Thursday, 12th December 2024

ಚೆಲುವಾಂತ ಚೆನ್ನಿಗನಿಗೆ ವೈರಮುಡಿ ವೈಭವ

ತನ್ನಿಮಿತ್ತ

ನಂ.ಶ್ರೀಕಂಠ ಕುಮಾರ್‌

ಕರ್ನಾಟಕದ ಸಾಂಸೃತಿಕ ಮತ್ತು ಧಾರ್ಮಿಕ ವೈಭವಕ್ಕೆ ವಿಶಿಷ್ಟಾದ್ವೈತ ಸಿದ್ದಾಂತವೂ ವಿಶಿಷ್ಟ ಕೊಡುಗೆ ಕೊಟ್ಟಿದೆ. ಪರಮಾ ಚಾರ್ಯರಾದ ಭಗವದ್ ಶ್ರೀರಾಮಾನುಜಾಚಾರ್ಯರು ಕ್ರಿ.ಶ. ೧೦೧೭ರಲ್ಲಿ ತಮಿಳುನಾಡಿನಲ್ಲಿ ಜನಿಸಿ, ಅದ್ವೈತ ಮತ ವಿಸ್ತಾರಕರಾಗಿ ವಿಶಿಷ್ಟಾದ್ವೈತ ಸಿದ್ಧಾಂತ ಪ್ರತಿಪಾದಿಸುತ್ತ ಕ್ರಿ.ಶ. ೧೦೯೬ರಲ್ಲಿ ಕನ್ನಡನಾಡಿಗೆ ಆಗಮಿಸಿದರು.

ಜನರ ಮನಸ್ಸನ್ನು ತಮ್ಮೆಡೆಗೆ ಸೆಳೆದುಕೊಂಡು ಸನಾತನ ವೈದಿಕ ಧರ್ಮ ವನ್ನು ಪುನಃ ಪ್ರತಿಷ್ಠಾಪಿಸಿದರು. ಆಚಾರ‍್ಯ ರಾಮಾನುಜರ ಸಿದ್ಧಾಂತಕ್ಕೆ ಹರಿದಾಸ ಶ್ರೇಷ್ಠರಾದ ಆಳ್ವಾರ್‌ರವರು ಭಕ್ತಿರೂಪಾಪನ್ನವಾದ ಹಾಡುಗಳೇ ಭದ್ರಬುನಾದಿಯಾಗಿದೆ. ವಿಶಿಷ್ಟಾದ್ವೈತಿಗಳಿಗೆ ಉಭಯ ವೇದಾಂತ ಪ್ರವರ್ತಕರು ಎಂಬ ಬಿರುದುಂಟು. ಇವರ ಮತ್ತೊಂದು ವೈಶಿಷ್ಟ್ಯ ವೆಂದರೆ ಉಪನಿಷತ್‌ಗಳು, ಬ್ರಹ್ಮಸೂತ್ರ, ಭಗವದ್ಗೀತಾದಿ ಪ್ರಧಾನ ಗ್ರಂಥಗಳ ಜತೆಗೆ ಅದಕ್ಕೆ ಸರಿಸಮಾನವಾದ ಪ್ರಾಧಾನ್ಯ, ಪ್ರಾಶಸ್ತ್ಯಗಳನ್ನು ಆಳ್ವಾರ್‌ ಗಳು ತಮಿಳು ಭಾಷೆಯಲ್ಲಿ ರಚಿತವಾದ ಪಾಶುರಗಳಿಗೂ ಕೊಟ್ಟು ಪುರಸ್ಕ ರಿಸಿದ್ದಾರೆ.

