ಸಂಸ್ಮರಣೆ
ವಾಸುದೇವಾಚಾರ್ಯ ಕೆ.ಎನ್.
ಅದಮ್ಯ ಕನ್ನಡ ಪ್ರೇಮಿಯಾಗಿದ್ದ, ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಅಮೆರಿಕದಲ್ಲಿ ಪಸರಿಸುವ ನಿಟ್ಟಿನಲ್ಲಿ ನಿರಂತರವಾಗಿ ದುಡಿದ ಡಾ.ರೇಣುಕಾ ರಾಮಪ್ಪ ಅವರು ಇನ್ನು ನೆನಪಷ್ಟೇ. ಮೊನ್ನೆ ನ.8ರಂದು ಅವರು ಪತಿ ಡಾ.ಜಿ.ಎಂ.ರಾಮಪ್ಪ, ಮಗ, ಮಗಳು, ಸೊಸೆ ಹಾಗೂ ಮೂವರು ಮೊಮ್ಮಕ್ಕಳನ್ನು ಅಗಲಿದರು.
ಅಮೆರಿಕದ ಫ್ಲೋರಿಡಾ ರಾಜ್ಯದ ಟ್ಯಾಂಪಾ ಬೇ ಪ್ರದೇಶದ ನ್ಯೂಪೋರ್ಟ್ ರಿಚಿ ಎಂಬ ಪಟ್ಟಣದಲ್ಲಿ ನೆಲೆಸಿ, ಕಳೆದ 40 ವರ್ಷಗಳಿಂದ ಆರೋಗ್ಯ ತಜ್ಞೆಯಾಗಿ ಸೇವೆ ಸಲ್ಲಿಸಿಕೊಂಡು ಬಂದಿದ್ದ ಡಾ.ರೇಣುಕಾ ಅವರು ಅಮೆರಿಕದ ಹಲವೆಡೆ ಕನ್ನಡ ಸಂಘ -ಸಂಸ್ಥೆಗಳು ಸ್ಥಾಪನೆ ಯಾಗುವುದರ ಹಿಂದಿನ ಕರ್ತೃತ್ವಶಕ್ತಿ ಯಾಗಿದ್ದರು. ಅಪಾರ ಕನ್ನಡ ಪ್ರೇಮದೊಂದಿಗೆ ಅಗಾಧ ಸಂಘಟನಾ ಶಕ್ತಿಯೂ ಇವರಲ್ಲಿದ್ದುದು ಈ ಸಾಧನೆಗೆ ಕಾರಣವೆನ್ನಬಹುದು. ೯೦ರ ದಶಕದಲ್ಲಿ ಟ್ಯಾಂಪಾ ಬೇ ಪ್ರದೇಶದ ಕನ್ನಡ ಕುಟುಂಬಗಳನ್ನು ಒಗ್ಗೂಡಿಸಿ ಕನ್ನಡ ಸಮಾರಂಭಗಳನ್ನು ಸಂಘಟಿಸತೊಡ ಗಿದ ಇವರು ತರುವಾಯ ‘ಶ್ರೀಗಂಧ ಕನ್ನಡ ಕೂಟ’ವನ್ನು ಹುಟ್ಟು ಹಾಕಿದರು. ನಂತರ ಆಗ್ನೇಯ ಅಮೆರಿಕದ ಕನ್ನಡ ಸಂಘಗಳ ಸಹಯೋಗ ದೊಂದಿಗೆ ಪ್ರಾದೇಶಿಕ ಕನ್ನಡ ಸಮ್ಮೇಳನಗಳನ್ನು ಆಯೋಜಿಸಿದ ಇವರು, 1998ರಲ್ಲಿ ‘ಅಕ್ಕ’ (ಅಮೆರಿಕ ಕನ್ನಡ ಕೂಟಗಳ ಆಗರ) ಸಂಸ್ಥೆಯ ಸಹಸಂಸ್ಥಾಪಕರಾಗಿ, ಪ್ರಥಮ ಕಾರ್ಯದರ್ಶಿಯಾಗಿ ಕಾರ್ಯನಿರ್ವ ಹಿಸಿದರು. ನಂತರ 2000ದಿಂದ 2006ರವರೆಗೆ ಅದರ ಉಪಾಧ್ಯಕ್ಷೆಯಾಗಿ ಸೇವೆಗೈದರು. 2004ರ ಸೆಪ್ಟೆಂಬರ್ ನಲ್ಲಿ ಒರ್ಲ್ಯಾಂಡೋ ನಗರದಲ್ಲಿ ಇವರ ಸಂಚಾಲಕತ್ವದಲ್ಲಿ ನಡೆದ ‘ಅಕ್ಕ’ ವಿಶ್ವ ಕನ್ನಡ ಸಮ್ಮೇಳನವು ಚಂಡಮಾರುತದಂಥ ಪ್ರಾಕೃತಿಕ ವಿಪತ್ತಿನ ಮಧ್ಯೆಯೂ ಸುಸೂತ್ರವಾಗಿ ನಡೆದು ಯಶಸ್ವಿಯಾಯಿತು.
