Monday, 16th September 2024

ವಿಳಂಬನೀತಿಯ ಬಲಿಪಶುವಾಗಿರುವ ವಾರಾಹಿ !

ಗಂಟಾಘೋಷ

ಗುರುರಾಜ್ ಗಂಟಿಹೊಳೆ

ಸ್ಥಳೀಯ ಅಧಿಕಾರಿಗಳ ನಿರ್ಲಕ್ಷ್ಯ, ಇಚ್ಛಾಶಕ್ತಿಯ ಕೊರತೆಯಿಂದಾಗಿ ಬಸವನ ಹುಳುವಿನಂತೆ ತೆವಳುತ್ತಿರುವ ವಾರಾಹಿ ನೀರಾವರಿ ಯೋಜನೆಯನ್ನು ಅದರ ಕುಪ್ರಸಿದ್ಧಿಗಾಗಿ ವಿಶ್ವದ ಯಾವುದೇ ದಾಖಲೆ ಪುಸ್ತಕಕ್ಕೆ ಸೇರಿಸಬಹುದಾಗಿದೆ. ಸರಕಾರಗಳು ಜನರ ದುಡ್ಡನ್ನು ಮನಬಂದಂತೆ ಖರ್ಚು ಮಾಡಿದ್ದು ಬಿಟ್ಟರೆ ಈ ಯೋಜನೆಯಲ್ಲಿ ಹೇಳಿಕೊಳ್ಳುವಷ್ಟು ಪ್ರಗತಿಯಾಗಿಲ್ಲ.

ಕೆಲ ವಾರಗಳ ಹಿಂದೆ ಈ ಅಂಕಣದಲ್ಲಿ ತೆಲಂಗಾಣದ ಶ್ರೀಕಾಲೇಶ್ವರಂ ಏತ ನೀರಾವರಿ ಯೋಜನೆಯ ಕುರಿತಾಗಿ ಓದಿದ್ದಿರಿ. ವಿಶ್ವದ ಪ್ರತಿಷ್ಠಿತ ಯೋಜನೆ ಗಳಲ್ಲಿ ಒಂದೆನಿಸಿಕೊಂಡು ‘ಎಂಜಿನಿಯರಿಂಗ್ ಮಾರ್ವೆಲ್’ ಎಂದೇ ಕರೆಯಲ್ಪಡುವ ಈ ಯೋಜನೆಯನ್ನು ೨೦೧೬ರಲ್ಲಿ ಕೈಗೆತ್ತಿಕೊಂಡು ಮೂರೇ
ವರ್ಷದ ಅವಧಿಯಲ್ಲಿ ಪೂರ್ಣಗೊಳಿಸಲಾಯಿತು. ಅದರ ಕುರಿತು ಇಲ್ಲಿ ಮತ್ತೆ ಪ್ರಸ್ತಾಪಿಸುತ್ತಿರುವುದಕ್ಕೆ ಕಾರಣ, ಕರ್ನಾಟಕದ ಪ್ರಮುಖ ನೀರಾವರಿ ಯೋಜನೆಯಾದ ‘ವಾರಾಹಿ’. ಕಾರಣ, ಬರೋಬ್ಬರಿ ೪೫ ವರ್ಷಗಳಿಂದ ನನೆಗುದಿಗೆ ಬಿದ್ದು, ‘ಕಾರ್ಯನಿರ್ವಹಿಸದಿರುವ ಯೋಜನೆ’ ಎಂಬ ಹಣೆಪಟ್ಟಿ ಯಡಿ ಗಿನ್ನಿಸ್ ದಾಖಲೆಗೆ ಸೇರಬಹುದಾದ ಎಲ್ಲ (ಕು)ಖ್ಯಾತ ಅರ್ಹತೆಗಳನ್ನೂ ಇದು ಹೊಂದಿದೆ.

