Saturday, 14th December 2024

ಮಹತ್ವಾಕಾಂಕ್ಷಿ ಭಾರತದ ಸಂಕೇತ ವಂದೇ ಭಾರತ ರೈಲು

ಅಭಿಮತ

ಪ್ರಕಾಶ್ ಶೇಷರಾಘವಾಚಾರ್‌

ಚೀನಾ ಅಧ್ಯಕ್ಷ ಚೌನ್ ಎನ್ ಲೈ ೧೯೫೦ ರಲ್ಲಿ ಇಂಟಿಗ್ರೇಟಡ್ ಕೋಚ್ ಫ್ಯಾಕ್ಟರಿ ಚೆನ್ನೈಗೆ ಭೇಟಿ ಕೊಟ್ಟು ಸಂದರ್ಶಕರ
ಪುಸ್ತಕದಲ್ಲಿ ‘ಐಸಿಎಫ್ ಹೆಮ್ಮೆಯ ಕಾರ್ಖಾನೆಯಾಗಿದೆ. ಚೀನಾದ ಇಂಜಿನಿಯರ್‌ಗಳು ಇಲ್ಲಿಗೆ ಭೇಟಿ ನೀಡಿ ಕಲಿಯಬೇಕಾಗಿದೆ’ ಎಂದು ಬರೆಯುತ್ತಾರೆ.

೨೦೦೪ ರ ವರಗೆ ಒಂದೇ ಒಂದು ಕಿಮೀ ಹೈಸ್ಪೀಡ್ ರೈಲು ಮಾರ್ಗವಿಲ್ಲದಿದ್ದ ಚೈನಾ ಇಂದು ೪೨ ಸಾವಿರ ಕಿಮೀ ಹೈಸ್ಪೀಡ್ ರೈಲು ಮಾರ್ಗ ಹೊಂದಿದೆ. ನಾವು ಇಂದು ನಮ್ಮ ರೈಲ್ವೆ ಅನೇಕ ಅಗತ್ಯಗಳಿಗೆ ಚೀನಾ ದೇಶವನ್ನು ಅವಲಂಬಿಸಬೇಕಾಗಿದೆ. ಅವರಲ್ಲಿ ಅಭಿವೃದ್ಧಿಯ ವಿಚಾರದಲ್ಲಿ ರಾಜಕೀಯ ಮಾಡುವ ಸಂಸ್ಕೃತಿಯಾಗಲಿ ಅಥವಾ ಸ್ವಾತಂತ್ರವಾಗಲಿ ಇಲ್ಲದಿರುವುದರಿಂದ ಹೈಸ್ಪೀಡ್ ವೇಗದಲ್ಲಿಯೇ ಪ್ರಗತಿಯನ್ನು ಸಾಧಿಸಿದೆ.

ಭಾರತದ ರೈಲ್ವೇ ಅಭಿವೃದ್ಧಿಯು ೫೦ರ ದಶಕಕ್ಕೆ ಸ್ಥಗಿತಗೊಂಡಿತು. ನಿಂತ ನೀರಾಗಿ ಒಂದೇ ವಿನ್ಯಾಸದ ಬೂದು ಬಣ್ಣದ ರೈಲು ಬೋಗಿಗಳು, ದುರ್ನಾತ ಬೀರುವ ಶೌಚಾಲಯ, ಮೂಗು ಮುಚ್ಚಿಕೊಂಡು ಪ್ಲಾಟ್ ಫಾರಂ ಮೇಲೆ ನಿಲ್ಲಬೇಕಾದ ಅಸಹನೀಯ ಪರಿಸ್ಥಿತಿಯು ದಶಕ ಗಳೇ ಕಳೆದರು ಬದಲಾಗಲಿಲ್ಲ. ಅಲ್ಪ ಬದಲಾವಣೆಯಾಗಿದ್ದು ೧೯೬೯ ರಲ್ಲಿ ಆರಂಭವಾದ ಹವಾನಿಯಂತ್ರಿತ ರಾಜಧಾನಿ ಎಕ್ಸ್ ಪ್ರೆಸ್ ಮತ್ತು ತದನಂತರ ಹವಾನಿಯಂತ್ರಿತ ಬೋಗಿ ಗಳು ಮಾತ್ರ. ಆದರೆ ಬೋಗಿಯಲ್ಲಿ ಯಾವುದೇ ವ್ಯತ್ಯಾಸ ವಿರಲಿಲ್ಲ. ಇನ್ನೊಂದು ದೊಡ್ಡ ಬದಲಾವಣೆಯೆಂದರೆ ಕಂದು ಬಣ್ಣದಿಂದ ರೈಲು ಬೋಗಿಗಳು ನೀಲಿ ಬಣ್ಣಕ್ಕೆ ಬದಲಾಗಿದ್ದು. ಭಾರತೀಯ ರೈಲ್ವೆಯು ತನ್ನ ಏಕತಾನತೆಯನ್ನು ಕಳಚಿ ಆಧುನಿಕ ಭಾರತದೊಂದಿಗೆ ಮಿಳಿತವಾಗ ಬೇಕಿತ್ತು. ತನ್ನ ಸ್ಥಿತ್ಯಂತರ ದಿಂದ ಪರಿವರ್ತನೆಯಡೆಗೆ ಹೋಗುವುದು ತುರ್ತಾಗಿ ಆಗಬೇಕಿತ್ತು.

