Wednesday, 9th October 2024

ವೇದ ಸುಳ್ಳಾದರೂ ವಜ್ರೇಶ್ವರಿ ಸುಳ್ಳಾಗದಿರಲಿ !

ಹಂಪಿ ಎಕ್ಸ್’ಪ್ರೆಸ್

1336hampiexpress1509@gmail.com

ಕನ್ನಡದ ಅನೇಕ ಕಾದಂಬರಿಕಾರರು ಹೀಗೆ ಕನ್ನಡಿಗರು ಮರೆಯಲಾಗದಂಥ ಚಿತ್ರಗಳನ್ನು ನೀಡುತ್ತಾರೆ ಪಾರ್ವತಮ್ಮನವರು. ಅಷ್ಟೇ ಅಲ್ಲ, ಕನ್ನಡ ಚಿತ್ರರಂಗಕ್ಕೊಂದು ನೈತಿಕತೆ, ಸಾಮಾಜಿಕ ಬದ್ಧತೆ, ಕೌಟುಂಬಿಕ ಮಾರ್ಗದರ್ಶನ, ಸಂಬಂಧಗಳ ಪ್ರೀತಿ, ಮಹತ್ವ, ಸಾಂಸ್ಕೃತಿಕ ಹಿರಿಮೆ, ಭಾಷಾಭಿಮಾನವನ್ನು ಜತೆಗೇ ಕಟ್ಟಿಕೊಡುತ್ತಾರೆ.

ಹಳ್ಳಿಯೊಂದರಲ್ಲಿ ಪಯಣಿಸುತ್ತಿದ್ದ ವರನಟ ರಾಜಣ್ಣನವರ ಕಾರು ನಿಂತಾಗ ವೃದ್ದೆಯೊಬ್ಬಳು ಬಂದು ರಾಜಣ್ಣನವರಿಗೆ ನಮಸ್ಕರಿಸಿ ಗಲ್ಲಮುಟ್ಟಿ ನೆಟಿಕೆ ಮುರಿದು ದೃಷ್ಟಿ ತೆಗೆಯುತ್ತಾಳೆ. ಆಗ ರಾಜಣ್ಣನರು ತಮ್ಮ ಚಾಲಕನಿಗೆ ಅಜ್ಜಿಗೆ ಹಣ ನೀಡಲು ಸೂಚಿಸುತ್ತಾರೆ.

ಚಾಲಕ ಒಂದು ನೋಟನ್ನು ಎತ್ತಿ ಅಜ್ಜಿ ಕೈಗಿಟ್ಟಾಗ, ಅಣ್ಣಾವ್ರು ‘ನೂರು ರುಪಾಯಿಯಲ್ಲ, ಐನೂರು ರುಪಾಯಿ ಕೊಡಪ್ಪಾ’ ಎನ್ನುತ್ತಿದ್ದಂತೆ ಚಾಲಕ ‘ಅಪ್ಪಾಜೀ, ಇದು ನೂರು ರುಪಾಯಿ ನೋಟಲ್ಲ, ಐದುನೂರು ರುಪಾಯಿ ನೋಟೇ!’ ಎನ್ನುತ್ತಾನೆ. ಆಗ ಅಣ್ಣಾವ್ರು ‘ಓ..ಹೋ.. ಐದು ನೂರು ರೂಪಾಯಿ ನೋಟೂ ಬಂದಿದಿಯಾ ?’ ಎಂದು ಆಶ್ಚರ್ಯಚಿಕಿತರಾಗುತ್ತಾರೆ. ವರನಟ
ರಾಜ್ ಅವರಿಗೆ ಹಣಕಾಸಿನ ವಿಚಾರದಲ್ಲಿದ್ದ ಜ್ಞಾನ ಇದು! ಅದಕ್ಕೇ ಅಂದು ಪಾರ್ವತಮ್ಮನವರು ಅಣ್ಣಾವ್ರ ಚಿತ್ರಗಳ ಹಣಕಾಸಿನ ವ್ಯವಹಾರಗಳನ್ನು ಸ್ವತಃ ತಾವೇ ಕೈಗೆತ್ತಿಕೊಂಡು ತಮಗೆ ಯಾರಿಂದಲೂ ಅನ್ಯಾಯವಾಗದಂತೆ, ತಮ್ಮಿಂದಲೂ ಯಾರಿಗೂ ಅನ್ಯಾಯವಾಗದಂತೆ ನೋಡಿಕೊಂಡು ಕನ್ನಡ ಚಿತ್ರರಂಗದ ಗಟ್ಟಿಗಿತ್ತಿ ನಿರ್ಮಾಪಕಿಯಾಗಿ ‘ವಜ್ರೇಶ್ವರಿ’ ಸಂಸ್ಥೆಯನ್ನು ಕಟ್ಟಿ ಬೆಳೆಸಿದರು.

