Sunday, 15th December 2024

ಲಸಿಕೆ ನೀಡಿದ್ದಕ್ಕೆ ಬಾಂಬ್ ಹಾಕಿದರು !

ಹಿಂದಿರುಗಿ ನೋಡಿದಾಗ

ಮನುಕುಲವನ್ನು ಕಾಡಿದ ಅನಾದಿ ಮಹಾ ಸೋಂಕುರೋಗಗಳಲ್ಲಿ ಸಿಡುಬು ಮುಖ್ಯವಾದದ್ದು. ಬಹುಶಃ ಇದು ಮನುಷ್ಯನನ್ನು
ಅವನ ಹುಟ್ಟಿನಿಂದಲೇ ಕಾಡುತ್ತಾ ಬಂದಿರಬೇಕು. ನಮಗೆ ದೊರೆತಿರುವ ದಾಖಲೆಗಳ ಅನ್ವಯ, ಸಿಡುಬು ಕ್ರಿ.ಪೂ.೧೦,೦೦೦ ವರ್ಷಗಳ ಹಿಂದೆಯೇ ಆಫ್ರಿಕಾ ಖಂಡದಲ್ಲಿ ಅವ್ಯಾಹತವಾಗಿ ಹರಡಿತ್ತು.

ಮೂಲತಃ ಕೃಷಿ ಮತ್ತು ಪಶುಪಾಲನೆಯಲ್ಲಿ ತೊಡಗಿದ್ದ ಜನರಲ್ಲಿ ಹರಡಿದ್ದ ಈ ಕಾಯಿಲೆಯು, ಈಜಿಪ್ಷಿಯನ್ ವರ್ತಕರ ಮೂಲಕ ಭಾರತಕ್ಕೆ ವ್ಯಾಪಿಸಿತು. ಈಜಿಪ್ಟ್ ದೇಶದ ಫ್ಯಾರೊ ಆಗಿದ್ದ ರಾಮ್ಸೆಸ್-೫ (ಮರಣ ಕ್ರಿ.ಪೂ. ೧೧೫೬) ಮುಖದಲ್ಲಿ ಸಿಡುಬು ಕಲೆಗಳಿರುವುದನ್ನು ಇಂದಿಗೂ ನೋಡಬಹುದು. ಇಂದಿಗೆ ೩೦೦೦ ವರ್ಷಗಳ ಹಿಂದಿನ ಚೀನೀ ಹಾಗೂ ಭಾರತೀಯ ವೈದ್ಯಕೀಯ
ಗ್ರಂಥಗಳಲ್ಲಿ ಸಿಡುಬಿನ ಉಲ್ಲೇಖವಿದೆ. ಕ್ರಿ.ಪೂ. ೫-೭ನೆಯ ಶತಮಾನಗಳ ನಡುವೆ ಯುರೋಪನ್ನು ಪ್ರವೇಶಿಸಿದ ಸಿಡುಬು, ಯುರೋಪಿಯನ್ ಸಂಸ್ಕೃತಿಯ ಬೆಳವಣಿಗೆಗೆ ತಡೆಯನ್ನೊಡ್ಡಿತು.

ಪೂರ್ವ-ಪಶ್ಚಿಮ ಗೋಳಗಳನ್ನು ಸಂಪರ್ಕಿಸುವ ರೇಷ್ಮೆ ರಸ್ತೆಯ (ಸಿಲ್ಕ್ ರೂಟ್) ವ್ಯಾಪಾರಿಗಳ ಮೂಲಕ ಸಿಡುಬು ಸೋಂಕು ರೋಮ್ ಸಾಮ್ರಾಜ್ಯವನ್ನು ಪ್ರವೇಶಿಸಿತು. ಕ್ರಿ.ಶ. ೧೬೫-೧೮೦ರವರೆಗೆ ರೋಮ್ ಸಾಮ್ರಾಜ್ಯದಲ್ಲಿ ೭೦ ಲಕ್ಷ ಜನರನ್ನು ಕೊಂದಿತು. ಇದು ‘ಪ್ಲೇಗ್ ಆಫ್ ಅಂಟೊನೈನ್’ ಎಂದು ಇತಿಹಾಸದಲ್ಲಿ ದಾಖಲಾಗಿದೆ. ಸ್ಪ್ಯಾನಿಶ್ ಮತ್ತು ಪೋರ್ಚುಗೀಸ್ ನಾವಿಕರು, ಅಮೆರಿಕಕ್ಕೆ ಸಮುದ್ರಯಾನವನ್ನು ಮಾಡಿ, ಅಲ್ಲಿದ್ದ ಮೂಲನಿವಾಸಿಗಳಿಗೆ ಸಿಡುಬು ಸೋಂಕನ್ನು ಹರಡಿದರು. ಈ ಸೋಂಕು ಅಮೆರಿಕದ ಅಜ್ಟೆಕ್ ಮತ್ತು ಇಂಕಾ ಸಾಮ್ರಾಜ್ಯಗಳನ್ನೇ ನಾಶಮಾಡಿತು.

