Saturday, 23rd November 2024

ಯಡಿಯೂರಪ್ಪನವರನ್ನು ದುರ್ಬಲಗೊಳಿಸಿದರೆ ಬಿಜೆಪಿಗೇನು ಲಾಭ ?

ಬೇಟೆ

ಜಯವೀರ ವಿಕ್ರ,ಮ್‌ ಸಂಪತ್‌ ಗೌಡ

ಮುಖ್ಯಮಂತ್ರಿ ಯಡಿಯೂರಪ್ಪನವರ ಗ್ರಹಚಾರ, ಒಟ್ಟಾರೆ ಅವರಿಗೂ ಪಕ್ಷದ ಹೈಕಮಾಂಡಿಗೂ ಸರಿ ಬರೊಲ್ಲ. ಅವರಿಗೆ ಯಾವತ್ತೂ ದಿಲ್ಲಿ ಅಂದ್ರೆ ಅಷ್ಟಕ್ಕಷ್ಟೇ. ಅವರು ಮುಖ್ಯಮಂತ್ರಿ ಆದಾಗಲೆಲ್ಲ ಹೈಕಮಾಂಡ್ ಜತೆಗೆ ಒಂದಿಂದು ತಕರಾರು ಇದ್ದಿದ್ದೇ. ದಿಲ್ಲಿ ನಾಯಕರನ್ನು ಸಂತೈಸಲು ಅವರಿಗೆ ಆಗಲೂ ಸಾಧ್ಯವಾಗಲಿಲ್ಲ. ಈಗಲೂ ಪರದಾಡುತ್ತಿದ್ದಾರೆ.

ಇದು ಸಮನ್ವಯದ ಕೊರತೆಯೋ, ಸಂವಹನದ ಕೊರತೆಯೋ ಗೊತ್ತಾಗುತ್ತಿಲ್ಲ. ದಿಲ್ಲಿಯಲ್ಲಿ ಆಗಲೂ ಅವರ ಪರವಾಗಿ ಮಾತಾಡುವವರು ಇರಲಿಲ್ಲ. ಈಗಲೂ ಅವರ ಪರ ವಹಿಸಿಕೊಂಡು ಮಾತಾಡುವವರು ಇಲ್ಲ. ಹೀಗಾಗಿ ಅವರ ಬಗ್ಗೆ ದಿಲ್ಲಿ ನಾಯಕರಿಗೆ ಸದಾ ನಕಾರಾತ್ಮಕ ಸಂಗತಿಗಳೇ ಫೀಡ್ ಆಗುತ್ತವೆ. ಹಾಗಲ್ಲ, ಹೀಗೆ ಎಂದು ಹೇಳುವವರು ಯಾರೂ ಇಲ್ಲ. ಆಗ ಅನಂತಕುಮಾರ್ ಇದ್ದರು. ಅವರು ಯಡಿಯೂರಪ್ಪ ಅವರಿಗೆ ಮಗ್ಗುಲ ಮುಳ್ಳಾಗಿದ್ದರು. ಬೆಂಗಳೂರಿನಲ್ಲಿ ನಡೆದಿದ್ದೆಲ್ಲ ಕ್ಷಣ ಮಾತ್ರದಲ್ಲಿ ದಿಲ್ಲಿ ನಾಯಕರಿಗೆ ರವಾನೆಯಾಗುತ್ತಿತ್ತು.