ಹೀಗಾಗಿಯೇ ಅದನ್ನು ಈಗಲೂ ‘ದೊಡ್ಮನೆ’ ಎಂದು ಕರೆಯಲಾಗುತ್ತದೆ. ಡಾ.ರಾಜ್ ಅವರು ಮೊದಲ ಚಿತ್ರದಿಂದಲೇ
ನಿರ್ಮಾಪಕ ಪಾಲಿಗೆ ನೊರೆಹಾಲು ನೀಡುವ ಕಾಮಧೇನುವಿನಂತಿದ್ದರು. ಆಗೆಲ್ಲ ಸಿನಿಮಾವೆಂಬುದು ಶುದ್ಧ ಮನರಂಜನೆ ಮತ್ತು ಸಾಮಾಜಿಕ ಬದ್ಧತೆಯ ಬುಡದಮೇಲೇ ಹುಟ್ಟಿಬೆಳೆದದ್ದು. ಈಗಿನಂತೆ ರಾಜಕೀಯ ಭವಿಷ್ಯ ಕಂಡುಕೊಳ್ಳಲು ಐಟಂ ಮುಖಗಳಂತೆ, ದುಡ್ಡು ಹೆಚ್ಚಾದವರೆಲ್ಲ ಹೀರೋಗಳಾದಂತೆ, ನೂರು ಚಿತ್ರಗಳನ್ನು ನೋಡಿದ ಕೂಡಲೇ ತಾನೇ ಹೀರೋ ಎಂದುಕೊಳ್ಳುವ ತೆವಲುಗಳಿಗೆಲ್ಲ ಚಿತ್ರರಂಗವನ್ನು ಬಳಸಿಕೊಳ್ಳುವಂತೆ, ಹಣ ಮಾಡಲು ದಂಧೆ ಮಾಡಲು ಚಿತ್ರರಂಗದಲ್ಲಿ ಇರಲಿಲ್ಲ.

ಕನ್ನಡ ಚಿತ್ರರಂಗವೆಂಬುದು ಒಂದು ವಿಶ್ವವಿದ್ಯಾಲಯದಂತಿತ್ತು. ಇಂಥ ಕಾಲದಲ್ಲಿ ವರ್ಷಕ್ಕೆ ಹತ್ತರಿಂದ ಹದಿನೈದು ಅಣ್ಣಾವ್ರ ಚಿತ್ರಗಳು ಬಿಡುಗಡೆಗೊಳ್ಳುತ್ತಿದ್ದವು. ಹೇಳಿಕೇಳಿ ಸಿನಿಮಾ ಎಂಬುದು ಲಾಟರಿ ಇದ್ದಂತೆ. ಬಂದರೆ ಬಂತು, ಇಲ್ಲವೆಂದರೆ ಎಲ್ಲವೂ ಹೋಯ್ತು ಎಂಬಂಥ ಕಾಲದಲ್ಲಿ ಕೆಲ ನಿರ್ಮಾಪಕರು ಬೇರೆ ಚಿತ್ರಗಳಿಂದ ಕಳೆದುಕೊಂಡ ಹಣ ಮತ್ತು ಸಾಲವನ್ನು ತೀರಿಸಲು ಅಣ್ಣಾವ್ರನ್ನು ಬಳಸಿಕೊಂಡು ಚಿತ್ರ ನಿರ್ಮಿಸಿ ಹಣ ಮಾಡುತ್ತಿದ್ದರೇ ವಿನಃ ಅಣ್ಣಾವ್ರಿಗೆ ನ್ಯಾಯಬದ್ಧವಾಗಿ ಕೊಡಬೇಕಿದ್ದ ಹಣಕ್ಕೆ ದೋಕಾ ಮಾಡುತ್ತಿದ್ದದ್ದೇ ಹೆಚ್ಚು.