ಉತ್ತರ ಅಮೆರಿಕವನ್ನು ಕಬಳಿಸಲು ಫ್ರೆಂಚರು ಹಾಗೂ ಬ್ರಿಟಿಷರು ಸ್ಥಳೀಯರ ಮೇಲೆ ಯುದ್ಧವನ್ನು ಸಾರಿದರು. ಇದು ‘ಫ್ರೆಂಚ್-ಇಂಡಿಯನ್ ವಾರ್’ (೧೭೫೪-೧೭೬೭)  ಎಂದು ಇತಿಹಾಸದಲ್ಲಿ ದಾಖಲಾಗಿದೆ. ಈ ಯುದ್ಧದಲ್ಲಿ ಬ್ರಿಟಿಷ್ ಸೈನ್ಯದ ಮುಖ್ಯಸ್ಥ ನಾಗಿದ್ದ ಸರ್ ಜಾಫ್ರಿ ಅಮ್ಹರ್ಸ್ಟ್ (೧೭೧೭- ೧೭೯೭) ಸಿಡುಬನ್ನು ಜೈವಿಕಾಸವನ್ನಾಗಿ ಪರಿಣಾಮಕಾರಿಯಾಗಿ ಬಳಸಿದ. ಸ್ಥಳೀಯ ರಲ್ಲಿ ಸಿಡುಬನ್ನು ಉಗ್ರ ಪ್ರಮಾಣದಲ್ಲಿ ಹರಡಿ, ಹೆಚ್ಚು ಶ್ರಮವಿಲ್ಲದೇ ಸ್ಥಳೀಯರ ಸಾಮ್ರಾಜ್ಯವನ್ನು ವಶಪಡಿಸಿಕೊಂಡ. ಇದೇ ಯುರೋಪಿ ಯನ್ನರು ಆಫ್ರಿಕದಿಂದ ಗುಲಾಮರನ್ನು ಕರೆತಂದು ಅಮೆರಿಕದ ತೋಟಗಳಲ್ಲಿ ಕೆಲಸ ಮಾಡಲು ನಿಯಮಿಸಿ ದಾಗ, ಅವರೂ ಸಿಡುಬು ಸೋಂಕನ್ನು ತಮ್ಮೊಡನೆ ಹೊತ್ತು ತಂದು ಸ್ಥಳೀಯರ ವಿನಾಶಕ್ಕೆ ಕಾರಣರಾದರು.

೧೮ನೆಯ ಶತಮಾನದ ಯುರೋಪಿನಲ್ಲಿ ಸಿಡುಬು ಪ್ರತಿವರ್ಷ ಸುಮಾರು ೪,೦೦,೦೦೦ ಜನರನ್ನು ಕೊಲ್ಲುತ್ತಿತ್ತು. ಸಿಡುಬು ಸೋಂಕು ಹತ್ತಿದವರಲ್ಲಿ ಶೇ.೨೦-೬೦ರಷ್ಟು ಜನರು ಸಾಯುವುದು ಸಾಮಾನ್ಯವಾಗಿತ್ತು. ಸಿಡುಬು ಸೋಂಕಿಗೆ ತುತ್ತಾದ ಮಕ್ಕಳಲ್ಲಿ
ಶೇ.೮೦-೯೮ರಷ್ಟು ಮಕ್ಕಳು ಸಾಯುವುದು ಖಚಿತವಿತ್ತು. ಸಿಡುಬನ್ನು ‘ವೇರಿಯೋಲ’ ಎಂದು ಕರೆದರು. ಇದರ ಮೂಲ ‘ವೇರಿಯಸ್’ ಅಥವ ‘ವೇರಸ್’ ಎಂಬ ಲ್ಯಾಟಿನ್ ಶಬ್ದ. ‘ಬಣ್ಣ’ ಅಥವಾ ‘ಕಲೆ’ ಎಂದು ಇದರ ಅರ್ಥ. ಸಿಡುಬು ಸೋಂಕಿನಿಂದ ಬದುಕುಳಿದವರಲ್ಲಿ ಸಿಡುಬು ಕಲೆಗಳು ಶಾಶ್ವತವಾಗಿ ಉಳಿಯುತ್ತಿದ್ದವು.

