Sunday, 24th November 2024

ವರುಣಾ ರಾಜಕೀಯ ನಿಂತ ನೀರಲ್ಲ

ಅಶ್ವತ್ಥಕಟ್ಟೆ

ranjith.hoskere@gmail.com

2024 ಲೋಕಸಭಾ ಚುನಾವಣೆಯ ದಿಕ್ಸೂಚಿ, ಕಾಂಗ್ರೆಸ್ ಹಾಗೂ ಬಿಜೆಪಿ ಎರಡಕ್ಕೂ ಪ್ರತಿಷ್ಠೆಯ ಪ್ರಶ್ನೆಯಾಗಿರುವ ಕರ್ನಾಟಕ ವಿಧಾನಸಭಾ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಇಡೀ ರಾಷ್ಟ್ರದ ಗಮನ ಇತ್ತ ನೆಟ್ಟಿದೆ. ಈ ನಡುವೆ ಕಳೆದ ಬಾರಿಯಂತೆ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಲು ಸಜ್ಜಾಗಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಕಟ್ಟಿಹಾಕಲು ಬಿಜೆಪಿಯೂ ‘ದ್ವಿ’ ಕ್ಷೇತ್ರದ ತಂತ್ರವನ್ನು ಹೂಡುವುದೇ ಅಥವಾ ವಿಜಯೇಂದ್ರ ಅವರ ರಾಜಕೀಯ ಭವಿಷ್ಯವನ್ನು ಪಣಕ್ಕೆ ಇಡಲು ಮುಂದಾಗುವುದೇ ಎನ್ನುವುದು ಇದೀಗ ಅನೇಕರ ಮುಂದಿರುವ ಪ್ರಶ್ನೆಯಾ ಗಿದೆ.

ಹೌದು, ಈ ಬಾರಿಯ ಚುನಾವಣೆಯಲ್ಲಿ ಎರೆಡೆರೆಡು ಕ್ಷೇತ್ರದಿಂದ ಸ್ಪರ್ಧಿಸುವ ಉಮೇದು ಹೊಂದಿದ್ದಾರೆ ಎನ್ನುವ ಪೈಕಿ ಇಬ್ಬರ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ. ಮೊದಲಿಗೆ ಈಗಾಗಲೇ ಅಽಕೃತವಾಗಿ ಎರಡು ಕ್ಷೇತ್ರದಲ್ಲಿ ನಿಲ್ಲುವುದಾಗಿ ಹೇಳಿರುವ ಸಿದ್ದರಾಮಯ್ಯ ಅವರು ಒಬ್ಬರಾದರೆ, ಇನ್ನೊಬ್ಬರು ಸಿದ್ದರಾಮಯ್ಯ ಅವರನ್ನು ಹಣಿಯಲು ಬಿಜೆಪಿಯಿಂದ ಸಜ್ಜುಗೊಳಿಸುತ್ತಿರುವ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ. ವರುಣಾದಿಂದ ಸಿದ್ದರಾಮಯ್ಯ ಸ್ಪರ್ಧೆ ಖಚಿತವಾಗುತ್ತಿದ್ದಂತೆ, ಅಲ್ಲಿಗೆ ಪ್ರಬಲ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಮೂಲಕ ಸಿದ್ದರಾಮಯ್ಯ ಅವರಿಗೆ ‘ಕಿರಿಕಿರಿ’ ಮಾಡಬೇಕು ಎನ್ನುವ ಲೆಕ್ಕಾಚಾರದಲ್ಲಿ ಬಿಜೆಪಿ ವರಿಷ್ಠರಿದ್ದಾರೆ. ಈ ಕಾರ್ಯಕ್ಕೆ ಬಿಜೆಪಿ ಬಳಿಯಿರುವ ಅಸ್ತ್ರವೇ ವಿಜಯೇಂದ್ರ ಎಂದು ವಿಶ್ಲೇಷಿಸಲಾಗುತ್ತಿದೆ.

ಆದರೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಚುನಾವಣಾ ರಾಜಕೀಯದಿಂದ ಹಿಂದೆ ಸರಿದಿರುವುದರಿಂದ ಅವರ ಕ್ಷೇತ್ರಕ್ಕೆ ಅವರ ಪುತ್ರ ಬಿ.ವೈ ವಿಜಯೇಂದ್ರರನ್ನು ನಿಲ್ಲಿಸಿ, ತಮ್ಮ ನಂತರವೂ ಶಿಕಾರಿಪುರದ ಹಿಡಿತವನ್ನು ಮುಂದುವರಿಸಲು ಯಡಿಯೂರಪ್ಪ ಸಜ್ಜಾಗಿದ್ದಾರೆ. ಈ ನಡುವೆ ವಿಜಯೇಂದ್ರ ಅವರು, ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಿ ‘ರಾಜ್ಯಮಟ್ಟದ ಪ್ರಮುಖ ನಾಯಕ’ ಎನ್ನುವ ಪಟ್ಟವನ್ನು ಇನ್ನಷ್ಟು ಭದ್ರಗೊಳಿಸಿಕೊಳ್ಳುವ ಲೆಕ್ಕಾಚಾರದಲ್ಲಿದ್ದರು.

ವಿಜಯೇಂದ್ರ ಅವರ ಈ ಲೆಕ್ಕಾಚಾರವನ್ನು ಆರಂಭದಲ್ಲಿಯೇ ಯಡಿಯೂರಪ್ಪ ಅವರು ಚಿವುಟಿ ಹಾಕಿದರು. ಯಡಿಯೂರಪ್ಪ ಅವರ ಈ ನಡೆ ಆರಂಭದಲ್ಲಿ ಅನೇಕರಿಗೆ ಅಚ್ಚರಿ ಮೂಡಿಸಿದರೂ, ಪುತ್ರ ರಾಜಕೀಯ ಭವಿಷ್ಯಕ್ಕೆ ಸ್ಪಷ್ಟ ತೀರ್ಮಾನವನ್ನು ಕೈಗೊಂಡಿದ್ದಾರೆ ಎನ್ನುವ ಮಾತುಗಳು ಅವರ ಆಪ್ತವಲಯದಲ್ಲಿ ಕೇಳಿಬಂದಿದೆ. ಹಾಗೇ ನೋಡಿದರೆ, ವರುಣಾದಲ್ಲಿ ಕುರುಬ ಮತಗಳಿಗಿಂತ ಲಿಂಗಾಯತ ಮತಗಳೇ ಪ್ರಮುಖವಾಗಿವೆ. ಇದರೊಂದಿಗೆ ಈ ಹಿಂದೆ ೨೦೧೮ರಲ್ಲಿ ವಿಜಯೇಂದ್ರ ಅವರು
ವರುಣಾದಲ್ಲಿ ಸ್ಪರ್ಧಿಸಲು ಬಿಜೆಪಿ ಅವಕಾಶ ನೀಡಲಿಲ್ಲ ಎನ್ನುವ ಕಾರಣಕ್ಕೆ, ಈ ಭಾಗದಲ್ಲಿ ಬಿಜೆಪಿಗೆ ಹಿನ್ನಡೆಯಾಗಿತ್ತು.

ಇದರೊಂದಿಗೆ ಕೆ.ಆರ್. ಪೇಟೆ ಮೂಲದ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರಿಗೆ ಹಳೇ ಮೈಸೂರು ಭಾಗದ ರಾಜಕೀಯ ಲೆಕ್ಕಾಚಾರಗಳು ಚೆನ್ನಾಗಿ ತಿಳಿದಿದ್ದು, ಕಳೆದ ಬಾರಿ ಉಪಚುನಾವಣೆ ವೇಳೆ ಸಂಘಟನೆಯೇ ಇಲ್ಲದ ಕೆ.ಆರ್.ಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣ ಗೌಡ ಅವರನ್ನು ಗೆಲ್ಲಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿದ್ದರು. ಜಾತಿ ಲೆಕ್ಕಾಚಾರವನ್ನು ನೋಡುವು ದಾದರೆ, ವರುಣಾದಲ್ಲಿ ಒಟ್ಟು ಎರಡು ಲಕ್ಷ ಚಿಲ್ಲರೆ ಮತಗಳಿದ್ದು, ಅದರಲ್ಲಿ ಲಿಂಗಾಯತ ಪ್ರಮುಖಗಳೇ 55000ಕ್ಕೂ ಹೆಚ್ಚಿವೆ.

