ಬೆಂಕಿ ಚೆಂಡು
ಬೆಂಕಿ ಬಸಣ್ಣ, ನ್ಯೂಯಾರ್ಕ್
ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಮೆರಿಕ ದೇಶದಲ್ಲಿ ದೊಡ್ಡ ಸಂಚಲನವನ್ನು ಮೂಡಿಸಿದ್ದಾರೆ. ಅಮೆರಿಕದ ಸಂಸತ್ತಿನ ಜಂಟಿ ಅಽವೇಶನವನ್ನು ಉದ್ದೇಶಿಸಿ ಅವರು ಭಾಷಣ ಮಾಡುವಾಗ ‘ಮೋದಿ ಮೋದಿ’ ಎಂಬ ಜೈಕಾರವನ್ನು ಕೇಳಿ ರೋಮಾಂಚನವಾಯಿತು. ಸುಮಾರು
ಒಂದು ಗಂಟೆಯವರೆಗೆ ಸಾಗಿದ ಮೋದಿಯವರ ಭಾಷಣದ ಅವಧಿಯಲ್ಲಿ ಅಮೆರಿಕದ ಸಂಸದರು ೧೫ ಬಾರಿ ಎದ್ದು ನಿಂತು ಗೌರವ ಸೂಚಿಸಿದರು ಮತ್ತು ೭೯ ಬಾರಿ ಚಪ್ಪಾಳೆ ತಟ್ಟಿದರು.
ಭಾಷಣ ಮುಗಿದ ತಕ್ಷಣ ಮೋದಿಯವರ ಜತೆ ಸೆಲ್ಫಿ ಮತ್ತು ಆಟೋಗ್ರಾಫ್ ಗಾಗಿ ಮುಗಿಬಿದ್ದರು. ಇದನ್ನು ನೋಡುವಾಗ ನಮ್ಮ ಮೈ ರೋಮಾಂಚನ ದಿಂದ ಜುಮ್ ಎಂದಿತು. ಅಮೆರಿಕದ ಸಂಸತ್ತಿನಲ್ಲಿ ಎರಡನೇ ಬಾರಿಗೆ ಭಾಷಣ ಮಾಡಿದ ಕೆಲವೇ ಪ್ರತಿಷ್ಠಿತ ಐತಿಹಾಸಿಕ ವಿಶ್ವನಾಯಕರ ಪಟ್ಟಿಗೆ ನರೇಂದ್ರ ಮೋದಿ ಹೆಸರು ಸೇರ್ಪಡೆಯಾಗಿದೆ. ಅವರು ಭಾಷಣ ಮಾಡುವಾಗ ಅವರ ಹಿಂದೆ ಕುಳಿತಿದ್ದ ಭಾರತೀಯ ಮೂಲದ ಅಮೆರಿಕನ್ ಉಪಾ ಧ್ಯಕ್ಷೆ ಕಮಲಾ ಹಾರಿಸ್ ಅವರನ್ನು ನೋಡಿಯೂ ಬಹಳ ಖುಷಿಯಾಯಿತು.
ಮುಂದೊಂದು ದಿನ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಅಮೆರಿಕದ ಅಧ್ಯಕ್ಷರಾದರೆ ನಾವು ಅಚ್ಚರಿ ಪಡಬೇಕಾಗಿಲ್ಲ. ಭಾರತೀಯ ಮೂಲದ ರಿಷಿ ಸುನಕ್ ಈಗಾಗಲೇ ಬ್ರಿಟನ್ ದೇಶದ ಪ್ರಧಾನಿಯಾಗಿ ದಾಖಲೆ ಮಾಡಿದ್ದಾರೆ. ಕೆಲವು ವಾರಗಳ ಹಿಂದೆ ರಾಹುಲ್ ಗಾಂಧಿಯವರು ಅಮೆರಿಕದಲ್ಲಿ ಕೆಲವೇ ಸಭಿಕರ ಮುಂದೆ ‘ಭಾರತದಲ್ಲಿ ಮೋದಿಯವರ ಆಡಳಿತದಿಂದಾಗಿ ಪ್ರಜಾಪ್ರಭುತ್ವ ಸಂಕಷ್ಟದಲ್ಲಿದೆ, ಅಲ್ಪಸಂಖ್ಯಾತರು ತೊಂದರೆಯಲ್ಲಿದ್ದಾರೆ’ ಎಂದು ಭಾಷಣ ಮಾಡಿ ಭಾರತದ ಮಾನವನ್ನು ಹರಾಜು ಹಾಕಿದ್ದರು. ಮೋದಿ ಎಂಬ ಮಹಾಸಾಗರದ ಮುಂದೆ ರಾಹುಲ್ ಗಾಂಧಿ ಒಂದು ಚಿಕ್ಕ ನೀರಿನ ಹನಿಯಂತೆ!
