Thursday, 12th December 2024

ರಾಜಕಾರಣಿಗಳ ಮೌಲ್ಯಮಾಪನದತ್ತ ಒಂದು ದಿಟ ಹೆಜ್ಜೆ

ಅಭಿಮತ

ಪ್ರೊ.ಆರ್‌.ಜಿ.ಹೆಗಡೆ

ಕರ್ನಾಟಕ ವಿಧಾನಸಭೆ ಇತ್ತೀಚೆಗೆ ಕೆಲವು ಪ್ರಶಂಸನೀಯ ಸಂಪ್ರದಾಯಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಒಂದು ’ಶ್ರೇಷ್ಠ ಶಾಸಕ ಪ್ರಶಸ್ತಿ’ಯ ಸ್ಥಾಪನೆ. ಕಳೆದ ವರ್ಷ ಈ ಗೌರವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಸಂದಿದೆ. ಈ ವರ್ಷ ಬೆಳಗಾವಿ ಅಧಿವೇಶನದ ಅವಧಿಯಲ್ಲಿ ಶ್ರೇಷ್ಠ ಶಾಸಕ ಎಂದು ಆರ್.ವಿ.ದೇಶಪಾಂಡೆ ಯವರನ್ನುಆಯ್ಕೆ ಮಾಡಲಾಗಿದೆ.

ಪ್ರಶಸ್ತಿಯ ಹಿಂದಿರುವ ಚಿಂತನೆ ಮಹತ್ವದ್ದು. ರಾಜಕೀಯ ಕ್ಷೇತದಲ್ಲಿ ಶ್ರೇಷ್ಠತೆಯ ಪರಿಕಲ್ಪನೆಯನ್ನು ಮೂಡಿಸುವ ಪ್ರಯತ್ನ ವನ್ನುಅದು ಮಾಡಿದೆ. ಹಿನ್ನೆಲೆಯಲ್ಲಿ ಪ್ರಶಸ್ತಿ ಕೆಲವು ಪ್ರಶ್ನೆಗಳನ್ನು ಕೇಳುತ್ತದೆ: ಶ್ರೇಷ್ಠ ಶಾಸಕ ಎಂದರೇನು? ಶಾಸಕರು ಹೇಗೆ, ಯಾವ ರೀತಿಯಲ್ಲಿ ಕೆಲಸ ಮಾಡಬೇಕು? ಇತ್ಯಾದಿ. ಮೇಲಿನ ಮಹನೀಯರನ್ನು ಗುರುತಿಸುವ ಮೂಲಕ ಅದು ಪ್ರಶ್ನೆಗಳಿಗೆ ಉತ್ತರಗಳನ್ನೂ ಉದಾಹರಣೆಗಳ ಮೂಲಕ ಹೇಳಿದೆ.

ರಾಜಕೀಯ ಸೇವೆಯ ಗುಣಮಟ್ಟವನ್ನು ದಾಖಲಿಸಬಲ್ಲ, ಅಳೆಯಬಲ್ಲ ಮೌಲ್ಯಮಾಪನ ಮಾಡಬಲ್ಲ ಅಳತೆಗೋಲುಗಳನ್ನು ಸೃಷ್ಟಿಸುವ ಪ್ರಯತ್ನಗಳನ್ನು ಅದು ಮಾಡಿದೆ.

ಸ್ಟಾಂಡರ್ಡ್‌ಗಳನ್ನು ಬೆಳೆಸುವತ್ತ ಹೆಜ್ಜೆಯಿಟ್ಟಿದೆ. ರಾಜಕಾರಣಗಳ ಮೌಲ್ಯ ಮಾಪನಕ್ಕಾಗಿ ಅಸೆಸ್‌ಮೆಂಟ್ ಮತ್ತು ಅಕ್ರೆಡಿ ಟೇಶನ್ ವ್ಯವಸ್ಥೆಯನ್ನು ಜಾರಿಗೆ ತರುವ ಕಲ್ಪನೆಗೆ ನೀರೆರೆ ದಿದೆ.