ಯಡಿಯೂರಪ್ಪನವರು ಎಲ್ಲಾ ತೂತುಗಳನ್ನು ಮುಚ್ಚಿ ಬಂದೋಬಸ್ತ್ ಮಾಡಿದರೂ, ಎಷ್ಟೇ ಕಷ್ಟಪಟ್ಟು ಸರಿ ಮಾಡಿದರೂ, ಅನಂತಕುಮಾರ್ ತೇಪೆಯನ್ನು ಎತ್ತಿ, ಸೋರಿಕೆ ಮುಂದುವರಿಯುವಂತೆ ಕಾಳಜಿವಹಿಸುತ್ತಿದ್ದರು. ಈಗ ಆ ಕೆಲಸವನ್ನು ಹಲವರು ಮಾಡುತ್ತಿದ್ದಾರೆ. ಕೇಂದ್ರದಲ್ಲಿ ಇಬ್ಬರು ಮಂತ್ರಿಗಳಿದ್ದರೂ ಅವರಾರೂ ಯಡಿಯೂರಪ್ಪನವರ ಪರವಾಗಿ ಮಾತಾಡುವುದಿಲ್ಲ.
ಮಾತಾಡುವಂಥ ಸಂಬಂಧವನ್ನೂ ಯಡಿಯೂರಪ್ಪನವರು ಹೊಂದಿಲ್ಲ. ಹೀಗಾಗಿ ಅವರಾದರೂ ಯಾಕೆ ಇವರ ಪರವಾಗಿ
ಮಾತಾಡಬೇಕು? ಇನ್ನು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್ ಅವರು ಎಂದೂ  ಯಡಿಯೂರಪ್ಪನವರ ಪರವಾಗಿದ್ದವರಲ್ಲ.

ಅವರಿಗೆ ವ್ಯಕ್ತಿಗಿಂತ ಸಂಘಟನೆಯ ಹಿತ ಮುಖ್ಯ. ಒಂದು ವೇಳೆ ಅವರೂ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದರೆ,
ಯಡಿಯೂರಪ್ಪನವರ ಚರಮಗೀತೆಗೆ ಅವರೇ ಮೊದಲ ಪಲ್ಲವಿ ಬರೆಯುತ್ತಾರೆ. ಕರ್ನಾಟಕದಿಂದ ಯಾರೇ ಹೋದರೂ, ಅವರಿಗೆ ದಿಲ್ಲಿ ನಾಯಕರು ಸಿಗುತ್ತಾರೆ. ಕೆಲವರು ಅಪಾಯಿಂಟ್‌ಮೆಂಟ್ ಇಲ್ಲದೇ ಭೇಟಿ ಮಾಡಿ ಬರುತ್ತಾರೆ. ಆದರೆ ಮುಖ್ಯಮಂತ್ರಿ
ಯಡಿಯೂರಪ್ಪನವರಿಗೆ ಮಾತ್ರ ಯಾರೂ ಸಿಗುವುದಿಲ್ಲ. ಅವರ ಮಂತ್ರಿಮಂಡಲದ, ಕಾಂಗ್ರೆಸ್ಸಿನಿಂದ ವಲಸೆ ಬಂದ ರಮೇಶ ಜಾರಕಿಹೊಳಿ, ವಾರದಲ್ಲಿ ಎರಡು ದಿನ ದಿಲ್ಲಿಯಲ್ಲಿರುತ್ತಾರೆ. ಅವರಿಗೆ ಪ್ರಧಾನಿ ಹೊರತುಪಡಿಸಿ ಮಿಕ್ಕವರೆಲ್ಲ ಸಿಗುತ್ತಾರೆ. ಆದರೆ ಯಡಿಯೂರಪ್ಪನವರು ಮೋದಿ, ಅಮಿತ್ ಶಾ ಅವರನ್ನು ಭೇಟಿ ಮಾಡಲು ಹರಸಾಹಸ ಮಾಡಬೇಕು.