ಯಾವುದೇ ಒಂದು ಯೋಜನೆ ಅಂಗೀಕಾರವಾಗಬೇಕಾದರೆ, ಅದರ ಹಿಂದೆ ನುರಿತ ಅಧಿಕಾರಿಗಳ ಅಪಾರ ಶ್ರಮ, ಸಮಯ, ಸಿದ್ಧತೆ, ಜನರ ಹಣ ಇತ್ಯಾದಿ ಗಳೆಲ್ಲ ಹೂಡಿಕೆಯಾಗಿರುತ್ತವೆ. ಇಷ್ಟೆಲ್ಲ ಮಾಡಿದ ಮೇಲೆ ಈ ಯೋಜನೆಗೆ ೧೯೭೯ರಲ್ಲಿ ಆಡಳಿತಾತ್ಮಕವಾಗಿ ಅನುಮೋದನೆ ಸಿಕ್ಕಿದರೂ, ಸಾಕಷ್ಟು ವರ್ಷಗಳ ಕಾಲ ಮೂಲೆಗುಂಪಾಗಿತ್ತು ಎಂದರೆ ನಮ್ಮ ವ್ಯವಸ್ಥೆಯ ಅವಸ್ಥೆ ಹೇಗಿದೆ ನೋಡಿ! ಜನರ ಮತ್ತು ಪ್ರಾಜ್ಞರ ಒತ್ತಾಯದ ಮೇರೆಗೆ ಸರಕಾರವು ಈ ಯೋಜನೆಯನ್ನು ೨೦೦೩ರಲ್ಲಿ ಕರ್ನಾಟಕ ನೀರಾವರಿ ನಿಗಮಕ್ಕೆ ವರ್ಗಾಯಿಸಿತು. ಅಲ್ಲಿಯವರೆಗೆ ಈ ಯೋಜನೆಗೆ ಖರ್ಚಾಗಿದ್ದು ೩೫ ಕೋಟಿ ರುಪಾಯಿ, ಅದೂ ಅಧಿಕಾರಿಗಳ ಸಂಬಳ, ಸಾರಿಗೆ, ವಸತಿ ಇತ್ಯಾದಿ ಖರ್ಚು ವೆಚ್ಚಗಳಿಗಾಗಿ!

ನೀರಾವರಿ ನಿಗಮಕ್ಕೆ ಹಸ್ತಾಂತರಗೊಂಡ ನಂತರ ಅಂದಿನ ದರಪಟ್ಟಿಯನ್ನು ಪರಿಷ್ಕರಿಸಿ, ಅಂದಾಜು ಪಟ್ಟಿಯನ್ನು ೫೬೯.೫೩ ಕೋಟಿಗೆ ಹೆಚ್ಚಿಸಲಾ ಯಿತು ಮತ್ತು ಈ ಪ್ರಸ್ತಾವಕ್ಕೆ ೨೦೦೬ರಲ್ಲಿ ಸರಕಾರದಿಂದ ಆಡಳಿತಾತ್ಮಕ ಅನುಮೋದನೆಯನ್ನೂ ಪಡೆಯಲಾಯಿತು. ಭೂಸ್ವಾಧೀನ ಪ್ರಕ್ರಿಯೆ, ಅನುದಾನದ ಕೊರತೆ, ಕೇಂದ್ರ ಮತ್ತು ರಾಜ್ಯ ಸರಕಾರದ ಪ್ರಾಧಿಕಾರಗಳ ಸಮನ್ವಯದ ಕೊರತೆ, ರಕ್ಷಿತಾರಣ್ಯ, ಡೀಮ್ಡ್ ಅರಣ್ಯ ಪ್ರದೇಶಗಳಲ್ಲಿ ಬರುವ ಮರಗಳನ್ನು ಕತ್ತರಿಸುವಲ್ಲಿ ಎದುರಾದ ಸಮಸ್ಯೆಗಳಿಂದಾಗಿ ಮತ್ತು ಸೂಕ್ತ ದಾಖಲೆಗಳನ್ನು ಸರಿಯಾದ ಕ್ರಮದಲ್ಲಿ ಸಲ್ಲಿಸದ ಕಾರಣಗಳಿಂದಾಗಿ, ಜತೆಗೆ ಕೇಂದ್ರ ಮತ್ತು ಅರಣ್ಯ, ಪರಿಸರ ಇಲಾಖೆಗಳ ಅನುಮತಿ ಪ್ರಕ್ರಿಯೆ ಯಲ್ಲಿನ ವಿಳಂಬವೂ ಸೇರಿ ವಾರಾಹಿ ಯೋಜನೆಯ ವೇಗ ಕುಂಠಿತಗೊಂಡಿತು.

