ಅಭಿಮತ
ಗಣೇಶ್ ಭಟ್, ವಾರಣಾಸಿ
ರಾಜ್ಯಸಭೆಯನ್ನು ಚಿಂತಕರ ಚಾವಡಿ ಎಂದು ಕರೆಯಲಾಗುತ್ತದೆ. ಕೌನ್ಸಿಲ್ ಆಫ್ ಸ್ಟೇಟ್ಸ್ ಅಥವಾ ರಾಜ್ಯಗಳ ಪರಿಷತ್ತು ಎಂದು ರಾಜ್ಯ ಸಭೆ ಗುರುತಿಸಲ್ಪಡುತ್ತದೆ. ಲೋಕಸಭಾ ಸದಸ್ಯರು ಜನರಿಂದ ನೇರವಾಗಿ ಚುನಾಯಿಸಲ್ಪಟ್ಟರೆ, ರಾಜ್ಯ ಸಭೆಯ ಒಟ್ಟು 250 ಸದಸ್ಯರಲ್ಲಿ 238 ಮಂದಿ ರಾಜ್ಯಗಳ ವಿಧಾನಸಭಾ ಸದಸ್ಯರಿಂದ ಚುನಾಯಿಸಲ್ಪಡುತ್ತಾರೆ.
ಹೀಗಾಗಿ ರಾಜ್ಯಸಭೆಯು ರಾಜ್ಯಗಳನ್ನು ಪ್ರತಿನಿಧಿಸುತ್ತದೆ. ರಾಜ್ಯಸಭೆಗೆ 12 ಸದಸ್ಯರನ್ನು ನಾಮನಿರ್ದೇಶನ ಮಾಡುವ ಹಕ್ಕು ರಾಷ್ಟ್ರಪತಿಗಳಿಗೆ ಇರುತ್ತದೆ. ಚುನಾವಣಾ ರಾಜಕೀಯ ದಿಂದ ದೂರ ಇರಲು ಬಯಸುವ ವಿಜ್ಞಾನಿಗಳು, ಚಿಂತಕರು, ಸಾಹಿತಿ ಗಳು, ಕ್ರೀಡಾಳು ಗಳು, ನ್ಯಾಯಾಧೀಶರು, ನ್ಯಾಯವಾದಿ ಗಳು, ಕಲಾವಿದರು, ಸಮಾಜಸೇವಕರು ಮೊದಲಾದ ವ್ಯಕ್ತಿಗಳನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗುತ್ತದೆ. ನಾನಾ ಕ್ಷೇತ್ರಗಳ ವಿಷಯ ಪರಿಣಿತರ ಸಲಹೆ ಹಾಗೂ ಮಾರ್ಗದರ್ಶನ ಪಡೆಯುವ
ದೃಷ್ಟಿ ಯಿಂದ ಈ ರೀತಿಯಲ್ಲಿ ಸದಸ್ಯರ ನೇಮಕ ವ್ಯವಸ್ಥೆ ಮಾಡಲಾಗಿದೆ.
1952ರ ನಂತರ ಇದುವರೆಗೂ ಸುಮಾರು 140 ಪರಿಣಿತರನ್ನು ರಾಜ್ಯಸಭೆಗೆ ನಾಮ ನಿರ್ದೇಶನದ ಮೂಲಕ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ. ವಿಜ್ಞಾನಿ ಸತ್ಯೇಂದ್ರನಾಥ್ ಬೋಸ್, ಕವಿ ಹರಿವಂಶರಾಯ್ ಬಚ್ಚನ್, ಅಂಕಣಕಾರ ಖುಶ್ವಂತ್ ಸಿಂಗ್, ಸಿನೆಮಾ ನಟರಾದ ಶಿವಾಜಿ ಗಣೇಶನ್, ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್, ಒಲಿಂಪಿಕ್ ಪದಕ ವಿಜೇತೆ ಬಾಕ್ಸರ್ ಮೇರಿ ಕೋಮ, ಹಸಿರು ಕ್ರಾಂತಿಯ ಹರಿಕಾರ ಎಂ.ಎಸ್.ಸ್ವಾಮಿನಾಥನ್, ಇಸ್ರೋ ನಿರ್ದೇಶಕರಾಗಿದ್ದ ಕಸ್ತೂರಿ ರಂಗನ್, ನಟಿ ರೇಖಾ, ನಿವೃತ್ತ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ರಂಜನ್ ಗೊಗೋಯಿ ಮೊದಲಾದವರನ್ನು ರಾಜ್ಯಸಭೆಗೆ ನಾಮಿನೇಷನ್ ಮೂಲಕ ಆಯ್ಕೆ ಮಾಡಲಾಗಿತ್ತು.