ಆದರೆ ರೈಲ್ವೆ ಸೇವೆಯು ರಾಜಕಾರಣಿಗಳಿಗೆ ಮತದಾರರ ಓಲೈಕೆಯ ಅಸವಾಗಿರುವುದರಿಂದ ಪ್ರಯಾಣ ದರ ಹೆಚ್ಚಳ ಮಾಡುವುದು
ಸರ್ಕಾರಕ್ಕೆ ಕಬ್ಬಿಣದ ಕಡಲೆಯಾಗಿ ಆದಾಯದ ಕೊರತೆಯಿಂದ ರೈಲ್ವೆ ಇಲಾಖೆಯಲ್ಲಿ ಸುಧಾರಣೆ ಕಾಣದಾಯಿತು. ಇವೆಲ್ಲದರ ನಡುವೆಯೂ ಭಾರತೀಯ ರೈಲ್ವೆ ೬೮,೦೦೦ ಕಿಮೀ ಮಾರ್ಗದ ವಿಶ್ವದ ನಾಲ್ಕನೆ ದೊಡ್ಡ ರೈಲು ಜಾಲವಾಗಿದೆ. ೨೦೨೨ರಲ್ಲಿ ೯೦೦ ಕೋಟಿ ಪ್ರಯಾಣಿಕರನ್ನು ಮತ್ತು ೧,೪೧೮ ಮಿಲಿಯನ್ ಟನ್ ಸರಕು ಸಾಗಣೆ ಮಾಡಿರುವ ಬೃಹತ್ ವ್ಯವಸ್ಥೆ ನಮ್ಮದು. ೨೦೧೪ ರಲ್ಲಿ ಕೇಂದ್ರದಲ್ಲಿ ಸರ್ಕಾರ ಬದಲಾದ ತರುವಾಯ ರೈಲ್ವೆ ಇಲಾಖೆಯ ಅದೃಷ್ಟವು ಬದಲಾಯಿತು. ಮೋದಿಯವರು ರೈಲ್ವೆ ಅಭಿ
ವೃದ್ಧಿಗೆ ಮಹತ್ವ ನೀಡಿದ್ದಾರೆ. ಕಾಕತಾಳೀಯ ಎಂಬಂತೆ ಭಾರತೀಯ ರೈಲುಗಳು ಆಧುನಿಕವಾಗಬೇಕು ಎಂದು ಹಂಬಲಿಸುತ್ತಿದ್ದ ಸುಧಾಂಶು ಮಣಿಯವರು ಚೆನ್ನೈ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯ ಪ್ರಧಾನ ವ್ಯವಸ್ಥಾಪಕರಾಗಿ ನೇಮಕವಾಗುತ್ತಾರೆ.

