾಂಕ್ ಇರಲಿ, ಅದರ ಬಗ್ಗೆ ಒಂದು ಅಡ್ಡ ಸುದ್ದಿಬಂದರೆ, ಒಮ್ಮಿಂದೊಮ್ಮೆಲೇ ಎಲ್ಲರೂ ತಮ್ಮ ಹಣವನ್ನು ಅಕೌಂಟ್‌ಗಳಿಂದ ಹೊರ ತೆಗೆಯಲು ಶುರುಮಾಡಿದರೆ, ಅದನ್ನು ಪೂರೈಸಲು ಬ್ಯಾಂಕಿನ ಬಳಿ ಅಷ್ಟು ಲಿಕ್ವಿಡ್ ಹಣವಿರುವುದಿಲ್ಲ. ಏಕೆಂದರೆ ಅವೆಲ್ಲವನ್ನು ಬ್ಯಾಂಕ್ ಇನ್ನೊಂದು ಕಡೆ ತೊಡಗಿಸಿಟ್ಟಿರುತ್ತದೆ, ದುಡಿಯಲು ಹಚ್ಚಿಸಿರುತ್ತದೆ. ಇದರಿಂದ ಬ್ಯಾಂಕ್ ತನ್ನಲ್ಲಿನ ಹಣದ ಕೊರತೆಯಿಂದಾಗಿ ವ್ಯವಹಾರ ನಡೆಸಲಿಕ್ಕೇ ಆಗದ ಸ್ಥಿತಿಗೆ ತಲುಪುತ್ತದೆ.

ಸಿಲಿಕಾನ್ ವ್ಯಾಲಿ ಬ್ಯಾಂಕ್ ಯಾವಾಗ ಈ ರೀತಿ ಹಣದ ಕೊರತೆ ಅನುಭವಿಸಿತೋ, ಇನ್ನಷ್ಟು ಹಣವನ್ನು ಷೇರು ಮಾರುಕಟ್ಟೆಯಿಂದ ಎತ್ತಲು ಮುಂದಾಗಿದೆ. ಇದು ತೀರಾ ಸಾಮಾನ್ಯ ವಿಷಯ, ಹೆಚ್ಚಿನ ಬ್ಯಾಂಕುಗಳು ಇದನ್ನು ಮಾಡುತ್ತವೆ. ಇಂತಹ ಸ್ಥಿತಿಯಲ್ಲಿ ಬ್ಯಾಂಕ್ ಒಂದೋ ಇನ್ನಷ್ಟು ಡೆಪಾಸಿಟ್ ಆಗುವಂತೆ ನೋಡಿಕೊಳ್ಳಬೇಕು ಇಲ್ಲವೇ ತನ್ನ ಷೇರುಗಳನ್ನು ಮಾರಾಟ ಮಾಡಿ ಹಣ ಎತ್ತಿಕೊಂಡು ಸರಿದೂಗಿಸಿಕೊಳ್ಳಬೇಕು. ಬ್ಯಾಂಕ್
ಒಂದು ಇಂತಹ ಸಂದರ್ಭಕ್ಕೆ ಒಳಗಾದಾಗ ಅದನ್ನು ಕಾಯ್ದೆಯ ಪ್ರಕಾರ ಎಲ್ಲರಿಗೂ ತಿಳಿಸಬೇಕು. ಅದನ್ನೇ ಈ ಬ್ಯಾಂಕ್ ಕೂಡ ಕಳೆದ ವಾರ ಮಾಡಿತು ಮತ್ತು ತನ್ನ ಷೇರುಗಳನ್ನು ಮಾರುವುದರ ಮೂಲಕ ಹಣ ಶೇಖರಿಸುವುದಾಗಿ ಟ್ವಿಟ್ಟರ್‌ನಲ್ಲಿ ಘೋಷಿಸಿತ್ತು.