ಶ್ರೀ ರಾಮಾನುಜರು ಕಾವೇರಿ ನದಿಯ ಜಾಡನ್ನೇ ಹಿಡಿದು ಕರ್ನಾಟಕಕ್ಕೆ ಸತ್ಯಮಂಗಲದ ಮೂಲಕ ಪ್ರವೇಶಿಸಿದರು. ಅಲ್ಲಿಂದ ಒಳದಾರಿಯಲ್ಲಿ ಕಾವೇರಿ ತೀರದ ರಾಮನಾಥಪುರಕ್ಕೆ ಬಂದು ಅಲ್ಲಿಂದ ಮಿರ್ಲೆ, ಸಾಲಿಗ್ರಾಮಗಳ ಮೂಲಕ ಮೇಲು ಕೋಟೆಯ ಮಾರ್ಗದಲ್ಲಿದ್ದ ತೊಂಡನೂರಿಗೆ ಆಗಮಿಸಿ ನೆಲೆಸಿದರು. ಇದು ಹೊಯ್ಸಳ ರಾಜರ ಉತ್ತರ ಗಡಿಯ ರಾಜಧಾನಿ ಯಾಗಿತ್ತು. ಅಲ್ಲಿ ಅವರು ಜೈನ ಧರ್ಮೀಯನಾದ ರಾಜ ಬಿಟ್ಟಿದೇವನನ್ನು ಸಂಧಿಸಿ ಆತನ ಮಗಳ ಮನೋವ್ಯಾಧಿಯನ್ನು ಪರಿಹರಿಸಿ, ಆತನನ್ನು ಶಿಷ್ಯನನ್ನಾಗಿ ಪರಿಗ್ರಹಿಸಿ ‘ವಿಷ್ಣು ವರ್ಧನ’ ಎಂಬ ನಾಮಾಂಕಿತವನ್ನು ಅನುಗ್ರಹಿಸಿದರು.

ಸಮರ್ಥನಾದ ಈ ಅರಸನ ನೆರವು ಶ್ರೀರಾಮಾನುಜರಿಗೆ ಅಯಾಚಿತವಾಗಿ ದೊರೆಯಿತು. ರಾಜ ವಿಷ್ಣುವರ್ಧನನು ರಾಮಾ ನುಜರನ್ನು ಗುರುವಾಗಿ ಸ್ವೀಕರಿಸಿ ಶ್ರೀವೈಷ್ಣವ ಧರ್ಮದ ಪ್ರಸಾರಕ್ಕೆ ಅನುಪಮ ಸಹಕಾರ ನೀಡಿದನು. ನಂತರ ಮೇಲುಕೋಟೆ ಗೆ ತೆರಳಿ ಸುಮಾರು ಹನ್ನೆರಡು ವರ್ಷಗಳ ಕಾಲ ವಾಸ್ತವ್ಯ ಮಾಡಿ ಅಲ್ಲಿ ಹುತ್ತದಲ್ಲಿದ್ದ ಶ್ರೀಕೃಷ್ಣನಿಂದ ಪೂಜಿಸ ಲ್ಪಡುತ್ತಿದ್ದ ಯದುಗಿರಿ ಶ್ರೀ ತಿರುನಾರಾಯಣಸ್ವಾಮಿಯನ್ನು ಪುನರ್ವಸು ನಕ್ಷತ್ರದಂದು ಪುನಃ ಲೋಕಕ್ಕೆ ಸಮರ್ಪಿಸಿ ಸ್ಥಳೀಯರ ಸಹಾಯದಿಂದ ದೇವಸ್ಥಾನವನ್ನು ನಿರ್ಮಿಸಿದರು.

