ಅಶ್ವತ್ಥಕಟ್ಟೆ
ranjith.hoskere@gmail.com
ಪ್ರತಿಪಕ್ಷಗಳಿರುವುದೇ ಟೀಕೆ, ಟಿಪ್ಪಣಿ ಮಾಡುವುದಕ್ಕೆ. ಅವರೂ ಆಡಳಿತ ಪಕ್ಷದವರ ರೀತಿಯಲ್ಲಿ ಸರಕಾರದ ಎಲ್ಲ ತೀರ್ಮಾನಗಳನ್ನು ಒಪ್ಪಿಕೊಂಡು
ಹೋದರೆ ಅವರನ್ನು ಪ್ರತಿಪಕ್ಷ ಎನ್ನಲು ಸಾಧ್ಯವೇ? ಸದನವನ್ನು ನಡೆಸುವುದು ಸರಕಾರ ಹಾಗೂ ಸಭಾಧ್ಯಕ್ಷರ ಹೊಣೆಯಾಗಿರುತ್ತದೆ.
ಈ ಹಿಂದೆ ಎಸ್.ಎಂ. ಕೃಷ್ಣ ಅವರು ಮುಖ್ಯ ಮಂತ್ರಿಯಾಗಿದ್ದ ಸಮಯದಲ್ಲಿ ಎಂ.ವಿ. ವೆಂಕಟಪ್ಪ ಅವರು ಸಭಾಧ್ಯಕ್ಷರಾಗಿದ್ದರು. ಆಗ ಕಲಾಪದ ಒಂದು ಹಂತದಲ್ಲಿ ಆಡಳಿತ-ಪ್ರತಿಪಕ್ಷದ ಶಾಸಕರ ನಡುವೆ ವಾಕ್ಸಮರ ನಡೆದಿತ್ತು. ಈ ವೇಳೆ ಎರಡೂ ಕಡೆಯವರೂ ಸಭಾಧ್ಯಕ್ಷರ ಮಾತು ಆಲಿಸುವ ಸ್ಥಿತಿಯಲ್ಲಿ ಇರಲಿಲ್ಲ. ಹಲವು ಬಾರಿ ಎರಡೂ ಕಡೆಯವರನ್ನು ಸಂತೈಸುವ ಪ್ರಯತ್ನವನ್ನು ಸಭಾಧ್ಯಕ್ಷ ವೆಂಕಟಪ್ಪ ಅವರು ಮಾಡಿದ್ದರೂ, ಪ್ರಯೋಜನಕ್ಕೆ ಬರಲಿಲ್ಲ. ಆಗ ಸಭಾಧ್ಯಕ್ಷರು ಸದನವನ್ನು ಹತೋಟಿಗೆ ತರಲು ಎರಡೂ ಕಡೆಯ ಶಾಸಕರ ವಿರುದ್ಧ ಟೀಕಾಪ್ರಹಾರ ನಡೆಸುತ್ತಿದ್ದಂತೆ ಇಡೀ ಸದನ ಮೌನಕ್ಕೆ ಶರಣಾಯಿತು.
ಆದರೆ ಆ ಹಂತದಲ್ಲಿ ಎದ್ದು ನಿಂತ ಪಿಜಿಆರ್ ಸಿಂಧ್ಯಾ ಅವರು, ‘ಮಕ್ಕಳು ಗಲಾಟೆ ಮಾಡಿದಾಗ ತಾಯಿ ಸಂತೈಸಿ ಬುದ್ಧಿವಾದ ಹೇಳುವಳೇ ಹೊರತು, ಬೈಯುವುದು, ಹೊಡೆಯುವುದು ಮಾಡುವುದಿಲ್ಲ. ಅದೇ ರೀತಿ ಈ ಕಲಾಪಕ್ಕೆ ಸಭಾಧ್ಯಕ್ಷರೇ ತಾಯಿಯಂತೆ. ತಾಯಿ ಸ್ಥಾನದಲ್ಲಿರುವವರು, ಮಕ್ಕಳು (ಶಾಸಕರು) ತಪ್ಪು ಮಾಡುತ್ತಿದ್ದಂತೆ ಬುದ್ಧಿವಾದ ಹೇಳಬೇಕೆ ಹೊರತು, ಬೈಯುವುದಲ್ಲ’ ಎಂದು ಹೇಳಿದ್ದರಂತೆ. ಸಿಂಧ್ಯಾ ಅವರ ಮಾತನ್ನು ವೆಂಕಟಪ್ಪ ಅವರೂ ಒಪ್ಪಿಕೊಂಡು, ತಮ್ಮ ಅಂದಿನ ನಡೆಯನ್ನು ಸರಿಪಡಿಸಿಕೊಂಡಿದ್ದರಂತೆ.