ಆದರೆ, ತಾಂತ್ರಿಕ ಸಮಸ್ಯೆಗಳಿಲ್ಲದ ಕಡೆಗಳಲ್ಲೂ ಕಾಮಗಾರಿ ವಿಳಂಬವಾಗುತ್ತಿರುವುದೇಕೆ ಎಂಬುದಕ್ಕೆ ಅಧಿಕಾರಿಗಳ ಬಳಿ ಉತ್ತರವಿಲ್ಲ!

ಮತ್ತದೇ ವಿಳಂಬ ನೀತಿಯಿಂದಾಗಿ ಎಂದಿನಂತೆ ಮೂಲೆ ಸೇರಿದ ಯೋಜನೆಯು, ದಶಕಗಳ ನಂತರ ಸರಕಾರಗಳು ಎಚ್ಚೆತ್ತ ಪರಿಣಾಮ ೨೦೧೪-೧೫ರ ಸಾಲಿನ ಮತ್ತೊಂದು ಪರಿಷ್ಕೃತ ದರಪಟ್ಟಿಯ ಸಲ್ಲಿಕೆಗೆ ಸಾಕ್ಷಿಯಾಯಿತು; ಅಂದರೆ, ೧,೭೮೯.೫೦ ಕೋಟಿಗೆ ಅಂದಾಜುಪಟ್ಟಿ ತಯಾರಿಸಿ ಅನುಮೋದನೆ ಗಾಗಿ ಸಲ್ಲಿಸಲಾಯಿತು. ಪ್ರಸ್ತುತ ಅದಿನ್ನೂ ಸರಕಾರದ ಮಟ್ಟದಲ್ಲಿ ಪರಿಶೀಲನೆಯ ಹಂತದಲ್ಲಿದೆ. ಈ ಮೂಲಕ ಮತ್ತೆ ಹೊಸದಾಗಿ ಡಿಪಿಆರ್‌ಗೆ ಅನುಮತಿ ನೀಡಿದಲ್ಲಿ ಯೋಜನೆಯ ಒಟ್ಟು ಗಾತ್ರವು ಮತ್ತಷ್ಟು ಹೆಚ್ಚಾಗ ಲಿದೆ. ಕರಾವಳಿಯ ಉಡುಪಿ ಸೇರಿದಂತೆ ಇತರೆ ಭಾಗದ ಜನರ ಉಪಯೋಗಕ್ಕೆ ಬರುವ ಈ ವಾರಾಹಿ ಯೋಜನೆ ಕುಂಠಿತಗೊಳ್ಳಲು ಪ್ರಮುಖ ಕಾರಣ ಭೂಸ್ವಾಧೀನ ಪ್ರಕ್ರಿಯೆ. ಈ ಯೋಜನೆಗೆ ಒಳಪಡುವ ಜಮೀನನ್ನು ಮೊದಲೇ ಗುರುತಿಸಿ ಸ್ವಾಧೀನ ಪ್ರಕ್ರಿಯೆಯ ಮೂಲಕ ಅದನ್ನು ಪಡೆದುಕೊಂಡಿದ್ದರೆ ‘ವಾರಾಹಿ’ ಎಂದೋ ಮುಗಿದುಹೋಗುತ್ತಿತ್ತು.