ಪಾಪ, ಅಣ್ಣಾವ್ರಿಗೆ ಹಣಕಾಸಿನ ಬಗ್ಗೆ ವ್ಯಾಮೋಹ, ಅತಿಯಾಸೆ ಇರುತ್ತಿರಲಿಲ್ಲ. ಹೀಗಾಗಿ ಹಾಲು ನೀಡುತ್ತಿದ್ದ ಹಸುವಿಗೆ ಮೇವನ್ನೇ ಹಾಕದೆ ಮೋಸವಾಗುತ್ತಿದ್ದಾಗ ಅಖಾಡಕ್ಕೆ ಇಳಿದವರೇ ಪಾರ್ವತಮ್ಮನವರು. ಆಗಾಗಲೇ ಕಪ್ಪುಬಿಳುಪಿನ ಕಾಲದ ಜಿ.ವಿ.ಅಯ್ಯರ್, ಆರ್.ನಾಗೇಂದ್ರರಾಯರು, ಬಿ.ಆರ್.ಪಂತಲು ಅವರಂಥ ನಿರ್ದೇಶಕರು, ರಾಜ್ ಅವರೊಂದಿಗೆ ಸಹನಟ ರಾಗಿದ್ದ ದ್ವಾರಕೀಶ್, ನರಸಿಂಹರಾಜು, ಬಾಲಕೃಷ್ಣ, ಎಂ.ಪಿ.ಶಂಕರ್, ಶಿವರಾಮು, ವಾದಿರಾಜು, ಶ್ರೀನಾಥ್ ಇನ್ನು ಅನೇಕ ಕಲಾವಿದರು ಚಿತ್ರನಿರ್ಮಾಣಕ್ಕೆ ಇಳಿದಿದ್ದರು. ಅಲ್ಲಿಯವರೆಗೂ ಬಹಳಷ್ಟು ಮೋಸವನ್ನು ಸಹಿಸಿಕೊಂಡು ಬಂದ ಪಾರ್ವತಮ್ಮ ನವರು ತಾವೇ ಸಂಪೂರ್ಣ ನಿರ್ಮಾಪಕಿಯಾಗಿ ತಮ್ಮ ಮಗಳ ಹೆಸರಿನ ‘ಪೂರ್ಣಿಮಾ ಎಂಟರ್‌ಪ್ರೈಸಸ್’ ಮೂಲಕ ಮೊದಲ ಬಾರಿಗೆ ೧೯೭೫ರಲ್ಲಿ ‘ತ್ರಿಮೂರ್ತಿ’ ಚಿತ್ರ ನಿರ್ಮಿಸಿದರು.

ಅಲ್ಲಿಂದ ಶುರುವಾದ ವಜ್ರೇಶ್ವರಿ ವೈಭವ ಇಡೀ ಕನ್ನಡ ಚಿತ್ರರಂಗದಲ್ಲಿ ‘ದೊಡ್ಮನೆ’ ಬಿರುದನ್ನು ತಂದುಕೊಟ್ಟಿದೆ. ಪೂರ್ಣಿಮಾ
ಎಂಟರ್‌ಪ್ರೈಸಸ್, ವಜ್ರೇಶ್ವರಿ ಕಂಬೈನ್ಸ್, ದಾಕ್ಷಾಯಣಿ ಕಂಬೈನ್ಸ್, ಕಾತ್ಯಾಯಿನಿ ಕಂಬೈನ್ಸ್, ನಿರುಪಮಾ ಆರ್ಟ್ಸ್, ವೈಷ್ಣವೀ ಮೂವೀಸ್, ನಿಖಿಲೇಶ್ವರಿ, ಭಾರ್ಗವಿ, ಚೌಡೇಶ್ವರಿ, ಭಗವತಿ, ಶ್ರೀಲಕ್ಷ್ಮೀ ಹೀಗೆ ಅಂದು ಚಿತ್ರಗಳ ಶೀರ್ಷಿಕೆಯಷ್ಟೇ ಈ ಹೆಸರುಗಳು ಕನ್ನಡಿಗರಿಗೆ ಚಿರಪರಿಚಿತವಾಗಿತ್ತು. ಈ ಬ್ಯಾನರ್‌ಗಳ ಅನೇಕ ಜನಪ್ರಿಯ ಚಿತ್ರಗಳನ್ನು ನೀಡಿದ ಪಾರ್ವತಮ್ಮ ನವರೊಂದಿಗೆ ಎಸ್.ಪಿ. ವರದರಾಜ್, ಕಥೆ-ಚಿತ್ರಕತೆ-ಸಂಭಾಷಣೆ ಚತುರ ಚಿ.ಉದಯಶಂಕರ್, ಕಥೆ-ಚಿತ್ರಕತೆ ತಜ್ಞ
ಎಂ.ಡಿ.ಸುಂದರ್, ದೊರೈ-ಭಗವಾನ್, ಎಂ.ಎಸ್. ರಾಜಶೇಖರ್, ಸಂಗೀತಗಾರ ಉಪೇಂದ್ರಕುಮಾರ್, ಕನ್ನಡದ ಅನೇಕ ಕಾದಂಬರಿಕಾರರ ಬೆಂಬಲದೊಂದಿಗೆ ಕನ್ನಡಿಗರು ಮರೆಯಲಾಗದಂಥ ಚಿತ್ರಗಳನ್ನು ನೀಡುತ್ತಾರೆ ಪಾರ್ವತಮ್ಮನವರು.