ಕಳೆದ ವಾರವಷ್ಟೇ ಮುಕ್ತಾಯಗೊಂಡ ೧೬ನೇ ವಿಧಾನ ಸಭೆಯ ಮೊದಲ ಅಧಿವೇಶನದ ಕೊನೆಯ ಮೂರು ದಿನದ ಕಲಾಪವನ್ನು ನೋಡಿದ ಬಳಿಕ ಈ ಇಡೀ ಪ್ರಸಂಗ ನೆನಪಾ ಯಿತು. ಹೌದು, ಅಂದಿನ ಕಲಾಪದಲ್ಲಿ ಬಿಜೆಪಿ ಶಾಸಕರು ಉಪಸಭಾಧ್ಯಕ್ಷರ ಮೇಲೆ ಕಾಗದ ತೂರಿದರು ಎನ್ನುವ ಕಾರಣಕ್ಕೆ, ಶಾಸಕರನ್ನೇ ಅಮಾನತುಗೊಳಿಸಿ, ಬಳಿಕ ಪ್ರತಿ ಪಕ್ಷವೇ ಇಲ್ಲದೇ ಎರಡು ದಿನ ಅಽವೇಶನ ನಡೆಸಿದ ಅಪರೂಪದ ಘಟನೆಗೆ ಈ ಕಲಾಪ ಸಾಕ್ಷಿಯಾಯಿತು. ಕಲಾಪದ ಸಮಯದಲ್ಲಿ ವಿಧಾನಮಂಡಲದ ರೀತಿ- ರಿವಾಜನ್ನು ಮೀರಿ, ಅಸಂಸದೀಯವಾಗಿ, ಅಸಭ್ಯವಾಗಿ ನಡೆದುಕೊಂಡರೆ ಶಾಸಕರನ್ನು ಅವರ ಈ ನಡವಳಿಕೆಯ ಮೇಲೆ ಅಮಾನತು ಮಾಡುವುದಕ್ಕೆ ಸಭಾಧ್ಯಕ್ಷರು ಅಥವಾ ಸಭಾಪತಿಗಳಿಗೆ ಕಾನೂನಿನಲ್ಲಿ ಅವಕಾಶವಿದೆ. ಆದರೆ ಇಡೀ ದೇಶಕ್ಕೆ ಮಾದರಿ ಕಲಾಪ ನಡೆಸುವುದಕ್ಕೆ ಹೆಸರಾಗಿರುವ ಕರ್ನಾಟಕ ವಿಧಾನಮಂಡಲದಲ್ಲಿ, ಅದೆಷ್ಟೇ ವಾಕ್ಸಮರ, ಧರಣಿಗಳು ನಡೆದರೂ ‘ಶಾಸಕರ ಅಮಾನತು’ ಎನ್ನುವುದು ತೀರಾ ಅಪರೂಪದಲ್ಲಿ ಅಪರೂಪದ ಅಸ್ತ್ರ.