ಜತೆಗೆ, ಖಾತಾ ಜಮೀನುಗಳ ಸ್ವಾಧೀನಕ್ಕಾಗಿ ಪ್ರತ್ಯೇಕ ಅಧಿಕಾರಿಗಳ ನೇಮಕವಾಗದಿರುವುದು, ಯೋಜನೆಯಲ್ಲಿ ಅಳಿದುಳಿದ ಅಧಿಕಾರಿ ವರ್ಗಗಳ
ದಿವ್ಯನಿರ್ಲಕ್ಷ್ಯ ಇವೂ ಎದ್ದುಕಾಣುತ್ತಿವೆ. ಜನರ ಕಷ್ಟಕ್ಕೆ ಸ್ಪಂದಿಸಬೇಕಾದ ಜನಪ್ರತಿನಿಧಿಗಳು, ಅಧಿಕಾರಿಗಳು ಭ್ರಷ್ಟತೆಯಲ್ಲಿ ಮುಳುಗಿ ತೇಲುತ್ತಿರುವುದು ಮಾತ್ರ ನಾಡಿನ ಜನರ ದುರಂತ. ಸುಮಾರು ೧೨೯.೬೦ ಹೆಕ್ಟೇರ್ ರಕ್ಷಿತಾರಣ್ಯ ಪ್ರದೇಶವು ಈ ಯೋಜನೆಯಲ್ಲಿದ್ದು, ಇದರಲ್ಲಿ ಸುಮಾರು ೪೦ ಹೆಕ್ಟೇರ್ ಡೀಮ್ಡ್ ಅರಣ್ಯವಾಗಿರುವುದರಿಂದ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ; ಪ್ರಮುಖವಾಗಿ ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿ ಬರುವ ಯೋಜನೆಯಾಗಿ ರುವುದರಿಂದ ಇಲ್ಲಿನ ಮಣ್ಣಿನ ಗುಣ, ಪರಿಸರ ಇತ್ಯಾದಿಗಳಿಂದಾಗಿ ಯೋಜನೆಯ ಅನುಷ್ಠಾನಕ್ಕೆ ಮೊದಲು ಈ ಕುರಿತಂತೆ ಅಧ್ಯಯನ ಮಾಡದಿರುವು ದರಿಂದ ಎದುರಾದ ಹಲವು ವೈಫಲ್ಯಗಳೂ ಇದಕ್ಕೆ ಕಾರಣವಾದವು.

ಇನ್ನುಳಿದಂತೆ, ಅಧಿಕಾರಿ ವರ್ಗ ಮತ್ತು ತಾಂತ್ರಿಕ ಪರಿಣತರನ್ನು ವಿಚಾರಿಸಿದಾಗ, ಕಾಮಗಾರಿ ಪ್ರದೇಶಗಳಲ್ಲಿ ಜೂನ್‌ನಿಂದ ಡಿಸೆಂಬರ್‌ವರೆಗೂ ಮಳೆಗಾಲವಾದ್ದರಿಂದ ಕಾಮಗಾರಿ ಮಾಡುವುದು ಕಷ್ಟಸಾಧ್ಯ; ಇದರೊಟ್ಟಿಗೆ, ನೀರಾವರಿ ನಿಗಮಕ್ಕೆ ವರ್ಗಾಯಿಸಿರುವುದರಿಂದ, ಇಲ್ಲಿರುವ ಇತರೆ
ಯೋಜನೆಗಳ ಒತ್ತಡದಿಂದಲೂ ಇದರ ಮೇಲೆ ನಿಗಾವಹಿ ಸಲು ಆಗುತ್ತಿಲ್ಲವೆಂದು ತಿಳಿದುಬಂದಿದೆ. ಇಷ್ಟೆಲ್ಲ ಸುದೀರ್ಘ ಇತಿಹಾಸವಿರುವ ಈ ಯೋಜನೆ
ಯಲ್ಲಿ ೨೦೨೧ರವರೆಗೆ ೯೯೭.೧೩ ಕೋಟಿ ರು. ಖರ್ಚಾಗಿದೆ; ನೀರು ಹರಿದಿದ್ದು ಎಡದಂಡೆಯ ೩೮ ಕಿ.ಮೀ. ಮತ್ತು ಬಲದಂಡೆಯ ೧೯ ಕಿ.ಮೀ.ವರೆಗಿನ ಕಾಲುವೆ ಪ್ರದೇಶದಲ್ಲಿ ಮಾತ್ರ. ಹಾಗೆಯೇ, ಹಾಲಾಡಿ ಗ್ರಾಮಕ್ಕೆ ಹೊಂದಿಕೊಂಡಂತಿರುವ ಪ್ರದೇಶದಲ್ಲಿ, ವಾರಾಹಿ ನಾಲೆಗಳನ್ನು ಸೇರಿಸುವ ಮೇಲು ಕಾಲುವೆಯನ್ನು ೨೦೦೯-೧೦ರಲ್ಲಿ ಪೂರ್ಣಗೊಳಿಸಲಾಗಿದೆ.