ಈ ಘೋಷಣೆ ಬರುತ್ತಿದ್ದಂತೆ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದೆ. ಅದರ ಜತೆ ಈ ಬ್ಯಾಂಕಿನಲ್ಲಿ ಹಣ ಇಟ್ಟಿದ್ದ ಕಂಪನಿ ಮತ್ತು ಶ್ರೀಮಂತರು ಅದನ್ನು ಹೊರ ತೆಗೆಯಲು ಮುಂದಾಗಿದ್ದಾರೆ. ಈ ಸುದ್ದಿ ಸಾರ್ವಜನಿಕ ವಲಯದಲ್ಲಿ, ಸೋಷಿಯಲ್ ಮೀಡಿಯಾ ದಲ್ಲಿ ಬರುತ್ತಿದ್ದಂತೆ ಆ ಬ್ಯಾಂಕಿನ ಷೇರನ್ನು ಖರೀದಿಸು ವವರಿಗಿಂತ ಮಾರಿಕೊಳ್ಳುವವರೇ ಜಾಸ್ತಿಯಾಗಿದ್ದಾರೆ. ಇದೆಲ್ಲ ನಡೆದದ್ದು ಹಿಂದಿನ ಬುಧವಾರ, ಕೆಲವೇ ಗಂಟೆಗಳಲ್ಲಿ. ನೋಡನೋಡುತ್ತಿದ್ದಂತೆ ಈ ಬ್ಯಾಂಕಿನ ಷೇರು ನೆಲಕಚ್ಚಿದೆ. ಎಲ್ಲರೂ ಮಾರಿದರೆ, ಕೊಂಡುಕೊಳ್ಳುವವರೇ ಇಲ್ಲದಿದ್ದರೆ ಷೇರು ಬೆಲೆ ಬೀಳುತ್ತದೆ. ಇದರಿಂದಾಗಿ ಕಳೆದ ವಾರ ಸಿಲಿಕಾನ್ ವ್ಯಾಲಿ ಬ್ಯಾಂಕಿನ ಒಂದು ಷೇರಿಗೆ ಸುಮಾರು ೨೬೦ ಡಾಲರಿನಷ್ಟಿದ್ದದ್ದು ಇಂದು ೩೯ ಡಾಲರಿಗೆ ಬಂದು ನಿಂತಿದೆ. ಹೀಗೆ ಹಣ ಎತ್ತಲು ಹೊರಟ ಬ್ಯಾಂಕ್ ಷೇರು ನೆಲಕಚ್ಚಿರುವುದರಿಂದ ದಿವಾಳಿ ಯಾಗಿದೆ.

ಆದರೆ ಇಂದು ಮಜವೆಂದರೆ ಹಣ ಎಲ್ಲಿಯೂ ಹೋಗಿಲ್ಲ. ಹಣ ಸರಕಾರದ ಬಾಂಡ್ ಗಳಲ್ಲಿ ಭಧ್ರವಾಗಿದೆ. ಆದರೆ ಬ್ಯಾಂಕಿನ ವ್ಯವಹಾರಕ್ಕೆ ಅದು ಲಭ್ಯವಾಗುತ್ತಿಲ್ಲ. ಈ ಬ್ಯಾಂಕ್ ದಿವಾಳಿಯಾಗಿದೆ ನಿಜ, ಆದರೆ ಇದರಲ್ಲಿ ತೊಡಗಿಸಿದ ಹಣ ಇನ್ನೊಂದು ಕಡೆ ಇದೆ ಅಷ್ಟೆ. ಅಮೆರಿಕದಲ್ಲಿ FDIC ಎನ್ನುವ ಸಂಸ್ಥೆ ಇದೆ. ಅದರ ಕೆಲಸವೆಂದರೆ ಇಂತಹ ಪರಿಸ್ಥಿತಿ ಎದುರಾದಾಗ ಜನರು ಹಣ ತಮ್ಮ ಕಳೆದುಕೊಳ್ಳದಂತೆ ನೋಡಿಕೊಳ್ಳುವುದು. ಇದೊಂದು ಅನನ್ಯ ವ್ಯವಸ್ಥೆ. ಬ್ಯಾಂಕ್ ಒಂದು ಇಂತಹ ಕಗ್ಗಂಟಿನ ಸ್ಥಿತಿಗೆ ತಲುಪಿದಾಗ FDIC ಸಂಸ್ಥೆ ಆ ಬ್ಯಾಂಕ್ ಅನ್ನು ಸಂಪೂರ್ಣ ತನ್ನ ತೆಕ್ಕೆಗೆ ತೆಗೆದುಕೊಂಡು ಬಿಡುತ್ತದೆ. ಈಗ ಆದದ್ದು ಅದು. ಸಾಮಾನ್ಯವಾಗಿ ಇಂತಹ ಸ್ಥಿತಿಯಲ್ಲಿ FDIC ಈ ಬ್ಯಾಂಕ್‌ನ್ನು ದೊಡ್ಡ ಬ್ಯಾಂಕಿಗೆ ಮಾರಾಟ ಮಾಡುತ್ತದೆ.