ಹತ್ತು-ಹಲವು ವಿಷಯಗಳನ್ನು ಮುಂದಿಟ್ಟುಕೊಂಡು, ಪ್ರತಿಪಕ್ಷದ ಶಾಸಕರು ಬಾವಿಯಲ್ಲಿಯೇ ಕಳೆದಿರುವ ಹಲವು ಉದಾಹರಣೆಗಳು ನಮ್ಮ ವಿಧಾನಸಭಾ ಇತಿಹಾಸದಲ್ಲಿ ದಾಖಲಾಗಿವೆ. ಆದರೂ ಶಾಸಕರ ಅಮಾನತು ಅಸವನ್ನು ವಿಧಾನಸಭೆ ಹಾಗೂ ಪರಿಷತ್ ಇತಿಹಾಸದಲ್ಲಿ ಒಂದೆರಡು ಬಾರಿ ಮಾತ್ರವೇ
ಪ್ರಯೋಗಿಸಿರುವ ಉದಾಹರಣೆಯಿದೆ. ಆದರೆ ಈ ಎಲ್ಲ ಸಂಪ್ರದಾಯಗಳನ್ನೂ ಮೀರಿ, ಕಳೆದ ಬುಧವಾರ ಬಿಜೆಪಿಯ ೧೦ ಶಾಸಕರನ್ನು ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅಮಾನತುಗೊಳಿಸಿದ್ದರು.
ಇದನ್ನು ಮುಂದಿಟ್ಟುಕೊಂಡು ಇಡೀ ಸದನವನ್ನೇ ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ಬಹಿಷ್ಕರಿಸುವ ಮೂಲಕ ಮೂರು ದಶಕಗಳ ಬಳಿಕ ಪ್ರತಿಪಕ್ಷದ ಆಲಿಸುವ ಕಿವಿಗಳಿ ಲ್ಲದೇ, ಸದನವನ್ನು ಬರೋಬ್ಬರಿ ಎರಡು ದಿನಗಳ ಕಾಲ ನಡೆಸಿದ ಒಂದು ಸಂಪ್ರದಾಯಕ್ಕೆ ಕರ್ನಾಟಕ ವಿಧಾನಸಭೆ ಸಾಕ್ಷಿಯಾಯಿತು. ಬಿಜೆಪಿಯ ೧೦ ಶಾಸಕರನ್ನು ಅಮಾನತು ಗೊಳಿಸಲು ಸ್ಪೀಕರ್ ಬಳಿ ‘ಕಾನೂನಾತ್ಮಕವಾಗಿ’ ಸಕಾರಣವಿರಬಹುದು. ಸಭಾಧ್ಯಕ್ಷ ಪೀಠದಲ್ಲಿದ್ದ ಉಪಾಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅವರ ಮೇಲೆ, ಬಿಜೆಪಿಯ ಶಾಸಕರು ಅನುಮೋದಿಸಲಾದ ಪ್ರಮುಖ ಬಿಲ್ ಪ್ರತಿಗಳನ್ನು ಹರಿದು ಎಸೆದರು ಎನ್ನುವ ಕಾರಣಕ್ಕೆ, ಇದನ್ನು ಅಸಭ್ಯ ವರ್ತನೆ
ಎಂದು ಪರಿಗಣಿಸಿ, ೧೦ ಶಾಸಕರನ್ನು ಅಮಾನತುಗೊಳಿಸುವ ನಿಲುವಳಿಯನ್ನು ಮಂಡಿಸಿದ ಸರಕಾರದ ತೀರ್ಮಾನಕ್ಕೆ ಖಾದರ್ ಅವರು ಒಪ್ಪಿಗೆ ನೀಡಿ, ‘ಧ್ವನಿ’ ಮತದ ಮೂಲಕ ಮಾಜಿ ಡಿಸಿಎಂ ಅಶ್ವತ್ಥನಾರಾಯಣ, ಮಾಜಿ ಸಚಿವ ಆರ್.ಅಶೋಕ್, ಇದೇ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿರುವ ಮೂರಕ್ಕೂ ಹೆಚ್ಚು ಶಾಸಕರು ಸೇರಿದಂತೆ ಒಟ್ಟು ೧೦ ಬಿಜೆಪಿಗರನ್ನು ಅಮಾನತುಗೊಳಿಸಿದರು.