ಸುಧಾಂಶು ಮಣಿಯವರು ಐರೋಪ್ಯ ಮಾದರಿಯ ರೈಲನ್ನು ದೇಶೀಯವಾಗಿ ನಿರ್ಮಾಣ ಮಾಡುವ ಕನಸನ್ನು ಹೊತ್ತಿದ್ದವರು. ತಮ್ಮ ಕನಸು ನನಸು ಮಾಡಲೆಂದೇ ಪ್ರಧಾನ ವ್ಯವಸ್ಥಾಪಕರ ಹುದ್ದೆಯನ್ನು ಬಯಸಿ ಪಡೆದಿರುತ್ತಾರೆ. ಭಾರತದ ಅತಿ ವೇಗದ ಮತ್ತು ಹೊಸ ವಿನ್ಯಾಸದ ರೈಲು ಅಭಿವೃದ್ಧಿ ಪಡಿಸಲು ಸೂಕ್ತ ತಂಡವನ್ನು ರಚಿಸಿಕೊಳ್ಳುತ್ತಾರೆ. ಹೊಸ ರೈಲಿನ ರೂಪರೇಷುಗಳು ವಿನ್ಯಾಸ ಹಾಗೂ ಸಮಗ್ರ ಯೋಜನೆಯನ್ನು ರೈಲ್ವೆ ಬೋರ್ಡ್ ಅನುಮೋದಿಸುತ್ತದೆ. ಮೋದಿ ಸರ್ಕಾರ ಬಂದ ತರುವಾಯ ಮೇಕ್ ಇನ್ ಇಂಡಿಯಾ ಪರಿಕಲ್ಪನೆಗೆ ಹೆಚ್ಚು ಮಹತ್ವವಿದ್ದ ಕಾರಣ ಇವರ ಪ್ರಸ್ತಾವನೆಗೆ ಒಪ್ಪಿಗೆಯ ಮುದ್ರೆ ಬೀಳುತ್ತದೆ. ಮಣಿಯವರು ೨೦೧೯ ಜನವರಿಯಲ್ಲಿ ನಿವೃತ್ತರಾಗುತ್ತಿದ್ದರಿಂದ ಅವರಿಗೆ ಕೇವಲ ಎರಡು ವರ್ಷಗಳ ಸೇವಾವಧಿಯು ಉಳಿದಿತ್ತು.

ಅಂದರೆ ೨೦೧೮ ರಲ್ಲಿ ಸೆಮಿ ಹೈಸ್ಪೀಡ್ ರೈಲು ಹಳಿಯ ಮೇಲೆ ತರುವ ಸವಾಲು ಇವರ ಮುಂದೆ ಇರುತ್ತದೆ. ಹೊಸ ರೈಲಿಗೆ ಆರಂಭದಲ್ಲಿ ಟ್ರೈನ್ -೧೮ ಎಂದು ನಾಮಕರಣ ವಾಗುತ್ತದೆ. ನೂರಾರು ತಂತ್ರಜ್ಞರ, ಹತ್ತಾರು ದೇಶಿ ವಿದೇಶಿ ಕಂಪನಿಗಳ ಅಪಾರವಾದ ಶ್ರಮವು ಟ್ರೈನ್ -೧೮ ನಿರ್ಮಾಣದಲ್ಲಿದೆ. ೧೮೦ ಕಿಮೀ ವೇಗದಲ್ಲಿ ಸಂಚರಿಸುವ ಭಾರತದ ಮೊದಲ ಸೆಮಿ ಹೈಸ್ಪೀಡ್ ರೈಲಿನ ಅಭಿವೃದ್ಧಿಯು ಶೇಕಡಾ ನೂರರಷ್ಟು ದೇಶೀಯವಾಗಿ ನಿರ್ಮಾಣ ಮಾಡದಿದ್ದರೂ ಇದರ ವಿನ್ಯಾಸ ನಕ್ಷೆ ಮತ್ತು ತಂತ್ರಜ್ಞಾನ ಸಂಪೂರ್ಣವಾಗಿ ದೇಶೀಯ ಪರಿಕಲ್ಪನೆಯಾಗಿತ್ತು.

