ಅಶ್ವತ್ಥಕಟ್ಟೆ
ranjith.hoskere@gmail.com
ಪ್ರತಿಯೊಬ್ಬರ ಜೀವನದ ದೆಸೆಯನ್ನು ಬದಲಿಸುವುದು ಶಿಕ್ಷಣ. ಶಿಕ್ಷಣವೆನ್ನುವುದು ಕೇವಲ ಅಂಕ ಪಡೆದು, ಪಾಸಾಗಿ ಹೋಗುವುದಕ್ಕಿಂತ ಹೆಚ್ಚಾಗಿ
ವಿದ್ಯಾರ್ಥಿಯ ಜೀವನ ಹಾಗೂ ಮುಂದಿನ ಶಿಕ್ಷಣಕ್ಕೆ ಕಲಿತ ವಿದ್ಯೆ ಯಾವ ರೀತಿಯ ಪಾತ್ರ ವಹಿಸುತ್ತದೆ ಎನ್ನುವುದು ಮುಖ್ಯ. ಒಂದು ವೇಳೆ ಇವೆರಡೂ ಆಗದಿದ್ದರೆ ನೂರಕ್ಕೆ ನೂರು ಅಂಕ ಪಡೆದರೂ ಅದಕ್ಕೆ ಯಾವುದೇ ಮೌಲ್ಯವಿರುವುದಿಲ್ಲ. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಯ ಕೌಶಲ್ಯಕ್ಕಿಂತ ಅಂಕದ ಆಧಾರದಲ್ಲಿ ಅವನ ಸಾಮರ್ಥ್ಯವನ್ನು ನಿರ್ಧರಿಸುವ ಹಂತಕ್ಕೆ ತಲುಪಿದ್ದೇವೆ.
ಪೋಷಕರು, ಸಮಾಜ ಕೇವಲ ವಿದ್ಯಾರ್ಥಿಗಳ ಅಂಕವನ್ನು ಮಾತ್ರ ನೋಡುತ್ತಿರುವುದರಿಂದ ಸಹಜವಾಗಿಯೇ ವಿದ್ಯಾರ್ಥಿ, ಶಾಲೆ ಹಾಗೂ ಇಡೀ ವ್ಯವಸ್ಥೆ ‘ಫಲಿತಾಂಶ’ವನ್ನು ಮಾತ್ರ ಕೇಂದ್ರೀಕರಿಸುತ್ತಿದೆ. ಇಂತಹ ಸನ್ನಿವೇಶದಲ್ಲಿ ಕಳೆದ ವಾರ ಪ್ರಕಟಗೊಂಡ ಎಸ್‌ಎಸ್‌ಎಲ್‌ಸಿ ಫಲಿತಾಂಶ ಹಲವರ ಅಚ್ಚರಿ ಹಾಗೂ ಆತಂಕ, ಆಘಾತಕ್ಕೆ ಕಾರಣವಾಯಿತು.
ಹೌದು, ಕಳೆದ ವಾರ ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯನಿರ್ಣಯ ಮಂಡಳಿ ಪ್ರಕಟಿಸಿದ ಎಸ್‌ಎಸ್‌ಎಲ್‌ಸಿ ಫಲಿತಾಂಶ ಅನೇಕರ ಹುಬ್ಬೇರಿಸಿತ್ತು. ಏಕೆಂದರೆ, ಇತ್ತೀಚಿನ ದಿನಗಳಲ್ಲಿ ವರ್ಷದಿಂದ ವರ್ಷಕ್ಕೆ ಎಸ್‌ಎಸ್‌ಎಲ್‌ಸಿ ಫಲಿತಾಂಶ ಏರುಗತಿಯಲ್ಲಿದೆ ಹೊರತು, ಎಂದಿಗೂ ಇಳಿಮುಖವಾಗಿರಲಿಲ್ಲ. ಆದರೆ ಈ ವರ್ಷದ ಫಲಿತಾಂಶ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.೧೦ರಷ್ಟು ಕುಸಿತವಾಗಿರುವುದು ಅನೇಕರ ಆತಂಕಕ್ಕೆ ಕಾರಣವಾಗಿದೆ. ಫಲಿತಾಂಶದಲ್ಲಿ ಭಾರಿ ಇಳಿಕೆಯಾಗಲು ಕಾರಣವೇನು ಎನ್ನುವ ಬಗ್ಗೆ ಚರ್ಚಿಸುವ ಮೊದಲು, ಕಳೆದ ವರ್ಷ ಹಾಗೂ ಈ ವರ್ಷದ ಫಲಿತಾಂಶದ ಬಗ್ಗೆ ಒಮ್ಮೆ ನೋಡು ವುದು ಅತ್ಯಗತ್ಯ.