ಅಂದಿನಿಂದ ಶ್ರೀವೈಷ್ಣವರಿಗೆ ಮೇಲುಕೋಟೆಯು ದಕ್ಷಿಣ ಭಾರತದ ನಾಲ್ಕು ಶ್ರೀವೈಷ್ಣವ ಕ್ಷೇತ್ರಗಳಾದ ಶ್ರೀರಂಗ, ತಿರುಪತಿ
ಮತ್ತು ಕಾಂಚೀಪುರದ ಜತೆಗೆ ನಿತ್ಯ ಸ್ಮರಣೀಯ ದಿವ್ಯ ಕ್ಷೇತ್ರವಾಗಿ ಪರಿಣಮಿಸಿದೆ. ಭಗವದ್ ಶ್ರೀ ರಾಮಾನುಜರು ಹೊಯ್ಸಳರ ರಾಜ್ಯದಲ್ಲಿ ಸುಮಾರು ಇಪ್ಪತು ವರ್ಷಗಳ ಕಾಲ ಸಂಚರಿಸಿ ವಿಶಿಷ್ಟಾದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದರು ಶ್ರೀರಂಗವು ಅನ್ಯಧರ್ಮೀಯರ ದಾಳಿಗೆ ಈಡಾಗಿದ್ದ ಕಾಲದಲ್ಲಿ ಶ್ರೀವೈಷ್ಣವ ಧರ್ಮದ ಪ್ರಮುಖ ಆಚಾರ್ಯರಾಗಿದ್ದ ‘ಕವಿ ತಾರ್ಕಿಕಸಿಂಹ ’ರೆಂದು ಬಿರುದಾಂಕಿತರಾದ ಶ್ರೀ ವೇದಾಂತ ದೇಶಿಕರು ಕರ್ನಾಟಕಕ್ಕೆ ಬಂದು ಮೇಲುಕೋಟೆ ಯಲ್ಲಿ ನೆಮ್ಮದಿಯನ್ನು ಕಂಡು ಅದರ ಐಶ್ವರ್ಯ ಎಂದಿಗೂ ಕುಂದದಿರಲೆಂದು ಶಾಸನವನ್ನು ಮಾಡಿದ್ದಾರೆ.

ಕನ್ನಡನಾಡಿನಲ್ಲಿ ವಿಶಿಷ್ಟಾದ್ವೈತ ಸಿದ್ಧಾಂತವನ್ನು ಬೆಳೆಸಿ ಪ್ರೋತ್ಸಾಹಿಸಿದ ಕೀರ್ತಿ ಹೊಯಿಸಳ ರಾಜ ವಿಷ್ಣುವರ್ಧನನಿಗೆ ಸಲ್ಲುತ್ತದೆ. ವಿಜಯನಗರ ಸಾಮ್ರಾಜ್ಯದ ಪ್ರಸಿದ್ಧ ಚಕ್ರವರ್ತಿಯೂ ಆಗಿದ್ದ ಶ್ರೀಕೃಷ್ಣದೇವರಾಯನು ತನ್ನ ರಾಜ್ಯದಲ್ಲಿನ ವಿದ್ವಾಂಸರಾದ ತಾತಾಚಾರ್ಯರನ್ನು ಶ್ರೀ ವೈಷ್ಣವ ಧರ್ಮದ ಪೀಠಾಧಿಪತಿಯಾಗಿ ಪ್ರತಿಷ್ಠಾಪಿಸಿ ವಿಶಿಷ್ಟಾದ್ವೈತ ಸಿದ್ಧಾಂತ ವನ್ನು ಅಧಿಕವಾಗಿ ಪೋಷಿಸಿದನು.

ವಿಜಯನಗರ ಸಾಮ್ರಾಜ್ಯದ ಶ್ರೀವೈಷ್ಣವ ಕೇಂದ್ರವಾಗಿದ್ದ ಮೇಲುಕೋಟೆಯನ್ನು ಸಾಕಷ್ಟು ಅಭಿವೃದ್ಧಿಗೊಳಿಸಿದನು. ನಂತರ ಶ್ರೀವೈಷ್ಣವ ಧರ್ಮಕ್ಕೆ ಮೈಸೂರು ಸಂಸ್ಥಾನ ನೀಡಿದ ನೆರವು ಅಸಾಧಾರಣವಾದದ್ದು. ಸಾಮಂತರಾಗಿದ್ದ ರಾಜ ಒಡೆಯರ್‌ ರವರು ಶ್ರೀರಂಗಪಟ್ಟಣ ದಲ್ಲಿ ಸ್ವತಂತ್ರ ಸಂಸ್ಥಾನ ಸ್ಥಾಪಿಸಿ, ತಮ್ಮ ಆಡಳಿತದಲ್ಲಿ ಮೇಲುಕೋಟೆಯಲ್ಲಿ ದೊಡ್ಡ ದೊಡ್ಡ ಮಂಟಪ ಗಳನ್ನು ಕಟ್ಟಿಸಿದರು.