ಇತ್ತೀಚೆಗೆ ಕೇಂದ್ರ ಸರಕಾರವು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಹೆಸರನ್ನು ರಾಜ್ಯಸಭಾ
ಸದಸ್ಯತ್ವಕ್ಕೆ ನಾಮನಿರ್ದೇಶನ ಮಾಡಿದಾಗ ಕನ್ನಡಿಗರು ಮಾತ್ರವಲ್ಲ ದೇಶಕ್ಕೆ ದೇಶವೇ ಸಂತಸ ಪಟ್ಟಿತು. ಹೆಗ್ಗಡೆಯವರ ಜತೆಗೆ ಓಟದ ರಾಣಿ ಪಿ.ಟಿ. ಉಷಾ, ಖ್ಯಾತ ಸಂಗೀತ ನಿರ್ದೇಶಕ ಇಳಯರಾಜಾ ಹಾಗೂ ಸುಪ್ರಸಿದ್ಧ ಸಿನೆಮಾ ಸಾಹಿತಿ ವಿ.ವಿಜಯೇಂದ್ರ ಪ್ರಸಾದ್ ಕೂಡ ರಾಜ್ಯಸಭೆಗೆ ನಾಮನಿರ್ದೇಶನಗೊಂಡಿದ್ದಾರೆ.
ಹೆಗ್ಗಡೆಯವರ ಕೊಡುಗೆಯನ್ನು ಗುರುತಿಸಿದ ಭಾರತ ಸರಕಾರ ಅತ್ಯುಚ್ಚ ನಾಗರಿಕ ಸಮ್ಮಾನಗಳಾದ ಪದ್ಮವಿಭೂಷಣ, ಪದ್ಮ ಭೂಷಣ ಹಾಗೂ ಪದ್ಮಶ್ರೀಗಳನ್ನು ಕೊಟ್ಟು ಗೌರವಿಸಿದೆ. ಸಮಾಜ ಸೇವೆಯಲ್ಲಿ ಅಪಾರ ಅನುಭವ ವಿರುವ ಡಾ. ಹೆಗ್ಗಡೆಯವರ ಸಲಹೆ, ಮಾರ್ಗದರ್ಶನ ಹಾಗೂ ಸೇವೆಯನ್ನು ಭಾರತ ಸರಕಾರವು ಬಯಸಿದೆ. 2017ರಲ್ಲಿ ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿ ಷೇಕದ 50 ನೇ ವರ್ಷದ ಆಚರಣೆಯ ಸಂದರ್ಭದಲ್ಲಿ ಧರ್ಮಸ್ಥಳಕ್ಕೆ ಭೇಟಿ ಕೊಟ್ಟು ಉಜಿರೆಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ‘ಹೆಗ್ಗಡೆಯವರ ವ್ರತಪೂರ್ಣ ಜೀವನಕ್ಕೆ ಸಮ್ಮಾನ ಮಾಡಲು ಒಬ್ಬ ವ್ಯಕ್ತಿಯಾಗಿ ನಾನು ಬಹಳ ಸಣ್ಣವನು. ಆದರೆ 125 ಕೋಟಿ ಜನತೆಯ ಪ್ರತಿನಿಧಿಯಾಗಿ ಆ ಕೆಲಸವನ್ನು ಮಾಡಲು ಬಹಳ ಭಾಗ್ಯಶಾಲಿ ಎನಿಸುತ್ತಿದೆ.