ಬೆಂಗಳೂರಿನಲ್ಲಿ ನಡೆದ ಮಹಾಮೈತ್ರಿಕೂಟ ಸಭೆಗೆ ಆಗಮಿಸಿದ್ದ ವಿವಿಧ ಪಕ್ಷಗಳ ಮುಖ್ಯಸ್ಥರನ್ನು ಬರಮಾಡಿಕೊಳ್ಳಲು, ಅವರಿಗೆ ಅಗತ್ಯ ವ್ಯವಸ್ಥೆಯನ್ನು ಮಾಡಲು ೨೫ಕ್ಕೂ ಹೆಚ್ಚು ಐಎಎಸ್ ಅಧಿಕಾರಿಗಳನ್ನು ಸರಕಾರ ನೇಮಿಸಿತ್ತು. ಇದು ಯುಪಿಎಸ್ಸಿಯ ಶಿಷ್ಟಾಚಾರಕ್ಕೆ ವಿರುದ್ಧವಾಗಿದೆ ಎಂದು ಆರೋಪಿಸಿದ ಬಿಜೆಪಿ ಹಾಗೂ ಜೆಡಿಎಸ್ ಚರ್ಚೆಗೆ ಆಗ್ರಹಿಸಿ ಧರಣಿ ಆರಂಭಿಸಿದವು. ಆದರೆ ಚರ್ಚೆಗೆ ನೋಟಿಸ್ ಕೊಟ್ಟಿಲ್ಲವೆಂದು ಹೇಳಿದ ಸ್ಪೀಕರ್, ಬಿಜೆಪಿ ಶಾಸಕರು ಬಾವಿಯಲ್ಲಿದ್ದರೂ ಪ್ರಮುಖ ಬಿಲ್ಗಳನ್ನು ಅನುಮೋದಿಸಿ, ಮಧ್ಯಾಹ್ನದ ಭೋಜನ ವಿರಾಮಕ್ಕೂ ಅವಕಾಶ ನೀಡದೇ ಕಲಾಪವನ್ನು ನಡೆಸಿದ್ದರು.
ಇದನ್ನು ಖಂಡಿಸಿ ಬಿಜೆಪಿ ಶಾಸಕರು ಬಿಲ್ ಹರಿದು ಸ್ಪೀಕರ್ ಪೀಠದತ್ತ ಎಸೆದಿದ್ದರು. ಇದನ್ನು ಮುಂದಿಟ್ಟುಕೊಂಡು, ಖಾದರ್ ಅವರು ಕಲಾಪ ಆರಂಭವಾಗು ತ್ತಿದ್ದಂತೆ ೧೦ ಶಾಸಕರನ್ನು ಅಮಾನತುಗೊಳಿಸುವ ನಿಲುವಳಿಗೆ ಅವಕಾಶ ನೀಡಿ, ಅಮಾನತುಗೊಳಿಸಿ ಆದೇಶವನ್ನೇ ಹೊರಡಿಸಿದರು. ದಲಿತ ಉಪಾಧ್ಯಕ್ಷರ ಮೇಲೆ ಬಿಜೆಪಿಯಿಂದ ಅಪಮಾನವೆಂದು ಸ್ಪೀಕರ್ ನಡೆಯನ್ನು ಕಾಂಗ್ರೆಸಿಗರು ಸಮರ್ಥಿಸಿಕೊಂಡರೆ, ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ಸ್ಪೀಕರ್ ಆದೇಶ ಹಿಂಪಡೆಯುವ ತನಕ ಬಹಿಷ್ಕಾರವೆಂದು ಉಭಯ ಸದನದಿಂದ ದೂರವೇ ಉಳಿದರು.