ಯದುಗಿರಿ ಶ್ರೀ ಚೆಲುವನಾರಾಯಣಸ್ವಾಮಿಗೆ ರಾಜಮುಡಿ ಹಾಗೂ ಅನರ್ಘ್ಯ ಆಭರಣಗಳನ್ನಿತ್ತು ರಾಜಮುಡಿ ಬ್ರಹ್ಮೋತ್ಸವ ವನ್ನು ಏರ್ಪಡಿಸಿದರು. ದೇವಾಲಯದ ನವರಂಗದ ಕಂಬವೊಂದರಲ್ಲಿ ಕೆತ್ತಿರುವ ರಾಜ ಒಡೆಯರ್ ವಿಗ್ರಹಕ್ಕೆ ಈಗಲೂ ಪ್ರತಿದಿನವೂ ರಾಜ ಮರ್ಯಾದೆ ಸಲ್ಲುತ್ತದೆ. ಶ್ರೀವೈಷ್ಣವ ಧರ್ಮವು ರಾಜ ಮುಮ್ಮಡಿ ಕೃಷ್ಣರಾಜ ಒಡೆಯರ್‌ರವರು ತಮ್ಮ ಕಾಲದಲ್ಲಿ ಶ್ರೀವೈಷ್ಣವ ಕ್ಷೇತ್ರ ಮೇಲುಕೋಟೆಯನ್ನು ಹೆಚ್ಚಿನ ಅಭಿವೃದ್ಧಿಗೊಳಿಸಿದರು. ಕೃಷ್ಣರಾಜಮುಡಿ ಎಂಬ ರತ್ನ ಕಿರೀಟ, ಪಚ್ಚೆಯ ಹಾರಾದಿಗಳಲ್ಲದೇ ಅನೇಕ ಆಭರಣಗಳನ್ನು ದೇವರಿಗೆ ಸಮರ್ಪಿಸಿ ತಮ್ಮ ಜನ್ಮ ದಿನದ ಅಂಕಿತದಲ್ಲಿ ಕೃಷ್ಣರಾಜ ಮುಡಿ ಬ್ರಹ್ಮೋತ್ಸವವನ್ನು ಆಯೋಜಿಸಿದರು.

ಇಂದಿಗೂ ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರ್‌ರವರು ತಮ್ಮ ನಾಲ್ವರು ಅರಸಿಯರೊಂದಿಗೆ ದೇವಸ್ಥಾನದಲ್ಲಿ ನಿತ್ಯವೂ ಮರ್ಯಾದೆಗೊಳ್ಳುತ್ತಿದ್ದಾರೆ. ಮೈಸೂರು ಸಂಸ್ಥಾನಕ್ಕೆ ರಾಜ ಗುರುಗಳಾದ ಶ್ರೀಬ್ರಹ್ಮ ತಂತ್ರ ಸ್ವತಂತ್ರ ಪರಕಾಲ ಮಠದ ಯತಿಗಳು ಮೇಲು ಕೋಟೆಯ ಅಭಿವೃದ್ಧಿಗೂ ಕಾರಣರಾಗಿದ್ದಾರೆ. ಹಾಗೆಯೇ ಶ್ರೀರಾಮಾನುಜಾಚಾರ್ಯರಿಂದ ಸ್ಥಾಪಿತವಾದ ಶ್ರೀವೈಷ್ಣವ ಪ್ರಮುಖ ಮಠವಾದ ಯದುಗಿರಿ ಯತಿರಾಜ ಮಠಾಽಪತಿಗಳೂ ಎಲ್ಲೆಡೆ ಸಂಚರಿಸುತ್ತ ಧರ್ಮ ರಕ್ಷಣೆಯೊಂದಿಗೆ ಆಸ್ತಿಕರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ.