‘ಸ್ಮಾಲ್‌ಪಾಕ್ಸ್’ ಎನ್ನುವುದು ಎಲ್ಲರಿಗೂ ಪರಿಚಿತವಾಗಿರುವ ಶಬ್ದ. ಇಲ್ಲಿ ‘ಪಾಕ್ಸ್’ ಎಂದರೆ ‘ಸಣ್ಣ ಚೀಲ’ ಎಂದರ್ಥ. ಸಿಡುಬಿಗೆ ತುತ್ತಾದವರ ಮೈಮೇಲೆ ಕೀವುಗುಳ್ಳೆಗಳು ಏಳುತ್ತಿದ್ದವು. ಇವು ಕೀವು ತುಂಬಿದ ಚೀಲಗಳಂತೆ ಕಂಡ ಕಾರಣ, ಈ ಸೋಂಕನ್ನು ಪಾಕ್ಸ್
ಎಂದು ಕರೆದರು. ಈ ಕೀವುಗುಳ್ಳೆಗಳು ಎಷ್ಟು ಭಯಾನಕವಾಗಿ ಕಾಣುತ್ತಿದ್ದವು ಎಂದರೆ ಈ ರೋಗವನ್ನು ‘ಸ್ಪೆಕಲ್ಡ್ ಮಾನ್ ಸ್ಟರ್’ (ಬೊಕ್ಕೆಗಳ ರಾಕ್ಷಸ) ಎಂದು ಕರೆಯುತ್ತಿದ್ದರು. ಸಿಡುಬು ಸೋಂಕು ಅಂಟಿದ ೧೦೦ ಜನರಲ್ಲಿ ನೂರೂ ಜನರು ಸಾಯುತ್ತಿರಲಿಲ್ಲ. ಕೆಲವರು ಮಾತ್ರ ಹೇಗೆ ಬದುಕುಳಿಯುತ್ತಿದ್ದರು ಎನ್ನುವುದು ಅಂದಿನವರೆಗೆ ತಿಳಿದಿರಲಿಲ್ಲ.

ಆದರೆ ಸಿಡುಬು ಬಂದು  ಬದುಕುಳಿದವರನ್ನು, ಉಳಿದ ಸೋಂಕುಪೀಡಿತರ ಶುಶ್ರೂಷೆಗೆ ನೇಮಿಸುವ ಪದ್ಧತಿಯು, ಕ್ರಿ.ಪೂ. ೪೩೦ರ ರೋಮ್ ಸಾಮ್ರಾಜ್ಯದಲ್ಲಿ ಅಸ್ತಿತ್ವದಲ್ಲಿತ್ತು. ಮಾನವನ ಇತಿಹಾಸದಲ್ಲಿ ಸಿಡುಬನ್ನು ಗುಣಪಡಿಸುವ ನಾನಾ ಔಷಧಗಳು ಅಸ್ತಿತ್ವಕ್ಕೆ ಬಂದರೂ, ಅವು ಸಾವುನೋವನ್ನು ತಡೆಗಟ್ಟುವಲ್ಲಿ ವಿಫಲವಾದವು. ಸಿಡುಬನ್ನು ತಡೆಗಟ್ಟಲು ಲಸಿಕೆಯನ್ನು ನೀಡುವ ಪದ್ಧತಿಯು ಎಲ್ಲಿ ಯಾವಾಗ ಯಾರಿಂದ ಆರಂಭವಾಯಿತು ಎನ್ನುವುದಕ್ಕೆ ನಿಖರವಾದ ಪುರಾವೆಯಿಲ್ಲ.