ಹೆಗ್ಗಡೆಯವರ 50 ವರ್ಷಗಳ ಸಾಧನೆ ನನ್ನಂತಹ ಕೋಟಿ ಕೋಟಿ ಜನರಿಗೆ ಪ್ರೇರಣೆ’ ಎಂದಿರುವುದು ಹೆಗ್ಗಡೆಯವರ ವ್ಯಕ್ತಿತ್ವ, ಸಾಧನೆ ಸಾರುತ್ತದೆ. ತಮ್ಮ 20ನೇ ವಯಸ್ಸಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ೨೧ನೇ ಧರ್ಮಾಧಿಕಾರಿಯಾಗಿ ಪೀಠವನ್ನೇರಿದ ಬಹು ಮುಖ ಅಭಿರುಚಿಯುಳ್ಳ ಹೆಗ್ಗಡೆಯವರು ಧಾರ್ಮಿಕ, ಸಾಮಾಜಿಕ, ಶಿಕ್ಷಣ, ಗ್ರಾಮೀಣಾಭಿವೃದ್ಧಿ, ಗ್ರಾಮೀಣ ಯುವ ಜನರಿಗೆ ಸ್ವ ಉದ್ಯೋಗ ರೂಪಿಸುವುದು, ಮಹಿಳೆಯರ ಸಬಲೀಕರಣ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
ಧಾರ್ಮಿಕ ಕ್ಷೇತ್ರವನ್ನು ಸಮಾಜಮುಖಿಯನ್ನಾಗಿಸಿದ ಹೆಗ್ಗಳಿಕೆ ಅವರದು. ಧಾರ್ಮಿಕ ಶ್ರದ್ಧಾಕೇಂದ್ರವೊಂದನ್ನು ಹೇಗೆ ಸ್ವಚ್ಛ, ಶಿಸ್ತು ಹಾಗೂ ಅಚ್ಚುಕಟ್ಟಾಗಿಡಬಹುದೆಂಬುದಕ್ಕೆ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನ ಒಂದು ಮಾದರಿ. 2016 ರಲ್ಲಿ ಇಂಡಿಯಾ ಟುಡೇ ಸಮೂಹ ನಡೆಸಿದ್ದ ಸಮೀಕ್ಷೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳವು ದೇಶದ ಅತ್ಯಂತ ಶುಚಿಯಾದ ಧಾರ್ಮಿಕ ಕ್ಷೇತ್ರವೆಂದು ಗುರುತಿಸಲ್ಪಟ್ಟಿತ್ತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಎಸ್ ಕೆಡಿಆರ್ಡಿಪಿ)ಯು ಹೆಗ್ಗಡೆ ಯವರ ಸಮಗ್ರ ಗ್ರಾಮೀಣಾಭಿ ವೃದ್ಧಿಯ ಕನಸಿನ ಫಲವಾಗಿದೆ. 1982ರಲ್ಲಿ ಆರಂಭವಾದ ಗ್ರಾಮಾಭಿವೃದ್ಧಿ ಯೋಜನೆಯ ಫಲವನ್ನು ಇಂದು ಬಹುತೇಕ ಕರ್ನಾಟಕದ ಗ್ರಾಮೀಣ ಜನರು ಪಡೆಯುತ್ತಿದ್ದಾರೆ. ಯೋಜನೆಯಡಿಯಲ್ಲಿ ಕೃಷಿ ಅಭಿವೃದ್ಧಿ, ಸಮುದಾಯ ಅಭಿವೃದ್ಧಿ ಕೆಲಸಗಳು, ಮಹಿಳಾ ಸಬಲೀಕರಣ, ಆರೋಗ್ಯ ವಿಮೆ, ಕಿರು ಹಣಕಾಸು ಚಟುವಟಿಕೆ ಹಾಗೂ ದುಶ್ಚಟ ಮುಕ್ತಿ ಮತ್ತು ಪುನರ್ವಸತೀಕರಣ ಕೆಲಸಗಳು ನಡೆಯುತ್ತವೆ.