ಅಷ್ಟೇ ಅಲ್ಲ, ಕನ್ನಡ ಚಿತ್ರರಂಗಕ್ಕೊಂದು ನೈತಿಕತೆ, ಸಾಮಾಜಿಕ ಬದ್ಧತೆ, ಕೌಟುಂಬಿಕ ಮಾರ್ಗದರ್ಶನ, ಸಂಬಂಧಗಳ ಪ್ರೀತಿ ಮಹತ್ವ, ಸಾಂಸ್ಕೃತಿಕ ಹಿರಿಮೆ, ಭಾಷಾಭಿಮಾನವನ್ನು ಜತೆಗೇ ಕಟ್ಟಿಕೊಡುತ್ತಾರೆ. ಒಂದೆಡೆ ಆ ಕಾಲದಲ್ಲಿ ಅದ್ದೂರಿ ಚಿತ್ರಗಳ ನಿರ್ಮಾಣ ಸಂಸ್ಥೆಯಾದ ಶ್ರೀಕಾಂತ್ ಅಂಡ್ ಶ್ರೀಕಾಂತ್, ಎವಿಎಂ, ಈಶ್ವರಿ, ಕೆಸಿಎನ್, ದ್ವಾರಕೀಶ್ ಚಿತ್ರ, ಎಂ.ಪಿ.ಶಂಕರ್ ಅವರ ಭರಣಿ, ದೊರೈ-ಭಗವಾನ್, ರಜಸ್ಸು ಕಂಬೈನ್ಸ್, ರಾಶಿ ಬ್ರದರ್ಸ್ ಹೀಗೆ ಅನೇಕ ಸಂಸ್ಥೆಗಳಿಂದಲೂ ಉತ್ತಮ ಚಿತ್ರಗಳು ನಿರ್ಮಾಣವಾಗುತ್ತಿದ್ದವು.

ಆದರೆ ವಜ್ರೇಶ್ವರಿ ಸಂಸ್ಥೆಯಿಂದ ‘ಚಿತ್ರದ ಶೀರ್ಷಿಕೆ ಘೋಷಣೆ, ಮುಹೂರ್ಥ ಸಮಾರಂಭ, ಭರದಿಂದ ಚಿತ್ರೀಕರಣ, ಮುಂದಿನ
ಬಿಡುಗಡೆ, ಇಂದಿನಿಂದ, ನೂರನೇ ದಿನ, ಅಮೋಘ 25ನೇ ವಾರ, 50ನೇ ವಾರ…’ ಹೀಗೆ ಕನ್ನಡಿಗರಿಗೆ ಈ ಪದಗಳು ಪುಳಕ ವನ್ನುಂಟು ಮಾಡುತ್ತಿದ್ದವು. ಸುಮಾರು ಎಂಬತ್ತು ಚಿತ್ರಗಳನ್ನು ನಿರ್ಮಿಸಿದ ಪಾರ್ವತಮ್ಮನವರ ಸಾಮಾಜಿಕ ಬದ್ಧತೆ ಎಷ್ಟರ ಮಟ್ಟಿಗಿತ್ತೆಂದರೆ ಅವರ ‘ಓಂ’ ಚಿತ್ರಕ್ಕೆ ಮೊದಲ ಬಾರಿಗೆ ‘ಎ’ ಸರ್ಟಿಫಿಕೇಟ್ ನೀಡಬೇಕಾದ ಸಂದರ್ಭ ಬಂದಾಗ ಆ
ಕುಟುಂಬ ಆಘಾತಗೊಂಡಿತ್ತು. ಅದಕ್ಕಿಂತ ಅದ್ಭುತವೆಂದರೆ ಹೆಂಡ ಇಳಿಸುವ ಮೂಲ ಕಸುಬಿನ ಹಿನ್ನೆಲೆಯವರಾದ ಈಡಿಗ ಕುಲದವರಾದ ಸ್ವತಃ ಪಾರ್ವತಮ್ಮನವರೇ ಕುಡಿತದ ವಿರುದ್ಧ ಸಮಾಜ ತಿರುಗಿಬೀಳುವಂತೆ ‘ಜೀವನ ಚೈತ್ರ’ ನಿರ್ಮಿಸಿ ಜಾಗೃತಿ ಮೂಡಿಸಿದ್ದರು.

