ತನ್ನಿಮಿತ್ತ
ಸಂಜಯ್ ಬಾಬು, ಮಳವಳ್ಳಿ
ದಶಕಗಳ ಕಾಲ ಧೂಳು ಹಿಡಿದು ಮೂಲೆ ಸೇರಿದ್ದ ‘ಮಂಡಲ್ ಆಯೋಗ’ದ ಶಿಫಾರಸನ್ನು ಜಾರಿಗೊಳಿಸಿ, ದೇಶದಲ್ಲಿ ಸಮಾನತೆಯ
ಕ್ರಾಂತಿ ಹಾಡಿದ ಕೀರ್ತಿಗೆ ಭಾಜನಾದವರು ಮಾಜಿ ಪ್ರಧಾನಿ ವಿಶ್ವನಾಥ್ ಪ್ರತಾಪ್ ಸಿಂಗ್.
ಜನಮೋರ್ಚಾ ಪಾರ್ಟಿಯ ನಾಯಕ ವಿ.ಪಿ.ಸಿಂಗ್ 1990ರಲ್ಲಿ ಪ್ರಧಾನಿಯಾದಾಗ ದೇಶದಲ್ಲಿ ರಾಜಕೀಯ ಬದಲಾವಣೆ
ಯೊಂದರೆ ಹವಾ ಬೀಸಿತ್ತು. 1990 ಆಗಸ್ಟ್ 19ರಂದು ಮಂಡಲ್ ವರದಿ ಜಾರಿ ಮಾಡುವ ಮೂಲಕ ಹಿಂದುಳಿದ ಜಾತಿಗಳಿಗೆ (OBC) ಶೇ.27ರಷ್ಟು ಮೀಸಲು ಕಲ್ಪಿಸಿದ್ದು ಸ್ವತಂತ್ರ ಭಾರತದ ಇತಿಹಾಸದಲ್ಲೊಂದು ಮಹತ್ವದ ಮೈಲುಗಲ್ಲು. ಆ ಮೂಲಕ ಅಂಬೇಡ್ಕರ್ ಪ್ರತಿಪಾದನೆಯ ಸಮಾನತೆಯ ಪರಿಕಲ್ಪನೆಯನ್ನು ಅನುಷ್ಠಾನಗೊಳಿಸಿ, ಸಾಮಾಜಿಕ ನ್ಯಾಯದ ಕ್ರಾಂತಿಯನ್ನು ಇನ್ನಷ್ಟು ಮುಂದಕ್ಕೆ ಕೊಂಡೊಯ್ದವರು ವಿ.ಪಿ.ಸಿಂಗ್.
ಹಾಗೆ ನೋಡಿದರೆ ನಮ್ಮ ದಿವಂಗತ ಮುಖ್ಯಮಂತ್ರಿ ದೇವರಾಜ ಅರಸರನ್ನು ಹಲವು ವಿಷಯಗಳಲ್ಲಿ ವಿ.ಪಿ.ಸಿಂಗ್ ಹೋಲುತ್ತಾರೆ. ಸಿಂಗ್ ಮತ್ತು ಅರಸು ಇಬ್ಬರೂ ಹಿಂದುಳಿದ ಜಾತಿಗಳಲ್ಲಿ ಹುಟ್ಟದಿದ್ದರೂ ರಾಜಕೀಯ ನಾಯಕರುಗಳಾಗಿ ಹಿಂದುಳಿದ ಜಾತಿಗಳ ಏಳಿಗೆಗಾಗಿ ಶ್ರಮಿಸಿದರು. ಆದರೆ ಅದಕ್ಕಾಗಿ ಈ ಇಬ್ಬರೂ ಬಹಳ ದೊಡ್ಡ ಬೆಲೆಯನ್ನು ತೆತ್ತರು. ತಮ್ಮ ರಾಜಕೀಯ ಜೀವನವನ್ನೆ ಅಂತ್ಯಗೊಳಿಸಿಕೊಂಡರು.