ಎಸ್ಕೆಡಿಆರ್ ಡಿಪಿ ಅಡಿಯಲ್ಲಿ ಪ್ರಸ್ತುತ ಸುಮಾರು 7 ಲಕ್ಷ ಸ್ವಸಹಾಯ ಗುಂಪುಗಳು ಕಾರ್ಯಾಚರಿಸುತ್ತಿವೆ ಹಾಗೂ 50,05,809 ಸದಸ್ಯರಿದ್ದಾರೆ. ಯೋಜನೆಯ ನೆರವನ್ನು ಪಡೆದ ಲಕ್ಷಾಂತರ ಸದಸ್ಯರು ಹೈನುಗಾರಿಕೆ, ಕೃಷಿ ಅಭಿವೃದ್ಧಿ, ಮಲ್ಲಿಗೆ ಕೃಷಿ, ಬಯೋ ಗ್ಯಾಸ್, ವ್ಯಾಪಾರ ವಹಿವಾಟು ನಡೆಸಿ ಆರ್ಥಿಕ ಅಭಿವೃದ್ಧಿ ಕಂಡಿದ್ದಾರೆ. ವಿಮುಕ್ತಿ ಕಾರ್ಯಕ್ರಮದಡಿಯಲ್ಲಿ ಇದುವರೆಗೆ 1550 ಕುಡಿತ ನಿವಾರಣಾ ಕ್ಯಾಂಪುಗಳನ್ನು ಹಮ್ಮಿಕೊಳ್ಳಲಾಗಿದ್ದು ಸಾವಿರಾರು ಮಂದಿಯನ್ನು ಕುಡಿತದ ದುಶ್ಚಟದಿಂದ ಮುಕ್ತರನ್ನಾಗಿಸಿ ಸಮಾಜದಲ್ಲಿ ಗೌರವಯುತ ಬದುಕಿನ ಅವಕಾಶ ಕಲ್ಪಿಸಲಾಗಿದೆ.
ಪರಿಸರ ಹಾಗೂ ನೀರಿನ ಸಂರಕ್ಷಣಾ ಕಾರ್ಯಕ್ರಮದ ಅಡಿಯಲ್ಲಿ ಕರ್ನಾಟಕದಾದ್ಯಂತ ೩೦೦ಕ್ಕೂ ಹೆಚ್ಚು ಕೆರಗಳನ್ನು ಪುನರುಜ್ಜೀವನಗೊಳಿಸಲಾಗಿದೆ. ಜ್ಞಾನ ವಿಕಾಸ ಕಾರ್ಯಕ್ರಮದ ಡಿಯಲ್ಲಿ ಮಹಿಳೆಯರ ಸುಸ್ಥಿರ ಸಬಲೀಕರಣಕ್ಕಾಗಿ ಚಟುವಟಿಕೆ ಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಮೂಲಕ ಗ್ರಾಮೀಣ ಮಹಿಳಾ ಸ್ವಸಹಾಯ ಗುಂಪುಗಳಿಂದ ತಯಾರಾದ ಖಾದಿ ಬಟ್ಟೆಯ ಸಿದ್ಧ ಉಡುಪುಗಳು, ಉಪ್ಪಿನಕಾಯಿ, ಅಗರಬತ್ತಿ, ಆರೋಗ್ಯವರ್ಧಕ ಪೇಯಗಳು,
ಆಹಾರೋತ್ಪನ್ನ ಗಳು ಮೊದ ಲಾದ ವಸ್ತುಗಳಿಗೆ ಮಾರುಕಟ್ಟೆ ಒದಗಿಸಿ ಗ್ರಾಮೀಣ ಮಹಿಳೆಯ ರಿಗೆ ಆದಾಯ ಕಲ್ಪಿಸಿಕೊಡ ಲಾಗುತ್ತಿದೆ.
ಸಂಪೂರ್ಣ ಸುರಕ್ಷಾ ವಿಮಾ ಯೋಜನೆ ಮೂಲಕ ಸದಸ್ಯರು ಹಾಗೂ ಅವರ ಮನೆಯವರಿಗೆ ಆರ್ಥಿಕ ಹಾಗೂ ಸಾಮಾಜಿಕ ಭದ್ರತೆ ಕೊಡಲಾಗಿದೆ. ಗ್ರಾಮೀಣ ಭಾಗದ ಯುವಕರಲ್ಲಿ ಉದ್ಯಮಶೀಲತೆ ಬೆಳೆಸುವ ಉದ್ದೇಶದಿಂದ ಹೆಗ್ಗಡೆಯವರು ಆರಂಭಿಸಿದ ಇನ್ನೊಂದು ಸಂಸ್ಥೆ ರುಡ್ಸೆಟ್ ಸಂಸ್ಥೆ (ರೂರಲ್ ಡೆವೆಲಪ್ಮೆಂಟ್ ಆಂಡ್ ಸೆಲ್ಫ್ ಎಂಪ್ಲಾಯ್ಮೆಂಟ್ ಟ್ರೈನಿಂಗ್ ಇನ್ಸ್ಟಿ ಟ್ಯೂಟ್). 1982ರಲ್ಲಿ ಉಜಿರೆಯಲ್ಲಿ ಆರಂಭವಾದ ರುಡ್ಸೆಟ್, ಇಂದು ದೇಶಾದ್ಯಂತ ಗ್ರಾಮೀಣ ಭಾಗಗಳ ಲಕ್ಷಾಂತರ ಯುವಕ ರಿಗೆ ಕಿರು ಅವಧಿಯ ನಾನಾ ರೀತಿಯ ಉಚಿತ ಕೌಶಲ್ಯ ತರಬೇತಿ ನೀಡಿ ಅವರು ಸ್ವಉದ್ಯೋಗ ಕೈಗೊಳ್ಳುವಂತೆ ಅನುವು ಮಾಡಿ ಕೊಡುತ್ತಿದೆ.