ಕನ್ನಡ ನಾಡಿನ ಧಾರ್ಮಿಕ ಪುಣ್ಯ ಕ್ಷೇತ್ರದಲ್ಲಿ ಮೇಲುಕೋಟೆಯನ್ನು ಭೂವೈಕುಂಠ ಎಂದು ಪುರಾಣದಲ್ಲಿ ಹೆಸರಿಸಲಾಗಿದೆ. ಅಂತೆಯೇ ತಿರುನಾರಾಯಣಪುರಂ, ಯಾದವಾದ್ರಿ, ನಾರಾಯಣಾದ್ರಿ, ಯದುಗಿರಿ ಹೀಗೆ ಹಲವಾರು ಹೆಸರುಗಳಿಂದಲೂ ಶ್ರಿ
ಕ್ಷೇತ್ರವು ಪ್ರಸಿದ್ಧವಾಗಿದೆ. ವೈರಮುಡಿಯ ಹಿನ್ನೆಲೆ: ದ್ವಾಪರ ಯುಗದಲ್ಲಿ ಭಕ್ತ ಪ್ರಹ್ಲಾದನ ಮಗನಾದ ವಿರೊಚನು ಕ್ಷೀರಾಬ್ಥಿ ಶಾಯಿ ಯಾದ ಅನಿರುದ್ಧ ಭಗವಂತನ ಸೇವೆಗೆ ತಾನೂ ನಿತ್ಯಸೂರಿಗಳಂತೆ  ಪ್ರವೇಶ ಮಾಡಿ ಸ್ವಾಮಿಯ ಕೈಂಕರ್ಯ ಗಳಿಂದ ಆನಂದಗೊಳ್ಳುತ್ತಿದ್ದನು.

ಆದರೂ ಹುಟ್ಟುಬುದ್ಧಿಯು ಮರುಕಳಿಸಿ ಸಮಯ ಸಾಧಿಸಿ  ಭಗವಂತನು ಶಯನಿಸುವ ಸಮಯದಲ್ಲಿ ಅವನ ಕಿರೀಟವನ್ನು ಅಪಹರಿಸಿ ಭೂಲೋಕಕ್ಕೆ ಬಂದು ಅಲ್ಲಿಂದ ಪಾತಾಳದಲ್ಲಿ ಅಡಗಿದನು. ಇದನ್ನು ತಿಳಿದ ಭಕ್ತರು ವೈನತೇಯನಿಗೆ ಹೇಳಿ ವಿರೊಚನನಿಂದ ಕಿರೀಟವನ್ನು ಮರಳಿ ತರುವಂತೆ ಪ್ರಾರ್ಥಿಸಿದರು. ಗರುಡನು ಮನೋವೇಗದಲ್ಲಿ ಪತಾಳಕ್ಕೆ ತೆರಳಿ ರಾಕ್ಷಸನಾದ ವಿರೊಚನನ್ನನು ಯುದ್ದದಲ್ಲಿ ಜಯಿಸಿ ಕಿರೀಟವನ್ನು ತರುತ್ತಿರುವಲ್ಲಿ ಮಧುರಾನಗರದಲ್ಲಿ ಶ್ರೀಕೃಷ್ಣನು ಗೋವುಗಳ ಜತೆ ಆನಂದದಿಂದ ಇರುವುದನ್ನು ಕಂಡು ಕೆಳಗಿಳಿದು ನೋಡಲು ಶ್ರೀಕೃಷ್ಣಾವತಾರವು ಗೊಚರಿಸಿತು. ತಾನು ತಂದ ಕಿರೀಟ ವನ್ನು ಇಲ್ಲಿಯೇ ಇರುವ ಶ್ರೀಕೃಷ್ಣ ರೂಪದ ನಾರಾಯಣನಿಗೆ ಅರ್ಪಿಸಲಾಗಿ ಧರಿಸಲು ಅದು ಸರಿಯಾಗಲಿಲ್ಲ. ಆಗ ಗರುಡನು ಮೇಲುಕೋಟೆಗೆ ಶ್ರೀಕೃಷ್ಣ ನೊಡನೆ ಹೋಗಿ ಆತನ ಆರಾಧ್ಯ ದೇವರಾದ ಶ್ರೀಚೆಲುವ ನಾರಾಯಣಸ್ವಾಮಿಗೆ ಧರಿಸಲು ಕಿರೀಟವು ಸರಿಯಾಗಿ ತಲೆಗೆ ಹೊಂದಿಕೊಂಡಿತು.

