Sunday, 24th November 2024

ಕನ್ನಡ ಪುಸ್ತಕೋದ್ಯಮದಲ್ಲಿ ’ವೀರಕಪುತ್ರ’ನ ದಿಟ್ಟ ಹೆಜ್ಜೆ !

ನೂರೆಂಟು ವಿಶ್ವ

vbhat@me.com

ಜೊಮ್ಯಾಟೋ, ಸ್ವಿಗ್ಗಿ ಮಾದರಿಯಲ್ಲಿ ಪುಸ್ತಕಗಳನ್ನೂ ಮನೆಮನೆಗೆ ವಿತರಿಸುವ ಜಾಲ ನಿರ್ಮಿಸಬೇಕೆಂಬುದು ಅವರ ಆಶಯ. ‘ವೀರ ಲೋಕ’ದ ಮೊದಲ ಹತ್ತು ಪುಸ್ತಕಗಳ ಬಿಡುಗಡೆಯನ್ನು ಪಂಚತಾರಾ ಹೊಟೇಲಿನಲ್ಲಿ ಚಿತ್ರನಟ ಕಿಚ್ಚ ಸುದೀಪ್ ಅವರಿಂದ ಅದ್ಧೂರಿಯಾಗಿ ಮಾಡಿ, ಕನ್ನಡ ಪುಸ್ತಕಗಳೂ ಇಂಥ ‘ಆಡಂಬರ’ಕ್ಕೆ ಅರ್ಹ ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ.

ನಾನು ಅಂದುಕೊಂಡಂತೆ ಆಗಿದ್ದರೆ, ಈ ವಾರ ನಾನು ಲಂಡನ್‌ನಿಂದ ರಸ್ತೆ ಮಾರ್ಗ ದಲ್ಲಿ ಕ್ರಮಿಸಿದರೆ ನಾಲ್ಕು ತಾಸು ದೂರದಲ್ಲಿರುವ ಹೇ-ಆನ್-ವೈ ಊರಿನಲ್ಲಿರಬೇಕಿತ್ತು. ನಾನು ಈ ಊರಿಗೆ ಮೊದಲು ಹೋಗಿದ್ದು ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ. ವೇಲ್ಸನಲ್ಲಿ ಪತ್ರಿಕೋದ್ಯಮ ವ್ಯಾಸಂಗ ಮಾಡುವಾಗ ಮೊದಲ ಸಲ ಹೋಗಿದ್ದೆ.

ಎಂಟು ವರ್ಷಗಳ ಹಿಂದೆ, ಮತ್ತೊಮ್ಮೆ ಹೇ-ಆನ್-ವೈ ಆ ಊರಿಗೆ ಹೋಗಿದ್ದೆ. ಅಲ್ಲಿಗೆ ಹೋಗುವ ಅವಕಾಶದಿಂದ ವಂಚಿತವಾದರೆ ಅತೀವ ಬೇಸರವಾಗುತ್ತದೆ. ಕಳೆದ ತಿಂಗಳ ಕೊನೆ ವಾರದಿಂದ ಹದಿನೈದು ದಿನಗಳ ಕಾಲ, ಅಲ್ಲಿ ‘ಹೇ ಬುಕ್ ಫೆಸ್ಟಿವಲ್’ ಇತ್ತು. ಅಂದ ಹಾಗೆ ಹೇ-ಆನ್-ವೈ ವಿಶ್ವದ ಅತಿದೊಡ್ಡ ಸೆಕೆಂಡ್ ಹ್ಯಾಂಡ್ ಪುಸ್ತಕ ವ್ಯಾಪಾರ ಗ್ರಾಮ. ಹೇ ಎಂಬ ಗ್ರಾಮ ವೈ ನದಿ ದಡದಲ್ಲಿರುವುದರಿಂದ ಅದಕ್ಕೆ
ಆ ಹೆಸರು. ಥಟ್ಟನೆ ನೋಡಿದರೆ ನಮ್ಮ ಕೊಡಚಾದ್ರಿ, ಆಗುಂಬೆ ನೋಡಿದಂತೆನಿಸು ತ್ತದೆ. ಸುತ್ತಲೂ ಹಸುರ ರಾಶಿ. ಊರಿನ ಮಧ್ಯ ದಲ್ಲಿಯೇ ಹಾದು ಹೋಗುವ ಶಾಂತ, ವಿಶಾಲ ವೈ ನದಿ.