೨೦೨೨-೨೩ನೇ ಸಾಲಿ ನಲ್ಲಿ ರಾಜ್ಯದಲ್ಲಿ ಒಟ್ಟು ೮,೩೫,೧೦೨ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರೆ, ಅದರಲ್ಲಿ ಶೇ.೮೩.೮೯ರಷ್ಟು ಫಲಿತಾಂಶದೊಂದಿಗೆ
೭,೦೦,೬೧೯ ವಿದ್ಯಾರ್ಥಿಗಳು ಪಾಸಾಗಿದ್ದರು. ಅಂದರೆ ಕಳೆದ ವರ್ಷ ೧,೩೪,೪೮೩ ವಿದ್ಯಾರ್ಥಿಗಳು ಫೇಲಾಗಿದ್ದರು. ೨೦೨೩- ೨೪ನೇ ಸಾಲಿನಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ೨೪,೮೬೫ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅಂದರೆ, ೨೦೨೩-೨೪ನೇ ಸಾಲಿನಲ್ಲಿ ಒಟ್ಟು ೮೫೯೯೬೭ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರೆ, ಶೇ.೭೩.೪೦ರಷ್ಟು ೬೩೧೨೦೪ ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣರಾಗಿ, ೨,೨೮,೭೬೩ ವಿದ್ಯಾರ್ಥಿಗಳು ಅನುತ್ತೀರ್ಣರಾದರು. ಕಳೆದ ವರ್ಷಕ್ಕೆ ಹೋಲಿಸಿದರೆ ೨೪ ಸಾವಿರ ಹೆಚ್ಚುವರಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರೂ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹೆಚ್ಚುವರಿ ೯೪,೨೮೦
ವಿದ್ಯಾರ್ಥಿಗಳು ಫೇಲಾಗಿದ್ದರು.
ಫಲಿತಾಂಶ ಇಲ್ಲಿಗೆ ನಿಂತಿದ್ದರೆ ಪ್ರತಿವರ್ಷವೂ ಏರುಗತಿಯಲ್ಲಿಯೇ ಇರಬೇಕೆಂದು ನಿರೀಕ್ಷಿಸುವುದು ತಪ್ಪು. ಮುಂದಿನ ವರ್ಷ ಈ ಫಲಿತಾಂಶ ವೃದ್ಧಿಯಾಗ ಬಹುದು ಎಂದು ಹೇಳಬಹುದಾಗಿತ್ತು. ಆದರೆ ಶಿಕ್ಷಣ ತಜ್ಞರ ಹಾಗೂ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಹೆಚ್ಚು ಆತಂಕಕ್ಕೆ ಕಾರಣವಾಗಿರುವುದು, ಈ ಬಾರಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳಲ್ಲಿನ ‘ಪಾಸಿಂಗ್’ ರೀತಿ. ಅಂದರೆ ಸಾಮಾನ್ಯವಾಗಿ ಎಲ್ಲ ವಿಷಯದಲ್ಲಿ ಪಾಸಾಗಿ ಯಾವುದಾದರೂ ಒಂದೆರಡು ವಿಷಯದಲ್ಲಿ ಕೆಲವೇ ಅಂಕಗಳಿಂದ ಅನುತ್ತೀರ್ಣರಾಗುವ ಸಂಭವವಿದ್ದರೆ ಅಂತಹ ಸಮಯದಲ್ಲಿ ಗ್ರೇಸ್ ಮಾರ್ಕ್ಸ್ ನೀಡಿ ಉತ್ತೀರ್ಣ ಮಾಡಲಾಗುತ್ತದೆ. ಈ ರೀತಿ ಮಾಡುವುದರಿಂದ ವಿದ್ಯಾರ್ಥಿಯ ಒಂದು ವರ್ಷ ವ್ಯರ್ಥವಾಗುವುದನ್ನು ಉಳಿಸಬಹುದು ಎನ್ನುವುದು ಇಲಾಖೆಯ ಲೆಕ್ಕಾಚಾರ. ಆದರೆ ಈ ಬಾರಿ ಗ್ರೇಸ್ ಅಂಕವನ್ನು ಶೇ.೧೦ರ ಬದಲಿಗೆ ಶೇ.೨೦ಕ್ಕೆ ಏರಿಸಲಾಗಿದೆ.