೨೦೧೭ ಏಪ್ರಿಲ್ ನಲ್ಲಿ ಟ್ರೈನ್ -೧೮ ನಿರ್ಮಾಣದ ಕಾರ್ಯ ವಿದ್ಯುಕ್ತವಾಗಿ ಆರಂಭವಾಗುತ್ತದೆ. ಭಾರತೀಯ ರೈಲ್ವೆ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಹದಿನೆಂಟು ತಿಂಗಳ ಅವಧಿಯಲ್ಲಿ ಟ್ರೈನ್ -೧೮ ಪ್ರಾಯೋಗಿಕ ಸಂಚಾರಕ್ಕೆ ಸಿದ್ಧವಾಗಿ ಹೊಸ ದಾಖಲೆ ಯನ್ನು ಬರೆಯುತ್ತದೆ. ಚೆನ್ನೈನ ಅನುಪಯುಕ್ತ ಅಣ್ಣಾ ನಗರ ರೈಲು ನಿಲ್ದಾಣದಲ್ಲಿ ಟ್ರೈನ್ ೧೮ರ ಮೊದಲ ಪ್ರಾಯೋಗಿಕ ಸಂಚಾರ ನಡೆಯುವುದು ಮತ್ತು ಪ್ರಾರಂಭಿಕ ಎಲ್ಲಾ ಪರೀಕ್ಷೆಯಲ್ಲಿ ಉತ್ತೀರ್ಣವಾಗಿ ಸಂಚಾರಕ್ಕೆ ಯೋಗ್ಯ ಎಂದು ಘೋಷಿಸ ಲಾಗುತ್ತದೆ. ಭಾರತದ ಮೊದಲ ೧೮೦ ಕಿಮೀ ವೇಗದಲ್ಲಿ ಸಂಚರಿಸಲು ಸಾಮರ್ಥ್ಯವಿರುವ ಸೆಮಿ ಹೈಸ್ಪೀಡ್ ರೈಲಿನ ಹೊಸ ಅಧ್ಯಾಯ ತೆರೆದುಕೊಳ್ಳುತ್ತದೆ.

ಸಂಪೂರ್ಣ ದೇಶೀಯ ತಂತ್ರಜ್ಞಾನದಿಂದ ಮೆಮೊ ಮಾದರಿಯಲ್ಲಿ ಅಭಿವೃದ್ಧಿಪಡಿಸಿದ ಟ್ರೈನ್ ೧೮ ಆತ್ಮನಿರ್ಭರ ಭಾರತ ಮತ್ತು ಬದಲಾಗುತ್ತಿರುವ ಭಾರತದ ಸಂಕೇತ ಎಂದು ಗುರುತಿಸಿಕೊಳ್ಳುವುದು. ಜಡ್ಡು ಹಿಡಿದ ವ್ಯವಸ್ಥೆಯಲ್ಲಿ ಹೊಸತನಕ್ಕೆ ಮತ್ತು ನಾವೀನ್ಯತೆಗೆ ನಾಂದಿ ಹಾಡುತ್ತದೆ. ಇದರ ಅಽಕೃತ ಓಡಾಟಕ್ಕೆ ಮುನ್ನ ಅನಿರೀಕ್ಷಿತವಾದ ವಿಘ್ನವು ಎದುರಾಗುತ್ತದೆ. ಯುಕ್ರೇನ್ ಕಂಪನಿಗೆ ವಂದೇ ಭಾರತ ರೈಲಿನ ಗಾಲಿಗಳ ಆದೇಶ ನೀಡಲಾಗಿರುತ್ತದೆ.

ಆದರೆ ರಷ್ಯಾದೊಂದಿಗೆ ಯುದ್ದ ನಡೆಯುತ್ತಿದ್ದ ಕಾರಣ ನಿಗದಿತ ಸಮಯಕ್ಕೆ ಭಾರತಕ್ಕೆ ಸಾಗಿಸಲು ಸಾಧ್ಯವಾಗುವುದಿಲ್ಲ. ಭಾರತ ಸರ್ಕಾರ ಮಧ್ಯ ಪ್ರವೇಶಿಸಿ ಯುದ್ಧದ ನಡುವೆಯೂ ಕೈಗೊಂಡ ವಿಶೇಷ ಪ್ರಯತ್ನದ ಫಲ. ರಸ್ತೆಯ ಮೂಲಕ ಗಾಲಿಗಳನ್ನು ನೆರೆಯ ರುಮೇನಿಯಾಗೆ ಸಾಗಿಸಿ ಅಲ್ಲಿಂದ ಭಾರತಕ್ಕೆ ತರಲಾಗುವುದು. ವಿಶ್ವದಲ್ಲಿ ಕೇವಲ ನಾಲ್ಕು ದೇಶಗಳು ಮಾತ್ರ ರೈಲು ಗಾಲಿಗಳನ್ನು ಉತ್ಪಾದಿಸುವುದು. ಹೀಗಾಗಿ ಅನಿವಾರ್ಯತೆಯಿಂದ ತನ್ನ ಅವಶ್ಯಕತೆಗೆ ಚೀನಾದ ಸಂಸ್ಥೆಯೊಂದಿಗೆ ವಂದೇ ಭಾರತ ರೈಲಿನ ಗಾಲಿಗಳ ಸರಬರಾಜಿಗೆ ಅವಲಂಬಿ ಸಬೇಕಾಗುತ್ತದೆ. ಈ ನಿಲುವು ರಾಜಕೀಯ ಬಣ್ಣ ತಳೆದು ಯಥಾಪ್ರಕಾರ ಟೀಕೆ ಟಿಪ್ಪಣಿಗಳ ಸುರಿಮಳೆಯಾಗುತ್ತದೆ.