ಇನ್ನೇನು ಇದು ತಮ್ಮ ಬಾಳನ್ನು ಬೆಳಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ರೈತರು ಕಾಯುತ್ತ ಕಾಯುತ್ತ ೨ನೇ ತಲೆಮಾರನ್ನು ಕಾಣುವಂತಾಗಿದ್ದು ಮಾತ್ರ
ವಿಪರ್ಯಾಸ. ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆಲೂರು, ನಾಡಾ, ಗುಡ್ಡೆಯಂಗಡಿ, ಸೇನಾಪುರ, ಹರ್ಕೂರು ಗ್ರಾಮಗಳಿಗೆ ಮತ್ತು ಸುತ್ತಮುತ್ತ ಲಿನ ಪ್ರದೇಶಗಳಿಗೆ ನೀರಾವರಿ ಸೌಲಭ್ಯದ ಜತೆಗೆ ಕುಡಿಯುವ ನೀರು ಪೂರೈಸಲೆಂದು ಸೌಪರ್ಣಿಕಾ ಏತ ನೀರಾವರಿ ಕೈಗೊಳ್ಳಲಾಗಿದೆ. ಇದರ
ಭಾಗ ವಾಗಿ, ಆಲೂರು ಗ್ರಾಮದ ಎದ್ರುಬೈಲ್ ಬಳಿಯ ನದಿಗೆ ಸೇತುವೆ ಜತೆಗೆ ಬ್ಯಾರೇಜ್ ನಿರ್ಮಿಸಿ, ಡೈವರ್ಷನ್ ವಿಯರ್, ಜಾಕ್‌ವೆಲ್ ಪಂಪ್‌ಹೌಸ್‌ ನೊಂದಿಗೆ ೩೩ ಕೆ.ವಿ. ಸಬ್‌ಸ್ಟೇಷನ್ ಕೂಡ ನಿರ್ಮಿಸಲಾಯಿತು. ೨೦೧೦ರಲ್ಲಿ ೫೩ ಕೋಟಿ ಮತ್ತು ೨೦೧೨ರಲ್ಲಿ ೬೫ ಕೋಟಿ ವೆಚ್ಚದ ವಿವಿಧ ಕಾಮಗಾರಿ ಗಳು ಸದ್ಯ ಪ್ರಗತಿಯಲ್ಲಿವೆ.