ಗ್ರೇಸ್ ಅಂಕವನ್ನು ಈ ಪ್ರಮಾಣದಲ್ಲಿ ಏರಿಕೆ ಮಾಡಲು ಕಾರಣವೇನು ಎಂದು ಸೂಕ್ಷ್ಮವಾಗಿ ಗಮನಿಸುವುದಾದರೆ, ಒಂದು ವೇಳೆ ಗ್ರೇಸ್ ಅಂಕಗಳನ್ನು ಹೆಚ್ಚಿಸದೇ ಹೋಗಿದ್ದರೆ, ಹೆಚ್ಚುವರಿಯಾಗಿ ಶೇ.೨೦ರಷ್ಟು ವಿದ್ಯಾರ್ಥಿಗಳು ಅನುತ್ತೀರ್ಣರಾಗುತ್ತಿದ್ದರು. ಅಂದರೆ, ಬರೋಬ್ಬರಿ ೧.೨೩ ಲಕ್ಷ ಹೆಚ್ಚುವರಿ ವಿದ್ಯಾರ್ಥಿಗಳು ಫೇಲಾಗುತ್ತಿದ್ದರು. ಒಂದು ವೇಳೆ ಹಾಗಾಗಿದ್ದರೆ, ಒಟ್ಟಾರೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಒಟ್ಟಾರೆ ಫಲಿತಾಂಶ ಶೇ.೫೩.೪೦ಗೆ ಇಳಿಯು ತ್ತಿದ್ದರು. ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು ಶೇ.೩೦ರಷ್ಟು ಹಾಗೂ ಸುಮಾರು ಒಂದು ದಶಕದ ಹಿಂದಿನ ಫಲಿತಾಂಶಕ್ಕೆ ಈ ಬಾರಿಯ ಎಸ್‌ಎಸ್ ಎಲ್‌ಸಿ ಫಲಿತಾಂಶ ಇಳಿಯುತ್ತಿತ್ತು. ಈ ಮುಜುಗರದಿಂದ ತಪ್ಪಿಸಿಕೊಳ್ಳುವ ಏಕೈಕ ಉದ್ದೇಶದಿಂದ ರಾಜ್ಯ ಸರಕಾರ, ಶೇ.೧೦ರ ಬದಲು ಶೇ.೨೦ರಷ್ಟು ಗ್ರೇಸ್ ನೀಡುವುದರೊಂದಿಗೆ ‘ಮರ್ಯಾದೆ’ ಉಳಿಸಿಕೊಳ್ಳುವ ಪ್ರಯತ್ನವನ್ನು ಮಾಡಿದೆ ಎಂದರೆ ತಪ್ಪಾಗುವುದಿಲ್ಲ.