ಆದರೆ ಸಿಡುಬು ಲಸಿಕೆಯನ್ನು ನೀಡುವ ಪದ್ಧತಿಯು ಆಫ್ರಿಕ, ಭಾರತ, ಚೀನಾ ದೇಶಗಳಲ್ಲಿ ಸ್ವತಂತ್ರವಾಗಿ ಆರಂಭವಾಯಿತು ಎನ್ನಬಹುದು. ೧೬೭೦ರಲ್ಲಿ ರಷ್ಯಾ ಮೂಲದ ಸರ್ಕೇಶಿಯನ್ ವ್ಯಾಪಾರಿಗಳು ಸಿಡುಬು ಲಸಿಕೆಯ ಪರಿಚಯವನ್ನು ಒಟ್ಟೋ ಮಾನ್ ಸಾಮ್ರಾಜ್ಯಕ್ಕೆ ಮಾಡಿಕೊಟ್ಟರು. ಸರ್ಕೇಶಿಯನ್ ಮಹಿಳೆಯರು ತಮ್ಮ ಸೌಂದರ್ಯಕ್ಕೆ ವಿಶ್ವ ಪ್ರಸಿದ್ಧರಾಗಿದ್ದರು.
ಹಾಗೆಯೇ ತುರ್ಕಿ ಸುಲ್ತಾನನ ಅಂತಃಪುರ ಸಹ! ಈ ಅಂತಃ ಪುರದಲ್ಲಿ ಒಂದು ಸ್ಥಾನವನ್ನು ಗಿಟ್ಟಿಸಿಕೊಳ್ಳಲು ಸರ್ಕೇಶಿಯನ್ ಮಹಿಳೆಯರು ಯಾರ ಕಣ್ಣಿಗೂ ಕಾಣದಂಥ ಸ್ಥಳದಲ್ಲಿ ಸಿಡುಬು ಲಸಿಕೆಯನ್ನು ಹಾಕಿಸಿಕೊಳ್ಳುತ್ತಿದ್ದರು.

ಬಹುಶಃ ಸಿಡುಬು ಕಲೆಗಳಿಂದ ಮುಕ್ತರಾದ ಈ ಮಹಿಳೆಯರು, ಇಸ್ಲಾಂ ಜಗತ್ತಿನಲ್ಲಿ ಸಿಡುಬು ಲಸಿಕೆಯನ್ನು ಜನಪ್ರಿಯಗೊಳಿಸಿ ದರು ಎಂದು ಕಾಣುತ್ತದೆ. ಇಮ್ಯಾನುಯಲ್ ತಿಮೋನಿ (೧೬೬೯-೧೭೨೦) ಎಂಬ ಬ್ರಿಟಿಷ್ ಪ್ರಜೆಯು ಇಸ್ತಾನ್‌ಬುಲ್ ನಗರದಲ್ಲಿದ್ದ. ಈತನು ಮುಸ್ಲಿಮರು ಸಿಡುಬು ಲಸಿಕೆಯನ್ನು ನೀಡುವ ಪದ್ಧತಿಯನ್ನು ಅಧ್ಯಯನ ಮಾಡಿ ಆ ಬಗ್ಗೆ ರಾಯಲ್ ಸೊಸೈಟಿ ಆಫ್ ಲಂಡನ್ನಿಗೆ ಒಂದು ಪತ್ರವನ್ನು ೧೭೧೪ರಲ್ಲಿ ಬರೆದ. ಹೀಗೆಯೇ ಗಿಯಾಕೋಮೊ ಪಿಲಾರಿನಿ (೧೬೫೯- ೧೭೧೮) ಎಂಬ ಗ್ರೀಕ್ ವೈದ್ಯನೂ ಸಿಡುಬು ಲಸಿಕೆಯಬಗ್ಗೆ ೧೭೧೬ರಲ್ಲಿ ಪತ್ರ ಬರೆದ. ಆದರೆ ಲಂಡನ್ ಸೊಸೈಟಿ ಈ ಪತ್ರಗಳನ್ನು ಗಂಭೀರವಾಗಿ
ಪರಿಗಣಿಸಲಿಲ್ಲ.