ಮಂಡಲ್ ಆಯೋಗದ ಶಿಫಾರಸುಗಳನ್ನು ಜಾರಿ ಮಾಡುವುದರ ವಿರುದ್ಧ ಈ ದೇಶದ ಮೇಲ್ಜಾತಿಗಳ ಹೋರಾಟಕ್ಕೆ ವಿ.ಪಿ.ಸಿಂಗ್ ಬಲಿಯಾದದ್ದು ಸುಳ್ಳಲ್ಲ. ಹಿಂದುಳಿದ ವರ್ಗ ಗಳಿಗೆ ಮೀಸಲು ಸೌಲಭ್ಯ ನೀಡುವ ಮೂಲಕ ಮೇಲ್ಜಾತಿಗಳ ಪ್ರಾಬಲ್ಯಕ್ಕೆ ಪೆಟ್ಟು ಕೊಟ್ಟಿದ್ದನ್ನು, ಸಾಮಾಜಿಕ ಚಲನೆಗೆ ಚಾಲನೆ ಕೊಟ್ಟಿದ್ದನ್ನು ಕೆಲವರು ಸಹಿಸಲಿಲ್ಲ. ಅದಕ್ಕಾಗಿಯೇ ಮೇಲುಜಾತಿಯವರನ್ನು ಎತ್ತಿಕಟ್ಟಿ, ವ್ಯವಸ್ಥಿತವಾಗಿ ವಿ.ಪಿ.ಸಿಂಗ ರನ್ನು ದೇಶದ ಅತ್ಯಂತ ಕೆಟ್ಟ ಪ್ರಧಾನಿಯೆನ್ನುವಂತೆ ಚಿತ್ರಿಸಿದರು, ಗೇಲಿ ಮಾಡಿದರು. ಒಂದಷ್ಟು ರಾಜಕಾರಣಿಗಳು, ಮಾಧ್ಯಮಗಳು ಸಿಂಗ್ ಅವರನ್ನುಆ ಮೂಲಕ ರಾಜಕೀಯವಾಗಿ ಮೂಲೆಗುಂಪು ಮಾಡು ವಲ್ಲಿಯೂ ಯಶಸ್ವಿಯಾದವು.
ಸಂಘಪರಿವಾರ ಮಂಡಲ್ ಆಯೋಗದ ಶಿಪಾರಸುಗಳ ವಿರುದ್ಧ ಕಮಂಡಲ ಚಳುವಳಿಯನ್ನು ಹಮ್ಮಿಕೊಂಡು ಸಮರವನ್ನೇ ಸಾರಿತ್ತು. ಇಷ್ಟೆಲ್ಲದರ ನಡುವೆಯೂ ದಿಟ್ಟ ನಿರ್ಧಾರ ಕೈಗೊಂಡಿದ್ದ ವಿ.ಪಿ.ಸಿಂಗ್‌ರನ್ನು ಅದೇ ಹಿಂದುಳಿದ ವರ್ಗಗಳೇ ಕೈಬಿಟ್ಟವು ಎನ್ನುವುದು ಈ ದೇಶದ ದೊಡ್ಡ ದುರಂತ. ಕೆಲ ಪೂರ್ವಗ್ರಹಪೀಡಿತ ಮಾಧ್ಯಮಗಳು ಸೃಷ್ಟಿಸಿದ ಮಾಯಾ ಜಾಲಕ್ಕೆ ಸಿಲುಕಿದ ಹಿಂದುಳಿದ ವರ್ಗದ ಯುವಕರು ವಿ.ಪಿ. ಸಿಂಗ್‌ರ ವಿರುದ್ಧವೇ ಹೋರಾಟ ಮಾಡಿದರು.