ಹಾಗೇ ನೋಡಿದರೆ, ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಸಮಯದಲ್ಲಿ ಎಲ್ಲಿಯೂ ಪ್ರಶ್ನೆ ಪತ್ರಿಕೆ ‘ಕಠಿಣ’ ವಾಗಿತ್ತು, ಔಟ್ ಆಫ್ ದಿ ಸಿಲಬೆಸ್ ಪ್ರಶ್ನೆ ಗಳಿದ್ದವು ಅಥವಾ ಇನ್ಯಾವುದೋ ಸಮಸ್ಯೆಯಿತ್ತು ಎನ್ನುವ ಆರೋಪ ಕೇಳಿಬಂದಿರಲಿಲ್ಲ. ಆದರೂ ಈ ಪ್ರಮಾಣದಲ್ಲಿ ಪರೀಕ್ಷೆಯ ಫಲಿತಾಂಶ ತಗ್ಗುವುದಕ್ಕೆ ಕಾರಣವೇನು ಎನ್ನುವ ಪ್ರಶ್ನೆ ಬಹುತೇಕರಲ್ಲಿದೆ. ಈ ಪ್ರಶ್ನೆಗೆ ಉತ್ತರ ಹುಡುಕಲು ಹೋದಾಗ ಹಾಗೂ ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯನಿರ್ಣಯ ಮಂಡಳಿ ಅಧ್ಯಕ್ಷರು ಹಾಗೂ ಹಿರಿಯ ಅಧಿಕಾರಿಗಳು ಕಂಡುಕೊಂಡಿರುವ ಸತ್ಯವೆಂದರೆ, ಫಲಿತಾಂಶ ತಗ್ಗುವುದಕ್ಕೆ ಇದೇ ಮೊದಲ ಬಾರಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ವೇಳೆ ರಾಜ್ಯಾದ್ಯಂತ ಮಾಡಿದ ‘ವೆಬ್‌ಕ್ಯಾಸ್ಟಿಂಗ್’ ಕಾರಣ ಎನ್ನುವುದಾಗಿದೆ.
ಹೌದು, ಇದು ಹಲವರಿಗೆ ಅಚ್ಚರಿಯಾದರೂ ಸುದ್ದಿಗೋಷ್ಠಿಯಲ್ಲಿಯೇ ಅಽಕಾರಿಗಳು ಈ ಅಂಶವನ್ನು ಒಪ್ಪಿಕೊಂಡಿದ್ದಾರೆ. ಪರೀಕ್ಷೆಯಲ್ಲಿ ನಡೆಯುವ ಅಕ್ರಮ, ಅವ್ಯವಹಾರವನ್ನು ತಡೆಯುವ ಉದ್ದೇಶದಿಂದ ರಾಜ್ಯ ಸರಕಾರ ಹಾಗೂ ಶಿಕ್ಷಣ ಇಲಾಖೆ ಇದೇ ಮೊದಲ ಬಾರಿಗೆ ರಾಜ್ಯದ ಎಲ್ಲ ಪರೀಕ್ಷಾ ಕೊಠಡಿಗಳಲ್ಲಿ ಸಿ.ಸಿ. ಕ್ಯಾಮೆರಾ ಅಳವಡಿಸಿ, ವೆಬ್‌ಕ್ಯಾಸ್ಟಿಂಗ್ ಮಾಡುವುದಕ್ಕೆ ವ್ಯವಸ್ಥೆ ಮಾಡಿಕೊಂಡಿತ್ತು. ಇದನ್ನು ಜಿಲ್ಲಾ ಮಟ್ಟದ ಅಧಿಕಾರಿಗಳು ಮೇಲ್ವಿಚಾರಣೆ ನಡೆಸಿತ್ತು. ಆರಂಭದಲ್ಲಿಯೇ ವೆಬ್‌ಕ್ಯಾಸ್ಟಿಂಗ್‌ಗೆ ಬಹುತೇಕ ಶಿಕ್ಷಣ ಸಂಸ್ಥೆಗಳು ವಿರೋಧಿಸಿದ್ದವು. ಈ ವ್ಯವಸ್ಥೆಯಿಂದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯುವುದಕ್ಕೆ ಸಮಸ್ಯೆಯಾಗುತ್ತದೆ, ಅನಗತ್ಯ ಆತಂಕ ಶುರುವಾಗುತ್ತದೆ. ಆದ್ದರಿಂದ ವೆಬ್ ಕ್ಯಾಸ್ಟಿಂಗ್ ವ್ಯವಸ್ಥೆಯನ್ನು ನಿಲ್ಲಿಸಬೇಕು ಎನ್ನುವ ಆಗ್ರಹವನ್ನು ವ್ಯಕ್ತಪಡಿಸಿದ್ದರು. ಆದರೆ ಶಿಕ್ಷಣ ಇಲಾಖೆ ಯಾರ ಮಾತನ್ನು ಕಿವಿಗೆ ಹಾಕಿಕೊಳ್ಳದೇ ವೆಬ್‌ಕ್ಯಾಸ್ಟಿಂಗ್ ಮಾಡಿತ್ತು.