ಸುಮಾರು ಅರವತ್ತು ಮನೆಗಳಿರುವ, ಒಂದೂವರೆ ಸಾವಿರ ಜನಸಂಖ್ಯೆಯಿರುವ ಒಂದು ಪುಟ್ಟ ಗ್ರಾಮ. ವರ್ಷಕ್ಕೆ ಏನಿಲ್ಲವೆಂದರೂ ಜಗತ್ತಿನ ಬೇರೆ ಬೇರೆ ದೇಶಗಳಿಂದ ಲಕ್ಷಾಂತರ ಜನ ಅಲ್ಲಿಗೆ ಬರುತ್ತಾರೆ. ಅಲ್ಲಿ ಪುಸ್ತಕಗಳ ಹೊರತಾಗಿ ಬೇರೇನೂ ಸಿಗುವುದಿಲ್ಲ. ಈ ಸಲದ ಹೇ ಬುಕ್ ಫೆಸ್ಟಿವಲ್‌ಗೆ ಹೋಗುವುದೆಂದು ಎಲ್ಲ ತಯಾರಿ ಮಾಡಿಕೊಂಡಿದ್ದೆ. ಆದರೆ ಕೊನೆ ಕ್ಷಣದಲ್ಲಿ ರದ್ದು ಮಾಡಿದೆ. ಅದಕ್ಕೆ ಕಾರಣವೂ ಇತ್ತು. ಹೇ ಬುಕ್ ಫೆಸ್ಟಿವಲ್‌ನಲ್ಲಿ ಜಗತ್ತಿನ ಎಡೆಗಳಿಂದ ಸಾಹಿತಿಗಳು, ಚಿಂತಕರು, ಪುಸ್ತಕಪ್ರೇಮಿಗಳು ಬರುತ್ತಾರೆ.

ಜರ್ಮನಿಯ ಫ್ರಾಂಕ್ ಫರ್ಟ್ ಪುಸ್ತಕಗಳ ಜಾತ್ರೆಯಾದರೆ, ಹೇ ಬುಕ್ ಫೆಸ್ಟಿವಲ್ ಪುಸ್ತಕಗಳ ಹಬ್ಬ. ಜಗತ್ತಿನ ಎಲ್ಲಿಂದಲೋ ಅಕ್ಷರಪ್ರೇಮಿ ಗಳು ಒಂದು ಪುಸ್ತಕ ಹುಡುಕಿಕೊಂಡು ಹೇ ಊರಿಗೆ ಬರುತ್ತಾರೆ. ಆನ್‌ಲೈನ್‌ನಲ್ಲೂ ಸಿಗದ ಪುಸ್ತಕಗಳು ಅಲ್ಲಿ ಸಿಗುತ್ತವೆ. out of print  ಪುಸ್ತಕಗಳನ್ನೂ ತರಿಸಿಕೊಡುವ ಪುಸ್ತಕ ವ್ಯಾಪಾರಿಗಳಿದ್ದಾರೆ.

ಅಲ್ಲಿನ ಪುಸ್ತಕ ವ್ಯಾಪಾರಿಗಳೆ ಅಸಲಿಗೆ ಬರಹಗಾರರು, ಓದುಗರು, ಪುಸ್ತಕಹುಳುಗಳು. ಬೇರೆ ಯಾವುದೋ ವ್ಯಾಪಾರ ಮಾಡುತ್ತಿಲ್ಲ ಎಂಬ ಕಾರಣಕ್ಕೆ ಪುಸ್ತಕ ವ್ಯಾಪಾರ ಮಾಡುವವರಲ್ಲ. ಹೀಗಾಗಿ ಅವರಿಗೆ ಪುಸ್ತಕ ಪ್ರೇಮಿಗಳ ಚಡಪಡಿಕೆ, ಸಂಕಟ, ಒಡಲಾಳ ಏನೆಂಬುದು ಗೊತ್ತು. ಒಂದು ವೇಳೆ ಪುಸ್ತಕ ಸಿಗದಿದ್ದರೆ, ಆ ಪುಸ್ತಕ ಹೊಂದಿರುವವರನ್ನು ಸಂಪರ್ಕಿಸಿ, ಅವರಿಗೆ ಕೋರಿಕೆ ಸಲ್ಲಿಸಿ, ಕ್ಸೆರಾಕ್ಸ್ ಮಾಡಿಸಿ ಯಾದರೂ ಬಯಸಿದ ಪುಸ್ತಕವನ್ನು ಕೈಗಿಡುತ್ತಾರೆ. ಪುಸ್ತಕಪ್ರೇಮಿಗಳೆಂದರೆ ಅಂಥ ಕಾಳಜಿ. ಹೇ ಪುಸ್ತಕ ಯಾವ ಗೌಜು-ಗದ್ದಲವಿಲ್ಲದ, ಘೋಷಣೆ, ಅಬ್ಬರಗಳಿಲ್ಲದ ಒಂದು ಶಾಂತ ಮೇಳ. ಅಲ್ಲಿ ಮಾತಾಡುವುದು ಪುಸ್ತಕಗಳೇ.