ಹಿಂದಿನ ಲೋಕಸಭಾ ಅಧಿವೇಶನದ ಸಂದರ್ಭದಲ್ಲಿ ಯಡಿಯೂರಪ್ಪನವರು ದಿಲ್ಲಿಗೆ ಹೋದಾಗ, ಬಹಳ ಪ್ರಯಾಸಪಟ್ಟು ಸಂಸತ್ ಭವನದಲ್ಲಿರುವ ಪ್ರಧಾನಿ ಕಚೇರಿಯಲ್ಲಿ ಪ್ರಯಾಸಪಟ್ಟು ಮೋದಿಯವರನ್ನು ಏಳು ನಿಮಿಷ ಭೇಟಿ ಮಾಡಿದರು. ಆಗ
ಅಮಿತ್ ಶಾ ಭೇಟಿಗೆ ಸಿಕ್ಕಿರಲಿಲ್ಲ. ಯಡಿಯೂರಪ್ಪನವರ ಸಮಸ್ಯೆಗೆ ನಡ್ಡಾ ಅವರಿಂದ ಪರಿಹಾರ ಸಿಗುವುದಿಲ್ಲ. ಹೀಗಾಗಿ ಅವರನ್ನು ಭೇಟಿ ಮಾಡಿ ಪ್ರಯೋಜನವಿಲ್ಲ. ಯಡಿಯೂರಪ್ಪ ನವರ ಸಮಸ್ಯೆಗೆ ಡಾಕ್ಟರೇ ಚಿಕಿತ್ಸೆ ನೀಡಬೇಕು. ಆದರೆ ಅವರು
ಕಂಪೌಂಡರ್‌ನನ್ನು ಕಂಡು ತೃಪ್ತಿಪಟ್ಟುಕೊಳ್ಳುವಂತಾಗಿದೆ.

ಇದರಿಂದ ಕಾಯಿಲೆ ವಾಸಿಯಾಗುವ ಬದಲು ಉಲ್ಭಣಗೊಳ್ಳುತ್ತಲೇ ಇದೆ. ಆದರೆ ಒಂದು ಮಾತಂತೂ ನಿಜ. ಯಡಿಯೂರಪ್ಪ ನವರು ಇಂಥ ಟ್ರಿಟ್‌ಮೆಂಟ್‌ಗೆ ಅರ್ಹರಲ್ಲ. ಕರ್ನಾಟಕದಲ್ಲಿ ಬಿಜೆಪಿಯನ್ನು ಬೇರುಮಟ್ಟದಿಂದ ಕಟ್ಟಿದವರೇ ಅವರು. ಇಂದಿಗೂ ಬಿಜೆಪಿಯಲ್ಲಿ ಅವರ ಎತ್ತರಕ್ಕೆ ಏರಿದ ಮತ್ತೊಬ್ಬ ನಾಯಕನಿಲ್ಲ. ಯಡಿಯೂರಪ್ಪನವರನ್ನು ಇಷ್ಟೆ ಹಗುರವಾಗಿ ಕಾಣುವ ಬದಲು, ಅವರನ್ನು ಪದಚ್ಯುತಗೊಳಿಸಬಹುದಿತ್ತು. ಆದರೆ ಅವರ ಸಮಕ್ಕೆ ನಿಲ್ಲಬಲ್ಲ ಮತ್ತೊಬ್ಬ ನಾಯಕನಿಲ್ಲ. ಹೀಗಾಗಿ ಎಪ್ಪತ್ತೈದು ವರ್ಷ ದಾಟಿದವರಿಗೆ ಪ್ರಮುಖ ಸ್ಥಾನ ನೀಡಬಾರದು ಎಂಬ ಪಕ್ಷದ ಸಿದ್ಧಾಂತವನ್ನು ಯಡಿಯೂರಪ್ಪನವರ ವಿಷಯದಲ್ಲಿ ಸಡಿಲಿಸಿರುವುದು.

ಕರ್ನಾಟಕದಲ್ಲಿ ಅವರನ್ನು ಬಿಟ್ಟರೆ ಚುನಾವಣೆಯಲ್ಲಿ ಗೆಲ್ಲಿಸುವಂಥ ಛಾತಿಯಿರುವ ಮತ್ತೊಬ್ಬ ನಾಯಕ ಇಲ್ಲ. ಇದನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕು. ಹೀಗಿರುವಾಗ, ಯಡಿಯೂರಪ್ಪನವರ ವಿಷಯದಲ್ಲಿ ಪಕ್ಷ ಔದಾರ್ಯ ತೋರಲೇಬೇಕು. ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಬೇಕು ಎಂದು ದಿಲ್ಲಿ ನಾಯಕರು ತೀರ್ಮಾನಿಸಿದರೂ, ಅದನ್ನು ಬಹಳ ನಯನಾಜೂಕಿನಿಂದ ಮಾಡಬೇಕು. ಸ್ವತಃ ಯಡಿಯೂರಪ್ಪನವರೇ ನಾನು ನಿರ್ಗಮಿಸುತ್ತಿದ್ದೇನೆ ಎಂದು ಬೇಸರವಿಲ್ಲದೇ ಹೇಳಬೇಕು.