ಇನ್ನುಳಿದಂತೆ ದಲಿತ ಸಮುದಾಯದ 50 ಸಾವಿರ, ಕುರುಬ ಸಮುದಾಯದ 38, ಪರಿಶಿಷ್ಟ ಪಂಗಡದ 26 ಸಾವಿರ, ಒಕ್ಕಲಿಗ 10 ಸಾವಿರ ಮತಗಳಿವೆ. ಆದ್ದರಿಂದ ‘ಲಿಂಗಾಯತ’ ಟ್ರಂಪ್ ಕಾರ್ಡ್ ಆಗಿ ಬಳಸಿಕೊಂಡು ವಿಜಯೇಂದ್ರ ಅವರು ಗೆಲ್ಲಬಹು ದಾಗಿತ್ತು ಎನ್ನುವ ಮಾತುಗಳಿದ್ದರೂ, ಯಡಿಯೂರಪ್ಪ ಅವರೇಕೆ ಹಿಂದೇಟು ಹಾಕಿದರು ಎನ್ನುವ ಪ್ರಶ್ನೆ ಅನೇಕರಲ್ಲಿದೆ.
ಕೆಲ ದಿನಗಳ ಹಿಂದೆ ಅಮಿತ್ ಶಾ ಅವರು ಯಡಿಯೂರಪ್ಪ ಅವರ ನಿವಾಸಕ್ಕೆ ಬಂದಾಗಲೂ ವಿಜಯೇಂದ್ರ ಅವರನ್ನು ವರುಣಾ ದಿಂದ ನಿಲ್ಲಿಸುವ ಮಾತುಗಳು ಕೇಳಿಬಂದಿತ್ತು.

ಆದರೆ ಯಡಿಯೂರಪ್ಪ ಅವರು ತಮ್ಮ ಭದ್ರಕೋಟೆಯಾಗಿರುವ ಶಿಕಾರಿಪುರವನ್ನು ಇನ್ನೊಬ್ಬರಿಗೆ ಬಿಟ್ಟುಕೊಡಲು ಸಾಧ್ಯವಿಲ್ಲ. ವರುಣಾದಲ್ಲಿ ಸಿದ್ದರಾಮಯ್ಯ ಅವರನ್ನು ಕಟ್ಟಿಹಾಕಲು ವಿಜಯೇಂದ್ರ ಅವರನ್ನು ನಿಲ್ಲಿಸುವುದಕ್ಕೆ ಅಭ್ಯಂತರವಿಲ್ಲ. ಶಿಕಾರಿಪುರ ದೊಂದಿಗೆ ವರುಣಾದಲ್ಲಿ ಸ್ಪರ್ಧಿಸಲು ಅವಕಾಶ ನೀಡಿದರೆ, ಅದಕ್ಕೆ ನಾನೂ ಸಹಕರಿಸುತ್ತೇನೆ ಹಾಗೂ ವರುಣಾ ಭಾಗದಲ್ಲಿ ಪ್ರಚಾರ ನಡೆಸುತ್ತೇನೆ. ಆದರೆ ಕೇವಲ ವರುಣಾದಿಂದ ಸ್ಪಽಸುವುದಾದರೆ, ಆ ಆಯ್ಕೆ ಬೇಡ ಎನ್ನುವ ಮಾತನ್ನು ಪರೋಕ್ಷವಾಗಿ ವರಿಷ್ಠರಿಗೆ ತಿಳಿಸಿದ್ದಾರೆ.

ಯಡಿಯೂರಪ್ಪ ಅವರ ಈ ತೀರ್ಮಾನಕ್ಕೆ ಪ್ರಮುಖ ಕಾರಣವೇನೆಂದರೆ, ಒಂದು ವೇಳೆ ವಿಜಯೇಂದ್ರ ಅವರು ವರುಣಾದಿಂದ ಮಾತ್ರ ಸ್ಪರ್ಧಿಸಿ, ಶಿಕಾರಿಪುರದಿಂದ ಬೇರೆಯವರಿಗೆ ಅವಕಾಶ ನೀಡಿದರೆ ತಮ್ಮ ಭದ್ರಕೋಟೆಯನ್ನು ಇನ್ನೊಬ್ಬರಿಗೆ ಬಿಟ್ಟು ಕೊಟ್ಟಂತೆಯಾಗುತ್ತದೆ. ಮುಂದಿನ ಚುನಾವಣೆಯಲ್ಲಿ ವಿಜಯೇಂದ್ರ ಅವರಿಗೆ ಈ ಕ್ಷೇತ್ರವನ್ನು ಕೇಳಲು ಆಗುವುದಿಲ್ಲ. ಇದರೊಂದಿಗೆ ಮೊದಲಿನಿಂದಲೂ ಬಿಜೆಪಿ ವರಿಷ್ಠರಿಗೆ ವಿಜಯೇಂದ್ರ ಅವರ ಮೇಲೆ ಹೆಚ್ಚು ‘ಒಲವಿಲ್ಲ’.