ಪ್ರತಿಷ್ಠಿತ ಲೇಖಕರು, ಸಾಹಿತಿಗಳು, ಚಿಂತಕರೆಲ್ಲ ಒಂದು ವಾರ ಹೇ-ಆನ್-ವೈದಲ್ಲಿ ಪುಸ್ತಕಗಳ ಮಧ್ಯೆ ದಣಿವಾರಿಸಿಕೊಂಡು ಮೈಮನ ಗಳಲ್ಲಿ ಮತ್ತಷ್ಟು ಪುಸ್ತಕಪ್ರೀತಿಯನ್ನು ತುಂಬಿಕೊಂಡು ಹೋಗುತ್ತಾರೆ. ಅಲ್ಲಿ ಅಕ್ಷರಪ್ರೇಮಿಗಳ ಹೊರತಾಗಿ ಮತ್ಯಾರೂ ಬರುವುದಿಲ್ಲ.
ಕಬ್ಬಿಣದ ಅಂಗಡಿಯಲ್ಲಿ ನೊಣಗಳಿಗೇನು ಕೆಲಸ? ಹೇ-ಆನ್-ವೈನಲ್ಲಿ ಪುಸ್ತಕಗಳನ್ನು ತರಕಾರಿಯಂತೆ ಮಾರುತ್ತಾರೆ. ಅಕ್ಕಿಆಲೂರು ಸಂತೆಯಲ್ಲಿ ದನ-ಎತ್ತು-ಎಮ್ಮೆಗಳನ್ನು ಮಾರುವಂತೆ ಮಾರುತ್ತಾರೆ. ರಸ್ತೆಯ ಇಕ್ಕೆಲಗಳಲ್ಲೂ ಪುಸ್ತಕಗಳ ರಾಶಿ ರಾಶಿ. ಊರಿನ ಮೈದಾನ ದಲ್ಲೂ ಪುಸ್ತಕಗಳ ಹರಾಜು ನಡೆದಿರುತ್ತದೆ. ಅಲ್ಲಿನ ಚರ್ಚು, ಚಾಪೆಲ್‌ಗಳಲ್ಲೂ ಪುಸ್ತಕಗಳ ಧ್ಯಾನ, ಪೂಜೆ! ಹೇ-ಆನ್-ವೈನಲ್ಲಿ ‘ಆನೆಸ್ಟಿ ಬುಕ್ ಸೆಂಟರ್’ ಎಂಬ ಪುಸ್ತಕದ ಅಂಗಡಿಯಿದೆ.

ಅಲ್ಲಿ ಪುಸ್ತಕಗಳ ಹೊರತಾಗಿ ಬೇರೆ ಯಾರೂ ಇಲ್ಲ. ನಿಮಗೆ ಇಷ್ಟದ ಪುಸ್ತಕ ಖರೀದಿಸಿ, ಮೊತ್ತ ಎಷ್ಟಾಯಿತೆಂದು ನೀವೇ ಡಬ್ಬಿಯಲ್ಲಿ ಹಣ ಹಾಕಿ ಬರಬೇಕು. ಒಂದು ವೇಳೆ ಹಣ ಕೊಡದೇ, ಪುಸ್ತಕಗಳನ್ನು ಎತ್ತಿಕೊಂಡು ಬಂದರೂ ಯಾರೂ ಕೇಳುವುದಿಲ್ಲ. ಆದರೆ ನೀವು (ಪುಸ್ತಕ) ಕಳ್ಳ ಎಂಬುದು ನಿಮಗೆ ಗೊತ್ತಿರುತ್ತದೆ ಮತ್ತು ಯಾವಜ್ಜೀವ ನಿಮ್ಮ ಮನಸ್ಸಿನಲ್ಲಿ ಕಾಡುತ್ತಿರುತ್ತದೆ. ಹೀಗಾಗಿ ನಮ್ಮ ಪ್ರಾಮಾಣಿಕತೆಯನ್ನು ಪರೀಕ್ಷಿಸುವ ತಾಣವೂ ಹೌದು. ಹೇ-ಆನ್-ವೈನಲ್ಲಿ ಅಲೆದಾಡಿ ಸುಸ್ತಾದರೆ ಹೋಟೆಲಿಗೆ ಹೋದರೂ ಅಲ್ಲಿ ಪುಸ್ತಕಗಳ ರಾಶಿಯ ಮೇಲೆಯೇ ಕುಳಿತುಕೊಳ್ಳಬೇಕು. ತಿನ್ನಲು ಮಾತ್ರ ಪುಸ್ತಕಗಳನ್ನು ಕೊಡುವುದಿಲ್ಲ.