ಬ್ರಿಟನ್ನಿನಲ್ಲಿ ಸಿಡುಬು ಲಸಿಕೆಯನ್ನು ಜಾರಿಗೆ ತರಲು ಲೇಡಿ ಮೇರಿ ವೋರ್ಟ್ಲೆ ಮಾಂಟಗು (೧೬೮೯-೧೭೬೨) ಬರಬೇಕಾಯಿತು. ಈಕೆಯ ಪತಿ ಎಡ್ವರ್ಡ್ ವೋರ್ಟ್ಲೆ ಮಾಂಟಗು. ಈತ ಒಟ್ಟೋಮಾನ್ ತುರ್ಕರ ಸಾಮ್ರಾಜ್ಯಕ್ಕೆ ಬ್ರಿಟನ್ನಿನ ರಾಯಭಾರಿಯಾಗಿ ಹೋದ. ಆತನ ಜತೆಯಲ್ಲಿ ಮಡದಿಯೂ ಇಸ್ತಾನ್‌ಬುಲ್ ನಗರಕ್ಕೆ ಹೋದಳು. ಲೇಡಿ ಮಾಂಟಗು ಸುರಸುಂದರಿಯಾಗಿದ್ದಳು. ಆದರೆ ಆಕೆಗೆ ೧೭೧೫ರಲ್ಲಿ ಸಿಡುಬು ಬಂದು ಆಕೆಯ ಸುಂದರ ಮುಖವು ಕಲೆಗಳಿಂದ ಕುರೂಪವಾಯಿತು. ಆಕೆಯ ೨೦ ವರ್ಷದ
ಸೋದರ ಸಿಡುಬಿಗೆ ಬಲಿಯಾದ. ಹಾಗಾಗಿ ಇಸ್ತಾನ್‌ಬುಲ್ ನಗರಕ್ಕೆ ಬರುತ್ತಿದ್ದ ಹಾಗೆ ರಾಯಭಾರಿ ಕಚೇರಿಯ ವೈದ್ಯನಾಗಿದ್ದ ಚಾರ್ಲ್ಸ್ ಮೈಟ್ಲಾಂಡ್‌ನನ್ನು (೧೬೬೮-೧೭೪೮) ಕರೆಯಿಸಿದಳು. ಸಿಡುಬು ಲಸಿಕೆಯನ್ನು ನೀಡುವ ವಿಧಾನವನ್ನು ಕರಗತ ಮಾಡಿಕೊಳ್ಳುವಂತೆ ಆಣತಿಯನ್ನಿತ್ತಳು.

ಇಸ್ತಾನ್‌ಬುಲ್ ವೈದ್ಯರು ನೀಡುತ್ತಿದ್ದ ಸಿಡುಬು ಲಸಿಕೆಯ ತಂತ್ರವು ಸರಳವಾಗಿತ್ತು. ಮೊದಲು ಸಿಡುಬು ರೋಗಿಯ ಕೀವುಗುಳ್ಳೆ ಯಿಂದ ಕೀವನ್ನು ಸಂಗ್ರಹಿಸುತ್ತಿದ್ದರು. ಆರೋಗ್ಯವಂತನ ಮುಂದೋಳು ಅಥವಾ ತೊಡೆಯ ಮೇಲೆ ಸೂಜಿಯಿಂದ ಇಲ್ಲವೇ ಲ್ಯಾನ್ಸೆಟ್ ಎಂಬ ಹರಿತ ಆಯುಧದಿಂದ ಗಾಯವನ್ನು ಮಾಡುತ್ತಿದ್ದರು. ಆ ಗಾಯದ ಮೇಲೆ ರೋಗಿಯ ಕೀವುಗುಳ್ಳೆಯಿಂದ ಸಂಗ್ರಹಿಸಿದ್ದ ಕೀವನ್ನು ಸವರುತ್ತಿದ್ದರು. ಇದನ್ನು ಊರುವಿಕೆ, ಎಂದರೆ ಕೀವನ್ನು ಆರೋಗ್ಯವಂತ ಶರೀರದ ಒಳಗೆ ಊರುವುದು (ಎನ್ ಗ್ರಾಫ್ಟಿಂಗ್) ಎಂದು ಕರೆಯುತ್ತಿದ್ದರು. ಊರುವಿಕೆಯ ನಂತರ ಒಂದಷ್ಟು ಜ್ವರ, ಮೈಕೈ ನೋವು, ತಲೆನೋವು ಬರುತ್ತಿತ್ತು.