ಮೌಲ್ಯಮಾಪನ ಮಾಡಿ ಫಲಿತಾಂಶವನ್ನು ಸಮಾಜಕ್ಕೆ ತಲುಪಿಸುವ ಆಲೋಚನೆ ಮಾಡಲು ಕೂಡ ಈ ಪ್ರಶಸ್ತಿ ನೆನಪಿಸುತ್ತದೆ.
ಇಂತಹದ್ದೊಂದು ಉತ್ತಮ ಸಂಪ್ರದಾಯವನ್ನು ನಿರ್ಮಿಸಿದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿನಂದನಾರ್ಹರು. ಯಡಿಯೂರಪ್ಪ ಮತ್ತು ಆರ್.ವಿ.ದೇಶಪಾಂಡೆ ಯವರ ರೂಪಕಗಳನ್ನು ರಚಿಸಿ ಶ್ರೇಷ್ಠ ಶಾಸಕ ಎಂದರೇನು ಎನ್ನುವುದನ್ನು ಅರ್ಥ ಮಾಡಿಕೊಳ್ಳುವ ಮೊದಲು ಶಾಸಕ ಎಂದರೇನು ಮತ್ತು ಅವರಿಗೆ ಸಂವಿಧಾನ ಏನು ಕೆಲಸ ನೀಡಿದೆ ಎನ್ನುವುದನ್ನು ಗಮನಿಸಬೇಕು.

ನಮ್ಮ ಸಂವಿಧಾನ ಪ್ರಜಾಪ್ರಭುತ್ವ ವ್ಯವಸ್ಥೆಯ ನಿರ್ವಹಣೆಗಾಗಿ ಶಾಸಕಾಂಗ, ಕಾಯಾಂಗ ಮತ್ತು ನ್ಯಾಯಾಂಗ. ಹೀಗೆ ಮೂರು ಸ್ವತಂತ್ರವಾದ, ಸಮಾನ ಅಧಿಕಾರವುಳ್ಳ ಅಂಗಗಳನ್ನು ಸೃಷ್ಟಿಸಿದೆ. ಶಾಸಕಾಂಗ ಜನರಿಂದ ನೇರವಾಗಿ ಆಯ್ಕೆಯಾದ ಪ್ರತಿನಿಧಿಗಳ
ಅಂದರೆ ಶಾಸಕರ ಭಾಗ. ಇದು ಪ್ರಜಾಪ್ರಭುತ್ವದ ಜೀವಾಳ. ಇದರ ಕೆಲಸ ಕಾನೂನು ರಚನೆ. ಸರ್ವರಿಗೂ ನ್ಯಾಯ, ಸಮಾನತೆ, ಪ್ರೋತ್ಸಾಹ ಸಿಗುವಂತಹ ಶಾಸನಗಳನ್ನು ರಚಿಸುವುದು. ಇದಕ್ಕೆ ಮುನ್ನುಡಿಯಾಗಿ ಶಾಸಕರು ಮಾಡಬೇಕಿರುವುದು ತಮ್ಮ ಕ್ಷೇತ್ರ ಗಳಿಗೆ ಸಂಬಂಧಿಸಿದ ವಿಷಯಗಳನ್ನು, ಸಮಸ್ಯೆಗಳನ್ನು ಜನ ಸಂಪರ್ಕದ ಮೂಲಕ ಅರಿಯುವುದು.

ಅವಕ್ಕೆ ಸ್ಪಷ್ಟ ರೂಪ ನೀಡಿ ವಿಧಾನಸಭೆಗೆ ತಂದು ಘನತೆಯಿಂದ ಚರ್ಚಿಸುವುದು. ವಿಷಯಗಳಿಗೆ ಸೂಕ್ತ ರೀತಿಯ ಕಾನೂನಾತ್ಮಕ,
ಶಾಸನ ಬದ್ಧತೆಯ ಚೌಕಟ್ಟು ನೀಡುವುದು. ಸಂವಿಧಾನ ಗುರುತಿಸುವಂತೆ ಶಾಸಕರ ಕೆಲಸ ಇದು. ಅದು ಶಾಸಕರನ್ನು ಕಲ್ಪಿಸಿ
ಕೊಂಡಿರುವುದು ಚಿಂತನಶೀಲ, ಅಧ್ಯಯನಶೀಲ, ಸಂವೇದನಾಶೀಲ ವ್ಯಕ್ತಿಗಳನ್ನಾಗಿ. ಜನರ ಧ್ವನಿಗಳನ್ನು ಪ್ರತಿನಿಧಿಸಬಲ್ಲ
ವ್ಯಕ್ತಿಗಳನ್ನಾಗಿ.