ಸಾಲದೆಂಬಂತೆ ಅದೇ ಸಮಯದಲ್ಲಿ ತಮ್ಮ ಬೀಗರಾದ ಬಂಗಾರಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಈಗ ಹೇಳಿ,
ಇಂದು ಸ್ವಾಮೀಜಿಗಳಿಂದ ಹಿಡಿದು ರಾಜಕಾರಣದವರೆಗೂ ಜಾತಿ, ಸ್ವಜಾತಿಯಿಂದಲೇ ಸಮಾಜ ನಡೆಯುತ್ತಿರುವಾಗ ಅಂದು ಪಾರ್ವತಮ್ಮನವರಿಗಿದ್ದ ಗುಂಡಿಗೆ ಮತ್ತು ಸಾಮಾಜಿಕ ಕಳಕಳಿ ಇಂದು ಯಾವನಿಗಿದೆ? ತಮ್ಮ ಮಕ್ಕಳಾದ ಶಿವಣ್ಣ, ರಾಘವೇಂದ್ರ, ಪುನೀತ್ ಅವರು ಮೊದಲು ಸಿನಿಮಾಕ್ಕೆ ಸಂಬಧಿಸಿದ ಎಲ್ಲ ವಿದ್ಯೆ, ಅರ್ಹತೆ, ತರಬೇತಿ ಗಳನ್ನು ಪಡೆದು, ವಿವಾಹವಾದ ನಂತರವೇ ನಾಯಕ ನಟರಾದದ್ದು.

ಇದೂ ಪಾರ್ವತಮ್ಮ ನವರ ಕಟ್ಟಳೆಯಾಗಿತ್ತು. ಆದರೆ ಅಣ್ಣಾವ್ರನ್ನು ನರಹಂತಕ ವೀರಪ್ಪನ್ ಅಪಹರಣ ಮಾಡಿದನಲ್ಲ, ಅಂಥ ಸಂದರ್ಭದಲ್ಲಿ ಎದುರಿಸಿದ ಆತಂಕ, ತೋರಿದ ಸಹನೆ, ಅದಕ್ಕಾಗಿ ನಡೆಸಿದ ಪ್ರಯತ್ನಗಳು, ಸರಕಾರದೊಂದಿಗೆ ನಡೆದು ಕೊಂಡ ರೀತಿ ಇದೆಲ್ಲವೂ ಅಣ್ಣಾವ್ರನ್ನು ಸುರಕ್ಷಿತವಾಗಿ ಹಿಂತಿರುಗುವಂತೆ ಮಾಡಿತ್ತು. ಎಂಥ ಕಠಿಣ ಪರಿಸ್ಥಿತಿ ಎದುರಾದರೂ ಅದನ್ನು ಸೂಕ್ಷ್ಮವಾಗಿ ನಿಭಾಯಿಸುವ ಗಟ್ಟಿಗಿತ್ತಿಯಾಗಿದ್ದ ಪಾರ್ವತಮ್ಮನವರು ಸ್ಥಾಪಿಸಿದ ‘ವಜ್ರೇಶ್ವರಿ’ ವೈಭವ ಅಸ್ತಂಗತ ವಾಯಿತೇ ಎನ್ನುವ ಒಂದು ಪ್ರಶ್ನೆ ಮೊನ್ನೆ ಹುಟ್ಟಿಕೊಂಡಿದೆ.