ಸ್ವತಃ ಹಿಂದುಳಿದ ವರ್ಗಗಳಿಗೆ ಸೇರಿದ ರಾಜಕಾರಣಿಗಳು ವಿ.ಪಿ. ಸಿಂಗ್‌ರನ್ನು ಹಿಂದುಳಿದ ವರ್ಗಗಳ ನಾಯಕ ಎಂದು ಒಪ್ಪಿ ಕೊಳ್ಳುವುದಕ್ಕೆ ತಯಾರಿರಲಿಲ್ಲ. ಮೇಲ್ಜಾತಿಗೆ ಸೇರಿದ ಸಿಂಗ್ ಕೈಗೆ ನಾಯಕತ್ವ ಸಿಕ್ಕರೆ ತಮ್ಮ ಅಸ್ತಿತ್ವಕ್ಕೆ ಪೆಟ್ಟು ಬೀಳಬಹುದು
ಎನ್ನುವ ಆತಂಕ ಅವರನ್ನು ಕಾಡಿರ ಬಹುದು. ಅಷ್ಟು ದೊಡ್ಡ ಕ್ರಾಂತಿಗೆ ಕಾರಣರಾದ ಸಿಂಗ್ ಕೊನೆಗೆ ತಮ್ಮ ಕ್ಷೇತ್ರದಲ್ಲಿ ಚುನಾ ವಣೆಯನ್ನೂ ಗೆಲ್ಲಲಾಗದೇ ರಾಜಕೀಯ ದಿಂದಲೇ ನಿವೃತ್ತರಾಗಬೇಕಾಯಿತು.
ಈ ದೇಶದ ರಾಜಕೀಯ ಪಕ್ಷಗಳು ಮೀಸಲನ್ನು ನೆಪವಾಗಿಟ್ಟುಕೊಂಡು ದಲಿತರ ವಿರುದ್ಧ ಹಿಂದುಳಿದ ಜಾತಿಗಳನ್ನು ನಿರಂತರ ಎತ್ತುಕಟ್ಟುತ್ತ ಬಂದಿವೆ. ಹಾಗಾಗಿಯೇ ಹಿಂದುಳಿದ ಜಾತಿಗಳಿಗೆ ಮೀಸಲು ಸಿಕ್ಕಿ ಮೂವತ್ತು ವರ್ಷಗಳ ಮೇಲಾಗಿದ್ದರೂ ಇವತ್ತಿಗೂ SC/ST ಗಳಿಗೆ ಮಾತ್ರ ಮೀಸಲು ಇದೆ ಅಂತಲೇ ನಂಬಿಕೊಂಡು ತಳಸಮುದಾಯ ಗಳ ಮೇಲೆ ಹಿಂದುಳಿದ ಜಾತಿಗಳ ವಿದ್ಯಾರ್ಥಿ ಗಳು ಅಸಹನೆ, ದ್ವೇಷ ಬೆಳೆಸಿಕೊಂಡಿರುತ್ತಾರೆ. ಈ ಅಸಹನೆಗೆ ಜಾತಿ ಪದ್ಧತಿ ಸೃಷ್ಟಿಸಿರುವ ಶ್ರೇಣಿಕರಣದ ಮೇಲು-ಕೀಳಿನ ಮನಸ್ಥಿತಿ ಕೂಡ ಕಾರಣ.