ಇಡೀ ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅಮಾನತಿನ ಶಿಕ್ಷೆ ಪ್ರಕಟಿಸುವುದಕ್ಕೆ ಮೊದಲು, ಸ್ಪೀಕರ್ ಖಾದರ್ ಅವರು ಈ ವಿಷಯದಲ್ಲಿ ತಾಳ್ಮೆ ವಹಿಸಬಹುದಾಗಿತ್ತು. ಅಮಾನತಿನ ಶಿಕ್ಷೆಗಿಂತ ಸಂಧಾನದ ಮೂಲಕ ಗದ್ದಲ ವನ್ನು ಬಗೆಹರಿಸಿಕೊಳ್ಳಬಹುದಾಗಿತ್ತು ಎನ್ನುವುದು ಹಲವರ ಅಭಿಪ್ರಾಯವಾಗಿತ್ತು.
ಹಾಗೆ ನೋಡಿದರೆ, ಬಿಜೆಪಿ ಶಾಸಕರ ಅಮಾನತಿಗೆ ಕಾರಣವಾದ ಈ ಗಲಾಟೆಗಿಂತ ದೊಡ್ಡ ಪ್ರಮಾಣದ ಗಲಾಟೆಗಳು ಈ ಹಿಂದಿನ ಹಲವು ಅಧಿವೇಶನದಲ್ಲಿ
ನಡೆದಿರುವ ಉದಾಹರಣೆಗಳಿವೆ. ಆಯಾ ಸಮಯದಲ್ಲಿ ಪ್ರತಿಪಕ್ಷ ಸ್ಥಾನದಲ್ಲಿದ್ದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಆಡಳಿತದಲ್ಲಿರುವ ಪಕ್ಷಗಳ ವಿರುದ್ಧ ಗಲಾಟೆ
ನಡೆಸಿ ವಾರಗಟ್ಟಲೇ ಕಲಾಪವೇ ನಡೆಯದ ರೀತಿ ನೋಡಿಕೊಂಡಿರುವುದು, ಅಹೋರಾತ್ರಿ ಧರಣಿ ನಡೆಸಿರುವುದು ಸದನದ ಇತಿಹಾಸದಲ್ಲಿ ದಾಖಲಾಗಿವೆ.
ಈಗ ಸಭಾ ಧ್ಯಕ್ಷರಾಗಿರುವ ಯು.ಟಿ. ಖಾದರ್ ಅವರು ಬಿಜೆಪಿ ಸರಕಾರದ ಅವಧಿಯಲ್ಲಿ ಪ್ರತಿಪಕ್ಷದ ಉಪನಾಯಕರಾಗಿದ್ದ ಸಮಯದಲ್ಲಿ, ಈಗಿನ ಉಪಮುಖ್ಯಮಂತ್ರಿ ಡಿ.ಕೆ. ಶಿವ ಕುಮಾರ್ ಸೇರಿದಂತೆ ಹಲವು ಶಾಸಕರು ಬಿಲ್ ಪ್ರತಿ ಹರಿದು ಬಾವಿಯತ್ತ, ಸ್ಪೀಕರ್ ಪೀಠದತ್ತ ಎಸೆದಿರುವ ಘಟನೆಗಳು ನಡೆದಿವೆ. ಅಷ್ಟೇ ಏಕೆ, ನಿಕಟಪೂರ್ವ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ವಿರುದ್ಧ, ಕಾಂಗ್ರೆಸ್ನ ಹಿರಿಯ ಶಾಸಕರೇ ರೋಷಾವೇಶವಾಗಿ ಮಾತನಾಡುವಾಗ ಏಕವಚನ ಪ್ರಯೋಗಿಸಿರುವ ಘಟನೆಗಳು ನಡೆದಿವೆ.