ತರಬೇತಿ ಪಡೆದ ಯುವಕರಿಗೆ ಬ್ಯಾಂಕ್ ಸಾಲ ಒದಗಿಸುವುದರ ಮೂಲಕ ಸ್ವ ಉದ್ಯೋಗ ಕೈಗೊಳ್ಳಲು ನೆರವಾಗಿದೆ. ಮಾರುಕಟ್ಟೆ ನೆರವನ್ನೂ ನೀಡಲಾಗುತ್ತದೆ. 2012ರಲ್ಲಿ ಅಂದಿನ ಕೇಂದ್ರ ಸರಕಾರದ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಜೈರಾಮ್ ರಮೇಶ್, ರುಡ್ ಸೆಟ್ ಕಾರ್ಯ ವೈಖರಿ ಶ್ಲಾಸಿ ಭಾರತ ಸರಕಾರದ ಆರ್ಸೆಟಿ ಸಂಸ್ಥೆಗಳನ್ನು ಧರ್ಮಸ್ಥಳ ಎಜುಕೇಶನ್ ಟ್ರಸ್ಟ್ನ ಮೂಲಕ ನಡೆಸುವಂತೆ ಮನವಿ ಮಾಡಿದ್ದರು. ಇದೀಗ ದೇಶದ 27 ಭಾಗಗಳಲ್ಲಿ ರುಡ್ಸೆಟ್ ಇನ್ಸ್ಟಿಟ್ಯೂಶನ್ಗಳು ಇವೆ.
ರುಡ್ಸೆಟ್ ಸಂಸ್ಥೆಗಳ ಮೂಲಕ ತರಬೇತಿ ಪಡೆದಿರುವ ಗ್ರಾಮೀಣ ಯುವಜನರಲ್ಲಿ ಶೇ.70 ಜನರು ಆರ್ಥಿಕವಾಗಿ ಸ್ವಾವಲಂಬಿ ಗಳಾಗಿದ್ದಾರೆ. ಪ್ರಸ್ತುತ ಎಸ್ಡಿಎಂ ಎಜುಕೇಶನ್ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್ಗಳು ಜಂಟಿಯಾಗಿ ಈ ಕಾರ್ಯಕ್ರಮ ಜಾರಿ ಮಾಡುತ್ತಿವೆ. ಕೇಂದ್ರ ಸರಕಾರವು ದೇಶಾದ್ಯಂತ ನಡೆಸುತ್ತಿರುವ 680 ಗ್ರಾಮೀಣ ಸ್ವ ಉದ್ಯೋಗ ತರಬೇತಿ ಕೇಂದ್ರಗಳು ಕೂಡಾ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ನಡೆಯುತ್ತಿವೆ.