ಪಾಕಿಸ್ತಾನದ ಪ್ರಧಾನಿ ಅಮೆರಿಕಕ್ಕೆ ಭೇಟಿ ಕೊಟ್ಟರೆ ಯಾರೂ ಕ್ಯಾರೆ ಎನ್ನುವುದಿಲ್ಲ. ಅಮೆರಿಕದಲ್ಲಿರುವ ಪಾಕ್ ಮೂಲದ ಜನರು ಯಾವ ದೊಡ್ಡ ಸಮಾರಂಭಗಳನ್ನೂ ಆಯೋಜಿಸುವುದಿಲ್ಲ. ಪಾಕ್ ಪ್ರಧಾನಿಗೆ ಭೇಟಿಯಾಗಲು ಅಮೆರಿಕ ಅಧ್ಯಕ್ಷ ಜೋ ಬೈಡನ್ ತಮ್ಮ ಸಮಯ ಕೊಡುವುದಿಲ್ಲ. ಆದರೆ ನರೇಂದ್ರ ಮೋದಿ ಭೇಟಿ ಕೊಟ್ಟಾಗ ಅಮೆರಿಕದಲ್ಲಿರುವ ಭಾರತೀಯರು ಸಾವಿರಾರು ಸಂಖ್ಯೆಯಲ್ಲಿ ನೆರೆಯುತ್ತಾರೆ, ಸ್ವಾಗತ ಸಮಾರಂಭವನ್ನು
ಆಯೋಜಿಸುತ್ತಾರೆ. ಉದಾಹರಣೆಗೆ, ಟ್ರಂಪ್ ಅಧಿಕಾರಾವಧಿಯಲ್ಲಿ ೨೦೧೯ರಲ್ಲಿ ಮೋದಿಯವರು ಅಮೆರಿಕಕ್ಕೆ ಭೇಟಿ ಕೊಟ್ಟಿದ್ದಾಗ ೫೦ ಸಾವಿರಕ್ಕೂ ಹೆಚ್ಚು ಭಾರತೀಯ ಮೂಲದ ಜನರು ಟೆಕ್ಸಾಸ್‌ನ ದೊಡ್ಡ ಸ್ಟೇಡಿಯಂನಲ್ಲಿ ‘ಹೌಡಿ ಮೋದಿ’ ಕಾರ್ಯಕ್ರಮ ನಡೆಸಿಕೊಟ್ಟಿದ್ದರು.
ಈ ವೇಳೆ ಬಹುಶಃ ಟ್ರಂಪ್ ಅವರ ಒತ್ತಡದಿಂದಾಗಿ ಮೋದಿಯವರು ‘ಆಜ್ ಕೆ ಬಾದ್ ಟ್ರಂಪ್ ಕಾ ಸರ್ಕಾರ್’ ಎಂಬ ವಿವಾದಾತ್ಮಕ ಘೋಷಣೆ ಮಾಡಿ,
ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಪರವಾಗಿ ಪ್ರಚಾರ ಮಾಡಿ ಡೆಮಾಕ್ರಟಿಕ್ ಪಾರ್ಟಿಯವರ ಕೆಂಗಣ್ಣಿಗೆ ಗುರಿಯಾಗಿದ್ದರು. ಚುನಾವಣೆ ಯಲ್ಲಿ ಟ್ರಂಪ್ ಸೋತು ಜೋ ಬೈಡನ್ ಅಽಕಾರಕ್ಕೆ ಬಂದಾಗ, ಅಮೆರಿಕ ಮತ್ತು ಭಾರತ ದೇಶಗಳ ಸಂಬಂಧ ಹಳಸುತ್ತದೆ ಎಂದೇ ಬಹಳಷ್ಟು ಜನರು ಭಾವಿಸಿದ್ದರು. ಆದರೆ ರಾಜಕೀಯ ಮುತ್ಸದ್ದಿ, ಚಾಣಕ್ಯ, ಚತುರ ಮೋದಿಯವರು ಜೋ ಬೈಡನ್ ಜತೆ ಉತ್ತಮ ಸ್ನೇಹವನ್ನು ಶೀಘ್ರವಾಗಿ ಬೆಳೆಸಿದರು.