ಅದಕ್ಕೂ ಮೊದಲು ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸರಕಾರದ ವಿರುದ್ಧ, ಅಂದಿನ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿರುವ, ಬಾವಿಗಿಳಿದು ಪ್ರತಿಭಟನೆ ನಡೆಸಿರುವ ಉದಾಹರಣೆಗಳಿಲ್ಲವೇ? ಆಗಲೂ ವಾರಗಟ್ಟಲೇ ಕಲಾಪಕ್ಕೆ ‘ಬಂದ ಪುಟ್ಟ.. ಹೋದ ಪುಟ್ಟ’ನ
ರೀತಿಯಲ್ಲಿ ಇಡೀ ಕಲಾಪವೇ ಸ್ಥಗಿತಗೊಂಡಿದ್ದರೂ, ಪ್ರತಿಪಕ್ಷದವರ ವಿರುದ್ಧ ‘ಅಮಾನತಿ’ನ ಶಿಕ್ಷೆ ನೀಡಬೇಕು ಎನ್ನುವ ತೀರ್ಮಾನವನ್ನು ಅಂದಿನ ಸಭಾಧ್ಯಕ್ಷರು ಗಳು ತೆಗೆದುಕೊಂಡಿರಲಿಲ್ಲ. ಅದಕ್ಕೆ ಕಾರಣವೆಂದರೆ, ಸದನವು ಈ ರೀತಿಯ ಗದ್ದಲ, ಗಲಾಟೆ, ವಾಕ್ಸಮರ ನಡೆಯುವ, ಆಡಳಿತ ಹಾಗೂ ಪ್ರತಿಪಕ್ಷಗಳೆರೆಡೂ ತಮ್ಮ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಇರುವ ‘ಮಾತಿನ ವೇದಿಕೆ’ ಎನ್ನುವ ಏಕಮಾತ್ರ ಕಾರಣಕ್ಕೆ.
ಪ್ರತಿಪಕ್ಷಗಳಿರುವುದೇ ಟೀಕೆ, ಟಿಪ್ಪಣಿ ಮಾಡುವುದಕ್ಕೆ. ಅವರೂ ಆಡಳಿತ ಪಕ್ಷದವರ ರೀತಿಯಲ್ಲಿ ಸರಕಾರದ ಎಲ್ಲ ತೀರ್ಮಾನಗಳನ್ನು ಒಪ್ಪಿಕೊಂಡು ಹೋದರೆ ಅವರನ್ನು ಪ್ರತಿಪಕ್ಷ ಎನ್ನಲು ಸಾಧ್ಯವೇ? ಸದನವನ್ನು ನಡೆಸುವುದು ಸರಕಾರ ಹಾಗೂ ಸಭಾಧ್ಯಕ್ಷರ ಹೊಣೆಯಾಗಿರುತ್ತದೆ. ಈ ರೀತಿಯ ಚರ್ಚೆಗಳು ಮಾತು ಮೀರಿದ ಸಮಯದಲ್ಲಿ, ಸಾಮಾನ್ಯ ವಾಗಿ ಸಭಾಧ್ಯಕ್ಷರ ಕೊಠಡಿಗೆ ಪ್ರತಿಪಕ್ಷದವರನ್ನು ಕರೆಸಿ ಕೊಂಡು, ಸಂಧಾನ ಮಾಡುವ ಸಂಸ್ಕೃತಿ ಮೊದಲಿನಿಂದಲೂ
ಇದೆ. ಆದರೆ ಕಳೆದ ವಾರದ ವಿಷಯದಲ್ಲಿ ಸರಕಾರ ಈ ರೀತಿಯ ಸಂಧಾನದ ಯಾವ ಚರ್ಚೆಯನ್ನೂ ಆರಂಭಿಸಲೇ ಇಲ್ಲ.