ಶಿಕ್ಷಣ ಕ್ಷೇತ್ರಕ್ಕೂ ಶ್ರೀ ಕ್ಷೇತ್ರ ಧರ್ಮಸ್ಥಳವು ತನ್ನದೇ ಆದ ಕೊಡುಗೆಯನ್ನು ಕೊಟ್ಟಿದೆ. 52 ಶಿಕ್ಷಣ ಸಂಸ್ಥೆಗಳು ಎಸ್ಡಿಎಂ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ಕಾರ್ಯಾಚರಿಸುತ್ತಿವೆ. ದೇಶದ ಮೊದಲ ನ್ಯಾಚುರೋಪಥಿ ಮತ್ತು ಯೋಗ ವಿಜ್ಞಾನ ಕಾಲೇಜನ್ನು
ಆರಂಭಿಸಿರುವ ಕೀರ್ತಿ ಹೆಗ್ಗಡೆಯವರದ್ದು. ಧಾರವಾಡದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯುನಿವರ್ಸಿಟಿಯನ್ನು
ಸ್ಥಾಪಿಸಲಾಗಿದೆ. ಹೆಗ್ಗಡೆಯವರಿಗೆ ಆಯುರ್ವೇದದ ಚಿಕಿತ್ಸಾ ಪದ್ಧತಿಯ ಬಗ್ಗೆ ವಿಶೇಷ ಒಲವು ಇದ್ದು 3 ಆಯುರ್ವೇದಿಕ್
ಮೆಡಿಕಲ್ ಕಾಲೇಜುಗಳು ಎಸ್ಡಿಎಂ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ವಿದ್ಯಾದಾನ ಮಾಡುತ್ತಿವೆ. ಶ್ರೀ ಕ್ಷೇತ್ರದಿಂದ ನಡೆಸಲ್ಪಡು ತ್ತಿರುವ ಶಾಂತಿವನ ಟ್ರಸ್ಟ್ನ ಮೂಲಕ ಕರ್ನಾಟಕದ ಶಾಲಾ ವಿದ್ಯಾರ್ಥಿಗಳಿಗೆ ಯೋಗ ಮತ್ತು ನೈತಿಕ ಶಿಕ್ಷಣವನ್ನು ಕೊಡುವ ವಿಶೇಷ ಕಾರ್ಯಕ್ರಮಗಳು ಜರಗುತ್ತಿವೆ.
2013ರಲ್ಲಿ ಶಾಂತಿವನ ಟ್ರಸ್ಟ್ ಸಂಘಟಿಸಿದ ಯೋಗ ತರಬೇತಿ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ 62,797 ವಿದ್ಯಾರ್ಥಿಗಳು ಹಾಗೂ ಅಧ್ಯಾಪ ಕರು ಏಕಕಾಲದಲ್ಲಿ ಭಾಗವಹಿಸಿದುದು ಗಿನ್ನಿಸ್ ವಲ್ಡ ರೆಕಾರ್ಡ್ಗೆ ಭಾಜನ ವಾಯಿತು ಮಾತ್ರ ವಲ್ಲದೆ ಯೋಗದ ಪ್ರಾಮುಖ್ಯದ ಬಗ್ಗೆ ಜಗತ್ತಿನ ಗಮನ ಸೆಳೆಯುವಲ್ಲಿ ಯಶಸ್ವಿ ಯಾಯಿತು. ವಿಶೇಷ ಮಕ್ಕಳನ್ನು ಸಾಮಾನ್ಯ ಮಕ್ಕಳೊಡನೆ ಸೇರಿಸಿ ವಿದ್ಯಾಭ್ಯಾಸ ಕೊಡುವ ಸಮನ್ವಯ ಶಿಕ್ಷಣ ಸಂಸ್ಥೆಯೂ ಶ್ರೀ ಕ್ಷೇತ್ರದಿಂದ ನಡೆಸಲ್ಪಡುತ್ತಿದೆ.