ಹೋಟೆಲಿನಲ್ಲೂ ಎಡೆ ಪುಸ್ತಕಗಳೇ. ಊರಿನ ಆಟದ ಮೈದಾನ, ಸಂದಿ-ಬೀದಿಗಳಲ್ಲೂ ಪುಸ್ತಕಗಳ ಕಪಾಟುಗಳು. ನಾಲ್ಕು ರಸ್ತೆ ಸೇರುವ ವರ್ತುಲದಲ್ಲೂ ಜೋಳದ ರಾಶಿಯಂಥ ಪುಸ್ತಕಗಳ ರಾಶಿ. ಪುಸ್ತಕಗಳನ್ನು ಓದಿ ಅಲ್ಲಿಯೇ ಇಟ್ಟು ಬರುವ ಅನುಕೂಲ ಬಸ್ ನಿಲ್ದಾಣದಲ್ಲೂ. ಟ್ಯಾಕ್ಸಿ ಏರಿದರೆ ಅಲ್ಲೂ ಪುಸ್ತಕ. ಎಲ್ಲರ ಮನೆಗಳೂ ಪುಸ್ತಕದ ಅಂಗಡಿಗಳೇ ಅಥವಾ ಪುಸ್ತಕದಂಗಡಿಗಳ ಅಲ್ಲಿನ ನಿವಾಸಿಗಳ ವಾಸ.

ಎಂಥಾ ಅಕ್ಷರಶತ್ರು ಸಹ ಅಲ್ಲಿ ಒಂದು ಗಂಟೆ ಇದ್ದರೆ, ಹೊರಬರುವಾಗ ಪುಸ್ತಕಹುಳುವಾಗಿರುತ್ತಾನೆ. ಅದು ಅಂಥ ಒಂದು ಅಪರೂಪದ ಊರು. ಇಂಥ ಸಾಂಸ್ಕೃತಿಕ ಪರಿಸರದಲ್ಲಿ ‘ಹೇ ಬುಕ್ ಫೆಸ್ಟಿವಲ್’ ನಡೆಯುತ್ತದೆ. ಪುಸ್ತಕ ಕೃಷಿ, ಸಾಹಿತ್ಯಗೋಷ್ಠಿ, ಪುಸ್ತಕ ಬಿಡುಗಡೆ, ಸಂವಾದ, ಸಾಹಿತಿ ಸಂದರ್ಶನ ನಡೆಯುವ ಆ ಹಬ್ಬದಲ್ಲಿ ಪಾಲ್ಗೊಳ್ಳುವುದು ಪ್ರತಿ ಪುಸ್ತಕಪ್ರೇಮಿಯ ಕನಸು. ಪುಸ್ತಕಗಳನ್ನು ಓದುವ ಕಲೆ, ಪುಸ್ತಕ ಉತ್ಪಾದನೆ (production) ಬಗ್ಗೆ ನಡೆಯುವ ಗೋಷ್ಠಿಗಳನ್ನು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ.

ಈ ಪುಸ್ತಕ ಗ್ರಾಮದ ಬಗ್ಗೆ ನಾನು ಅನಂತಕುಮಾರ ಬಳಿ ಹಂಚಿಕೊಂಡಿದ್ದೆ. ಆಗ ಅವರು ಕೇಂದ್ರದಲ್ಲಿ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವರಾಗಿದ್ದರು. ಅವರಿಗೆ ಹೇ-ಆನ್-ವೈ ಗ್ರಾಮದ ಕಲ್ಪನೆಯೇ ಇಷ್ಟವಾಗಿತ್ತು. ‘ಭಟ್ರೇ, ನಾವೂ ಅಂಥ ಒಂದು ಪುಸ್ತಕ ಗ್ರಾಮವನ್ನು ಕರ್ನಾಟಕದಲ್ಲೂ ಸ್ಥಾಪಿಸಬೇಕು. ಯಾವ ಪ್ರದೇಶದಲ್ಲಿ ಮಾಡಿದರೆ ಉತ್ತಮ?’ ಎಂದೆ ಕೇಳಿದ್ದರು. ನಂತರ ದಿಲ್ಲಿಯಿಂದ ತಮ್ಮ ಇಲಾಖೆಯ ಒಬ್ಬರು ಅಧಿಕಾರಿಯನ್ನು ಕಳಿಸಿ, ವರದಿ ಸಿದ್ಧಪಡಿಸುವಂತೆ ಸೂಚಿಸಿದ್ದರು.

ಅದಾಗಿ ಎರಡು ತಿಂಗಳಲ್ಲಿ ಅವರ ಆ ಖಾತೆ ಬದಲಾಯಿತು. ಅಲ್ಲಿಗೆ ಆ ಯೋಜನೆ ಅನಾಥವಾಯಿತು. ಅವರೇನಾದರೂ ಇನ್ನು ಒಂದು ಏಳೆಂಟು ವರ್ಷ ಅದೇ ಖಾತೆಯಲ್ಲಿ ಮುಂದುವರಿದಿದ್ದರೆ, ಆ ಯೋಜನೆ ಒಂದು ರೂಪ ಪಡೆದುಕೊಳ್ಳುತ್ತಿತ್ತೇನೋ? ಕರೋನಾ ಎರಡನೇ ಅಲೆ ಸಂದರ್ಭದಲ್ಲಿ ನಾನು ಹೇ-ಆನ್-ವೈ ಬಗ್ಗೆ ನನ್ನ ಆತ್ಮೀಯ ಸ್ನೇಹಿತರಾದ ವೀರಕಪುತ್ರ ಶ್ರೀನಿವಾಸ ಅವರ ಬಳಿ ಹೇಳಿದೆ. ಸುಮಾರು ಎರಡು ಗಂಟೆಗಳ ಕಾಲ ಅವರು ತದೇಕಚಿತ್ತದಿಂದ ಕೇಳಿದರು. ನಾನೂ ಅಂದು ಪುರುಸೊತ್ತಿನಲ್ಲಿದ್ದೆ.