ಈ ಮೂಲಕ ರಾಜ್ಯದ ೨೭೫೦ ಪರೀಕ್ಷಾ ಕೇಂದ್ರ ಪ್ರತಿಯೊಂದು ಕೊಠಡಿಯಲ್ಲಿಯೂ ಸಾಧ್ಯವಾದಷ್ಟರ ಮಟ್ಟಿಗೆ ‘ಪಾರದರ್ಶಕ’ ಪರೀಕ್ಷೆ ನಡೆಸಲು ಮಂಡಳಿ ಶ್ರಮಿಸಿದೆ. ಪ್ರತಿ ಕೋಣೆಯಲ್ಲಿನ ಸಿ.ಸಿ. ಕ್ಯಾಮೆರಾದಿಂದಾಗಿ ಬಹುತೇಕ ಭಾಗದಲ್ಲಿ ಈ ಬಾರಿ ಸುಲಭಕ್ಕೆ ‘ಕಾಪಿ’ ಹೊಡೆಯಲು ಅಥವಾ ಹೊಡೆಸಲು ಸಾಧ್ಯವಾಗಿಲ್ಲ. ವೆಬ್‌ಕ್ಯಾಸ್ಟಿಂಗ್‌ನಿಂದಲೇ -ಲಿತಾಂಶ ಕುಸಿಯಲು ಕಾರಣ ಎನ್ನುವುದಾದರೆ, ಕಾಪಿ ಹೊಡೆಯದಿದ್ದರೆ ವಿದ್ಯಾರ್ಥಿಗಳು ಪಾಸಾಗುವುದಿಲ್ಲ ಎಂದು ಪರೋಕ್ಷವಾಗಿ ಒಪ್ಪಿಕೊಂಡ ಹಾಗಾಯಿತು. ಹಾಗೇ ನೋಡಿದರೆ ಸಿ.ಸಿ. ಕ್ಯಾಮೆರಾ ಅಳವಡಿಕೆಯಿಂದ ಯಾರಿಗೆ ನಷ್ಟ? ಯಾರಿಗೆ ಒತ್ತಡ? ಓದಿದ್ದನ್ನು ಬಂದು ಬರೆಯುವ ವಿದ್ಯಾರ್ಥಿಗಳು ಸಿ.ಸಿ. ಕ್ಯಾಮೆರಾ ನೋಡುವ ಗೋಜಿಗೆ ಹೋಗುವಷ್ಟು ಸಮಯವೂ ಇರುವು ದಿಲ್ಲ.