ಶಾಸಕರ ನಿಧಿಯನ್ನು ಸೂಕ್ತವಾಗಿ ಬಳಸಿಕೊಳ್ಳುವುದೂ ಅವರ ಜವಾಬ್ದಾರಿ. ಎರಡನೆಯ ಹಂತದಲ್ಲಿ ಶಾಸಕರ ಜವಾಬ್ದಾರಿ ಒಮ್ಮೆ ಬಹುಮತದ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಿದಲ್ಲಿ ಮುಖ್ಯಮಂತ್ರಿಯಾಗಿ ಅಥವಾ ಮುಖ್ಯಮಂತ್ರಿ
ಬಯಸಿದಲ್ಲಿ ಸಚಿವನಾಗಿ ಸೇವೆ ಸಲ್ಲಿಸುವುದು. ಆಗ ನೀತಿ ನಿರೂಪಣೆಯ ಹೆಚ್ಚಿನ ಜವಾಬ್ದಾರಿ ಒದಗಿ ಬರುತ್ತದೆ.

ವಿಧಾನಸಭೆಯಲ್ಲಿ ನಿರ್ಧರಿತವಾದ ರೀತಿಯಲ್ಲಿ ಕಾನೂನುಗಳನ್ನು, ಅಭಿವೃದ್ಧಿಯ ವಿಷಯಗಳನ್ನು ಪಾರದರ್ಶಕವಾಗಿ ಜಾರಿಗೆ ತರುವ, ತಮ್ಮ ಹೊಣೆಗಾರಿಕತ್ವದ ಕುರಿತು ವಿಧಾನಸಭೆಗೆ ಉತ್ತರ ನೀಡಬೇಕಿರುವ ಹೊಣೆಗಾರಿಕೆಯೂ ಇರುತ್ತದೆ. ಮುಖ್ಯಮಂತ್ರಿ ಯಾದರೆ ಇಡೀ ಸರಕಾರಕ್ಕೆ ದಿಗ್ದರ್ಶನ ಮಾಡಬೇಕಾಗುತ್ತದೆ.ಸರಕಾರದ ನೀತಿಗಳನ್ನು ರೂಪಿಸುವ ಜವಾಬ್ದಾರಿ ಇರುತ್ತದೆ.

ಉದಾಹರಣೆಗೆ ದೇವರಾಜ ಅರಸು ಸರಕಾರಕ್ಕೆ ಸಮಾಜವಾದಿ ಸ್ವರೂಪ ನೀಡಿದರು. ರಾಮಕೃಷ್ಣ ಹೆಗಡೆ ಸರಕಾರವನ್ನು
ಜನಪರವಾಗಿಸಿದರು. ದೇವೇಗೌಡ ಭಾರೀ ಪ್ರಮಾಣದಲ್ಲಿ ಜಲಾನಯನ ಅಭಿವೃದ್ಧಿಗೆ ಮಹತ್ವ ನೀಡಿದರು. ಎಸ್.ಎಂ.ಕೃಷ್ಣ ಕೈಗಾರಿಕಾಭಿವೃದ್ಧಿಗೆ ವಿಶೇಷ ಒತ್ತುಕೊಟ್ಟರು. ಯಡಿಯೂರಪ್ಪ ಕೃಷಿ ಕ್ಷೇತ್ರಕ್ಕೆ ಅಗಾಧ ಒತ್ತು ನೀಡಿದರು. ಸಿದ್ದರಾಮಯ್ಯ ಬಡಜನರ, ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿದರು. ಹೀಗೆ ಸಚಿವರಾಗಿ ಕೆಲಸ ಮಾಡಿದರೂ ಮಹತ್ವದ ಕೆಲಸ ಮಾಡಿದ ಹಲವರು ಇದ್ದಾರೆ.

ರಾಜಕೀಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರನ್ನು ನೂರಕ್ಕೆ ನೂರರಷ್ಟು ಆದರ್ಶ ವ್ಯಕ್ತಿಗಳು ಎಂದು ಹೇಳಿದರೆ ಅತಿಶಯೋಕ್ತಿ ಎಂದು ಜನ ಭಾವಿಸುವ ಸಾಧ್ಯತೆ ಇದೆ. ಮೊದಲಿಗೆ, ರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳು ತೀಕ್ಷ್ಣವಾಗಿರುತ್ತವೆ. ಒಟ್ಟಾಭಿಪ್ರಾಯ ರೂಪಿಸುವುದು ಕಷ್ಟ ಸಾಧ್ಯ. ಹಾಗಾಗಿ ರಾಜಕಾರಣಿಗಳ ಸೇವೆ ಹಗುರವೆನಿಸಿ ಹೋಗುತ್ತದೆ. ಇತ್ತೀಚಿನ ವರ್ಷಗಳ ಕರ್ನಾಟಕದ ಭಾರಿ ದೊಡ್ಡ ಮಾಸ್ ಲೀಡರ್ ಯಡಿಯೂರಪ್ಪ. ಎಂಟು ಬಾರಿ ವಿಧಾನ ಸಭೆಗೆ ಆಯ್ಕೆಯಾದವರು. ನಾಲ್ಕು ಬಾರಿ ಮುಖ್ಯಮಂತ್ರಿ ಯಾದವರು.

ಕರ್ನಾಟಕಕ್ಕೆ ಅವರ ದೊಡ್ಡ ಕೊಡುಗೆ ಸಂದಿದೆ. ಮೊಟ್ಟ ಮೊದಲ ಬಾರಿಗೆ ದೇಶದಲ್ಲಿ ರಾಜ್ಯವೊಂದಕ್ಕೆ ವಿಶನ್ 2020  ಡಾಕ್ಯು ಮೆಂಟ್‌ನ್ನು ಸೃಷ್ಟಿಸಿದವರು ಅವರು. ಜ್ಞಾನ ಆಯೋಗ ರಚಿಸಿದವರು, ಸಾವಯವ ಕೃಷಿ ಮಿಶನ್, ಔದ್ಯಮಿಕ ನೀತಿ, ಸೆಮಿ ಕಂಡಕ್ಟರ್ ನೀತಿ, ಮರು ಬಳಸಬಲ್ಲ ಇಂಧನ ನೀತಿ, ಹೊಸ ಎಸ್‌ಇಝೆಡ್ ನೀತಿಗಳನ್ನು ಜಾರಿಗೆ ತಂದರು. ಕರೋನಾ ಮತ್ತು ಭಾರೀ ಪ್ರವಾಹ ಪರಿಸ್ಥಿತಿಯ ಸಂದರ್ಭದಲ್ಲಿ ರಾಜ್ಯವನ್ನು ಮುನ್ನಡೆಸಿದವರು. ಅವರು ಮಂಡಿಸಿದ ಪ್ರತ್ಯೇಕ ರೈತರ ಬಜೆಟ್ ದೇಶದಲ್ಲಿ ಮೊಟ್ಟ ಮೊದಲ ಪ್ರಯೋಗ.

ಹಾಗೆಯೇ ರೈತರಿಗೆ ಶೇ.೧ರ ಬಡ್ಡಿ ದರದಲ್ಲಿ ಸಾಲ ನೀಡಿದವರು ಅವರು. ಶಿಕ್ಷಣ ಕ್ಷೇತ್ರಕ್ಕೂ ಅವರ ದೊಡ್ಡ ಕೊಡುಗೆ ಸಂದಿದೆ. ಸಂಗೀತ, ಸಂಸ್ಕೃತ, ಕೃಷಿ, ತೋಟಗಾರಿಕೆ, ರಾಣಿಚನ್ನಮ್ಮ, ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿದವರು. ರೈತರಿಗೆ ನಿರಂತರ ವಿದ್ಯುತ್ ಪೂರೈಸಿದವರು. ದೇಶಪಾಂಡೆ ಕೂಡ ಎಂಟು ಬಾರಿ ಶಾಸಕರಾಗಿ ಆಯ್ಕೆಯಾಗಿರುವವರು. ಸುದೀರ್ಘ ಕಾಲ ಸಚಿವರಾಗಿ ಆರೇಳು ಮುಖ್ಯಮಂತ್ರಿಗಳ ಜತೆ ಕೆಲಸ ಮಾಡಿದವರು. ರಾಜ್ಯ ಸರಕಾರದಲ್ಲಿನ ನಗರಾಭಿವೃದ್ಧಿ, ಸಣ್ಣ ಕೈಗಾರಿಕೆ, ಕೃಷಿ, ಭಾರಿ ಮತ್ತು ಮಧ್ಯಮ ಕೈಗಾರಿಕೆಗಳು, ಮಾಹಿತಿ ತಂತ್ರಜ್ಞಾನ, ಮೂಲಭೂತ ಸೌಲಭ್ಯ ಅಭಿವೃದ್ಧಿ, ಕಂದಾಯ, ಉನ್ನತ ಶಿಕ್ಷಣ ಮತ್ತು ಪ್ರವಾಸೋದ್ಯಮ ಖಾತೆಗಳನ್ನು ಹೊಂದಿ ಕೆಲಸ ಮಾಡಿದವರು.