ಚುನಾವಣೆ ಫಲಿತಾಂಶವನ್ನು ಒಪ್ಪದ ಆಗಿನ ಅಧ್ಯಕ್ಷ ಟ್ರಂಪ್ ಅವರ ಎಚ್ಚರಿಕೆಯನ್ನೂ ಲೆಕ್ಕಿಸದೆ ಚುನಾವಣೆಯಲ್ಲಿ ಗೆದ್ದ ಜೋ ಬೈಡನ್‌ಗೆ ಫೋನ್ ಮಾಡಿ ಶುಭಾಶಯ ತಿಳಿಸಿದರು ಮೋದಿ. ಹೀಗಾಗಿ ಪ್ರಾರಂಭದಲ್ಲಿಯೇ ಬೈಡನ್ ಅವರ ವಿಶ್ವಾಸಕ್ಕೆ ಮೋದಿ ಪಾತ್ರರಾದರು.
ಇತಿಹಾಸ ಸೃಷ್ಟಿಸಿದ ಮೋದಿ: ಅಮೆರಿಕದ ಸಂಸತ್ತಿನಲ್ಲಿ ೨ನೇ ಬಾರಿಗೆ ಭಾಷಣ ಮಾಡಿದ ಕೆಲವೇ ಪ್ರತಿಷ್ಠಿತ ಐತಿಹಾಸಿಕ ವಿಶ್ವನಾಯಕರ ಪಟ್ಟಿಗೆ ಮೋದಿ ಹೆಸರು ಸೇರ್ಪಡೆಯಾಗಿದೆ. ಬ್ರಿಟಿಷ್ ಪ್ರಧಾನಿ ವಿನ್‌ಸ್ಟನ್ ಚರ್ಚಿಲ್ ಅವರು ೧೯೪೧, ೧೯೪೩ ಮತ್ತು ೧೯೫೨ ಹೀಗೆ ೩ ಬಾರಿ ಅಮೆರಿಕದ ಸಂಸತ್ತಿನಲ್ಲಿ ಭಾಷಣ ಮಾಡಿದ್ದಾರೆ. ದಕ್ಷಿಣ ಆಫ್ರಿಕಾ ದೇಶದ ಅಧ್ಯಕ್ಷ ನೆಲ್ಸನ್ ಮಂಡೇಲಾ ಅವರು ೧೯೯೦ ಮತ್ತು ೧೯೯೪ರಲ್ಲಿ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರು ೧೯೯೬, ೨೦೧೧ ಮತ್ತು ೨೦೧೫ರಲ್ಲಿ ಹೀಗೆ ಭಾಷಣ ಮಾಡಿದ್ದಾರೆ.
ಇನ್ನು ಉಕ್ರೇನ್ ಅಧ್ಯಕ್ಷ ವೊಲೋದಿಮಿರ್ ಜಿಲೆಂಸ್ಕಿ ಅವರು ರಷ್ಯಾ ದೇಶದ ಆಕ್ರಮಣದ ವಿರುದ್ಧ ಸಹಾಯ ಕೋರಿ ೨ ಬಾರಿ ಭಾಷಣ ಮಾಡಿದ್ದಾರೆ.