ವರ್ಷವಿಡೀ ಕಷ್ಟಪಟ್ಟು ಓದಿರುವ ವಿದ್ಯಾರ್ಥಿಗಳಿಗೆ ‘ಪಾರದರ್ಶಕ’ ಪರೀಕ್ಷಾ ಪದ್ಧತಿಯ ಮೂಲಕ ನ್ಯಾಯ ಕೊಡಿಸಲು ಶಿಕ್ಷಣ ಇಲಾಖೆ ಕೈಕೊಂಡಿದ್ದ ವೆಬ್‌ಕ್ಯಾಸ್ಟಿಂಗ್ ವ್ಯವಸ್ಥೆಯ ತಪ್ಪೇನಿದೆ? ಪಾರದರ್ಶಕ ಪರೀಕ್ಷೆ ನಡೆಸುವುದೇ ತಪ್ಪೇ? ಹಾಗಾದರೆ ಈ ಹಿಂದೆ ವೆಬ್‌ಕ್ಯಾಸ್ಟಿಂಗ್ ವ್ಯವಸ್ಥೆಯಿಲ್ಲದಿರುವು ದರಿಂದ, ಫಲಿತಾಂಶ ಹೆಚ್ಚಾಗಿದ್ದು ಹೇಗೆ ಎನ್ನುವ ಪ್ರಶ್ನೆಗಳಿಗೆ ವಿರೋಧಿಸುತ್ತಿರುವವರೇ ಉತ್ತರಿಸಬೇಕಿದೆ. ವೆಬ್‌ಕ್ಯಾಸ್ಟಿಂಗ್ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಏನಾದರೂ ‘ಡಿಸ್ಟರ್ಬ್’ ಆಗುತ್ತಿದೆ ಎನ್ನುವ ಕಾರಣವಿದ್ದರೆ, ಆ ಸಮಯದಲ್ಲಿ ಅದನ್ನು ರದ್ದುಪಡಿಸುವುದರಲ್ಲಿ ತಪ್ಪೇನಿಲ್ಲ. ಆದರೆ ಸಿ.ಸಿ. ಕ್ಯಾಮೆರಾಗಳನ್ನು ಅಳವಡಿಸಿ, ಅದನ್ನು ಮೇಲ್ವಿಚಾರಣೆ ಮಾಡುವುದರಿಂದ ಈ ರೀತಿ ಯಾವ ಸಮಸ್ಯೆಯೂ ಆಗುವುದಿಲ್ಲವಲ್ಲ. ಹಾಗೇ ನೋಡಿದರೆ, ಫ್ಲೈಯಿಂಗ್ ಸ್ಕ್ವಾಡ್ ನೆಪದಲ್ಲಿ ಪರೀಕ್ಷಾ ಸಮಯದಲ್ಲಿ ಓಡಾಡುವ ಸ್ಕ್ವಾಡ್‌ಗಳಿಂದ ವಿದ್ಯಾರ್ಥಿಗಳಿಗೆ ಹಲವು ಬಾರಿ ಕಿರಿಕಿರಿಯಾಗುತ್ತದೆ.
ಒಂದು ವೇಳೆ ಈ ಎಲ್ಲವನ್ನು ಮೀರಿ ವೆಬ್ ಕ್ಯಾಸ್ಟಿಂಗ್ ನಿಂದ ಏನಾದರೂ ಸಮಸ್ಯೆಯಾಗುತ್ತಿದ್ದರೆ ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ಮಂಡಳಿ ಪರ್ಯಾಯ ಕ್ರಮವನ್ನು ಹುಡುಕಬೇಕು. ಅದನ್ನು ಬಿಟ್ಟು ಈ ರೀತಿ ವೆಬ್ ಕ್ಯಾಸ್ಟಿಂಗ್ ಅನ್ನು ಏಕಾಏಕಿ ರದ್ದುಗೊಳಿಸುವುದು ಸರಿಯಲ್ಲ. ಇನ್ನು ಮತ್ತೊಂದು ಪ್ರಮುಖ ವಿಷಯ. ಅದೇನೆಂದರೆ, ಪ್ರತಿಯೊಬ್ಬ ವಿದ್ಯಾರ್ಥಿಗೆ ತಾನು ಪಾಸಾಗಬೇಕು ಎನ್ನುವ ಆಸೆಯಿರುತ್ತದೆ. ಪೋಷಕರು, ಶಿಕ್ಷಕರು ಹಾಗೂ ಶಾಲಾ ಆಡಳಿತ ಮಂಡಳಿಗಳು ವಿದ್ಯಾರ್ಥಿ ಉತ್ತೀರ್ಣರಾಗಲಿ ಎಂದೇ ಬಯಸುತ್ತಾರೆ. ಅದರಲ್ಲಿ ತಪ್ಪೇನಿಲ್ಲ. ಹಾಗೆಂದ ಮಾತ್ರಕ್ಕೆ, ‘ಹೇಗಾದರೂ’ ಆಗಲಿ ಪಾಸಾದರೆ ಸಾಕು ಎನ್ನುವ ಮನಸ್ಥಿತಿಯಿಂದ ಪ್ರತಿಯೊಬ್ಬರು ಹೊರಬರಬೇಕು. ಮಂಡಳಿಗಳು ಸರಕಾರಕ್ಕೆ ಮುಜುಗರವಾಗುತ್ತದೆ ಎನ್ನುವ ಕಾರಣಕ್ಕೆ ‘ಪಾರದರ್ಶಕ’ ಪರದೆಯನ್ನು ಮುಚ್ಚಿ ಅಥವಾ ಗ್ರೇಸ್ ಅಂಕಗಳನ್ನು ಹೆಚ್ಚಿಸಿಕೊಂಡು ಪಾಸಾಗುವ ಸಾಹಸಕ್ಕೆ ಕೈಹಾಕುವುದು ಭವಿಷ್ಯದ ದೃಷ್ಟಿಯಿಂದ ಕೆಟ್ಟ ಸಂಪ್ರದಾಯ ಎಂದರೆ ತಪ್ಪಾಗುವುದಿಲ್ಲ.