ತನಗೆ ತಾನೇ ಕಡಿಮೆಯಾಗುತ್ತಿತ್ತು. ಇಂಥವರಿಗೆ ಸಿಡುಬು ಸೋಂಕು ಅಂಟುತ್ತಿರಲಿಲ್ಲ. ಮೈಟ್ಲಾಂಡ್ ಊರುವಿಕೆಯ ತಂತ್ರವನ್ನು ಕರಗತ ಮಾಡಿಕೊಂಡ. ಲೇಡಿ ಮಾಂಟಗು ಮೈಟ್ಲಾಂಡ್‌ನನ್ನು ಕರೆಯಿಸಿದಳು. ಮೊದಲು ತನ್ನ ಐದು ವರ್ಷದ ಮಗನಿಗೆ ಸಿಡುಬು ಲಸಿಕೆಯನ್ನು ಕೊಡಿಸಿದಳು. ೧೭೨೧ರಲ್ಲಿ ಲಂಡನ್ನಿಗೆ ಹಿಂದಿರುಗಿದಳು. ರಾಜಸಭೆಯನ್ನು ಕರೆಯಿಸಿದಳು. ಎಲ್ಲರ ಎದುರಿಗೆ
ತನ್ನ ೪ ವರ್ಷದ ಮಗಳಿಗೆ ಲಸಿಕೆಯನ್ನು ನೀಡುವಂತೆ ಮೈಟ್ಲಾಂಡನಿಗೆ ಹೇಳಿದಳು. ರಾಜ ಮನೆತನದವರೆಲ್ಲರಿಗೂ ಸಿಡುಬು ಲಸಿಕೆಯು ಸುರಕ್ಷಿತ ಎನ್ನುವುದು ಮನವರಿಕೆಯಾಯಿತು.

ಏಪ್ರಿಲ್ ೧೭, ೧೭೨೨ರಂದು ‘ಪ್ರಿನ್ಸ್ ಆಫ್ ವೇಲ್ಸ್’ನ ಇಬ್ಬರು ಹೆಣ್ಣು ಮಕ್ಕಳು ಸಿಡುಬು ಲಸಿಕೆಯನ್ನು ಪಡೆದರು. ಈ ಸುದ್ದಿ ಜನಸಾಮಾನ್ಯರಲ್ಲಿಯೂ ಹರಡಿ ಸಿಡುಬು ಲಸಿಕೆಯನ್ನು ಪಡೆಯಲು ಅವರೂ ಮುಂದಾದರು. ೧೭೨೧ರಲ್ಲಿ ಸಿಡುಬು ಲಸಿಕೆ ಯನ್ನು ನೀಡುವ ಪ್ರಥಮ ಪ್ರಯತ್ನವು ಅಮೆರಿಕದಲ್ಲಿ ಆರಂಭವಾಯಿತು. ಕಾಟನ್ ಮ್ಯಾಥರ್ (೧೬೬೩-೧೭೨೮) ಎಂಬ ಪಾದ್ರಿ ಹಾಗೂ ಡಾ.ಜ಼ಬ್ಡೀಲ್ ಬಾಯ್ಲ್‌ಸ್ಟನ್ (೧೬೭೯-೧೭೬೬) ಎಂಬ ವೈದ್ಯ ಈ ಯತ್ನವನ್ನು ಮಾಡಿದ್ದು. ವೆಸ್ಟ್ ಇಂಡೀಸ್‌ನಿಂದ ಒಂದು ಹಡಗು ಬಾಸ್ಟನ್ ನಗರಕ್ಕೆ ಬಂದಿತು. ಆ ಹಡಗಿನಲ್ಲಿದ್ದವರಿಗೆ ಸಿಡುಬು ಸೋಂಕು ತಗುಲಿತ್ತು. ಅವರು ಸಿಡುಬನ್ನು ಹರಡಿದರು.