ಶಿವಮೊಗ್ಗ ಜಿಲ್ಲೆಯ ಗುಡ್ಡೆಕೊಪ್ಪದಿಂದ ಹೊರಟು ಗಂಗೊಳ್ಳಿ ಸಮೀಪ ಅರಬ್ಬಿ ಸಮುದ್ರ ಸೇರುವ ವಾರಾಹಿ ಹರಿವಿನ ಪ್ರದೇಶದಲ್ಲಿ ದೊರಕುವ ನದಿನೀರನ್ನು ಸದುಪಯೋಗಪಡಿಸಿಕೊಳ್ಳಲೆಂದು ಸೌಕೂರು ಏತ ನೀರಾವರಿ ಯೋಜನೆಗೆ ಸರಕಾರ ಕೈಹಾಕಿದೆ. ಕುಂದಾಪುರ ಬಳಿಯ ಬಳ್ಕೂರು ಸಮೀಪ ಹರಿಯುವ ವಾರಾಹಿ ನದಿಗೆ ಉಪ್ಪುನೀರು ತಡೆಗೋಡೆ ಅಣೆಕಟ್ಟಿನ ಹತ್ತಿರ, ಸೌಕೂರು ಗ್ರಾಮದಲ್ಲಿ ಜಾಕ್‌ವೆಲ್ ನಿರ್ಮಿಸುವ ಮುಖಾಂತರ ೧೩೫೦ ಹೆಕ್ಟೇರ್ ಭೂಮಿಗೆ ನೀರಾವರಿ ಕಲ್ಪಿಸಲು ೭೪ ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿದೆ. ಆಗಬೇಕಾದ ಕಾಮಗಾರಿಗಳು ಬೇಕಾದಷ್ಟಿವೆ. ಭತ್ತದ ಗದ್ದೆಗಳಿಗೆ ಹಲವು ಬಾರಿ ಉಪ್ಪುನೀರು ನುಗ್ಗಿ ಬೆಳೆಗಳನ್ನು ನಾಶಪಡಿಸಿದೆ.

ಸಿಹಿನೀರಿನ ಬಾವಿಗಳಿಗೂ ಅಂತರ್ಜಲದ ಮೂಲಕ ಉಪ್ಪುನೀರು ಸೇರುವ ಆತಂಕ ಸ್ಥಳೀಯರದ್ದಾಗಿದೆ. ಇಂಥ ಕೆಲ ನಿದರ್ಶನ ಗಳು ವರದಿಯಾಗಿರು ವುದೂ ಉಂಟು. ಈ ಹಿಂದೆ ನಿರ್ಮಿ ಸಿರುವ ತಡೆಗೋಡೆಗಳು ಕಾರಣಾಂತರಗಳಿಂದ ಶಿಥಿಲ ಗೊಂಡಿರುವುದರಿಂದ, ಕಳೆದ ವಾರದ ಹಿಂದಷ್ಟೇ ೫೦ ಎಕರೆಗೂ ಹೆಚ್ಚಿನ ಜಮೀನಿಗೆ ಉಪ್ಪುನೀರು ನುಗ್ಗಿ ಅಪಾರ ಬೆಳೆನಷ್ಟವಾಗಿರುವುದಲ್ಲದೆ, ಅಕ್ಕಪಕ್ಕದ ಬಾವಿಗಳೂ ಉಪ್ಪಾಗುವ ಭೀತಿ ಎದುರಾಗಿದೆ. ಹೀಗಾಗಿ ಕೆಲವೆಡೆ ಹೊಸದಾಗಿ ‘ವೆಂಟೆಡ್ ಡ್ಯಾಂ’ನಂಥ ಪರಿಸರಸ್ನೇಹಿ ತಡೆಗೋಡೆಗಳನ್ನು ನಿರ್ಮಿಸಬೇಕಾದ ಅವಶ್ಯಕತೆ ಎದುರಾಗಿದೆ.