ಸುದೀರ್ಘವಾಗಿ ಹೇಳಿದೆ. ಅವರು ತಮ್ಮ ತಲೆಯಲ್ಲಿ ಏನನ್ನೋ ಯೋಚಿಸುತ್ತಿದ್ದಾರೆಂದು ಅನಿಸಿತು. ‘ಸಾರ್, ಆ ಊರನ್ನು ಖುದ್ದಾಗಿ ಹೋಗಿ ನೋಡಿಕೊಂಡು ಬರೋಣ’ ಎಂದರು. ಆದರೆ ಆಗ ಲಂಡನ್‌ನಲ್ಲಿ ಕರೋನಾ ಕಾಟ ವಿಪರೀತವಾಗಿತ್ತು. ವೀಸಾ ಪಡೆಯಲು ಹಲವು ವಿಘ್ನ. ‘ಸ್ವಲ್ಪ ದಿನ ಕಳೆಯಲಿ, ನಂತರ ಹೋಗೋಣ’ ಎಂದು ನಿವಾಸ ಅವರಿಗೆ ಹೇಳಿ, ನಾನು ಮರೆತು ಬಿಟ್ಟಿದ್ದೆ. ಆದರೆ ಅವರು ಮರೆತಿರ ಲಿಲ್ಲ. ಅದಾಗಿ ಕೆಲ ದಿನಗಳ ಬಳಿಕ ಮತ್ತೊಮ್ಮೆ ನನ್ನ ಮನೆಗೆ ಬಂದು, ‘ಸಾರ್, ಹೇ-ಆನ್-ವೈಗೆ ಯಾವಾಗ ಹೋಗೋಣ?’ ಎಂದು ಕೇಳಿದರು. ಆದರೆ ಆಗಲೂ ಅಲ್ಲಿಗೆ ಹೋಗಲು ಕರೋನಾ ಅಡಚಣೆ ನಿವಾರಣೆ ಆಗಿರಲಿಲ್ಲ.

ಈ ಮಧ್ಯೆ ನಾನು ಶ್ರೀನಿವಾಸ ಅವರೊಂದಿಗೆ ಕನ್ನಡ ಪುಸ್ತಕ ಪ್ರಕಟಣೆ ಅರ್ಥಾತ್ ಪುಸ್ತಕೋದ್ಯಮದ ಕುರಿತು ಸುದೀರ್ಘವಾಗಿ ಚರ್ಚಿಸಿದೆ. ಕನ್ನಡದ ಒಂದು ಪುಸ್ತಕದ ಇಪ್ಪತ್ತೈದು ಸಾವಿರ ಪ್ರತಿಗಳನ್ನು ಮಾರಾಟ ಮಾಡುವುದು ಸಾಧ್ಯವಿಲ್ಲವೇ? ಇನ್ನೂ ಒಂದು ಸಾವಿರ ಪ್ರತಿ ಮಾರಾಟ ಮಾಡುವ ಹೊತ್ತಿಗೆ ಪ್ರಕಾಶಕರೇಕೆ ಹೈರಾಣಾಗುತ್ತಾರೆ? ಏಳು ಕೋಟಿ ಜನರಿರುವ ಕರ್ನಾಟಕದಲ್ಲಿ, ಕನ್ನಡದ ಒಂದು ಸಾವಿರ ಪ್ರತಿಗಳನ್ನು ಮಾರಾಟ ಮಾಡುವುದು ಯಾಕೆ ಸಾಧ್ಯವಾಗುತ್ತಿಲ್ಲ? ಕನ್ನಡ ಪುಸ್ತಕಗಳನ್ನು ಎಲ್ಲರಿಗೂ ತಲುಪಿಸುವ ವಿತರಣಾ ಸರಪಣಿ
ಯನ್ನು ಅಭಿವೃದ್ಧಿಪಡಿಸುವುದು ಹೇಗೆ? ಅದಕ್ಕಿರುವ ತೊಡಕುಗಳೇನು? ಪುಸ್ತಕೋದ್ಯಮದ ಕುಂದು-ಕೊರತೆಗಳೇನು? ಅವುಗಳ ನಿವಾ ರಣೆಗೆ ಯಾವ ಹೊಸ ಮಾರ್ಗ ಅನುಸರಿಸಬಹುದು? ಇವೆ ಮುಂತಾದ ವಿಷಯಗಳ ಬಗ್ಗೆ ನಾವು ಹಲವು ಸುತ್ತಿನ ಚರ್ಚೆ ನಡೆಸಿದೆವು. ನನಗೆ ಶ್ರೀನಿವಾಸ ಅವರ ಆಸಕ್ತಿ ಕಂಡು ಆಶ್ಚರ್ಯವಾಯಿತು.