ಏಕೆಂದರೆ, ಎಸ್‌ಎಸ್‌ಎಲ್‌ಸಿ ಪಾಸಾಗಲಿ ಆಮೇಲೆ ನೋಡಿಕೊಂಡರಾಯಿತು ಎಂದು ‘ಅನರ್ಹ’ರನ್ನು ಉತ್ತೀರ್ಣಗೊಳಿಸಿದರೆ, ಅವರು ಪಿಯುಸಿ ಯಲ್ಲಿಯೋ ಅಥವಾ ಡಿಗ್ರಿಯಲ್ಲಿಯೋ ಫೇಲಾಗಿ ಮನೆಯಲ್ಲಿ ಕೂರಬೇಕಾದ ಸನ್ನಿವೇಶ ನಿರ್ಮಾಣವಾಗುತ್ತದೆ. ಹಾಗೆಂದು ಫೈಲು ಮಾಡುವುದಕ್ಕಾಗಿಯೇ ಪರೀಕ್ಷೆ ನಡೆಸಿ ಎಂದು ಹೇಳುತ್ತಿಲ್ಲ. ಆದರೆ ಹೇಗಾದರೂ ಮಾಡಿ ‘ಪಾಸ್’ ಮಾಡಿ ಶಹಬಾಸ್ ಗಿಟ್ಟಿಸಿಕೊಳ್ಳುವ ಮನಸ್ಥಿತಿಯೂ ವಿದ್ಯಾರ್ಥಿಗಳ ಭವಿಷ್ಯಕ್ಕೆ
ಮಾರಕ. ಇದಿಷ್ಟೇ ಅಲ್ಲದೇ, ಫಲಿತಾಂಶ ಕ್ಷೀಣಿಸಿರುವ ಈ ಸಮಯ ದಲ್ಲಿ ಮತ್ತೊಂದು ಪ್ರಮುಖ ಅಂಶದ ಬಗ್ಗೆ ಅನೇಕರು ತಲೆಕೆಡಿಸಿಕೊಂಡಿಲ್ಲ.
ಕರ್ನಾಟಕದಲ್ಲಿರುವ ಪದವಿ ಪೂರ್ವ ಶಿಕ್ಷಣ, ಪದವಿ ಹಾಗೂ ಉನ್ನತ ಶಿಕ್ಷಣದ ಮೂಲಸೌಕರ್ಯದ ಬಗ್ಗೆಯೂ ಚರ್ಚಿಸಬೇಕಿದೆ. ಒಂದು ವೇಳೆ ಕರ್ನಾಟಕದಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಶೇ.೮೦ಕ್ಕಿಂತ ಹೆಚ್ಚು ಬಂದರೆ, ಆ ಪ್ರಮಾಣದ ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣ ಕೊಡುವಷ್ಟು ಸೀಟು ಪಿಯು ಕಾಲೇಜುಗಳಲ್ಲಿಲ್ಲ. ಹೆಚ್ಚಿನ ವಿದ್ಯಾರ್ಥಿಗಳು ಬಂದರೆ, ಸಾಮರ್ಥ್ಯ ಮೀರಿ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳುವ ಖಾಸಗಿ ಶಿಕ್ಷಣ ಸಂಸ್ಥೆ ಗಳಿದ್ದರೂ, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಮೂಲಸೌಕರ್ಯ ಒದಗಿಸುವ ಸಾಮರ್ಥ್ಯ ನಮ್ಮಲ್ಲಿಲ್ಲ.