ಅದು ಬಿಟ್ಟು, ಅವರ ಮನಸ್ಸನ್ನು ಘಾಸಿಗೊಳಿಸಿ ಅವರನ್ನು ಮನೆಗೆ ಕಳಿಸಿದರೆ, ಬಿಜೆಪಿ ಅದರ ದುರ್ದಾನ ಪಡೆಯಲೇಬೇಕು. ಪರಿಸ್ಥಿತಿ ಹೀಗಿರುವಾಗ, ದಿಲ್ಲಿ ನಾಯಕರು ಯಡಿಯೂರಪ್ಪನವರನ್ನು ಇನ್ನಷ್ಟು ಮರ್ಯಾದೆಯಿಂದ ನಡೆಸಿಕೊಳ್ಳಬೇಕು. ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಿದ್ದರೆ, ಅದರಲ್ಲಿ ಯಡಿಯೂ ರಪ್ಪನವರ ಕೊಡುಗೆಯೂ ಇದೆ. ಮೋದಿಯೊಬ್ಬರೇ ಇವೆಲ್ಲಕ್ಕೂ ಕಾರಣರಲ್ಲ. ಈ ಸಂಗತಿಯನ್ನು ದಿಲ್ಲಿ ನಾಯಕರು ಅರಿಯ ಬೇಕು.

ಯಡಿಯೂರಪ್ಪನವರ ಆಡಳಿತದಲ್ಲಿ ಎಲ್ಲವೂ ಸರಿಯಿಲ್ಲದಿರಬಹುದು. ಅದಕ್ಕೆ ಅವರ ಸ್ವಭಾವ ಮತ್ತು ವಯಸ್ಸು ಕಾರಣವಿರ ಬಹುದು. ಅವರಿಗೆ ಸರಿಸಮಾನರಾಗಿ ಬುದ್ಧಿ ಹೇಳುವ ಪರಿವಾರದ ಹಿರಿಯರೂ ಇಲ್ಲ. ಅಷ್ಟಲ್ಲದೇ ಬುದ್ಧಿಮಾತುಗಳನ್ನು ಅವರು ಕೇಳಿಯೇ ಬಿಡುತ್ತಾರೆ ಎಂದಿಲ್ಲ. ಇದಕ್ಕೆ ಅವರ ಸ್ವಭಾವ ಕಾರಣ. ಈ ಕೆಲಸವನ್ನು ದಿಲ್ಲಿಯ ನಾಯಕರು, ಅದರಲ್ಲೂ ಮುಖ್ಯ ವಾಗಿ ಅಮಿತ್ ಶಾ ಮಾಡಬಲ್ಲರು. ಆದರೆ ಅವರಿಗೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು ಎಂಬ ಆಸೆ
ಇದೆಯೋ ಇಲ್ಲವೋ ಗೊತ್ತಿಲ್ಲ. ಒಂದು ವೇಳೆ ಅಂಥ ಆಸೆ ಇದ್ದಿದ್ದರೆ, ಅವರು ಅದನ್ನು ಹೇಗಾದರೂ ಪ್ರಕಟ ಪಡಿಸುತ್ತಿದ್ದರು. ಹಾಗೆಂದು ಯಡಿಯೂರಪ್ಪ ನವರನ್ನುವಯಸ್ಸಿನ ಕಾರಣ ನೀಡಿ ಕೆಳಗಿಳಿಸುವ ಛಾತಿಯನ್ನೂ ತೋರುತ್ತಿಲ್ಲ.