ವೀರೇಂದ್ರ ಹೆಗ್ಗಡೆಯವರು 1972ರಲ್ಲಿ ಆರಂಭಿಸಿದ ಉಚಿತ ಹಾಗೂ ಸರಳ ಸಾಮೂಹಿಕ ವಿವಾಹದಲ್ಲಿ ಇದುವರೆಗೂ ೧೨,೫೭೬
ಜೋಡಿಗಳು ದಾಂಪತ್ಯಕ್ಕೆ ಕಾಲಿರಿಸಿದ್ದಾರೆ. ಕರ್ನಾಟಕದಲ್ಲಿರುವ ಪ್ರಾಚೀನ ಹಾಗೂ ಐತಿಹಾಸಿಕ ಹಿನ್ನೆಲೆಯಿರುವ ನಿರ್ಲಕ್ಷಿತ ದೇವಾಲಯಗಳು, ಬಸದಿಗಳು ಹಾಗೂ ಐತಿಹಾಸಿಕ ಸ್ಮಾರಕಗಳನ್ನು ಪುನಃಸ್ಥಾಪಿಸುವ ಕೆಲಸ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ಮುಖಾಂತರ ನಡೆಯುತ್ತಿದೆ. ಕರ್ನಾಟಕ ಸರಕಾರದ ಜತೆಗೆ ಸೇರಿ ನಡೆಸಲಾಗುತ್ತಿರುವ ಈ ಧರ್ಮೋತ್ಥಾನ ಕಾರ್ಯಕ್ರಮ ದಡಿಯಲ್ಲಿ ಇದುವರೆಗೆ 224 ದೇವಾಲಯಗಳನ್ನು ಪುನರ್ ಸ್ಥಾಪಿಸಲಾಗಿದೆ.
ಪುನರೋದ್ಧಾರ ನಡೆಸುವ ಸಂದರ್ಭದಲ್ಲಿ ಕಟ್ಟಡದ ಈ ಹಿಂದಿನ ವಾಸ್ತುಶಿಲ್ಪಕ್ಕೆ ಕಿಂಚಿತ್ತೂ ಭಂಗವಾಗದಂತೆ ಎಚ್ಚರ ವಹಿಸಿರುವುದು ಈ ಕಾರ್ಯಕ್ರಮದ ವಿಶೇಷ. ಹೆಗ್ಗಡೆಯವರ ಅಭಿರುಚಿ ಹಾಗೂ ಹವ್ಯಾಸಗಳಿಗೆ ಕೊನೆಯೇ ಇಲ್ಲ. ವಿಶ್ವದರ್ಜೆಯ ವಸ್ತುಸಂಗ್ರಹಾಲಯವಾದ ಮಂಜೂಷಾ ವನ್ನು ರೂಪಿಸಿ ಆಸಕ್ತರಿಗಾಗಿ ಧರ್ಮಸ್ಥಳದಲ್ಲಿ ತೆರೆದಿಡಲಾಗಿದೆ. ದೇಶವಿದೇಶಗಳ ಅಪರೂಪದ ಕಾರುಗಳ ಸಂಗ್ರಹವಿರುವ ಕಾರ್ ಮ್ಯೂಸಿಯಂ ಅಲ್ಲಿದೆ. ಬೇರೆ ಬೇರೆ ದೇವಾಲಯಗಳಲ್ಲಿ ಉಪಯೋಗದಲ್ಲಿದ್ದ ಬೃಹತ್ ಮರದ ರಥಗಳನ್ನೂ ಅಲ್ಲಿ ಕಾಣಬಹುದು.
ಪ್ರಾಚೀನ ತಾಳೆಗರಿ ಗ್ರಂಥಗಳನ್ನು ವೈಜ್ಞಾನಿಕವಾಗಿ ಹಾಗೂ ಜೋಪಾನವಾಗಿ ಕಾಪಿಡುವ ವ್ಯವಸ್ಥೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿದೆ. ತಮ್ಮ ಬಿಡುವಿಲ್ಲದ ಚಟುವಟಿಕೆಗಳ ನಡುವೆಯೂ ಅವರು ತಮ್ಮ ಫೋಟೋಗ್ರಫಿ ಹವ್ಯಾಸವನ್ನು ಜೀವಂತವಾಗಿಟ್ಟಿದ್ದಾರೆ.
ಧರ್ಮಸ್ಥಳಕ್ಕೆ ಬರುವ ಭಕ್ತಾದಿಗಳಲ್ಲಿ ಸಾವಿರಾರು ಜನರು ಹೆಗ್ಗಡೆಯವರನ್ನು ಮುಖತಃ ಕಂಡು ತಮ್ಮ ತಮ್ಮ ಸಮಸ್ಯೆ ಹಾಗೂ ದುಃಖಗಳನ್ನು ಹೇಳಿಕೊಳ್ಳುತ್ತಾರೆ. ಹಲವರು ಆಸ್ತಿ ಹಣಕಾಸು ವಿವಾದಗಳನ್ನು ಹೆಗ್ಗಡೆಯವರ ಮುಂದಿಡುತ್ತಾರೆ.