ಆಗ ಆ ಬ್ಯಾಂಕುಗಳ ಹತ್ತಿರ ಯಥೇಚ್ಛ ಲಿಕ್ವಿಡ್ ಹಣವಿರುವುದರಿಂದ, ಮತ್ತು ದೊಡ್ಡ ಬ್ಯಾಂಕ್ ಎಂದು ನಂಬಿಕೆ ಸಾರ್ವಜನಿಕವಾಗಿ ಇರುವುದರಿಂದ ಪರಿಸ್ಥಿತಿ ಹದಕ್ಕೆ ಬರುತ್ತದೆ. ಈಗ ಆ ಸ್ಥಿತಿಯಲ್ಲಿ ಈ ಬ್ಯಾಂಕ್ ಇದೆ. ಇನ್ನು ಕೆಲವೇ ದಿನಗಳಲ್ಲಿ ದೊಡ್ಡ ಬ್ಯಾಂಕ್ ಒಂದು ಇದನ್ನು ಖರೀದಿಸಿ ಈ ಎಲ್ಲ ಅಪರಾತಾಪರಾ ವ್ಯವಹಾರವನ್ನು ಸರಿಯಾಗಿಸುತ್ತದೆ. ಇದರಿಂದ ಯಾರೊಬ್ಬರೂ ಡೆಪಾಸಿಟ್ ಹಣ ಕಳೆದುಕೊಳ್ಳುವುದಿಲ್ಲ. ಇದಕ್ಕೂ, ಎಂಜಿನೀ ಯರ್‌ಗಳು ಕೆಲಸ ಕಳೆದುಕೊಳ್ಳುವುದಕ್ಕೂ ಯಾವುದೇ ಸಂಬಂಧವಿಲ್ಲ. ಇದೊಂದು ತಾತ್ಕಾಲಿಕ ವ್ಯವಹಾರದ ಗೋಟಾವಳಿ. ಇದೆಲ್ಲದಕ್ಕೆ ಪರೋಕ್ಷ ವಾಗಿ ಕೋವಿಡ್ ಕಾರಣವಾಗಿದ್ದರೂ ಇದುವೇ ಆರ್ಥಿಕ ಮುಗ್ಗಟ್ಟು ಎನ್ನುವಂತಿಲ್ಲ.

ಅಲ್ಲದೆ ಅಮೆರಿಕ ಕೂಡ ಶ್ರೀಲಂಕಾ, ಪಾಕಿಸ್ತಾನದ ಹಾದಿ ಹಿಡಿದಿದೆ, ಭಾರತೀಯರು ಅಮೆರಿಕ ಬಿಟ್ಟು ಭಾರತಕ್ಕೆ ಓಡಿ ಬರುತ್ತಿದ್ದಾರೆ ಎನ್ನುವುದೆಲ್ಲ ಬರೀ ಬಂಡಲ್ ಬಡಾಯಿ.  ಸಿಲಿಕಾನ್ ವ್ಯಾಲಿ ಬ್ಯಾಂಕ್‌ನಂತೆ ಸುಮಾರು ನಲವತ್ತು ಬ್ಯಾಂಕ್ ಗಳು ಹಿಂದಿನ ವರ್ಷ ಅಮೆರಿಕದಲ್ಲಿ ಮುಚ್ಚಿವೆ. ಹಾಗಂತ ಆ
ಬ್ಯಾಂಕ್‌ಗಳಲ್ಲಿ ಹಣ ಇಟ್ಟ ಯಾರೊಬ್ಬರೂ ಎಂಟಾಣೆಯನ್ನೂ FDIC ಮಧ್ಯಸ್ಥಿಕೆಯ ಕಾರಣದಿಂದ ಕಳೆದುಕೊಂಡಿಲ್ಲ. ಈಗ ಸಿಲಿಕೋನ್ ವ್ಯಾಲಿ ಬ್ಯಾಂಕ್ ಇರುವ ಜಾಗ, ಹೊಂದಿರುವ ವ್ಯವಹಾರದ ಕಾರಣಕ್ಕೆ ಮತ್ತು ರಿಸೆಷನ್‌ನ ಭಯವಿರುವುದರಿಂದ ಇದೆಲ್ಲ ಸುದ್ದಿ ಇನ್ನಿಲ್ಲದಂತೆ ಹರಡುತ್ತಿದೆ,
ತಪ್ಪು ತಪ್ಪು ವಿಶ್ಲೇಷಣೆಗೊಳಗಾತ್ತಿದೆ. ಇಂದಿನ ಆರ್ಥಿಕ ಪರಿಸ್ಥಿತಿ ಜಾಗತಿಕವಾಗಿ ಅಷ್ಟು ಸರಿಯಿಲ್ಲ. ಇದಕ್ಕೆ ಯಾವ ದೇಶವೂ ಹೊರತಾಗಿಲ್ಲ. ಹಾಗಂತ ಇದುವೇ ಅಮೆರಿಕದ ಅಂತ್ಯದ, ರೆಸೆಷನ್, ಡಿಪ್ರೆಶನ್‌ನ ಸೂಚಕವೇ? ಇಲ್ಲ. ಹಾಗಂತ ರಿಸೆಷನ್ ಸಾಧ್ಯವೇ ಇಲ್ಲವೇ? ಹೇಳುವಂತಿಲ್ಲ. ಆದರೆ ಅಮೆರಿಕ ಬ್ಯಾಂಕ್ ಗಳ ದಿವಾಳಿಯ ಹಿಂದಿನ ಕಥೆ ಮಾತ್ರ ಇಷ್ಟೆ.

epaper code:
Read E-Paper click here