ಭೂಲೋಕದ ಜನರಿಗೆ ಭಗವಂತನ ಸಂಕಲ್ಪದಿಂದ ಲಭ್ಯವಾಯಿತೆಂದು ಹೇಳಿ ಶ್ರೀಚೆಲುವನಾರಾಯಣ ಸ್ವಾಮಿಯನ್ನು ತನ್ನ ಹೆಗಲ ಮೇಲೆ ಹೊತ್ತು ಉತ್ಸವ ಮಾಡಿದ ಕಾರಣ ಇಂದಿಗೂ ವೈರಮುಡಿ ಉತ್ಸವ ಗರುಡವಾಹನದ ಮೇಲೆ ಜರುಗುತ್ತದೆ.
ವೈನತೇಯನು ತಂದ ಕಿರೀಟವು ವಜ್ರಗಳಿಂದ ಕೂಡಿದ್ದರಿಂದ ಇದಕ್ಕೆ ವೈರಮುಡಿ ಎಂಬ ಹೆಸರು ಶಾಶ್ವತವಾಯಿತು. ನಂತರದಲ್ಲಿ ಕಲಿಯುಗ ಪ್ರಾಪ್ತವಾಗಿ, ಮೇಲುಕೋಟೆಯಲ್ಲಿ ಮೂಲಮೂರ್ತಿಯಾದ ಶ್ರೀತಿರುನಾರಾಯಣಸ್ವಾಮಿಯವರನ್ನು ಪುನರ್ವಸು ನಕ್ಷತ್ರದಂದು ಪುನಃ ಪ್ರತಿಷ್ಠಾಪಿಸಿ, ಉತ್ಸವಮೂರ್ತಿ ಇಲ್ಲದ್ದನ್ನು ಮನಗಂಡು ಆಚಾರ‍್ಯ ಶ್ರೀರಾಮಾನುಜರು ದೆಹಲಿಯ ಬಾದಶಹನ ಅರಮನೆಯಲ್ಲಿ ಅವನ ಮಗಳ ಬಳಿ ಇದ್ದ ಶ್ರೀಚೆಲುವನಾರಾಯಣಸ್ವಾಮಿ ಮೂರ್ತಿಯನ್ನು ತಂದು ಮೇಲುಕೋಟೆಯಲ್ಲಿ ಉತ್ಸವ ಮೂರ್ತಿಯಾಗಿ ಸ್ಥಾಪಿಸಿದರು.