ಇಂಥ ತಂದೆತಾಯಿಯನ್ನು ಕಳೆದುಕೊಂಡ ಪುನೀತ್ ಅವರು ಅವರ ಸ್ಮರಣಾರ್ಥಕ್ಕಾಗಿ ಮತ್ತು ಬದಲಾದ ಚಿತ್ರನಿರ್ಮಾಣದ ತಾಂತ್ರಿಕ ನಿಯಮಗಳಿಂದಾಗಿ ‘ಪಿಆರ್‌ಕೆ’ (ಪಾರ್ವತಮ್ಮ ರಾಜಕುಮಾರ್) ಪ್ರೊಡಕ್ಷನ್ ಆರಂಭಿಸಿದರು. ಈ ಸಂಸ್ಥೆಗೆ ಪುನೀತ್ ಅವರೇ ಬಂಡವಾಳ. ಏಕೆಂದರೆ ಹತ್ತಾರು ಕೋಟಿ ಸಂಭಾವನೆ ಪಡೆದು ಅದನ್ನು ಮರಳಿ ಸಮಾಜಕ್ಕೆ ಚಿತ್ರರಂಗಕ್ಕೆ ಚೆಲ್ಲುತ್ತಿದ್ದ ಅಪ್ಪು ಅವರ ಕನಸಿನ ಯೋಜನೆಗಳೆಲ್ಲವೂ ದುರದೃಷ್ಟ ವಶವಾಯಿತು. ಈಗ ಅವರ ಪತ್ನಿ ಅಶ್ವಿನಿಯವರು ಚಿತ್ರ ನಿರ್ಮಾಣ
ಮಾಡುವುದು ಅಷ್ಟು ಸುಲಭದ ಮಾತಲ್ಲ.

ಇನ್ನು ಪಾರ್ವತಮ್ಮನವರು ವಜ್ರೇಶ್ವರಿ ಸಂಸ್ಥೆಯಡಿಯಲ್ಲಿ ಮೂರನೇ ತಲೆಮಾರು ಎಂಬಂತೆ ರಾಘಣ್ಣನ ಮಗ ವಿನಯ್ ಅವರ
ಎರಡು ಚಿತ್ರಗಳನ್ನೂ ನಿರ್ಮಿಸಿದ್ದರು. ಆದರೆ ಈಗ ವಜ್ರೇಶ್ವರಿಯನ್ನು ರಾಘಣ್ಣ ಮುಂದುವರೆಸಲು ಅದೆಷ್ಟು ಸಾಧ್ಯವೆಂಬುದು
ಪ್ರಶ್ನೆ. ರಾಘಣ್ಣ ವಜ್ರೇಶ್ವರಿ ಹೆಸರಿನಲ್ಲಿ ಟ್ವಿಟರ್, ಇನ್‌ಸ್ಟಾಗ್ರಾಂ, ಪೇಸ್ಬುಕ್ ಖಾತೆಗಳನ್ನು ಹೊಂದಿದ್ದರೂ ಹಳೆಯ ವೈಭವ ಗಳನ್ನೇ ಪೋಸ್ಟ್ ಮಾಡುವುದರ ಮೂಲಕ ಜೀವಂತವಾಗಿಟ್ಟಿದ್ದಾರೆ.