ಅಮೆರಿಕದಲ್ಲಿ ಯಾರೇ ಅಧ್ಯಕ್ಷರಾಗಿದ್ದರೂ ಮೋದಿಯವರಿಗೆ ಯಾವಾಗಲೂ ಅದ್ಭುತ ಸ್ವಾಗತವೇ ಸಿಗುತ್ತದೆ. ಈ ಹಿಂದೆ ರಿಪಬ್ಲಿಕ್ ಪಕ್ಷದ ಡೊನಾಲ್ಡ್ ಟ್ರಂಪ್ ಇದ್ದಾಗಲೂ, ಡೆಮಾಕ್ರಟಿಕ್ ಪಕ್ಷದ ಬರಾಕ್ ಒಬಾಮಾ ಇದ್ದಾಗಲೂ ಅಮೆರಿಕದಲ್ಲಿ ಮೋದಿಯವರಿಗೆ ಭವ್ಯ ಸ್ವಾಗತ ಸಿಕ್ಕಿದ್ದನ್ನು ನೆನಪಿಸಿಕೊಳ್ಳಬಹುದು. ಇದು ಪ್ರಧಾನಿ ಮೋದಿಯವರು ವಿಶ್ವನಾಯಕರಾಗಿ ಬೆಳೆದಿರುವುದರ ದ್ಯೋತಕ.
ಹೀಗಾಗಿ ಇದು ಪ್ರತಿಯೊಬ್ಬ ಭಾರತೀಯ ಹೆಮ್ಮೆ ಪಡುವ ವಿಷಯ. ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಮೋದಿಗೆ ೨೦೦೫ರಲ್ಲಿ ವೀಸಾ ಕೊಡಲು ನಿರಾಕರಿಸಿದ್ದ ಅಮೆರಿಕ ಇಂದು ರತ್ನಗಂಬಳಿ ಹಾಸಿ ಅತ್ಯದ್ಭುತ ಸ್ವಾಗತ ಕೋರಿದ್ದು ಎಂಥ ವಿಚಿತ್ರ! ಇದು ‘ವಿಲನ್’ ಎಂದು ಕರೆಸಿಕೊಂಡವ ಕೆಲವೇ ವರ್ಷಗಳಲ್ಲಿ ‘ಮಹಾನ್ ಹೀರೋ’ ಆಗಿ ‘ಸೂಪರ್ ಮ್ಯಾನ್’ ಆಗಿ ಬೆಳೆದ ನೈಜಕಥೆ!
ಮೋದಿ ವಿರುದ್ಧ ಪ್ರತಿಭಟನೆ: ಮೋದಿಯವರು ನ್ಯೂಯಾರ್ಕ್ ಸಿಟಿಯಲ್ಲಿರುವ ವಿಶ್ವಸಂಸ್ಥೆಯ ಆವರಣದಲ್ಲಿ ಯೋಗ ಕಾರ್ಯಕ್ರಮಕ್ಕೆ ಬಂದಾಗ ಕೆಲವು ಟ್ರಕ್ಕುಗಳಲ್ಲಿ ಮೋದಿ ವಿರುದ್ಧದ ಬ್ಯಾನರ್ ಗಳನ್ನು ಪ್ರದರ್ಶಿಸಲಾಯಿತು. “Welcome PM Modi, Crime Minister of India’ ಎಂದು ಅದರಲ್ಲಿ ಉಲ್ಲೇಖಿಸಲಾಗಿತ್ತು. ‘ಕಾಶ್ಮೀರಿ ವಿದ್ಯಾರ್ಥಿ ಮುಖಂಡ ಉಮರ್ ಖಲಿದ್‌ನನ್ನು ಜೈಲಿನಲ್ಲಿ ಏಕೆ ಇಟ್ಟಿದ್ದೀರಿ?’, ‘ಮೋದಿ ಸರಕಾರದಲ್ಲಿ ಮುಸ್ಲಿಮರು, ಕ್ರೈಸ್ತರು ಮತ್ತು ದಲಿತರ ಶೋಷಣೆಯಾಗುತ್ತಿದೆ’ ಈ ತರಹದ ಮೋದಿ- ವಿರೋಧಿ ಬ್ಯಾನರ್‌ಗಳನ್ನು ಅಂಟಿಸಲಾಗಿತ್ತು. ಇದರ ಹಿಂದೆ
ಭಾರತ-ವಿರೋಧಿ ಖಲಿಸ್ತಾನಿಗಳ, ಪಾಕಿಸ್ತಾನಿಗಳ, ಕಮ್ಯುನಿಸ್ಟರ ಕೈವಾಡ ಇರಬಹುದು ಎಂದು ಶಂಕಿಸಲಾಗಿದೆ.