ಸುಮಾರು ಹದಿನೈದು ವರ್ಷ ಕೈಗಾರಿಕಾ ಸಚಿವರಾಗಿದ್ದ ದೇಶಪಾಂಡೆ ಅವರ ಕೊಡುಗೆ ರಾಜ್ಯದ ಕೈಗಾರಿಕಾ ಅಭಿವೃದ್ಧಿಯ ಕ್ಷೇತ್ರಕ್ಕೆ
ಸಂದಿದೆ. ದೇಶದ ಮೊದಲ ಮಾಹಿತಿ ತಂತ್ರಜ್ಞಾನ ನೀತಿಯನ್ನು ನಿರೂಪಿಸಿದವರು ಅವರು. ಹಾಗೆಯೇ ರಾಜ್ಯಕ್ಕೆ ಮೊದಲ ಸ್ಟಾರ್ಟ್‌ಅಪ್ ಪಾಲಿಸಿ, ಟೂರಿಸಂ ಪಾಲಿಸಿ, ಮೂಲಭೂತ ಸೌಲಭ್ಯ ಪಾಲಿಸಿಗಳನ್ನು ಯೋಚಿಸಿದವರು ಅವರು. ಮೊಟ್ಟ ಮೊದಲ ಬಾರಿಗೆ ವಿಶ್ವ ಹೂಡಿಕೆದಾರರ ಸಮ್ಮೇಳನ ಸಂಘಟಿಸಿದ್ದು ದೇಶಪಾಂಡೆ. ಇಬ್ಬರಿಗೂ ಸಮಾನವಾದ ಕೆಲವು ಅಂಶಗಳಿವೆ. ಇಬ್ಬರೂ ವೈಯಕ್ತಿಕ ಟೀಕೆ, ಟಿಪ್ಪಣೆ, ತೇಜೋವಧೆ, ಇತ್ಯಾದಿ ರಾಜಕೀಯದಿಂದ ದೂರ.

ತೂಕವಿಲ್ಲದೇ ಮಾತು ಆಡುವವರಲ್ಲ. ತಪ್ಪನ್ನು ತಪ್ಪು ಎಂದು ತಮ್ಮದೇ ಪಕ್ಷದವರಿಗೆ ಸಂಬಂಧಿಸಿದ್ದರೂ ಸಾರ್ವಜನಿಕವಾಗಿ ಹೇಳಬಲ್ಲ ಸಾಮರ್ಥ್ಯವುಳ್ಳವರು. ಜನರಿಗೂ ನೇರವಾಗಿ ಹೇಳಿಬಿಡಬಲ್ಲವರು. ಮುಲಾಜಿಲ್ಲದೆ ಪಕ್ಷಾ ತೀತವಾಗಿ ಜನಪರವಾಗಿ ಮಾತನಾಡಬಲ್ಲವರು. ಜನರ ಜತೆ ನಿರಂತರ ಸಂಪರ್ಕದಲ್ಲಿರುವ ಅವರು ಹಳ್ಳಿ ಹಳ್ಳಿಗಳ ಮೂಲೆ ಮೂಲೆಗಳ ಕಾರ್ಯಕ್ರಮ ಗಳಲ್ಲಿ ಭಾಗವಹಿಸುವವರು.