ಆತ್ಮನಿರ್ಭರತೆಯಲ್ಲಿ ಬಲವಾದ ನಂಬಿಕೆ ಇರುವ ಮೋದಿ ಸರ್ಕಾರವು ಭಾರತದಲ್ಲೇ ವಂದೇ ಭಾರತ ರೈಲಿನ ಚಕ್ರ ಉತ್ಪಾದನೆ ಮಾಡಲು ಸ್ವದೇಶಿ ಕಂಪನಿಗಳನ್ನು ಉತ್ತೇಜಿಸಿದ ಕಾರಣ ಭಾರತೀಯ ಕಂಪನಿಗಳು ವಂದೇ ಭಾರತ ರೈಲಿನ ಗಾಲಿಗಳ ಬೇಡಿಕೆ ಪೂರೈಸಲು ಈಗ ಸನ್ನದ್ಧವಾಗಿವೆ. ೧೮೦ ಕಿಮೀ ವೇಗದಲ್ಲಿ ಸಂಚರಿಸ ಬಲ್ಲ ಟ್ರೈನ್ ೧೮ ತನ್ನ ಮೊದಲ ಪ್ರಯೋಗಾತ್ಮಕ ಸಂಚಾರಕ್ಕೆ ಹೊರಡುವ ಮೊದಲು ಸೆಮಿ ಹೈಸ್ಪೀಡ್ ರೈಲಿಗೆ ‘ವಂದೇ ಭಾರತ’ ಎಂದು ನಾಮಕರಣವಾಗುತ್ತದೆ ಹಾಗೂ ಮೊದಲನೆಯ ಸಂಚಾರವು ದೆಹಲಿ ಮತ್ತು ವಾರಣಾಸಿ ನಡುವೆ ಫೆಬ್ರವರಿ ೧೯ ರಂದು ಓಡಿಸಲು ಮುಹೂರ್ತ ನಿಗದಿಯಾಗುತ್ತದೆ.

ತನ್ನ ಅಧಿಕೃತ ಸಂಚಾರ ಆರಂಭಿಸುವ ಮುನ್ನ ವಾರಣಾಸಿಯಿಂದ ದೆಹಲಿಗೆ ಪ್ರಯೋಗಾತ್ಮಕವಾಗಿ ಸಂಚಾರ ಕೈಗೊಂಡಾಗ ಸಣ್ಣ ತಾಂತ್ರಿಕ ತೊಂದರೆಯಿಂದ ಮಾರ್ಗ ಮಧ್ಯದಲ್ಲಿ ನಿಂತು ಹೋಗುತ್ತದೆ. ಅಬ್ಬಾ! ಮೋದಿ ವಿರೋಧಿಗಳು ಕೂಡಲೇ ಜಾಗೃತರಾಗಿ ದೇಶೀ ಯವಾಗಿ ಅಭಿವೃದ್ಧಿ ಪಡಿಸಿದ ರೈಲಿನ ಮೇಲೆ ಒಮ್ಮೆಗೆ ಮುಗಿ ಬೀಳುತ್ತಾರೆ. ರಾಹುಲ್ ಗಾಂಧಿಯವರು ‘ಮೇಕ್ ಇನ್ ಇಂಡಿಯಾಗೆ ಗಂಭೀರವಾದ ಮರುಚಿಂತನೆ ಅಗತ್ಯವಿದೆ ಎಂದು ನಾನು ಭಾವಿಸುತ್ತೇನೆ. ಇದು ವಿಫಲವಾಗಿದೆ ಎಂದು ಹೆಚ್ಚಿನ
ಜನರು ಭಾವಿಸುತ್ತಾರೆ. ಕಾಂಗ್ರೆಸ್‌ನಲ್ಲಿ ನಾವು ಅದನ್ನು ಹೇಗೆ ಮಾಡಲಾಗುತ್ತದೆ ಎಂಬುದರ ಕುರಿತು ಬಹಳ ಆಳವಾಗಿ ಯೋಚಿಸುತ್ತಿದ್ದೇವೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ’ ಎಂದು ಹಿಂದೂ ಮುಂದೂ ಆಲೋಚಿಸದೆ ಟ್ಟೀಟ್ ಮಾಡಿ ಟೀಕಿಸುತ್ತಾರೆ.