ಅಮೆರಿಕದ ಮುಸ್ಲಿಂ ಸಂಸದರಾದ ರಶೀದಾ ತಲೈಬ್, ಇಲ್ಹನ್ ಓಮರ್ ಮುಂತಾದವರು ತಮ್ಮ ಪ್ರತಿಭಟನೆ ತೋರಿಸಲು ಅಮೆರಿಕದ ಜಂಟಿ
ಸದನದಲ್ಲಿ ನಡೆದ ಭಾಷಣವನ್ನು ಬಹಿಷ್ಕರಿಸಿದರು. ೨೦೦೨ರಲ್ಲಿ ಗುಜರಾತಿ ನಲ್ಲಿ ನಡೆದ ಹಿಂಸಾಚಾರದಲ್ಲಿ ಸಾವಿರಾರು ಮುಸ್ಲಿಮರ ಹತ್ಯೆಗೆ ಮೋದಿಯೇ ಕಾರಣ ವೆಂದು ಆರೋಪಿಸಿ, ಅಂಥ ಮೋದಿ ಯನ್ನು ಆಹ್ವಾನಿಸಿದ ಜೋ ಬೈಡನ್ ವಿರುದ್ಧ ಆಕ್ರೋಶವನ್ನು ಹೊರಹಾಕಿದರು.
ಡೆಮಾಕ್ರಟಿಕ್ ಪಕ್ಷದ ಸುಮಾರು ೭೫ ನಾಯಕರು ತಮ್ಮದೇ ಪಕ್ಷದ ಜೋ ಬೈಡನ್‌ಗೆ ಪತ್ರ ಬರೆದು ‘ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿರುವ,
ಮಾಧ್ಯಮಗಳ ಸ್ವಾತಂತ್ರ್ಯವನ್ನು ಕಸಿದು ಕೊಳ್ಳುತ್ತಿರುವ, ಅಲ್ಪಸಂಖ್ಯಾತರನ್ನು ಶೋಷಿಸುತ್ತಿರುವ ನರೇಂದ್ರ ಮೋದಿಯವರನ್ನು ಜಂಟಿ ಅಧಿವೇಶನಕ್ಕೆ ಭಾಷಣ ಮಾಡಲು ಆಹ್ವಾನಿಸಬಾರದು’ ಎಂದು ಅದರಲ್ಲಿ ಉಲ್ಲೇಖಿಸಿದ್ದರು. ಆದರೆ ಆ ಪತ್ರಕ್ಕೆ ಜೋ ಬೈಡನ್ ಯಾವ ಮಹತ್ವವನ್ನೂ ಕೊಡಲಿಲ್ಲ. ತುಂಬಾ ವೇಗವಾಗಿ ‘ಸೂಪರ್ ಪವರ್’ ಆಗಿ ಬೆಳೆಯುತ್ತಿರುವ ಚೀನಾ ದೇಶವನ್ನು ಮಟ್ಟಹಾಕಲು ಅಮೆರಿಕ್ಕೆ ಭಾರತದ ಅವಶ್ಯಕತೆ ತುಂಬಾ ಇದೆ. ಹಾಗೆಯೇ ಎಲ್ಲಾ ಕ್ಷೇತ್ರಗಳಲ್ಲೂ ಶೀಘ್ರವಾಗಿ ಅಭಿವೃದ್ಧಿ ಹೊಂದುತ್ತಿರುವ ಭಾರತಕ್ಕೆ ಅಮೆರಿಕದ ಅವಶ್ಯಕತೆ ಇದೆ. ಹೀಗಾಗಿ ಜಗತ್ತಿನ ಅತಿ ಹಳೆಯ ಪ್ರಜಾಪ್ರಭುತ್ವ ಮತ್ತು ಅತಿದೊಡ್ಡ ಪ್ರಜಾಪ್ರಭುತ್ವಗಳ ನಡುವಿನ ಗೆಳೆತನ ತುಂಬಾ ಸಹಜವಾಗಿದೆ ಎನ್ನಲಡ್ಡಿಯಿಲ್ಲ.