ಇವೆಲ್ಲವುಗಳ ಪರಿಣಾಮವಾಗಿ, ರಾಜ್ಯದಲ್ಲಿ ಪಕ್ಷ ಬಳಲುತ್ತಿದೆ, ನೈತಿಕವಾಗಿ ಸೋಲುತ್ತಿದೆ, ಸೊರಗುತ್ತಿದೆ. ಅಧಿಕಾರವನ್ನು ಉಳಿಸಿ ಕೊಳ್ಳಲು ಯಡಿಯೂರಪ್ಪನವರು ದಿನಂಪ್ರತಿ ಹೆಣಗುವಂತಾಗಿದೆ. ತಮ್ಮ ಮಾತು ಕೇಳಿ ಬಂದವರಿಗೆ ಮಂತ್ರಿಗಳನ್ನಾಗಿ ಮಾಡಲು ಸಾಧ್ಯವಾಗುತ್ತಿಲ್ಲ. ಸಂಪುಟ ವಿಸ್ತರಣೆಗೆ ಅನುಮತಿ ಪಡೆಯಲು ಇನ್ನಿಲ್ಲದ ಹರಸಾಹಸ ಮಾಡುವಂತಾಗಿದೆ. ಬೇರೆ ಅಭಿವೃದ್ಧಿ ಕಾರ್ಯಗಳತ್ತ ಗಮನಹರಿಸಲು ಸಾಧ್ಯವಾಗುತ್ತಿಲ್ಲ. ಕಳೆದ ಎರಡು – ಮೂರು ತಿಂಗಳಿನಿಂದ ಮಂತ್ರಿ ಮಂಡಳ ವಿಸ್ತರಣೆಯೇ ಪ್ರಧಾನ ವಿಷಯವಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್‌ನಿಂದ ಬಂದ ಶಾಸಕರನ್ನೆಲ್ಲ ಸಚಿವರನ್ನಾಗಿ ಮಾಡುತ್ತೇನೆ ಎಂದು ಯಡಿಯೂರಪ್ಪ ವಚನ ನೀಡಿದ್ದರು.

ಈಗ ಒಂದಿಂದು ಕಾರಣ ನೀಡಿ ಅವರಿಗೆ ಮಂತ್ರಿಗಿರಿ ತಪ್ಪಿಸುವ, ಅನಗತ್ಯವಾಗಿ ಮುಂದೂಡುವ ಪ್ರಯತ್ನಗಳು ನಡೆಯುತ್ತಲೇ ಇವೆ. ಇದನ್ನು ನೋಡಿದರೆ, ಇನ್ನು ಮುಂದೆ ಯಾರೂ ಬಿಜೆಪಿಗೆ ಬರುವ ಸಾಹಸವನ್ನು ಅಪ್ಪಿತಪ್ಪಿಯೂ ಮಾಡುವುದಿಲ್ಲ.
ಅಷ್ಟಕ್ಕೂ ಇಲ್ಲಿ ಕೇಳಲೇಬೇಕಾದ ಒಂದು ಪ್ರಶ್ನೆಯಿದೆ. ಅದೇನೆಂದರೆ, ಯಡಿಯೂರಪ್ಪನವರನ್ನು ದುರ್ಬಲಗೊಳಿಸಿದರೆ ಬಿಜೆಪಿಗೇನು ಲಾಭ? ಇದರಿಂದ ಬಿಜೆಪಿ ಸಾಧಿಸುವುದಾದರೂ ಏನು? ಇದರಿಂದ ದಿಲ್ಲಿ ನಾಯಕರೇನು ಸಾಧಿಸಿದಂತಾಯಿತು? ತೊಟ್ಟಿಲು ತೂಗುವವರು, ಮಗುವನ್ನು ಚಿವುಟುವವರು ಒಬ್ಬರೇ ಆದರೆ ಇದೇ ಸಮಸ್ಯೆ.