ಈ ಕಾರಣಕ್ಕಾಗಿ ವಿದ್ಯಾರ್ಥಿಗಳನ್ನು ಫೇಲ್ ಮಾಡಬೇಕು ಎಂದಲ್ಲ. ಮೌಲ್ಯಯುತ ಶಿಕ್ಷಣವನ್ನು ನೀಡುವ ಸಲುವಾಗಿ ರಾಜ್ಯದಲ್ಲಿ ಶಿಕ್ಷಣಕ್ಕೆ ಗತ್ಯವಾಗಿ ರುವ ಹೆಚ್ಚಿನ ಸವಲತ್ತನ್ನು ನೀಡಬೇಕು. ಸರಕಾರಿ ಶಾಲಾ, ಕಾಲೇಜುಗಳಲ್ಲಿನ ಮೂಲಸೌಕರ್ಯ, ಶಿಕ್ಷಕರ ಸಂಖ್ಯೆಯನ್ನು ಹೆಚ್ಚಿಸಬೇಕು. ಇದರೊಂದಿಗೆ ಶಿಕ್ಷಕರು ಕೇವಲ ವಿದ್ಯಾರ್ಥಿಗಳನ್ನು ಪಾಸ್ ಮಾಡಿಸುವುದಕ್ಕೆ ಸೀಮಿತವಾಗದೇ, ನಿಜವಾದ ಜ್ಞಾನಾರ್ಜನೆಗೆ ಒತ್ತು ನೀಡಬೇಕು. ಕೊನೆಯದಾಗಿ, ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದಲ್ಲಿಯೂ ಪಾಸು-ಫೈಲು ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕಾಗುತ್ತದೆ.
ಅನುತ್ತೀರ್ಣನಾದ ಮಾತ್ರಕ್ಕೆ, ವಿದ್ಯಾರ್ಥಿಯ ಜೀವನ ಮುಗಿಯಿತು ಎಂದಲ್ಲ. ಮುಂದಿನ ವಿಷ್ಯಕ್ಕೆ ಅಗತ್ಯವಾದ ಮಾರ್ಗದರ್ಶನವೂ ಅಗತ್ಯ ಹೀಗಾಗಿ
ಈ ವಿಷಯದಲ್ಲಿ ಸರಕಾರ ಇನ್ನಷ್ಟು ಎಚ್ಚರಿಕೆ ವಹಿಸಬೇಕು. ಇದರೊಂದಿಗೆ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ಕಳುಹಿಸುವುದಕ್ಕೆ ಸೀಮಿತಗೊಳಿಸಿ, ಅತಿಹೆಚ್ಚು ಅಂಕ ಕೊಡಿಸಬೇಕು ಎನ್ನುವ ಕಾರಣಕ್ಕೆ ಶಿಕ್ಷಕರು ಬೋಧಿಸುವುದನ್ನು ಬಿಟ್ಟು, ವಿದ್ಯಾರ್ಥಿಗಳಿಗೆ ಭವಿಷ್ಯವನ್ನು ರೂಪಿಸಬೇಕು ಎನ್ನುವ ನಿಟ್ಟಿನಲ್ಲಿ ಶ್ರಮಿಸಬೇಕು. ಈ ಬಾರಿ ಫಲಿತಾಂಶ ಏರುಪೇರಾಗಲು ಅತಿಯಾದ ಪಾರದರ್ಶಕ ಪ್ರಕ್ರಿಯೆಯೇ ಕಾರಣ ಎಂದು ಯೋಚಿಸುವ ಬದಲು, ಶ್ರಮವಹಿಸಿ ವಿದ್ಯಾರ್ಥಿಗಳು ಪಾಸಾಗಲು ಏನೆಲ್ಲ ಕ್ರಮವಹಿಸಬೇಕೋ ಅದನ್ನು ಸರಕಾರ ಮಾಡಬೇಕಿದೆ.