ಭಕ್ತಾದಿಗಳ ದುಃಖ ದುಮ್ಮಾನಗಳಿಗೆ ಸಾಂತ್ವನ ಹೇಳುವ ಹೆಗ್ಗಡೆಯವರು ಕೋರ್ಟ್ ಕಚೇರಿಗಳಲ್ಲೂ ಬಗೆ ಹರಿಯದ ವ್ಯಾಜ್ಯ ಗಳನ್ನು ಕ್ಷೇತ್ರದ ವಿಶಿಷ್ಟ ನ್ಯಾಯದಾನ ಪರಂಪರೆಯ ಅನುಸಾರವಾಗಿ ಮುಗಿಸುತ್ತಾರೆ. ಅವರಿಗೆ ದಿನನಿತ್ಯ ನೂರಾರು ಪತ್ರಗಳು ಮತ್ತು ಮನವಿಗಳು ಬರುತ್ತವೆ. ಅವುಗಳೆಲ್ಲದರ ಮೇಲೂ ಅವರು ಕಣ್ಣಾಡಿಸುತ್ತಾರೆ. ಏಕಸಂಧಿಗ್ರಾಹಿಯಾಗಿರುವ ಅವರು ಪತ್ರಗಳನ್ನು ಕ್ಷಣಮಾತ್ರದಲ್ಲಿ ಓದಿ ಅರ್ಥೈಸಿಕೊಳ್ಳುತ್ತಾರೆ.
ಸ್ಪಷ್ಟ ಹಾಗೂ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಕಲೆ ಅವರಿಗೆ ಸಿದ್ಧಿಸಿದೆ. ತಮ್ಮೊಂದಿಗೆ ಸೆಲ್ಫೀ ತೆಗೆದುಕೊಳ್ಳಲು ಬಯಸುವ ಭಕ್ತಾದಿಗಳಿಗೆ ಯಾವ ಹಮ್ಮು ಬಿಮ್ಮುಗಳಿಲ್ಲದೆ ಪೋಸ್ ಕೊಡುವ ಹೆಗ್ಗಡೆಯವರು ಸಮಾಧಾನಿ ಮತ್ತು ಸದಾ ಹಸನ್ಮುಖಿ. ಈ ಎಲ್ಲ ಸ್ತರಗಳಲ್ಲಿ ಸೇವೆಯನ್ನು ಹೆಗ್ಗಡೆಯವರು ಸಾಮಾಜಿಕ ಬದ್ಧತೆಯಿಂದ ಹಾಗೂ ಸ್ವಯಂ ಸ್ಫೂರ್ತಿಯಿಂದಲೇ ಮಾಡುತ್ತಾರೆ.
ಸದಾ ಹೊಸತರೆಡೆಗೆ ತುಡಿತವಿರುವ ಡಾ.ಹೆಗ್ಗಡೆಯವರು ಮಾಡಿದ ಕೆಲಸದಲ್ಲಿ ಪರಿಪೂರ್ಣತೆ ಸಾಧಿಸುವ ಛಲಗಾರ. ಮಾತನಾಡುವ ಮಂಜುನಾಥ ಇನ್ನು ಮುಂದೆ ರಾಜ್ಯಸಭೆಯಲ್ಲಿ ಮಾತನಾಡಲಿದ್ದಾರೆ. ಅವರ ಸೇವೆಯ ವ್ಯಾಪ್ತಿಯು ಇಡೀ
ದೇಶಕ್ಕೇ ವಿಸ್ತರಿಸಿಕೊಳ್ಳಲಿದೆ. ಸಮಾಜ ಸೇವೆ, ಗ್ರಾಮೀಣಾಭಿವೃದ್ಧಿ, ಕೌಶಲ್ಯಾಭಿವೃದ್ಧಿ, ಮಹಿಳಾ ಸಬಲೀಕರಣ, ಶಿಕ್ಷಣ
ಮೊದಲಾದ ಕ್ಷೇತ್ರಗಳಲ್ಲಿ ಅವರು ಗಳಿಸಿರುವ ಅನುಭವವು ರಾಷ್ಟ್ರಕ್ಕೆ ಮಾರ್ಗದರ್ಶಿಯಾಗಲಿದೆ.