ಬದಲಿಗೆ ಘಟನೆ ನಡೆದ ಒಂದು ಗಂಟೆ ಕಳೆಯುವ ಮೊದಲೇ, ಶಾಸಕರನ್ನು ಅಮಾನತು ಮಾಡುವ ತೀರ್ಮಾನಕ್ಕೆ ಬಂದಿದ್ದು, ‘ಅವಸರದ ತೀರ್ಮಾನ’ ಎನ್ನುವ ಮಾತುಗಳು ಕೇಳಿಬರುತ್ತಿವೆ. ಪಕ್ಷದ ಹೈಕಮಾಂಡ್ ಒತ್ತಡಕ್ಕೆ ಮಣಿದು ವಿಧಾನಸಭಾಧ್ಯಕ್ಷರಾಗಿರುವ ಯು.ಟಿ. ಖಾದರ್ ಅವರು, ಸಭಾಧ್ಯಕ್ಷರಾದ ಬಳಿಕ ಕೆಲ ಉತ್ತಮ ಸಂಪ್ರದಾಯಗಳಿಗೆ ನಾಂದಿ ಹಾಡಿದ್ದರು. ನೂತನ ಶಾಸಕರಿಗೆ ಮೂರು ದಿನಗಳ ಶಿಬಿರದ ಆಯೋಜನೆ, ಮಯಕ್ಕೆ ಸರಿಯಾಗಿ ಬರುವ ಶಾಸಕರ ಹೆಸರನ್ನು ಪ್ರಕಟಿಸಿ ಅಂತಿಮವಾಗಿ ಪ್ರಶಸ್ತಿ ನೀಡುವ ಸಂಪ್ರದಾಯ ಇತ್ಯಾದಿಗೆ ಅವರು ನಾಂದಿ ಹಾಡಿರುವುದು ಶ್ಲಾಘನೀಯ. ಆದರೆ ಅವರು ಸಭಾಧ್ಯಕ್ಷರಾಗಿ ಕಲಾಪವನ್ನು ನಡೆಸುವ ಮನಸ್ಥಿತಿಗೆ ಈವರೆಗೂ ಬಂದಿಲ್ಲ. ಹಲವು ಬಾರಿ ಕಾಂಗ್ರೆಸ್ ಶಾಸಕರ ರೀತಿಯಲ್ಲಿಯೇ ಮಾತನಾಡಿರುವುದನ್ನು ಈ ಕಲಾಪದಲ್ಲಿ
ನಾವೆಲ್ಲ ನೋಡಿದ್ದೇವೆ.
ಇದರೊಂದಿಗೆ ಅವರು, ಪೀಠದಲ್ಲಿ ಕೂತಿರುವಾಗ ಇನ್ನಷ್ಟು ತಾಳ್ಮೆ, ಸಮಚಿತ್ತದಿಂದ ಯೋಚಿಸುವುದು ಅನಿವಾರ್ಯ ಎನ್ನುವುದು ಸ್ಪಷ್ಟ. ಇನ್ನು ಸಭಾಧ್ಯಕ್ಷ
ಸ್ಥಾನದಲ್ಲಿ ಕುಳಿತುಕೊಂಡ ಯಾವುದೇ ವ್ಯಕ್ತಿಯಾದರೂ, ಆತ ಆಡಳಿತ ಪಕ್ಷಕ್ಕಿಂತ ಪ್ರತಿಪಕ್ಷದತ್ತ ಹೆಚ್ಚು ಗಮನಹರಿಸಬೇಕು. ಈ ರೀತಿಯಾದರೇ ಪ್ರಜಾಪ್ರಭುತ್ವ ವ್ಯವಸ್ಥೆಗೆ ಗೌರವ ಎನ್ನುವುದನ್ನು ಮರೆಯಬಾರದು. ಹಾಗೆಂದು ಕರ್ನಾಟಕ ವಿಧಾನಮಂಡಲ ಇತಿಹಾಸದಲ್ಲಿ ಯಾರನ್ನೂ ಅಮಾನತುಗೊಳಿಸಿಯೇ ಇಲ್ಲ ಎನ್ನುವ ಹಾಗಿಲ್ಲ.