ಆದ್ದರಿಂದ ಒಂದು ವೇಳೆ ವರುಣಾದಿಂದ ನಿಂತು ಗೆದ್ದರೆ ಸಿದ್ದರಾಮಯ್ಯ ಅವರನ್ನು ಸೋಲಿಸಿದ್ದಕ್ಕೆ ಶಹಬಾಸ್‌ಗಿರಿ ನೀಡಬ ಹುದು. ಸದ್ಯದ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸುವುದು ಸುಲಭದ ಮಾತಾಗಿ ಉಳಿದಿಲ್ಲ. ಹಾಗಾದರೆ, ಶಿಕಾರಿಪುರದಿಂದ ಸ್ಪರ್ಧಿಸದೇ ಕೇವಲ ವರುಣಾದಿಂದ ಸ್ಪರ್ಧಿಸಿ ಸೋತರೆ, ಪುತ್ರನ ರಾಜಕೀಯ ಭವಿಷ್ಯವೇ ನೆಲ ಕಚ್ಚಲಿದೆ. ಈ ಚುನಾವಣೆಯನ್ನು ಮುಗಿಸಿದರೆ, ಮುಂದಿನ ಚುನಾವಣೆ ವೇಳೆಗೆ ಪಕ್ಷದಲ್ಲಿ ಈಗಿರುವಷ್ಟು ಹಿಡಿತವೂ ಯಡಿಯೂರಪ್ಪ ಅವರಿಗೆ ಮುಂದಿನ ಚುನಾವಣೆ ವೇಳೆಗೆ ಇರುವುದಿಲ್ಲ. ಹಾಗಿರುವಾಗ, ಕೈಯಾರೆ ಏಕೆ ಪುತ್ರ ರಾಜಕೀಯ ಜೀವನವನ್ನು ‘ರಿಸ್ಕ್’ಗೆ ತಳ್ಳಬೇಕು ಎನ್ನುವುದು ಯಡಿಯೂರಪ್ಪ ಅವರ ಲೆಕ್ಕಾಚಾರವಾಗಿದೆ.

ವಿಜಯೇಂದ್ರ ಅವರನ್ನು ವರುಣಾದಲ್ಲಿ ಸ್ಪರ್ಧಿಸುವಂತೆ ವರಿಷ್ಠರು ಹೇಳುವ ಹಿಂದೆಯೂ ಇದೇ ಲೆಕ್ಕಾಚಾರವಿತ್ತು. ಇದರೊಂದಿಗೆ ಸಿದ್ದರಾಮಯ್ಯ ಅವರು ಈಗಾಗಲೇ ಎರಡು ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಹೇಳಿದ್ದು, ವರುಣಾದಲ್ಲಿ
ಈಗಾಗಲೇ ಟಿಕೆಟ್ ಸಿಕ್ಕಿದೆ. ಇನ್ನು ಕೋಲಾರದಲ್ಲಿಯೂ ಎರಡನೇ ಹಂತದ ಪಟ್ಟಿಯಲ್ಲಿ ಸಿಗುವುದು ನಿಶ್ಚಿತ. ಕಾಂಗ್ರೆಸ್
ಸಮೀಕ್ಷೆಯ ಪ್ರಕಾರ ಕೋಲಾರದಲ್ಲಿ ಸಿದ್ದರಾಮಯ್ಯ ಅವರಿಗೆ ಗೆಲುವು ಕಷ್ಟವಿರುವುದರಿಂದ, ಆ ಕ್ಷೇತ್ರವನ್ನು ಅನಿವಾರ್ಯವಾಗಿ ಹೆಚ್ಚು ಕೇಂದ್ರೀಕರಿಸಬೇಕು.