2009ರಲ್ಲಿ ಕನ್ನಡಾಭಿಮಾನಿಗಳ ಜತೆಗೂಡಿ ‘ನಾವಿಕ’ (ನಾವು ವಿಶ್ವ ಕನ್ನಡಿಗರು) ಸಂಸ್ಥೆಯನ್ನು ಶುರುಮಾಡುವುದರೊಂದಿಗೆ ತಮ್ಮ ಕನ್ನಡ ಸೇವೆಯನ್ನು ಮುಂದುವರಿಸಿದರು. 2015-2017ರ ಅವಧಿಯಲ್ಲಿ ಈ ಸಂಸ್ಥೆಯ ಅಧ್ಯಕ್ಷೆಯಾಗಿದ್ದ ಅವರು, 2016ರಲ್ಲಿ ಬೆಂಗಳೂರಿನಲ್ಲಿ ಪ್ರಥಮ ‘ನಾವಿಕೋತ್ಸವ’ ಕಾರ್ಯಕ್ರಮವನ್ನು ನೆರವೇರಿಸಿದ್ದರ ಜತೆಗೆ, ಅಮೆರಿಕದ ಡಲ್ಲಾಸ್ ನಗರದಲ್ಲಿ 2017ರಲ್ಲಿ 4ನೆಯ ‘ನಾವಿಕ’ ವಿಶ್ವ ಕನ್ನಡ ಸಮಾವೇಶ ಜರುಗುವುದರಲ್ಲಿ ಪ್ರಧಾನಪಾತ್ರ ವಹಿಸಿದರು.
ಅಂತ್ಯಕಾಲ ದಲ್ಲಿ ಅವರು ‘ನಾವಿಕ’ದ ವಿಶ್ವಸ್ಥ ಮಂಡಳಿಯಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿದ್ದರು. ಅಮೆರಿಕದ ಕನ್ನಡಿಗರಿಗೆಲ್ಲ ಇವರ ವಿಶಾಲ
ಹೃದಯದ ಆತಿಥ್ಯ ಚಿರಪರಿಚಿತವಾಗಿತ್ತು. ಡಾ.ರಾಜ್‌ಕುಮಾರ್ ಸೇರಿದಂತೆ ಕರ್ನಾ ಟಕದ ಅನೇಕ ಗಣ್ಯರು ಅಮೆರಿಕ ಪ್ರವಾಸವನ್ನು ಕೈಗೊಂಡಾಗಲೆಲ್ಲಾ ಡಾ.ರೇಣುಕಾರ ಮನೆ ಅವರ ತಂಗುದಾಣವಾಗುತ್ತಿತ್ತು. ಮುಂದಿನ ಪೀಳಿಗೆಯ ಕನ್ನಡ ಪ್ರೇಮಿಗಳಿಗೆ ಸಹಾಯಹಸ್ತ
ಚಾಚಿ ಹುರಿದುಂಬಿಸಿ, ಅವರನ್ನು ಕನ್ನಡದ ಕೈಂಕರ್ಯದಲ್ಲಿ ತೊಡಗಿಸಿದ ಡಾ.ರೇಣುಕಾ ರಾಮಪ್ಪನವರು, ತಮ್ಮ ನಿರಂತರ ಕನ್ನಡ ಸೇವೆಯಿಂದ ‘ಅಮೆರಿಕನ್ನಡಿಗರು’ ಸೇರಿದಂತೆ ವಿಶ್ವದೆಲ್ಲ ಕನ್ನಡಿಗರ ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ. ಅಮೆರಿಕದಲ್ಲಿ ಸಿರಿಗನ್ನಡದ ಮಾತು-ಹಾಡು- ನೃತ್ಯ-ನಾಟಕ ವಿಜೃಂಭಿಸಿದಾಗಲೆಲ್ಲ ಇವರ ದಿವ್ಯಾತ್ಮವು ಸಂಭ್ರಮಿಸುತ್ತದೆ. ಡಾ.ರೇಣುಕಾ ರಾಮಪ್ಪ ಅವರ ಆತ್ಮಕ್ಕೆ ಶಾಂತಿ ಸಿಗಲಿ.
(ಲೇಖಕರು ಹವ್ಯಾಸಿ ಬರಹಗಾರರು)