ಇನ್ನು ಶಿವಣ್ಣನವರು ವಜ್ರೇಶ್ವರಿ ಹೆಸರಿನಲ್ಲಿ ನಿರ್ಮಾಣ ಮುಂದುವರಿಸಬಹುದೇ ಎಂಬ ಭರವಸೆ ಮೊನ್ನೆ ಕಳಚಿ ಬಿದ್ದಿದೆ. ಕಳೆದ
ವಾರ ಬಿಡುಗಡೆಗೊಂಡ ‘ವೇದ’ ಚಿತ್ರವು ಮೊದಲಬಾರಿಗೆ ಶಿವಣ್ಣ ತಮ್ಮ ಪತ್ನಿಹೆಸರಿನ ‘ಗೀತಾ ಪಿಕ್ಚರ್ಸ್’ ಬ್ಯಾನರ್‌ನಡಿಯಲ್ಲಿ ಸ್ವಂತ ನಿರ್ಮಾಣ ಆರಂಭಿಸಿದ್ದಾರೆ. ಆ ಮೂಲಕ ವಜ್ರೇಶ್ವರಿಯ ಗೂಡಿನಿಂದ ಮತ್ತೊಂದು ಹಕ್ಕಿ ಹಾರಿಹೋಯಿತೇ, ವಜ್ರೇಶ್ವರಿ ಮತ್ತು ದೊಡ್ಮನೆ ವೈಭವ ಕಳೆದು ಹೋಗುತ್ತಿದೆಯೇ ಎಂಬುದು ಸದ್ಯದ ಚಿತ್ರರಂಗದ ನಿರಾಸೆಯ ವಿಚಾರ.

ಚಿತ್ರರಂಗದಲ್ಲಿ ನಿರ್ಮಾಣ ಸಂಸ್ಥೆಗಳು ಭದ್ರವಾಗಿ ತಳವೂರುವುದು ಸುಲಭದ ಮಾತಲ್ಲ. ಎನ್.ವೀರಾಸ್ವಾಮಿಯಂಥವರ ಈಶ್ವರಿ ಸಂಸ್ಥೆಯ ರವಿಚಂದ್ರನ್ ಅವರ ಈಗಿನ ಸ್ಥಿತಿ ನೋಡಿದ್ದೇವೆ. ಹಾಗೆಯೇ ಕೆಸಿಎನ್ ಗೌಡರ, ದ್ವಾರಕೀಶ್, ಶಂಕರ್ ಸಿಂಗ್ ಅವರ ‘ಮಹಾತ್ಮ ಪಿಕ್ಚರ್ಸ್’ ಕಂಪನಿಗಳೂ ಕಳೆದುಹೋಗುತ್ತಿವೆ. ತೆಲುಗಿನಲ್ಲಷ್ಟೇ ಅಲ್ಲ, ಭಾರತೀಯ ಚಿತ್ರರಂಗದ ದಿಗ್ಗಜರುಗಳ ಬಹುಭಾಷೆಗಳಲ್ಲಿ ೧೫೦ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿ ಗಿನ್ನಿಸ್ ದಾಖಲೆ ಬರೆದ ಡಿ.ರಾಮನಾಯ್ಡು ಅವರ ಸುರೇಶ್ ಪ್ರೊಡಕ್ಸನ್ಸ್ ಕಂಪನಿಯೇ ಇಂದು ತನ್ನ ಕೊನೆಯ ವಾರಸುದಾರ ನಟ ವೆಂಕಟೇಶ್‌ರ ಚಿತ್ರ ಮಾತ್ರಕ್ಕೆ ಬಂದು ನಿಂತಿದೆ. ಮೊನ್ನೆ ಚಕ್ರವರ್ತಿ ಸೂಲಿಬೆಲೆ ಯವರು ಒಂದು ವೇದಿಕೆಯಲ್ಲಿ ‘ಕನ್ನಡನಾಡು ಹೆಸರು ಇರುವವರೆಗೂ ಡಾ.ರಾಜ್ ಹೆಸರು ಇದ್ದೇ ಇರುತ್ತದೆ, ಹಿಂದಿ ಚಿತ್ರರಂಗ ರಾಷ್ಟ್ರಗೇಡಿ ಮನಸ್ಥಿತಿಯಿಂದ ಕುಲಗೆಟ್ಟು ಹೋಗಿದೆ, ಆದರೆ ಯಾರ ಹಂಗಿಲ್ಲದೆ ಕನ್ನಡ ಚಿತ್ರರಂಗ ತನ್ನ ತನವನ್ನು ಕಾಪಾಡಿಕೊಂಡು ಬಂದಿದೆಯೆಂದರೆ ನಿಸ್ಸಂಶಯವಾಗಿ ಅದು ರಾಜಣ್ಣನವರ ಕಾರಣ
ಕ್ಕಾಗಿ’ ಎಂದು ಹೇಳಿದರು.