ನೋಡ ನೋಡುತ್ತಿರುವಂತೆಯೇ ಇಡೀ ಮಸಾಚುಸೆಟ್ಸ್ ಪ್ರಾಂತವು ಸಿಡುಬು ಪೀಡಿತವಾಯಿತು. ಮ್ಯಾಥರ್ ಸಿಡುಬು ಲಸಿಕೆಯನ್ನು ತೆಗೆದುಕೊಳ್ಳುವಂತೆ ಪ್ರಾರ್ಥಿಸಿದ. ಆದರೆ ಈತನ ಅಹವಾಲಿಗೆ ಅಮೆರಿಕನ್ನರು ಪ್ರತಿಸ್ಪಂದಿಸಲಿಲ್ಲ. ಎದೆಗುಂದದ ಮ್ಯಾಥರ್, ಬಾಯ್ಲ್‌ಸ್ಟನ್ ಮೇಲೆ ಒತ್ತಡವನ್ನು ಹಾಕಿ, ಸ್ವಯಂ ಇಚ್ಛೆಯಿಂದ ಮುಂದೆ ಬರುವವರಿಗೆ ಸಿಡುಬು ಲಸಿಕೆಯನ್ನು ನೀಡುವಂತೆ ಪ್ರಚೋದಿಸಿದ. ಹಾಗೆಯೇ ಬಾಯ್ಲ್‌ಸ್ಟನ್, ಮ್ಯಾಥರ್ ನೆರವಿನಿಂದ ಸಿಡುಬು ಲಸಿಕೆಯನ್ನು ನೀಡಿದ. ಇವರ ಈ ಪ್ರಯತ್ನವನ್ನು ಬಾಸ್ಟನ್ನಿನ ಸಾರ್ವಜನಿಕರು ಹಾಗೂ ವೈದ್ಯಕೀಯ ಕ್ಷೇತ್ರದ ಮುಂದಾಳುಗಳು ಉಗ್ರವಾಗಿ ಪ್ರತಿಭಟಿಸಿದರು.

ಸಿಡುಬು ಮಸಾಚುಸೆಟ್ಸ್ ಪ್ರಾಂತದಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತಿತ್ತು. ಮ್ಯಾಥರ್ ಮತ್ತು ಬಾಯ್ಲ್‌ಸ್ಟನ್ ತಮ್ಮ ಪ್ರಯತ್ನವನ್ನು ಮುಂದುವರಿಸಿದರು. ಬಾಯಿಮಾತಿನ ಬೆದರಿಕೆಗೆ ಮ್ಯಾಥರ್ ಹೆದರಲಿಲ್ಲ. ಹಾಗಾಗಿ ಅವನ ಮನೆಯ ಮೇಲೆ ಬಾಂಬನ್ನು ಎಸೆದರು.
ಮನೆಯು ಧ್ವಂಸವಾದರೂ ಮ್ಯಾಥರನ ಉತ್ಸಾಹವು ಸ್ವಲ್ಪವೂ ಕುಂದಲಿಲ್ಲ. ಮ್ಯಾಥರ್ ಮತ್ತು ಬಾಯ್ಲ್‌ಸ್ಟನ್, ಸಿಡುಬು ಲಸಿಕೆ ಯು ಸುರಕ್ಷಿತ ಎನ್ನು ವುದನ್ನು ಜನಸಾಮಾನ್ಯರಿಗೆ ಹಾಗೂ ವೈದ್ಯರಿಗೆ ಮನವರಿಕೆ ಮಾಡಲು ವೈಜ್ಞಾನಿಕ ವಿಧಾನವನ್ನು ಅನು ಸರಿಸಿದರು. ಲಸಿಕೆಯನ್ನು ಪಡೆದವರು ಹಾಗೂ ಪಡೆಯದವರಲ್ಲಿ ಸಂಭವಿಸುವ ಸಾವುನೋವಿನ ಅಂಕಿ-ಅಂಶಗಳನ್ನು  ಸಂಗ್ರಹಿಸಲಾರಂಭಿಸಿದರು.