ಹೀಗೆ ಸರಕಾರ ಮನಸ್ಸು ಬಂದಾಗ ಇದರ ಬಗ್ಗೆ ಚಿತ್ತ ನೆಟ್ಟಿದ್ದು ಬಿಟ್ಟರೆ, ಸ್ಥಳೀಯ ಅಽಕಾರಿಗಳ ನಿರ್ಲಕ್ಷ್ಯ ಮತ್ತು ಇಚ್ಛಾಶಕ್ತಿಯ ಕೊರತೆಯಿಂದಾಗಿ ಈ ಯೋಜನೆ ಬಸವನ ಹುಳುವಿನಂತೆ ತೆವಳುತ್ತಿದೆ. ಜನರು ಮತ್ತು ಮಾಧ್ಯಮ ದವರು ಪ್ರಶ್ನಿಸಿದಾಗಲೊಮ್ಮೆ ಎದ್ದೇಳುವ ಸರಕಾರವು, ಮತ್ತೊಂದು ಮಗದೊಂದು ಪರಿಷ್ಕೃತ ದರಪಟ್ಟಿಯೊಂದಿಗೆ ತಾನೂ ಇದಕ್ಕೆ ಒತ್ತಾಸೆಯಾಗಿರುವುದಾಗಿ ನಾಟಕವಾಡುತ್ತ ಕೈತೊಳೆದುಕೊಳ್ಳುತ್ತಿದೆ. ಮತ್ತದೇ ಕಾಲ ಹರಣ, ವಿಳಂಬ ನೀತಿ, ಮಳೆಗಾಲದ ಫಜೀತಿ. ಬೇಸಗೆಯ ಬೇಗೆಯಲ್ಲಿ ರೈತ ಹಿಡಿಶಾಪ ಹಾಕುತ್ತ ತನ್ನ ತಲೆಮಾರುಗಳನ್ನು ಕಳೆಯುತ್ತಿದ್ದಾನೆ.

೪ ದಶಕಗಳ ಹಿಂದೆ ಕೇವಲ ೯ ಕೋಟಿ ರು. ವೆಚ್ಚದ ಅನುಮೋದನೆಯೊಂದಿಗೆ ಆರಂಭಗೊಂಡ ಈ ಯೋಜನೆಯ ಈಗಿನ ಗಾತ್ರವು ೧,೩೦೦ ಕೋಟಿ ದಾಟಿ, ಬಿಡುಗಡೆ ಯಾದ ಅದೆಷ್ಟೋ ಹಣವು ಹರಿದು ಹಂಚಿಹೋಯಿತು. ಆದರೆ ವಾರಾಹಿ ಮಾತ್ರ ಎಲ್ಲರೆಡೆಗೆ ಹರಿಯಲಿಲ್ಲ. ಅಚ್ಚುಕಟ್ಟು ಪ್ರದೇಶಗಳಿಗೆ ನೀರೊದಗಿಸುವ ಜತೆಗೆ ಕುಡಿಯುವ ನೀರು ಪೂರೈಸುವ ಯೋಜನೆ ಕೂಡ ಚಾಲ್ತಿಯಲ್ಲಿದ್ದು, ಬೈಂದೂರು ಮತ್ತು ಕಾರ್ಕಳ ತಾಲೂಕುಗಳಿಗೂ ಪ್ರತ್ಯೇಕ
ಯೋಜನೆಗಳನ್ನು ವಿಸ್ತರಿಸಿ ಅದರ ಕಾಮಗಾರಿಯೂ ನಡೆಯುತ್ತಿದೆ, ಅದೂ ತೆವಳುತ್ತ ಸಾಗುತ್ತಿದೆ.