ಇದಕ್ಕೆ ನಿಸ್ಸಂಶಯವಾಗಿಯೂ ಪಾರ್ವತಮ್ಮನವರ ನಿರ್ಮಾಣ ಸಂಸ್ಥೆ ವಜ್ರೇಶ್ವರಿ ಕೊಡುಗೆಯೂ ಅಪಾರವೆಂಬುದು ಸುಳ್ಳಲ್ಲ.
ಆದ್ದರಿಂದ ಶಿವಣ್ಣನವರು ಹತ್ತು ವೇದ ನಿರ್ಮಿಸಲಿ ಆದರೆ ವರ್ಷಕ್ಕೆ ಒಂದಾದರೂ ‘ವಜ್ರೇಶ್ವರಿ-ಪೂರ್ಣಿಮಾ’ ಬ್ಯಾನರ್‌ನಡಿಯಲ್ಲಿ
ಕಾದಂಬರಿ ಆಧರಿತ ಕೌಟುಂಬಿಕ ಚಿತ್ರಗಳನ್ನಾದರೂ ನಿರ್ಮಿಸಿ ‘ದೊಡ್ಮನೆ’ ಹೆಸರನ್ನು ಉಳಿಸಿಕೊಂಡು ಹೋಗುವಂತಾಗಲಿ.
ಕನ್ನಡನಾಡಿನ ಸಾಂಸ್ಕೃತಿಕ ವ್ಯಕ್ತಿ-ಶಕ್ತಿಯಾಗಿ ಬೆಳೆದ ಅಣ್ಣಾವ್ರ ಮತ್ತು ಶಿವಣ್ಣನವರ ಆರಂಭಿಕ ಅನೇಕ ಚಿತ್ರಗಳ ಬೆನ್ನೆಲು ಬಾಗಿದ್ದ ವಜ್ರೇಶ್ವರಿ ವೈಭವವನ್ನು ಮರುಕಳಿಸುವಂಥ ಪ್ರಯತ್ನವನ್ನು ಶಿವಣ್ಣ ಮಾಡಬೇಕಿದೆ.

ರಾಘಣ್ಣನ ಮಕ್ಕಳ ಚಿತ್ರವಲ್ಲದಿದ್ದರೂ ವಿಭಿನ್ನ, ಹೊಸತನ ಕನಸನ್ನು ಹೊತ್ತು ಬರುವ ಪ್ರತಿಭಾವಂತ ಸಂಭಾವಿತರಿಗೆ
ವಜೇಶ್ವರಿ ಮೂಲಕ ಅವಕಾಶ ನೀಡುವ ಕೆಲಸವಾಗಲಿ. ಬರಿಯ ಇಪ್ಪತ್ತು ಚಿತ್ರಗಳ ಹೀರೋ ಆದ ಅಪ್ಪು ಇಂಥದ್ದೇ ಕನಸು ಕಂಡಿದ್ದರು. ಆದರೆ ೧೨೫ ಚಿತ್ರಗಳನ್ನು ದಾಟಿರುವ ಶಿವಣ್ಣ ಮನಸ್ಸು ಮಾಡಬೇಕಷ್ಟೇ. ಜತೆಗೆ ರಾಜವಂಶದ ಗಂಡು ಕುಡಿಗಳಾದ ವಿನಯ್ ಮತ್ತ ಯುವರಾಜ್ ಅವರನ್ನು ವಜ್ರೇಶ್ವರಿ ಮೂಲಕವೇ ಚಿತ್ರರಂಗದಲ್ಲಿ ಒಂದು ಭದ್ರನೆಲೆ ಕಲ್ಪಿಸುವ ಪ್ರಯತ್ನವನ್ನೂ ಮಾಡಬಹುದಲ್ಲವೇ? ಸದಭಿರುಚಿಯ, ಸಮಾಜಮುಖಿಯಾದ, ಸಾಂಸಾರಿಕ ಸಾಂಸ್ಕೃತಿಕ ಶ್ರೇಷ್ಠ ಚಿತ್ರಗಳ ನಿರ್ಮಾಣದ ಮೂಲಕ ಚಿತ್ರರಂಗಕ್ಕೆ ಮತ್ತು ನಾಡಿಗೆ ಒಂದು ಘನತೆ ಗೌರವ ಸೃಷ್ಟಿಸಿದ ‘ವಜ್ರೇಶ್ವರಿ ವೈಭವ’ ಮರುಕಳಿಸು ವಂತಾಗಲಿ.