ನಾವು ಚರ್ಚಿಸಿದ್ದನ್ನು ಅವರು ಮುಂದಿನ ಭೇಟಿ ಸಂದರ್ಭದಲ್ಲಿ ಜಾರಿಗೆ ತಂದಿರುತ್ತಿದ್ದರು. ಅವರ ಕೆಲಸದ ಉತ್ಕರ್ಷ ಮತ್ತು ಅದಮ್ಯ
ಆಸಕ್ತಿ ಕಂಡು ನಾನು ಅಪ್ರತಿಭನಾಗಿದ್ದೆ. ‘ಸಾರ್, ನನ್ನ ಹೊಸ ಪ್ರಕಾಶನ ಸಂಸ್ಥೆಯ ಆರಂಭಕ್ಕೆ ನಿಮ್ಮದೊಂದು ಪುಸ್ತಕವಿರಲೇಬೇಕು’ ಎಂದು ಹೇಳಿ, ಐವತ್ತು ಸಾವಿರ ರುಪಾಯಿ ಸಂಭಾವನೆ ಕೈಗಿತ್ತರು. ‘ಶ್ರೀನಿವಾಸ್, ಮೊದಲು ಪುಸ್ತಕ ಬರಲಿ, ನಂತರ ಸಂಭಾವನೆ ಕೊಡುವಿರಂತೆ.

ಅಷ್ಟಕ್ಕೂ ನೀವು ಹೊಸ ಪ್ರಕಾಶನ ಸಂಸ್ಥೆ ಕಟ್ಟುತ್ತಿದ್ದೀರಿ. ನೀವು ಮೊದಲು ಗೆಲ್ಲಬೇಕು. ನಂತರ ಹಣ ಕೊಡುವಿರಂತೆ’ ಎಂದು ಹೇಳಿದರೂ ಕೇಳಲಿಲ್ಲ. ‘ಸಾರ್, ನೀವೇ ಹೇಳಿದ್ದೀರಲ್ಲ, ಲೇಖಕ ನಾಯಕನಾಗದೇ ಪುಸ್ತಕೋದ್ಯಮ ಬೆಳೆಯುವುದಿಲ್ಲ ಅಂತ. ಹೀಗಾಗಿ ಸಂಭಾವನೆ ಸ್ವೀಕರಿಸಲೇ ಬೇಕು’ ಎಂದು ಹಣವಿತ್ತು ಹೊರಟುಬಿಟ್ಟರು. ಆಗ ಅವರು ತಮ್ಮ ಪ್ರಕಾಶನ ಸಂಸ್ಥೆ ಹೆಸರನ್ನು ಸಹ ಅಖೈರುಗೊಳಿಸಿರಲಿಲ್ಲ. ಕನ್ನಡ ಪುಸ್ತಕೋದ್ಯಮದಲ್ಲಿ ಹೊಸ ಗಾಳಿ ಈಗಲೇ ಆರಂಭವಾಗಿದೆ ಅಂತ ಅಂದುಕೊಂಡೆ.

ಪುಸ್ತಕ ಮಾರಾಟವಾಗಿ ಎಷ್ಟೋ ತಿಂಗಳ ನಂತರ ಸಂಭಾವನೆ ಸಿಗುವುದು ಸಾಮಾನ್ಯ. ಆದರೆ ಪುಸ್ತಕ ಬರುವುದು ಯಾವತ್ತೋ ಗೊತ್ತಿಲ್ಲ. ಅಷ್ಟಕ್ಕೂ ಪ್ರಕಾಶನ ಸಂಸ್ಥೆಯೇ ಇನ್ನೂ ಅವತರಿಸಿಲ್ಲ. ಆಗಲೇ ಶ್ರೀನಿವಾಸ ಸಂಭಾವನೆ ಸಂದಾಯ ಮಾಡಿದ್ದರು! ಇದು ಎಂಟು ತಿಂಗಳ ಹಿಂದಿನ ಕತೆ. ಅಸಲಿಗೆ ನಾನು ಯಾವ ಪುಸ್ತಕ ಬರೆಯುವುದು ಎಂದು ನಾನು ಯೋಚಿಸಿರಲಿಲ್ಲ. ಇದನ್ನು ಕನ್ನಡದ ಸಂದರ್ಭದಲ್ಲಿ ಊಹಿ ಸುವುದೂ ಕಷ್ಟ. ತೆಲುಗಿನ ಯಂಡಮೂರಿ ವೀರೇಂದ್ರನಾಥ ತಾವು ಬರೆಯಲಿರುವ ಕಾದಂಬರಿ ಅಥವಾ ಪುಸ್ತಕದ ಸಂಭಾವನೆ ಯನ್ನು ಒಂದು ವರ್ಷ ಮುಂಚಿತವಾಗಿ ಪಡೆಯುತ್ತಾರಂತೆ, ಆಗ ಅವರ ತಲೆಯಲ್ಲಿ ಯಾವ ಪುಸ್ತಕ ಬರೆಯುವುದು ಎಂಬ ಯೋಚನೆಯೂ ಮೊಳೆ ತಿರುತ್ತಿರಲಿಲ್ಲವಂತೆ. ನಂತರ ಅವರು ಬರೆಯಲು ಕುಳಿತುಕೊಳ್ಳುತ್ತಿದ್ದರಂತೆ… ಎಂದು ಕೇಳಿದ್ದೆ.