‘ಲೂಟಿ ಹೊಡೆಯಬೇಕೇ, ಹಾಗಿದ್ದಲ್ಲಿ ಕರ್ನಾಟಕದಂತೆ ನೀರಾವರಿ ಯೋಜನೆಗಳನ್ನು ರೂಪಿಸಿ’ ಎಂದು ಅಕ್ಕಪಕ್ಕದ ರಾಜ್ಯಗಳು ನಮ್ಮನ್ನು ಆಡಿಕೊಳ್ಳು ತ್ತಿರುವುದು ಗುಟ್ಟಾ ಗೇನೂ ಉಳಿದಿಲ್ಲ. ದೇಶದಲ್ಲೇ ನೀರನ್ನು, ಕೆರೆಗಳನ್ನು, ನದಿಮೂಲಗಳನ್ನು ಕೆಟ್ಟದಾಗಿ ನಿರ್ವಹಣೆ ಮಾಡುತ್ತಿರುವ ರಾಜ್ಯ ಸರಕಾರವು, ನಾಡಿನ ಜನರ ಅಭ್ಯುದಯದ ಬಗ್ಗೆ ಎಳ್ಳಷ್ಟೂ ಕಾಳಜಿ ವಹಿಸದಿರುವುದು ಖಂಡನೀಯ. ಮೂಲಭೂತ ಸೌಲಭ್ಯಗಳಲ್ಲಿ ಆದ್ಯತೆಯದ್ದು ಎನಿಸಿಕೊಂಡಿರುವ ನೀರನ್ನು ಜನರಿಗೆ ಕೊಡುವುದರಲ್ಲೂ ವಿಳಂಬ ನೀತಿ ಅನುಸರಿಸುತ್ತ, ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಡುವ ಸರಕಾರಗಳು ಇದ್ದರೆಷ್ಟು ಹೋದರೆಷ್ಟು!

ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ನಗರಗಳು ಈಗಾಗಲೇ ಕುಡಿಯುವ ನೀರಿನ ಮೂಲಗಳಿಂದ ವಂಚಿತವಾಗಿವೆ. ಹಾಗಾಗಿ, ಇತರ ಜಿಲ್ಲೆಗಳಿಂದ, ಅಕ್ಕಪಕ್ಕದ ಜಲಮೂಲಗಳಿಂದ ಒಂದು ಮಿತಿಯಲ್ಲಿ ನೀರನ್ನು ಸರಬರಾಜು ಮಾಡಲಾಗುತ್ತಿದೆ. ನೀರನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವಲ್ಲಿ ಸೂಕ್ತ ಕ್ರಮ ಕೈಗೊಳ್ಳದ ಸರಕಾರ ಮತ್ತು ಅಧಿಕಾರಿಗಳು ಮುಂದೊಂದು ದಿನ ಇಡೀ ರಾಜ್ಯವನ್ನು ಕುಡಿಯುವ ಜಲಮೂಲದಿಂದ ಮುಕ್ತಗೊಳಿಸುವ ದಿನ
ಗಳು ದೂರವಿಲ್ಲ. ಇದು ಎಂಥವರಿಗೂ ಅರಿವಾಗುವ ಸಂಗತಿ. ಯೆಮೆನ್‌ನಂಥ ಮಧ್ಯಪ್ರಾಚ್ಯ ದೇಶ ಸೇರಿದಂತೆ ಜಗತ್ತಿನ ಬಹುತೇಕ ರಾಷ್ಟ್ರಗಳು ನೀರಿಗಾಗಿ ಯುದ್ಧಮಾಡುವುದಕ್ಕೂ ಸಿದ್ಧವಾಗಿ ನಿಂತಿವೆ.

ಇಂಥ ಪರಿಸ್ಥಿತಿಯಲ್ಲಿ ರಾಜ್ಯ ಸರಕಾರಗಳು ಹಮ್ಮಿಕೊಂಡಿರುವ ನೀರಾವರಿ ಯೋಜನೆಗಳನ್ನು ಇನ್ನಾದರೂ ಶರವೇಗದಲ್ಲಿ ಪೂರ್ಣಗೊಳಿಸದಿದ್ದರೆ, ಪೊಳ್ಳು ಭರವಸೆ, ನಕಲಿ ಯೋಜನೆಗಳಿಂದ ಬೇಸತ್ತ ಜನರು ದಂಗೆ ಏಳುವುದರಲ್ಲಿ ಸಂದೇಹವಿಲ್ಲ. ಇದನ್ನು ಬಹಳ ಗಂಭೀರವಾಗಿಯೇ ಹೇಳುತ್ತಿದ್ದೇನೆ.

Leave a Reply

Your email address will not be published. Required fields are marked *