ಕೋಲಾರದಲ್ಲಿ ಸಿದ್ದರಾಮಯ್ಯ ಅವರು ಹೆಚ್ಚು ಓಡಾಡಿ, ವರುಣಾವನ್ನು ಪುತ್ರ ಯತೀಂದ್ರ ನೇತೃತ್ವದಲ್ಲಿ ಚುನಾವಣೆ ನಡೆಸುವ ಲೆಕ್ಕಾಚಾರದಲ್ಲಿ ಸಿದ್ದುಯಿದ್ದರು. ಒಂದು ವೇಳೆ ಬಿಜೆಪಿಯಿಂದ ವಿಜಯೇಂದ್ರ ಅವರನ್ನು ಇಲ್ಲಿ ನಿಲ್ಲಿಸಿದರೆ, ಅನಿವಾರ್ಯವಾಗಿ ಕೋಲಾರದೊಂದಿಗೆ ವರುಣಾದಲ್ಲಿಯೂ ಸಿದ್ದರಾಮಯ್ಯ ಅವರು ಹೆಚ್ಚು ತೊಡಗಿಸಿಕೊಳ್ಳಬೇಕಾಗುತ್ತದೆ. ‘ಹೈ ವೋಲ್ಟೇಜ್’ ಕ್ಷೇತ್ರವಾಗಿ ಪರಿಣಮಿಸಿದರೆ, ಬಳಿಕ ಅವರು ರಾಜ್ಯಾದ್ಯಂತ ಸುತ್ತಾಡುವುದಕ್ಕಿಂತ ಹೆಚ್ಚು ತಮ್ಮ ಎರಡು ಕ್ಷೇತ್ರಗಳಲ್ಲಿಯೇ ತಿರುಗಾಡಬೇಕಾಗುತ್ತದೆ. ಇದರಿಂದ ವರುಣಾದಲ್ಲಿ ಸಿದ್ದರಾಮಯ್ಯ ಅವರು ಗೆದ್ದರೂ, ಇತರೆ ಕ್ಷೇತ್ರಗಳಿಗೆ ಅವರು ತೆರಳದಂತೆ ‘ಬ್ಲಾಕ್’ ಮಾಡಬಹುದು.

ಈ ರೀತಿ ಮಾಡುವುದರಿಂದ, ಉತ್ತರ ಕರ್ನಾಟಕ ಹಾಗೂ ಮಧ್ಯ ಕರ್ನಾಟಕದ ಭಾಗದಲ್ಲಿ ಬಿಜೆಪಿಗೆ ಹೆಚ್ಚು ಲಾಭವಾಗಲಿದೆ ಎನ್ನುವುದು ಬಿಜೆಪಿ ವರಿಷ್ಠರ ಲೆಕ್ಕಾಚಾರವಾಗಿತ್ತು. ಬಿಜೆಪಿ ವರಿಷ್ಠರು ಹಾಕಿದ್ದ ಈ ಲೆಕ್ಕಾಚಾರವೇನೋ ಸರಿಯಾಗಿತ್ತು. ಆದರೆ ೨೦೧೮ರಲ್ಲಿ ಶ್ರೀರಾಮುಲು ಅವರಿಗೆ ನೀಡಿದಂತೆ ಎರಡು ಕ್ಷೇತ್ರದಲ್ಲಿ ಸ್ಪಽಸುವ ಅವಕಾಶವನ್ನು ವಿಜಯೇಂದ್ರ ಅವರಿಗೆ ನೀಡಲು ಸಿದ್ಧವಿರಲಿಲ್ಲ. ಈ ಕಾರಣಕ್ಕಾಗಿಯೇ, ವಿಜಯೇಂದ್ರ ಅವರು ಶಿಕಾರಿಪುರವನ್ನು ಆಯ್ಕೆ ಮಾಡಿಕೊಂಡು, ವರುಣಾದಲ್ಲಿ ಬಿಜೆಪಿ ಅಭ್ಯರ್ಥಿಯ ಪರವಾಗಿ ಹೆಚ್ಚು ಪ್ರಚಾರ ಮಾಡಲು, ತಂತ್ರಕಾರಿಕೆ ಮಾಡಲು ಸಿದ್ಧವಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ಒಂದು ವೇಳೆ ವಿಜಯೇಂದ್ರ ಅವರಿಗೆ ಈ ಕ್ಷೇತ್ರದ ಜವಾಬ್ದಾರಿಯನ್ನು ನೀಡಿದರೆ, ಸಿದ್ದರಾಮಯ್ಯ ಅವರಿಗೆ ಟಫ್ ಫೈಟ್ ನೀಡುವ ಸಾಧ್ಯತೆಯಂತೂ ದಟ್ಟವಾಗಿದೆ. 2013ರ ಚುನಾವಣಾ ಫಲಿತಾಂಶವನ್ನು ಗಮನಿಸದರೆ, ವರುಣಾದಲ್ಲಿ ಸಿದ್ದರಾಮಯ್ಯ ಅವರನ್ನು ಕಟ್ಟಿಹಾಕುವುದೇನು ಕಷ್ಟದ ಕೆಲಸವಾಗಿರಲಿಲ್ಲ. 2013ರಲ್ಲಿ ಕೆಜೆಪಿಯಿಂದ ಕಾಪು ಸಿದ್ದಲಿಂಗಸ್ವಾಮಿ ಅವರು ಸರಿ ಸುಮಾರು ೨೦ ಸಾವಿರ ಅಂತರದಲ್ಲಿ ಸಿದ್ದರಾಮಯ್ಯ ವಿರುದ್ಧ ಸೋಲನ್ನು ಅನುಭವಿಸಿದ್ದರು. ಆದರೆ ಈ ಬಾರಿ ‘ಮುಖ್ಯಮಂತ್ರಿ’ ಅಭ್ಯರ್ಥಿ ಎನ್ನುವ ಇಮೇಜ್ ಸಿದ್ದರಾಮಯ್ಯ ಅವರಿಗೆ ಇರುವುದರಿಂದ ಹಾಗೂ ವಿಜಯೇಂದ್ರ ಅವರ ರಾಜಕೀಯ ಭವಿಷ್ಯವನ್ನು ಗಮನದಲ್ಲಿರಿಸಿಕೊಂಡು ಸದ್ಯಕ್ಕೆ ಯಡಿಯೂರಪ್ಪ ಅವರು ‘ರಿಸ್ಕ್’ ತಗೆದುಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.