ಬದಲಿ ನಾಯಕರನ್ನು ಸಿದ್ಧಪಡಿಸಿಕೊಂಡು ಯಡಿಯೂರಪ್ಪನವರನ್ನು ಕೆಣಕಲು ಮುಂದಾದರೆ ಪರವಾಗಿಲ್ಲ. ಆದರೆ ಯಡಿಯೂರಪ್ಪ ನವರನ್ನು ತೆಗೆದರೆ ಯಾರು ಎಂಬ ಪ್ರಶ್ನೆಯನ್ನು ಬೃಹದಾಕಾರವಾಗಿ ಮುಂದಿಟ್ಟುಕೊಂಡು, ಅವರ ಪದಚ್ಯುತಿ ಬಗ್ಗೆ ಯೋಚಿಸುವುದೇ ಮೂರ್ಖತನದ ಪರಮಾವಧಿ. ಮುಂದಿನ ಚುನಾವಣೆವರೆಗೆ ಯಡಿಯೂರಪ್ಪನವರನ್ನು ಅಧಿಕಾರದಲ್ಲಿ
ಮುಂದುವರಿಸುವುದಿಲ್ಲ ಎಂಬುದೇ ದಿಲ್ಲಿ ನಾಯಕರ ನಿರ್ಧಾರವಾದರೆ, ಆಗಲೂ ಅವರು ಯಡಿಯೂರಪ್ಪನವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಮುಂದುವರಿಯುವುದು ಸುರಕ್ಷಿತವಲ್ಲ.

ಯಡಿಯೂರಪ್ಪನವರನ್ನು ತೆಗೆಯದಿದ್ದರೆ ಕಷ್ಟ, ತೆಗೆದರೆ ಇನ್ನೂ ಕಷ್ಟ ಎಂದಾದರೆ, ದೊಡ್ಡ ಕಷ್ಟವನ್ನು ಆಹ್ವಾನಿಸದಿರುವುದು ಬುದ್ಧಿವಂತಿಕೆ. ಈಗ ದಿಲ್ಲಿ ನಾಯಕರ ಮುಂದೆ ಇವೆರಡರ ಹೊರತಾಗಿ ಬೇರೆ ಆಯ್ಕೆಗಳಿಲ್ಲ. ಆದರೆ ಸಾರ್ವಜನಿಕ ಚಿತ್ತಭಿತ್ತಿಯಲ್ಲಿ ಈ ವಿಷಯವನ್ನು ಚರ್ಚೆಗೆ ದೀರ್ಘಕಾಲದವರೆಗೆ ಎಳೆದಷ್ಟೂ ಅದರ ಹಾನಿ ಬಿಜೆಪಿಗೇ. ಈಗಾಗಲೇ ಈ ಹಾನಿಯನ್ನು ಬಿಜೆಪಿ ಅನುಭವಿಸುತ್ತಿದೆ. ಅಧಿಕಾರಕ್ಕೆ ಬಂದಾಗಲೆಲ್ಲ ರಾಜ್ಯದಲ್ಲಿ ಬಿಜೆಪಿ, ಆಂತರಿಕ ಸಮಸ್ಯೆಯಿಂದ ಬಳಲುತ್ತಿರುವುದನ್ನು ನೋಡಿ ದ್ದೇವೆ.

ಬಿಜೆಪಿಗೆ ಪ್ರತಿಪಕ್ಷಗಳು ಮಾಡಿದ ಹಾನಿಗಿಂತ, ಪಕ್ಷದಲ್ಲಿರುವವರು ಮಾಡಿದ ಹಾನಿಯೇ ಜಾಸ್ತಿ. ಈಗಲೂ ಅಂಥದೇ ವಾತಾವರಣ ಎದುರಾಗಿದೆ. ಯಡಿಯೂರಪ್ಪನವರ ಕಾರ್ಯವೈಖರಿ ಇಷ್ಟವಿಲ್ಲದಿದ್ದರೆ, ಅದನ್ನು ಸರಿಪಡಿಸಿಕೊಳ್ಳುವಂತೆ ಹೇಳಬಹುದು. ಚುನಾವಣಾ ಬರುವ ಹೊತ್ತಿಗೆ, ಎಂಬತ್ತು ವರ್ಷ ತಲುಪುವ ಯಡಿಯೂರಪ್ಪನವರ ದೈಹಿಕ ಸಾಮರ್ಥ್ಯ ಪ್ರಮುಖ ಪರಿಗಣನೆ ಯಾದರೆ, ಆ ಕುರಿತಾದರೂ ದಿಲ್ಲಿ ನಾಯಕರು ಒಂದು ನಿರ್ಧಾರಕ್ಕೆ ಬರಬೇಕು. ಅದು ಬಿಟ್ಟು, ಯಡಿಯೂರಪ್ಪ ನವರಂಥ ಹಿರಿಯ ನಾಯಕರನ್ನು ಮಾನಸಿಕವಾಗಿ ಹಿಂಸಿಸುವುದು, ಒತ್ತಡಕ್ಕೀಡು ಮಾಡುವುದು ಪಕ್ಷದ ದೃಷ್ಟಿಯಿಂದ ಉತ್ತಮ ಬೆಳವಣಿಗೆ ಯಲ್ಲ. ಇಂಥ ಸಂದರ್ಭದಲ್ಲಿ ದಿಟ್ಟ ಮತ್ತು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗದಿದ್ದರೆ, ಅದು ದಿಲ್ಲಿ ನಾಯಕರ ಅಸಾಮರ್ಥ್ ವನ್ನೂ ತೋರಿಸುತ್ತದೆ.