ಕನ್ನಡದಲ್ಲಿಯೂ ಆ ದಿನಗಳು ಬರುತ್ತಿವೆಯಲ್ಲ ಎಂದು ಅನಿಸಿ ಸಮಾಧಾನವಾಯಿತು. ನಂತರ ಶ್ರೀನಿವಾಸ ಒಂದು ದಿನ ಬಂದು, ‘ವೀರ ಲೋಕ’ ಎಂಬ ಹೆಸರನ್ನು ಅಂತಿಮಗೊಳಿಸಿದ್ದೇನೆ ಸಾರ್, ನನಗೆ ನಿಮ್ಮ ಪುಸ್ತಕ ಬೇಕು’ ಎಂದು ನನ್ನ ಹಿಂದೆ ಬಿದ್ದರು. ಆಗ ನಾನು ಪುಸ್ತಕ ಬರೆಯಲು ಕುಳಿತುಕೊಂಡಿದ್ದೆ. ಈ ನಡುವೆ ಅವರು ಹತ್ತಾರು ಲೇಖಕರುಗಳನ್ನು ಸಂಪರ್ಕಿಸಿ ಅವರಿಂದಲೂ ಪುಸ್ತಕ ಬರೆಯಿಸಿದ್ದರು. ಸಂಭಾವಿತ ಮತ್ತು ಅಕ್ಷರಸ್ನೇಹಿ ನಟ ರಮೇಶ ಅರವಿಂದ ಅವರನ್ನು ತಮ್ಮ ಪುಸ್ತಕ ಪ್ರಕಾಶನಕ್ಕೆ ‘ಬ್ರಾಂಡ್ ಅಂಬಾಸಿಡರ್’ ಎಂದು ನೇಮಿಸಿ ದ್ದರು. ಚಾಮರಾಜಪೇಟೆಯಲ್ಲಿ ಆಫೀಸು ತೆಗೆದಿದ್ದರು.

ಅಂದು ಕಾಲ್ ಸೆಂಟರ್ ಆರಂಭವಾಗಿತ್ತು. ಅಲ್ಲಿ ಹತ್ತಾರು ಹುಡುಗಿಯರು ಫೋನ್ ಕರೆಗಳನ್ನು ಸ್ವೀಕರಿಸಲು ಶುರು ಮಾಡಿದ್ದರು. ಪುಸ್ತಕ ಪ್ರಕಟಣೆ ಕೆಲಸ ಆರಂಭವಾಗಿತ್ತು. ಪುಸ್ತಕಗಳು ಎಡೆ ಲಭ್ಯವಾಗಬೇಕೆಂದರೆ, ಅವುಗಳನ್ನು ಇಟ್ಟುಕೊಳ್ಳುವ ಸುಲಭವಾಗಿ ಮಡಚುವ ಕಪಾಟುಗಳನ್ನು ಸಿದ್ಧಪಡಿಸಿದ್ದರು. ರಾಜ್ಯದೆಡೆ ಪುಸ್ತಕಗಳನ್ನು ವಿತರಿಸಲು ಸಹಾಯಕವಾಗುವ supply chain ರೂಪಿಸುವ ಕಾಯಕ ದಲ್ಲಿ ಅವರು ನಿರತರಾಗಿದ್ದರು.

ಕನ್ನಡ ಸಿನಿಮಾವೊಂದು ಬಿಡುಗಡೆಯಾಗುವಾಗ ಏನೆ ಸಿದ್ಧತೆಗಳಿರುತ್ತವೋ, ಆ ರೀತಿ ಪುಸ್ತಕ ಬಿಡುಗಡೆಗೂ ಕನ್ನಡಿಗರ ಮನಸ್ಸುಗಳನ್ನು ಪಕ್ಕಾಗಿಸಲು ಅಣಿಯಾಗುತ್ತಿದ್ದರು. ರಾಜ್ಯದ ಪ್ರಮುಖ ನಗರಗಳಲ್ಲಿ ಪುಸ್ತಕ ಬಿಡುಗಡೆಯ ಪೋಸ್ಟರುಗಳು ರಾರಾಜಿಸಲಾರಂಭಿಸಿದವು.
ಪುಸ್ತಕ ಬಿಡುಗಡೆಗೆ ಇಷ್ಟೆ ಸಿಂಗಾರವಾ ಎಂದು ಜನ ಮಾತಾಡುವ ಮಟ್ಟಿಗೆ ಶ್ರೀನಿವಾಸ ಹೊಸ ಭರವಸೆಯನ್ನಂತೂ ಹುಟ್ಟು ಹಾಕಿದ್ದಾರೆ. ಕನ್ನಡ ಪುಸ್ತಕಗಳು ಸುಲಭ ದರದಲ್ಲಿ ಓದುವ ಮನಸ್ಸುಳ್ಳವರಿಗೆ ತಲುಪಬೇಕು, ರಾಜ್ಯದ ಯಾವ ಊರಿಗೆ ಹೋದರೂ ಓದುವವರಿದ್ದಾರೆ ಆದರೆ ಅವರ ಕೈಗೆ ಪುಸ್ತಕ ಇಡುವ ಕೆಲಸ ಆಗುತ್ತಿಲ್ಲ.