ಕಾಂಗ್ರೆಸ್, ಭಾರತೀಯ ಇಂಜಿನಿಯರ್‌ಗಳ ಮತ್ತು ತಂತ್ರಜ್ಞರ ಮಹತ್ಸಾಧನೆಯನ್ನು ಗೌಣ ಮಾಡಲು ಯತ್ನಿಸುತ್ತಾರೆ. ದೇಶವು ಕೋವಿಡ್‌ನಿಂದ ಬಾಧಿತವಾದ ಸಂದರ್ಭದಲ್ಲಿ ಭಾರತದ ವಿಜ್ಞಾನಿಗಳು ದೇಶೀಯವಾಗಿ ಲಸಿಕೆ ಅಭಿವೃದ್ಧಿ ಪಡಿಸಿದರೆ ಅದನ್ನು ವಿಫಲಗೊಳಿಸಲು ಮೋದಿ ವಿರೋಧಿಗಳು ಸರ್ವ ಪ್ರಯತ್ನ ಮಾಡಿದರು. ಫೆಬ್ರವರಿ ೧೫, ೨೦೧೯ ರಂದು ತನ್ನ ಮೊದಲ ಸಂಚಾರ ವನ್ನು ದೆಹಲಿಯಿಂದ ವಾರಣಾಸಿಗೆ ಪ್ರಧಾನಿ ಮೋದಿಯವರು ಹಸಿರು ನಿಶಾನೆ ತೋರುವ ಮೂಲಕ ಆರಂಭವಾಗುತ್ತದೆ. ಈ ಸಂದರ್ಭದಲ್ಲಿ ‘ವಂದೇ ಭಾರತ ರೈಲು ಆತ್ಮನಿರ್ಭರ ಮತ್ತು ಆಧುನಿಕ ಭಾರತದ ಆಕಾಂಕ್ಷೆಯನ್ನು ಬಿಂಬಿಸುತ್ತದೆ’ ಎಂದು ಬಣ್ಣಿಸುತ್ತಾರೆ.

ಕಿಡಿಗೇಡಿಗಳು ಅಸೂಯೆಯಿಂದ ರೈಲಿಗೆ ಕಲ್ಲು ಹೊಡೆಯುವ ಘಟನೆಗಳು ಪದೇ ಪದೇ ನಡೆಯುತ್ತಿದೆ. ಪ್ರಾಯಶಃ ಇದೊಂದು ಪ್ರಾಯೋಜಿತ ಕೃತ್ಯವಾಗಿದ್ದರೂ ಆಶ್ಚರ್ಯವಿಲ್ಲ. ಈ ನಕಾರಾತ್ಮಕ ಮಾನಸಿಕತೆಯು ಪ್ರಯಾಣಿಕರ ಸುರಕ್ಷತೆಗೂ ಅಪಾಯ ವೊಡ್ಡುತ್ತಿದೆ. ಪ್ರಯಾಣಿಕರ ದರವನ್ನೇ ಹೆಚ್ಚಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಪ್ರೀಮಿಯಂ ರೈಲುಗಳನ್ನು ಹೆಚ್ಚು ಹೆಚ್ಚು ಓಡಿಸಿ ರೈಲ್ವೆಯು ತನ್ನ ಆದಾಯ ಹೆಚ್ಚಿಸಿಕೊಳ್ಳುವ ವ್ಯಾವಹಾರಿಕ ಜಾಣ್ಮೆಯನ್ನು ಪ್ರದರ್ಶಿಸುತ್ತಿದೆ. ಜನರಿಂದು ಸೌಲಭ್ಯ ಮತ್ತು ಗುಣಮಟ್ಟದ ಸೇವೆ ನೀಡಿದರೆ ದರ ಹೆಚ್ಚಾದರೂ ಆ ಸೇವೆ ಪಡೆಯಲು ಹಿಂಜರಿಯುವುದಿಲ್ಲ ಎಂಬುದನ್ನು ವಂದೇ ಭಾರತ ರೈಲಿನ ಅಭೂತಪೂರ್ವ ಯಶಸ್ಸಿನಿಂದ ಸಾಬೀತಾಗಿದೆ.