ದಿಲ್ಲಿ ನಾಯಕರು ಸಹ ಈಗ ಒತ್ತಡಕ್ಕೋ, ಸತ್ವಪರೀಕ್ಷೆಗೋ ಗುರಿಯಾದಂತಿದೆ. ಅವರಿಗೆ ಒಂದು ಖಚಿತ ನಿರ್ಧಾರಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ರಾಜಕೀಯದಲ್ಲಿ ಸ್ಪಷ್ಟ ನಿರ್ಧಾರಕ್ಕೆ ಬಾರದಿರುವುದು ಮತ್ತು ದಿನ ದೂಡುವುದು ಸಹ ಒಂದು ಜಾಣ್ಮೆಯ ನಿರ್ಧಾರ ಎಂದು ಭಾವಿಸಲಾಗುತ್ತದೆ. ಅಷ್ಟರಮಟ್ಟಿಗೆ ದಿಲ್ಲಿ ನಾಯಕರು ಜಾಣ್ಮೆ ಮೆರೆಯುತ್ತಿದ್ದಾರಾ, ಗೊತ್ತಿಲ್ಲ. ಒಂದು ವೇಳೆ ಯಡಿಯೂರಪ್ಪನವರನ್ನು ಮುಂದುವರಿಸುವ ಇರಾದೆ ದಿಲ್ಲಿ ನಾಯಕರಿಗೆ ಇಲ್ಲ ಎಂದಾದರೆ, ಅದನ್ನು ಅವರ (ಯಡಿಯೂರಪ್ಪ) ಮುಂದೆ ಸ್ಪಷ್ಟಪಡಿಸಿ, ಅವರನ್ನು ವಿಶ್ವಾಸಕ್ಕೆ ಪಡೆಯಬೇಕು.

ರಾಜಿ ಸೂತ್ರ ಹೆಣೆಯುವ ಪ್ರಕ್ರಿಯೆಯಲ್ಲಿ ಅವರೂ ಇರಬೇಕು. ಸ್ವಯಂ ಇಚ್ಛೆಯಿಂದ ತಾನು ಕೆಳಗಿಳಿಯುತ್ತೀದ್ದೇನೆ ಎಂಬ
ಸಂದೇಶ ರಾಜ್ಯದ ಜನತೆಗೆ ರವಾನೆಯಾಗುವಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಯಡಿಯೂರಪ್ಪನವರ ನಂತರ ಯಾರೇ ಅಧಿಕಾರಕ್ಕೆ ಬರಲಿ, ಸುರಳೀತವಾಗಿ ಆಡಳಿತ ನಡೆಸಲು ಅವರು (ಯಡಿಯೂರಪ್ಪ) ಬಿಡುವುದಿಲ್ಲ ಎಂಬುದನ್ನು ದಿಲ್ಲಿ ನಾಯಕರು ಮನಗಾಣಬೇಕು. ಇಲ್ಲಿ ಹೇಗೆ ಆಟ ಕೆಡಿಸಬೇಕು ಎಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ. ಕೆಜೆಪಿ ಮಾಡಿ, ಬಿಜೆಪಿಗೆ ಎಂಥ ಏಟು ಕೊಟ್ಟರು ಎಂಬುದನ್ನು ಯಾರೂ ಮರೆತಿಲ್ಲ.