ಲಸಿಕೆಯನ್ನು ಪಡೆಯದವರಲ್ಲಿ ಶೇ.೧೪ರಷ್ಟು ಜನರು ಮೃತರಾಗಿದ್ದರೆ, ಲಸಿಕೆಯನ್ನು ಪಡೆದವರಲ್ಲಿ ಕೇವಲ ಶೇ.೨ರಷ್ಟು ಜನರು ಮೃತರಾಗಿದ್ದರು. ಬಹುಶಃ ವೈದ್ಯಕೀಯ ಇತಿಹಾಸದಲ್ಲಿ, ಇದೇ ಮೊದಲ ಬಾರಿಗೆ, ಹೀಗೆ ಹೋಲಿಕೆಯ ಮೂಲಕ ಸತ್ಯವನ್ನು ತಿಳಿಯುವ ಪ್ರಯತ್ನವು ನಡೆಯಿತು. ಈ ಅಧ್ಯಯನದ ನಂತರ ಮಸಾಚುಸೆಟ್ಸ್ ವಾಸಿಗಳು ಸಿಡುಬು ಲಸಿಕೆಯನ್ನು ಪಡೆಯಲಾ ರಂಭಿಸಿದರು. ೧೭೬೬. ಅಮೆರಿಕನ್ನರ ಸ್ವಾತಂತ್ರ್ಯ ಹೋರಾಟವು ನಡೆಯುತ್ತಿದ್ದ ಕಾಲ. ಜಾರ್ಜ್ ವಾಷಿಂಗ್ಟನ್ ನೇತೃತ್ವದಲ್ಲಿ ಅಮೆರಿಕದ ಯೋಧರು ಬ್ರಿಟಿಷ್ ಸೈನ್ಯದ ವಿರುದ್ಧ ಹೋರಾಟ ವನ್ನು ನಡೆಸುತ್ತಿದ್ದರು. ಕ್ಯುಬೆಕ್ ಪ್ರದೇಶವನ್ನು ವಶ ಪಡಿಸಿಕೊಳ್ಳಲು ಹೊರಟ ವಾಷಿಂಗ್ಟನ್ ಸೈನಿಕರು, ಬ್ರಿಟಿಷರೊಡನೆ ಯುದ್ಧವನ್ನು ನಡೆಸುವ ಮೊದಲೇ ಅನೇಕರು ಸಿಡುಬಿನ
ಕಾರಣ ಜೀವವನ್ನು ಬಿಟ್ಟರು. ಆದರೆ ಬ್ರಿಟಿಷ್ ಸೈನ್ಯದಲ್ಲಿದ್ದ ಪ್ರತಿಯೊಬ್ಬರೂ ಸಿಡುಬು ಲಸಿಕೆಯನ್ನು ಪಡೆದಿದ್ದ ಕಾರಣ, ಅವರಲ್ಲಿ ಒಬ್ಬ ಸೈನಿಕನೂ ಮರಣಿಸಲಿಲ್ಲ.

ಈ ಸತ್ಯವು ಜಾರ್ಜ್ ವಾಷಿಂಗ್ಟನ್ನನ ಕಣ್ಣನ್ನು ತೆರೆಸಿತು. ಕೂಡಲೇ ತನ್ನ ಎಲ್ಲ ಸೈನಿಕರು ಸಿಡುಬು ಲಸಿಕೆಯನ್ನು ಪಡೆಯ ಬೇಕೆಂದು ಆತ ಆe ಮಾಡಿದ. ಹೀಗೆ ಸಿಡುಬು ಲಸಿಕೆಯು ಅಮೆರಿಕದಲ್ಲಿ ಜನಪ್ರಿಯವಾಯಿತು. ಸಿಡುಬು ಸೋಂಕನ್ನು ಪರಿಣಾಮಕಾರಿಯಾಗಿ ನಿಗ್ರಹಿಸಬಲ್ಲ ಲಸಿಕೆಯು ದೊರೆಯಲು, ಜಗತ್ತು ಎಡ್ವರ್ಡ್ ಜೆನರ್‌ನ ಆಗಮನಕ್ಕಾಗಿ ಕಾಯಬೇಕಾಯಿತು.