ವೈಯಕ್ತಿಕ ಘನತೆ ಕಾದುಕೊಂಡೇ ಬಂದವರು. ಈ ಇಬ್ಬರನ್ನು ವಿಧಾನಸಭೆ ಶ್ರೇಷ್ಠ ಶಾಸಕ ಎಂದು ಗುರುತಿಸಿ ಸನ್ಮಾನಿಸಿರುವುದು ಸಂತೋಷದ ವಿಷಯ ಮತ್ತೊಂದು ಸಂಗತಿ. ಯಾಕೋ ನಾವು ರಾಜಕೀಯವನ್ನು ಒಂದು ಗಂಭೀರ ಅಧ್ಯಯನದ ಕ್ಷೇತ್ರ ಎಂದು ಪರಿಗಣಿಸಿಯೇ ಇಲ್ಲ. ನ್ಯೂನತೆಗಳನ್ನು, ಶ್ರೇಷ್ಠತೆಗಳನ್ನು ವ್ಯವಸ್ಥಿತವಾಗಿ ಗಮನಿಸಿಲ್ಲ. ಅಧ್ಯಯನ ಮಾಡಿಯೇ ಇಲ್ಲ. ನಮ್ಮ ರಿಸರ್ಚ್ ಸಂಸ್ಥೆಗಳು ಈ ಕುರಿತು ಯೋಚಿಸಿದಂತೆ ಇಲ್ಲ. ರಾಜಕೀಯ, ರಾಜಕಾರಣಿಗಳು ಹೇಗಿರಬೇಕು ಎನ್ನುವುದರ ಮಾದರಿ ಗಳನ್ನು ಒದಗಿಸಿಲ್ಲ.

ಹೊಸ ಶಾಸಕರಿಗೆ ವ್ಯವಸ್ಥಿತವಾದ ತರಬೇತಿ, ಕಾನೂನುಗಳನ್ನು ಹೇಗೆ ಸಿದ್ಧಪಡಿಸಬೇಕು? ಸಾರ್ವಜನಿಕ ಬದುಕು ಹೇಗಿರಬೇಕು ಎನ್ನುವ ಕುರಿತಾದ ಮಾರ್ಗದರ್ಶಿ ಸೂತ್ರಗಳು ಇದ್ದಂತಿಲ್ಲ. ಹೇಗಿರಬಾರದು ಎನ್ನುವ ಕುರಿತ ಕೋಡ್ ಆಫ್ ಕಂಡಕ್ ಗಳು, ಸ್ಪಷ್ಟ ಕಾನೂನಿನ ಚೌಕಟ್ಟುಗಳೂ ಇದ್ದಂತಿಲ್ಲ. ಈಗ ನಾವು ಮಾಡಬೇಕಿರುವುದು ರಾಜಕೀಯ ಶ್ರೇಷ್ಠತೆಯ ಅಂಶಗಳನ್ನು ದಾಖಲಿಸು ವುದು ಮತ್ತು ಸಾರ್ವಜನಿಕರಿಗೆ ಒದಗಿಸುವುದು. ನಮ್ಮ ಅಧ್ಯಯನ ಸಂಸ್ಥೆಗಳು ಶ್ರೇಷ್ಠ ರಾಜಕಾರಣಿಗಳಾದ ದೇವರಾಜ ಅರಸು, ದೇವೇಗೌಡ, ರಾಮಕೃಷ್ಣ ಹೆಗಡೆ, ಎಸ್.ಆರ್.ಬೊಮ್ಮಾಯಿ, ಜೆ.ಎಚ್ .ಪಟೇಲ್, ಎಸ್.ಎಂ. ಕೃಷ್ಣ , ವೀರೇಂದ್ರ ಪಾಟೀಲ,
ಸಿದ್ದರಾಮಯ್ಯ ಅಂತವರ ಸೇರಿ ಅನೇಕರ ಸೇವೆಗಳನ್ನು ದಾಖಲಿಸುವ ಮತ್ತು ಗೌರವಿಸುವ ಕೆಲಸ ಮಾಡಬೇಕು.

ಹಾಗೆಯೇ ಎಲ್ಲ ಶಾಸಕರ ಪರ್ ಫಾರ್ಮೆನ್ಸ್ ರಿಪೋಟ್ ಗಳನ್ನು ಸಾರ್ವನಿಕರಿಗೆ ಒದಗಿಸುವ ವ್ಯವಸ್ಥೆ ಮಾಡಬೇಕು. ರಾಜಕೀಯ ಕ್ಷೇತ್ರದಲ್ಲಿನ ಶ್ರೇಷ್ಠತೆಗಳನ್ನು ದಾಖಲೆ ಮಾಡಿ ಮಾದರಿಗಳನ್ನು ಒದಗಿಸಬೇಕು. ಶ್ರೇಷ್ಠ ಶಾಸಕ ಪ್ರಶಸ್ತಿ ರಾಜಕೀಯದ ಗುಣಮಟ್ಟ ವನ್ನು ದಾಖಲಿಸುವತ್ತ ಒಂದು ಮಹತ್ವದ ಹೆಜ್ಜೆ .

Read E-Paper click here