ಇಂದಿಗೂ ಅವರು ರಾಜ್ಯದ ಮಾಸದ, ಜನಮಾನಸದ ನಾಯಕ. ಅವರಿಗೆ ಗೆಲ್ಲಿಸುವುದು, ಸೋಲಿಸುವುದು ಕರತಲಾಮಲಕ. ಯಾವ ಕಿವಿ ತಿರುವಿದರೆ ಬಾಗಿಲು ತೆರೆದುಕೊಳ್ಳುತ್ತದೆ ಎಂಬುದು ಅವರಿಗೆ ಗೊತ್ತಿದೆ. ಅವರ ಸಹಕಾರ, ಬೆಂಬಲವಿಲ್ಲದೇ ಆಡಳಿತ ನಡೆಸುವುದು ಸುಲಭವಲ್ಲ. ಇವೆ ಗೊತ್ತಿದ್ದೂ ದಿಲ್ಲಿ ನಾಯಕರು ‘ರಿಸ್ಕಿ ಹೊಡೆತ’ಗಳನ್ನು ಯಾಕೆ ಹೊಡೆಯುತ್ತಿದ್ದಾರೋ ಗೊತ್ತಾಗುತ್ತಿಲ್ಲ. ಈ ವಿಷಯದಲ್ಲಿ  ಅವರು ತಡ ಮಾಡಿದಷ್ಟೂ ಅದರ ಪರಿಣಾಮ ಪಕ್ಷದ ಮೇಲಾಗುತ್ತದೆ.

ಇನ್ನೊಂದು ತಮಾಷೆಯ ಸಂಗತಿಯೇನು ಗೊತ್ತಾ? ರಾಜ್ಯದಲ್ಲಿ ಯಾವ ಬಿಜೆಪಿ ನಾಯಕನೂ ಯಡಿಯೂರಪ್ಪನವರ ನಾಯ ಕತ್ವಕ್ಕೆ ಸೆಡ್ಡು ಹೊಡೆದಿಲ್ಲ. ಅವರ ವಿರುದ್ಧ ಬಂಡಾಯದ ಬಾವುಟವನ್ನು ಯಾವ ನಾಯಕನೂ ಹಾರಿಸಿಲ್ಲ. ಅವರ ವಿರುದ್ಧ ಯಾರೋ ಒಂದಷ್ಟು ನಾಯಕರು ಗುಂಪು ಕಟ್ಟಿಕೊಂಡು ಮಸಲತ್ತು ನಡೆಸುತ್ತಿಲ್ಲ. ಯಡಿಯೂರಪ್ಪನವರನ್ನು ಎದುರು ಹಾಕಿಕೊಂಡು ಯಾವ ನಾಯಕನೂ ಗುಟುರು ಹಾಕುತ್ತಿಲ್ಲ. ಆದರೂ ಅವರನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂಬ ದರ್ದು ದಿಲ್ಲಿ ನಾಯಕರಿಗೇಕೆ? ಗೊತ್ತಾಗುತ್ತಿಲ್ಲ.

ಯಡಿಯೂರಪ್ಪನವರ ವಿಷಯದಲ್ಲಿ ಇನ್ನಷ್ಟು ಪ್ರಬುದ್ಧ, ಪರಾಮರ್ಶಿತ ಮತ್ತು ಪಕ್ವವಾದ ನಿರ್ಧಾರ ತೆಗೆದುಕೊಳ್ಳುವ
ಅಗತ್ಯವಿದೆ. ಈಗ ಉದ್ಭವಿಸಿರುವ ಗೊಂದಲವನ್ನು ಯಾರು ಸೃಷ್ಟಿಸಿದ್ದಾರೋ ಅವರೇ ನಿವಾರಿಸಬೇಕಿದೆ. ಅಷ್ಟೇ.