ತಂದೆಯ ಬಳಿಕ ತಾನೂ ಒಬ್ಬ ಮಾಸ್ ಲೀಡರ್ ಎನಿಸಿಕೊಳ್ಳಬೇಕು ಎನ್ನುವ ಉತ್ಸಾಹದಲ್ಲಿರುವ ವಿಜಯೇಂದ್ರ ಅವರಿಗೆ ಅದನ್ನು ಸಾಬೀತುಪಡಿಸಲು ವರುಣಾ ಕ್ಷೇತ್ರ ಈ ಬಾರಿ ಹೇಳಿಮಾಡಿಸಿದಂತಿದೆ. ಆದರೆ ಸ್ಥಳೀಯ ನಾಯಕನಾಗಿರುವ ಹಾಗೂ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯೆಂದೇ ಬಿಂಬಿತವಾಗಿರುವ ಸಿದ್ದರಾಮಯ್ಯ ಅವರನ್ನು ಹಿಂದಿಕ್ಕುವುದು ಸುಲಭದ ವಿಷಯವಲ್ಲ. ಹಾಗೆಂದು, ಎರಡೂ ಕಡೆ ನಿಲ್ಲುವ ಅವಕಾಶವನ್ನು ವರಿಷ್ಠರು ನೀಡುತ್ತಿಲ್ಲ.

ಈ ಹೊಯ್ದಾಟದ ನಡುವೆ ವಿಜಯೇಂದ್ರ ಅವರು ಸದ್ಯಕ್ಕೆ ‘ಶಿಕಾರಿಪುರವೊಂದೇ ಸಾಕು’ ಎನ್ನುವ ಮಾತನ್ನು ಆಡುತ್ತಿದ್ದಾರೆ. ಒಂದು ವೇಳೆ ಅಂತಿಮ ಕ್ಷಣದಲ್ಲಿ ಯಡಿಯೂರಪ್ಪ ಮಾತಿನಂತೆ ಎರಡೂ ಕ್ಷೇತ್ರಕ್ಕೂ ನಿಲ್ಲುವುದಕ್ಕೆ ಪಕ್ಷದ ವರಿಷ್ಠರು ಒಪ್ಪಿಗೆ ಕೊಟ್ಟು ವಿಜಯೇಂದ್ರ ಸ್ಪರ್ಧಿಸಿದರೂ ಅಚ್ಚರಿಯಿಲ್ಲ. ಏಕೆಂದರೆ, ರಾಜಕೀಯ ಎನ್ನುವುದು ನಿಂತ ನೀರಲ್ಲ. ಯಾವುದೇ ಒಂದು ಸಿದ್ಧ ನಿಯಮದಲ್ಲಿ ನಡೆಯುವ ಕಾರ್ಪೋರೇಟ್ ಆಫೀಸ್ ಅಲ್ಲ!