ಕಳೆದ ಸರಕಾರದ ಅವಽಯಲ್ಲಿ ಬಾವಿಯಲ್ಲಿ ಪ್ರತಿಭಟನೆ ಮಾಡುವಾಗ ಅಂಗಿ ಹರಿದುಕೊಂಡ ಭದ್ರಾವತಿ ಶಾಸಕ ಸಂಗಮೇಶ್ ಅವರನ್ನು ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅಮಾನತುಗೊಳಿಸಿದ್ದರು. ಅದಕ್ಕೂ ಮೊದಲು ವಿಧಾನಪರಿಷತ್ನಲ್ಲಿ ಉಪಸಭಾಧ್ಯಕ್ಷರಾಗಿದ್ದ ಧರ್ಮೇಗೌಡರನ್ನು ಎಳೆದಾಡಿದ ಪ್ರಕರಣದಲ್ಲಿ ಕಾಂಗ್ರೆಸ್ ಸದಸ್ಯರನ್ನು ಅಮಾನತುಗೊಳಿಸಲಾಗಿತ್ತು. ಇದಕ್ಕೂ ಮೊದಲು ೨೦೦೮ರಲ್ಲಿ ಪಕ್ಷೇತರ ಶಾಸಕರೊಂದಿಗೆ ಅಧಿಕಾರಕ್ಕೆ ಬಂದಿದ್ದ ಬಿಜೆಪಿ ಅವಧಿಯ ಸಮಯದಲ್ಲಿ, ಅಂದಿನ ಸ್ಪೀಕರ್ ಬೋಪಯ್ಯ ಅವರು ೧೨ ಶಾಸಕರನ್ನು ಅಮಾನತುಗೊಳಿಸಿದ್ದರು. ಈ ಎಲ್ಲ ಸಮಯದಲ್ಲಿಯೂ, ಅಮಾನತುಗೊಂಡ ಶಾಸಕರ ವರ್ತನೆ ‘ಅತಿರೇಕ’ ಎನಿಸುವಂತಿತ್ತು. ಆದ್ದರಿಂದ ಅನಿವಾರ್ಯವಾಗಿ ಅಮಾನತುಗೊಳಿಸಬೇಕಿತ್ತು. ಈ ಹಿಂದೆ ಶಾಂತವೀರ ಗೋಪಾಲಗೌಡರು, ಸದನದಲ್ಲಿ ಮಾತನಾಡುವಾಗ ಆಕ್ರೋಶಗೊಂಡು ಮೈಕ್ ಕಿತ್ತೆಸೆದಿದ್ದ ಸಮಯದಲ್ಲಿ, ಅಮಾನತು ಮಾಡದೇ ಎಚ್ಚರಿಕೆ ಕೊಟ್ಟಿದ್ದ ಉದಾಹರಣೆ ನಮ್ಮ ಸದನದಲ್ಲಿದೆ ಎನ್ನುವುದನ್ನು ಸ್ಪೀಕರ್ ಖಾದರ್ ಅವರು ಮರೆಯಬಾರದು.
ಸದನಗಳು ಮಾತಿನ ಮನೆಯಾಗಿರಬೇಕು. ಶಾಸನ ವೊಂದು ರಚನೆಯಾಗುವ ಮೊದಲು ಅದನ್ನು ಚರ್ಚೆ ನಡೆಸಿಯೇ ಅನುಮೋದಿಸುವುದು ಆಡಳಿತ ಹಾಗೂ ಪ್ರತಿಪಕ್ಷಗಳ ಜವಾಬ್ದಾರಿ ಎನ್ನುವುದನ್ನು ಎರಡೂ ಕಡೆಯವರು ಮರೆಯ ಬಾರದು. ೧೬ನೇ ವಿಧಾನಸಭೆಯ ಮೊದಲ ಕಲಾಪದಲ್ಲಿಯೇ, ಶಾಸಕರ ಅಮಾನತು ಮಾಡಿರುವುದು ಇದೀಗ ‘ಮುಗಿದ ಅಧ್ಯಾಯ’. ಇನ್ನಾದರೂ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು, ಈ ರೀತಿಯ ದುಡುಕಿನ ‘ಶಿಕ್ಷೆ’ ನೀಡುವುದಕ್ಕಿಂತ ಸಂಧಾನದ ಮೂಲಕ ಕಲಾಪವನ್ನು ಇನ್ನಷ್ಟು ಆರೋಗ್ಯಕರವಾಗಿ ನಡೆಸುವುದು ಸೂಕ್ತ.