ವಂದೇ ಭಾರತ ರೈಲು ತನ್ನ ಗರಿಷ್ಠ ವೇಗ ೧೬೦ ಕಿಮೀ ತಲುಪಲು ಸಾಧ್ಯವಾಗಿಲ್ಲ ಕಾರಣ ರೈಲು ಸಿದ್ಧವಿದೆ. ಆದರೆ ಅದು ಸಂಚರಿಸಬೇಕಾದ ಹಳಿಗಳು ಸಿದ್ಧವಿಲ್ಲ. ಈಗಾಗಲೇ ಇದರ ವೇಗ ಹೆಚ್ಚಿಸಲು ರೈಲ್ವೆ ಹಳಿಗಳ ದುರಸ್ತಿ ಮತ್ತು ಅಂಕು ಡೊಂಕು ಗಳನ್ನು ನೇರ ಮಾಡುವ ಕಾಮಗಾರಿಗೆ ಚಾಲನೆ ದೊರೆತಿದೆ. ಅನೇಕ ಲಾಬಿಗಳು ಸೆಮಿ ಹೈಸ್ಪೀಡ್ ಯೋಜನೆಯು ಯಶಸ್ವಿ ಯಾಗದಂತೆ ಇನ್ನಿಲ್ಲದ ಪ್ರಯತ್ನಗಳನ್ನು ನಡೆಸಿ ದವು. ಆದರೆ ಸುಧಾಂಶು ಮಣಿಯವರಿಗೆ ಸರ್ಕಾರದ ಬೆಂಬಲ ಅಚಲವಾಗಿದ್ದ ಕಾರಣ ಆ ಎಲ್ಲಾ ಪ್ರಯತ್ನಗಳು ವಿಫಲವಾದವು.

೧೬ ಕೋಚಿನ ವಂದೇ ಭಾರತ ರೈಲಿನ ನಿರ್ಮಾಣದ ವೆಚ್ಚ ಕೇವಲ ೧೧೫ ಕೋಟಿ ರುಪಾಯಿಗಳು ಇದಕ್ಕೆ ವಿದೇಶದ ಮೇಲೆ ಅವಲಂಬಿತವಾಗಿದ್ದರೆ ಇದರ ಬೆಲೆಯು ದುಪ್ಪಟ್ಟಾಗುತ್ತಿತ್ತು. ವಂದೇ ಭಾರತ ರೈಲಿನ ಯಶಸ್ಸು ಭಾರತೀಯ ಇಂಜಿನಿಯರ್‌ಗಳು ಕೂಡ ವಿಶ್ವದರ್ಜೆಯ ರೈಲನ್ನು ಅಭಿವೃದ್ಧಿಪಡಿಸಲು ಸಮರ್ಥರಿದ್ದಾರೆ ಎಂಬುದನ್ನು ಸಾಬೀತುಪಡಿಸಿತು. ವಂದೇ ಭಾರತ ರೈಲು ಮುಂದಿನ ಒಂದು ವರ್ಷದಲ್ಲಿ ೪೦೦ ರೈಲು ಓಡಿಸಲು ಸರ್ಕಾರ ಸಂಸತ್ತಿನಲ್ಲಿ ಘೋಷಣೆ ಮಾಡಿದೆ. ಸದ್ಯ ಹದಿನೈದು ವಂದೇ ಭಾರತ ರೈಲುಗಳ ಸಂಚಾರ ಆರಂಭವಾಗಿದೆ. ಸಹಜವಾದ ಆರಂಭಿಕ ತೊಂದರೆಗಳನ್ನು ಮೆಟ್ಟಿ ವಂದೇ ಭಾರತ ರೈಲು ಭಾರತೀಯ ರೈಲ್ವೆಯನ್ನು ಮತ್ತೊಂದು ಮಜಲಿಗೆ ತಲುಪಿಸಿದೆ.

ಒಟ್ಟಾರೆ ಭಾರತೀಯ ರೈಲ್ವೆಯ ಚಿತ್ರಣ ಬದಲಾಗುತ್ತಿರುವುದಕ್ಕೆ ವಂದೇ ಭಾರತ ರೈಲು ಮುನ್ನುಡಿಯಾಗಿದೆ.