ಉತ್ತಮ ಪುಸ್ತಕಗಳನ್ನು ಕೊಟ್ಟರೆ ಯಾರೂ ಬೇಡ ಎನ್ನುವುದಿಲ್ಲ. ಕನ್ನಡದಲ್ಲಿ ಒಂದೊಂದು ಪುಸ್ತಕ ಸಾವಿರವಲ್ಲ, ಲಕ್ಷ ಲಕ್ಷ ಮಾರಾಟ ಆಗಬೇಕು, ಆಗುತ್ತದೆ. ಕಿರಾಣಿ ಅಂಗಡಿ, ಹೊಟೇಲ, ಕ್ಲಾಥ್ ಸ್ಟೋರ‍್ಸ್, ರಿಟೇಲ್ ಶಾಪ್, ಮಾರಾಟ ಮಳಿಗೆಗಳಲ್ಲ ಕನ್ನಡ ಪುಸ್ತಕ ಸಿಗಬೇಕು ಎಂಬುದು ಶ್ರೀನಿವಾಸ ಅವರ ಕನಸು. ಅವರು ಆ ನಿಟ್ಟಿನಲ್ಲಿ ಈಗಾಗಲೇ ಕಾರ್ಯಪ್ರವೃತ್ತರಾಗಿzರೆ. ಪುಸ್ತಕಗಳನ್ನಿಡುವ
ಮಡಚುವ ಕಪಾಟುಗಳನ್ನು ಅವರು ಅಂಗಡಿಗಳಿಗೆ ತಲುಪಿಸುವ ಏರ್ಪಾಟು ಮಾಡುತ್ತಿದ್ದಾರೆ.

ಯಾವುದೇ ಅಂಗಡಿಗೆ ಹೋದರೂ ಅಲ್ಲಿ ಪುಸ್ತಕಗಳು ಸಿಗುವ ವ್ಯವಸ್ಥೆ ಮಾಡುತ್ತಿದ್ದಾರೆ. ಜೊಮ್ಯಾಟೋ, ಸ್ವಿಗ್ಗಿ ಮಾದರಿಯಲ್ಲಿ ಪುಸ್ತಕ ಗಳನ್ನೂ ಮನೆಮನೆಗೆ ವಿತರಿಸುವ ಜಾಲ ನಿರ್ಮಿಸಬೇಕೆಂಬುದು ಅವರ ಆಶಯ. ‘ವೀರಲೋಕ’ದ ಮೊದಲ ಹತ್ತು ಪುಸ್ತಕಗಳ ಬಿಡುಗಡೆ ಯನ್ನು ಬೆಂಗಳೂರಿನ ಪಂಚತಾರಾ ಹೊಟೇಲಿನಲ್ಲಿ ಚಿತ್ರನಟ ಕಿಚ್ಚ ಸುದೀಪ್ ಅವರಿಂದ ಅದ್ಧೂರಿಯಾಗಿ ಮಾಡಿಸಿರುವ ಶ್ರೀನಿವಾಸ್, ಕನ್ನಡ ಪುಸ್ತಕಗಳೂ ಇಂಥ ‘ಆಡಂಬರ’ಕ್ಕೆ ಅರ್ಹ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

‘ಸಾರ್, ನೀವು ಹೇಳಿದ ಪುಸ್ತಕ ಗ್ರಾಮ ಯೋಜನೆ ನನ್ನ ಮನಸ್ಸನ್ನು ಕೊರೆಯುತ್ತಿದೆ. ಸದ್ಯದ ಅದಕ್ಕೂ ಕೈಹಾಕುತ್ತೇನೆ’ ಎಂದು ವೀರಕ ಪುತ್ರ ಶ್ರೀನಿವಾಸ್ ಹೇಳಿದರು. ಕನ್ನಡ ಪುಸ್ತಕಗಳಿಗೂ ರಾಜಯೋಗ ಎಂದು ಮನಸ್ಸಿನ ಅಂದುಕೊಂಡೆ.