ಮೀಸಲು ಸೌಲಭ್ಯದ ಮೂಲಕ ಹಿಂದುಳಿದ ಜಾತಿಗಳಿಗೆ ಸಿಕ್ಕಿರುವ ಸಾಮಾಜಿಕ ನ್ಯಾಯದ ಹಕ್ಕಿನ ಬಗ್ಗೆ ಆ ಜಾತಿಗಳಲ್ಲಿ ಇವತ್ತಿಗೂ ಅರಿವು ಮೂಡಿದಂತಿಲ್ಲ. ಹಿಂದುಳಿದ ಜಾತಿಗಳ ಸದಸ್ಯರು ತಮಗೆ ಸಿಕ್ಕ ಶೇ.27 ಮೀಸಲಾತಿಯ ಬಗ್ಗೆ ನಿಜವಾಗಿಯೂ ಅರಿವಿದ್ದಿ ದ್ದರೆ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಿ ಮೀಸಲಾತಿಯ ಮೂಲ ಉದ್ದೇಶ ವನ್ನೇ ಗೇಲಿ ಮಾಡುವ ಸಂದರ್ಭ ಈ ದೇಶದಲ್ಲಿ ಸೃಷ್ಟಿಯಾಗುತ್ತಿರಲಿಲ್ಲ. ಉಲ್ಲೇಖ ಅಡಿಯಲ್ಲಿ ಮೇಲುಜಾತಿಗಳಿಗೆ ಶೇ.10 ಮೀಸಲು ಕೊಟ್ಟಾಗ ಈಗಾಗಲೇ ಮೀಸಲು ಅಡಿಯಲ್ಲಿ ಇರುವ ಹಿಂದುಳಿದ ಜಾತಿಗಳ ಜನ ತಮಗೆ ಹೊಸದಾಗಿ ಮೀಸಲು
ಸೌಲಭ್ಯ ಸಿಕ್ಕಿತು ಅನ್ನುವ ಭ್ರಮೆಯಲ್ಲಿ ಸಂಭ್ರಮಿಸಿಬಿಟ್ಟರು!
ಇದಕ್ಕಿಂತ ದೊಡ್ಡ ದುರಂತ ಇನ್ನೊಂದು ಇದೆಯೇ? ಸದಾ ಅಧಿಕಾರದ ಸುತ್ತಲೇ ಗಿರಕಿ ಹೊಡೆಯುವ ಹಿಂದುಳಿದ ಜಾತಿಗಳ ರಾಜಕಾರಣಿಗಳು ಕೇವಲ ಸ್ವಲಾಭವನ್ನೇ ಗುರಿಯಾಗಿಸಿಕೊಂಡು ಸಾಮಾಜಿಕ ಚಳವಳಿಯ ಅಗತ್ಯವನ್ನೇ ಮರೆತು ಹೋಗಿದ್ದಾರೆ. ಇದಕ್ಕೆ ಮೀಸಲಿನ ಕುರಿತ ತಪ್ಪು ಕಲ್ಪನೆ ಕೂಡ ಒಂದು. ಈ ಯುವಕರು ತಮಗೆ ಅರಿವಿಲ್ಲದೆಯೆ ಮೀಸಲಾತಿ ವಿರೋಧಿಗಳಾಗಿ ದ್ದಾರೆ. ತಮ್ಮ ವಿರುದ್ದ ತಾವೇ ಅಜೆಂಡಾವನ್ನು ಜಾರಿಗೊಳಿಸಿಕೊಳ್ಳುತ್ತಿದ್ದಾರೆ. ಇನ್ನು ಮೇಲಾ ದರೂ ಹಿಂದುಳಿದ ಜಾತಿಗಳ ರಾಜಕಾರಣಿಗಳು ಮತ್ತು ಬುದ್ಧಿ ಜೀವಿಗಳು, ಮಂಡಲ್ ಚಳವಳಿಯ ಮಹತ್ವ ಸಾರಿದ ವಿ.ಪಿ. ಸಿಂಗ್ ಅಂಥವರಿಗೆ ಇತಿಹಾಸ ಎಸಗಿದ ಮಾಡಿದ ಅನ್ಯಾಯ ಸರಿಪಡಿಸಲು ಮುಂದಾಗಬೇಕು.
ಆಗ ಮಾತ್ರ ಹಿಂದುಳಿದ ವರ್ಗಗಳು ಮೇಲ್ಜಾತಿಗಳ ಸಂಚಿಗೆ ಬಲಿಯಾಗುವುದನ್ನು, ತಳಸಮುದಾಯಗಳನ್ನು ದ್ವೇಷಿಸುವುದನ್ನು ತಡೆಯಬ ಹುದು. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಸೇರಿ ನಿಜವಾದ ’ಬಹುಜನ’ ರಾಜಕಾರಣವನ್ನು ಕಟ್ಟ ಬಹುದು.
(ಲೇಖಕರು ಪತ್ರಕರ್ತರು)