ಈ ಶ್ರೀ ಚೆಲುವನಾರಾಯಣಸ್ವಾಮಿಗೆ ಎಲ್ಲ ಬಗೆಯ ಉತ್ಸವಗಳು ಜರುಗುತ್ತದೆ. ಶ್ರೀ ಚೆಲುವನಾರಾಯಣ ಸ್ವಾಮಿಗೆ ಬ್ರಹ್ಮೋತ್ಸವವನ್ನು ಪಾಲ್ಗುಣ ಮಾಸ/ಮೀನಮಾಸ ದಲ್ಲಿ ಒಂಬತ್ತು ದಿನಗಳ ಕಾಲ ಆಚರಿಸಲಾಗುವುದು. ಈ ನವಾನ್ವಿತ ಬ್ರಹ್ಮೋತ್ಸವದಲ್ಲಿ ನಾಲ್ಕನೇ ದಿನದಂದು ವೈರಮುಡಿ ಕೀರಿಟಧಾರಣೆಯಾಗಿ ಗರುಡವಾಹನ ರೂಢನಾಗಿ ಚೆಲುವನಾರಾಯಣ ಸ್ವಾಮಿಯು ಕಂಗೊಳಿಸುತ್ತಾನೆ. ಈ ನಾಲ್ಕನೇ ತಿರುನಾಳ್ ಅಂದು ಕಿರೀಟಧಾರಣೆಗೆ ಐತಿಹಾಸಿಕ ಕಾರಣವೇ ತ್ರೇತಾಯುಗ ದಲ್ಲಿ ಶ್ರೀ ರಾಮನಿಗೆ ಪಟ್ಟಭಿಷೇಕಕ್ಕೆ ಗೊತ್ತು ಮಾಡಿದ ಪುಷ್ಯಾನಕ್ಷತ್ರದ ಶುಭದಿನವಾಗಿದೆ. ಅಂದು ಶ್ರೀ ಚೆಲುವನಾರಾಯಣ ವೈರಮುಡಿ, ಅರಳೆಲೆ ಪದಕ, ಮುತ್ತುರತ್ನಗಳ ಕರ್ಣಕುಂಡಲಗಳು, ಗಂಡಭೇರುಂಡದ ವಜ್ರಹಾರ, ಶಂಖ, ಚಕ್ರ, ಗದೆ ಸೇರಿದಂತೆ ಅಮೂಲ್ಯ ಆಭರಣಗಳಿಂದ ಶ್ರೀಚೆಲುವನಾರಾಯಣ ಸ್ವಾಮಿಯು ಅಲಂಕೃತನಾಗಿ ಗರುಡ ವಾಹನದ ಮೇಲೆ ವಿಜೃಂಭಿಸುತ್ತಾನೆ.

ಇದೇ ವೈಭವದ ವೈರಮುಡಿ ಬ್ರಹ್ಮೋತ್ಸವ. ಶ್ರೀ ರಾಮಾನುಜಾಚಾರ್ಯರು ಮೇಲುಕೋಟೆ ಬಿಡುವ ಸಂದರ್ಭದಲ್ಲಿ ಭಕ್ತರ ಕೋರಿಕೆ ಮೇರೆಗೆ ತಾವು ನಡೆಸುತ್ತಿದ್ದ ಪೂಜಾಕೈಂಕರ್ಯಗಳ ಪರಿಕರಗಳಿಂದ ವಿಗ್ರಹವನ್ನು ನಿರ್ಮಿಸಿ ಆ ವಿಗ್ರಹದಲ್ಲಿ ಶ್ರೀರಾಮಾನುಜಾಚಾರ್ಯರನ್ನು ಆವಾಹನೆ ಮಾಡಿ ಭಕ್ತರಿಗೆ ಪೂಜೆ ಮಾಡಲು ಅನುಗ್ರಹಿಸಿದರು. ಅದೇ ಶ್ರೀ ರಾಮಾನುಜಾ ಚಾರ್ಯರ ವಿಗ್ರಹವು ಇಂದಿಗೂ ಮೇಲು ಕೋಟೆಯಲ್ಲಿ ಪೂಜಿಸಲ್ಪಡುತ್ತಿದೆ. ಅಲ್ಲದೆ ಮೇಲುಕೋಟೆ ಯಲ್ಲಿ ಶ್ರೀ ರಾಮಾನುಜಾ ಚಾರ್ಯರಿಂದ ನಿರ್ಮಿಸಲ್ಪಟ್ಟ ಸುಮಾರು ೪೫ಕ್ಕೂ ಹೆಚ್ಚು ದೇವಸ್ಥಾನಗಳು, ತೊಣ್ಣೂರು ಕೆರೆಯನ್ನು ಸೇರಿದಂತೆ ೩೪ ಪ್ರಮುಖ ಕೊಳ ಮತ್ತು ಕೆರೆಗಳು, ೨೦ಕ್ಕೂ ಹೆಚ್ಚಿನ ಮಂಟಪಗಳೂ ಹಾಗೂ ಹಲವಾರು ವಿವಿಧ ಮಠಗಳಿಂದ ಕೂಡಿದ್ದು ಮಂಡ್ಯ ಜಿಲ್ಲೆಯ ಪ್ರಮುಖ ಪ್ರೇಕ್ಷಣೀಯ ಸ್ಥಳವೂ ಆಗಿದೆ.